Categories
ಕ್ರಿಕೆಟ್

LCL ಹಿರಿಯರ ಕ್ರಿಕೆಟ್ ಹಬ್ಬ- ಗೆಲುವಿನ ನಗೆ ಬೀರಿದ ರೆಡ್ ಹಾಕ್ಸ್ ಉಳ್ಳಾಲ

ಹಿರಿಯ ಕ್ರಿಕೆಟ್ ಆಟಗಾರರಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮತ್ತು ಪರಸ್ಪರ ಭಾಂಧವ್ಯ, ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಸುರತ್ಕಲ್ಲಿನಲ್ಲಿ 2 ದಿನಗಳ  ಕಾಲ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2  ಭರ್ಜರಿ ಯಶಸ್ಸು ಕಂಡಿದೆ.
12 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನಲ್ಲಿ ರೆಡ್ ಹಾಕ್ಸ್ ಉಳ್ಳಾಲ ತಂಡವು ಮಹಾಲಕ್ಷ್ಮಿ ವಾರಿಯರ್ಸ್ ಸೂರಿಂಜೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿತು. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಈ ಕ್ರಿಕೆಟ್ ಪಂದ್ಯಾವಳಿಯನ್ನು ಸತತ ಎರಡನೇಯ ಬಾರಿಗೆ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗಾಗಿ  ಆಯೋಜಿಸಿತ್ತು. ವಿಜೇತ ತಂಡಕ್ಕೆ 1.01,000 ರೂ. + LCL ಕಪ್ ಮತ್ತು ರನ್ನರ್ ಅಪ್ ತಂಡಕ್ಕೆ 51,005 ರೂ.+ LCL ಕಪ್ ಗಳನ್ನು ನೀಡಿ ಗೌರವಿಸಲಾಯಿತು.
ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಇವರ ಆಶ್ರಯದಲ್ಲಿ “ಎಲ್ ಸಿ ಎಲ್ ಟ್ರೋಫಿ -2023” ಮೇ 27, 28 ರಂದು ಸುರತ್ಕಲ್ ನ  ಗೋವಿಂದದಾಸ್ ಕಾಲೇಜು ಕ್ರಿಕೆಟ್  ಮೈದಾನದಲ್ಲಿ ನಡೆಯಿತು.ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಕೂಟವು  ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ಹಿರಿಯ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.
ಪಂದ್ಯಾವಳಿಯನ್ನು ಸಂಯೋಜಕರಾದ ಮಹಾಬಲ ಪೂಜಾರಿ ಕಡಂಬೋಡಿ , ಸಂಸ್ಥೆಯ ಮಹಾಪೋಷಕರು,  ಟೂರ್ನಮೆಂಟ್ ನ ಮಾರ್ಗದರ್ಶಕರಾದ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಎಸ ಕುಮಾರ್,  ಕೋರ್ ಕಮಿಟಿ ಸದಸ್ಯರುಗಳಾದ ಸಂದೀಪ್  ಕಡಂಬೋಡಿ, ಅನಂತ್ ರಾಜ್ ಶೆಟ್ಟಿಗಾರ್, ಪದ್ಮನಾಭ್ ಕರ್ಕೇರ, ದಿನೇಶ ಆಚಾರ್ಯ ಕುಳಾಯಿ, ಸುಧಾಕರ ತಡಂಬೈಲ್, ಮುರಳಿ BASF,  ಕೇಶವ, ಅಶ್ವಥ್, ದಯಾನಂದ, ವರುಣ್ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್, ಕಿರಣ್ ಆಚಾರ್ಯ, ನಾಗರಾಜ ಕಡಂಬೋಡಿ, ಗಿರೀಶ್ ಟಿ ಕಡಂಬೋಡಿ ಹಾಗೂ ಕ್ಲಬ್ ನ ಇನ್ನಿತರ ಸದಸ್ಯರುಗಳು ಸೇರಿ ಯಶಸ್ವಿಯಾಗಿ ಆಯೋಜಿಸಿದರು. ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರುಷ ರಾಜ್ಯ ಮಟ್ಟದ ಹಿರಿಯರ  ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಇರಾದೆಯೂ ಕೂಡಾ ಇದೆ ಎಂದು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
 ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ನ  ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿ ಬಂದ ಟೂರ್ನಮೆಂಟ್ ನ ಉತ್ಸಾಹ ಭರಿತ ಕ್ಷಣಗಳನ್ನು ಬೆದ್ರಾ ಮೀಡಿಯಾ  ಸೆರೆ ಹಿಡಿದು ನೇರ ಪ್ರಸಾರ ಗೊಳಿಸಿತು. ಶಿವನಾರಾಯಣ ಐತಾಳ್ ಕೋಟ, ಸೈಯದ್ ಗುರುಕಂಬಳ, ಸುರೇಶ್ ಭಟ್ ಮೂಲ್ಕಿ ಮತ್ತು ಪ್ರವೀಣ್ ಪಾವಂಜೆ ಇವರುಗಳು ಕಾಮೆಂಟ್ರಿಯನ್ನು ನಡೆಸಿಕೊಟ್ಟರು.
ಮಾಜಿ ಕ್ರಿಕೆಟಿಗರಿಗೆ 2 ದಿನಗಳ ಪಂದ್ಯಾವಳಿಯಲ್ಲಿ  ಹಲವು ವರ್ಷದ ಹಿಂದೆ ತಾವೆಲ್ಲರೂ ಒಟ್ಟಿಗೆ ಅನುಭವಿಸಿದ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ಸಿಕ್ಕಿತು. ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2 ನ್ನು ಸಂತಸದಿಂದ ವೀಕ್ಷಿಸಿದರು.ಬಂದಂತಹ ಎಲ್ಲಾ ಪ್ರೇಕ್ಷಕರಿಗೂ ತಂಪು ಪಾನೀಯ, ಐಸ್ ಕ್ರೀಮ್, ತಂಪಾದ ಮಜ್ಜಿಗೆ, ಕಲ್ಲಂಗಡಿ ಹಣ್ಣು ಮತ್ತು  ಊಟವನ್ನು ಉಚಿತವಾಗಿ ವಿತರಿಸಲಾಯಿತು.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕ ಕೆ ಆರ್ ಕೆ ಆಚಾರ್ಯ ಅವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಅಥ್ಲೆಟಿಕ್ಸ್

ಮಂಗಳೂರಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಪಟು ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ, ಸೆಪ್ಟೆಂಬರ್ 27 ರಿಂದ 30

