Categories
ಅಥ್ಲೆಟಿಕ್ಸ್ ಸ್ಪೋರ್ಟ್ಸ್

ಯೋಗ ರತ್ನ ತನುಶ್ರೀ ಪಿತ್ರೋಡಿಯವರ 2 ನೇ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರ ಸ್ವೀಕಾರ ಸಮಾರಂಭ

ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ,ಯೋಗರತ್ನ ತನುಶ್ರೀ ಪಿತ್ರೋಡಿ ಅವರ ಎರಡನೇ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರ ಸ್ವೀಕಾರ ಸಮಾರಂಭ  ನಗರದ ಸೈಂಟ್ ಸಿಸಿಲೀಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ‌ ಯಶ್ ಪಾಲ್ ಸುವರ್ಣ ಜಯಕರ್ ಶೆಟ್ಟಿ ಇಂದ್ರಾಳಿ , ಗುರು ರಾಮಕೃಷ್ಣ ಕೊಡಂಚ, ಅಭಿನಯಾ ಅಧ್ಯಕ್ಷ ಉಮೇಶ್ ಅಲೆವೂರು , ಶ್ರೀಮತಿ ಸರಿತಾ ,ಸಿಸ್ಟರ್ ತೆರೆಸಾ ಜ್ಯೋತಿ,  ದೈಹಿಕ ಶಿಕ್ಷಕ ದಿನೇಶ್ ಸರ್, ವಿಜಯ್ ಕೋಟ್ಯಾನ್ , ಕೃಷ್ಣ ಕುಲಾಲ್ ಉಪಸ್ಥಿತರಿದ್ದರು.
“ಜ್ಞಾನದ ಬೆಳಕು ತೋರಿದ ಗುರುವಿಗೊಂದು ನಮನ” ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ತನುಶ್ರೀ ಪಿತ್ರೋಡಿಯವರಿಗೆ ಆರಂಭದಿಂದ ಇದುವರೆಗೆ ಶಿಕ್ಷಣ ನೀಡಿದ ಎಲ್ಲಾ ಗುರುಗಳನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಈ ಹಿಂದೆ 2023 ಜುಲೈನಲ್ಲಿ
ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್… ದೇಹದ ಹಿಂಭಾಗಕ್ಕೆ‌ ಎರಡೂ ಕೈಗಳನ್ನು ಚಲಿಸಿ ಪಾದವನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಬರುವ ರೀತಿಯ ಭಂಗಿಯನ್ನು  ತನುಶ್ರೀ ಒಂದು ನಿಮಿಷದಲ್ಲಿ 53 ಬಾರಿ  ಮಾಡಿದ್ದರು. ಆ ಸಾಧನೆಯನ್ನು ಗಿನ್ನೆಸ್ ಸಂಸ್ಥೆ ಪರಿಶೀಲಿಸಿ ಇದೀಗ ಪ್ರಮಾಣ ಪತ್ರ ನೀಡಿದೆ.
ಯುವ ಬರಹಗಾರ ಧೀರಜ್ ಬೆಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಉದಯ್ ಮತ್ತು ರೀತು ಶ್ರೀ ಕಾರ್ಯಕ್ರಮ‌ ಆಯೋಜಿಸಿದರು.
ಚಿತ್ರಕೃಪೆ
ರತನ್ ಸುರಭಿ
Categories
ಅಥ್ಲೆಟಿಕ್ಸ್

ಯೋಗಪಟು ಕುಮಾರಿ ಕವನ ಆಚಾರ್ಯ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಪುರಸ್ಕಾರ

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾ ಜಿಲ್ಲಾ ಘಟಕ, ಸಾಲಸೇಟ ತಾಲೂಕಾ ಘಟಕ, ಹಾಗೂ ಸ್ನೇಹಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಡಗಾಂವ ಲಕ್ಷ್ಮೀ ಎಂಟರ್‍ಪ್ರೈಸಸ್ ಹೋಟೆಲ್‍ನಲ್ಲಿ ಆಯೋಜಿಸಿದ್ದ “ಕಲಾ ಸಂಗಮ ಗೋವಾ” ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಯೋಗಪಟು ಕುಮಾರಿ ಕವನ ಆಚಾರ್ಯ ಇವರಿಗೆ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
 ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಕರ್ನಾಟಕದ ಸಾರ್ವಜನಿಕ ಗೃಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸ್ಮನಿ, ಕಸಾಪ ಗೋವಾ ರಾಜ್ಯ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಚಿತ್ರನಟಿ ಮೀನಾ, ಹಿರಿಯ ಪತ್ರಕರ್ತ ರಹಮತ್ ಕಂಚಗಾರ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಹಿರೀಯ ಪತ್ರಕರ್ತ ಮಾರುತಿ ಬಡಿಗೇರ, ಸ್ನೇಹಯುವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ರಂಜಿತಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
Categories
ಅಥ್ಲೆಟಿಕ್ಸ್

ಜಿಮ್ನಾಸ್ಟಿಕ್ ಮಹಾರಾಣಿ ಸಿಮೋನ್ ಬೈಲ್ಸ್.

ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಈವರೆಗೆ ಸೋತದ್ದೇ ಇಲ್ಲ! 
———————————–
2013ರಿಂದ ಭಾಗವಹಿಸಿದ ಪ್ರತೀಯೊಂದು ವಿಶ್ವಮಟ್ಟದ  ಕೂಟಗಳಲ್ಲಿ ಅಮೆರಿಕಾದ ಈ ಜಿಮ್ನಾಸ್ಟಿಕ್ ಮಹಾರಾಣಿಯು ಒಂದಲ್ಲ ಒಂದು ಪದಕವನ್ನು ಪಡೆಯದೇ ಹಿಂದೆ ಬಂದಿರುವ ಒಂದು ಉದಾಹರಣೆಯೂ  ದೊರೆಯುವುದಿಲ್ಲ! ಆಕೆ ಇದ್ದಾಳೆ ಅಂದರೆ ಯಾವುದೇ ಜಿಮ್ನಾಸ್ಟಿಕ್ ಕೂಟದಲ್ಲಿ ಚಿನ್ನದ ಪದಕದ ಆಸೆ ಬೇರೆ ಯಾರೂ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ!
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಸಿಮೋನ್ ಇದುವರೆಗೆ ಗೆದ್ದಿರುವ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ 34! ಅದರಲ್ಲಿ 25 ಚಿನ್ನದ ಪದಕಗಳೇ ಆಗಿವೆ! ಅದರಲ್ಲಿ ಕೂಡ ಒಲಿಂಪಿಕ್ಸ್    ಪದಕಗಳ ಸಂಖ್ಯೆ ಒಟ್ಟು 7!
ವರ್ತಮಾನದ  ಜಿಮ್ನಾಸ್ಟಿಕ್ ರಂಗದ ಎಲ್ಲಾ  ದಾಖಲೆಗಳು ಆಕೆಯ ಹೆಸರಿನಲ್ಲಿ ಇವೆ! ಆಕೆಯ ಬದುಕೇ ಒಂದು ಅದ್ಭುತ ಯಶೋಗಾಥೆ!
ಅಜ್ಜ ಸಾಕಿದ ಮೊಮ್ಮಗಳು ಸಿಮೋನ್.
———————————–
ಈ ವಿಶ್ವದಾಖಲೆಯ ಹುಡುಗಿಯ ಬಾಲ್ಯವು ದಾರುಣವೆ ಆಗಿತ್ತು. ಅಪ್ಪ ತಾನು ಹುಟ್ಟಿಸಿದ ನಾಲ್ಕು ಮಕ್ಕಳನ್ನು ತನ್ನ ಹೆಂಡತಿಯ ಮಡಿಲಲ್ಲಿ ಹಾಕಿ ಬೇರೆ ಯಾರೋ ಮಹಿಳೆಯ ಸೆರಗು ಹಿಡಿದು ಹೊರಟುಹೋಗಿದ್ದರು! ತಾಯಿಗೆ ತನ್ನ ನಾಲ್ಕು ಸಣ್ಣ ಮಕ್ಕಳನ್ನು ಸಾಕುವುದು ತುಂಬಾ ಕಷ್ಟ ಆದಾಗ ಅವರನ್ನು ಬೇರೆ ಬೇರೆ ಚರ್ಚಿನ ವಶಕ್ಕೆ ಒಪ್ಪಿಸಿದರು.
ಆಗ ಆಕೆಯ ಅಪ್ಪ(ಅಂದರೆ ಮಕ್ಕಳ ಅಜ್ಜ) ತನ್ನ ಎರಡು ಮೊಮ್ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಹಾಗೆ ಅಜ್ಜ ರಾನ್ ಬೈಲ್ಸ್ ಅವರ ವಶಕ್ಕೆ ಬಂದ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬಳು ಸಿಮೋನ್. ಮತ್ತೊಬ್ಬಳು ತಂಗಿ ಆಂಡ್ರಿ.
ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ!
———————————-
ಅಜ್ಜನ ಕೃಪೆಯಿಂದ ಶಾಲೆಗೆ ಸೇರಿದ ಸಿಮೋನಗೆ ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ ಉಂಟಾಯಿತು. ಒಳ್ಳೆಯ ಕೋಚ್ ದೊರೆತರು. ಹೇಳಿ ಕೇಳಿ ಜಿಮ್ನಾಸ್ಟಿಕ್ ತುಂಬಾ ಕಠಿಣವಾದ ಗೇಮ್. ದೇಹವನ್ನು ಯಾವ ಕೋನದಲ್ಲಾದರು ಬಗ್ಗಿಸುವ ಸವಾಲು ಒಂದೆಡೆ. ಅದರ ಜೊತೆ ವೇಗ, ನಿಖರತೆ, ಟೈಮಿಂಗ್, ಜಂಪ್, ಬ್ಯಾಲೆನ್ಸ್, ಓಟ, ಏಕಾಗ್ರತೆ, ದೃಢವಾದ ಮಾನಸಿಕ ಶಕ್ತಿ… ಹೀಗೆ ಎಲ್ಲವೂ ಇದ್ದರೆ ಮಾತ್ರ ಜಿಮ್ನಾಸ್ಟಿಕ್ ಒಲಿಯುತ್ತದೆ.
ಕಠಿಣವಾದ ತರಬೇತು – ದುರ್ಗಮವಾದ ಹಾದಿ!
———————————–
ಹಾಗೆ ಕಲಿಕೆಯ ಜೊತೆಗೆ ದಿನಕ್ಕೆ 4-6 ಘಂಟೆಗಳ ತರಬೇತು ಆಕೆ ಪಡೆಯುತ್ತಾರೆ. ಕೇವಲ ನಾಲ್ಕು ಅಡಿ ಎಂಟು ಇಂಚು ಎತ್ತರ ಇರುವ ಆಕೆಗೆ ಎಲುಬು ಮುರಿತ ಮತ್ತು ಸರ್ಜರಿಗಳು  ಕಾಮನ್ ಆದವು. ಆಗೆಲ್ಲ 15 ದಿನ ವಿಶ್ರಾಂತಿ ಪಡೆಯುತ್ತಿದ್ದ ಸಿಮೋನ್ ಮತ್ತೆ ಮತ್ತೆ ಎದ್ದು ಬರುತ್ತಿದರು.
ಜಿಮ್ನಾಸ್ಟಿಕ್ ಎಂದರೆ ಮಕ್ಕಳ ಆಟವಲ್ಲ!
———————————-
ಜಿಮ್ನಾಸ್ಟಿಕನ ಬೇರೆ ಬೇರೆ ವಿಭಾಗಗಳಾದ ವಾಲ್ಟ್, ಪೋಲ್ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್ ಮತ್ತು ಸರ್ವಾಂಗೀಣ ಇವೆಲ್ಲಾ  ವಿಭಾಗಗಳಲ್ಲಿಯು ಪಾರಮ್ಯವನ್ನು ಪಡೆಯಲು ಸಿಮೋನಗೆ ಆರೇಳು ವರ್ಷಗಳು ಬೇಕಾದವು. ಅದರ ಜೊತೆಗೆ ಪೀಪಲ್ ಯುನಿವರ್ಸಿಟಿಯ ಮೂಲಕ MBA ಪದವಿಯನ್ನು ಆಕೆ ಪಡೆಯುತ್ತಾರೆ. ತನ್ನ ಹದಿನಾರನೇ ವರ್ಷದಲ್ಲಿ ಸಿಮೋನ್ ಬೈಲ್ಸ್ ವಿಶ್ವಮಟ್ಟದ ಸ್ಪರ್ಧೆಯಲ್ಲಿ  ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲಿಂದ ಆಕೆ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ!
ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಸೋಲು ಕಂಡದ್ದೇ ಇಲ್ಲ!
———————-:——-——2013ರ ಇಸವಿಯಿಂದ ಇಂದಿನವರೆಗೆ ಭಾಗವಹಿಸಿದ ಎಲ್ಲ ಅಮೆರಿಕಾ ಮತ್ತು ವಿಶ್ವಮಟ್ಟದ ಕೂಟಗಳಲ್ಲಿ ಆಕೆ ಒಂದಲ್ಲ ಒಂದು ದಾಖಲೆಯನ್ನು ಬರೆಯುತ್ತ ಇದ್ದಾರೆ. ಇದುವರೆಗೆ ಆಕೆ ಪಡೆದ ಒಟ್ಟು 34 ಅಂತಾರಾಷ್ಟ್ರೀಯ ಪದಕಗಳಲ್ಲಿ 25 ಹೊಳೆಯುವ ಚಿನ್ನದ ಪದಕಗಳೇ ಇವೆ! ಅವುಗಳಲ್ಲಿ ಬರೋಬ್ಬರಿ ಏಳು ಒಲಿಂಪಿಕ್ ಪದಕಗಳು!
ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್ ಕೂಟದಲ್ಲಿ ಆಕೆಗೆ 25 ಪದಕಗಳು ದೊರೆತಿವೆ. ಅದರಲ್ಲಿ 19 ಚಿನ್ನದ ಪದಕಗಳು!
ಇದುವರೆಗೆ ಆಕೆ ಪಡೆದ ಪದಕಗಳ ಟ್ಯಾಲಿ ಈ ರೀತಿ ಇದೆ – ಚಿನ್ನ 25, ಬೆಳ್ಳಿ 4 ಮತ್ತು ಕಂಚು 5!
ಆಕೆಯ ಎಲ್ಲಾ ದಾಖಲೆಗಳು ಅನನ್ಯ, ಅಭಾದಿತ!
——————————
ಜಿಮ್ನಾಸ್ಟಿಕ್  ಸ್ಪರ್ಧೆಯ ಎಲ್ಲ ವಿಭಾಗಗಳಲ್ಲಿಯು ಅಂದರೆ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್, ಆಲ್ರೌಂಡ್ ಸ್ಪರ್ಧೆ ಇವೆಲ್ಲಾ ಸ್ಪರ್ಧಾ ವಿಭಾಗಗಳಲ್ಲಿ ಕೂಡ ಆಕೆ ರಾಶಿ ಪದಕವನ್ನು ಗೆದ್ದಿದ್ದಾರೆ! ಜಗತ್ತಿನ ಯಾವ ಜಿಮ್ನಾಸ್ಟ್ ಕೂಡ ಆಕೆಯ ದಾಖಲೆಗಳ ಹತ್ತಿರ ಕೂಡ ಬರಲು ಸಾಧ್ಯವೇ ಇಲ್ಲ! ಇನ್ನೂ ಐದಾರು ವರ್ಷ ಅವರು ನಿವೃತ್ತಿ ಆಗುವುದಿಲ್ಲ ಅಂದರೆ ಈ ಅನನ್ಯ ದಾಖಲೆಗಳು ಎಲ್ಲಿಯವರೆಗೆ ತಲುಪಬಹುದು ಎಂದು ಒಮ್ಮೆ ಯೋಚನೆ ಮಾಡಿ.
ಆಕೆ ಈ ಬಾರಿ ಸುದ್ದಿಯಾಗಿದ್ದು ಬೇರೆ ಕಾರಣಕ್ಕೆ!
———————————-
ಇಷ್ಟೆಲ್ಲ ಸಾಧನೆಯನ್ನು ಮಾಡಿದ ಸಿಮೋನ್ ಈ ಬಾರಿ ಸುದ್ದಿ  ಮಾಡಿದ್ದು ಬೇರೆಯೇ ಕಾರಣಕ್ಕೆ! ಅದೂ ಒಳ್ಳೆಯ ಕಾರಣಕ್ಕೆ!
ಅಮೆರಿಕದ ಜಿಮ್ನಾಸ್ಟಿಕ್ ಟೀಮಿನ ವೈದ್ಯರಾದ ಡಾ.ಲಾರಿ ನಾಸರ್ ಎಂಬಾತನು ತನ್ನ ಮೇಲೆ ಮತ್ತು ಇತರ ಮಹಿಳಾ ಜಿಮ್ನಾಸ್ಟ್ ಪಟುಗಳ ಮೇಲೆ ತರಬೇತಿಯ ಹೆಸರಿನಲ್ಲಿ ಅತ್ಯಾಚಾರವನ್ನು ಮಾಡಿದ್ದಾನೆ ಎಂದಾಕೆ ಮೊದಲು ತನ್ನ ಟ್ವಿಟರ್ ಮೂಲಕ ಜಗತ್ತಿಗೆ ತಿಳಿಸುತ್ತಾರೆ!
ಆಗ ಇಡೀ ಅಮೆರಿಕಾ ದೇಶವು  ಆಕೆಯ ನೆರವಿಗೆ ನಿಲ್ಲುತ್ತದೆ. ಆ ಸಂತ್ರಸ್ತ ಮಹಿಳಾ ಪಟುಗಳು ಕೂಡ ತಮಗಾದ ದೌರ್ಜನ್ಯ  ಒಪ್ಪಿಕೊಂಡು ಆಕೆಯ ನೆರವಿಗೆ ನಿಲ್ಲುತ್ತಾರೆ. ಅಮೆರಿಕದ ಕೋರ್ಟಲ್ಲಿ ದೀರ್ಘ ವಿಚಾರಣೆಯು  ನಡೆಯುತ್ತದೆ. ತನ್ನ ನಿಬಿಡ ಕ್ರೀಡಾ ಚಟುವಟಿಕೆಗಳ ನಡುವೆ ಆಕೆ ಕೋರ್ಟಿಗೆ ಬಂದು ದಿಟ್ಟವಾಗಿ ಸಾಕ್ಷಿ ಹೇಳುತ್ತಾರೆ. ಆಮಿಷಗಳಿಗೆ, ಒತ್ತಡಗಳಿಗೆ ಮಣಿಯುವುದಿಲ್ಲ. ಕೊನೆಗೆ ಆಕೆ ಆ ಕೇಸನ್ನು ಗೆಲ್ಲುತ್ತಾರೆ!
ಇಷ್ಟೆಲ್ಲ ಆದರೂ ಅಮೆರಿಕನ್ FBI ಸಂಸ್ಥೆಯು ಆ ವೈದ್ಯನ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಿಡಿದು ನಿಲ್ಲುತ್ತಾರೆ. ಆ ಸಂಸ್ಥೆಯ ಮೇಲೆ ಆಕೆ ಒಂದು ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ!
ಈ ಕಾರಣಕ್ಕೂ ಸಿಮೋನ್ ಬೈಲ್ಸ್  ನಮಗೆ ತುಂಬಾನೇ ಇಷ್ಟ ಆಗುತ್ತಾರೆ! ಆಕೆಗೆ ಜಿಮ್ನಾಸ್ಟಿಕ್ ಮಹಾರಾಣಿ ಎಂಬ ಬಿರುದು ಸುಮ್ಮನೆ ಬಂದದ್ದು ಅಲ್ಲವೇ ಅಲ್ಲ.
Categories
ಅಥ್ಲೆಟಿಕ್ಸ್

ಮಂಗಳೂರಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಪಟು ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ, ಸೆಪ್ಟೆಂಬರ್ 27 ರಿಂದ 30

2023 ನೇ ಸಾಲಿನ ಕರ್ನಾಟಕ ರಾಜ್ಯ ಜೂನಿಯರ್ ಕ್ರೀಡಾಕೂಟವು ಸೆಪ್ಟೆಂಬರ್ 27 ರಿಂದ 30 ರ ವರೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಲಿರುವುದು. ಈ ಕ್ರೀಡಾ ಕೂಟವು ಅಂತರಾಷ್ಟ್ರೀಯ ಅತ್ಲೆಟಿಕ್ ದಿವಂಗತ ಲೋಕನಾಥ್ ಬೋಳಾರ್ ರವರ ಸ್ಮರಣಾರ್ಥ ವಾಗಿ ಜರಗಲಿರುವುದು,
ಕ್ರೀಡಾಕೂಟವು ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ ಮತ್ತು ಉಡುಪಿ ಶಾಖೆ, ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜರಗಲಿದ್ದು ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ನ ಸಹಕಾರ ಹಾಗ ದ.ಕ ಅತ್ಲೆಟಿಕ್ ಅಸೋಸಿಯೇಷನ್ ರವರ ಸಹಭಾಗಿತ್ವ ಇರುತ್ತದೆ.
ಕ್ರೀಡಾಕೂಟದ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಖಾಸಾಗಿ ಹೊಟೇಲಿನಲ್ಲಿ ಜರಗಿತು.
ಪೋಸ್ಟರ್ ಬಿಡುಗಡೆ ಮಾಡಿದ ಜನತಾ ಫಿಶಮೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್ ಮಾತನ್ನಾಡಿ ಲೋಕನಾಥ್ ಬೋಳಾರ್ ನಮ್ಮ ದೇಶ ಕಂಡ ಈ ಭಾಗದ ಅಪ್ರತಿಮ ಕ್ರೀಡಾಪಟುವಾಗಿ ನಮ್ಮ ದೇಶಕ್ಕೆ ಹೆಸರನ್ನು ತಂದಿದ್ದಾರೆ. ಮಾತ್ರವಲ್ಲದೆ ಮೀನುಗಾರ ಸಮಾಜದ ಕಣ್ಮಣಿಯಾಗಿ ಮೀನುಗಾರಿಕೆಯ ಉತ್ತೇಜನಕ್ಕೆ ಹಲವು ಮಹತ್ತರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ನಾಡಿನ ಕ್ರೀಡಾಪಟುಗಳ ಬೆಳವಣಿಗೆಗೆ ಕ್ರೀಡಾಕೂಟವು ನಮ್ಮ ಜಿಲ್ಲೆಯಲ್ಲಿ ಜರಗುತ್ತಿರುವುದು ಹೆಮ್ಮೆಯಾಗುತ್ತಿದೆ. ಈ ಮೂಲಕ ಲೋಕನಾಥ್ ಬೋಳಾರ್ ರವರಿಗೆ ಗೌರವವನ್ನು ಸಮರ್ಪಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತಾಡುತ್ತಾ ಲೋಕನಾಥ್ ಬೋಳಾರ್ ರವರು ಹೆಚ್ಚಾಗಿ ಸೇವೆ ಮಾಡಿದ ಕ್ಷೇತ್ರವೆಂದರೆ ಕ್ರೀಡೆ ಹಾಗೂ ಮೀನುಗಾರಿಕಾ ಕ್ಷೇತ್ರ, ತಮ್ಮ ಜೀವಿತಾವಧಿಯಲ್ಲಿ ಹಲವು ಕ್ರೀಡಾಪಟುಗಳನ್ನು ಬೆಳೆಸಿದ ಕೀರ್ತಿ ಅವರಿಗಿದೆ‌ . ಮೀನುಗಾರಿಕೆಗೆ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಮೀನುಗಾರರ ಏಳಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಅವರ ಸ್ಮರಣಾರ್ಥ ಜರಗುವ ಈ ಕ್ರೀಡಾಕೂಟದಲ್ಲಿ ಕರ್ಣಾಟಕದಾತ್ಯಂತ 2500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ, ಕ್ರೀಡಾಕೂಟದ ವಿಜೇತರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ ಸುವರ್ಣ  ಮಲ್ಪೆ, ಟಿ ಹನೀಫ್ ಮಲ್ಪೆ, ಆನಂದ ಮಾಸ್ಟರ್ ಬೋಳೂರು, ಜಗದೀಶ್ ಬೋಳೂರು, ಮೋಹನ್ ಬೆಂಗ್ರೆ, ನಿತಿನ್ ಕುಮಾರ್, ತೇಜೋಮಯ, ಕಾಶಿನಾಥ್ ಕರ್ಕೇರ, ವಾಲ್ಟರ್ ಡಿಸೋಜ, ಫಾದರ್ ಗೋಮ್ಸ್, ಸಿಂಧೂರಾಂ, ಕ್ಯಾಪ್ಟನ್ ಕೃಷ್ಣಪ್ಪ,ವರದ್ ರಾಜ್ ಬಂಗೇರ, ಮನೋಹರ ಬೋಳಾರ ಮೊಹಮ್ಮದ್ ಬಸೀರ್, ಡಾ| ಶಾಂತರಾಂ ಶೆಟ್ಟಿ, ಡಾ|ದೇವಿ ಲೋಕನಾಥ್ ಬೋಳಾರ್, ಶ್ರೀಮತಿ ಪವನ್ ಬೋಳಾರ್, ಕಾವ್ಯ ಪ್ರಜ್ವಲ್ ಬೋಳಾರ್ , ಸುಭಾಷ್ ಚಂದ್ರ ಕಾಂಚನ್ ರವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಧಾಧಿಕಾರಿಗಳಾದ ಮೋಹನ್ ಕೋಡಿಕಲ್, ಭರತ್ ಕುಮಾರ್ ಎರ್ಮಾಳ್, ಯತೀಶ್ ಬೈಕಂಪಾಡಿ, ವಿಜಯ ಸುವರ್ಣ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಪುತ್ರನ್ ಉಳ್ಳಾಲ ಹಾಗೂ ಅತ್ಲೆಟಿಕ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ,ತಾರನಾಥ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ಕೃಷ್ಣ ಶೆಣೈ, ಸುಪ್ರೀತ್ ಭಾಗವಹಿಸಿದ್ದರು.
Categories
ಅಥ್ಲೆಟಿಕ್ಸ್

