Categories
ಸ್ಪೋರ್ಟ್ಸ್

ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ದೀಪಾವಳಿಗೆ ಹೊಸ ಬಟ್ಟೆ ಉಡುಗೊರೆ

ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ,
ಪ್ರತಿವರ್ಷದಂತೆ ಈ ಬಾರಿಯೂ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನ ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.
ಹೊಸ ಬಟ್ಟೆ ವಿತರಿಸಿ ಮಾತನಾಡಿದ ವೆಂಕಟರಮಣ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್ ರವರು “ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭ ವೆಂಕಟರಮಣ ಸಂಸ್ಥೆಯ ಸದಸ್ಯರು  ಪಟಾಕಿಗೆ ಖರ್ಚು ಮಾಡುವ ಹಣವನ್ನು ಉಳಿಸಿ,ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ” ಎಂದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್,ಕಾರ್ಯದರ್ಶಿ ಪ್ರವೀಣ್ ಕುಮಾರ್,ಕೋಶಾಧಿಕಾರಿ ಲೋಕೇಶ್ ಸುವರ್ಣ,ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಮೈಂದನ್,ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ,ಮಹಿಳಾ ಮಂಡಳಿ ಅಧ್ಯಕ್ಷೆ ರಾಜೀವಿ ಉಮೇಶ್,ಜಿತೇಂದ್ರ ಶೆಟ್ಟಿ, ಸತೀಶ್ ಕುಂದರ್,ಉಮೇಶ್ ಕರ್ಕೇರ,ಪ್ರಕಾಶ್ ಶೆಟ್ಟಿ, ಕಿರಣ್,ಹರಿಶ್ಚಂದ್ರ,ಸುರೇಶ್,ಸುರಭಿ ರತನ್,ಅನ್ನುರಾಜ್ ಮೊದಲಾದವರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಸ್ಪೋರ್ಟ್ಸ್

ಕ್ರಿಕೆಟ್ ಸಾಧಕರಿಗೆ ಟಿ.ಸಿ.ಎ ಉಡುಪಿ ವತಿಯಿಂದ ಇಂದು ಸನ್ಮಾನ

ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಟಿ.ಸಿ.ಎ ಉಡುಪಿ  ಆಶ್ರಯದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ ಸತತ ಐದು ದಿನಗಳಿಂದ ನಡೆಯುತ್ತಿದೆ.
ಅಂತಿಮ‌ ದಿನವಾದ ಶುಕ್ರವಾರದಂದು 2023 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಪಟು ಪೃಥ್ವಿರಾಜ್‌ ಶೆಟ್ಟಿ ಹುಂಚನಿ,14 ರ ವಯೋಮಾನದ ಬಾಲಕಿಯರ ಕ್ರಿಕೆಟ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಚಿತಾ ಹತ್ವಾರ್ ಮತ್ತು ಪ್ರಾಚಿ,17 ಮತ್ತು 14 ರ ವಯೋಮಾನ  ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಾರಿತ್ರ್ಯ ಮತ್ತು ತ್ರಿಶಾ.ಐ.ನಾಯಕ್ ಇವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯನಲ್ಲಿ ತಿಳಿಸಿದ್ದಾರೆ.
Categories
ಕಬಡ್ಡಿ ಸ್ಪೋರ್ಟ್ಸ್

ಕೊರವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಬಡ್ಡಿ ತಂಡಕ್ಕೆಉಚಿತ ಶೂ ವಿತರಿಸಿದ ಗೌತಮ್ ಶೆಟ್ಟಿ

ಕುಂದಾಪುರ:ಇಲ್ಲಿನ ಕೊರವಡಿ ಸರ್ಕಾರಿ  ಹಿರಿಯ ಪ್ರಾಥಮಿಕ  ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು.
ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಕಬಡ್ಡಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ನವೆಂಬರ್ 9 ರಂದು ಮಂಡ್ಯದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಲು ತಂಡದ ಆಟಗಾರರಿಗೆ ಪ್ರಾಯೋಜಿತ 12 ಜೊತೆ ಕಬಡ್ಡಿ ಶೂಗಳನ್ನು ನೀಡಿದರು.
ಈ ಸಂದರ್ಭ ಕಬಡ್ಡಿ ಸ್ಪರ್ಧಿಗಳನ್ನು  ಉದ್ದೇಶಿಸಿ  ಮಾತನಾಡಿದ ಗೌತಮ್ ಶೆಟ್ಟಿ “ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಸೀಮಿತ ವಿದ್ಯಾರ್ಥಿಗಳನ್ನು ಹೊಂದಿರುವ ಗ್ರಾಮೀಣ ಸರ್ಕಾರಿ ಶಾಲೆಯಾದರೂ ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ವಿಭಾಗೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲಲು  ನಿಮ್ಮ ಅತ್ಯುತ್ತಮವಾದ ಆಟವನ್ನು ಆಡಿ.  ನಿಮ್ಮಲ್ಲಿ ದೃಢತೆ ಮತ್ತು ಶಿಸ್ತು ಇರಲಿ.  ಅದಕ್ಕಿಂತ ಹೆಚ್ಚಾಗಿ ನೀವು ಆಟವನ್ನು ಪ್ರೀತಿಸಿ ಮತ್ತು ಆಟವನ್ನು ಆನಂದಿಸಿರಿ.  ಅತ್ಯುತ್ತಮ ತಂಡದ ಸಂಯೋಜನೆಯಿಂದಾಗಿ ಯಾವುದೇ ತಂಡವನ್ನು ಸೋಲಿಸಲು ನಿಮ್ಮ ತಂಡ ಸಾಕಷ್ಟು ಪ್ರಬಲವಾಗಿದೆ . ನಿಮಗೆಲ್ಲರಿಗೂ ಶುಭಾಶಯಗಳು,ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ” ಎಂದು ಆಟಗಾರರನ್ನು ಹುರಿದುಂಬಿಸಿದರು‌.
ಶಾಲೆಯ ವತಿಯಿಂದ ಗೌತಮ್ ಶೆಟ್ಟಿ ಇವರನ್ನು ಗೌರವಿಸಲಾಯಿತು.ಈ ಸಂದರ್ಭ ಶಾಲಾ ಅಧ್ಯಾಪಕ ವರ್ಗದವರು,ಮಕ್ಕಳು  ಮತ್ತಿತರರು ಉಪಸ್ಥಿತರಿದ್ದರು.
Categories
ಯಶೋಗಾಥೆ ಸ್ಪೋರ್ಟ್ಸ್

ಎರಡೂ ಕೈಗಳು ಇಲ್ಲದ ಶೀತಲ್ ದೇವಿ ವಿಶ್ವವನ್ನು ಗೆದ್ದ ಕಥೆ.