2023 ನೇ ಸಾಲಿನ ಕರ್ನಾಟಕ ರಾಜ್ಯ ಜೂನಿಯರ್ ಕ್ರೀಡಾಕೂಟವು ಸೆಪ್ಟೆಂಬರ್ 27 ರಿಂದ 30 ರ ವರೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಲಿರುವುದು. ಈ ಕ್ರೀಡಾ ಕೂಟವು ಅಂತರಾಷ್ಟ್ರೀಯ ಅತ್ಲೆಟಿಕ್ ದಿವಂಗತ ಲೋಕನಾಥ್ ಬೋಳಾರ್ ರವರ ಸ್ಮರಣಾರ್ಥ ವಾಗಿ ಜರಗಲಿರುವುದು,
ಕ್ರೀಡಾಕೂಟವು ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ ಮತ್ತು ಉಡುಪಿ ಶಾಖೆ, ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜರಗಲಿದ್ದು ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ನ ಸಹಕಾರ ಹಾಗ ದ.ಕ ಅತ್ಲೆಟಿಕ್ ಅಸೋಸಿಯೇಷನ್ ರವರ ಸಹಭಾಗಿತ್ವ ಇರುತ್ತದೆ.
ಕ್ರೀಡಾಕೂಟದ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಖಾಸಾಗಿ ಹೊಟೇಲಿನಲ್ಲಿ ಜರಗಿತು.
ಪೋಸ್ಟರ್ ಬಿಡುಗಡೆ ಮಾಡಿದ ಜನತಾ ಫಿಶಮೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್ ಮಾತನ್ನಾಡಿ ಲೋಕನಾಥ್ ಬೋಳಾರ್ ನಮ್ಮ ದೇಶ ಕಂಡ ಈ ಭಾಗದ ಅಪ್ರತಿಮ ಕ್ರೀಡಾಪಟುವಾಗಿ ನಮ್ಮ ದೇಶಕ್ಕೆ ಹೆಸರನ್ನು ತಂದಿದ್ದಾರೆ. ಮಾತ್ರವಲ್ಲದೆ ಮೀನುಗಾರ ಸಮಾಜದ ಕಣ್ಮಣಿಯಾಗಿ ಮೀನುಗಾರಿಕೆಯ ಉತ್ತೇಜನಕ್ಕೆ ಹಲವು ಮಹತ್ತರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ನಾಡಿನ ಕ್ರೀಡಾಪಟುಗಳ ಬೆಳವಣಿಗೆಗೆ ಕ್ರೀಡಾಕೂಟವು ನಮ್ಮ ಜಿಲ್ಲೆಯಲ್ಲಿ ಜರಗುತ್ತಿರುವುದು ಹೆಮ್ಮೆಯಾಗುತ್ತಿದೆ. ಈ ಮೂಲಕ ಲೋಕನಾಥ್ ಬೋಳಾರ್ ರವರಿಗೆ ಗೌರವವನ್ನು ಸಮರ್ಪಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತಾಡುತ್ತಾ ಲೋಕನಾಥ್ ಬೋಳಾರ್ ರವರು ಹೆಚ್ಚಾಗಿ ಸೇವೆ ಮಾಡಿದ ಕ್ಷೇತ್ರವೆಂದರೆ ಕ್ರೀಡೆ ಹಾಗೂ ಮೀನುಗಾರಿಕಾ ಕ್ಷೇತ್ರ, ತಮ್ಮ ಜೀವಿತಾವಧಿಯಲ್ಲಿ ಹಲವು ಕ್ರೀಡಾಪಟುಗಳನ್ನು ಬೆಳೆಸಿದ ಕೀರ್ತಿ ಅವರಿಗಿದೆ‌ . ಮೀನುಗಾರಿಕೆಗೆ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಮೀನುಗಾರರ ಏಳಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಅವರ ಸ್ಮರಣಾರ್ಥ ಜರಗುವ ಈ ಕ್ರೀಡಾಕೂಟದಲ್ಲಿ ಕರ್ಣಾಟಕದಾತ್ಯಂತ 2500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ, ಕ್ರೀಡಾಕೂಟದ ವಿಜೇತರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ ಸುವರ್ಣ  ಮಲ್ಪೆ, ಟಿ ಹನೀಫ್ ಮಲ್ಪೆ, ಆನಂದ ಮಾಸ್ಟರ್ ಬೋಳೂರು, ಜಗದೀಶ್ ಬೋಳೂರು, ಮೋಹನ್ ಬೆಂಗ್ರೆ, ನಿತಿನ್ ಕುಮಾರ್, ತೇಜೋಮಯ, ಕಾಶಿನಾಥ್ ಕರ್ಕೇರ, ವಾಲ್ಟರ್ ಡಿಸೋಜ, ಫಾದರ್ ಗೋಮ್ಸ್, ಸಿಂಧೂರಾಂ, ಕ್ಯಾಪ್ಟನ್ ಕೃಷ್ಣಪ್ಪ,ವರದ್ ರಾಜ್ ಬಂಗೇರ, ಮನೋಹರ ಬೋಳಾರ ಮೊಹಮ್ಮದ್ ಬಸೀರ್, ಡಾ| ಶಾಂತರಾಂ ಶೆಟ್ಟಿ, ಡಾ|ದೇವಿ ಲೋಕನಾಥ್ ಬೋಳಾರ್, ಶ್ರೀಮತಿ ಪವನ್ ಬೋಳಾರ್, ಕಾವ್ಯ ಪ್ರಜ್ವಲ್ ಬೋಳಾರ್ , ಸುಭಾಷ್ ಚಂದ್ರ ಕಾಂಚನ್ ರವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಧಾಧಿಕಾರಿಗಳಾದ ಮೋಹನ್ ಕೋಡಿಕಲ್, ಭರತ್ ಕುಮಾರ್ ಎರ್ಮಾಳ್, ಯತೀಶ್ ಬೈಕಂಪಾಡಿ, ವಿಜಯ ಸುವರ್ಣ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಪುತ್ರನ್ ಉಳ್ಳಾಲ ಹಾಗೂ ಅತ್ಲೆಟಿಕ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ,ತಾರನಾಥ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ಕೃಷ್ಣ ಶೆಣೈ, ಸುಪ್ರೀತ್ ಭಾಗವಹಿಸಿದ್ದರು.
Categories
ಕ್ರಿಕೆಟ್

ಶೀಘ್ರದಲ್ಲೇ ಬರಲಿದೆ ಜಿ ಎಸ್ ಬಿಗಳ ಬಹು ನಿರೀಕ್ಷಿತ ಹರಾಜು ಆಧಾರಿತ ಕ್ರಿಕೆಟ್ ಟೂರ್ನಮೆಂಟ್ ‘ವೊಳಲಂಕೆ ಪ್ರೀಮಿಯರ್ ಲೀಗ್’!!!

ಮುಲ್ಕಿ- ಜಿ. ಎಸ್. ಬಿ ಕ್ರಿಕೆಟ್ ಪ್ರಿಯರಿಗೆ ಸಂಭ್ರಮದ ಸುದ್ದಿ. ಈ ಋತುವಿನ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬ ಮುಲ್ಕಿಯಲ್ಲಿ ಶುರುವಾಗಲಿದೆ.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಇವರು ಅಕ್ಟೋಬರ್ ತಿಂಗಳಿನಲ್ಲಿ  ಜಿ ಎಸ್ ಬಿ ಗಳ   ಶ್ರೀಮಂತ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.  ಜಿ ಎಸ್ ಬಿ ಕ್ರಿಕೆಟ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಗಲು ರಾತ್ರಿ  ಪಂದ್ಯಾಕೂಟ ಆಯೋಜಿಸಲು ಹಸಿರು ನಿಶಾನೆ ತೋರಿಸಿದೆ. ಜಿ. ಎಸ್. ಬಿ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.
ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ ಬಿ) ಸಮಾಜದ ಇತಿಹಾಸದಲ್ಲಿ  ಐಪಿಎಲ್ ಮಾದರಿಯಲ್ಲಿ ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್-2023 ನ್ನು ಹಮ್ಮಿಕೊಳ್ಳಲಾಗಿದೆ.  ಇದು ಹರಾಜು ಆಧಾರಿತ ಕ್ರಿಕೆಟ್ ಪಂದ್ಯಾವಳಿಯಾಗಿರುತ್ತೆ. ವಿಪಿಎಲ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಲಾಗುವುದು. ಆಟಗಾರರನ್ನು ಆಯ್ಕೆ ಮಾಡಲು ಹರಾಜು ಆಯೋಜಿಸಲಾಗುವುದು.  ಮುಲ್ಕಿಯಲ್ಲಿರುವ ವಿಜಯಾ ಕಾಲೇಜಿನ  ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಸರಣಿಯಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವೊಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್-2023  ಅಕ್ಷರಶ: ಐಪಿಎಲ್ ವಾತಾವರಣವನ್ನೇ ಹೊತ್ತು ತರಲಿದೆ.  ಟೂರ್ನಮೆಂಟ್ ನ ದಿನಾಂಕಗಳನ್ನು ಶೀಘ್ರದಲ್ಲೇ ದೃಢೀಕರಿಸಲಾಗುವುದು.
ಆಯೋಜಕರಲ್ಲಿ ಪ್ರಮುಖರಾದ ಶ್ರೀಯುತ ರಮಾನಾಥ ಪೈ ಎಸ್. ವಿ. ಟಿ ಮುಲ್ಕಿ ಇವರ ಹೇಳಿಕೆ ಪ್ರಕಾರ ಈಗಾಗಲೇ ಮುಂಬೈ, ಕೊಚ್ಚಿನ್, ಹೈದರಾಬಾದ್, ಮಂಗಳೂರು, ಕೋಟೇಶ್ವರ, ಕೆದಿಂಜೆ ಕಾರ್ಕಳದ  ತಂಡಗಳು ಟೂರ್ನಮೆಂಟ್ ಗೆ ತಮ್ಮ ತಂಡಗಳನ್ನು ನೊಂದಾಯಿಸಿವೆ. . ಈ ಲೀಗ್‌ನಲ್ಲಿ ಒಟ್ಟು ಹದಿನಾರು ತಂಡಗಳು ಭಾಗವಹಿಸಲಿವೆ. ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಗೆಲ್ಲುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ದೊರೆಯಲಿದೆ. ಇದರೊಂದಿಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ, ಫೈನಲ್ ಪಂದ್ಯದ ಪಂದ್ಯಶ್ರೇಷ್ಟ, ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಇತರ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಈ ಲೀಗ್ ನಲ್ಲಿ ಫ್ರ್ಯಾಂಚೈಸಿ ಮಾಲೀಕರಾಗಲು ಬಯಸುವವರು ತಮ್ಮ ಹೆಸರನ್ನು ನೋಂದಾಯಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ ಇಲ್ಲಿದೆ.
ಪ್ರೀತಮ್ ಹೆಗಡೆ- 9945354052
ಶರತ್ ಪ್ರಭು-9538728375
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು ಕೆ ಆರ್ ಕೆ ಆಚಾರ್ಯ ಮಾತನಾಡಿ  ವಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಅದ್ದೂರಿಯಾಗಿ ನಡೆದು ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ರಂಜಿಸಲು ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿ ಎಂದಿದ್ದಾರೆ. ಆಯೋಜನೆ ಮಾಡುವ ಸಂಘಟಕರಿಗೆ ಅಭಿನಂದನೆ ಎಂದರು.
ವೊಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಜಿ ಎಸ್ ಬಿ  ಟೆನಿಸ್ ಕ್ರಿಕೆಟ್​ನಲ್ಲಿ ಹೊಸದನ್ನು ಮುಂಚೂಣಿಗೆ ತರಲು ಉತ್ಸುಕರಾಗಿದ್ದಾರೆ. ಇದೀಗ ಮುಲ್ಕಿಯಲ್ಲಿ ಆರಂಭವಾಗುವ  ಜಿಎಸ್ ಬಿ ಸಮುದಾಯದ  ಪ್ರಮುಖ ಕ್ರಿಕೆಟ್ ಟೂರ್ನಿಯನ್ನು ನೋಡಿ ಆನಂದಿಸುವ ಕಾಲ ಕೂಡಿ ಬಂದಿದೆ.
ಶುರುವಾಗಲಿ ವಿಪಿಎಲ್ ಸಂಭ್ರಮ!
ಲೇಖಕರು
ಸುರೇಶ ಭಟ್, ಮುಲ್ಕಿ.
Categories
ಕ್ರಿಕೆಟ್

ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)-ಹಿರಿಯರ ಕ್ರಿಕೆಟ್ ಹಬ್ಬ ಮತ್ತೊಮ್ಮೆ-ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2

ಮಂಗಳೂರು- ಸುರತ್ಕಲ್ ಕ್ಷೇತ್ರದ ವಿವಿಧ ಕ್ರೀಡಾ ತಂಡ ಮತ್ತು ಸಂಸ್ಥೆಗಳ ಕ್ರೀಡಾಳುಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಸೇರಿ ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದೊಂದಿಗೆ ಹಿರಿಯ ಸಮಾಜ ಸೇವಕರು – ಧಾರ್ಮಿಕ ಮುಂದಾಳುಗಳಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಹುಟ್ಟು ಹಾಕಿರುವ ಸಂಸ್ಥೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.)  ಈ ಸಂಸ್ಥೆಯು ಆಯೋಜಿಸುತ್ತಿರುವ 40 ವರ್ಷ ಮೇಲ್ಪಟ್ಟ ಹಳೆಯ ಕ್ರಿಕೆಟ್ ಕಲಿಗಳ 12 ಅತ್ಯುತ್ತಮ  ಕ್ರಿಕೆಟ್ ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟದ ಲಾಂಛನ ಮತ್ತು ಅಧಿಕೃತ ಘೋಷಣಾ ಸಮಾರಂಭ ಇತ್ತೀಚಿಗೆ ನಡೆಯಿತು.
40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಲೆಜೆಂಡ್ಸ್ ಕ್ರಿಕೆಟ್ ಲೀಗ್  ಸೀಸನ್-2 ಕ್ರಿಕೆಟ್ ಟೂರ್ನಿಯು ಮೇ 27 ರಿಂದ ಶುರುವಾಗಲಿದೆ. ಮಂಗಳೂರು ಮತ್ತು ಸುರತ್ಕಲ್  ಪರಿಸರದ  ಮಾಜಿ ಆಟಗಾರರ ಈ ಟೂರ್ನಿಯಲ್ಲಿ ಹದಿನೆರಡು  ತಂಡಗಳು  ಕಣಕ್ಕಿಳಿಯಲಿವೆ.  ಈ ಟೂರ್ನಿಯು ಮೇ 27  ಮತ್ತು ಮೇ 28 ರಂದು ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-2 ಇದರ ಸಾಮಾಜಿಕ ಜಾಲತಾಣದ ಅಭಿಯಾನವನ್ನು ಸಂಸ್ಥೆಯ ಮಹಾಪೋಷಕರಾದ ACP ಮಹೇಶ್ ಕುಮಾರ್ ಮತ್ತು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ಬಿಡುಗಡೆಗೊಳಿಸಿದರು.
LCL 2023: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲಿರುವ ಹದಿನೆರಡೂ ತಂಡಗಳ ಘೋಷಣೆಯಾಗಿದೆ. ಅದರಂತೆ ಹದಿನೆರಡೂ ತಂಡಗಳು  ಈ ಕೆಳಗಿನಂತಿವೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಂಸ್ಥಾಪಕ ಮತ್ತುಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ನಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಕಾಯುವಿಕೆ ಮುಗಿದಿದೆ. ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಪಂದ್ಯಗಳಿಗೆ ಸಾಕ್ಷಿಯಾಗುವ ಬಗ್ಗೆ ಅಭಿಮಾನಿಗಳು ಇನ್ನು ಯೋಚಿಸಬಹುದು. ಶೀಘ್ರದಲ್ಲೇ ಮ್ಯಾಚ್ ಫಿಕ್ಚರ್ಸ್ ಬಗ್ಗೆ ಘೋಷಣೆ ಮಾಡಲಾಗುವುದು.” ಎಂದರು. “ಹೊಸ ಸ್ವರೂಪದಲ್ಲಿ 12 ತಂಡಗಳ ಐಕಾನಿಕ್ ಆಟಗಾರರ ತಂಡದೊಂದಿಗೆ, ಅಭಿಮಾನಿಗಳು ಈ ವರ್ಷ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದಾರೆ, ಈ ಬಾರಿ ಪಂದ್ಯಾವಳಿ ಮತ್ತಷ್ಟು ಉತ್ತಮವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು  LCLನ ಎರಡನೆಯ ಆವೃತ್ತಿ. ಕಳೆದ ಋತುವಿನಲ್ಲಿ ಮೊದಲನೆಯ ಆವೃತ್ತಿಯು ಯಶಸ್ವಿಯಾಗಿ, ಸಂಭ್ರಮದಿಂದ ನಡೆದಿತ್ತು. ಸೀಸನ್ 1 ನಲ್ಲಿ ಟೀಮ್ ಸೂಪರ್ ಕಾಪ್ಸ್ ಚಾಂಪಿಯನ್ ತಂಡವಾಗಿತ್ತು. ಫ್ರೆಂಡ್ಸ್ ಸರ್ಕಲ್ ಸುರತ್ಕಲ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿತ್ತು. ಕಳೆದ ಬಾರಿ 8 ತಂಡಗಳು ಭಾಗವಹಿಸಿತ್ತು. ಆದರೆ ಈ ಸಲ 12 ತಂಡಗಳ ಹಿರಿಯ ಸೇನಾನಿಗಳ ಕ್ರಿಕೆಟ್ ಆಟದ ಹೋರಾಟ ನೋಡುವ ಒಂದು ಅದ್ಭುತ ಅವಕಾಶ ಇದು ಗತ ವೈಭವದ ಮರು ಸ್ರಷ್ಟಿ.
ಪ್ರಥಮ ಬಹುಮಾನ ಟ್ರೋಫಿ ಹಾಗೂ ನಗದು ₹ 1,00,001/-
ದ್ವಿತೀಯ ಬಹುಮಾನ ಟ್ರೋಫಿ ಹಾಗೂ ನಗದು ₹ 50,005/-
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಲೈವ್ ಸ್ಟ್ರೀಮಿಂಗ್  ಬೆದ್ರಾ ಮೀಡಿಯಾ ಯೂ ಟ್ಯೂಬ್ ಲೈವ್‌ ನಲ್ಲಿ ವೀಕ್ಷಿಸಬಹುದಾಗಿದೆ..
ಟೂರ್ನಮೆಂಟ್ ಕಮಿಟಿಯ  ಸದಸ್ಯರುಗಳಾದ ಅನಂತ್ ರಾಜ್ ಶೆಟ್ಟಿಗಾರ್ ಮತ್ತು ಪದ್ಮನಾಭ ಕರ್ಕೇರ ತಡಂಬೈಲ್ ಟೂರ್ನಮೆಂಟ್ ನ ಮಾಹಿತಿಗಳನ್ನು ಸ್ಪೋರ್ಟ್ಸ್ ಕನ್ನಡ ಸುದ್ದಿ ವಾಹಿನಿಗೆ ನೀಡಿದರು.
ಸ್ಪೋರ್ಟ್ಸ್ ಕನ್ನಡದ ಪ್ರಧಾನ ಸಂಪಾದಕರು  ಕೋಟ ರಾಮಕೃಷ್ಣ ಆಚಾರ್ಯ ಮಾತನಾಡಿ, ” ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಆಶ್ರಯದಲ್ಲಿ ನಡೆಯಲಿರುವ  40 ವರ್ಷ ಮೇಲ್ಪಟ್ಟ ಹಿರಿಯ ಲೆಜೆಂಡ್ಸ್ ಕ್ರಿಕೆಟ್ ಆಟಗಾರರಿಗಾಗಿ ಹಿರಿಯರ ಕ್ರಿಕೆಟ್ ಹಬ್ಬ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.
ಶುಭಾಶಯಗಳೊಂದಿಗೆ,
ಸುರೇಶ ಭಟ್ ಮೂಲ್ಕಿ
LCL ವೀಕ್ಷಕ ವಿವರಣೆಗಾರರು
Categories
ಕ್ರಿಕೆಟ್

ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್-ಮಂಗಳೂರಿನ ಎ.ಜೆ.ರಾಯಲ್ಸ್ ಚಾಂಪಿಯನ್ಸ್

ಮಂಗಳೂರು-ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2023 ರ ಮೊದಲನೇಯ ಆವೃತ್ತಿಯು ವಾರಾಂತ್ಯದಲ್ಲಿ ಮಂಗಳೂರಿನ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೈದಾನದಲ್ಲಿ ನಡೆಯಿತು.
ಎ.ಜೆ. ರಾಯಲ್ಸ್ ತಂಡವು ಟೀಮ್ ಮಣಿಪಾಲ ವಿರುದ್ಧದ ಫೈನಲ್‌ನಲ್ಲಿ ವೀರೋಚಿತ ಜಯ ದಾಖಲಿಸಿತು. ಸಂಘಟಕರಾದ ಡಾಕ್ಟರ್ ಶರಣ್ ಜೆ ಶೆಟ್ಟಿಯವರ  ಎ.ಜೆ. ರಾಯಲ್ಸ್  ಸೇರಿದಂತೆ   16 ಕ್ಕೂ ಹೆಚ್ಚು ಕಾರ್ಪೊರೇಟ್ ತಂಡಗಳು ಕಾರ್ಪೊರೇಟ್ ಕ್ರಿಕೆಟ್  ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪ್ರಶಸ್ತಿಗಾಗಿ ಸ್ಪರ್ಧಿಸಿದವು, ಎ.ಜೆ. ರಾಯಲ್ಸ್ ತಂಡ  ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಅಂತಿಮ ಸುತ್ತಿಗೆ ಪ್ರವೇಶಿಸಿತು ಮತ್ತು  ಪ್ರತಿಷ್ಠಿತ  ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಯನ್ನು ಮುಡಿಗೇರಿಸಿತು.
ವಾರಾಂತ್ಯದಲ್ಲಿ ಎರಡು ದಿನಗಳ ಕಾಲ  ಲೀಗ್ ಪಂದ್ಯಗಳು, ಕ್ವಾರ್ಟರ್ ಫೈನಲ್ ನಾಕೌಟ್ ಪಂದ್ಯಗಳು  ಮತ್ತು ಸೆಮಿ-ಫೈನಲ್‌ಗಳನ್ನು  ಟೂರ್ನಮೆಂಟ್‌ ಒಳಗೊಂಡಿತ್ತು, ಪಂದ್ಯಾವಳಿಯ ಭಾಗವಾಗಿ, ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ಪ್ರತಿ ಭಾಗವಹಿಸುವ ತಂಡವು ಮೂರು ಲೀಗ್ ಪಂದ್ಯಗಳನ್ನು ಆಡಬೇಕಾಗಿತ್ತು, ನಂತರ ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಹೋರಾಡಲು ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಯಿತು . ಡಾಕ್ಟರ್ ವಿನೋದ್ ನಾಯಕ್ ನೇತೃತ್ವದ ಟೀಮ್ ಮಣಿಪಾಲ ತಂಡವು ಸೆಮಿ ಫೈನಲ್ ನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ತಂಡವನ್ನು ರೋಚಕ ಸೆಮಿ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿತು. ಎ ಜೆ ರಾಯಲ್ಸ್ ತಂಡವು ಎಂ ಸಿ ಎಫ್ ಕ್ರಿಕೆಟ್ ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ನಂತರ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರನ್ನುಮೈದಾನದಲ್ಲಿ  ಬೇರೂರಿಸಿತು. ಎ.ಜೆ. ರಾಯಲ್ಸ್ ನ ಪ್ರಮುಖ ಆಟಗಾರ ಲೋಕೇಶ್ (ಲೋಕಿ ಪುತ್ತೂರು ) ಟೂರ್ನಮೆಂಟ್ನ ಉದ್ದಕ್ಕೂ ಅತ್ಯದ್ಭುತವಾಗಿ ಆಡಿ ತನ್ನ ಸಾಹಸವನ್ನು ತೋರ್ಪಡಿಸಿ ನೆರೆದಿದ್ದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು. ಡೇ ಅಂಡ್ ನೈಟ್ ರೂಪದಲ್ಲಿ ನಡೆದ ಟೂರ್ನಮೆಂಟ್ ಅದ್ಭುತವಾಗಿ  ಮುಕ್ತಾಯ ಕಂಡಿತು.
ನೇರ ಪಂದ್ಯಗಳು ಮತ್ತು ಸ್ಕೋರ್‌ಕಾರ್ಡ್ ಅನ್ನು ಪ್ರಸಾರ ಮಾಡಲು ದೊಡ್ಡ ಡಿಜಿಟಲ್ ಪರದೆಯು ಸ್ಥಳದಲ್ಲಿತ್ತು. ಸ್ಥಳಕ್ಕೆ ಬರಲು ಸಾಧ್ಯವಾಗದ ಕ್ರಿಕೆಟ್ ಉತ್ಸಾಹಿಗಳಿಗಾಗಿ ಪಂದ್ಯಗಳನ್ನು M9  ಸ್ಪೋರ್ಟ್ಸ್ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಡ್ಯಾನ್ಸಿಂಗ್ ಅಂಪೈರ್ ಮದನ್ ಮಡಿಕೇರಿ, ದೀಕ್ಷಿತ್ ಮಂಗಳೂರು, ಪ್ರಭಾಕರ್ ಉಜಿರೆ ಮತ್ತು ಸ್ವರೂಪ್ ತೀರ್ಥಹಳ್ಳಿ ಟೂರ್ನಮೆಂಟ್ ನ ತೀರ್ಪುಗಾರರಾಗಿದ್ದರು. ಅರವಿಂದ ಮಣಿಪಾಲ ಮತ್ತು ಸುರೇಶ್ ಭಟ್ ಮುಲ್ಕಿ ವೀಕ್ಷಕ ವಿವರಣೆಯನ್ನು ನೀಡಿದರು.
ಮಹಿಳಾ ತಂಡಗಳ ನಡುವೆ ಕೂಡಾ ರೋಚಕ ಮಹಿಳಾ ಕ್ರಿಕೆಟ್ ಪಂದ್ಯವೂ ನಡೆಯಿತು.
ಪಂದ್ಯಾವಳಿಯ ನಂತರ ಮಾತನಾಡಿದ ಆಯೋಜಕರಲ್ಲಿ ಪ್ರಮುಖರಾದ  ಡಾ. ಶರಣ್ ಜೆ ಶೆಟ್ಟಿ ಭವಿಷ್ಯದಲ್ಲಿ ಪ್ರತಿವರ್ಷವೂ ಕೂಡಾ ಈ ರೀತಿಯ ಟೂರ್ನಮೆಂಟ್ ನಡೆಯಲಿದೆ ಮತ್ತು ಹೆಚ್ಚಿನ ತಂಡಗಳ ಭಾಗವಹಿಸುವಿಕೆಗಾಗಿ ನಾವು ಆಶಿಸುತ್ತೇವೆ ಎಂದರು. ಡಾಕ್ಟರ್ ಸಾಕ್ಷಾತ್ ರೈ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದರು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