ನಾಟ್ಯ ಶಾಸ್ತ್ರದ ಮೂಲಕ 8ನೇ ವಿಶ್ವದಾಖಲೆ ನಿರ್ಮಿಸಿದ ಯೋಗ ಸಾಧಕಿ ತನುಶ್ರೀ ಪಿತ್ರೋಡಿ

ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ನಾಟ್ಯ ಶಾಸ್ತ್ರದಲ್ಲಿ 8ನೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರದಲ್ಲಿ ವಿವರಿಸಿದ 108 ಕರಣಗಳ ಭಂಗಿಗಳನ್ನು 3 ನಿಮಿಷ 29 ಸೆಕೆಂಡ್‌ಸ್‌‌ನಲ್ಲಿ ಪ್ರಸ್ತುತಪಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾದರು.
ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ.
108 ನಾಟ್ಯಶಾಸ್ತ್ರದಲ್ಲಿ ಇದನ್ನು ಕ್ರೋಢಿಕರಿಸಲಾಗಿದೆ ಎಂದು ತನುಶ್ರೀ ಅವರ ಗುರು ಶ್ರೀರಾಮಕೃಷ್ಣ ಕೊಡಂಚ ತಿಳಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಗೌರವ್ ಮಿತ್ತಲ್ ಅವರು ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು 8ನೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು, ಒಂದು ಗಿನ್ನೆಸ್ ರೆಕಾರ್ಡ್, 7 ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.
Categories
ಅಥ್ಲೆಟಿಕ್ಸ್

ವಿಶ್ವ ದಾಖಲೆಯ ಕುವರಿ ತನುಶ್ರೀ ಪಿತ್ರೋಡಿಯವರ ಮುಡಿಗೆ ಸೇರಲಿದೆ ಇನ್ನೊಂದು ಹೆಮ್ಮೆಯ ಗರಿ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಶತಮಾನೋತ್ಸವದ ಸವಿನೆನಪಿನೊಂದಿಗೆ  ಈಗಾಗಲೇ ಏಳು ವಿಶ್ವದಾಖಲೆಗಳನ್ನು ತಮ್ಮದಾಗಿಸಿಕೊಂದಿರುವ ನಾಟ್ಯಮಯೂರಿ ಎಂಬ ಬಿರುದಾಂಕಿತ, “ಯೋಗಶ್ರೀ” ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಯೋಗರತ್ನ ತನುಶ್ರೀ ಪಿತ್ರೋಡಿ ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಇವರ ಮಾರ್ಗದರ್ಶನದಲ್ಲಿ  ಎಂಟನೆಯ ವಿಶ್ವ ದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನಾಟ್ಯ ಶಾಸ್ತ್ರದ 108 ಕರಣಗಳನ್ನು  ಪ್ರದರ್ಶಿಸಲಿದ್ದಾರೆ.
ಏಪ್ರಿಲ್ 4ರಂದು ಶ್ರೀ ನಾರಾಯಣಗುರು ಆಡಿಟೋರಿಯಂ ಬನ್ನಂಜೆ ಉಡುಪಿಯಲ್ಲಿ ಸಂಜೆ 4 ಗಂಟೆಯಿಂದ  ಈ ಕಾರ್ಯಕ್ರಮ ನೆರವೇರಲಿದೆ.
         ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕುದಾಗಿ ತನುಶ್ರೀಯವರು ತಮ್ಮ ಪ್ರತಿಭೆಯ ಮೂಲಕ ಎಲ್ಲೆಡೆ ಚಿರಪರಿಚಿತರು.ಉದಯ್ ಕುಮಾರ್ ಹಾಗೂ ಸಂದ್ಯಾ ದಂಪತಿಗಳ ಹೆಮ್ಮೆಯ ಪುತ್ರಿಯಾಗಿರುವ ತನುಶ್ರೀ ಉಡುಪಿಯ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇದುವರೆಗೂ ಒಟ್ಟು 505 ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನಿತ್ತ ಕಲಾ ಕುಸುಮ ಇವರು.ತಮ್ಮ ಯೋಗಗುರುಗಳಾದ ಹರಿರಾಜ್ ಕಿನ್ನಿಗೋಳಿ ಹಾಗೂ ಸುದರ್ಶನ್ ಕಾರ್ಕಳ ಇವರ ಮಾರ್ಗದರ್ಶನದಲ್ಲಿ  1 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಗೂ 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.ಡಾ.ವೀರೇಂದ್ರ ಹೆಗ್ಗಡೆಯವರಿಂದ  ‘ಯೋಗರತ್ನ ಪ್ರಶಸ್ತಿ’, ‘ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ‘, ‘ ವಿಶೇಷ ಬಾಲ ಪ್ರತಿಭೆ ಪ್ರಶಸ್ತಿ ‘, ‘ಯೋಗಶ್ರೀ ಪ್ರಶಸ್ತಿ’ ಹೀಗೆ ಹತ್ತು ಹಲವು ಪುರಸ್ಕಾರಗಳು ಇವರ ಸಾಧನೆಗೆ ಸಂದಿದೆ. ಇದುವರೆಗೂ ಹಲವಾರು ಸಂಘ ಸಂಸ್ಥೆಗಳು ಇವರ ಈ ವಿಶೇಷ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
Categories
ಅಥ್ಲೆಟಿಕ್ಸ್

ಧಿಂಗ್ ಏಕ್ಸ್ ಪ್ರೆಸ್ ಖ್ಯಾತಿಯ ಹುಡುಗಿಯು ಓಡುತ್ತಲೇ ಇದ್ದಾಳೆ!

