ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲದೆ ಭರ್ತಿ 10 ವರ್ಷಗಳೇ ತುಂಬಿವೆ. 2015ರಲ್ಲಿ ಮುಂಬೈನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ರಣಜಿ ಟ್ರೋಫಿ ಗೆದ್ದ ನಂತರ ಕರ್ನಾಟಕ ತಂಡಕ್ಕೆ ಮತ್ತೆ ದೇಶೀಯ ಕ್ರಿಕೆಟ್’ನ ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಈ ಬಾರಿ ರಣಜಿ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿರುವ ಕರ್ನಾಟಕ ತಂಡಕ್ಕೆ ಹೊಸ ಕೋಚ್ ನೇಮಕವಾಗಿದೆ. ಅವರು ಬೇರಾರೂ ಅಲ್ಲ, ರಾಜ್ಯ ತಂಡದ ಮಾಜಿ ನಾಯಕ, ಮಾಜಿ ಕೋಚ್, 134 ಪ್ರಥಮದರ್ಜೆ ಪಂದ್ಯಗಳ ಅನುಭವಿ ರಾಯಚೂರಿನ ಯರೇ ಗೌಡ.
ಮುಂದಿನ ಎರಡು ವರ್ಷಗಳ ಅವಧಿಗೆ ಯರೇ ಗೌಡ ಅವರನ್ನು ಕರ್ನಾಟಕ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ.
2020ರಲ್ಲಿ ಕರ್ನಾಟಕ ಸೀನಿಯರ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಯರೇ ಗೌಡ, ಎರಡು ವರ್ಷಗಳ ಕಾಲ ತಂಡದ ಕೋಚ್ ಆಗಿದ್ದರು. ನಂತರ ಯರೇ ಗೌಡ ಜಾಗದಲ್ಲಿ ಪಿ.ವಿ ಶಶಿಕಾಂತ್ ಅವರನ್ನು ಕೋಚ್ ಆಗಿ ನೇಮ ಮಾಡಲಾಗಿತ್ತು. ಇದೀಗ 4 ವರ್ಷಗಳ ನಂತರ ಮತ್ತೆ ಯರೇ ಗೌಡ ರಾಜ್ಯ ತಂಡದ ಕೋಚ್ ಆಗಿ ವಾಪಸ್ಸಾಗಿದ್ದಾರೆ.
ಈ ಬಾರಿ ಸಿ. ಕೆ ನಾಯ್ಡು ಟ್ರೋಫಿ U-23 ಚಾಂಪಿಯನ್’ಷಿಪ್ ಗೆದ್ದ ಕರ್ನಾಟಕ ತಂಡಕ್ಕೆ ಯರೇ ಗೌಡ ಕೋಚ್ ಆಗಿದ್ದರು. ತನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕ ತಂಡ ಸಿ.ಕೆ ನಾಯ್ಡು ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಆ ಸಾಧನೆಗಾಗಿ ಯರೇ ಗೌಡರಿಗೆ ರಾಜ್ಯ ಸೀನಿಯರ್ ತಂಡದ ಕೋಚ್ ಆಗಿ ಪ್ರಮೋಶನ್ ಸಿಕ್ಕಿದೆ.
ದೇಶೀಯ ಕ್ರಿಕೆಟ್’ನ ದಿಗ್ಗಜ ಆಟಗಾರರಲ್ಲೊಬ್ಬರಾಗಿರುವ ಯರೇ ಗೌಡ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ, ನಂತರ ಸುದೀರ್ಘ ವರ್ಷಗಳ ಕಾಲ ರೈಲ್ವೇಸ್ ಪರವಾಗಿ ಆಡಿದ್ದರು. ತಮ್ಮ ನಾಯಕತ್ವದಲ್ಲಿ ರೈಲ್ವೇಸ್’ಗೆ ರಣಜಿ ಟ್ರೋಫಿ ಗೆದ್ದು ಕೊಟ್ಟ ಸಾಧನೆಯನ್ನೂ ಮಾಡಿದ್ದಾರೆ. ರೇಲ್ವೇಸ್ ಪರ ನಾಯಕನಾಗಿ ಮತ್ತು ಆಟಗಾರನಾಗಿ 2 ರಣಜಿ ಟ್ರೋಫಿ ಗೆದ್ದಿರುವ 52 ವರ್ಷದ ಯರೇ ಗೌಡ, ಮೂರು ಬಾರಿ ಇರಾನಿ ಕಪ್ ಚಾಂಪಿಯನ್’ಷಿಪ್ ಗೆದ್ದ ತಂಡದ ಸದಸ್ಯರೂ ಹೌದು.
ಸುದೀರ್ಘ ಒಂದು ದಶಕದ ಕಾಲ ರೈಲ್ವೇಸ್ ಪರ ಆಡಿದ್ದ ಯರೇ ಗೌಡ 2006ರಲ್ಲಿ ತವರು ರಾಜ್ಯಕ್ಕೆ ವಾಪಸ್ ಆಗಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದರು. ಮತ್ತೆ ರೈಲ್ವೇಸ್ ತಂಡಕ್ಕೆ ಮರಳಿದ್ದ ಯರೇ ಗೌಡ 2011ರಲ್ಲಿ ವೃತ್ತಿಜೀವನದ ಕೊನೆಯ ಪ್ರಥಮದರ್ಜೆ ಪಂದ್ಯವಾಡಿದ್ದರು.
100 ರಣಜಿ ಟ್ರೋಫಿ ಪಂದ್ಯಗಳನ್ನಾಡಿರುವ ದೇಶದ ಕೆಲವೇ ಕೆಲ ಆಟಗಾರರಲ್ಲಿ ಯರೇ ಗೌಡ ಕೂಡ ಒಬ್ಬರು. ವೃತ್ತಿಜೀವನದಲ್ಲಿ ಒಟ್ಟು 134 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಯರೇ ಗೌಡ 7650 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಸರಾಸರಿ 45.53, ಬಾರಿಸಿರುವ ಶತಕ 16 ಹಾಗೂ ಅರ್ಧಶತಕ 39. ಒಟ್ಟು 49 ಲಿಸ್ಟ್ ಎ ಪಂದ್ಯಗಳನ್ನಾಡಿ 1051 ರನ್ ಗಳಿಸಿದ್ದಾರೆ.
ಯರೇ ಗೌಡ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದು ಬೌಲಿಂಗ್ ಕೋಚ್ ಆಗಿ ರಾಜ್ಯ ಕ್ರಿಕೆಟ್ ಸಂಸ್ಥೆ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಕೆರಳಿಸಿದೆ. 2020ರಲ್ಲಿ ಯರೇ ಗೌಡ ಕರ್ನಾಟಕ ತಂಡದ ಕೋಚ್ ಆಗಿದ್ದಾಗ ರಾಜ್ಯ ತಂಡದ ಮಾಜಿ ಎಡಗೈ ಮಧ್ಯಮ ವೇಗಿ ಎಸ್.ಅರವಿಂದ್ ಬೌಲಿಂಗ್ ಕೋಚ್ ಆಗಿದ್ದರು.