ಕಾಲುಗಳಿಂದ ಬಿಲ್ಲು ಹಿಡಿದು ಬಾಣ ಬಿಡುವ ಆಕೆ ಈಗ ಭಾರತದ ಕಣ್ಮಣಿ.
ಈ ವಾರ ನಡೆದ ಏಷಿಯನ್ ಪಾರಾ ಕೂಟದಲ್ಲಿ ಆಕೆ ಗೆದ್ದದ್ದು ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ!
———————————————
ಆಕೆಗೆ ಹುಟ್ಟುವಾಗ ವಿಚಿತ್ರವಾದ ಕಾಯಿಲೆ ‘ ಫೋಕೊ ಮೆಲಿಯಾ’  ಅಮರಿತ್ತು. ದೇಹದ ಪ್ರಮುಖ ಅಂಗಗಳು ಬೆಳೆಯದೆ ಹೋಗುವ ವಿಚಿತ್ರ ಕಾಯಿಲೆ ಅದು. ಅದರ ಪರಿಣಾಮವಾಗಿ ಆಕೆಯ ಎರಡು ತೋಳುಗಳು ಬೆಳೆಯಲೇ ಇಲ್ಲ. ಕೈಗಳಿಂದ ಮಾಡಬೇಕಾದ ಕೆಲಸಗಳನ್ನು ಕಾಲುಗಳಿಂದ ಮಾಡಬೇಕಾದ ಅನಿವಾರ್ಯತೆ ಆಕೆಗೆ. ಅದಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಕಾದ ದೈನೇಸಿ ಬದುಕು. ಅಂತಹ ಹುಡುಗಿ ಇಂದು ಪಾರಾ ಏಷಿಯನ್  ಗೇಮ್ಸ್  ಎಂಬ ದೊಡ್ಡ ಕ್ರೀಡಾ ವೇದಿಕೆಯಲ್ಲಿ  ಬಿಲ್ಗಾರಿಕೆಯಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ.
ಆಕೆ ಶೀತಲ್ ದೇವಿ. ವಯಸ್ಸು ಇನ್ನೂ 16! 
—————————————-
ಈ ಪಾರಾ ಆರ್ಚರ್ ತನ್ನ ಒಂದು ಕಾಲಿಂದ ಬಿಲ್ಲು ಹಿಡಿದು ಇನ್ನೊಂದು ಕಾಲಿನ ಬೆರಳುಗಳ ನಡುವೆ ಬಾಣವನ್ನು ಫಿಕ್ಸ್ ಮಾಡಿ ಗುರಿಯೆಡೆಗೆ ದೃಷ್ಟಿ ನೆಟ್ಟು ಬಾಣ ಬಿಟ್ಟರು ಎಂದರೆ ಅದು ನೇರವಾಗಿ ಗುರಿ ಮುಟ್ಟುವುದನ್ನು ನೋಡುವುದೇ ಚೆಂದ. ಪಾರಾ ಕ್ರೀಡೆಗಳು ಇರುವುದೇ ಇಂತಹ ಸಾಧಕರನ್ನು ಗುರುತಿಸಲು. ಆದರೆ ಕ್ರಿಕೆಟ್ ವೈಭವದಲ್ಲಿ ಮುಳುಗಿರುವ ಮಾಧ್ಯಮದ ಮಂದಿಗೆ ಇವೆಲ್ಲವೂ ಟಿ ಆರ್ ಪಿ ಸರಕಾಗಿಲ್ಲ ಅನ್ನೋದು ನನಗೆ ಬೇಜಾರಿನ ಸಂಗತಿ.
ಯಾರೀ ಶೀತಲ್ ದೇವಿ? 
———————————-
ಆಕೆ ಜಮ್ಮು ಕಾಶ್ಮೀರದ ಕ್ರಿಸ್ತ್ವಾರ್ ಎಂಬ ಪ್ರದೇಶದಿಂದ ಬಂದವರು. ಆಕೆಯ ತಂದೆ ಒಬ್ಬ ಸಣ್ಣ ಕೃಷಿಕ. ತಾಯಿ ಮೇಕೆಗಳನ್ನು ಸಾಕುವವರು. ಮನೆಯಲ್ಲಿ ತೀವ್ರವಾದ ಬಡತನ ಕಾಲು ಮುರಿದುಕೊಂಡು ಬಿದ್ದಿತ್ತು. ತನ್ನ ವಿಕಲತೆಯ ಕಾರಣಕ್ಕೆ ಆಕೆ ಕುಸಿದುಹೋದಾಗ ಅಪ್ಪ ಮತ್ತು ಅಮ್ಮ ಆಕೆಯ ನೆರವಿಗೆ ಬರುತ್ತಿದ್ದರು. ಆಕೆಗೆ ಶಿವಾನಿ ಎಂಬ ತಂಗಿ ಇದ್ದು ಆಕೆಯ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ಮನೆಯ ಸಮಸ್ಯೆಗಳ ನಡುವೆ ಕೂಡ ಆಕೆ ಹತ್ತನೇ ತರಗತಿಯವರೆಗೆ ಓದುತ್ತಾರೆ. ಆಗ ಬೆಂಗಳೂರಿನ ಪ್ರೀತಿ ರೈ ಅವರು ಸ್ಥಾಪನೆ ಮಾಡಿದ BEING YOU ಎಂಬ NGO ಆಕೆಯ ನೆರವಿಗೆ ನಿಲ್ಲುತ್ತದೆ. ಆಕೆಗೆ ಬೇಕಾದ ತರಬೇತಿಗಳು ಮತ್ತು ಸಪೋರ್ಟ್ ಆ NGO ಮೂಲಕ ದೊರೆಯುತ್ತದೆ. ಆಕೆಯ ಸಂಕಲ್ಪ ಶಕ್ತಿ ಮತ್ತು ಇಚ್ಛಾ ಶಕ್ತಿಗಳು ತುಂಬಾ ಎತ್ತರದಲ್ಲಿ ಇದ್ದವು ಎನ್ನುತ್ತಾರೆ ಆಕೆಯನ್ನು ಭೇಟಿ ಮಾಡಿದವರು.
ಆ ಹಂತದಲ್ಲಿ ಆಕೆಯ ಬದುಕಿನಲ್ಲಿ ಪರಿಣಾಮಕಾರಿ ತಿರುವು ತಂದವರು ಕುಲದೇವ್ ವೆದ್ವಾನ್ ಎಂಬ ಕೋಚ್. ಅವರು ಆಕೆಯನ್ನು ಕರೆದುಕೊಂಡು ಬಂದು ವೈಷ್ಣೋದೇವಿ ದೇವಳದ ಆಡಳಿತಕ್ಕೆ ಒಳಪಟ್ಟ ಬಿಲ್ಗಾರಿಕಾ ಆಕಾಡೆಮಿಗೆ ತಂದು ಸೇರಿಸುತ್ತಾರೆ.