ಹಿಮಾದಾಸ್- ಭಾರತದ ಹೆಮ್ಮೆಯ ಕ್ರೀಡಾಪಟು !
——————————
ಮಾರ್ಚ್ 8 — ಇಂದು ವಿಶ್ವ ಮಹಿಳಾ ದಿನಾಚರಣೆ. ನಾನು  ನಿಮಗೆಲ್ಲ ಇಂದು ಒಬ್ಬ ಅದ್ಭುತವಾದ ಮಹಿಳಾ ಕ್ರೀಡಾಪಟುವನ್ನು ಪರಿಚಯ ಮಾಡಬೇಕು ಮತ್ತು ಜಗತ್ತಿನ ಎಲ್ಲ ಮಹಿಳೆಯರಿಗೆ ಅವರದ್ದೇ ದಿನದ ಶುಭಾಶಯ ಹೇಳಬೇಕು.
ಮೀಟ್ ದಿಸ್ ಗ್ರೇಟ್ ಅಥ್ಲೆಟ್ ——————————
ಮೊದಲ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಓಡುವಾಗ ಅವಳ ಬಳಿ ಟ್ರಾಕ್ ಶೂಗಳು ಇರಲಿಲ್ಲ. ಅವಳ ಅಪ್ಪ ಪೇಟೆಗೆ ಹೋಗಿ 1200 ರೂ. ಬೆಲೆಯ ಸ್ಪೈಕ್ ಇರುವ ಸಾಮಾನ್ಯ ಶೂ ತಂದುಕೊಟ್ಟಿದ್ದರು ಮತ್ತು ನನ್ನ ಹತ್ತಿರ ಇರೋದು ಇಷ್ಟೇ ದುಡ್ಡು ಎಂದು ಮಗಳಿಗೆ ಹೇಳಿದ್ದರು.
ಆಗ ಅವಳು ತನ್ನ ಶೂಗಳ ಮೇಲೆ ಮಾರ್ಕರ್ ಪೆನ್ನನ್ನು  ಬಳಸಿ “ಅಡಿಡಾಸ್” ಎಂದು ಬರೆದುಕೊಂಡು ಓಟಕ್ಕೆ ನಿಲ್ಲುತ್ತಿದ್ದರು ಮತ್ತು ಧೈರ್ಯವಾಗಿ  ಎಲ್ಲ ಆಟಗಳನ್ನು ಗೆಲ್ಲುತ್ತಿದ್ದರು. ಆದರೆ ಈಗ ಮೂರೂವರೆ ವರ್ಷಗಳಲ್ಲಿ ಆಕೆಯ ಕ್ರೀಡಾ  ಪ್ರತಿಭೆಯು ಜಗತ್ತಿಗೆ ಜಾಹೀರು ಆಗಿಬಿಟ್ಟಿದೆ. ಅವಳೀಗ ಭಾರತದ ಸೂಪರ್ ಸ್ಟಾರ್ ಕ್ರೀಡಾಪಟು!  ಅದೇ ಅಡಿಡಾಸ್ ಶೂ ಕಂಪೆನಿಯು ಆಕೆಯನ್ನು ತನ್ನ ಬ್ರಾಂಡ್  ಅಂಬಾಸಿಡರ್ ಆಗಿ ಆರಿಸಿಕೊಂಡಿದೆ! ಅವಳ ಹೆಸರಿನಲ್ಲಿ ಆಧುನಿಕ ಶೂಗಳನ್ನು ಲಾಂಚ್ ಮಾಡಿದೆ. ಅದರಲ್ಲಿ ಒಂದು ಕಡೆ ಅವಳ ಹೆಸರಿದ್ದರೆ, ಮತ್ತೊಂದು ಕಡೆ  Create History ಎಂದು ಪ್ರಿಂಟ್ ಮಾಡಲಾಗಿದೆ. ಈ ಯಶಸ್ಸಿಗೆ ಕಾರಣವಾದ ಚಿನ್ನದ ಜಿಂಕೆಯ  ಹೆಸರು ಹಿಮಾ ದಾಸ್!
ಆಕೆ ನಿಜವಾಗಿಯೂ ದೇಶದ ಹೆಮ್ಮೆಯ ಕ್ರೀಡಾಪಟು! 
——————————
ಆಕೆ ಹುಟ್ಟಿದ ಅಸ್ಸಾಂನ ಸಣ್ಣ ಊರಲ್ಲಿ ಬೇರೆ ಯಾವ ಕ್ರೀಡಾಪಟು ಇರಲಿಲ್ಲ! ಆಟದ ಮೈದಾನ, ಜಿಮ್ ಮೊದಲಾದವುಗಳು ಇರಲೇ ಇಲ್ಲ!
ಆಕೆ ಹುಟ್ಟಿದ್ದು ಅಸ್ಸಾಂ ರಾಜ್ಯದ ಧಿಂಗ್ ಎಂಬ ಪುಟ್ಟ ಪಟ್ಟಣದ ಸಮೀಪದ ಒಂದು ಹಳ್ಳಿಯಲ್ಲಿ. ಆ ಹಳ್ಳಿಯಲ್ಲಿ ಇರುವುದು ಒಟ್ಟು 100 ಮನೆ ಮಾತ್ರ! ಅವರ ತಂದೆ ಒಬ್ಬ ಸಾಮಾನ್ಯ ಕೃಷಿಕ. ಅವರ ಐದು ಮಕ್ಕಳಲ್ಲಿ ಹಿಮಾ ದಾಸ್ ಚಿಕ್ಕವರು.   ಮನೆಯಲ್ಲಿ ಒಟ್ಟಿಗೆ 17 ಜನ. ಕಿತ್ತು ತಿನ್ನುವ ಬಡತನ. ಇಂತಹ ಕುಟುಂಬದ ಓರ್ವ ಹುಡುಗಿಯು ಮುಂದೆ ವಿಶ್ವಮಟ್ಟದ ಕ್ರೀಡಾಪಟು ಆದದ್ದು ನಿಜವಾಗಿ ಅದ್ಭುತವೇ ಸರಿ!
ಪ್ರೌಢಶಾಲೆ ಕಲಿಯುವಾಗ ಆಕೆಗೆ  ಫುಟ್ಬಾಲಿನಲ್ಲಿ ಮಾತ್ರ ಆಸಕ್ತಿ ಇತ್ತು ಆದರೆ ಫುಟ್ಬಾಲ್ ಆಡುತಿದ್ದದ್ದು ಕೇವಲ ಹುಡುಗರೊಂದಿಗೆ! ಮುಂದೆ  ಶಿಮಾಶುಲ್ ಎಂಬ ಒಬ್ಬ ಪಿ. ಟಿ.  ಮೇಷ್ಟ್ರು ಅವರಿಗೆ ಅಥ್ಲೆಟಿಕ್ಸ್ ಮೇಲೆ ಮಾತ್ರ ಗಮನಕೊಡಲು ಹೇಳಿದರು. ಇದರಿಂದ ಹದಿನಾರು ವರ್ಷದ ಹಿಮಾದಾಸ್ ಟ್ರಾಕ್ ಮೇಲೆ ಓಡಲು ಆರಂಭ ಮಾಡಿದರು. ನಿಪುನದಾಸ್ ಎಂಬ ಕೋಚ್ ಅವರಿಗೆ ದೊರಕಿದ್ದು, ಪ್ರತಿದಿನ 10-12 ಘಂಟೆ ಬೆವರು ಹರಿಸಿ ದುಡಿದದ್ದು, ಸ್ಪಷ್ಟ ಗುರಿ ಇರಿಸಿ ಯೋಜನೆ ಹಾಕಿದ್ದು ಎಲ್ಲವೂ ಸೇರಿ ಆಕೆಯ ಮೂಲಕ ಬಹು ದೊಡ್ಡ ಫಲಿತಾಂಶವನ್ನು  ತಂದುಕೊಟ್ಟವು. ಆಕೆಯ ಸಾಧನೆ ನಿಜಕ್ಕೂ ಅದ್ಭುತ!
ಮನೆಯ ಮಂದಿಯೇ ಆಕೆಗೆ  ಕ್ರೀಡೆ ಬೇಡಾ ಅಂದರು! 
–;——————————–
