Categories
ಕ್ರಿಕೆಟ್

LCL ಹಿರಿಯರ ಕ್ರಿಕೆಟ್ ಹಬ್ಬ- ಗೆಲುವಿನ ನಗೆ ಬೀರಿದ ರೆಡ್ ಹಾಕ್ಸ್ ಉಳ್ಳಾಲ

ಹಿರಿಯ ಕ್ರಿಕೆಟ್ ಆಟಗಾರರಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮತ್ತು ಪರಸ್ಪರ ಭಾಂಧವ್ಯ, ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಸುರತ್ಕಲ್ಲಿನಲ್ಲಿ 2 ದಿನಗಳ  ಕಾಲ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2  ಭರ್ಜರಿ ಯಶಸ್ಸು ಕಂಡಿದೆ.
12 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನಲ್ಲಿ ರೆಡ್ ಹಾಕ್ಸ್ ಉಳ್ಳಾಲ ತಂಡವು ಮಹಾಲಕ್ಷ್ಮಿ ವಾರಿಯರ್ಸ್ ಸೂರಿಂಜೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿತು. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಈ ಕ್ರಿಕೆಟ್ ಪಂದ್ಯಾವಳಿಯನ್ನು ಸತತ ಎರಡನೇಯ ಬಾರಿಗೆ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗಾಗಿ  ಆಯೋಜಿಸಿತ್ತು. ವಿಜೇತ ತಂಡಕ್ಕೆ 1.01,000 ರೂ. + LCL ಕಪ್ ಮತ್ತು ರನ್ನರ್ ಅಪ್ ತಂಡಕ್ಕೆ 51,005 ರೂ.+ LCL ಕಪ್ ಗಳನ್ನು ನೀಡಿ ಗೌರವಿಸಲಾಯಿತು.
ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಇವರ ಆಶ್ರಯದಲ್ಲಿ “ಎಲ್ ಸಿ ಎಲ್ ಟ್ರೋಫಿ -2023” ಮೇ 27, 28 ರಂದು ಸುರತ್ಕಲ್ ನ  ಗೋವಿಂದದಾಸ್ ಕಾಲೇಜು ಕ್ರಿಕೆಟ್  ಮೈದಾನದಲ್ಲಿ ನಡೆಯಿತು.ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಕೂಟವು  ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ಹಿರಿಯ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.
ಪಂದ್ಯಾವಳಿಯನ್ನು ಸಂಯೋಜಕರಾದ ಮಹಾಬಲ ಪೂಜಾರಿ ಕಡಂಬೋಡಿ , ಸಂಸ್ಥೆಯ ಮಹಾಪೋಷಕರು,  ಟೂರ್ನಮೆಂಟ್ ನ ಮಾರ್ಗದರ್ಶಕರಾದ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಎಸ ಕುಮಾರ್,  ಕೋರ್ ಕಮಿಟಿ ಸದಸ್ಯರುಗಳಾದ ಸಂದೀಪ್  ಕಡಂಬೋಡಿ, ಅನಂತ್ ರಾಜ್ ಶೆಟ್ಟಿಗಾರ್, ಪದ್ಮನಾಭ್ ಕರ್ಕೇರ, ದಿನೇಶ ಆಚಾರ್ಯ ಕುಳಾಯಿ, ಸುಧಾಕರ ತಡಂಬೈಲ್, ಮುರಳಿ BASF,  ಕೇಶವ, ಅಶ್ವಥ್, ದಯಾನಂದ, ವರುಣ್ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್, ಕಿರಣ್ ಆಚಾರ್ಯ, ನಾಗರಾಜ ಕಡಂಬೋಡಿ, ಗಿರೀಶ್ ಟಿ ಕಡಂಬೋಡಿ ಹಾಗೂ ಕ್ಲಬ್ ನ ಇನ್ನಿತರ ಸದಸ್ಯರುಗಳು ಸೇರಿ ಯಶಸ್ವಿಯಾಗಿ ಆಯೋಜಿಸಿದರು. ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರುಷ ರಾಜ್ಯ ಮಟ್ಟದ ಹಿರಿಯರ  ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಇರಾದೆಯೂ ಕೂಡಾ ಇದೆ ಎಂದು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
 ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ನ  ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿ ಬಂದ ಟೂರ್ನಮೆಂಟ್ ನ ಉತ್ಸಾಹ ಭರಿತ ಕ್ಷಣಗಳನ್ನು ಬೆದ್ರಾ ಮೀಡಿಯಾ  ಸೆರೆ ಹಿಡಿದು ನೇರ ಪ್ರಸಾರ ಗೊಳಿಸಿತು. ಶಿವನಾರಾಯಣ ಐತಾಳ್ ಕೋಟ, ಸೈಯದ್ ಗುರುಕಂಬಳ, ಸುರೇಶ್ ಭಟ್ ಮೂಲ್ಕಿ ಮತ್ತು ಪ್ರವೀಣ್ ಪಾವಂಜೆ ಇವರುಗಳು ಕಾಮೆಂಟ್ರಿಯನ್ನು ನಡೆಸಿಕೊಟ್ಟರು.
ಮಾಜಿ ಕ್ರಿಕೆಟಿಗರಿಗೆ 2 ದಿನಗಳ ಪಂದ್ಯಾವಳಿಯಲ್ಲಿ  ಹಲವು ವರ್ಷದ ಹಿಂದೆ ತಾವೆಲ್ಲರೂ ಒಟ್ಟಿಗೆ ಅನುಭವಿಸಿದ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ಸಿಕ್ಕಿತು. ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2 ನ್ನು ಸಂತಸದಿಂದ ವೀಕ್ಷಿಸಿದರು.ಬಂದಂತಹ ಎಲ್ಲಾ ಪ್ರೇಕ್ಷಕರಿಗೂ ತಂಪು ಪಾನೀಯ, ಐಸ್ ಕ್ರೀಮ್, ತಂಪಾದ ಮಜ್ಜಿಗೆ, ಕಲ್ಲಂಗಡಿ ಹಣ್ಣು ಮತ್ತು  ಊಟವನ್ನು ಉಚಿತವಾಗಿ ವಿತರಿಸಲಾಯಿತು.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕ ಕೆ ಆರ್ ಕೆ ಆಚಾರ್ಯ ಅವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

ಶೀಘ್ರದಲ್ಲೇ ಬರಲಿದೆ ಜಿ ಎಸ್ ಬಿಗಳ ಬಹು ನಿರೀಕ್ಷಿತ ಹರಾಜು ಆಧಾರಿತ ಕ್ರಿಕೆಟ್ ಟೂರ್ನಮೆಂಟ್ ‘ವೊಳಲಂಕೆ ಪ್ರೀಮಿಯರ್ ಲೀಗ್’!!!

ಮುಲ್ಕಿ- ಜಿ. ಎಸ್. ಬಿ ಕ್ರಿಕೆಟ್ ಪ್ರಿಯರಿಗೆ ಸಂಭ್ರಮದ ಸುದ್ದಿ. ಈ ಋತುವಿನ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬ ಮುಲ್ಕಿಯಲ್ಲಿ ಶುರುವಾಗಲಿದೆ.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಇವರು ಅಕ್ಟೋಬರ್ ತಿಂಗಳಿನಲ್ಲಿ  ಜಿ ಎಸ್ ಬಿ ಗಳ   ಶ್ರೀಮಂತ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.  ಜಿ ಎಸ್ ಬಿ ಕ್ರಿಕೆಟ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಗಲು ರಾತ್ರಿ  ಪಂದ್ಯಾಕೂಟ ಆಯೋಜಿಸಲು ಹಸಿರು ನಿಶಾನೆ ತೋರಿಸಿದೆ. ಜಿ. ಎಸ್. ಬಿ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.
ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ ಬಿ) ಸಮಾಜದ ಇತಿಹಾಸದಲ್ಲಿ  ಐಪಿಎಲ್ ಮಾದರಿಯಲ್ಲಿ ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್-2023 ನ್ನು ಹಮ್ಮಿಕೊಳ್ಳಲಾಗಿದೆ.  ಇದು ಹರಾಜು ಆಧಾರಿತ ಕ್ರಿಕೆಟ್ ಪಂದ್ಯಾವಳಿಯಾಗಿರುತ್ತೆ. ವಿಪಿಎಲ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಲಾಗುವುದು. ಆಟಗಾರರನ್ನು ಆಯ್ಕೆ ಮಾಡಲು ಹರಾಜು ಆಯೋಜಿಸಲಾಗುವುದು.  ಮುಲ್ಕಿಯಲ್ಲಿರುವ ವಿಜಯಾ ಕಾಲೇಜಿನ  ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಸರಣಿಯಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವೊಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್-2023  ಅಕ್ಷರಶ: ಐಪಿಎಲ್ ವಾತಾವರಣವನ್ನೇ ಹೊತ್ತು ತರಲಿದೆ.  ಟೂರ್ನಮೆಂಟ್ ನ ದಿನಾಂಕಗಳನ್ನು ಶೀಘ್ರದಲ್ಲೇ ದೃಢೀಕರಿಸಲಾಗುವುದು.
ಆಯೋಜಕರಲ್ಲಿ ಪ್ರಮುಖರಾದ ಶ್ರೀಯುತ ರಮಾನಾಥ ಪೈ ಎಸ್. ವಿ. ಟಿ ಮುಲ್ಕಿ ಇವರ ಹೇಳಿಕೆ ಪ್ರಕಾರ ಈಗಾಗಲೇ ಮುಂಬೈ, ಕೊಚ್ಚಿನ್, ಹೈದರಾಬಾದ್, ಮಂಗಳೂರು, ಕೋಟೇಶ್ವರ, ಕೆದಿಂಜೆ ಕಾರ್ಕಳದ  ತಂಡಗಳು ಟೂರ್ನಮೆಂಟ್ ಗೆ ತಮ್ಮ ತಂಡಗಳನ್ನು ನೊಂದಾಯಿಸಿವೆ. . ಈ ಲೀಗ್‌ನಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಗೆಲ್ಲುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ದೊರೆಯಲಿದೆ. ಇದರೊಂದಿಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ, ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಇತರ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಈ ಲೀಗ್ ನಲ್ಲಿ ಫ್ರ್ಯಾಂಚೈಸಿ ಮಾಲೀಕರಾಗಲು ಬಯಸುವವರು ತಮ್ಮ ಹೆಸರನ್ನು ನೋಂದಾಯಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ ಇಲ್ಲಿದೆ.
ಪ್ರೀತಮ್ ಹೆಗಡೆ- 9945354052
ಶರತ್ ಪ್ರಭು-9538728375
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು ಕೆ ಆರ್ ಕೆ ಆಚಾರ್ಯ ಮಾತನಾಡಿ  ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಅದ್ದೂರಿಯಾಗಿ ನಡೆದು ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ರಂಜಿಸಲು ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿ ಎಂದಿದ್ದಾರೆ. ಆಯೋಜನೆ ಮಾಡುವ ಸಂಘಟಕರಿಗೆ ಅಭಿನಂದನೆ ಎಂದರು.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಜಿ ಎಸ್ ಬಿ  ಟೆನಿಸ್ ಕ್ರಿಕೆಟ್​ನಲ್ಲಿ ಹೊಸದನ್ನು ಮುಂಚೂಣಿಗೆ ತರಲು ಉತ್ಸುಕರಾಗಿದ್ದಾರೆ. ಇದೀಗ ಮುಲ್ಕಿಯಲ್ಲಿ ಆರಂಭವಾಗುವ  ಜಿಎಸ್ ಬಿ ಸಮುದಾಯದ  ಪ್ರಮುಖ ಕ್ರಿಕೆಟ್ ಟೂರ್ನಿಯನ್ನು ನೋಡಿ ಆನಂದಿಸುವ ಕಾಲ ಕೂಡಿ ಬಂದಿದೆ.
ಶುರುವಾಗಲಿ ವಿಪಿಎಲ್ ಸಂಭ್ರಮ!
ಲೇಖಕರು
ಸುರೇಶ ಭಟ್, ಮುಲ್ಕಿ.
Categories
ಕ್ರಿಕೆಟ್

ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)-ಹಿರಿಯರ ಕ್ರಿಕೆಟ್ ಹಬ್ಬ ಮತ್ತೊಮ್ಮೆ-ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2

ಮಂಗಳೂರು- ಸುರತ್ಕಲ್ ಕ್ಷೇತ್ರದ ವಿವಿಧ ಕ್ರೀಡಾ ತಂಡ ಮತ್ತು ಸಂಸ್ಥೆಗಳ ಕ್ರೀಡಾಳುಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಸೇರಿ ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದೊಂದಿಗೆ ಹಿರಿಯ ಸಮಾಜ ಸೇವಕರು – ಧಾರ್ಮಿಕ ಮುಂದಾಳುಗಳಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಹುಟ್ಟು ಹಾಕಿರುವ ಸಂಸ್ಥೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)  ಈ ಸಂಸ್ಥೆಯು ಆಯೋಜಿಸುತ್ತಿರುವ 40 ವರ್ಷ ಮೇಲ್ಪಟ್ಟ ಹಳೆಯ ಕ್ರಿಕೆಟ್ ಕಲಿಗಳ 12 ಅತ್ಯುತ್ತಮ  ಕ್ರಿಕೆಟ್ ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟದ ಲಾಂಛನ ಮತ್ತು ಅಧಿಕೃತ ಘೋಷಣಾ ಸಮಾರಂಭ ಇತ್ತೀಚಿಗೆ ನಡೆಯಿತು.
40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಲೆಜೆಂಡ್ಸ್ ಕ್ರಿಕೆಟ್ ಲೀಗ್  ಸೀಸನ್-2 ಕ್ರಿಕೆಟ್ ಟೂರ್ನಿಯು ಮೇ 27 ರಿಂದ ಶುರುವಾಗಲಿದೆ. ಮಂಗಳೂರು ಮತ್ತು ಸುರತ್ಕಲ್  ಪರಿಸರದ  ಮಾಜಿ ಆಟಗಾರರ ಈ ಟೂರ್ನಿಯಲ್ಲಿ ಹದಿನೆರಡು  ತಂಡಗಳು  ಕಣಕ್ಕಿಳಿಯಲಿವೆ.  ಈ ಟೂರ್ನಿಯು ಮೇ 27  ಮತ್ತು ಮೇ 28 ರಂದು ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2 ಇದರ ಸಾಮಾಜಿಕ ಜಾಲತಾಣದ ಅಭಿಯಾನವನ್ನು ಸಂಸ್ಥೆಯ ಮಹಾಪೋಷಕರಾದ ACP ಮಹೇಶ್ ಕುಮಾರ್ ಮತ್ತು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ಬಿಡುಗಡೆಗೊಳಿಸಿದರು.
LCL 2023: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲಿರುವ ಹದಿನೆರಡೂ ತಂಡಗಳ ಘೋಷಣೆಯಾಗಿದೆ. ಅದರಂತೆ ಹದಿನೆರಡೂ ತಂಡಗಳು  ಈ ಕೆಳಗಿನಂತಿವೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಂಸ್ಥಾಪಕ ಮತ್ತುಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ನಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಕಾಯುವಿಕೆ ಮುಗಿದಿದೆ. ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಪಂದ್ಯಗಳಿಗೆ ಸಾಕ್ಷಿಯಾಗುವ ಬಗ್ಗೆ ಅಭಿಮಾನಿಗಳು ಇನ್ನು ಯೋಚಿಸಬಹುದು. ಶೀಘ್ರದಲ್ಲೇ ಮ್ಯಾಚ್ ಫಿಕ್ಚರ್ಸ್ ಬಗ್ಗೆ ಘೋಷಣೆ ಮಾಡಲಾಗುವುದು.” ಎಂದರು. “ಹೊಸ ಸ್ವರೂಪದಲ್ಲಿ 12 ತಂಡಗಳ ಐಕಾನಿಕ್ ಆಟಗಾರರ ತಂಡದೊಂದಿಗೆ, ಅಭಿಮಾನಿಗಳು ಈ ವರ್ಷ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದಾರೆ, ಈ ಬಾರಿ ಪಂದ್ಯಾವಳಿ ಮತ್ತಷ್ಟು ಉತ್ತಮವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು  LCLನ ಎರಡನೆಯ ಆವೃತ್ತಿ. ಕಳೆದ ಋತುವಿನಲ್ಲಿ ಮೊದಲನೆಯ ಆವೃತ್ತಿಯು ಯಶಸ್ವಿಯಾಗಿ, ಸಂಭ್ರಮದಿಂದ ನಡೆದಿತ್ತು. ಸೀಸನ್ 1 ನಲ್ಲಿ ಟೀಮ್ ಸೂಪರ್ ಕಾಪ್ಸ್ ಚಾಂಪಿಯನ್ ತಂಡವಾಗಿತ್ತು. ಫ್ರೆಂಡ್ಸ್ ಸರ್ಕಲ್ ಸುರತ್ಕಲ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿತ್ತು. ಕಳೆದ ಬಾರಿ 8 ತಂಡಗಳು ಭಾಗವಹಿಸಿತ್ತು. ಆದರೆ ಈ ಸಲ 12 ತಂಡಗಳ ಹಿರಿಯ ಸೇನಾನಿಗಳ ಕ್ರಿಕೆಟ್ ಆಟದ ಹೋರಾಟ ನೋಡುವ ಒಂದು ಅದ್ಭುತ ಅವಕಾಶ ಇದು ಗತ ವೈಭವದ ಮರು ಸ್ರಷ್ಟಿ.
ಪ್ರಥಮ ಬಹುಮಾನ ಟ್ರೋಫಿ ಹಾಗೂ ನಗದು ₹ 1,00,001/-
ದ್ವಿತೀಯ ಬಹುಮಾನ ಟ್ರೋಫಿ ಹಾಗೂ ನಗದು ₹ 50,005/-
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಲೈವ್ ಸ್ಟ್ರೀಮಿಂಗ್  ಬೆದ್ರಾ ಮೀಡಿಯಾ ಯೂ ಟ್ಯೂಬ್ ಲೈವ್‌ ನಲ್ಲಿ ವೀಕ್ಷಿಸಬಹುದಾಗಿದೆ..
ಟೂರ್ನಮೆಂಟ್ ಕಮಿಟಿಯ  ಸದಸ್ಯರುಗಳಾದ ಅನಂತ್ ರಾಜ್ ಶೆಟ್ಟಿಗಾರ್ ಮತ್ತು ಪದ್ಮನಾಭ ಕರ್ಕೇರ ತಡಂಬೈಲ್ ಟೂರ್ನಮೆಂಟ್ ನ ಮಾಹಿತಿಗಳನ್ನು ಸ್ಪೋರ್ಟ್ಸ್ ಕನ್ನಡ ಸುದ್ದಿ ವಾಹಿನಿಗೆ ನೀಡಿದರು.
ಸ್ಪೋರ್ಟ್ಸ್ ಕನ್ನಡದ ಪ್ರಧಾನ ಸಂಪಾದಕರು  ಕೋಟ ರಾಮಕೃಷ್ಣ ಆಚಾರ್ಯ ಮಾತನಾಡಿ, ” ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಆಶ್ರಯದಲ್ಲಿ ನಡೆಯಲಿರುವ  40 ವರ್ಷ ಮೇಲ್ಪಟ್ಟ ಹಿರಿಯ ಲೆಜೆಂಡ್ಸ್ ಕ್ರಿಕೆಟ್ ಆಟಗಾರರಿಗಾಗಿ ಹಿರಿಯರ ಕ್ರಿಕೆಟ್ ಹಬ್ಬ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.
ಶುಭಾಶಯಗಳೊಂದಿಗೆ,
ಸುರೇಶ ಭಟ್ ಮೂಲ್ಕಿ
LCL ವೀಕ್ಷಕ ವಿವರಣೆಗಾರರು
Categories
ಕ್ರಿಕೆಟ್

ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್-ಮಂಗಳೂರಿನ ಎ.ಜೆ.ರಾಯಲ್ಸ್ ಚಾಂಪಿಯನ್ಸ್

ಮಂಗಳೂರು-ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2023 ರ ಮೊದಲನೇಯ ಆವೃತ್ತಿಯು ವಾರಾಂತ್ಯದಲ್ಲಿ ಮಂಗಳೂರಿನ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೈದಾನದಲ್ಲಿ ನಡೆಯಿತು.
ಎ.ಜೆ. ರಾಯಲ್ಸ್ ತಂಡವು ಟೀಮ್ ಮಣಿಪಾಲ ವಿರುದ್ಧದ ಫೈನಲ್‌ನಲ್ಲಿ ವೀರೋಚಿತ ಜಯ ದಾಖಲಿಸಿತು. ಸಂಘಟಕರಾದ ಡಾಕ್ಟರ್ ಶರಣ್ ಜೆ ಶೆಟ್ಟಿಯವರ  ಎ.ಜೆ. ರಾಯಲ್ಸ್  ಸೇರಿದಂತೆ   16 ಕ್ಕೂ ಹೆಚ್ಚು ಕಾರ್ಪೊರೇಟ್ ತಂಡಗಳು ಕಾರ್ಪೊರೇಟ್ ಕ್ರಿಕೆಟ್  ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪ್ರಶಸ್ತಿಗಾಗಿ ಸ್ಪರ್ಧಿಸಿದವು, ಎ.ಜೆ. ರಾಯಲ್ಸ್ ತಂಡ  ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಅಂತಿಮ ಸುತ್ತಿಗೆ ಪ್ರವೇಶಿಸಿತು ಮತ್ತು  ಪ್ರತಿಷ್ಠಿತ  ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಯನ್ನು ಮುಡಿಗೇರಿಸಿತು.
ವಾರಾಂತ್ಯದಲ್ಲಿ ಎರಡು ದಿನಗಳ ಕಾಲ  ಲೀಗ್ ಪಂದ್ಯಗಳು, ಕ್ವಾರ್ಟರ್ ಫೈನಲ್ ನಾಕೌಟ್ ಪಂದ್ಯಗಳು  ಮತ್ತು ಸೆಮಿ-ಫೈನಲ್‌ಗಳನ್ನು  ಟೂರ್ನಮೆಂಟ್‌ ಒಳಗೊಂಡಿತ್ತು, ಪಂದ್ಯಾವಳಿಯ ಭಾಗವಾಗಿ, ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ಪ್ರತಿ ಭಾಗವಹಿಸುವ ತಂಡವು ಮೂರು ಲೀಗ್ ಪಂದ್ಯಗಳನ್ನು ಆಡಬೇಕಾಗಿತ್ತು, ನಂತರ ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಹೋರಾಡಲು ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಯಿತು . ಡಾಕ್ಟರ್ ವಿನೋದ್ ನಾಯಕ್ ನೇತೃತ್ವದ ಟೀಮ್ ಮಣಿಪಾಲ ತಂಡವು ಸೆಮಿ ಫೈನಲ್ ನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ತಂಡವನ್ನು ರೋಚಕ ಸೆಮಿ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿತು. ಎ ಜೆ ರಾಯಲ್ಸ್ ತಂಡವು ಎಂ ಸಿ ಎಫ್ ಕ್ರಿಕೆಟ್ ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ನಂತರ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರನ್ನುಮೈದಾನದಲ್ಲಿ  ಬೇರೂರಿಸಿತು. ಎ.ಜೆ. ರಾಯಲ್ಸ್ ನ ಪ್ರಮುಖ ಆಟಗಾರ ಲೋಕೇಶ್ (ಲೋಕಿ ಪುತ್ತೂರು ) ಟೂರ್ನಮೆಂಟ್ನ ಉದ್ದಕ್ಕೂ ಅತ್ಯದ್ಭುತವಾಗಿ ಆಡಿ ತನ್ನ ಸಾಹಸವನ್ನು ತೋರ್ಪಡಿಸಿ ನೆರೆದಿದ್ದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು. ಡೇ ಅಂಡ್ ನೈಟ್ ರೂಪದಲ್ಲಿ ನಡೆದ ಟೂರ್ನಮೆಂಟ್ ಅದ್ಭುತವಾಗಿ  ಮುಕ್ತಾಯ ಕಂಡಿತು.
ನೇರ ಪಂದ್ಯಗಳು ಮತ್ತು ಸ್ಕೋರ್‌ಕಾರ್ಡ್ ಅನ್ನು ಪ್ರಸಾರ ಮಾಡಲು ದೊಡ್ಡ ಡಿಜಿಟಲ್ ಪರದೆಯು ಸ್ಥಳದಲ್ಲಿತ್ತು. ಸ್ಥಳಕ್ಕೆ ಬರಲು ಸಾಧ್ಯವಾಗದ ಕ್ರಿಕೆಟ್ ಉತ್ಸಾಹಿಗಳಿಗಾಗಿ ಪಂದ್ಯಗಳನ್ನು M9  ಸ್ಪೋರ್ಟ್ಸ್ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಡ್ಯಾನ್ಸಿಂಗ್ ಅಂಪೈರ್ ಮದನ್ ಮಡಿಕೇರಿ, ದೀಕ್ಷಿತ್ ಮಂಗಳೂರು, ಪ್ರಭಾಕರ್ ಉಜಿರೆ ಮತ್ತು ಸ್ವರೂಪ್ ತೀರ್ಥಹಳ್ಳಿ ಟೂರ್ನಮೆಂಟ್ ನ ತೀರ್ಪುಗಾರರಾಗಿದ್ದರು. ಅರವಿಂದ ಮಣಿಪಾಲ ಮತ್ತು ಸುರೇಶ್ ಭಟ್ ಮುಲ್ಕಿ ವೀಕ್ಷಕ ವಿವರಣೆಯನ್ನು ನೀಡಿದರು.
ಮಹಿಳಾ ತಂಡಗಳ ನಡುವೆ ಕೂಡಾ ರೋಚಕ ಮಹಿಳಾ ಕ್ರಿಕೆಟ್ ಪಂದ್ಯವೂ ನಡೆಯಿತು.
ಪಂದ್ಯಾವಳಿಯ ನಂತರ ಮಾತನಾಡಿದ ಆಯೋಜಕರಲ್ಲಿ ಪ್ರಮುಖರಾದ  ಡಾ. ಶರಣ್ ಜೆ ಶೆಟ್ಟಿ ಭವಿಷ್ಯದಲ್ಲಿ ಪ್ರತಿವರ್ಷವೂ ಕೂಡಾ ಈ ರೀತಿಯ ಟೂರ್ನಮೆಂಟ್ ನಡೆಯಲಿದೆ ಮತ್ತು ಹೆಚ್ಚಿನ ತಂಡಗಳ ಭಾಗವಹಿಸುವಿಕೆಗಾಗಿ ನಾವು ಆಶಿಸುತ್ತೇವೆ ಎಂದರು. ಡಾಕ್ಟರ್ ಸಾಕ್ಷಾತ್ ರೈ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದರು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

ಎಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್!