ಖೇಲೋ ಇಂಡಿಯಾ ಫಲಾನುಭವಿ ಆಕೆ.
———————————————
ವೈಷ್ಣೋದೇವಿ ಅಕಾಡೆಮಿಯಲ್ಲಿ ಆಕೆಗೆ ತನ್ನ ನ್ಯೂನತೆಯು ಮರೆತೇ ಹೋಯಿತು. ಆಕೆ ಯಾವುದೇ ನ್ಯೂನತೆ ಇಲ್ಲದ ಬಲಿಷ್ಠ ಬಿಲ್ಗಾರರ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಯಿತು. ಅಲ್ಲಿ ಮ್ಯಾಟ್ ಸ್ಟುಟ್ಸಮನ್ ಎಂಬ ಆರ್ಚರಿ ಲೆಜೆಂಡ್ ಆಕೆಯ ಸೂಕ್ಷ್ಮ  ತಪ್ಪುಗಳನ್ನು ತಿದ್ದಿ ಆಕೆಯನ್ನು ಪುಟವಿಟ್ಟ ಚಿನ್ನವಾಗಿ ರೂಪಿಸಿದರು. ಆಕೆಯ ಉತ್ಸಾಹವನ್ನು ಗಮನಿಸಿದ ಭಾರತೀಯ ಸೇನೆ ಆಕೆಯ ಶಿಕ್ಷಣದ ಮತ್ತು ತರಬೇತಿಯ ಖರ್ಚನ್ನು ಸ್ಪಾನ್ಸರ್ ಮಾಡಿತು. ಎಲ್ಲರ ಬೆಂಬಲ ಪಡೆದ ಶೀತಲ್ ದೇವಿ ಕಳೆದ ವರ್ಷ ಖೇಲೋ ಇಂಡಿಯಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಗೆದ್ದರು.
ಇದೇ ವರ್ಷ ಝೆಕ್ ಗಣರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಪಾರಾ ಕೂಟದಲ್ಲಿ ಭಾಗವಹಿಸಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಪಾರಾ ಕೂಟದಲ್ಲಿ ಪದಕವನ್ನು ಗೆದ್ದ ಮೊದಲ ತೋಳಿಲ್ಲದ ಬಿಲ್ಗಾತಿ ಆಗಿ ಆಕೆ ವಿಶ್ವದಾಖಲೆಯನ್ನೇ ಮಾಡಿದ್ದರು. ಪ್ರಪಂಚದಲ್ಲಿ ತೋಳು ಇಲ್ಲದ ಒಟ್ಟು ಆರು ಜನ ಬಿಲ್ಗಾರರು ಇದ್ದಾರೆ ಮತ್ತು ಆ ಪಟ್ಟಿಯಲ್ಲಿ ಶೀತಲ್ ದೇವಿ ಒಬ್ಬರೇ ಮಹಿಳೆ ಎನ್ನುವಾಗ ರೋಮಾಂಚನ ಆಗುತ್ತದೆ.
ಕೇವಲ ಎರಡು ವರ್ಷಗಳ ತರಬೇತಿಯಿಂದ ಚಿನ್ನದ ಫಸಲು.
——————————————–
ಆಕೆ ಬಿಲ್ಗಾರಿಕೆ ತರಬೇತು ಪಡೆಯಲು ಆರಂಭ ಮಾಡಿ ಕೇವಲ ಎರಡು ವರ್ಷ ಆಗಿದೆ. ತರಬೇತು ಇದ್ದಾಗ ಮಾತ್ರ ಇಡೀ ದಿನ ಮೈದಾನದಲ್ಲಿ ಕಳೆಯುತ್ತಾರೆ. ಆಕೆಯ ಆತ್ಮವಿಶ್ವಾಸ, ಛಲ ಮತ್ತು ಗೆಲ್ಲುವ ಹಂಬಲ ನಿಜವಾಗಿಯೂ ಅದ್ಭುತವಾಗಿ ಇವೆ. ಆಕೆಗಾಗಿ ರೂಪಿಸಲಾದ ವಿಶೇಷವಾದ ಬಿಲ್ಲು ಹಿಡಿದು ಆಕೆ ಗೆಲುವಿನತ್ತ ಗುರಿ ಇಡುವಾಗ ನೀವು ಆಕೆಯನ್ನು ಪ್ರೀತಿ ಮಾಡದೆ ಇರಲು ಸಾಧ್ಯವೇ ಇಲ್ಲ.
” ನನಗೆ ಆರಂಭದಲ್ಲಿ ಬಿಲ್ಲು ಎತ್ತುವ ಶಕ್ತಿ ಕೂಡ ಇರಲಿಲ್ಲ. ಆದರೆ ನನ್ನ ಹೆತ್ತವರು ತಮ್ಮ ಬಡತನದ ನಡುವೆ ಕೂಡ ನನ್ನನ್ನು ಪ್ರೋತ್ಸಾಹಿಸಿ ಈ ಹಂತದವರೆಗೆ ತಂದು ನಿಲ್ಲಿಸಿದ್ದಾರೆ. ನನ್ನನ್ನು ಸ್ಪಾನ್ಸರ್ ಮಾಡಿ ಪ್ರೋತ್ಸಾಹ ನೀಡಿದ ಭಾರತೀಯ ಸೇನೆಗೆ ಮತ್ತು ನನ್ನಂತಹ ಕ್ರೀಡಾಪಟುಗಳ ಆಶಾಕಿರಣ ಆಗಿರುವ ‘ಖೇಲೋ ಇಂಡಿಯಾ ‘ ಯೋಜನೆಗೆ ನಾನು ಚಿರಋಣಿ ” ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳಲ್ಲಿ ಅಮೇಜಾನ್ ನದಿಯ ಪ್ರವಾಹ ಕಂಡು ಬರುತ್ತದೆ.
ಅಂದ ಹಾಗೆ ಈ ಬಾರಿಯ ಏಷಿಯನ್ ಪಾರಾ ಕೂಟದಲ್ಲಿ ಭಾರತದ ಹತ್ತಾರು ವಿಶೇಷ ಚೇತನ ಪ್ರತಿಭೆಗಳು 90+ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಇದೆ. ವಿಶ್ವಕಪ್ ಕ್ರಿಕೆಟ್ ಜ್ವರದಲ್ಲಿ ಮಲಗಿರುವ ನಾವು ಒಮ್ಮೆ ಮೈ ಕೊಡಹಿ ಎದ್ದು ಅವರಿಗೆ ಒಂದು ಶುಭಾಶಯ ಹೇಳೋಣವೇ?
Categories
ಸ್ಪೋರ್ಟ್ಸ್