2018 ರಲ್ಲಿ ಆಕೆ ಮೊದಲನೇ  ಸಲ ಆಸ್ಟ್ರೇಲಿಯಾದಲ್ಲಿ ಕಾಮನ್ವೆಲ್ತ್  ಕ್ರೀಡಾಕೂಟದಲ್ಲಿ ಓಡಿದರು. ಯಾವ ಪದಕವೂ ದೊರೆಯದೆ ಹಿಂದೆ ಬಂದಾಗ ಅವಳ ಅಮ್ಮ ಗದರಿ ಹೇಳಿದ್ದು ಒಂದೇ ಮಾತು.  ‘ಸಾಕು ಮಗಳೆ! ಹೀಗೆಲ್ಲ ಸ್ಪೋರ್ಟ್ಸ್ ಅಂತ ಕೂತರೆ ಮುಂದೆ ಮದುವೆ ಕಷ್ಟ ಆಗಬಹುದು!’
ಆದರೆ ದೊಡ್ಡ ಕನಸುಗಳನ್ನು  ಹೊತ್ತ ಹುಡುಗಿಯು ಮಧ್ಯದಲ್ಲಿ ಕ್ವಿಟ್ ಮಾಡಲು ಸಾಧ್ಯವೇ ಇರಲಿಲ್ಲ! ಧಿಂಗ್ ಏಕ್ಸಪ್ರೆಸ್ ಇನ್ನಷ್ಟು ವೇಗದಲ್ಲಿ ಓಡಲು ತೊಡಗಿತು.
ಹಿಮಾ ದಾಸ್ ಹೆಸರನ್ನು ಇಡೀ ಜಗತ್ತು ಮೊದಲನೆಯ ಸಲ ಸ್ಪಷ್ಟವಾಗಿ ಕೇಳಿದ್ದು 2018 ಜುಲೈ ತಿಂಗಳಲ್ಲಿ ನಡೆದ ಅಂಡರ್ 19 ವರ್ಲ್ಡ್ ಚಾಂಪಿಯನಶಿಪ್ ಕೂಟದಲ್ಲಿ !ಇವೆಂಟ್ ನಡೆದದ್ದು ದೂರದ  ಫಿನ್ಲ್ಯಾಂಡಿನಲ್ಲಿ.
ಅದರಲ್ಲಿ ಮಿಂಚಿದ ಅವರು 400
ಮೀಟರ್ ರೇಸನ್ನು 51.46 ಸೆಕೆಂಡ್ಸ್ ಅವಧಿಯಲ್ಲಿ ಮುಗಿಸಿ ಗೆದ್ದದ್ದು ಚಿನ್ನದ ಪದಕವನ್ನು! ಯಾವುದೇ ವಿಶ್ವಮಟ್ಟದ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲನೆಯ  ಭಾರತೀಯ ಮಹಿಳೆ  ಹೀಮಾ ದಾಸ್ ಎನ್ನುವುದು ಆಕೆಯದೇ  ದಾಖಲೆ!
ಈ ಸಾಧನೆಯನ್ನು ಮಾಡಿದಾಗ ಅವರ ವಯಸ್ಸು ಕೇವಲ 18!
ಮುಂದಿನ ತಿಂಗಳು ನಡೆದ (ಜಕಾರ್ತಾ) ಏಷಿಯನ್ ಕೂಟ!  ಅದರಲ್ಲಿ 400 ಮೀ. ರೇಸಲ್ಲಿ  ಆಕೆ ಬೆಳ್ಳಿಯ ಪದಕವನ್ನು ಗೆದ್ದರು. ಎರಡು ವಿಭಾಗದ ರಿಲೇಯಲ್ಲೂ ಚಿನ್ನದ ಪದಕವನ್ನು  ಬೇಟೆ ಆಡಿದರು! ಅವರ ದಾಖಲೆಗಳು ನಿಜವಾಗಿ ಅದ್ಭುತವಾಗಿವೆ!
2018 ಜುಲೈ ತಿಂಗಳ 19 ದಿನಗಳ ಅವಧಿಯಲ್ಲಿ ಐದು ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ಆಕೆ ಗೆದ್ದಿದ್ದಾರೆ!
400 ಮೀಟರ್ ಓಟದಲ್ಲಿ ಭಾರತದ ದಾಖಲೆಯು ಇದುವರೆಗೆ ಅವರ ಹೆಸರಲ್ಲಿಯೇ  ಇದೆ (50.79 ಸೆಕೆಂಡ್)
ಕೇವಲ ಹದಿನೆಂಟು ವರ್ಷ ಪ್ರಾಯದಲ್ಲಿ ಭಾರತದ  ರಾಷ್ಟ್ರಪತಿಯವರ ಕೈಗಳಿಂದ ಅರ್ಜುನ ಪ್ರಶಸ್ತಿಯನ್ನು ಕೂಡ ಹಿಮಾ ದಾಸ್ ಅವರು ಗೆದ್ದಿದ್ದಾರೆ. 2019ರಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ  ‘ ಕೌನ್ ಬನೆಗಾ ಕರೋಡ್ ಪತಿ’ ಶೋದಲ್ಲಿ ಅವರು ಸೆಲೆಬ್ರಿಟಿ ಅತಿಥಿಯಾಗಿಯೂ  ಭಾಗವಹಿಸಿದ್ದಾರೆ.
ಅಸ್ಸಾಂ ಸರಕಾರವು ಅವರಿಗೆ DYSP ಹುದ್ದೆ ನೀಡಿದೆ.
ಏಷಿಯನ್ ಗೇಮ್ಸ್ ಕೂಟದಲ್ಲಿ ಕೂಡ ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕಗಳನ್ನು ಅವರು ಈಗಾಗಲೇ ಗೆದ್ದಿದ್ದಾರೆ.
ಅವರ ಆರಾಧ್ಯ ದೇವರಾದ ಸಚಿನ್ ತೆಂಡುಲ್ಕರ್ ಅವರು ಆಕೆಯನ್ನು  ಮುಂಬಯಿಗೆ ಕರೆಸಿಕೊಂಡು ಜೊತೆಯಾಗಿ ಊಟ ಮಾಡಿಸಿ, ಸನ್ಮಾನ ಮಾಡಿ ತಮ್ಮ  ಅಭಿನಂದನೆಯನ್ನು ಸಲ್ಲಿಸಿದ್ದರು!
ಹಿಮಾದಾಸ್ ಅವರಿಗೆ ಈಗ  ಕೇವಲ 21 ವರ್ಷ! ಅವರಲ್ಲಿ ಇನ್ನೂ ಸಾಕಷ್ಟು ಕ್ರೀಡಾವರ್ಷಗಳು ಬಾಕಿ ಯಿವೆ.  ರೆಕ್ಕೆ ಬಿಚ್ಚಿದ ಕನಸುಗಳು  ಕೂಡಾ!
ಆಕೆ ಅಸ್ಸಾಂ ಪೊಲೀಸ್ DYSP ಆಗಿ ಇತ್ತೀಚೆಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಬದ್ಧತೆ, ಕ್ಷಮತೆ, ಸಮರ್ಪಣಾ ಭಾವ ಮತ್ತು ರಾಷ್ಟ್ರಪ್ರೇಮ ಇವುಗಳು ಅತ್ಯಂತ ಶ್ಲಾಘನೀಯ.
ಅವರಿಗೆ ಶುಭವಾಗಲಿ.
Categories
ಅಥ್ಲೆಟಿಕ್ಸ್