ಐಪಿಎಲ್ ಕಣದಲ್ಲಿ ಚೆನ್ನೈ ತಂಡ ಈ ಬಾರಿ ಶಿಖರದಲ್ಲಿ! 
———————————-
2023ರ ಐಪಿಎಲ್ ಕೂಟವು ಈಗ ರೋಮಾಂಚನದ ಶಿಖರ ಮುಟ್ಟಿದ್ದು  ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್( CSK)  ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ! ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’  ತಂಡವು ಹತ್ತು ಅಂಕಗಳ ಜೊತೆಗೆ ಪಾಯಿಂಟ್ ಟೇಬಲಿನ ಟಾಪನಲ್ಲಿ  ಬಂದು ಕೂತಿದೆ!
ಯಾವ ತಂಡವನ್ನು ಅಂಕಲ್ ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ ವಿದ್ಯುತ್ಸಂಚಾರ ಆರಂಭವಾದ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಲೆಜೆಂಡ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ!
ಚೆನ್ನೈ ತಂಡದಲ್ಲಿ ಯಾವ ಸ್ಟಾರ್ ಆಟಗಾರ ಕೂಡ ಇಲ್ಲ!
——————————
2008ರಿಂದಲೂ ಐಪಿಎಲ್ ಆಡುತ್ತ ಬಂದಿರುವ ಧೋನಿ ಇಂದು ಕ್ರಿಕೆಟಿನ ಆರಾಧ್ಯ ದೇವರಾಗಿ ರೂಪುಗೊಂಡಿದ್ದಾರೆ. ಯಾವುದೇ ದೊಡ್ಡ ಸ್ಟಾರ್ ಆಟಗಾರರು ಇಲ್ಲದ ಕೇವಲ ಸಾಮಾನ್ಯ ಆಟಗಾರರನ್ನು ಹೊಂದಿರುವ CSK ತಂಡವನ್ನು ಧೋನಿ ತನ್ನ ಮಾಂತ್ರಿಕ ಸ್ಪರ್ಶದ ಮೂಲಕ ಕಟ್ಟಿ ನಿಲ್ಲಿಸಿದ್ದು ಸಾಮಾನ್ಯ ಸಂಗತಿ ಅಲ್ಲ! ಇವತ್ತಿಗೂ ಆ ತಂಡಕ್ಕೆ ಧೋನಿಯೇ ಪ್ರೇರಣೆ ಮತ್ತು ಸ್ಫೂರ್ತಿ!
41 ವರ್ಷದ ಧೋನಿ ಇಂದಿಗೂ ಉಳಿಸಿಕೊಂಡಿರುವ ಕ್ರಿಯಾಶೀಲತೆ, ಚರಿಷ್ಮ, ಖದರು ಮತ್ತು ಫಿಟ್ನೆಸ್ ಯಾರಿಗೂ ಸಾಧ್ಯವಾಗದ ಮಾತು. ಧೋನಿಗೆ ಅದು ಸಾಧ್ಯವಾಗಿದೆ ಎಂದರೆ ಅದು ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಪ್ಯಾಶನ್ ಮತ್ತು ಬದ್ಧತೆಗಳ ಮೊತ್ತ ಎಂದು ನನ್ನ ಭಾವನೆ. ವಿಕೆಟಿನ ಹಿಂದೆ ತಾಳ್ಮೆಯ ಪರ್ವತವಾಗಿ ಧೋನಿ ನಿಂತಿದ್ದಾರೆ ಅಂದರೆ ಇಡೀ CSK ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ 200% ಕೊಡಲು ಸಿದ್ಧವಾಗುತ್ತಾರೆ!
ಐಪಿಎಲ್ ಇತಿಹಾಸದ ಲೆಜೆಂಡ್ ಆಟಗಾರ!
——————————— ಇಷ್ಟೊಂದು ಪ್ರೀತಿ ಮತ್ತು ಗೌರವ ಪಡೆದುಕೊಂಡ ಇನ್ನೊಬ್ಬ ಕ್ರಿಕೆಟರ್ ನಿಮಗೆ, ನಮಗೆ ಸಿಗಲು ಸಾಧ್ಯವೇ ಇಲ್ಲ! ಭಾರತದ ಯಾವ ಸ್ಟೇಡಿಯಮನಲ್ಲಿ CSK ಆಡುತ್ತಿದೆ ಅಂತಾದರೂ ಇಡೀ ಸ್ಟೇಡಿಯಂ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚೆನ್ನೈ ತಂಡದ ಬೆಂಬಲಕ್ಕೆ ನಿಲ್ಲುತ್ತದೆ. ಕೋಲ್ಕತ್ತಾದಲ್ಲಿ ಮೊನ್ನೆ ನಡೆದ ಪಂದ್ಯದಲ್ಲಿ ಸೇರಿದ ಬಹುಪಾಲು ಜನರು ತಮ್ಮದೇ KKR ತಂಡವನ್ನು ಮರೆತು CSK ತಂಡದ ಬೆಂಬಲಕ್ಕೆ ನಿಂತಿದ್ದರು! ಇದಕ್ಕೆ ಕಾರಣ ಧೋನಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಧೋನಿಯ ಈ ರೀತಿಯ ಜನಪ್ರಿಯತೆಗೆ ಕಾರಣವೇನು?
——————————
ಈ ಪ್ರಶ್ನೆಗೆ ನಾವು ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತಕ್ಕಾಗಿ 2004ರಿಂದ 2019ರವರೆಗೆ ಧೋನಿ ಆಡಿದ ವೀರೋಚಿತವಾದ  ಇನ್ನಿಂಗ್ಸಗಳನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಭಾರತ ಕಂಡ ಅತ್ಯಂತ ಯಶಸ್ವೀ ಕ್ಯಾಪ್ಟನ್ ಅಂದರೆ ಅದು ಧೋನಿ ಮತ್ತು ಧೋನಿ ಮಾತ್ರ! ಭಾರತಕ್ಕೆ ಮೂರು ವಿಶ್ವಮಟ್ಟದ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ಕ್ಯಾಪ್ಟನ್ ಆತ. 2007ರ T20 ವಿಶ್ವ ಕಪ್, 2011ರ ಸ್ಮರಣೀಯ ODI ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಇವುಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ!
ಒಬ್ಬ ಕ್ಯಾಪ್ಟನ್ ಆಗಿ ಆತನು ತನ್ನ ತಂಡದಲ್ಲಿ  ಟೀಮ್ ಸ್ಪಿರಿಟ್ ತುಂಬಿಸುವುದು, ಒತ್ತಡ ನಿರ್ವಹಣೆ ಮಾಡುವುದು, ಎಳೆಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಗೆಲ್ಲುವ ತಂತ್ರಗಾರಿಕೆ ರೂಪಿಸುವುದು, ಕೊನೆಯ ಚೆಂಡಿನವರೆಗೆ ಸೋಲನ್ನು ಒಪ್ಪಿಕೊಳ್ಳದೆ ಇರುವುದು, ಗ್ರೌಂಡಿನಲ್ಲಿ ಒಂದಿಷ್ಟೂ ತಾಳ್ಮೆ ಕೆಡದೇ ಪರ್ವತವಾಗಿ ನಿಲ್ಲುವುದು, ಎದುರಾಳಿ ಆಟಗಾರರನ್ನು ಕೂಡ ಗೌರವದಿಂದ ಕಾಣುವುದು… ಹೀಗೆ ಧೋನಿ ಬೇರೆ ಕ್ಯಾಪ್ಟನಗಳಿಗಿಂತ ಭಾರೀ ಎತ್ತರದಲ್ಲಿ ನಿಲ್ಲುತ್ತಾರೆ.
41ನೆಯ ವಯಸ್ಸಿನಲ್ಲಿ ಆತನ ಫಿಟ್ನೆಸ್ ಅದು ನಿಜಕ್ಕೂ ಅದ್ಭುತ! ವಿಕೇಟಿನ ಹಿಂದೆ ಚಿರತೆಯ ಚುರುಕುತನ ತೋರುವ ಧೋನಿ ರನ್ನಿಗಾಗಿ ವಿಕೆಟ್ ನಡುವೆ ಓಡುವಾಗ ಹದಿಹರೆಯದ ಆಟಗಾರರನ್ನು ನಾಚಿಸುತ್ತಾರೆ! ಅದು ಧೋನಿಯ ಸ್ಪೆಷಾಲಿಟಿ.
DSR ಸಕ್ಸಸ್ ರೇಟನಲ್ಲಿ CSK ತಂಡವು ( 85.15%) ಹೊಂದಿದೆ ಅಂದರೆ ಅದಕ್ಕೆ ಕಾರಣ ಧೋನಿಯೇ! ಯಾವ ಗ್ರೌಂಡಿನಲ್ಲಾದರೂ ಧೋನಿ ಒಂದೆರಡು ಬಾಲ್ ಆದರೂ ಆಡಲಿ, ಒಂದಾದರೂ ಹೆಲಿಕಾಪ್ಟರ್ ಶಾಟ್ ಹೊಡೆಯಲಿ ಎಂದು ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಾರೆ ಅಂದರೆ ಧೋನಿಯ ಜನಪ್ರಿಯತೆ ಯಾರಿಗಾದರೂ ಅರ್ಥ ಆಗುತ್ತದೆ. ಚೆನ್ನೈ ಆಡುವ ಪ್ರತೀ ಐಪಿಎಲ್ ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸ್ಟೇಡಿಯಮನಲ್ಲಿ ಸಮುದ್ರದ ಘೋಷದ ಹಾಗೆ ಕೇಳಿ ಬರುವ ಉದ್ಘೋಷ ಅದೊಂದೇ ಧೋನಿ, ಧೋನಿ, ಧೋನಿ!
CSK ತಂಡದ ಕ್ರಿಕೆಟ್ ಯೋಧರು!
——————————
ಧೋನಿ 2008ರಿಂದಲೂ ಕ್ಯಾಪ್ಟನ್ ಆಗಿರುವ CSK ತಂಡದ (ಎರಡು ವರ್ಷ ಧೋನಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರವಾಗಿ ಆಡಬೇಕಾಯಿತು) ಆತ್ಮಬಲವನ್ನು ಹೆಚ್ಚಿಸುತ್ತ ಬಂದಿದ್ದಾರೆ. 2010, 2011, 2018, 2021ರಲ್ಲಿ ಹೀಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಅದು.
2023ರಲ್ಲಿ CSK ತಂಡದ ಸಾಮಾನ್ಯರಲ್ಲಿ ಸಾಮಾನ್ಯ ಆಟಗಾರರೂ ಮಿಂಚುತ್ತಿದ್ದಾರೆ. ಕೇವಲ 50 ಲಕ್ಷಕ್ಕೆ ಖರೀದಿ ಆಗಿದ್ದ  ಅಜಿಂಕ್ಯ ರಹಾನೆ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ! ಕ್ರಿಕೆಟಿನ ಮೂರೂ ಫಾರ್ಮ್ಯಾಟಗಳಲ್ಲಿ ವಿಫಲ ಆಟಗಾರ ಎಂದೇ ಬಿಂಬಿತವಾಗಿದ್ದ ರಹಾನೆ ಈ ಬಾರಿ ಕಿಚ್ಚು ಹಚ್ಚುವ ಆಟಗಾರ ಆಗಿದ್ದಾರೆ! ಧೋನಿಯ ನಂಬಿಕೆಯ ಓಪನರ್ ಋತುರಾಜ್ ಡ್ರೀಮ್ ಓಪನಿಂಗ್ ಕೊಡುತ್ತಿದ್ದಾರೆ. ಬೇರೆ ಫ್ರಾಂಚೈಸಿ ಟೀಮಗಳಲ್ಲಿ ವಿಫಲರಾಗುತ್ತಿದ್ದ ಶಿವಂ ದುಬೇ, ಅಂಬಾಟಿ ರಾಯುಡು ವಸ್ತುಶಃ ಸುಂಟರಗಾಳಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಮೋಯಿನ್ ಆಲಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ದೀಪಕ್ ಚಹರ್, ಪ್ರೀಟೋರಿಯಸ್, ಸಾನಟ್ನರ್, ತೀಕ್ಷಣ ಎಲ್ಲರೂ ಗೆಲ್ಲುವ ಇನ್ನಿಂಗ್ಸ್ ಆಡುತ್ತಿದ್ದಾರೆ. ತುಷಾರ್ ದೇಶಪಾಂಡೆ, ಪತಿರಾಣಾ ಮೊದಲಾದ ಹೊಸ ಮುಖಗಳು ಧೋನಿ ಕೊಟ್ಟ ಪ್ರತೀ ಒಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಎಲ್ಲೋ ಆರ್ಮಿಯ ಪ್ರತಿಯೊಬ್ಬ ಆಟಗಾರನೂ ಈ ಬಾರಿ ಐಪಿಎಲ್ ಟ್ರೋಫಿಯನ್ನು  ಗೆಲ್ಲುವುದರ ಮೂಲಕ ಧೋನಿಗೆ ಗೆಲುವಿನ ವಿದಾಯ ಕೊಡಬೇಕು ಎನ್ನುವ ಸಂಕಲ್ಪದ ಜೊತೆಗೆ ಆಡುತ್ತಿದ್ದಾರೆ. ಹಾಗೆ ಈ ಬಾರಿಯ ಅದ್ಭುತ ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ.
ಮುಂದೆ ಎಷ್ಟು ವರ್ಷ ಐಪಿಎಲ್ ಕೂಟ ಇರುತ್ತದೆಯೋ ಅಲ್ಲಿಯವರೆಗೆ ಮಹೇಂದ್ರ ಸಿಂಗ್ ದೋನಿ ಹೆಸರು ಶಾಶ್ವತ ಆಗಿರುತ್ತದೆ ಅನ್ನೋದೇ ಭರತ ವಾಕ್ಯ!
Categories
ಕ್ರಿಕೆಟ್