RCB vs RR: ಮತ್ತೆ ಕೊಹ್ಲಿ ನಾಯಕತ್ವದ ಮ್ಯಾಜಿಕ್, ರೋಚಕ ಪಂದ್ಯದಲ್ಲಿ ರಾಜಸ್ಥಾನವನ್ನು ಸೋಲಿಸಿದ RCB; ಹಸಿರು ನೀಡಿತು ಆರ್ ಸಿ ಬಿ ಗೆ ಜಯದ ಉಸಿರು

ಆರ್‌ಸಿಬಿ ತವರು ನೆಲದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿತು. ಕೊಹ್ಲಿ ನಾಯಕತ್ವದಲ್ಲಿ ತಂಡಕ್ಕೆ ಈ ಋತುವಿನಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಅವಕಾಶ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕಳಪೆ ಆರಂಭ ಪಡೆಯಿತು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಗೋಲ್ಡನ್ ಡಕ್‌ನಲ್ಲಿ ಔಟಾದರು. ಟ್ರೆಂಟ್ ಬೌಲ್ಟ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅವರ ನಂತರ ಶಹಬಾಜ್ ಅಹ್ಮದ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಯಿತು ಆದರೆ ಅವರು ಕೂಡ ತಮ್ಮ ವೈಯಕ್ತಿಕ ಸ್ಕೋರ್ 2 ರನ್‌ಗಳಲ್ಲಿ ಮುಂದುವರೆದರು.
ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಇಲ್ಲಿಂದ ಸಿಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು. ಡು ಪ್ಲೆಸಿಸ್ ಋತುವಿನ ಐದನೇ ಅರ್ಧಶತಕ ಗಳಿಸಿದರು. 39 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಬಿರುಸಿನ ಬ್ಯಾಟಿಂಗ್ ಮಾಡುವಾಗ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಗಳಿಸಿದರು. ಇದಾದ ಬಳಿಕ ಆರ್‌ಸಿಬಿ ತತ್ತರಿಸಿತು.ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 16 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರಂತೆ ಔಟಾಗುತ್ತಲೇ ಇದ್ದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್‌ಗೆ 189 ರನ್ ಗಳಿಸಿತು. ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ಹೆಚ್ಚು ವಿಕೆಟ್ ಪಡೆದರು. ಇಬ್ಬರೂ 2-2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ರಾಯಲ್ಸ್ ಕಳಪೆ ಆರಂಭ ಪಡೆಯಿತು. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್ ಸಿರಾಜ್‌ಗೆ ಬಲಿಯಾದರು. ಅವರು ತಮ್ಮ ಖಾತೆಯನ್ನು ಕಳೆದುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಇಲ್ಲಿಂದ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅಧಿಕಾರ ವಹಿಸಿಕೊಂಡರು. ಪಡಿಕ್ಕಲ್ 30 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 52 ರನ್ ಗಳಿಸಿ ಔಟಾದರು.
ಜೈಸ್ವಾಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಕ್ರೀಸ್‌ನಲ್ಲಿ ಉಳಿದುಕೊಂಡ ಅವರು ನಿಧಾನಕ್ಕೆ 37 ಎಸೆತಗಳಲ್ಲಿ 47 ರನ್ ಗಳಿಸಿದರು. ಅವರ ನಂತರ ನಾಯಕ ಸಂಜು ಸ್ಯಾಮ್ಸನ್ ಕೂಡ 22 ರನ್ ಗಳಿಸಿ ಔಟಾದರು ಮತ್ತು ತಂಡದ ಸ್ಥಿತಿ ಹದಗೆಟ್ಟಿತು. RCB ರಾಜಸ್ಥಾನ್ ರಾಯಲ್ಸ್ ಅನ್ನು ಒತ್ತಡಕ್ಕೆ ಸಿಲುಕಿಸಿತು.
ಕೊನೆಯಲ್ಲಿ ಧ್ರುವ್ ಜುರೆಲ್ 16 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 20 ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು RCB ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತು. ರಾಯಲ್ಸ್ 6 ವಿಕೆಟ್‌ಗೆ 182 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿಯ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಆಟಗಾರ್ತಿ ವೈಷ್ಣವಿ ಆಚಾರ್ಯ ಕಡಿಯಾಳಿ…!!!

ಉಡುಪಿ-ನಾವು ಭಾರತೀಯರು ಕ್ರಿಕೆಟ್ ಆಟವನ್ನು ಧರ್ಮದಂತೆ ಆಚರಿಸುತ್ತೇವೆ, ಏಕೆಂದರೆ ಕ್ರಿಕೆಟ್‌ಗೆ ಹೆಚ್ಚಿದ ಗೌರವ ಮತ್ತು ಪ್ರೋತ್ಸಾಹದಿಂದಾಗಿ. ಇತ್ತೀಚೆಗೆ ದೇಶದಾದ್ಯಂತ ಕ್ರಿಕೆಟ್ ಪರ ಜೋರಾದ ಗಾಳಿ ಬೀಸುತ್ತಿದೆ.
ಇದು ಇಂದಿನ ದಿನಗಳಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರೂ  ಕೂಡಾ ಆಡುವ ಕ್ರೀಡೆಯಾಗಿದೆ. ಇತ್ತೀಚಿನ ದಿನಗಳನ್ನು  ‘ ದಿ ಗೋಲ್ಡನ್ ಏರಾ ಆಫ್  ದಿ ಇಂಡಿಯನ್ ವಿಮೆನ್’ಸ್ ಕ್ರಿಕೆಟ್ ‘ ಎಂದು ಹೇಳಬಹುದು..  ಇದೀಗ ಭಾರತ ಮಹಿಳಾ ತಂಡದಲ್ಲಿ ಹೊಸ ತಾರೆಯರು ಹುಟ್ಟಿಕೊಳ್ಳುತ್ತಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. 
 