ರೆಸ್ಲಿಂಗ್ ರಿಂಗನಲ್ಲಿ 22 ವರ್ಷ ಅಜೇಯ, ಅದಮ್ಯ – ಜಾನ್ ಸೀನಾ!

ಎಷ್ಟು ಪೆಟ್ಟು ತಿಂದರೂ ಕ್ಯಾರೇ ಅನ್ನದ 16 ಬಾರಿಯ ವಿಶ್ವಚಾಂಪಿಯನ್ ರೆಸ್ಲರ್!
ರೆಸ್ಲಿಂಗ್ ಇಂದು ಪ್ರತಿಯೊಬ್ಬರ ಹೃದಯ ಬಡಿತವೇ ಆಗಿದ್ದರೆ ಅದಕ್ಕೆ ಕಾರಣರಾದವರು ಅಂಡರ್ ಟೆಕರ್, ದ ಗ್ರೇಟ್ ಖಲಿ, ಶಾನ್ ಮೈಕೆಲ್, ಬಟಿಸ್ಟಾ, ಬಿಗ್ ಶಾ ಮೊದಲಾದ ರೆಸ್ಲರ್ಸ್! ಅದೇ ರೀತಿ ಇದೀಗ ತನ್ನ ಅಸಾಧಾರಣವಾದ ಪ್ರತಿಭೆ ಮತ್ತು ಅಸೀಮ ಸಾಮರ್ಥ್ಯಗಳ ಸಹಾಯದಿಂದ ಅವರೆಲ್ಲರನ್ನೂ ಹಿಂದಕ್ಕೆ ಹಾಕಿರುವ ಜಾನ್ ಸೀನಾ ಎಂಬ ದೈತ್ಯ ರೆಸ್ಲಾರ್ ಬಗ್ಗೆ ನಾನು ಎಷ್ಟು ಬರೆದರೂ ಕಡಿಮೆಯೇ!
ಆತ ಹುಟ್ಟು ಹೋರಾಟಗಾರ!
—————————–
1977 ಏಪ್ರಿಲ್ 23ರಂದು ಅಮೆರಿಕದಲ್ಲಿ ಜನಿಸಿದ ಜಾನ್ ಸೀನಾ ರೆಸ್ಲಾರ್ ಆಗುವ ಕನಸು ಕೂಡ ಕಂಡವರಲ್ಲ! ಅವರ ಕನಸು ಏನಿದ್ದರೂ ಬಾಡಿ ಬಿಲ್ಡಿಂಗ್ ಮತ್ತು ಸಿನೆಮಾದಲ್ಲಿ ನಟನೆ ಮಾತ್ರ ಆಗಿತ್ತು. ಆರು ಅಡಿ ಒಂದು ಇಂಚು ಎತ್ತರದ ಮತ್ತು 114 ಕಿಲೋಗ್ರಾಂ ತೂಕ ಇದ್ದ ಜಾನ್ ಸೀನಾ ಜಿಮ್ ತರಬೇತಿಯ ಮೂಲಕ ಕಟ್ಟುಮಸ್ತಾದ ಮತ್ತು ಹುರಿಮಾಡಿದ  ಬಾಡಿ ಬಿಲ್ಡಿಂಗ್ ಮಾಡಿಕೊಂಡಿದ್ದ.
ಮೊದಲ ಪಂದ್ಯದಲ್ಲಿ ಭಾರೀ ಸೋಲು!
—————————————————
ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ಇರುವ ಸ್ಟ್ರಾಂಗ್ ಮೈಂಡ್ ಸೆಟ್ ಹೊಂದಿರುವ ಆತ ರೆಸ್ಲಿಂಗ್ ರಿಂಗ್ ಪ್ರವೇಶ ಮಾಡಿದ್ದು ಆಕಸ್ಮಿಕ! 1999ರ ನವೆಂಬರ್ ತಿಂಗಳ ಹೊತ್ತಿಗೆ  ಯಾರದ್ದೋ ಸವಾಲನ್ನು ಸ್ವೀಕಾರ ಮಾಡಿ ರೆಸ್ಲಿಂಗ್ ಬೆಲ್ಟ್ ಧರಿಸಿದ ಜಾನ್ ಸೀನಾ ಮೊದಲ ಪಂದ್ಯದಲ್ಲಿಯೆ ಸೋತು ಸುಣ್ಣ ಆಗಿದ್ದ! ಸೋತದ್ದು ಮಾತ್ರವಲ್ಲ ತನ್ನ ಎರಡೂ ದವಡೆಗಳನ್ನು ಕೂಡ ಮುರಿದುಕೊಂಡಿದ್ದ.
ಆಗ ಅವನಿಗೆ ತನ್ನ ತಪ್ಪುಗಳ ಅರಿವಾಯಿತು. ಮುಂದೆ ಎರಡು ವರ್ಷ ಕಠಿಣ ಪರಿಶ್ರಮ ಪಟ್ಟು ಬೆವರು ಹರಿಸಿದ. ಕೋಚ್ ಹೇಳಿದ ಎಲ್ಲವನ್ನೂ ಕರಾರುವಾಕ್ಕಾಗಿ ಪಾಲಿಸಿದ. ಮಾನಸಿಕ ಮತ್ತು ದೈಹಿಕವಾಗಿ ಮುಂದಿನ ಪಂದ್ಯಗಳಿಗೆ ಸಿದ್ಧನಾದ!
ಮುಂದೆ ಸತತ ಗೆಲುವಿನ ಹಸಿವು! ಸೋಲುಗಳನ್ನು ಮೆಟ್ಟಿ ನಿಂತ ದೃಢತೆ!
——————————————————-
ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ ( WWF) ಜೊತೆ ಒಪ್ಪಂದ ಮಾಡಿಕೊಂಡ ನಂತರ ಸೀನಾ ವೃತ್ತಿಪರ ರೆಸ್ಲರ್ ಆಗಿ ಬದಲಾದನು. ಆತನ ಅತ್ಯಂತ ಬಲಯುತ ಪಂಚ್ಗಳು, ಚಿರತೆಯ ವೇಗದ ಚಲನೆ, ಎಂತಹ  ಬಲಿಷ್ಟ ಪಟುಗಳನ್ನು ಕೂಡ ಕೆಡವಿ ಸಿಂಹನಾದ ಮಾಡುವ ತಾಕತ್ತು, ಶಕ್ತಿಯುತ ಪಟ್ಟುಗಳು………..ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದನು. ಅತಿರಥ ಮಹಾರಥ ಪಟುಗಳನ್ನು ಸೋಲಿಸಿ ದಾಖಲೆಯ ಮೇಲೆ ದಾಖಲೆಯನ್ನು ಬರೆದನು.
ರೆಸ್ಲಿಂಗ್ ಬಾದಶಾ ಎಂಬ ಕೀರ್ತಿ!
——————————
ಬ್ರೂಕ್ ಲೆಸ್ನಾರ್, ರಾಂಡಿ ಆರ್ಟನ್, ಶಾನ್ ಮೈಕೆಲ್,  ಬಟಿಸ್ಟಾ, ಅಂಡರ್ ಟೆಕಾರ್, ಬಿಗ್ ಶಾ ಇವರೆಲ್ಲ ಸೀನಾ ಕೈಯ್ಯಲ್ಲಿ ಒಂದಲ್ಲ ಒಂದು ಬಾರಿ ಸೋಲು ಉಂಡವರೆ ಆಗಿದ್ದಾರೆ! ಬೇರೆಯವರ ಆಟಕ್ಕಿಂತ ಸೀನಾ ಆಟ ತುಂಬಾ ಭಿನ್ನ ಆಗಿರುತ್ತದೆ. ಆತನು ಆರಂಭದಲ್ಲಿ ಆಕ್ರಮಣವನ್ನು ಮಾಡುವುದಿಲ್ಲ. ಆದರೆ ಆಟ ಕುದುರಿದ ಹಾಗೆ ಅವನು ಹೆಚ್ಚು ಆಕ್ರಮಣಕ್ಕೆ ಇಳಿಯುತ್ತಾನೆ. ಎಷ್ಟು ಬಾರಿ ಕೆಳಗೆ ಬಿದ್ದರೂ ಅರ್ಧ ಕ್ಷಣದಲ್ಲಿ ಮತ್ತೆ ಎದ್ದುಬರುವುದು ಆತನ ಶಕ್ತಿ!
ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ    ‘ರೆಸ್ಟ್ಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರು ಸೆಳೆಯದೆ ಇರಲು ಸಾಧ್ಯವಿಲ್ಲ!
ಎಂತಹ ಪೆಟ್ಟು ತಿಂದರೂ ಎದ್ದು ಬರುವ ಜಾನ್ ಸೀನಾ!
—————————————————–
ಎಂತಹ ಮಾರಣಾಂತಿಕ ಪೆಟ್ಟು ತಿಂದರೂ ಮತ್ತೆ ಮತ್ತೆ ಎದ್ದು ಬರುವ ಆತನ ಮಹಾ ಪವರ್ ಮತ್ತು  ಸ್ಟೆಮಿನಾ ಶಕ್ತಿಗೆ ನೀವು ತಲೆದೂಗಲೆಬೇಕು. ಒಮ್ಮೆ ತಲೆ ಬುರುಡೆ ಒಡೆದು ರಕ್ತ ಸೋರುತ್ತಿದ್ದರೂ, ಮತ್ತೊಮ್ಮೆ ಬೆನ್ನು ಮೂಳೆಯೇ ಮುರಿದರೂ, ಮತ್ತೊಮ್ಮೆ ಕಿಡ್ನಿ ಡ್ಯಾಮೇಜ್ ಆದರೂ ಆತ ರೆಸ್ಲಿಂಗ್ ಕ್ವಿಟ್ ಮಾಡಿಯೇ ಇಲ್ಲ! ಅವನ ದೇಹದಲ್ಲಿ  ಇದುವರೆಗೆ ಆಗಿರುವ  ಮೂಳೆ ಮುರಿತಗಳಿಗೆ ಲೆಕ್ಕವೇ ಇಲ್ಲ! ಇಂಥಹ ಯಾವ ಗಾಯವೂ ಅವನನ್ನು ಸೋಲಿಸಲು ಸಾಧ್ಯವೇ ಆಗಿಲ್ಲ!
ದಾಖಲೆಗಳ ಮೇಲೆ ದಾಖಲೆಗಳು!
———————————–
ಕಳೆದ 22 ವರ್ಷಗಳ ಅವಧಿಯಲ್ಲಿ ಜಾನ್ ಸೀನಾ  ಈವರೆಗೆ ಆಡಿರುವ ಒಟ್ಟು  ಪಂದ್ಯಗಳಲ್ಲಿ 70%ಗಿಂತ ಹೆಚ್ಚು ಸಕ್ಸಸ್ ರೇಟನ್ನು  ಹೊಂದಿದ್ದಾನೆ. ಸಮಕಾಲೀನ ಯಾವ ರೆಸ್ಲಿಂಗ್ ಪಟು ಕೂಡ ಆತನ ಈ ಕೆಳಗಿನ ದಾಖಲೆಗಳ ಹತ್ತಿರ ಬರಲು ಸಾಧ್ಯವೇ ಇಲ್ಲ!
1) ಒಟ್ಟು 16 ಬಾರಿ ಜಾನ್ ಸೀನಾ ವಿಶ್ವಚಾಂಪಿಯನ್ ಪಟ್ಟವನ್ನು ಗೆದ್ದಿದ್ದಾನೆ. ಇದು ದಾಖಲೆ!
2) ಒಟ್ಟು 13 ಬಾರಿ WWE ಚಾಂಪಿಯನ್ ಆಗಿದ್ದಾನೆ. ಇದೂ ದಾಖಲೆ!
3) ಒಟ್ಟು ಐದು ಬಾರಿ ಅಮೆರಿಕನ್ ಚಾಂಪಿಯನ್. ಇದು ಕೂಡ ಆತನಿಗೇ ಒಲಿದ ದಾಖಲೆ!
4) ಒಟ್ಟು ನಾಲ್ಕು ಬಾರಿ ಆತ ವರ್ಲ್ಡ್ ಟ್ಯಾಗ್ ಟೀಮ್ ಚಾಂಪಿಯನ್!
5) ಅತ್ಯಂತ ಅಪಾಯಕಾರಿ ಆದ ರೆಸ್ಟಲ್ ಮೇನಿಯಾ ಕೂಟದಲ್ಲಿ 5 ಬಾರಿ ಚಾಂಪಿಯನ್ ಪಟ್ಟ!
6) ಎರಡು ಬಾರಿ ರಾಯಲ್ ರಂಬಲ್ ಕೂಟದಲ್ಲಿ ಕಿರೀಟ!
7) ಒಂದು ಬಾರಿ ಮನಿ ಇನ್ ದ ಬ್ಯಾಂಕ್ ಕೂಟದಲ್ಲಿ ವಿಜೇತ  ಜಾನ್ ಸೀನಾ!
ಸಿನೆಮಾ ನಟ, ಮಾಡೆಲ್ ಮತ್ತು ರಾಪ್ ಗಾಯಕ!
————————————————-
ರೆಸ್ಲಿಂಗ್ ಪ್ರತಿಭೆಯ ಜೊತೆ ಜಾನ್ ಸೀನಾ ಒಬ್ಬ ಒಳ್ಳೆಯ ನಟನಾಗಿ ಹಲವು ಹಾಲಿವುಡ್ ಸಿನೆಮಾಗಳಲ್ಲಿ ಪ್ರಧಾನ ಪಾತ್ರ ನಿರ್ವಹಣೆ ಮಾಡಿದ್ದಾನೆ.  ಮಾಡೆಲಿಂಗ್ ಲೋಕದಲ್ಲಿ ಕೂಡ ಮಿಂಚಿದ್ದಾನೆ. ರಾಪ್ ಗಾಯಕ ಆಗಿದ್ದಾನೆ.  ಗಿಟಾರ್ ನುಡಿಸುತ್ತಾನೆ.  ಸಂಗೀತ ಸಂಯೋಜನೆ ಮಾಡಿದ್ದಾನೆ.
ತನ್ನ ಸಂಪಾದನೆಯ ಬಹು ದೊಡ್ಡ ಮೊತ್ತವನ್ನು Make A Wish Foundation ಎಂಬ ಸಮಾಜ ಸೇವಾಸಂಸ್ಥೆಯಲ್ಲಿ ತೊಡಗಿಸಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾನೆ!
ಈಗವನಿಗೆ 45 ವರ್ಷ! ಆತ ಇನ್ನೂ ದಣಿದಿಲ್ಲ! ಗೆಲುವಿನ ಹಸಿವು ಇನ್ನೂ ನೀಗಿಲ್ಲ! ರೆಸ್ಲಿಂಗ್ ರಿಂಗನಲ್ಲಿ ಮಾತ್ರ ನಾವು ಫೈಟ್ ಮಾಡುವುದು,  ಅಲ್ಲಿಂದ ಹೊರಬಂದರೆ ನಾವೆಲ್ಲರೂ ಗೆಳೆಯರು ಎಂದು ನಗುವ ಜಾನ್ ಸೀನಾ ನಮ್ಮಲ್ಲಿ ಹಲವರ ಬಾಲ್ಯದ ಹೀರೋ ಆಗಿರುವುದು ಕೂಡ ರೋಮಾಂಚಕ ಸಾಧನೆಯೇ ಸರಿ!
Categories
ಅಥ್ಲೆಟಿಕ್ಸ್