RCB vs RR: ಮತ್ತೆ ಕೊಹ್ಲಿ ನಾಯಕತ್ವದ ಮ್ಯಾಜಿಕ್, ರೋಚಕ ಪಂದ್ಯದಲ್ಲಿ ರಾಜಸ್ಥಾನವನ್ನು ಸೋಲಿಸಿದ RCB; ಹಸಿರು ನೀಡಿತು ಆರ್ ಸಿ ಬಿ ಗೆ ಜಯದ ಉಸಿರು

ಆರ್‌ಸಿಬಿ ತವರು ನೆಲದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿತು. ಕೊಹ್ಲಿ ನಾಯಕತ್ವದಲ್ಲಿ ತಂಡಕ್ಕೆ ಈ ಋತುವಿನಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಅವಕಾಶ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕಳಪೆ ಆರಂಭ ಪಡೆಯಿತು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಗೋಲ್ಡನ್ ಡಕ್‌ನಲ್ಲಿ ಔಟಾದರು. ಟ್ರೆಂಟ್ ಬೌಲ್ಟ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅವರ ನಂತರ ಶಹಬಾಜ್ ಅಹ್ಮದ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಯಿತು ಆದರೆ ಅವರು ಕೂಡ ತಮ್ಮ ವೈಯಕ್ತಿಕ ಸ್ಕೋರ್ 2 ರನ್‌ಗಳಲ್ಲಿ ಮುಂದುವರೆದರು.
ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಇಲ್ಲಿಂದ ಸಿಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು. ಡು ಪ್ಲೆಸಿಸ್ ಋತುವಿನ ಐದನೇ ಅರ್ಧಶತಕ ಗಳಿಸಿದರು. 39 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಬಿರುಸಿನ ಬ್ಯಾಟಿಂಗ್ ಮಾಡುವಾಗ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಗಳಿಸಿದರು. ಇದಾದ ಬಳಿಕ ಆರ್‌ಸಿಬಿ ತತ್ತರಿಸಿತು.ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರಂತೆ ಔಟಾಗುತ್ತಲೇ ಇದ್ದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್‌ಗೆ 189 ರನ್ ಗಳಿಸಿತು. ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ಹೆಚ್ಚು ವಿಕೆಟ್ ಪಡೆದರು. ಇಬ್ಬರೂ 2-2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ರಾಯಲ್ಸ್ ಕಳಪೆ ಆರಂಭ ಪಡೆಯಿತು. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್ ಸಿರಾಜ್‌ಗೆ ಬಲಿಯಾದರು. ಅವರು ತಮ್ಮ ಖಾತೆಯನ್ನು ಕಳೆದುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಇಲ್ಲಿಂದ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅಧಿಕಾರ ವಹಿಸಿಕೊಂಡರು. ಪಡಿಕ್ಕಲ್ 30 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 52 ರನ್ ಗಳಿಸಿ ಔಟಾದರು.
ಜೈಸ್ವಾಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಕ್ರೀಸ್‌ನಲ್ಲಿ ಉಳಿದುಕೊಂಡ ಅವರು ನಿಧಾನಕ್ಕೆ 37 ಎಸೆತಗಳಲ್ಲಿ 47 ರನ್ ಗಳಿಸಿದರು. ಅವರ ನಂತರ ನಾಯಕ ಸಂಜು ಸ್ಯಾಮ್ಸನ್ ಕೂಡ 22 ರನ್ ಗಳಿಸಿ ಔಟಾದರು ಮತ್ತು ತಂಡದ ಸ್ಥಿತಿ ಹದಗೆಟ್ಟಿತು. RCB ರಾಜಸ್ಥಾನ್ ರಾಯಲ್ಸ್ ಅನ್ನು ಒತ್ತಡಕ್ಕೆ ಸಿಲುಕಿಸಿತು.
ಕೊನೆಯಲ್ಲಿ ಧ್ರುವ್ ಜುರೆಲ್ 16 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 20 ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು RCB ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತು. ರಾಯಲ್ಸ್ 6 ವಿಕೆಟ್‌ಗೆ 182 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
Categories
ಕ್ರಿಕೆಟ್

ಏಪ್ರಿಲ್ 29 ಮತ್ತು 30 ರಂದು ಮಂಗಳೂರಿನಲ್ಲಿ ಎ.ಜೆ ಗ್ರೂಪ್ಸ್ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ

ಮಂಗಳೂರು-ಎ.ಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್  ಕಾರ್ಪೊರೇಟ್ ಪ್ರೀಮಿಯರ್  ಲೀಗ್‌ ‘ ಅತಿ ದೊಡ್ಡ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ ಮಂಗಳೂರಿನಲ್ಲಿ  ಏಪ್ರಿಲ್ 29 ರಿಂದ 30 ರವರೆಗೆ ಎ ಜೆ  ಮೈದಾನದಲ್ಲಿ ಆಯೋಜಿಸಲಾಗಿದೆ
ಒತ್ತಡದ ಕಾರ್ಪೊರೇಟ್ ಜೀವನಕ್ಕೆ ಒಂದು ಚಿಟಿಕೆ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ, ಎ ಜೆ ಕ್ರಿಕೆಟ್ ಕ್ಲಬ್  ಕರಾವಳಿಯ ಕಾರ್ಪೊರೇಟ್‌ಗಳಲ್ಲಿ ಕ್ರಿಕೆಟ್ ಕ್ರಿಯೆಯನ್ನು ಉತ್ತೇಜಿಸಲು – ‘ AJ ಕಾರ್ಪೊರೇಟ್ ಪ್ರೀಮಿಯರ್ ಲೀಗ್‌ ‘ ಎಂಬ ಶೀರ್ಷಿಕೆಯ ನವೀನ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ರೂಪಿಸಿದೆ.  ಹದಿನಾರು ತಂಡಗಳು, ಪ್ರತಿನಿಧಿಗಳು ಸೇರಿದಂತೆ ದೊಡ್ಡ ಕಂಪನಿಗಳು ಈ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತವೆ. ಪಂದ್ಯಗಳು  ಹಗಲು-ರಾತ್ರಿ ರೂಪದಲ್ಲಿ ನಡೆಯುತ್ತವೆ.
ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವ  ತಂಡಗಳು:
ಕೆಎಂಸಿ ಮಣಿಪಾಲ
ಮಣಿಪಾಲ್ ಟೆಕ್ನಾಲಜೀಸ್
ಮಾಹೆ, ಮಣಿಪಾಲ
ಕೆಎಂಸಿ ಮಂಗಳೂರು
ಸೆಮ್ನಾಕ್ಸ್ ಸೊಲ್ಯೂಷನ್ಸ್
ನೋವಿಗೊ
ಎ ಆರ್  ಎಲ್
ನಿಟ್ಟೆ ಯೂನಿವರ್ಸಿಟಿ
ಯೇನಪೋಯ ಗ್ರೂಪ್
ಇಂಡಿಯಾನಾ ಗ್ರೂಪ್
ಎ ಜೆ ಹಾಸ್ಪಿಟಲ್ಸ್ ಗ್ರೂಪ್
ಎ ಜೆ ರೆಸ್ಟಾರಂಟ್ಸ್
ಎಂ ಸಿ ಎಫ್
ನಿವಿಯಸ್
ಜೆ ಎಸ್ ಐ ಸ್ಪೋರ್ಟ್ಸ್ ಇಂಟರ್ನ್ಯಾಷನಲ್
ಮಂಗಳೂರು ವಿಶ್ವವಿದ್ಯಾನಿಲಯ
• ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳು ಮಾತ್ರ ಆಡಲು ಅರ್ಹರಾಗಿರುತ್ತಾರೆ.
• ಪ್ರತಿಯೊಂದು ತಂಡವು ಲೀಗ್ ಹಂತದ ಮತ್ತು ನಾಕ್ ಔಟ್ ಪಂದ್ಯಗಳಲ್ಲಿ ಪಂದ್ಯಗಳನ್ನು ಆಡುತ್ತದೆ
• ಇಡೀ ಪಂದ್ಯಾವಳಿಯನ್ನು ಟೆನಿಸ್ ಬಾಲ್ (ವಿಲ್ಸನ್) ನೊಂದಿಗೆ ಆಡಲಾಗುತ್ತದೆ.
• ಎಲ್ಲಾ ಕ್ರಿಕೆಟ್ ಆಟಗಾರರು ಸಂಘಟಕರು ನೀಡುವ ಸಮವಸ್ತ್ರವನ್ನು ಧರಿಸಬೇಕು
ಟೂರ್ನಮೆಂಟ್ ಕಮಿಟಿಯ ಡಾಕ್ಟರ್ ಸಾಕ್ಷಾತ್ ರೈ ಪಂದ್ಯಾವಳಿಯ ವಿವರಗಳನ್ನು ಸ್ಪೋರ್ಟ್ಸ್ ಕನ್ನಡದ ಜೊತೆ ಹಂಚಿಕೊಡರು. ” ಈ ವರ್ಷದಲ್ಲಿ ಏಪ್ರಿಲ್ 29 ಮತ್ತು 30 ರಂದು  ಎಜೆ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಸಂಭ್ರಮಕ್ಕೆ ತಮ್ಮೆಲ್ಲರನ್ನು ಆಹ್ವಾನಿಸುತ್ತೇನೆ!  ಕಾರ್ಪೊರೇಟ್ ತಂಡಗಳಿಗೆ  ಪವರ್ ಹಿಟ್ಟಿಂಗ್ ಅನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ! ಮೈದಾನದಲ್ಲಿ ಕಷ್ಟಪಟ್ಟು ಆಡೋಣ ಆದರೆ ಮುಖ್ಯವಾಗಿ ಸೌಹಾರ್ದತೆಯನ್ನು ಹಂಚಿಕೊಳ್ಳೋಣ! ”  ಎಂದು ಅವರು ತಿಳಿಸಿದರು. ಟೂರ್ನಮೆಂಟ್ ಸಂಘಟನಾ ಕಾರ್ಯದರ್ಶಿ ಡಾಕ್ಟರ್  ಶರಣ್ ಜೆ ಶೆಟ್ಟಿ ಅವರು ಪಂದ್ಯಾವಳಿಯ  ಕ್ರಿಕೆಟ್ ಸಂಭ್ರಮ ಆನಂದಿಸಲು ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಿದ್ದಾರೆ.
ಸ್ಪೋರ್ಟ್ಸ್ ಕನ್ನಡದ  ಕೆ ಆರ್ ಕೆ ಆಚಾರ್ಯ ಮಾತನಾಡಿ ”ಒತ್ತಡದ ಕೆಲಸದ ಜೀವನ ಮತ್ತು ಬೇಸರದ ಜೀವನಶೈಲಿಯು ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯದ ಮೇಲೆ ಸಾಮಾನ್ಯವಾಗಿ  ಸಮಸ್ಯೆ ಬೀರುವ ಕಾರಣ ಇಂತಹ ಟೂರ್ನಮೆಂಟ್ ಗಳು ಅನುಕೂಲ ಮತ್ತು ಅಗತ್ಯವಾಗಿದೆ” ಎಂದರು.
ಕ್ರಿಕೆಟ್ ಪ್ರೇಮಿಗಳು ಅತ್ಯಾಕರ್ಷಕ ಕಾರ್ಪೊರೇಟ್ ಟೂರ್ನಮೆಂಟನ್ನು ವೀಕ್ಷಿಸಿ ಕ್ರಿಕೆಟ್ ಲೀಗ್ (CPL) ಹೆಚ್ಚು ದೊಡ್ಡ ಮತ್ತು ಉತ್ತಮ ಸ್ವರೂಪದಲ್ಲಿ ನಡೆಯಲಿ.
ಶುಭ ಕೋರುವ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್
Categories
ಕ್ರಿಕೆಟ್

ಐಪಿಎಲ್ ನೂತನ ದಾಖಲೆ ಬರೆದ ಕೆ. ಎಲ್. ರಾಹುಲ್.

