“ಕಷ್ಟ ಎದುರಾಗಿದೆ ಎಂದರೆ ಜೀವನ ಏನನ್ನೋ ಕಲಿಸುತ್ತಿದೆ ಎಂದರ್ಥ’’
2015ರಲ್ಲಿ ರಾಬಿನ್ ಉತ್ತಪ್ಪನ ಜೊತೆ ಮಾತನಾಡುವಾಗ ಆತ ಹೇಳಿದ್ದ ಮಾತಿದು.
ಆಗ ರಣಜಿ ಟ್ರೋಫಿ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದ ರಾಬಿನ್ ಉತ್ತಪ್ಪ. ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಅವಕಾಶ ಕ್ಷೀಣಿಸಿದ್ದರೂ, ದೂರದಲ್ಲೆಲ್ಲೋ ಒಂದು ಸಣ್ಣ ಆಸೆಯೊಂದಿಗೆ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದ ಸಮಯ. KSCA ಬಿ ಗ್ರೌಂಡ್’ನಲ್ಲಿ ರಾಬಿನ್ ಉತ್ತಪ್ಪ ಜೊತೆ ಮಾತಿಗೆ ಕುಳಿತಾಗ ಆತ ಹೇಳಿದ ಕೆಲ ವಿಚಾರಗಳನ್ನು ಕೇಳಿ ಅಚ್ಚರಿ, ಆಘಾತ ಒಟ್ಟೊಟ್ಟಿಗೇ ಆಗಿತ್ತು.
ರಾಬಿನ್ ಉತ್ತಪ್ಪ ಹತ್ತಾರು ವರ್ಷ ಭಾರತ ತಂಡದ ಪರ ಆಡುವ ಸಾಮರ್ಥ್ಯವಿದ್ದ ಪ್ರತಿಭಾವಂತ ಕ್ರಿಕೆಟಿಗ. 18 ವರ್ಷಗಳ ಹಿಂದೆ ಆಡಿದ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲೇ ಆ ಕಾಲಕ್ಕೆ ಭಾರತೀಯ ದಾಖಲೆಯ 86 ರನ್ ಚಚ್ಚಿದವನು ಉತ್ತಪ್ಪ.
ಇನ್ನು ಟಿ20 ಕ್ರಿಕೆಟ್.. ಗಲ್ಲಿಗೊಬ್ಬ ಸ್ಟಾರ್ ಹುಟ್ಟಿಕೊಂಡಿರುವ ಕಾಲವಿದು. ದಿಲ್ಲಿಯವನೊಬ್ಬ ಟಿ20 ಕ್ರಿಕೆಟ್’ನ ಅನಭಿಷಿಕ್ತ ದೊರೆಯಾಗಿ ಮೆರೆದು ತೆರೆಮರೆಗೆ ಸರಿದ ಸಮಯವಿದು. ಇನ್ನೂ ಅದೆಷ್ಟೇ ಟಿ20 ವೀರರು, ವೀರಾಗ್ರಣಿಗಳು ಎದ್ದು ಬರಲಿ.. ಭಾರತ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಅರ್ಧಶತಕ ಬಾರಿಸಿದನು ಯಾರು ಎಂದು ಯಾರಾದರೂ ಕೇಳಿದರೆ, ಕನ್ನಡಿಗರಾಗಿ ನಾವು ಹೆಮ್ಮೆಯಿಂದ ರಾಬಿನ್ ಉತ್ತಪ್ಪನ ಹೆಸರು ಹೇಳಬಹುದು.
ಭಾರತ ಪರ Big Star ಆಗಲು ಸಿಗಬೇಕಿದ್ದ ಆರಂಭ ರಾಬಿನ್ ಉತ್ತಪ್ಪನಿಗೆ ಸಿಕ್ಕಿತ್ತು. ಆದರೆ ದೋಣಿ ಮುಂದೆ ಸಾಗಲಿಲ್ಲ. ಇನ್ನೇನು ಭಾರತ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಂಡು ಬಿಟ್ಟ ಎನ್ನುವಷ್ಟರಲ್ಲಿ ಆಕಾಶದಿಂದ ಪಾತಾಳಕ್ಕೆ ಬಿದ್ದು ಬಿಟ್ಟಿದ್ದ ಉತ್ತಪ್ಪ.