ಅಂತರಾಷ್ಟ್ರೀಯ ಕರಾಟೆಯಲ್ಲಿ ಉಡುಪಿಯ ಆದಿತ್ಯ.ಜೆ.ಬಿ ಇವರಿಗೆ ಪ್ರಶಸ್ತಿ

ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಉಡುಪಿ : ರಾಜ್ಯ ಕರಾಟೆ ಸಂಸ್ಥೆ  ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಶಿವಮೊಗ್ಗ ಆಶ್ರಯದಲ್ಲಿ ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ 3ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾಟದಲ್ಲಿ ಭಾಗವಹಿಸಿದ ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಇವರು ಎಂ.ಜಿ.ಎಂ ಕಾಲೇಜು,ಉಡುಪಿ ಇಲ್ಲಿ  ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದು ಜಯಕರ ಬೈಲೂರು ಹಾಗೂ ಭಾರತಿ ಜಯಕರ ದಂಪತಿಯ ಪುತ್ರ. ಕರಾಟೆಯಲ್ಲಿ ಇವರು “ಬ್ಲ್ಯಾಕ್ ಬೆಲ್ಟ್” ಪದವಿಯನ್ನು ಹೊಂದಿದ್ದು ಮಾರ್ಪಳ್ಳಿಯ ದಯಾನಂದ ಆಚಾರ್ಯ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
Categories
ಅಥ್ಲೆಟಿಕ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ರ‌್ಯಾಪಿಡ್ ಚೆಸ್ ಪಂದ್ಯಾವಳಿ

ಉಡುಪಿ-ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಶ್ರೀಯುತ  ಗೌತಮ್ ಶೆಟ್ಟಿಯವರ  ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಅಕ್ಟೋಬರ್ 15 ಮತ್ತು 16 ರಂದು  2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣ ಎ.ಸಿ ಹಾಲ್ ನಲ್ಲಿ ನಡೆಯಲಿದೆ.
ಅಕ್ಟೋಬರ್ 15 ರಂದು ಬೆಳಿಗ್ಗೆ 9 ಗಂಟೆಗೆ
ಉದ್ಘಾಟನೆಗೊಳ್ಳಲಿದ್ದು,10.30 ಸರಿಯಾಗಿ
ಮೊದಲ ಸುತ್ತಿನ ಪಂದ್ಯಾವಳಿ ಆರಂಭವಾಗಲಿದೆ.
ಅಕ್ಟೋಬರ್ 16 ಸಂಜೆ 5.30 ಕ್ಕೆ ಬಹುಮಾನ ವಿತರಣಾ ಸಮಾಂಭ ನಡೆಯಲಿದೆ.
ಮುಕ್ತ,ರೇಟೆಡ್,ಉಡುಪಿ ಜಿಲ್ಲೆ ಬೆಸ್ಟ್ ಪ್ಲೇಯರ್ ಸಹಿತ ನಾನಾ ವಯೋಮಿತಿಯ ವಿಜೇತರಿಗೆ 2 ಲಕ್ಷ ಮೌಲ್ಯದ ಒಟ್ಟು 165 ಬಹುಮಾನ ನೀಡಲಾಗುತ್ತದೆ.
ಮುಕ್ತ ವಿಭಾಗದ ವಿಜೇತರಿಗೆ ಪ್ರಥಮ 30,000 ರೂ,ದ್ವಿತೀಯ 20,000ರೂ,ತೃತೀಯ 10,000ರೂ,
4ನೇ  ಸ್ಥಾನ 8,000,5ನೇ ಸ್ಥಾನ 7,000ರೂ,6 ನೇ ಸ್ಥಾನ 6,000ರೂ,7 ನೇ ಸ್ಥಾನ 5,000 ರೂ,8 ನೇ ಸ್ಥಾನ 4,000ರೂ,9 ನೇ ಸ್ಥಾನ 3,500ರೂ,10 ನೇ ಸ್ಥಾನ 3,000 ರೂ,11 ರಿಂದ 15 ನೇ ಸ್ಥಾನಿಗಳಿಗೆ ತಲಾ 2,500 ರೂ,16 ರಿಂದ 20 ನೇ ಸ್ಥಾನಿಗಳಿಗೆ  ತಲಾ 2,000ರೂ,21 ರಿಂದ 25 ನೇ ಸ್ಥಾನಿಗಳಿಗೆ ತಲಾ 1,500 ರೂ ಮತ್ತು ಟ್ರೋಫಿ ನೀಡಲಾಗುತ್ತದೆ.
7,9,11,13,15 ವಯೋಮಿತಿಯ ಪ್ರತಿ ವಿಭಾಗದ ಟಾಪ್ 10 ಬಾಲಕ-ಬಾಲಕಿಯರಿಗೆ ಟ್ರೋಫಿ,ಹಾಗೂ ಉಡುಪಿ
ಜಿಲ್ಲೆಯ ಬೆಸ್ಟ್ ಪ್ಲೇಯರ್ ಟಾಪ್ 10 ವಿಜೇತರಿಗೆ ಮೊದಲ ಬಹುಮಾನ 2,000 ರೂ,ದ್ವಿತೀಯ 1,500 ರೂ,ತೃತೀಯ 1,500 ರೂ,4 ರಿಂದ 10 ನೇ ಸ್ಥಾನಿಗಳಿಗೆ ಟ್ರೋಫಿ ನೀಡಲಾಗುತ್ತಿದೆ.
1,000 ದಿಂದ 1,199, 1,200 ರಿಂದ 1,399,1400 ರಿಂನ1,599 ಹಾಗೂ1,600 ರಿಂದ 1799 ರೇಟಿಂಗ್ ಹೊಂದಿದ ಹಾಗೂ ಅನ್ ರೇಟೆಡ್ ವಿಜೇತ ಮೊದಲ ಸ್ಥಾನಿಗೆ 3,500 ರೂ,ದ್ವಿತೀಯ 3,000 ರೂ,ತೃತೀಯ 2,500ರೂ,4 ನೇ ಸ್ಥಾನ 2,000,5 ನೇ ಸ್ಥಾನಿಗೆ 1,500ರೂ ಹಾಗೂ ಟ್ರೋಫಿ ನೀಡಲಾಗುತ್ತಿದೆ.
ಉತ್ತಮ ಹಿರಿಯ ಆಟಗಾರ(60 ಕ್ಕಿಂತ ಮೇಲಿನವರು) ವಿಭಾಗದ ವಿಜೇತ ಮೊದಲ‌ ಸ್ಥಾನಿಗೆ 2,500 ರೂ ಮತ್ತು ದ್ವಿತೀಯ 2,000 ರೂ,ತೃತೀಯ 1,500 ರೂ ಹಾಗೂ ಬೆಸ್ಟ್ ಯಂಗೆಸ್ಟ್ ಪ್ಲೇಯರ್ ಮೊದಲ ಹಾಗೂ ದ್ವಿತೀಯ ಸ್ಥಾನಿಗೆ ಟ್ರೋಫಿ ನೀಡಲಾಗುತ್ತಿದೆ.
ಅಕ್ಟೋಬರ್ 13 ನೋಂದಣಿಗೆ ಕೊನೆಯ ದಿನವಾಗಿದ್ದು www.udupichessassociation.com ಅಥವಾ www.chessfee.com ಸಂಪರ್ಕಿಸಬಹುದು ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ  ಗೌತಮ್ ಶೆಟ್ಟಿ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಮಿತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.