ಉಡುಪಿ ಮಹಿಳಾ ತಂಡದ ಶ್ರೇಷ್ಠ ಆಟಗಾರ್ತಿಯ ಪರಿಚಯ ಇಲ್ಲಿದೆ.  ಸ್ನೇಹಿತರೇ, ಇಂದು ನಾವು ಉಡುಪಿಯ  ಮಹಿಳಾ ಯುವ ಕ್ರಿಕೆಟ್ ಪ್ರತಿಭೆ  ವೈಷ್ಣವಿ ಆಚಾರ್ಯ ಕಡಿಯಾಳಿ ಬಗ್ಗೆ ಹೇಳಲಿದ್ದೇವೆ. ಈ ಹೆಸರು ಅನೇಕ ಜನರಿಗೆ ಗೊತ್ತಿರಲಿಕ್ಕಿಲ್ಲ ಹೌದು!  ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಸ್ಟಾರ್ ಮಹಿಳಾ ಆಟಗಾರ್ತಿ ವೈಷ್ಣವಿ ಆಚಾರ್ಯ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು.  ಆರಂಭದ ದಿನಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಟಪಾಡಿಯ ಕೆ ಆರ್ ಎಸ್  ಅಕಾಡೆಮಿಯ ಉದಯ ಕುಮಾರ್ ಕಟಪಾಡಿ ಆಕೆಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. ಇತ್ತೀಚಿನ ದಿನಗಳಲ್ಲಿ ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಮುಖ್ಯ ತರಬೇತುದಾರ ಶ್ರೀ ಪ್ರಭಾಕರ್ ಶೆಟ್ಟಿ  ಅವರ ಅಡಿಯಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಾಳೆ, ಇವರು ತಮ್ಮ ವೇಗದ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಿಂದ  ಗಮನ ಸೆಳೆದವರು. ಬಲಗೈ ಬ್ಯಾಟರ್ ಆಗಿರುವ ಇವರು ಬಲಗೈನಲ್ಲಿ ಬೌಲಿಂಗ್‌ ಮಾಡುತ್ತಾರೆ. 18 ವರ್ಷ ಪ್ರಾಯದ ವೈಷ್ಣವಿ ಆಚಾರ್ಯ ಪ್ರತಿಷ್ಠಿತ ವನಿತಾ ಕ್ರಿಕೆಟ್ ಕೂಟದಲ್ಲಿ ಭಾಗವಹಿಸುತ್ತಿರುವ  ಆಟಗಾರ್ತಿ. ರಾಜ್ಯದಲ್ಲಿ ನಡೆದ ಅನೇಕ ಮಹಿಳಾ ಕ್ರಿಕೆಟ್ ನಲ್ಲಿ  ಕಾಣಿಸಿಕೊಂಡಿದ್ದಾರೆ. ಅವರು ತನ್ನ ಆಲ್ ರೌಂಡ್  ಪ್ರದರ್ಶನದಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಅವರ ಬೌಲಿಂಗ್ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದು, ಇವರು ಭವಿಷ್ಯದ ಭರವಸೆಯ ಬೌಲರ್‌ ಎನಿಸಿದ್ದಾರೆ. ಜೊತೆಗೆ ಅವರ ಬ್ಯಾಟಿಂಗ್ ಸೆನ್ಸ್ ಅದ್ಭುತವಾಗಿದೆ. ಅಮೋಘ ಕ್ರಿಕೆಟ್ ಪ್ರದರ್ಶನಕ್ಕಾಗಿ ಹಲವಾರು ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ. ಕ್ರಿಕೆಟ್ ವಿಷಯ ಬಂದಾಗ ಈಕೆಯ ಆಟಕ್ಕೆ ಅನೇಕರು ಮನಸೋತಿದ್ದುಂಟು. 
 
ಉಡುಪಿಯ ಸ್ನೇಹ  ಟ್ಯೂಟೋರಿಯಲ್  ಕಾಲೇಜಿನಲ್ಲಿ  ದ್ವಿತೀಯ ಪಿ ಯು ಸಿ  ಓದುತ್ತಿರುವ ವೈಷ್ಣವಿ ಆಚಾರ್ಯ 19 ವರ್ಷದೊಳಗಿನ ಕರ್ನಾಟಕ ಮಹಿಳಾ ಟಿ 20 ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವ ಅವಕಾಶ ಪಡೆದಿದ್ದರು.  2022 ರಲ್ಲಿ  ಮೊದಲ ಬಾರಿಗೆ ಅಂಡರ್ 19 ರಾಜ್ಯ ಸಂಭಾವ್ಯರ ಪಟ್ಟಿಯಲ್ಲಿ ಆಡುವ ಅರ್ಹತೆ ಸಂಪಾದಿಸಿದರು.  19 ವರ್ಷದೊಳಗಿನ ಟಿ 20 ತಂಡದ ಪಂದ್ಯಕ್ಕೆ  ಆಯ್ಜೆಯಾಗಿದ್ದ ವೈಷ್ಣವಿ ಆಚಾರ್ಯ, ಇವರು  ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂದೂ ಸಹ ಗುರುತಿಸಲ್ಪಟ್ಟಿದ್ದಾರೆ. ವನಿತಾ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ವೈಷ್ಣವಿ ಆಚಾರ್ಯ ರಾಜ್ಯ ವಲಯ ಸ್ಥಳೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.. ರಾಜ್ಯಾದ್ಯಂತ ನಡೆದ ಹಲವು ಟೂರ್ನಮೆಂಟ್  ನಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ಪಂದ್ಯಾವಳಿಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
 
 
ಇದುವರೆಗಿನ ಸಾಧನೆ:
 
2022ರ  ಅಕ್ಟೋಬರ್ ನಲ್ಲಿ ಅಂಡರ್ 19 ಕರ್ನಾಟಕ  ತಂಡಕ್ಕೆ ಸೆಲೆಕ್ಟ್ ಆದ ವೈಷ್ಣವಿ ಆಚಾರ್ಯ  19 ವರ್ಷದೊಳಗಿನ ರಾಜ್ಯ ಸಂಭವನೀಯರು ಪಂದ್ಯದಲ್ಲಿ ರಾಜ್ಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.
 
ನಂತರ ರಾಜ್ಯ ವಲಯ ಸ್ಥಳೀಯ  ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದು, ಎರಡು ಬಾರಿ ಅವರು ಪ್ರತಿನಿಧಿಸಿದ ತಂಡ ವಿಜೇತರಾಗಿ  ಹೊರಹೊಮ್ಮಿತು. ಬೌಲಿಂಗ್‌ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ವೈಷ್ಣವಿ ಆಚಾರ್ಯ ನಂತರ ಆಲ್‌ರೌಂಡರ್‌ ಆಗಿ ಮಿಂಚುತ್ತಿದ್ದಾರೆ.
 
2022 ರಲ್ಲಿ ನೆನಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿ ಇವರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
 
ಮೈಸೂರ್ ನಲ್ಲಿ ನಡೆದ ಮಾಫ್ಯೂಸಿಲ್ ವಿಮೆನ್’ಸ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್‌ಗಳ  ಸಾಧನೆಗೈದು  ವುಮನ್  ಆಫ್  ದಿ ಮ್ಯಾಚ್ ಪ್ರಶಸ್ತಿಯನ್ನು  ಗಿಟ್ಟಿಸಿಕೊಂಡರು. 
 
ಸಿ  ಸಿ ಎಲ್ 2023 ರಲ್ಲಿ ರನ್ನರ್ ಅಪ್ ಪ್ರಶಸ್ತಿ
 
ಸಿ ಪಿ ಎಲ್ 2023 ರಲ್ಲೂ ಬ್ಯಾಕ್ ಟು ಬ್ಯಾಕ್ 5 ಬೌಂಡರಿಗಳನ್ನು ಬಾರಿಸಿ, ಅತ್ಯಧಿಕ ರನ್‌ ಹೊಡೆದು ವುಮನ್  ಆಫ್  ದಿ ಮ್ಯಾಚ್ ಪ್ರಶಸ್ತಿ  ಗಳಿಸಿದರು.
 
ಉಡುಪಿ ಸಿಂಗರ್ಸ್ ಟ್ರೋಫಿ 2023 ರಲ್ಲಿ ವಿನ್ನರ್ಸ್
 
ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ‌ ಹೊಂದಿದ್ದು ಸ್ಥಳೀಯ ಮಟ್ಟದ ಟೂರ್ನಿಗಳಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್‌.
 
 
” ಕ್ರಿಕೆಟ್ ಮೇಲಿನ ಆಸಕ್ತಿಯಿಂದ, ಕಠಿಣ ಪರಿಶ್ರಮದಿಂದ ಮತ್ತು  ಹಿರಿಯರ ಪ್ರೇರಣೆ, ಹಾಗೂ ಕೋಚ್ ಗಳ ಮಾರ್ಗದರ್ಶನದಿಂದ ಕ್ರಿಕೆಟ್‌ಪಟು ಆಗಿದ್ದೇನೆ. ಕ್ರಿಕೆಟ್  ಪ್ರತಿಭೆಗಳಿಗೆ  ಪ್ರೋತ್ಸಾಹ ಸಿಕ್ಕರೆ ಖಂಡಿತವಾಗಿಯೂ  ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಸಾಧನೆಗೆ  ನಿರಂತರ ಅಭ್ಯಾಸ  ಹಾಗೂ ಶ್ರಮ ಮುಖ್ಯ. ಮೊದಲ ಬಾರಿ ಅಂಡರ್ 19 ರಾಜ್ಯ ತಂಡದ ಪಂದ್ಯದಲ್ಲಿಆಯ್ಕೆ ಆದಾಗ ಬಹಳಷ್ಟು ಸಂತಸ ತಂದಿತ್ತುಎಂದು ವೈಷ್ಣವಿ ಹೇಳಿದರು. ರಾಜ್ಯ  ತಂಡಕ್ಕೆ ಆಯ್ಕೆಯಾಗುವ ಗುರಿ ಹೊಂದಿದ್ದು, ಹಲವು ಟೂರ್ನಿಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ”  ಎಂದು ಸ್ಪೋರ್ಟ್ಸ್ ಕನ್ನಡದ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
 