ಸ್ಕೇಟಿಂಗ್ ನಲ್ಲಿ ಬೆಳ್ಳಿ ಗೆದ್ದ ಅತೀಕ್ಷ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಅತೀಕ್ಷ್ ಶೆಟ್ಟಿ ಕ್ರಮವಾಗಿ 100,200 ಮತ್ತು 400 ಮೀಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ‌.
ಅತೀಕ್ಷ್ ಇವರು ಸುದೀಪ್ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಯ ಸುಪುತ್ರ.ಪ್ಯಾರಡೈಸ್ ಬನ್ನಂಜೆ ತಂಡದ ಹಿರಿಯ ಆಟಗಾರ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಬನ್ನಂಜೆ ಇವರ ಮೊಮ್ಮಗ.
Categories
ಸ್ಪೋರ್ಟ್ಸ್

ಏಷಿಯಾಡ್ 2023 – ಭಾರತದ ಮಹಾ ವಿಜಯ.

ಶತಕ ಪದಕಗಳನ್ನು ದಾಟಿ ಮುನ್ನಡೆ ಪಡೆಯಿತು ಭಾರತ.
ಭಾರತದ ಹೆಗ್ಗಳಿಕೆಗೆ ಕಾರಣವಾದ ಆ 20 ಅಂಶಗಳು.
———————————–
2023ರ ಏಷಿಯಾಡ್ ಚೀನಾ ದೇಶದಲ್ಲಿ ಈ ವಾರಾಂತ್ಯದಲ್ಲಿ  ಮುಗಿದಿದ್ದು ಭಾರತವು ಸಾರ್ವತ್ರಿಕ ದಾಖಲೆ ಮಾಡಿದೆ. ಭಾರತವು ನೂರು ಪದಕಗಳ ಟ್ಯಾಲಿ ದಾಟಿ
ಮುನ್ನಡೆದದ್ದು ಇದೇ ಮೊದಲು. ಬಲಿಷ್ಠ ರಾಷ್ಟ್ರಗಳನ್ನು ಹಿಂದೆ ಹಾಕಿ ಭಾರತವು ಟಾಪ್ 4ನೆ  ಸ್ಥಾನವನ್ನು ಆಕ್ರಮಿಸಿದ್ದು ಸಣ್ಣ ಸಾಧನೆಯಲ್ಲ. ಅದರ ಸಾರಾಂಶವನ್ನು ಗಮನಿಸಿದಾಗ ಇದು ಭಾರೀ ದೊಡ್ಡ ಸಕ್ಸಸ್. ಇದರ ಕೀರ್ತಿಯು ಆ ಎಲ್ಲ ಕ್ರೀಡಾಪಟುಗಳಿಗೆ, ಅವರ ಕೋಚ್ ಮತ್ತು ಭಾರತ ಸರಕಾರದ ಕ್ರೀಡಾ ಸಚಿವಾಲಯಕ್ಕೆ ಸಲ್ಲಬೇಕು.
‘ಇಸ್ ಬಾರ್ 100 ಪಾರ್’  – ಇದು ಘೋಷಣೆ ಆಗಿತ್ತು.
———————————–
ಜಕಾರ್ತಾದಲ್ಲಿ ನಡೆದ ಕಳೆದ  ಏಷಿಯಾಡ್ ಕೂಟದಲ್ಲಿ ಭಾರತವು 70 ಪದಕ ಮಾತ್ರ ಗೆದ್ದಿತ್ತು. ಆಗಲೇ ಭಾರತದ ಕ್ರೀಡಾ ಸಚಿವಾಲಯವು  ಸ್ಟ್ರಾಂಗ್ ಆದ ಕ್ರಿಯಾ ಯೋಜನೆ ಹಾಕಿಕೊಂಡು ಹೊರಟಿತ್ತು. ‘ ಇಸ್ ಬಾರ್ 100 ಪಾರ್’ ಎನ್ನುವುದು ಈ ಬಾರಿಯ ಘೋಷಣೆ ಆಗಿತ್ತು. ಸಚಿವಾಲಯವು ಸಣ್ಣ ಸಣ್ಣ ಅಂಶಗಳನ್ನು ಕೂಡ ಗಮನಿಸಿತು. ಎಲ್ಲ ರಾಜ್ಯಗಳಿಂದ ನೂರಾರು ಯುವ ಪ್ರತಿಭೆಗಳನ್ನು ಆರಿಸಿ ತಂದಿತು. ಉತ್ತಮ ಕೋಚಿಂಗ್ ವ್ಯವಸ್ಥೆ ಮಾಡಿತು. ಕ್ರೀಡಾ ಸಲಕರಣೆ ತಂದು ಕೊಟ್ಟಿತ್ತು. ಅದರ ಫಲವಾಗಿ ಈ ಅದ್ಭುತವಾದ ಫಲಿತಾಂಶ ಬಂದಿದ್ದು ಭಾರತವು ಹೆಮ್ಮೆಯಿಂದ ಬೀಗುವಂತೆ ಆಗಿದೆ. ಹಾಗೆಯೇ ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಭಾರತದ ನಿರೀಕ್ಷೆಗಳು ಹೆಚ್ಚಾಗಿವೆ.
2023 ಏಷಿಯಾಡಿನ ಹೆಮ್ಮೆಯ ಕ್ಷಣಗಳು. 
———————————-
೧) ಭಾರತವು ಗೆದ್ದ ಒಟ್ಟು ಪದಕಗಳ ಸಂಖ್ಯೆ -107( 28 ಚಿನ್ನ +38 ಬೆಳ್ಳಿ+41 ಕಂಚು). ಇದು ಭಾರೀ ದೊಡ್ಡ ದಾಖಲೆ. ಇಷ್ಟು ಪದಕಗಳನ್ನು ಭಾರತವು ಏಷಿಯಾಡ್ ಕೂಟದಲ್ಲಿ ಈವರೆಗೆ ಗೆದ್ದಿರಲಿಲ್ಲ!
೨) ಅಥ್ಲೆಟಿಕ್ ಈವೆಂಟ್ ಭಾರತಕ್ಕೆ ಈ ಬಾರಿ 29 ಪದಕಗಳನ್ನು  ತಂದುಕೊಟ್ಟಿತ್ತು. ಇದು ಕೂಡ ದಾಖಲೆ.
