Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಬೈಂದೂರು ವಿಕ್ರಮ್ ಕ್ರಿಕೆಟ್ ಕ್ಲಬ್ ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ಬೈಂದೂರು: ಬೈಂದೂರು ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಆಸಕ್ತ ಮಕ್ಕಳಿಗೆ  ಕ್ರಿಕೆಟ್ ತರಬೇತಿಯನ್ನು ನೀಡಿ   ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನಾಗಿ ಮಾರ್ಪಡಿಸಲು  ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್  ಕ್ಲಬ್  ಬೈಂದೂರು ವಾರ್ಷಿಕ ತರಬೇತಿ ಶಿಬಿರವನ್ನು ಆರಂಭಿಸಿದೆ.
ಬೈಂದೂರು ನಗರದ ವಿಕ್ರಮ್ ಕ್ರಿಕೆಟ್  ಕ್ಲಬ್   ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಏಪ್ರಿಲ್  1 ರಿಂದ ಆರಂಭಗೊಳ್ಳಲಿದ್ದು, ಮೇ 31ರವರೆಗೆ ಬೈಂದೂರಿನ  ಮೈದಾನದಲ್ಲಿ ಶಿಬಿರ ನಡೆಸಿ ತರಬೇತಿ ನೀಡುತ್ತಿದೆ. 10 ವರ್ಷದ ಮಕ್ಕಳಿಂದ 23 ವರ್ಷದೊಳಗಿನ ಬಾಲಕ ಬಾಲಕಿಯರಿಗೆ ಇಲ್ಲಿ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಪಾಲ್ಗೊಂಡವರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಲಾಗುವುದು.
ಕಳೆದ ಬಹಳಷ್ಟು ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ ವಿಕ್ರಮ್ ಕ್ರಿಕೆಟ್  ಕ್ಲಬ್  ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಆಯೋಜಿಸಿ ಪ್ರತಿಭಾವಂತ ಕ್ರಿಕೆಟ್ ಪಟುಗಳ ಶೋಧಕಾರ್ಯದಲ್ಲಿ ನಿರತವಾಗಿದೆ . ಇಲ್ಲಿ ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ ಎಂದು ಕ್ಲಬ್ ನ ದಿನೇಶ್ ಗಾಣಿಗ ಬೈಂದೂರು ತಿಳಿಸಿದ್ದಾರೆ.
ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.
ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್  ಕ್ಲಬ್  ಬೈಂದೂರು ಸಂಸ್ಥೆಯ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕ್ರಿಕೆಟ್ ಕೋಚ್ ಪ್ರಕಾಶ್ ಕುಲಾಲ್ 7678022778 ಅಥವಾ ದಿನೇಶ್ ಗಾಣಿಗ 6363852771, ರಾಜೇಶ್ ಆಚಾರ್ ಬೈಂದೂರು 9916440337 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಭರವಸೆಯ ಬೆಳಕು

ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಯ ವೆಚ್ಚ ಭರಿಸಲು ಸ್ಪಂದನ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ  ಡಿಪಾರ್ಟ್ ಮೆಂಟ್ ಆಫ್ ಜನರಲ್ ಸರ್ವಿಸ್, ಏರ್ ಕಂಡೀಶನ್ ಡಿಪಾರ್ಟ್ ಮೆಂಟ್ ಇವರ ನೇತೃತ್ವದಲ್ಲಿ ಸ್ಪಂದನ ಟ್ರೋಫಿ-2024, ಸೀಸನ್ 2 ಎನ್ನುವ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಮಾಹೆ ಉದ್ಯೋಗಿಗಳಿಗೆ ಆಯೋಜಿಸಿದೆ. ಮಾರ್ಚ್ 16 ಮತ್ತು 17 ರಂದು ಮಾಹೆ ಎಂಡ್ ಪಾಯಿಂಟ್ ಗ್ರೌಂಡ್  ನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಈ ಟೂರ್ನಮೆಂಟ್ ಆಯೋಜನೆಗೊಂಡಿದೆ.
ಮಾರ್ಚ್ 16 ರಂದು  ಬೆಳಗಿನ ಜಾವ 10:00 ಗಂಟೆಗೆ ಈ ಪಂದ್ಯಾಟ ಉದ್ಘಾಟನೆ ನಡೆಯಲಿದೆ. ಮಾಹೆ ಮಣಿಪಾಲದ ಉಪಕುಲಪತಿ  ಲೆಫ್ಟಿನೆಂಟ್ ಜನರಲ್ ಡಾ.ಎಂ ಡಿ ವೆಂಕಟೇಶ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಈ ಟೂರ್ನಮೆಂಟ್ಗೆ ಚಾಲನೆ ನೀಡಲಿರುವರು. ಗೌರವ ಅತಿಥಿಗಳಾಗಿ ಮಾಹೆ ಮಣಿಪಾಲದ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಜಿ. ಸಿ. ಮುತ್ತಣ್ಣ, ಪ್ರೊ ವೈಸ್ ಚಾನ್ಸಲರ್ ಹೆಲ್ತ್ ಸೈನ್ಸಸ್ ನ ಡಾ. ಶರತ್ ರಾವ್ ಕೆ, ಕೆ ಎಂ ಸಿ ಮಣಿಪಾಲದ ಡೀನ್ ಡಾಕ್ಟರ್ ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್,ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಅವಿನಾಶ್ ಶೆಟ್ಟಿ,ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ (PHO) ವಿಭಾಗದ ಮುಖ್ಯಸ್ಥರು ಡಾ. ವಾಸುದೇವ್ ಭಟ್, ಉಜ್ವಲ್ ಕನ್ಸ್ಟ್ರಕ್ಷನ್ಸ್ ಮತ್ತು ಡೆವಲಪ್ ಮೆಂಟ್ ಮಣಿಪಾಲದ ಶ್ರೀ ಅಜಯ್ ಪಿ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.
17 ಮಾರ್ಚ್ 2024 ರಂದು ಟೂರ್ನಿಯು ಮುಕ್ತಾಯಗೊಂಡು ಆ ಬಳಿಕ ಸುಮಾರು ಐದೂವರೆ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಟೂರ್ನಮೆಂಟ್ ನ ಲೈವ್ ಸ್ಟ್ರೀಮಿಂಗ್ ಇರಲಿದೆ.
`Donate to Serve a Life’ಎಂಬ ಟ್ಯಾಗ್ ಲೈನ್ ನೊಂದಿಗೆ  ಮಣಿಪಾಲ್ ಆಕ್ಸೆಸ್ ಲೈಫ್ ಇದು ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹು-ಶಿಸ್ತಿನ ಬೆಂಬಲ ಆರೈಕೆಯನ್ನು ಒದಗಿಸುತ್ತದೆ. ‘.ಈ ಟೂರ್ನಿಯಿಂದ ಸಂಗ್ರಹಿಸಿದ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ಉಪಯೋಗಿಸಲಾಗುವುದು. ಮಕ್ಕಳ  ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ  ಈ ಕ್ರಿಕೆಟ್ ಪಂದ್ಯಾವಳಿಯು  ಬಹಳಷ್ಟು ಅರ್ಥಪೂರ್ಣವಾಗಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ)ಕಾರ್ಕಳ ಹೆಬ್ರಿ ವಲಯ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ

ಕಾರ್ಕಳ-ಆರ್.ಸಿ‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಹೆಬ್ರಿ ವಲಯ ಇವರ ಆಶ್ರಯದಲ್ಲಿ ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥವಾಗಿ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಮಾರ್ಚ್ ದಿನಾಂಕ 29 ಶುಕ್ರವಾರದಂದು ಕಾರ್ಕಳ‌ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು 3000 ರೂ ಪ್ರವೇಶ ದರ ಪಾವತಿಸಬೇಕಿದೆ.
ಟೂರ್ನಮೆಂಟ್ ನ  ಪ್ರಥಮ ಪ್ರಶಸ್ತಿ ವಿಜೇತ ತಂಡ 22,222 ರೂ ನಗದು,ದ್ವಿತೀಯ 11,111 ರೂ ನಗದು ಸಹಿತ ಆಕರ್ಷಕ ಬಹುಮಾನಗಳನ್ನು ಪಡೆಯಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೋಟ ದಾಮೋದರ ಆಚಾರ್ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟದ ನೇರ ಪ್ರಸಾರ  ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ 9972718414 ಮತ್ತು 9845479943 ಈ ನಂಬರ್ ಗಳನ್ನು ಸಂಪರ್ಕಿಸಬಹುದು
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಮುದರಂಗಡಿ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮುದರಂಗಡಿ ಫ್ರೆಂಡ್ಸ್ ಟ್ರೋಫಿ

ಕಾಪು-ಇಲ್ಲಿನ ಮುದರಂಗಡಿ ಫ್ರೆಂಡ್ಸ್ ಆಶ್ರಯದಲ್ಲಿ ಮುದರಂಗಡಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ “ಮುದರಂಗಡಿ ಫ್ರೆಂಡ್ಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಮಾರ್ಚ್ 2 ಮತ್ತು 3 ರಂದು ಮುದರಂಗಡಿ ಪಂಚಾಯತ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಈ ಪಂದ್ಯಾಟ ನಡೆಯಲಿದ್ದು,
ಮಾರ್ಚ್ 2 ರಂದು ಮಲ್ಪೆ,ದೊಡ್ಡಣಗುಡ್ಡೆ,ಬೀಡಿನಗುಡ್ಡೆ,
ಮಣಿಪಾಲ,ಉದ್ಯಾವರ,ಕಟಪಾಡಿ,ಕಾಪು,ಶಿರ್ವ,ಬೆಳ್ಮಣ್,ನಂದಳಿಕೆ,ಕೋಡೂರು,ಮೂಡುಬೆಳ್ಳೆ,ಮುದರಂಗಡಿ,ನಿಟ್ಟೆ,ಇನ್ನಂಜೆ,ಉಚ್ಚಿಲ,ಎರ್ಮಾಳ್,ಪಡುಬಿದ್ರಿ,ಹೆಜಮಾಡಿ,ಬೆಳಪು,ಮುಲ್ಕಿ,ಅಲೆವೂರು,ಹಿರಿಯಡಕ,ಬೈಲೂರು,ಪಲಿಮಾರು,ಪಾಂಗಾಳ ವಲಯದ ಒಟ್ಟು 12 ತಂಡಗಳು
ಹಾಗೂ ಮಾರ್ಚ್ 3 ರಂದು ರಾಜ್ಯಮಟ್ಟದ ಪ್ರಸಿದ್ಧ ತಂಡಗಳಾದ ರಿಯಲ್ ಫೈಟರ್ಸ್ ಮಲ್ಪೆ,ಇಜಾನ್ ಸ್ಪೋರ್ಟ್ಸ್ ಉಡುಪಿ,ಜಾನ್ಸನ್ ಕುಂದಾಪುರ,ಹೊಸನಗರ
ಫ್ರೆಂಡ್ಸ್, ಪ್ರಿನ್ಸ್ ಇಲೆವೆನ್ ಪಿಲಾರ,ಮಾರುತಿ ಮಟ್ಟು ಈ 6 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ಪ್ರಥಮ ಬಹುಮಾನ 50,000 ರೂ ನಗದು,ದ್ವಿತೀಯ ಬಹುಮಾನ 30,000 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಗುತ್ತಿದೆ.
ಪಂದ್ಯಾಟದ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್

ವಿಶಿಷ್ಟ-ವಿನೂತನ ಚಿಂತನೆಯೊಂದಿಗೆ ಫ್ರೆಂಡ್ಸ್ ಕಪ್ 2024-ಆಯೋಜಕರೇ ಇಲ್ಲಿ ಪ್ರಾಯೋಜಕರು-ವ್ಯವಸ್ಥಾಪಕರಿಗಿಲ್ಲ ಖರ್ಚು ವೆಚ್ಚದ ಚಿಂತೆ….!!!

ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಫ್ರೆಂಡ್ಸ್ ಬೆಂಗಳೂರು ವಿಭಿನ್ನ ಚಿಂತನೆ
ಬೆಂಗಳೂರು-ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿ ಚಿಂತನೆಯೊಂದಿಗೆ,ತಂಡಗಳನ್ನು ಕಟ್ಟಿ ಬೆಳೆಸಲು ಕಷ್ಟ ಸಾಧ್ಯವಾದ ಈ ಕಾಲ ಘಟ್ಟದಲ್ಲೂ ಪ್ರಚಲಿತವಿರುವ ತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ
ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ಸ್ ಅಸೋಸಿಯೇಷನ್(ರಿ) ಇವರ ಆಶ್ರಯದಲ್ಲಿ ಸತತ ಎರಡನೇ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ “ಫ್ರೆಂಡ್ಸ್ ಕಪ್-2024” ಆಯೋಜಿಸಲಾಗಿದೆ.
ಪೀಣ್ಯ ಎರಡನೇ ಹಂತದ ಬಳಿ ಪಾಳು ಬಿದ್ದ ಜಮೀನನ್ನು ಸತತ ಐದಾರು ತಿಂಗಳ ಶ್ರಮದಿಂದ ಅತ್ಯಂತ ಸುಂದರ ಕ್ರೀಡಾಂಗಣವಾಗಿ ನಿರ್ಮಿಸಿ,ಫ್ರೆಂಡ್ಸ್ ಕಪ್-2023 ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು,
ಉಚಿತ ಎಂಟ್ರಿಯೊಂದಿಗೆ ಆಯೋಜಿಸಿ ಯಶಸ್ಸು ಸಾಧಿಸಿದ್ದು ಅಪಾರ ಜನಮನ್ನಣೆಗೆ ಪಾತ್ರವಾಗಿತ್ತು.ಕಳೆದ ಮೂರು ವರ್ಷಗಳಿಂದ ಗೆಲುವಿನ ಲಯದಲ್ಲಿ ಇದ್ದ ಫ್ರೆಂಡ್ಸ್ ಬೆಂಗಳೂರು 2023 ಫ್ರೆಂಡ್ಸ್ ಕಪ್ ಪಂದ್ಯಾಟದ ಬಳಿಕದ ಋತುವಿನಲ್ಲಿ ಸತತ 8 ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ.
ರೇಣುಗೌಡ ಸಾರಥ್ಯದ ಫ್ರೆಂಡ್ಸ್ ಬೆಂಗಳೂರು ತಂಡ ಇದೀಗ ಅದೇ ಮೈದಾನದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಇದೇ ಬರುವ ಮಾರ್ಚ್ 22,23 ಮತ್ತು 24 ರಂದು ಆಯೋಜಿಸಿದೆ.
16 ತಂಡಗಳ ನಡುವಿನ ಸೆಣಸಾಟ-ವಿದೇಶದ 2 ತಂಡಗಳು-ಹೊರ ರಾಜ್ಯದ 4 ತಂಡಗಳು ಭಾಗಿ
ಫ್ರೆಂಡ್ಸ್ ಬೆಂಗಳೂರು ತಂಡ 2023 ರಲ್ಲಿ ಆಯೋಜಿಸಿದ್ದ ಪಂದ್ಯಾಟದಲ್ಲಿ ಶ್ರೀಲಂಕಾ,ಲಕ್ನೋ,ಮಧ್ಯಪ್ರದೇಶ,
ಮುಂಬಯಿ ಸಹಿತ ಒಟ್ಟು 49 ತಂಡಗಳು ಭಾಗವಹಿಸಿದ್ದು,
ಈ ಬಾರಿ ವಿದೇಶದ 2 ತಂಡ,ಹೊರ ರಾಜ್ಯದ 4 ತಂಡ ಹಾಗೂ 2023-24 ಕ್ರಿಕೆಟ್ ಋತುವಿನಲ್ಲಿ ಅತೀ ಹೆಚ್ಚು ಪಂದ್ಯಾಟಗಳಲ್ಲಿ ಭಾಗವಹಿಸಿದ ಕರ್ನಾಟಕದ 10 ತಂಡಗಳಿಗೆ ಅವಕಾಶ ನೀಡಲಾಗಿದ್ದು,ದೇಶ ವಿದೇಶಗಳಲ್ಲಿ ಅಪಾರ ಸಾಧನೆಗೈದ ಟೆನಿಸ್ಬಾಲ್ ಕ್ರಿಕೆಟ್ ನ ಖ್ಯಾತನಾಮ‌ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಫ್ರೆಂಡ್ಸ್ ಕಪ್ ನ ವಿಜೇತ ತಂಡ 5,05,000 ರೂ,ದ್ವಿತೀಯ ಸ್ಥಾನಿ 2,50,000 ರೂ ನಗದು ಸಹಿತ ಮಿನುಗುವ ಆಕರ್ಷಕ ಫ್ರೆಂಡ್ಸ್ ಕಪ್ ಗಳನ್ನು ಪಡೆಯಲಿದ್ದಾರೆ.
ಫ್ರೆಂಡ್ಸ್ ಬೆಂಗಳೂರು ವಿನೂತನ ಪ್ರಯೋಗ-ಆಯೋಜಕರಿಂದಲೇ ಪ್ರಾಯೋಜಕರ ವ್ಯವಸ್ಥೆ-ವ್ಯವಸ್ಥಾಪಕರಿಗಿಲ್ಲ ಖರ್ಚು ವೆಚ್ಚದ ಚಿಂತೆ
ಇತ್ತೀಚಿನ ದಿನಗಳಲ್ಲಿ ತಂಡಗಳನ್ನು ಕಟ್ಟಿ ಬೆಳೆಸಲು ಅತ್ಯಂತ ಕಷ್ಟ ಸಾಧ್ಯವಾದ ಈ ಕಾಲ ಘಟ್ಟದಲ್ಲಿ
ಫ್ರೆಂಡ್ಸ್ ಬೆಂಗಳೂರು ತಂಡ ಈ ಬಗ್ಗೆ ವಿನೂತನ ಚಿಂತನೆ ನಡೆಸಿ ಫ್ರೆಂಡ್ಸ್ ಕಪ್ ನಲ್ಲಿ ಕಾರ್ಯರೂಪಕ್ಕೆ ತರಲಿದ್ದಾರೆ‌
ಫ್ರೆಂಡ್ಸ್ ಕಪ್-2024 ರಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳಿಗೂ ಆಯೋಜಕರೇ ಪ್ರಾಯೋಜಕರನ್ನು ನೀಡುತ್ತಿರುವುದು ಟೆನಿಸ್ಬಾಲ್ ಕ್ರಿಕೆಟ್ ಕ್ಷೇತದಲ್ಲೆ ಇದೇ ಮೊದಲಾಗಿದೆ‌.
“ಅಳಿವಿನಂಚಿನಲ್ಲಿರುವ ಕ್ರಿಕೆಟ್ ಉಳಿಸಿ ಬೆಳೆಸುವುದು ಈ ಪಂದ್ಯಾಟದ ಮುಖ್ಯ ಉದ್ದೇಶ” ಎಂದು ಫ್ರೆಂಡ್ಸ್ ಬೆಂಗಳೂರು ತಂಡದ ಪ್ರವರ್ತಕರಾದ ರೇಣು ಗೌಡ ಇವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಹರಿ ಓಂ ಗಂಗೊಳ್ಳಿ ಪ್ರಸ್ತುತಪಡಿಸುತ್ತಿದೆ ಹರಿ ಓಂ ಪ್ರೀಮಿಯರ್ ಲೀಗ್