 
ಕಳೆದ ಎರಡು ವರ್ಷಗಳಿಂದ ವಿವಿಧ ವಯೋಮಿತಿಯ  ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವೇಗಿ ವೈಷ್ಣವಿ ರಾಜ್ಯ ಕಿರಿಯರ ತಂಡದ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.  ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರ ತಂದೆ ಸತೀಶ್ ಆಚಾರ್ಯ ಅಕ್ಕಸಾಲಿಗರಾಗಿದ್ದಾರೆ ಮತ್ತು ಅವರ ತಾಯಿ ಗೀತಾ ಎಸ್ ಆಚಾರ್ಯ ಅವರು ಟೈಲರಿಂಗ್ ಅಂಗಡಿಯನ್ನು ನಡೆಸುತ್ತಿದ್ದಾರೆ.  ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಆಸೆ ಅವಳಲ್ಲಿ ಬೇರೂರಿದೆ.  ಮುಂದೆ ಬೆಂಗಳೂರಿನ ಪ್ರಸಿದ್ಧ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿ ಪಡೆಯುವ ಆಸೆ ಇದ್ದು, ಸೂಕ್ತ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ . ಉಡುಪಿಯ ಈ  ಮಹಿಳಾ ಕ್ರಿಕೆಟ್  ಪ್ರತಿಭೆಗೆ ಈಗ ನೆರವಿನ ಹಸ್ತ ಬೇಕಿದೆ .  
 
ವೈಷ್ಣವಿ ಆಚಾರ್ಯ ಸಾಧನೆಗೆ ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ ಆರ್  ಕೆ ಆಚಾರ್ಯ ಅಭಿನಂದಿಸಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಧನೆ ತೋರಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ, ತಾರೆಯಾಗಿ ಬೆಳೆದು ಉಡುಪಿ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
 
ವೈಷ್ಣವಿ ಬೌಲಿಂಗ್ ವೀಡಿಯೋ

 
 
ಆಲ್ ದಿ ಬೆಸ್ಟ್  ವೈಷ್ಣವಿ ಆಚಾರ್ಯ…
 
 
ಸುರೇಶ್ ಭಟ್ ಮೂಲ್ಕಿ  &
ಟೀಮ್ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಏಪ್ರಿಲ್ 29 ಮತ್ತು 30 ರಂದು ಮಂಗಳೂರಿನಲ್ಲಿ ಎ.ಜೆ ಗ್ರೂಪ್ಸ್ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ

ಮಂಗಳೂರು-ಎ.ಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್  ಕಾರ್ಪೊರೇಟ್ ಪ್ರೀಮಿಯರ್  ಲೀಗ್‌ ‘ ಅತಿ ದೊಡ್ಡ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ ಮಂಗಳೂರಿನಲ್ಲಿ  ಏಪ್ರಿಲ್ 29 ರಿಂದ 30 ರವರೆಗೆ ಎ ಜೆ  ಮೈದಾನದಲ್ಲಿ ಆಯೋಜಿಸಲಾಗಿದೆ
ಒತ್ತಡದ ಕಾರ್ಪೊರೇಟ್ ಜೀವನಕ್ಕೆ ಒಂದು ಚಿಟಿಕೆ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ, ಎ ಜೆ ಕ್ರಿಕೆಟ್ ಕ್ಲಬ್  ಕರಾವಳಿಯ ಕಾರ್ಪೊರೇಟ್‌ಗಳಲ್ಲಿ ಕ್ರಿಕೆಟ್ ಕ್ರಿಯೆಯನ್ನು ಉತ್ತೇಜಿಸಲು – ‘ AJ ಕಾರ್ಪೊರೇಟ್ ಪ್ರೀಮಿಯರ್ ಲೀಗ್‌ ‘ ಎಂಬ ಶೀರ್ಷಿಕೆಯ ನವೀನ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ರೂಪಿಸಿದೆ.  ಹದಿನಾರು ತಂಡಗಳು, ಪ್ರತಿನಿಧಿಗಳು ಸೇರಿದಂತೆ ದೊಡ್ಡ ಕಂಪನಿಗಳು ಈ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತವೆ. ಪಂದ್ಯಗಳು  ಹಗಲು-ರಾತ್ರಿ ರೂಪದಲ್ಲಿ ನಡೆಯುತ್ತವೆ.
ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವ  ತಂಡಗಳು:
ಕೆಎಂಸಿ ಮಣಿಪಾಲ
ಮಣಿಪಾಲ್ ಟೆಕ್ನಾಲಜೀಸ್
ಮಾಹೆ, ಮಣಿಪಾಲ
ಕೆಎಂಸಿ ಮಂಗಳೂರು
ಸೆಮ್ನಾಕ್ಸ್ ಸೊಲ್ಯೂಷನ್ಸ್
ನೋವಿಗೊ
ಎ ಆರ್  ಎಲ್
ನಿಟ್ಟೆ ಯೂನಿವರ್ಸಿಟಿ
ಯೇನಪೋಯ ಗ್ರೂಪ್
ಇಂಡಿಯಾನಾ ಗ್ರೂಪ್
ಎ ಜೆ ಹಾಸ್ಪಿಟಲ್ಸ್ ಗ್ರೂಪ್
ಎ ಜೆ ರೆಸ್ಟಾರಂಟ್ಸ್
ಎಂ ಸಿ ಎಫ್
ನಿವಿಯಸ್
ಜೆ ಎಸ್ ಐ ಸ್ಪೋರ್ಟ್ಸ್ ಇಂಟರ್ನ್ಯಾಷನಲ್
ಮಂಗಳೂರು ವಿಶ್ವವಿದ್ಯಾನಿಲಯ
• ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳು ಮಾತ್ರ ಆಡಲು ಅರ್ಹರಾಗಿರುತ್ತಾರೆ.
• ಪ್ರತಿಯೊಂದು ತಂಡವು ಲೀಗ್ ಹಂತದ ಮತ್ತು ನಾಕ್ ಔಟ್ ಪಂದ್ಯಗಳಲ್ಲಿ ಪಂದ್ಯಗಳನ್ನು ಆಡುತ್ತದೆ
• ಇಡೀ ಪಂದ್ಯಾವಳಿಯನ್ನು ಟೆನಿಸ್ ಬಾಲ್ (ವಿಲ್ಸನ್) ನೊಂದಿಗೆ ಆಡಲಾಗುತ್ತದೆ.
• ಎಲ್ಲಾ ಕ್ರಿಕೆಟ್ ಆಟಗಾರರು ಸಂಘಟಕರು ನೀಡುವ ಸಮವಸ್ತ್ರವನ್ನು ಧರಿಸಬೇಕು
ಟೂರ್ನಮೆಂಟ್ ಕಮಿಟಿಯ ಡಾಕ್ಟರ್ ಸಾಕ್ಷಾತ್ ರೈ ಪಂದ್ಯಾವಳಿಯ ವಿವರಗಳನ್ನು ಸ್ಪೋರ್ಟ್ಸ್ ಕನ್ನಡದ ಜೊತೆ ಹಂಚಿಕೊಡರು. ” ಈ ವರ್ಷದಲ್ಲಿ ಏಪ್ರಿಲ್ 29 ಮತ್ತು 30 ರಂದು  ಎಜೆ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಸಂಭ್ರಮಕ್ಕೆ ತಮ್ಮೆಲ್ಲರನ್ನು ಆಹ್ವಾನಿಸುತ್ತೇನೆ!  ಕಾರ್ಪೊರೇಟ್ ತಂಡಗಳಿಗೆ  ಪವರ್ ಹಿಟ್ಟಿಂಗ್ ಅನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ! ಮೈದಾನದಲ್ಲಿ ಕಷ್ಟಪಟ್ಟು ಆಡೋಣ ಆದರೆ ಮುಖ್ಯವಾಗಿ ಸೌಹಾರ್ದತೆಯನ್ನು ಹಂಚಿಕೊಳ್ಳೋಣ! ”  ಎಂದು ಅವರು ತಿಳಿಸಿದರು. ಟೂರ್ನಮೆಂಟ್ ಸಂಘಟನಾ ಕಾರ್ಯದರ್ಶಿ ಡಾಕ್ಟರ್  ಶರಣ್ ಜೆ ಶೆಟ್ಟಿ ಅವರು ಪಂದ್ಯಾವಳಿಯ  ಕ್ರಿಕೆಟ್ ಸಂಭ್ರಮ ಆನಂದಿಸಲು ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಿದ್ದಾರೆ.
ಸ್ಪೋರ್ಟ್ಸ್ ಕನ್ನಡದ  ಕೆ ಆರ್ ಕೆ ಆಚಾರ್ಯ ಮಾತನಾಡಿ ”ಒತ್ತಡದ ಕೆಲಸದ ಜೀವನ ಮತ್ತು ಬೇಸರದ ಜೀವನಶೈಲಿಯು ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯದ ಮೇಲೆ ಸಾಮಾನ್ಯವಾಗಿ  ಸಮಸ್ಯೆ ಬೀರುವ ಕಾರಣ ಇಂತಹ ಟೂರ್ನಮೆಂಟ್ ಗಳು ಅನುಕೂಲ ಮತ್ತು ಅಗತ್ಯವಾಗಿದೆ” ಎಂದರು.
ಕ್ರಿಕೆಟ್ ಪ್ರೇಮಿಗಳು ಅತ್ಯಾಕರ್ಷಕ ಕಾರ್ಪೊರೇಟ್ ಟೂರ್ನಮೆಂಟನ್ನು ವೀಕ್ಷಿಸಿ ಕ್ರಿಕೆಟ್ ಲೀಗ್ (CPL) ಹೆಚ್ಚು ದೊಡ್ಡ ಮತ್ತು ಉತ್ತಮ ಸ್ವರೂಪದಲ್ಲಿ ನಡೆಯಲಿ.
ಶುಭ ಕೋರುವ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ದಿ. ಶ್ರೀಮತಿ ಲೂಸಿ ಸಲ್ದಾನ‌ ಮೆಮೋರಿಯಲ್ ಕಪ್ – 2023 ಅಂಡರ್ -14 ರಾಜ್ಯ ಮಟ್ಟದ ಲೆದರ್ ಬಾಲ್ ಟಿ20 ಕ್ರಿಕೆಟ್ ಪಂದ್ಯಾವಳಿ