೩) ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ನಿರೀಕ್ಷೆ ಮೀರಿ 22 ಪದಕಗಳು ದೊರೆತವು.
೪) ಸಾತ್ತ್ವಿಕ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಭಾರತಕ್ಕೆ ಮೊಟ್ಟಮೊದಲ ಬ್ಯಾಡ್ಮಿಂಟನ್ ಡಬಲ್ಸ್ ಗೋಲ್ಡ್ ತಂದುಕೊಟ್ಟರು. ಇದು ಮೊದಲ ಬಾರಿ ಆಗಿರುವ ಘಟನೆ.
೫) ರಾಷ್ಟ್ರೀಯ ದಾಖಲೆಯನ್ನು  ಹೊಂದಿರುವ ಪಾರೂಲ್ ಚೌಧರಿ ಈ ಬಾರಿ 5000 ಮೀಟರ್ ಓಟದಲ್ಲಿ ಚಿನ್ನದ ಓಟ ಪೂರ್ತಿ ಮಾಡಿದರು. ಆ ರೇಸ್ ನೋಡಿದವರು ಖಂಡಿತ ರೋಮಾಂಚನ ಪಟ್ಟಿರುತ್ತಾರೆ. ಕೊನೆಯ ಕ್ಷಣದಲ್ಲಿ ಆಕೆ ಚಿರತೆಯ ಹಾಗೆ ಓಡಿ ಚಿನ್ನದ ಗೆರೆ ದಾಟಿದ್ದು ನನಗೆ ರೋಮಾಂಚನ ಕೊಟ್ಟ ಘಟನೆ.  28 ವರ್ಷದ ಆಕೆ 3000 ಮೀಟರ್ ಸ್ಟೀಪಲ್ ಚೇಸನಲ್ಲಿ ಬೆಳ್ಳಿಯ ಪದಕವನ್ನು ಕೂಡ  ಗೆದ್ದರು.
೬) ಉತ್ತರಪ್ರದೇಶದ ಮೀರತ್ ನಗರದ ಕಡು ಬಡತನದ ಕುಟುಂಬದ ಜಾಟ್ ಮಹಿಳೆ ಅನ್ನೂ  ರಾಣಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದರು. 31 ವರ್ಷದ ಆಕೆ ಬಾಲ್ಯದಲ್ಲಿ ತಾನೇ ಸಿದ್ಧಪಡಿಸಿದ ಬಿದಿರಿನ ಜಾವೆಲಿನ್ ಹಿಡಿದು ಪ್ರಾಕ್ಟೀಸ್ ಮಾಡುತ್ತಿದ್ದರು ಅನ್ನೋದು ರೋಮಾಂಚಕ ಘಟನೆ.
೭) ಆರ್ಚರಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮಹಿಳೆ ವೆನ್ನಂ ಜ್ಯೋತಿ ಸುರೇಖಾ ಆಂಧ್ರಪ್ರದೇಶದವರು. B.E ಮತ್ತು M.B.A ಪದವಿ ಪಡೆದಿರುವ ಆಕೆ ಆರ್ಚರಿ ವಿಶ್ವಕಪ್ ಕೂಟದಲ್ಲಿ ಕೂಡ ಚಿನ್ನ ಗೆದ್ದಿದ್ದಾರೆ. ಆಕೆಯ ವಯಸ್ಸು ಇನ್ನೂ  27.
೮) ಭಾರತದ ಸ್ಟಾರ್ ಕ್ರಿಕೆಟ್ ಆಟಗಾರರು ಈಗ ವಿಶ್ವಕಪ್ ಕೂಟದಲ್ಲಿ ಆಡುತ್ತಿರುವ ಕಾರಣ ಭಾರತವು ಏಶಿಯಾಡಿಗೆ ತನ್ನ B ಟೀಮ್ ಕಳುಹಿಸಬೇಕಾಯಿತು. ಋತುರಾಜ್ ಗಾಯಕವಾಡ್ ನಾಯಕತ್ವದ ಕ್ರಿಕೆಟ್ ತಂಡ ಚೀನಾದಲ್ಲಿ ಚಿನ್ನದ ಪದಕ ಗೆದ್ದು ಮೆರೆದಿದೆ. ಮಹಿಳಾ ಕ್ರಿಕೆಟ್ ತಂಡ ಕೂಡ ಅನಾಯಾಸವಾಗಿ ಚಿನ್ನ ಗೆದ್ದಿತು.
೯) ಕಬ್ಬಡ್ಡಿಯ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಭಾರತವು ಚಿನ್ನದ ಪದಕ ಬೇಟೆ ಆಡಿದೆ.
೧೦) ಪ್ರಗ್ಯಾನಂದ ಇರುವ ಪುರುಷರ ಚೆಸ್ ತಂಡ, ಕೊನೆರು ಹಂಪಿ ಇರುವ ಚೆಸ್ ಮಹಿಳೆಯರ ತಂಡ ಎರಡೂ ಇಲ್ಲಿ ಬೆಳ್ಳಿಯ ಪದಕ ಗೆದ್ದು ಬೀಗಿವೆ.
೧೧) ಆರ್ಚರಿ ವಿಭಾಗದಲ್ಲಿ ಈ ಬಾರಿ ಭಾರತಕ್ಕೆ ಭಾರೀ ಅಚ್ಚರಿಯ ಫಲಿತಾಂಶ. ಒಟ್ಟು ಒಂಬತ್ತು ಪದಕಗಳು ಭಾರತದ ಬುಟ್ಟಿಗೆ ಸೇರಿವೆ.
.೧೨) ಭಾರತದ ಪರಿಣತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಈ ಬಾರಿ ಭಾರತಕ್ಕೆ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ತಂದಿದ್ದಾರೆ. ಅವರ ವಯಸ್ಸು 43 ಮಾತ್ರ! ರೋಹನ್ ಬೋಪಣ್ಣ  ಕನ್ನಡವರು. ಅವರ ಜೊತೆ ಟೆನ್ನಿಸ್ ಆಡಿದ ಋತುಜಾ ಭೋಂಸ್ಲೆ ಕೊನೆಯ ಕ್ಷಣದಲ್ಲಿ ಅವರ ಡಬಲ್ಸ್ ಜೊತೆಗಾರರಾಗಿ ಆಯ್ಕೆ ಆದವರು.