ರಾಬಿನ್ ಉತ್ತಪ್ಪನ ಜೊತೆ ಅಂಡರ್-19 ಕ್ರಿಕೆಟ್ ಆಡಿದವರು ಸೀನಿಯರ್ ತಂಡದಲ್ಲಿ ಮಿಂಚುತ್ತಿದ್ದರೆ, ಉತ್ತಪ್ಪ ಮಾತ್ರ ಎಲ್ಲವನ್ನೂ ಕಳೆದುಕೊಂಡವನಂತೆ ಮೂಲೆ ಸೇರಿ ಬಿಟ್ಟಿದ್ದ.
ಭಾರತ ತಂಡದ ಕಥೆ ಹಾಗಿರಲಿ.. ಹಳೇ ಖದರ್ ಕಳೆದುಕೊಂಡಿದ್ದ ಉತ್ತಪ್ಪನಿಗೆ ಕರ್ನಾಟಕ ತಂಡದಲ್ಲೂ ಸಾಲು ಸಾಲು ವೈಫಲ್ಯ. ಮೈದಾನಕ್ಕಿಳಿದರೆ ಬೌಲರ್’ಗಳನ್ನು ಅಟ್ಟಾಡಿಸಿ ಹೊಡೆದು ಹಾಕುತ್ತಿದ್ದವನು ಒಂದೊಂದು ರನ್’ಗೂ ಪರದಾಡುತ್ತಿದ್ದ. “ಏನಾಯಿತು ಇವನಿಗೆ” ಎಂದು ಸಾಕಷ್ಟು ಬಾರಿ ಅನ್ನಿಸಿದ್ದಿದೆ. ಇದೇ ಪ್ರಶ್ನೆಯನ್ನು ಉತ್ತಪ್ಪನ ಆತ್ಮೀಯರೊಬ್ಬರಿಗೆ ಕೇಳಿದ್ದೆ. ಆಗ ಅವರು ಕೇಳಿದ್ದ ವಿಚಾರಗಳನ್ನು ಕೇಳಿ ದಂಗಾಗಿ ಬಿಟ್ಟಿದ್ದೆ.
ಇದು 2011ರಿಂದ 2013ರ ಕಥೆ..
ಕೆಲವೊಮ್ಮೆ ವೈಯಕ್ತಿಕ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ವೃತ್ತಿಬದುಕನ್ನೇ ನುಂಗಿ ಹಾಕಿ ಬಿಡುತ್ತವೆ. ರಾಬಿನ್ ಉತ್ತಪ್ಪನ ಜೀವನದಲ್ಲೂ ಅಂಥಾ ಒಂದು ಘಟನೆ ನಡೆದಿತ್ತು. ಆಗಿನ್ನೂ ಉತ್ತಪ್ಪನಿಗೆ ಮದುವೆಯಾಗಿರಲಿಲ್ಲ. ಮನೆಯಲ್ಲಿ ತಂದೆ, ತಾಯಿ ಮತ್ತು ಉತ್ತಪ್ಪ ಅಷ್ಟೇ.. ತಂದೆ-ತಾಯಿಯ ಮಧ್ಯೆ ಶುರುವಾದ ಮನಸ್ತಾಪ ಉತ್ತಪ್ಪನ ನೆಮ್ಮದಿಯನ್ನೇ ಹಾಳು ಮಾಡಿ ಬಿಟ್ಟಿತು.