ಇಂದವರ ಹುಟ್ಟಿದ ಹಬ್ಬ – ಹ್ಯಾಪಿ ಬರ್ತಡೇ ರಾಹುಲ್. 
——————————————————-
ಭಾರತೀಯ ಕ್ರಿಕೆಟನಲ್ಲಿ  ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಧೋನಿ, ಸೌರವ್ ಗಂಗೂಲಿ ಇವರ ಪರಂಪರೆಯ ಮುಂದಿನ ರಾಯಭಾರಿ ಯಾರು? ಎಂಬ ಪ್ರಶ್ನೆಗೆ ಕ್ರಿಕೆಟ್ ಪ್ರೇಮಿಗಳು ನೀಡುವ ಉತ್ತರವು ಖಂಡಿತ  ಕೆ. ಎಲ್. ರಾಹುಲ್!
ರಾಹುಲ್ ಟ್ಯಾಲೆಂಟೆಡ್ ಕ್ರಿಕೆಟರ್ ಎಂಬಲ್ಲಿ ಸಂಶಯವೇ ಬೇಡ!
——————————————————–
ಆತನಲ್ಲಿ  ಸೆಹವಾಗ್ ಆಕ್ರಮಣ, ಕೊಹ್ಲಿಯ ತಾಂತ್ರಿಕತೆ, ಧೋನಿಯ ತಾಳ್ಮೆ, ದ್ರಾವಿಡ್ ಡಿಫೆನ್ಸ್ ಇದೆ ಎಂದು ಕ್ರಿಕೆಟ್ ಪಂಡಿತರೇ  ಹೇಳುತ್ತಿದ್ದಾರೆ. ಅವನನ್ನು ಟೀಮ್ ಇಂಡಿಯಾ ಸರಿಯಾಗಿ ಉಪಯೋಗಿಸುತ್ತಾ ಇಲ್ಲ ಎಂಬುದು ಕೂಡ  ಅಭಿಮಾನಿಗಳ ಅಳಲು! ಆತ ಫಾರ್ಮ್ ಕಳೆದುಕೊಂಡಾಗ ಆತನನ್ನು ಟೀಮಿನಿಂದ ಕಿತ್ತು ಬಿಸಾಡಿ ಎಂದು ಆಗ್ರಹಿಸುವ ಮಂದಿ ಕೂಡ ಸಾಕಷ್ಟು ಮಂದಿ ಇದ್ದಾರೆ. ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಕ್ರಿಕೆಟಿನಲ್ಲಿ ಮುಳುಗಿ ಬಿಡುವ ರಾಹುಲ್ ಬಗ್ಗೆ ನಾವು ಹೆಮ್ಮೆ ಪಡಲು ನೂರಾರು ಕಾರಣಗಳು ಇವೆ.
ಕೆ. ಎಲ್ ರಾಹುಲ್ ಕರಾವಳಿ ಕರ್ನಾಟಕದವನು.
———————————————-
ರಾಹುಲ್ ತಂದೆ ಸುರತ್ಕಲ್ NITKಯಲ್ಲಿ ಪ್ರೊಫೆಸರ್ ಆಗಿದ್ದ ಕಾರಣ ಬಾಲ್ಯವನ್ನು ಅಲ್ಲಿಯೇ ಕಳೆದಿದ್ದ.  PUC ಮಾಡಿದ್ದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಆಗಲೇ ಅವನ ಕ್ರಿಕೆಟ್ ಪ್ರತಿಭೆಯನ್ನು ಅಪ್ಪ ಗುರುತಿಸಿದ್ದರು. ಸ್ವತಃ ಗವಾಸ್ಕರ್ ಅಭಿಮಾನಿ ಆಗಿದ್ದ ತಂದೆಯು ಮಗನಿಗೆ ಕ್ರಿಕೆಟರ್ ಆಗುವ ಕನಸು ಹುಟ್ಟಿಸಿದವರು.
ಅದಕ್ಕಾಗಿ ಮಗನನ್ನು 18ನೆಯ ವರ್ಷಕ್ಕೆ ಬೆಂಗಳೂರು ಜೈನ್ ಕಾಲೇಜಿಗೆ ಸೇರಿಸಿದರು ಮತ್ತು ಕ್ರಿಕೆಟಿನ ಮೇಲೆ ಫೋಕಸ್ ಮಾಡಲು ಹೇಳಿದರು. ರಾಹುಲ್ ಬ್ಯಾಟಿಂಗ್ ಮಾಡಲು ಇಳಿದರೆ ಅವನ ಸಹಪಾಠಿಗಳು ಅವನನ್ನು ಔಟ್ ಮಾಡಲು ಇಡೀ ದಿನ ಬೆವರನ್ನು  ಹರಿಸುತ್ತಿದ್ದರು! ಅವನು ವಿಕೆಟ್ ಕೀಪರ್ ಆಗಿ ಕೂಡ ಮಿಂಚುತ್ತಿದ್ದ ದಿನಗಳು ಅವು.
ಅಂಡರ್ 19ರ ತಂಡದ ಮೂಲಕ ವಿಶ್ವಕಪ್ ಅನುಭವ!
—————————————————–
ಅವನಿಗೆ  2010ನೆಯ ಐಸಿಸಿ UNDER 19 ವಿಶ್ವಕಪ್ ಕೂಟದಲ್ಲಿ  ಭಾರತ ತಂಡದಲ್ಲಿ  ಆಡುವ ಅವಕಾಶವು  ದೊರೆಯಿತು. ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರವಾಗಿ ಸಾಲು ಸಾಲು ದಾಖಲೆಗಳು ಅವನ ದೈತ್ಯ ಪ್ರತಿಭೆಯನ್ನು ಮೊಗೆ ಮೊಗೆದು ಕೊಟ್ಟವು.
ರಣಜಿಯಲ್ಲಿ ತ್ರಿಶತಕ (337) ಸಿಡಿಸಿದ ಮೊದಲ ಕನ್ನಡಿಗ ಕೆ. ಎಲ್. ರಾಹುಲ್. 2014-15ರ ಸಾಲಿನಲ್ಲಿ ಅವನ ರಣಜಿಯ ಬ್ಯಾಟಿಂಗ್ ಸರಾಸರಿಯು 93.11 ಆಗಿತ್ತು! ಅದರ ಬೆನ್ನಿಗೆ  ದುಲೀಪ್ ಟ್ರೋಫಿಯ ಪಂದ್ಯದಲ್ಲಿ ಎರಡೂ ಇನ್ನಿಂಗ್ಸಲ್ಲಿ ಶತಕಗಳು (185 ಮತ್ತು 130) ಆತನನ್ನು ಭಾರತದ  ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದವು.
ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ! ಯಾವ ಸ್ಲಾಟನಲ್ಲಿ ಕೂಡ ಬ್ಯಾಟ್ ಬೀಸಬಲ್ಲ!
———————————————————-
2014ದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವೇಶ ಪಡೆದ ರಾಹುಲ್ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಶತಕ ಸಿಡಿಸಿ ಸಂಭ್ರಮಿಸಿದರು. ತಂಡಕ್ಕೆ ಅನಿವಾರ್ಯತೆ ಬಂದಾಗ ವಿಕೆಟ್ ಕೀಪಿಂಗ್ ಕೂಡ ಮಾಡಿದನು. ಅವನನ್ನು ಟೀಮ್ ಇಂಡಿಯಾ ಆಡಳಿತವು
3ನೆಯ, 6ನೆಯ ಸ್ಥಾನದಲ್ಲಿ ಕೂಡ ಆಡಿಸಿ ಪ್ರಯೋಗವನ್ನು  ಮಾಡಿತು. ತಾನು ಯಾವ ಸ್ಲಾಟನಲ್ಲಿ ಕೂಡ ಚಂದವಾಗಿ  ಆಡಬಲ್ಲೆ ಎಂದು ರಾಹುಲ್ ಪ್ರೂವ್ ಮಾಡಿದ್ದಾನೆ.
ಸದ್ಯಕ್ಕೆ ಕ್ರಿಕೆಟಿನ ಮೂರೂ ಫಾರ್ಮಾಟಲ್ಲಿ ಅವನ ದಾಖಲೆ ಅತ್ಯುತ್ತಮವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ವಿಫಲವಾದ ಪಂದ್ಯಗಳಲ್ಲಿ ಕೂಡ ಕೆ ಎಲ್ ರಾಹುಲ್ ನೆಲಕಚ್ಚಿ ಇನ್ನಿಂಗ್ಸ್  ಕಟ್ಟುತ್ತಿರುವುದು ಅದ್ಭುತ! ಅವನೊಬ್ಬ ಬಾರ್ನ್ ಫೈಟರ್ ಎನ್ನುವ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯು ಇಲ್ಲ.
ಕೆ. ಎಲ್ ರಾಹುಲ್ ಎಂದರೆ ರಾಶಿ ರಾಶಿ ದಾಖಲೆ!
——————————————————-
ಕ್ರಿಕೆಟಿನ ಮೂರೂ ಫಾರ್ಮಾಟಿನಲ್ಲಿ ಶತಕ ಗಳಿಸಿದ ಸಾಧನೆ ಆತನದ್ದು. ಕೇವಲ 20 ಪಂದ್ಯಗಳಲ್ಲಿ ಆ ಸಾಧನೆ ಮಾಡಿದ್ದು ವಿಶ್ವ ದಾಖಲೆ! ಆರಂಭಿಕ ಆಟಗಾರನಾಗಿ ಮೊದಲ ಟೆಸ್ಟ್  ಮತ್ತು ಮೊದಲ ODI ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಭಾರತದ ಏಕೈಕ ಕ್ರಿಕೆಟರ್ ರಾಹುಲ್. T20 ಪಂದ್ಯದಲ್ಲಿ 46 ಎಸೆತಗಳ ಶತಕ ಭಾರತದಲ್ಲಿ ಅತ್ಯಂತ ವೇಗದ ಶತಕ! ಸೆಹವಾಗ್ ರೀತಿಯಲ್ಲಿ  ಸಿಕ್ಸರ್ ಮೂಲಕವೇ ಶತಕ ಪೂರ್ತಿ ಮಾಡುತ್ತಿರುವ ಗಟ್ಸ್ ಆತನದ್ದು.
ಅತೀ ಸಣ್ಣ ಅವಧಿಯಲ್ಲಿ ಹದಿನಾಲ್ಕು  ಅಂತಾರಾಷ್ಟ್ರೀಯ ಶತಕಗಳು ಅವನ ಖಾತೆಯಲ್ಲಿವೆ. ಎಷ್ಟೋ ಬಾರಿ ಕ್ರಿಕೆಟ್  ಆಯ್ಕೆಗಾರರು ಅವನನ್ನು ತಂಡದಿಂದ ಕೈ ಬಿಟ್ಟು ರೋಹಿತ್ ಶರ್ಮಾನಿಗೆ ಅವಕಾಶ ನೀಡಿದ್ದು, ರೋಹಿತ್ ಸತತವಾಗಿ ವಿಫಲವಾದಾಗ ಕ್ರಿಕೆಟ್ ಪ್ರೇಮಿಗಳು ತೀವ್ರವಾಗಿ ಸಿಟ್ಟು ತೋರಿದ್ದು ನಾವೆಲ್ಲರು  ನೋಡಿದ್ದೇವೆ. 2018ರ WISDON ವರ್ಷದ ಕ್ರಿಕೆಟರ್ ಪ್ರಶಸ್ತಿಯನ್ನು ರಾಹುಲ್ ಪಡೆದಾಗಿದೆ.
ಇದೀಗ ಐಪಿಲ್ ದಾಖಲೆ ರಾಹುಲ್ ಹೆಸರಿಗೆ!
——————————————–
2013ರಿಂದ ಐಪಿಎಲ್ ಕೂಟದಲ್ಲಿ ಆಡುತ್ತ ಬಂದಿರುವ ರಾಹುಲ್ ಮೊದಲು ಆಡಿದ್ದು RCB ತಂಡದಲ್ಲಿ. ಮುಂದೆ ಹೈದರಾಬಾದ್, ಪಂಜಾಬ್ ಟೀಮಗಳಲ್ಲಿ ಆಡಿದ ಆತನು ಈಗ ಲಕ್ನೋ ಸೂಪರ್ ಜಯಂಟ್ ತಂಡದ ಕ್ಯಾಪ್ಟನ್ ಆಗಿದ್ದಾನೆ. ಇದೀಗ ಅತ್ಯಂತ ಕಡಿಮೆ ಪಂದ್ಯಗಳಲ್ಲಿ( 105) 4000 ರನ್ ಪೂರ್ತಿ ಮಾಡಿದ ದಾಖಲೆ ರಾಹುಲ್ ಹೆಸರಿಗೆ ವರ್ಗಾವಣೆ ಆಗಿದೆ.
ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ವಾರ್ನರ್, ಡೆವಿಲಿಯರ್ಸ್ ಇವರಿಗಿಂತ ಈ ದಾಖಲೆಯಲ್ಲಿ ರಾಹುಲ್ ಮುಂದೆ ಇದ್ದಾರೆ ಅನ್ನುವುದೇ ಆತನ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿ! ಆತನು ಕ್ರೀಸಲ್ಲಿ ಇರುವ ತನಕ LSG  ಟೀಮ್ ಸೋಲುವುದಿಲ್ಲ ಅನ್ನುವುದು ಎಂದಿಗೂ ಸುಳ್ಳಾಗಿಲ್ಲ.
ಸುನೀಲ್ ಶೆಟ್ಟಿ ಅಳಿಯ – ಕರಾವಳಿಗೆ ಇನ್ನಷ್ಟು ಹತ್ತಿರ!
—————————————————–
ಈ ದಾಖಲೆಗಳ ಹೊರತಾಗಿಯೂ ಮೈದಾನದಲ್ಲಿ ತಾಳ್ಮೆಯ ಪ್ರತಿರೂಪವಾಗಿಯೇ ಕಾಣಿಸುವ, ಎಂತಹ ಕ್ರಿಟಿಕಲ್  ಸಂದರ್ಭದಲ್ಲಿ ಕೂಡ ಸುಲಭದಲ್ಲಿ ವಿಕೆಟ್ ಬಿಟ್ಟು ಕೊಡದ, ಪ್ರತಿಯೊಂದು ಪಂದ್ಯದಲ್ಲಿಯೂ ಭಾರತದ ಗೆಲುವಿಗಾಗಿ  ಪ್ರಯತ್ನಿಸುವ ಹೆಮ್ಮೆಯ ಕನ್ನಡಿಗ ಕೆ.ಎಲ್. ರಾಹುಲ್ ಇದೀಗ ಕರಾವಳಿ ಮೂಲದ ಸಿನೆಮಾ ಸ್ಟಾರ್ ಸುನೀಲ್ ಶೆಟ್ಟಿ ಅವರ ಮಗಳು ಆತಿಯಾಳನ್ನು ಮದುವೆ ಆಗುವ ಮೂಲಕ ನಮಗೆ ಇನ್ನೂ ಹತ್ತಿರ ಆಗಿದ್ದಾನೆ.
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ರಾಹುಲ್ ಇನ್ನಷ್ಟು ದಾಖಲೆ ಮಾಡಲಿ ಎನ್ನುವುದೇ ಹಾರೈಕೆ.  Happy birthday Kannur Lokesh Rahul.
Categories
Uncategorized ಕ್ರಿಕೆಟ್

ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವಿ ಪಿ ಎಲ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ

ಮಂಗಳೂರು-ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವತಿಯಿಂದ 4ನೇ  ವರ್ಷದ ಕ್ರಿಕೆಟ್ ಪಂದ್ಯಾವಳಿ  (cricket tournament) ಬಂಟ್ವಾಳ ತಾಲೂಕಿನ ಬರಿಮಾರು ಮಹಮ್ಮಾಯಿ ದೇವಸ್ಥಾನದ  ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಅಂತಿಮ ಪಂದ್ಯಾವಳಿಯ ನಾಣ್ಯ  ಚಿಮ್ಮುವಿಕೆಯನ್ನು ಶ್ರೀ   ಗೋಪಾಲಕೃಷ್ಣ ಭಟ್ ಮಂಗಳೂರು  ( ಗೋಪಿ ಭಟ್ ) ನೇರವೇರಿಸಿದರು. ಫೈನಲ್ ಪಂದ್ಯಾವಳಿಯ ಎರಡೂ ತಂಡದ ಆಟಗಾರರಿಗೆ ಶುಭಾಶಯ ತಿಳಿಸಿದರು.
ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಭಟ್ ‘ಜಿಸ್  ಸೂಪರ್ ಕಿಂಗ್ಸ್ ತಂಡ, ರನ್ನರ್ ಅಪ್ ಆಗಿ ಮುಂಬಯಿಯ ರಾಕಿಂಗ್ ವೈದಿಕ್ಸ್ ತಂಡ ಪಡೆದುಕೊಂಡಿದೆ. ರಾಜ್ಯದೆಲ್ಲೆಡೆಯ  ಹಾಗೂ ಹೊರರಾಜ್ಯದ ಒಟ್ಟು  8 ತಂಡಗಳು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ರಂಜಿತ್  ಭಟ್ರ  ಭಟ್ ಬ್ರದರ್ಸ್ ತಂಡವು ಭರತ್ ಭಟ್ ನಾಯಕತ್ವದ ಕೇರಳದ ಅನಂತ್ ವೈದಿಕ್ಸ್ ಮಂಜೇಶ್ವರ ವನ್ನು ಪರಾಭವಗೊಳಿಸಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಸಮಾರೋಪ ಸಮಾರಂಭ ಉದ್ದೇಶಿಸಿ  ಶ್ರೀ ಕ್ಷೇತ್ರ ಬರಿಮಾರುವಿನ ಅನುವಂಶಿಕ ಮೊಕ್ತೇಸರರು, ಧರ್ಮದರ್ಶಿಗಳು ಶ್ರೀ ರಾಕೇಶ್ ಪ್ರಭು,  ಮಾತನಾಡಿ, 4 ವರ್ಷಗಳಿಂದ ಅನೇಕ ಕ್ರೀಡಾಪಟುಗಳನ್ನು ಈ ವೇದಿಕೆ ಪರಿಚಯಿಸಿ ಪ್ರೋತ್ಸಾಹಿಸಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 ಮಹಮ್ಮಾಯಿ ದೇವಸ್ಥಾನದ  ರವೀಶ್ ಪ್ರಭು ಮಾತನಾಡಿ, ಪ್ರತಿ ವರ್ಷವೂ ಹಲವು ಪಂದ್ಯಾವಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮುಂದಿನ ಪೀಳಿಗೆಗೆ ಹಲವು ಕ್ರೀಡಾಪಟುಗಳನ್ನು ಪರಿಚಯಿಸಲಿದೆ ಎಂದರು.
ವೇದಿಕೆಯ ಅಧ್ಯಕ್ಷ  ಪಂಡಿತ್ ಎಂ. ಕಾಶಿನಾಥ ಆಚಾರ್ಯ ಮಾತನಾಡಿ, ಬೇರೆ ಬೇರೆ ಭಾಗದಲ್ಲಿದ್ದ ಸಮಾಜದ  ವೈದಿಕರು  ಒಂದೆಡೆ ಸೇರಲು ಈ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದ್ದು ಯಶ್ವಸಿಯಾಗಿ 4 ವರ್ಷ ಪೂರೈಸಲಾಗಿದೆ. ಸ್ನೇಹಕ್ಕಾಗಿ ಕ್ರೀಡೆ ಆಯೋಜಿಸುತ್ತಾ ಬಂದಿದ್ದು ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದರು.
ವಿಜೇತ ತಂಡಗಳಿಗೆ , ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರ್ಚಕರು ಮೂಲ್ಕಿ ರಮಾನಾಥ್ ಭಟ್, ಚಾಂಪಿಯನ್ ತಂಡದ ನಾಯಕ  ಸುದೇಶ್ ಭಟ್ ಮೂಡಬಿದ್ರೆ , ರನ್ನರ್ ಅಪ್ ತಂಡದ ನಾಯಕ  ಹರೀಶ್ ಭಟ್ ಮುಂಬಯಿ  ಮತ್ತಿತರರು ಇದ್ದರು.
ವೈದಿಕರ ಈ ಪಂದ್ಯಾಕೂಟದಲ್ಲಿ ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತುಳು ಹಾಗೂ ಜೊತೆ ಜೊತೆಗೆ ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯನ್ನು ನೀಡಿದ್ದು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಗೋಪಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶುಭವಾಗಲಿ,
ಅವಕಾಶಕ್ಕಾಗಿ ಧನ್ಯವಾದಗಳು
ಸುರೇಶ್ ಭಟ್ ಮೂಲ್ಕಿ
ದೂ: 98454 83433
Categories
ಕ್ರಿಕೆಟ್

ಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ವತಿಯಿಂದ ಪಿ‌.ಎನ್.ಕೃಷ್ಣಮೂರ್ತಿಯವರಿಗೆ ಸನ್ಮಾನ

ಬೆಂಗಳೂರು-ಇತ್ತೀಚೆಗಷ್ಟೇ ಕುಂದಾಪುರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ ರಾಜ್ಯದ ಯಶಸ್ವಿ ತಂಡಗಳಲ್ಲೊಂದಾದ
ಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ಇವರ ವತಿಯಿಂದ ಕ್ರೀಡಾ ಪ್ರೋತ್ಸಾಹಕರು,ಕ್ರೀಡಾಪಟು ಮತ್ತು ದಾಸರಹಳ್ಳಿ ವಿಧಾನ‌ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಪಿ.ಎನ್.ಕೃಷ್ಣಮೂರ್ತಿ ಯವರನ್ನು ಜಾಲಹಳ್ಳಿ ಕೃಷ್ಣಚಂದ್ರ ಕನ್ವೆನ್ಷನ್ ಸೆಂಟರ್ ನ ಪಿ‌.ಎನ್.ಕೆ ಇವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ರಾಷ್ಟ್ರೀಯ ಮಾನವ ಹಕ್ಕು ಮತ್ತು ಭೃಷ್ಟಾಚಾರ ನಿರ್ಮೂಲನ‌ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ.ಆರ್.ಪ್ರಸನ್ನ ಕುಮಾರ್,ಚಾಲೆಂಜ್ ಟ್ರೋಫಿ ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷರಾದ ಪ್ರವೀಣ್ ಗಡಿಯಾರ್,ಕಾರ್ಯದರ್ಶಿ ಕೆ.ಪಿ.ಸತೀಶ್,ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಡಿಸೆಂಬರ್ ನಲ್ಲಿ ನಡೆದ ಚಾಲೆಂಜ್ ಟ್ರೋಫಿ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಪಿ.ಎನ್.ಕೃಷ್ಣಮೂರ್ತಿಯವರು ತುರ್ತು ಸಭೆಯ ಕಾರಣದಿಂದ ಗೈರು ಹಾಜರಾಗಿದ್ದರು.