೧೩) ಅದಿತಿ ಅಶೋಕ್ ನಿರೀಕ್ಷೆಯಂತೆ ಭಾರತಕ್ಕೆ ಮೊದಲ ಗಾಲ್ಫ್ ಬೆಳ್ಳಿ ತಂದುಕೊಟ್ಟರು. ಅವರು ಕೂಡ ಕನ್ನಡಿಗರು.
೧೪) ಶೂಟಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುವ ದಿವ್ಯ ಟಿ ಎಸ್ ಬೆಂಗಳೂರಿನವರು. ಬಾಲ್ಯದಿಂದಲೂ ಬಾಸ್ಕೆಟ್ ಬಾಲ್ ಆಡುತ್ತ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದ ಆಕೆ ಈ ಬಾರಿ ಬೆನ್ನು ನೋವಿನ ಕಾರಣಕ್ಕೆ ಬಾಸ್ಕೆಟ್ ಬಾಲ್ ಬಿಟ್ಟು ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು!
೧೫) ಮಹಾರಾಷ್ಟ್ರದ ಸೈನಿಕ ಅವಿನಾಶ್ ಸಾಬ್ಲೆ 3000 ಮೀಟರ್ ಸ್ಟೀಪಲ್ ಚೇಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು ಮತ್ತು 5000 ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಪಡೆದರು. ಸಣಕಲು ಶರೀರದ ಅವರು ಲಾಂಗ್ ರೇಸ್ ಓಡುವಾಗ ಆಯಾಸದ ಪರಿವೆಯೇ ಇರುವುದಿಲ್ಲ ಅನ್ನೋದು ಅಚ್ಚರಿ. ಅವರೊಳಗೆ ಒಂದು ಪುಟ್ಟ ಡೈನಮೋ ಇದೆ ಅನ್ನುವುದು ನನ್ನ ಅನಿಸಿಕೆ.
೧೬) ನಿರೀಕ್ಷೆಯಂತೆ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರ ಚಿನ್ನ ಗೆದ್ದರು. ಅವರಿಗೆ ತೀವ್ರವಾದ ಸ್ಪರ್ಧೆ ಒಡ್ಡಿದ ಭಾರತದ್ದೇ ಕಿಶೋರ್ ಜೆನ್ನ ಬೆಳ್ಳಿಯ ಪದಕವನ್ನು ಗೆದ್ದದ್ದು ಭಾರತಕ್ಕೆ ಹೆಮ್ಮೆ.
೧೭) ನಾಗಪುರದ ಓಜಸ್ ದೇವತಾಲ್ ಆರ್ಚರಿಯಲ್ಲಿ ಎರಡು ಚಿನ್ನದ ಪದಕ ಗೆದ್ದರು. ಆತನನ್ನು ಭಾರತದ ಭವಿಷ್ಯದ ಸ್ಟಾರ್ ಎಂದು ಕರೆಯಲಾಗುತ್ತದೆ.
೧೮) ತೇಜಿಂದರ್ ಸಿಂಘ್ ಶಾಟಪುಟ್ ವಿಭಾಗದಲ್ಲಿ ನಿರೀಕ್ಷೆಯಂತೆ ಚಿನ್ನವನ್ನು ಗೆದ್ದರು. ಇದರಿಂದಾಗಿ ಸತತ ನಾಲ್ಕು ಏಷಿಯನ್ ಕೂಟಗಳಲ್ಲಿ ಭಾರತವು ಶಾಟ್ಪುಟ್ ಚಿನ್ನದ ಪದಕಗಳನ್ನು ಗೆದ್ದ ಹಾಗಾಯ್ತು.
೧೯)ಅಪರೂಪದಲ್ಲಿ ಅಪರೂಪವಾದ ಕನೋಯಿಂಗ್, ಸ್ಕೇಟಿಂಗ್, ಸೇಪಕ್ ಟಕ್ರ, ವುಶು,
 ಇಕ್ವೆಸ್ಟ್ರಿಯನ್, ಬ್ರಿಜ್ ಮೊದಲಾದ ಆಟಗಳಲ್ಲಿ ಕೂಡ ಭಾರತವು ಈ ಬಾರಿ ಪದಕಗಳನ್ನು ಗೆದ್ದಿದೆ.
೨೦) ನಮ್ಮ ಸಾಪ್ರದಾಯಿಕ ಎದುರಾಳಿ ಆಗಿರುವ ಪಾಕಿಸ್ತಾನ ಕೇವಲ ಮೂರು ಪದಕ ಗೆದ್ದಿತು ಅಂದರೆ ಭಾರತದ ಸಾಧನೆಯು ಖಂಡಿತ ಎದ್ದು ಕಾಣುತ್ತದೆ.
ಭರತ ವಾಕ್ಯ – ಭಾರತವು ಇಂದು ಎಲ್ಲ ವಿಭಾಗಗಳಲ್ಲೂ ಸಾಧನೆ ಮಾಡಿರುವ ಹಾಗೆ ಹೊಸ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮುಂದಿನ ಒಲಿಂಪಿಕ್ ಕೂಟಕ್ಕೆ  ಕೂಡ ಭಾರತವು ಈ ಏಷಿಯನ್ ಕ್ರೀಡೆಯ ಮೂಲಕ ಆತ್ಮವಿಶ್ವಾಸ
ಹೆಚ್ಚಿಸಿಕೊಂಡಿದೆ ಎನ್ನಬಹುದು. ಕೇಂದ್ರ ಸರ್ಕಾರವು ಯಶಸ್ವೀ ಆಗಿ ಜಾರಿಗೆ ತಂದಿರುವ ‘ಖೇಲೋ ಇಂಡಿಯಾ’ ಯೋಜನೆಯ ಫಲ ಇಲ್ಲಿ ದೊರಕಲು ಆರಂಭವಾಗಿದೆ  ಎಂದು ಖಚಿತವಾಗಿ ಹೇಳಬಹುದು.
Categories
ಸ್ಪೋರ್ಟ್ಸ್