ಆ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಎಷ್ಟೋ ದಿನಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಪಾರ್ಕಿಂಗ್’ನಲ್ಲಿ ಕಾರ್’ನಲ್ಲೇ ಮಲಗಿ ಕಳೆದದ್ದೂ ಇದೆ. ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿದ್ದ ಉತ್ತಪ್ಪ ಆಟದಲ್ಲೂ ಮಂಕಾಗಿ ಬಿಟ್ಟ. ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಮಾತು ಪಕ್ಕಕ್ಕಿರಲಿ.. ಕರ್ನಾಟಕ ತಂಡದಲ್ಲಿ ಸ್ಥಾನ ಉಳಿಸಿಕೊಂಡರೆ ಸಾಕಾಗಿತ್ತು ಅವನಿಗೆ. ಅಷ್ಟು ಗರ ಬಡಿದಿತ್ತು ಅವನ ಆಟಕ್ಕೆ..!
ಮೈದಾನದಲ್ಲಷ್ಟೇ ಅಲ್ಲ, ಮೈದಾನದ ಹೊರಗೂ ಸಂಯಮ ಮಾಯವಾಗಿತ್ತು.. ಹೆಜ್ಜೆ ಹೆಜ್ಜೆಗೂ ತಾಳ್ಮೆ ಕಳೆದುಕೊಳ್ಳುತ್ತಿದ್ದ. ಕರ್ನಾಟಕ ತಂಡದ ಡ್ರೆಸ್ಸಿಂಗ್ ರೂಮ್’ನಲ್ಲಿ ಕಿರಿಯ ಕ್ರಿಕೆಟಿಗರಿಗೆ ಉತ್ತಪ್ಪನ ಜೊತೆ ಮಾತನಾಡಲೂ ಭಯವಾಗುತ್ತಿತ್ತಂತೆ. ಅಷ್ಟು ವ್ಯಘ್ರನಾಗಿ ಬಿಟ್ಟಿದ್ದ ಉತ್ತಪ್ಪ.
ಇದಾಗಿ ಎರಡು ವರ್ಷಗಳ ನಂತರ.. ಅಂದರೆ 2015.
ಆಗಷ್ಟೇ ಕರ್ನಾಟಕ ಸತತ 2ನೇ ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು ಚರಿತ್ರೆ ನಿರ್ಮಿಸಿತ್ತು. ಮಾತಿಗೆ ಸಿಕ್ಕಿದ್ದ ಉತ್ತಪ್ಪನನ್ನು ಹಳೆಯ ಆ ಕರಾಳ ದಿನಗಳ ಬಗ್ಗೆ ಕೇಳಿದೆ.. ಮಾತನಾಡುತ್ತಾ ಕಣ್ಣೀರು ಹಾಕಿ ಬಿಟ್ಟ.
“ನೋಡಿ, ಸುದರ್ಶನ್.. ನನ್ನ ವೈಯಕ್ತಿಕ ಜೀವನದಲ್ಲಿ ಕೆಲ ಘಟನೆಗಳು ನಡೆಯದೇ ಇದ್ದಿದ್ದರೆ, ನಾನು ಎಲ್ಲಿಯೋ ಇರುತ್ತಿದ್ದೆ. ಕ್ರಿಕೆಟ್ ವೃತ್ತಿಜೀವನದ ಮಹತ್ವದ ಘಟ್ಟದಲ್ಲೇ ನಡೆದ ಆ ಘಟನೆಗಳು ಮತ್ತೆ ಭಾರತ ಪರ ಆಡುವ ನನ್ನ ಕನಸನ್ನೇ ಮುಳುಗಿಸಿ ಬಿಟ್ಟವು. ಆ ಎರಡು ವರ್ಷಗಳಲ್ಲಿ ನಾನು ಅನುಭವಿಸಿದ ನೋವು, ಸಂಕಟ ಯಾವ ಶತ್ರುವಿಗೂ ಬೇಡ. ಅದರಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಯಿತು” ಎಂದಿದ್ದ ಉತ್ತಪ್ಪ.