ಜಿ ಎಸ್ ಬಿ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದಂತಹ ಹರಿ ಓಂ ಗಂಗೊಳ್ಳಿ ಸುಮಾರು ಎರಡು ದಶಕಕ್ಕೂ ಮಿಕ್ಕಿ ಜಿ ಎಸ್ ಬಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾ ಬಂದಿದೆ.
ಹರಿ ಓಂ ಗಂಗೊಳ್ಳಿ  ಮಾರ್ಚ್ 9 ರಂದು ಗಂಗೊಳ್ಳಿಯ ಎಸ್ ವಿ ಹೈಯರ್ ಪ್ರೈಮರಿ ಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ತೀವ್ರ ಪೈಪೋಟಿಯೊಂದಿಗೆ ಜಿ ಎಸ್ ಬಿ ಸಮುದಾಯವನ್ನು ಆಕರ್ಷಿಸುವ ಕ್ರಿಕೆಟ್ ಪಂದ್ಯಾವಳಿಯ ಬಹು ನಿರೀಕ್ಷಿತ ಹರಿ ಓಂ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ 2024 ಅನ್ನು ಘೋಷಿಸಲು ರೋಮಾಂಚನಗೊಂಡಿದೆ. ಇದು ಹೊನಲು ಬೆಳಕಿನ 30 ಗಜಗಳ  ಫ್ರ್ಯಾಂಚೈಸ್ ಆಧಾರಿತ ಕ್ರಿಕೆಟ್ ಪಂದ್ಯಾಟ ವಾಗಿದ್ದು  ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ  ಹಲವಾರು ಜಿ ಎಸ್ ಬಿ ಕ್ರಿಕೆಟಿಗರು ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ. ಹರಾಜಿನ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ನೀಡಲಾಗುವುದು.
ಇದು ಹರಿ ಓಂ ಗಂಗೊಳ್ಳಿ ಹಮ್ಮಿಕೊಂಡ ಐದನೇ ಆವೃತ್ತಿಯ ಪಂದ್ಯಾವಳಿ. ಎರಡು ದಿನಗಳ ಈವೆಂಟ್ ಕ್ರೀಡಾ ಮನೋಭಾವ, ಸೌಹಾರ್ದತೆ , ಬಾಂಧವ್ಯ ಬೆಸೆಯುವ ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿದ ಆಕ್ಷನ್-ಪ್ಯಾಕ್ಡ್ ಕ್ರಿಕೆಟ್ ಪಂದ್ಯಗಳನ್ನು ಖಾತರಿಪಡಿಸುತ್ತದೆ. ವಿಜೇತರು ಮತ್ತು ರನ್ನರ್ಸ್‌ಅಪ್‌ಗಳಿಗೆ ಕ್ರಮವಾಗಿ ರೂ 55,555 ಮತ್ತು ರೂ 33,333 ನಗದು ಬಹುಮಾನ ನೀಡಲಾಗುವುದು. ಉತ್ತಮ ಆಟಗಾರರಿಗೆ ಹಲವಾರು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.
“ನಾವು  ಹರಿ ಓಂ  ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2024 – ಸೀಸನ್ V ಅನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಕಳೆದ 5  ವರ್ಷಗಳಿಂದಲೂ ಹಲವು ಪಂದ್ಯಾವಳಿಗಳು ನಡೆದಿದ್ದರೂ ನಾವು  ಈ ಬಾರಿಯ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ ಅನ್ನು ವಿಭಿನ್ನವಾಗಿ ಮಾಡಲು ಯೋಜಿಸಿದ್ದೇವೆ “ಎಂದು ಆಯೋಜಕರಲ್ಲಿ ಓರ್ವರಾದ ಶ್ರೀ ನಾಗೇಶ್ ಪೈ ಹೇಳಿದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ತಾಲೂಕು ಯುವ ವಿಪ್ರ ವೇದಿಕೆ ಕುಂದಾಪುರ ಇವರ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ವಿಪ್ರ ಟ್ರೋಫಿ-2024