ASGFI ಆಯೋಜಿಸಿದ ರಾಷ್ಟ್ರಮಟ್ಟದ 7 ನೇ ಓಪನ್ ತ್ರೋಬಾಲ್ ಚಾಂಪಿಯನ್‌ ಶಿಪ್ ಪಂದ್ಯಾಕೂಟದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ

ಉಡುಪಿ ಜಿಲ್ಲೆಯ ಸೂಡಾ ಗ್ರಾಮದ ನರಸಿಂಹ ಪ್ರಭು ಮತ್ತು ಸುನಿತಾ ಪ್ರಭು ಇವರ ಪುತ್ರಿ ಕುಮಾರಿ ನಿಧಿ ಪ್ರಭು ASGFI ಆಯೋಜಿಸಿದ ರಾಷ್ಟ್ರಮಟ್ಟದ ಏಳನೇ ಓಪನ್ ಚಾಂಪಿಯನ್ ಶಿಪ್ ಟೂರ್ನಮೆಂಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ.
ಈ ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳ 15,16,17ರಂದು ಗೋವಾದಲ್ಲಿ ನಡೆಯಿತು. ಕಳೆದ ವರ್ಷ ವಯೋಮಿತಿಯ ಟೂರ್ನಮೆಂಟ್ ಸೇರಿದಂತೆ ಸತತ ವರ್ಷಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿ ಬಂದು ಉಡುಪಿ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ ಕುಮಾರಿ ನಿಧಿ ಪ್ರಭು ಅವರಿಗೆ ಇನ್ನಷ್ಟು ಉಜ್ವಲ ಅವಕಾಶಗಳು ಒದಗಿ ಬರಲಿ, ರಾಷ್ಟ್ರೀಯ ತಂಡದಲ್ಲೂ ಸ್ಥಾನ ಲಭಿಸಲಿ ಎನ್ನುವ ಶುಭಹಾರೈಕೆಗಳು.
– ಸ್ಫೋರ್ಟ್ಸ್ ಕನ್ನಡ
Categories
ಸ್ಪೋರ್ಟ್ಸ್

ವಿಶ್ವ ಬಂಟರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಒಕ್ಕೂಟದ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಆಹ್ವಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ದಿನಾಂಕ 28.10.2023 ಮತ್ತು 29.10.2023 ರಂದು ನಡೆಯಲಿರುವ  ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ  ಕಾರ್ಯಕ್ರಮ ಒಕ್ಕೂಟದ ನಿರ್ದೇಶಕರಾದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಪರವಾಗಿ ಹೂಗುಚ್ಚ ನೀಡಿ  ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು.
ಅಧ್ಯಕ್ಷರ ಆದರದ ಆಹ್ವಾನ ಸ್ವೀಕರಿಸಿದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರು ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಚೆಸ್ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಗ್ನಾನಂದ್

ಭಾರತದ ಭರವಸೆಯ ಯುವ ಚೆಸ್ ಆಟಗಾರ ಆರ್.ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಸ್ಟರ್​ ಗೇಮ್​ ಚೆಸ್​ನಲ್ಲಿ ತಮಿಳುನಾಡಿನ 16 ರ ಹರೆಯದ ಹುಡುಗ ಜೂನಿಯರ್ ಗ್ರಾಂಡ್ ಮಾಸ್ಟರ್  ಆರ್​  ಪ್ರಗ್ನಾನಂದ್​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ರನ್ನು ಮತ್ತೊಮ್ಮೆ ಸೋಲಿಸುವ ಮೂಲಕ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಶಾಕ್​ ನೀಡಿದ್ದಾರೆ.
ಆರ್ ಪ್ರಗ್ನಾನಂದ್ ರ  ಗೆಲುವನ್ನು ಚೆಸ್ ಲೋಕ ಸಂಭ್ರಮಿಸಿದೆ. ಸೆಮಿಫೈನಲ್‌ನಲ್ಲಿ ಪ್ರಗ್ನಾನಂದನ್ ಅವರು ಟೈಬ್ರೇಕರ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಗ್ನಾನಂದ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಈ ಗೆಲುವಿನೊಂದಿಗೆ ಪ್ರಗ್ನಾನಂದ ಅವರು ಫಿಡೆ ಚೆಸ್ ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ್ ಅವರು ಪ್ರಗ್ನಾನಂದ ಅವರಿಗಿಂತ ಮೊದಲು ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಗ್ನಾನಂದನ್ ಈಗ ಕಾರ್ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ಸನ್‌ರನ್ನು ಎದುರಿಸಲಿದ್ದಾರೆ. ಪ್ರಗ್ನಾನಂದನ್ ಫೈನಲ್ ಪಂದ್ಯದಲ್ಲಿ FIDE ಚೆಸ್ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ.
ಈ ಗೆಲುವಿಗಾಗಿ ಮಾಜಿ ವಿಶ್ವ ಚಾಂಪಿಯನ್ ಮತ್ತು ರಷ್ಯಾದ ಚೆಸ್ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಪ್ರಗ್ನಾನಂದ ಅವರನ್ನು ಅಭಿನಂದಿಸಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಪ್ರಶಸ್ತಿ ಹಣಾಹಣಿಗಾಗಿ ಅವರಿಗೆ ಶುಭ ಹಾರೈಸಿದರು.
ಪ್ರಗ್ನಾನಂದ್ ಅವರನ್ನು ಈ ಹಂತಕ್ಕೆ ತಲುಪುವಲ್ಲಿ ಅವರ ತಾಯಿ ನಾಗಲಕ್ಷ್ಮಿ ಅವರ ಪಾತ್ರವಿದೆ,  ಈ ಪಂದ್ಯಾವಳಿಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪ್ರಗ್ನಾನಂದ್ ಅವರು ತಮ್ಮ ತಾಯಿಯ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ನನ್ನ ತಾಯಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ತಾಯಿಯೇ ನನ್ನ ದೊಡ್ಡ ಬೆಂಬಲ ಮತ್ತು ನನಗೆ  ಸರ್ವಸ್ವ! ಆಟದಲ್ಲಿ ಸೋತ ನಂತರವೂ, ಅವಳು ನನ್ನನ್ನು ನಿಭಾಯಿಸಲು ಮತ್ತು ಶಾಂತಗೊಳಿಸಲು ಪ್ರಯತ್ನಿಸುತ್ತಾಳೆ ಎಂದು ಅವರು ಹೇಳಿದರು. ಇದರೊಂದಿಗೆ ಪ್ರತಿ ಟೂರ್ನಮೆಂಟ್‌ಗೆ ಮಗನ ಜೊತೆಗಿರುವ ಪ್ರಗಣಾನಂದ್ ಅವರ ತಾಯಿಯೂ ಮೆಚ್ಚುಗೆಗೆ ಪಾತ್ರರಾದರು.
Categories
ಕ್ರಿಕೆಟ್ ಸ್ಪೋರ್ಟ್ಸ್