ಆ ಕಷ್ಟದ ದಿನಗಳಲ್ಲಿ ರಾಬಿನ್ ಉತ್ತಪ್ಪನ ಜೊತೆ ನಿಂತವಳು ಶೀತಲ್ ಗೌತಮ್. ಆಕೆ ಟೆನಿಸ್ ಆಟಗಾರ್ತಿ. ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಿಂದಲೂ ಉತ್ತಪ್ಪ ಸ್ನೇಹಿತೆಯಾಗಿದ್ದವಳು. ರಾಬಿನ್ ಉತ್ತಪ್ಪನ ಜೀವನಕ್ಕೆ ಅದೃಷ್ಟದೇವತೆಯಾಗಿ ಬಂದ ಆ ಹುಡುಗಿ ಎಲ್ಲವನ್ನೂ ಬದಲಿಸಿ ಬಿಟ್ಟಳು. ಉತ್ತಪ್ಪ ಹಳೆಯ ಲಯಕ್ಕೆ ಮರಳಿದ, ಕರ್ನಾಟಕಕ್ಕೆ ಬೆನ್ನು ಬೆನ್ನಿಗೆ ಎರಡು ರಣಜಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ. 2016ರಲ್ಲಿ ಅದೇ ಹುಡುಗಿಯನ್ನು ರಾಬಿನ್ ಹುಟ್ಟೂರು ಕೊಡಗಿನಲ್ಲಿ ಮದುವೆಯಾಗಿದ್ದ. ಮದುವೆಗೆ ನನ್ನನ್ನೂ ಕರೆದಿದ್ದ.. ಸ್ನೇಹಿತರ ಜೊತೆ ಮದುವೆಗೆ ಹೋಗಿ “ನೂರು ಕಾಲ ಚೆನ್ನಾಗಿರಿ” ಎಂದು ಶುಭ ಹಾರೈಸಿ ಬಂದಿದ್ದೆ.
ಅದಾದ ನಂತರ ಕರ್ನಾಟಕ ತಂಡವನ್ನು ತೊರೆದ ಉತ್ತಪ್ಪ ಸೌರಾಷ್ಟ್ರ ತಂಡ ಸೇರಿಕೊಂಡ. ಮುಂದೆ ಕೇರಳ ಪರ ಆಡಿದ. 2014ರಲ್ಲಿ 660 ರನ್ ಗಳಿಸಿ KKR ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿದ್ದವನು, 2021ರಲ್ಲಿ CSKಗೂ ಕಪ್ ಗೆಲ್ಲಿಸಿ ಕೊಟ್ಟ. ಮುಂದೆ.. ಐಪಿಎಲ್, ದೇಶೀಯ ಕ್ರಿಕೆಟ್, ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿ ಟಿ10, ಟಿ20 ಲೀಗ್’ಗಳನ್ನು ಆಡಲು ಶುರು ಮಾಡಿದ.
ಇದೇ ವರ್ಷ #KCC ಟೂರ್ನಿಯಲ್ಲಿ ಆಡಲು ಬಂದಾಗ ಆತನ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನನ್ನನ್ನು ಕ್ರಿಕೆಟ್ ಜರ್ಸಿಯಲ್ಲಿ ನೋಡಿದವನೇ “ಕ್ರಿಕೆಟ್ ಬಗ್ಗೆ ಬರೆಯುತ್ತೀರಿ ಎಂಬುದು ಗೊತ್ತಿತ್ತು, ಆಡುತ್ತೀರಿ ಎಂಬುದು ಗೊತ್ತಿರಲಿಲ್ಲ, Good to see you” ಎಂದಿದ್ದ. KCC ನೆಪದಲ್ಲಿ ತುಂಬಾ ವರ್ಷಗಳ ನಂತರ ರಾಬಿನ್ ಉತ್ತಪ್ಪನೊಂದಿಗೆ ಮತ್ತೆ ಒಂದಷ್ಟು ಗಂಟೆಗಳ ಮಾತುಕತೆ.. ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೆವು.
ಈಗ World Championship of Legends ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಲು ಕಾರಣನಾಗಿದ್ದನ್ನು ನೋಡಿ, ರಾಬಿನ್ ಉತ್ತಪ್ಪನ ಬಗ್ಗೆ ಇಷ್ಟೆಲ್ಲಾ ಬರೆಯಬೇಕೆನಿಸಿತು.