ಕಾರ್ಕಳ ಸಮೀಪದ ರಂಗನಪಲ್ಕೆ ಕೌಡೂರು ಸ್ಟೇಡಿಯಂ ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್ ೧೪ ಕ್ರಿಕೆಟ್ ಪಂದ್ಯಾಟಕ್ಕೆ ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಹಿರಿಯ  ಆಟಗಾರರಾದ ಸದಾನಂದ ಶಿರ್ವ ಚಾಲನೆ ನೀಡಿದರು.
ಸಾಗರ, ಭದ್ರಾವತಿ,ಮೈಸೂರು, ಬ್ರಹ್ಮಾವರ, ಮಂಗಳೂರು, ಮಣಿಪಾಲ, ಶಿರ್ವ, ಪುತ್ತೂರು ಭಾಗದ ಒಟ್ಟು ೧೨ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ. ಮುಂದಿನ ಐದು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.
ಈ ಸಂದರ್ಭ ಕೌಡೂರು ಸ್ಟೇಡಿಯಂ ಸಂಸ್ಥಾಪಕ ಲಾರೆನ್ಸ್ ಸಲ್ದಾನ ಕೌಡೂರು, ಮೈದಾನದ ವ್ಯವಸ್ಥಾಪಕ ಮೆಲ್ವಿನ್ ನೊರೊನ್ಹಾ ,  ಪಂದ್ಯಾಟ ಸಂಯೋಜಕ ಸದಾನಂದ ಶಿರ್ವ ಮತ್ತಿತರರು ಇದ್ದರು.
ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಏಪ್ರಿಲ್ 8 ರಿಂದ 12 ರ ವರೆಗೆ, ಲೀಗ್ ಕಮ್ ನಾಕ್ ಔಟ್ ರೂಪದಲ್ಲಿ ಪ್ರತೀ ದಿನ ಮೂರು ಪಂದ್ಯಗಳು ನಡೆಯಲಿವೆ.
ಭಾಗವಹಿಸುವ ತಂಡಗಳು:
ಬೆಳ್ಳಿಪಾಡಿ ಆಳ್ವಾಸ್ ಅಕಾಡೆಮಿ ಬ್ರಹ್ಮಾವರ,
22 ಯಾರ್ಡ್ಸ್ ಸ್ಕೂಲ್ ಆಫ್  ಅಕಾಡೆಮಿ ಮಂಗಳೂರು,
ಪುತ್ತೂರು ಕ್ರಿಕೆಟ್ ಅಕಾಡೆಮಿ ಪುತ್ತೂರು,
ಸೇಂಟ್ ಅಲೋಶಿಯಸ್ ಕ್ರಿಕೆಟ್ ಅಕಾಡೆಮಿ ಮಂಗಳೂರು,HJC ಕ್ರಿಕೆಟ್ ಅಕಾಡೆಮಿ ಶಿರ್ವ,
ಉಡುಪಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್  ಮಣಿಪಾಲ,ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಕರಾವಳಿ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಸಾಗರ್ ಬಾಯ್ಸ್ ಇಲೆವೆನ್ ಸಾಗರ,
ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ಮೈಸೂರು,
ರಘುವೀರ್  ಕ್ರಿಕೆಟ್ ಅಕಾಡೆಮಿ ಭದ್ರಾವತಿ.
ಸನ್ ರೈಸ್ ಕ್ರಿಕೆಟ್ ಅಕಾಡೆಮಿ  ಆಯೋಜಿಸಿರುವ  ದಿ. ಶ್ರೀಮತಿ ಲೂಸಿ ಸಲ್ದಾನ  ಇವರ  ಸ್ಮರಣಾರ್ಥ ನಡೆಯುವ ರಾಜ್ಯಮಟ್ಟದ 14 ರ ವಯೋಮಿತಿಯ ಈ ಲೆದರ್ ಬಾಲ್ T-20 ಕ್ರಿಕೆಟ್ ಪಂದ್ಯಾವಳಿಗೆ ಸ್ಪೋರ್ಟ್ಸ್ ಕನ್ನಡ. ಕಾಮ್ ಶುಭಾಶಯ ಕೋರುತ್ತಿದೆ. ಕ್ರಿಕೆಟ್ ನಮ್ಮ ಪ್ರಮುಖ ಆಟ.  ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರರು ಕ್ರೀಡಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ , ಕ್ರಿಕೆಟ್‌ನಲ್ಲಿ ಉತ್ಸಾಹವನ್ನು ಹೊಂದಿ ಮತ್ತು ಉತ್ತಮ ಪ್ರದರ್ಶನ  ತೋರ್ಪಡಿಸಿ  ಮುಂದಿನ ಕ್ರಿಕೆಟ್ ತಾರೆಯಾಗುವ ಅವಕಾಶವನ್ನು ಪಡೆದುಕೊಳ್ಳಿ ಎಂದು ಹಾರೈಸುತ್ತಿದೆ.
Categories
ಅಥ್ಲೆಟಿಕ್ಸ್

ನಾಟ್ಯ ಶಾಸ್ತ್ರದ ಮೂಲಕ 8ನೇ ವಿಶ್ವದಾಖಲೆ ನಿರ್ಮಿಸಿದ ಯೋಗ ಸಾಧಕಿ ತನುಶ್ರೀ ಪಿತ್ರೋಡಿ

ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ನಾಟ್ಯ ಶಾಸ್ತ್ರದಲ್ಲಿ 8ನೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರದಲ್ಲಿ ವಿವರಿಸಿದ 108 ಕರಣಗಳ ಭಂಗಿಗಳನ್ನು 3 ನಿಮಿಷ 29 ಸೆಕೆಂಡ್‌ಸ್‌‌ನಲ್ಲಿ ಪ್ರಸ್ತುತಪಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾದರು.
ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ.
108 ನಾಟ್ಯಶಾಸ್ತ್ರದಲ್ಲಿ ಇದನ್ನು ಕ್ರೋಢಿಕರಿಸಲಾಗಿದೆ ಎಂದು ತನುಶ್ರೀ ಅವರ ಗುರು ಶ್ರೀರಾಮಕೃಷ್ಣ ಕೊಡಂಚ ತಿಳಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಗೌರವ್ ಮಿತ್ತಲ್ ಅವರು ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು 8ನೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು, ಒಂದು ಗಿನ್ನೆಸ್ ರೆಕಾರ್ಡ್, 7 ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.