ವೈದಿಕ ಕ್ರೀಡೋತ್ಸವ -2024 ( season-5) ವೈದಿಕರ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಈ ಬಾರಿ ಬರಿಮಾರಿನಲ್ಲಿ ನಡೆಯುವ ವೈದಿಕ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟ 2024ರ ಜನವರಿ 20ರಿಂದ 21ರವರೆಗೆ ನಡೆಯಲಿದೆ ಎಂದು ವೈದಿಕ ಕ್ರೀಡೋತ್ಸವ ಸಮಿತಿ  ಪ್ರಕಟಿಸಿದೆ.
ಗಮನಾರ್ಹವೆಂದರೆ, ವೈದಿಕ ಕ್ರೀಡೋತ್ಸವ ಸಮಿತಿಯು ಆಯೋಜನೆ ಮಾಡುವ ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವಾಗಿದ್ದು ವೈದಿಕರ ವಿವಿಧ ತಂಡಗಳು ಪರಸ್ಪರ ಹಣಾಹಣಿ ನಡೆಸಲಿವೆ. ಈ ವೈದಿಕ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟಕ್ಕೆ ವೈದಿಕರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆಯು ದಿನಾಂಕ 28-09-2023 ನೇ ಗುರುವಾರ ಅನಂತ ಚತುರ್ದಶಿ ಯಂದು ಪ್ರಾರಂಭವಾಗಲಿದೆ. ಹೆಸರನ್ನು ನೋಂದಾಯಿಸುವವರು ಪ್ರವೇಶ ಶುಲ್ಕದ ಬಾಪ್ತು ರೂ. 1500 ನ್ನು ಸುಧೇಶ್ ಭಟ್ ಇವರ ನಂಬರ್ 8197536122 ಗೆ phone pay ಅಥವಾ google pay ಮುಖಾಂತರ  ಕಳುಹಿಸಬೇಕು.
 *ಕ್ರೀಡೋತ್ಸವ ನಡೆಯುವ ದಿನಾಂಕ 2024 ಜನವರಿ 20-21 (ದಶಮಿ – ಏಕಾದಶಿ)  ಶನಿವಾರ ಮತ್ತು ಆದಿತ್ಯವಾರ.* 
ವೈದಿಕ ಕ್ರೀಡೋತ್ಸವಕ್ಕೆ ಈಗಾಗಲೇ ಹಲವಾರು ವಿಧಗಳಲ್ಲಿ ತಯಾರಿ ನಡೆಯುತ್ತಿದ್ದು ಆಯಾಯಾ ವಿಚಾರಕ್ಕೆ ಸಂಬಂಧಿಸಿದಂತೆ (ಆಟ,ಕ್ರೀಡಾಂಗಣ, ಫಲಕ,ಬಹುಮಾನ ಇತ್ಯಾದಿ) ಎಲ್ಲಾ ವಿಷಯಗಳಿಗೂ ಅದರದ್ದೇ ಆದ ಕ್ರಮ ಪ್ರಕಾರ ಆಯೋಜನೆ ಮಾಡಲಾಗುತ್ತಿದೆ. ಪ್ರತಿಯೊಂದು ವಿಚಾರ ಸುಸೂತ್ರವಾಗಿ ನಡೆಯುವ ಸಲುವಾಗಿ ವೈದಿಕ ಕ್ರೀಡೋತ್ಸವ ಸಮಿತಿ ಇದರ ಜೊತೆ ಕೈ ಜೋಡಿಸಬೇಕಾಗಿ ಆಯೋಜಕರಲ್ಲಿ ಪ್ರಮುಖರಾದ ಪಂಡಿತ್ ಕಾಶೀನಾಥ ಆಚಾರ್ಯ ವಿನಂತಿಸಿದ್ದಾರೆ.
 *ವೈದಿಕ ಕ್ರೀಡೋತ್ಸವ ಸಮಿತಿ ಆಶ್ರಯದಲ್ಲಿ ಬರಿಮಾರುವಿನಲ್ಲಿ ಶತಚಂಡಿಕಾ ಮಹಾ ಯಾಗ* 
ವಿಶೇಷ ಎಂಬಂತೆ ಈ ಬಾರಿ ಇದೇ ಬರುವ 2024 ಜನವರಿ 19 ರಂದು ವೈದಿಕ ಸಮೂಹದಿಂದ ಶತಚಂಡಿಕಾ ಯಾಗ ನಡೆಯಲಿದ್ದು ವೈದಿಕ ಕ್ರೀಡೋತ್ಸವ ಸಮಿತಿ ಇದರ  ಜವಾಬ್ದಾರಿ ವಹಿಸಿಕೊಳ್ಳಲಿದೆ. ಈ ಕಾರ್ಯಕ್ರಮ ಲೋಕಕಣ್ಯಾರ್ಥವಾಗಿ ವೈದಿಕರಿಂದಲೇ ಆಯೋಜಿಸಲ್ಪಟ್ಟಿದ್ದು ಕೊಂಕಣಿ ಭಾಷಿಗ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಡಿಸಿಕೊಳ್ಳಬೇಕಾಗಿ ಸಮಿತಿಯ ಅಧ್ಯಕ್ಷರಾದ ಪಂಡಿತ್ ಕಾಶೀನಾಥ ಆಚಾರ್ಯ ಪ್ರಸ್ತಾಪಿಸಿದರು. ಇದಕ್ಕೆ ಬೇಕಾಗುವ ಪೂರ್ವ ತಯಾರಿ ಇನ್ನೇನು ಕೆಲವೇ ದಿನಗಳಲ್ಲಿ  ನಡಯಲಿದ್ದು ಅದರ ಮಾಹಿತಿ  ನೀಡಲಾಗುವುದು. ನಿಗದಿಯಾದ ದಿನಾಂಕ ಜನವರಿ 19  ನೋಟ್ ಮಾಡಿ ಇಟ್ಟುಕೊಳ್ಳಬೇಕಾಗಿ  ವೈದಿಕ ಕ್ರೀಡೋತ್ಸವ ಸಮಿತಿ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಪಂಡಿತ್ ಕಾಶೀನಾಥ ಆಚಾರ್ಯ, ವೈದಿಕ ಕ್ರೀಡೋತ್ಸವ ಸಮಿತಿ ಬರಿಮಾರು ( ದೂರವಾಣಿ ಸಂಖ್ಯೆ 9108242822) ಇವರನ್ನು ಸಂಪರ್ಕಿಸಬಹುದು.
– ಸುರೇಶ್ ಭಟ್ ಮುಲ್ಕಿ
(ಪಂಡಿತ್ ಕಾಶಿನಾಥ ಆಚಾರ್ಯ ಅವರು ಹಂಚಿಕೊಂಡ ಪೋಸ್ಟ್ )
ಕ್ರಿಕೆಟ್ ನ ಹೆಚ್ಚಿನ ಅಪ್ ಡೇಟ್ಸ್ ಗಾಗಿ ಸ್ಪೋರ್ಟ್ಸ್ ಕನ್ನಡ ವನ್ನು ಫಾಲೋ ಮಾಡಿ. ನೇರ ಪ್ರಸಾರಕ್ಕಾಗಿ  ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲನ್ನು ಸಂಪರ್ಕಿಸಿ: 6363022676-9632178537