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್(ರಿ) ಕುಂದಾಪುರ ಮತ್ತು ತಾಲೂಕು ಮಹಿಳಾ ವೇದಿಕೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ,ವಿಪ್ರರಿಗಾಗಿ ಮಾರ್ಚ್ 9,10 ರಂದು ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ವಿಪ್ರ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ‌ ಹಾಗೂ ದ್ವಿತೀಯ ಪ್ರಶಸ್ತಿ ರೂಪದಲ್ಲಿ ಆಕರ್ಷಕ ನಗದು ಮತ್ತು ಪಾರಿತೋಷಕಗಳನ್ನು ನೀಡಲಾಗುತ್ತಿದೆ.
ಇದಲ್ಲದೇ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ ನಡೆಯಲಿದ್ದು,ಸಮಾರಂಭದ ವೇದಿಕೆಯಲ್ಲಿ ರಸಮಂಜರಿ,ಗಾನವಿನೋದ,ಕ್ರೀಡಾ ಗೌರವ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ವಿಪ್ರ ವೇದಿಕೆ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಅವನೀಶ ಹೊಳ್ಳರವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಪ್ರಕೃತಿ ನ್ಯಾಶ್ ಶಿಸ್ತುಬದ್ಧ ಪ್ರದರ್ಶನಕ್ಕೊಲಿದ ಶಿಸ್ತಿಗಾಗಿ ಕ್ರಿಕೆಟ್ ಶಿರೋನಾಮೆಯ ವೆಂಕಟರಮಣ ಟ್ರೋಫಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ) ಇವರ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವೆಂಕಟರಮಣ ಟ್ರೋಫಿ-2024 ಕಟಪಾಡಿ ಮಣ್ಣುಗಡ್ಡೆ ಮೈದಾನದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು.

ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆದ ಈ ಪಂದ್ಯಾಟದಲ್ಲಿ 15 ಬಲಿಷ್ಠ ತಂಡಗಳು ಭಾಗವಹಿಸಿದ್ದವು.
ವಿಶೇಷವಾಗಿ ಸ್ಥಳೀಯ ತಂಡಗಳು ಕೂಡ ರಾಷ್ಟ್ರೀಯ ಮಟ್ಟದ ತಂಡಗಳಿಗೆ ಪೈಪೋಟಿ ನೀಡಿದ ಪರಿ ಕ್ರೀಡಾ ಪ್ರೇಕ್ಷಕರನ್ನು ಅಚ್ಚರಿಗೆ ಒಳಪಡಿಸಿತ್ತು.

ಪ್ರಕೃತಿ ನ್ಯಾಶ್ ಶಿಸ್ತಿನ ಪ್ರದರ್ಶನಕ್ಕೆ ಒಲಿದ ವೆಂಕಟರಮಣ ಟ್ರೋಫಿ

 

ಶಿಸ್ತಿಗಾಗಿ ಕ್ರಿಕೆಟ್ ಶಿರೋನಾಮೆಯಡಿ ನಡೆದ ಈ ಪಂದ್ಯಾಟದಲ್ಲಿ ಶಿಸ್ತು ಹಾಗೂ ಸಂಯೋಜಿತ ತಂಡ ನ್ಯಾಶ್ ಬೆಂಗಳೂರು ಚಾಂಪಿಯನ್ ತಂಡವಾಗಿ ಮೂಡಿಬಂದಿತು.

ಲೀಗ್ ಹಂತದ ರೋಚಕ ಕದನದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ಪ್ರಕೃತಿ ನ್ಯಾಶ್-ಇಜಾನ್ ಸ್ಪೋರ್ಟ್ಸ್ ಉಡುಪಿ ಹಾಗೂ ಜಾನ್ಸನ್ ಕುಂದಾಪುರ-ಫ್ರೆಂಡ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪ್ರಕೃತಿ ನ್ಯಾಶ್ ಮಹೇಶ್ ಬಿರುಸಿನ 18 ರನ್ ಹಾಗೂ ಪ್ರಜ್ವಲ್ 10 ರನ್ ನೆರವಿನಿಂದ ನಿಗದಿತ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 44 ರನ್ ಪೇರಿಸಿತ್ತು.

ರನ್ ಚೇಸಿಂಗ್ ವೇಳೆ ಆರಂಭಿಕ ಹಂತದ ಹಠಾತ್ ಕುಸಿತದ ಬಳಿಕ ಅನಿಲ್ ಖಾರ್ವಿ ತಂಡವನ್ನು ಆಧರಿಸಿದರೂ ನ್ಯಾಶ್ ಮೊನಚಾದ ಬೌಲಿಂಗ್ ದಾಳಿ ಎದುರು 6 ಓವರ್ ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 31 ರನ್ ಗಳಿಸಲಷ್ಟೇ ಶಕ್ತವಾಯಿತು.

ನ್ಯಾಶ್ ಈ ಪಂದ್ಯದಲ್ಲಿ ಹೊಸ ಮುಖಗಳಾದ ನೀತು,ಬೊಮ್ಮಾಲಿ ಸುರೇಶ್,ಪ್ರಜ್ವಲ್,ಶಮಾಝ್,ನಿಖಿಲ್ ಪರಿಚಯಿಸಿದರೆ,
ಜಾನ್ಸನ್ ಕುಂದಾಪುರ ಜಶಾಂತ್,ಸೂರಜ್,ಅಶ್ವಿಕ್ ನಿತೇಶ್ ರನ್ನು ಪರಿಚಯಿಸಿದ್ದು,ಈ ಎಲ್ಲಾ ಆಟಗಾರರು ಲೀಗ್ ಹಂತದಿಂದ ಫೈನಲ್ ಫಲಿತಾಂಶದ ವರೆಗೂ ಅತ್ಯುತ್ತಮ ಪ್ರದರ್ಶನ ನೀಡಿ
ಗಮನ ಸೆಳೆದರು.

ವಿಶಾಲವಾದ ಮೈದಾನವಾದ್ದರಿಂದ ಒಂಟಿ ಅವಳಿ ಓಟಗಳ ಮಹತ್ವವೂ ಆಟಗಾರರಿಗೆ ಮನವರಿಕೆ ಆಗಿತ್ತು.ಲೀಗ್ ಹಂತದ ಪಂದ್ಯವೊಂದರಲ್ಲಿ ಗುರುಗಣೇಶ್ ನೇಜಾರು ತಂಡದ ಆರಂಭಿಕ ಜೋಡಿ ಪ್ರಸಿದ್ಧ್ ಮತ್ತು ಪ್ರಥ್ವಿ ಈರ್ವರ 63 ರನ್ ಗಳ ಜೊತೆಯಾಟ ಗಮನ ಸೆಳೆದಿತ್ತು.

ಅಗಲಿದ ಮಿತ್ರರ ಸವಿನೆನಪಿಗಾಗಿ ಪೆವಿಲಿಯನ್ ನಿರ್ಮಾಣ

ಕಳೆದ ವರ್ಷವಷ್ಟೇ ಅಗಲಿದ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ಮಲ್ಲೇಶ್ ಬಂಗೇರ ಮತ್ತು ದಿ.ದಯಾನಂದ ಸಾಲ್ಯಾನ್ ಇವರ ಸವಿನೆನಪಿಗಾಗಿ ಆಟಗಾರರ ಪೆವಿಲಿಯನ್ ನಿರ್ಮಿಸಿ ಅಗಲಿದ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಿದರು.

ವೆಂಕಟರಮಣ ಸಂಸ್ಥೆಯ ಸೇವಾಕಾರ್ಯ ವಿಶ್ವಕ್ಕೆ ಮಾದರಿ-ಗುರ್ಮೆ ಸುರೇಶ್ ಶೆಟ್ಟಿ

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ) ಕಳೆದ 35 ವರ್ಷಗಳಿಂದ ಸಮಾಜದ ನೊಂದವರ ಬೆಂದವರ ಧ್ವನಿಯಾಗಿ,ಸಮಾಜದ ಕಟ್ಟಕಡೆಯ ಜನರ ಕಣ್ಣೀರೊರೆಸಿ,ಸಾಧಕರ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತಿದೆ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಸಂಸ್ಥೆಯ ಸೇವಾಕಾರ್ಯ ವಿಶ್ವಕ್ಕೆ ಮಾದರಿ ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟೆನಿಸ್ಬಾಲ್ ಕ್ರಿಕೆಟ್ ನ ಏಕೈಕ ಸಂಸ್ಥೆ “ಮಾರುತಿ ಜನಸೇವಾ ಸಂಘ(ರಿ) ಉಳ್ಳಾಲ” ಸಂಸ್ಥೆಯನ್ನು ಗೌರವಿಸಲಾಯಿತು.ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿ ತೇಜಸ್ವಿನಿ ಉದಯ್ ಕುಮಾರ್  ಕಟಪಾಡಿ,ಸಂಗೀತ ಕ್ಷೇತ್ರದ ಸಾಧಕಿ ಸಂಚಲಿ ಪಿತ್ರೋಡಿ,ಪ್ರತಿಭಾನ್ವಿತ ವಿದ್ಯಾರ್ಥಿನಿ ರಿತಿಕಾ ಪಿತ್ರೋಡಿ ಹಾಗೂ ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ವಿ.ಎಸ್.ಸಿ ಕಾರಣ್ಯ ಯೋಜನೆಯ ಫಲಾನುಭವಿಗಳಿಗೆ ಸಹಾಯ ಧನ ವಿತರಿಸಲಾಯಿತು.

ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್,ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಾಲ್ಯಾನ್,ದಿವಾಕರ ಕುಂದರ್,ಜಿತೇಂದ್ರ ಶೆಟ್ಟಿ ಉದ್ಯಾವರ,ಗೌತಮ್ ಶೆಟ್ಟಿ ಕುಂದಾಪುರ,

ಗೋಪಾಲ ಅಮೀನ್ ಪಿತ್ರೋಡಿ, ಗಂಗಾಧರ ಕರ್ಕೇರ,ವೆಂಕಟರಮಣ ಸಂಸ್ಥೆ ಅಧ್ಯಕ್ಷ ನವೀನ್ ಸಾಲ್ಯಾನ್,ಉಪಾಧ್ಯಕ್ಷ ವಿಜಯ್ ಕೋಟ್ಯಾನ್,
ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ, ಕ್ರೀಡಾ ಕಾರ್ಯದರ್ಶಿ
ಶಶಿಕಾಂತ್ ಪಿತ್ರೋಡಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯಶಸ್ವಿ ಫಿಶ್ ಮೀಲ್&ಆಯಿಲ್ ಕಂ ಪಿತ್ರೋಡಿ ಪ್ರವರ್ತಕರಾದ ಸಾಧು ಸಾಲ್ಯಾನ್ ರವರು ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.

ವಿ.ಎಸ್‌‌.ಸಿ ಕಾರುಣ್ಯ ಯೋಜನೆಗೆ ಚಾಲನೆ


ವೆಂಕಟರಮಣ ಸಂಸ್ಥೆ ಕಳೆದ 35 ವರ್ಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಶೀರ್ಷಿಕೆಯಡಿ ಸೇವಾ ನಿರತರಾಗಿದ್ದು,ಈ ಬಾರಿ ಸಾಮಾಜಿಕ ಕಳಕಳಿಯ ಚಿಂತನೆಯೊಂದಿಗೆ ಸಮಾಜದ ಅಶಕ್ತರ ನೆರವಿಗಾಗಿ ಸದಾ ಬೆರೆಯುವ ಉದ್ದೇಶದಿಂದ “ವಿ.ಎಸ್.ಸಿ ಕಾರುಣ್ಯ-ಇದು ನೆರವಿನ ಹಸ್ತ” ಯೋಜನೆಗೆ ಚಾಲನೆ ನೀಡಿದರು.ಉದ್ಯಮಿ ಲೋಹಿತ್ ಕುಮಾರ್ ಪಿತ್ರೋಡಿ “ಕಾರುಣ್ಯ ನೆರವಿನ ಹಸ್ತ” ಇದರ ಉದ್ಘಾಟನೆ ನೆರವೇರಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ನಯನಾ ಗಣೇಶ್ ಉದ್ಯಾವರ,ಪ್ರಮೀಳಾ ಜತ್ತನ್ನ,ಶರತ್ ಶೆಟ್ಟಿ ಪಡುಬಿದ್ರಿ,ಜಿತೇಂದ್ರ ಶೆಟ್ಟಿ ಉದ್ಯಾವರ,ಗೋಪಾಲ ಅಮೀನ್,ಗಂಗಾಧರ ಕರ್ಕೇರ,ಅಧ್ಯಕ್ಷ ನವೀನ್ ಸಾಲ್ಯಾನ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭ ಸಾಹಿತಿ ನವೀನ್ ಕುಮಾರ್ ಪಡ್ರೆ,ರಾಷ್ಟ್ರ ಮಟ್ಟದ ಚಿತ್ರ ಕಲಾವಿದ ಅಜಯ್ ಕುಮಾರ್ ಪಿತ್ರೋಡಿ ಇವರನ್ನು ಗೌರವಿಸಲಾಯಿತು.

ವೀಕ್ಷಕ ವಿವರಣೆಯಲ್ಲಿ ವಿನಯ್ ಉದ್ಯಾವರ,ಪ್ರಶಾಂತ್ ಅಂಬಲಪಾಡಿ,ಅರವಿಂದ್ ಮಣಿಪಾಲ ಮತ್ತು ಶಿವು ಸಹಕರಿಸಿದರೆ,ರಾಘು ಕಡೂರು,ಸ್ವರೂಪ್ ತೀರ್ಥಹಳ್ಳಿ ತಂಡ ತೀರ್ಪುಗಾರರಾಗಿ ಭಾಗವಹಿಸಿದರು.

ಮೂರು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದ ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮೈದಾನದಲ್ಲಿ ಸಹಸ್ರಾರು ಕ್ರೀಡಾಪ್ರೇಮಿಗಳು ವೀಕ್ಷಿಸಿದ್ದು ,ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ಮೂಲಕ 2 ಲಕ್ಷಕ್ಕೂ ಅಧಿಕ ಮಂದಿ ಪಂದ್ಯಾಟದ ಸವಿಯನ್ನು ಸವಿದರು.

ಚಿತ್ರಕೃಪೆ-ಸುರಭಿ ರತನ್

Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಸನ್ ರೈಸ್ ಟ್ರೋಫಿ-2024 ಐ.ಪಿ‌‌.ಎಲ್ ಮಾದರಿಯ ಸ್ಥಳೀಯ ಆಟಗಾರರ ಕ್ರಿಕೆಟ್ ಪಂದ್ಯಾಟ

ಬೈಂದೂರು-ಸನ್ ರೈಸ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಹಳಗೇರಿ ಇವರ ಆಶ್ರಯದಲ್ಲಿ 7 ನೇ ಬಾರಿಗೆ 60 ಗಜಗಳ “ಸನ್ ರೈಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಫೆಬ್ರವರಿ 17 ಮತ್ತು 18 ರಂದು ಹಳಗೇರಿ ಶಾಲೆಯ ಬಳಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ‌ ಪ್ರಶಸ್ತಿ ವಿಜೇತ ತಂಡ 55,555,ದ್ವಿತೀಯ 33,333 ರೂ ನಗದು ಸಹಿತ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ.
ವಿಶೇಷವಾಗಿ ಐ.ಪಿ‌.ಎಲ್ ಬಿಡ್ಡಿಂಗ್ ಮಾದರಿಯಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದ್ದು,ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ,ವಿದ್ಯಾರ್ಥಿ ವೇತನ ಮತ್ತು ಅಶಕ್ತರಿಗೆ ನೆರವಿನ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್- Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ವೆಂಕಟರಮಣ ಟ್ರೋಫಿ-2024

ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ವೇಳಾಪಟ್ಟಿ ಹಾಗೂ ನಿಯಮಗಳು ಹೀಗಿವೆ…..!!!!!!
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಫೋರ್ಟ್ಸ್& ಕಲ್ಚರಲ್ಸ್ ( ರಿ) ಪಿತ್ರೋಡಿ ತನ್ನ 36ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಈ ಪ್ರಯುಕ್ತ ಮೂರು ದಿನಗಳ ರಾಷ್ಟ್ರ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನು ಉಡುಪಿ ಜಿಲ್ಲೆಯ  ಕಟಪಾಡಿಯ  ಎಸ್ ವಿ ಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಆಯೋಜಿಸಿದೆ.
ಫೆಬ್ರವರಿ 9 ರಿಂದ 11ರ ವರೆಗೆ ಈ  “ವೆಂಕಟರಮಣ ಟ್ರೋಫಿ 2024′” ಕ್ರಿಕೆಟ್‌ ಟೂರ್ನಿಯು  ನಡೆಯಲಿದ್ದು, ಪಂದ್ಯಗಳು ಹಗಲಿನಲ್ಲಿ  ನಡೆಯಲಿವೆ.
ರಾಷ್ಟ್ರೀಯ ಮಟ್ಟದ 15 ಪ್ರಸಿದ್ಧ ತಂಡಗಳು ಭಾಗವಹಿಸಲಿದ್ದು, ತಂಡಗಳನ್ನು 4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.
A)ಪೂಲ್ ನಲ್ಲಿ ಮಾರುತಿ ಮಟ್ಟು,ಹಿರೇ ಬೆಟ್ಟು ಫ್ರೆಂಡ್ಸ್,ಗುರುಗಣೇಶ್ ನೇಜಾರ್, ಕರಾವಳಿ ರಿಯಲ್ ಫೈಟರ್ಸ್
B) ಪೂಲ್ ನಲ್ಲಿ ಇಜಾನ್ ಸ್ಪೋರ್ಟ್ಸ್,ಸ್ಮ್ಯಾಶರ್ಸ್ ಶ್ರೀರಂಗಪಟ್ಟಣ ,ಮಹಾಲಿಂಗೇಶ್ವರ ಪಡುಬೆಳ್ಳೆ,ಜಾನ್ಸನ್ ಕುಂದಾಪುರ
C) ಪೂಲ್ ನಲ್ಲಿ ಹಿಂದುಸ್ತಾನ್ ಬೆಂಗಳೂರು, ಜನಪ್ರಿಯ ದಾವಣಗೆರೆ,ಯುನೈಟೆಡ್ ಜಾಗ್ವರ್,ಫ್ರೆಂಡ್ಸ್ ಬೆಂಗಳೂರು
D) ಪೂಲ್ ನಲ್ಲಿ ಚಾಲೆಂಜ್ ಕುಂದಾಪುರ, ಅಯೋಧ್ಯ ಮೈಟಿ ಮಲ್ಪೆ,ಪ್ರಕೃತಿ ನ್ಯಾಶ್
   “ವೆಂಕಟರಮಣ ಟ್ರೋಫಿ-2024” ಪ್ರಶಸ್ತಿಗಾಗಿ ಸೆಣಸಾಡಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ www.sportkannada.com ಗೆ ತಿಳಿಸಿದ್ದಾರೆ.
ಚಾಂಪಿಯನ್‌ ತಂಡವು 3 ಲಕ್ಷ ರೂ ನಗದು,ರನ್ನರ್‌ಅಪ್‌ ತಂಡಕ್ಕೆ 1.5 ಲಕ್ಷ ರೂ ನಗದು ಸಹಿತ ಮಿನುಗುವ ವೆಂಕಟರಮಣ ಟ್ರೋಫಿ ಪಡೆಯಲಿದ್ದು,ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗುವ ಆಟಗಾರ ಚಿನ್ನದ ನಾಣ್ಯ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೆ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಬೌಲರ್‌ ಹಾಗೂ ಉತ್ತಮ ಫೀಲ್ಡರ್‌ ಪ್ರಶಸ್ತಿಗಳಿಗೆ ಆಕರ್ಷಕ ಬಹುಮಾನವಿರುತ್ತದೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
ವಿಶೇಷ ಎಂಬಂತೆ ಇಲ್ಲಿ ಯಾವುದೇ ಆಟಗಾರರು ಮದ್ಯಪಾನ ಹಾಗೂ ತಂಬಾಕು ಸೇವಿಸಿ  ಆಡುವ ಆಗಿಲ್ಲ. ಇದಕ್ಕಾಗಿ ಮದ್ಯಪಾನ ಟೆಸ್ಟಿಂಗ್ ಯಂತ್ರವನ್ನು ಇಲ್ಲಿ ಆಯೋಜಕರು ಅಳವಡಿಸಲಿದ್ದಾರೆ. ‘ಶಿಸ್ತಿಗಾಗಿ ಕ್ರಿಕೆಟ್’  ಎನ್ನುವ ಅಡಿಬರಹವನ್ನು ಇಟ್ಟುಕೊಂಡು ನಡೆಯುವ  ಈ ಪಂದ್ಯಾವಳಿಯಲ್ಲಿ ಅತ್ಯಂತ ಶಿಸ್ತುಬದ್ಧ ತಂಡಕ್ಕೆ ‘ಶಿಸ್ತಿನ ತಂಡ’  ಎಂಬ ವಿಶೇಷ ಪ್ರಶಸ್ತಿ ನೀಡಿ ಗೌರವಪೂರ್ಣವಾಗಿ ಸನ್ಮಾನಿಸಲಾಗುವುದು.
 ವೆಂಕಟರಮಣ ಸ್ಫೋರ್ಟ್ಸ್& ಕಲ್ಚರಲ್ಸ್(ರಿ) ಪಿತ್ರೋಡಿಯ  ಮಾನವೀಯ ಹೆಜ್ಜೆಗಳು:
ಉಡುಪಿಯ ವೆಂಕಟರಮಣ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ( ರಿ) ಪಿತ್ರೋಡಿ ಸಂಸ್ಥೆಯು ಕಳೆದ 36 ವರ್ಷಗಳಿಂದ ಕ್ರಿಕೆಟ್‌ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ವಿವಿಧ ರೀತಿಯ ಸೇವೆಯನ್ನು ಮಾಡುತ್ತ ಬಂದಿದೆ.  ಈ ಸಂಸ್ಥೆ ಕೇವಲ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯಲ್ಲಿಯೂ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದೆ. ಆಟದ ಜೊತೆಯಲ್ಲಿ ಸಮಾಜದಲ್ಲಿರುವ ಅಶಕ್ತರಿಗೆ ನೆರವಿನ ಹಸ್ತವನ್ನು ಸದಾ ಚಾಚುತ್ತ ಬಂದಿದೆ. ದೈಹಿಕವಾಗಿ ಆಶಕ್ತರಾದವರಿಗೆ, ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ, ಬಡವರಿಗೆ ಈ ಸಂಸ್ಥೆ ಜಾತಿ ಮತ ಭೇದವಿಲ್ಲದೆ ಆರ್ಥಿಕ ನೆರವನ್ನು ನೀಡಿರುವುದು ಗಮನಾರ್ಹ. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರೋತ್ಸಾಹ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆ ನೀಡುತ್ತಾ ಬಂದಿದೆ. ಅಲ್ಲದೆ ಪ್ರತಿವರ್ಷ ಜಿಲ್ಲಾ ಮಟ್ಟದ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಇದರ ಜೊತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆಯು ಲಕ್ಷಾಂತರ ರೂ. ವ್ಯಯ ಮಾಡುತ್ತ ಮುಂದುವರೆಸಿಕೊಂಡು ಬಂದಿದೆ. ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ,  ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ.
ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಈ ಸಂಸ್ಥೆಯ ಸಾಧನೆಯನ್ನು ಮೆಚ್ಚಿ ಉಡುಪಿ ಜಿಲ್ಲಾಡಳಿತ 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಬಾರಿಯೂ ಕೂಡ ಪಂದ್ಯಾಟದಲ್ಲಿ ಸಂಗ್ರಹಿತವಾಗಿ ಉಳಿದ ಹಣವನ್ನು ಪಿತ್ರೋಡಿ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಬಡ ಕುಟುಂಬಗಳ ಸಹಾಯಕ್ಕಾಗಿ ಬಳಕೆ ಮಾಡಲಾಗುವುದು ಮತ್ತು ಈ ರೀತಿ  ಸಮಾಜಕ್ಕೆ ಪುನರ್ ವಿನಿಯೋಗ ಮಾಡುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಟಾರ್ ವರ್ಟೆಕ್ಸ್ Sportskannadatv ಲೈವ್ ಮೀಡಿಯಾ ದಲ್ಲಿ ಪಂದ್ಯಾವಳಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.