Categories
ಯಶೋಗಾಥೆ

ಮಹಾ ಕ್ರಿಕೆಟರ್ ವಿನೋದ್ ಕಾಂಬ್ಳಿಯು ಎಡವಿದ್ದೆಲ್ಲಿ? ಈ ಭಾರತೀಯ ಕ್ರಿಕೆಟರ್ ಮೂಲೆಗುಂಪು ಆದದ್ದು ಯಾಕೆ?

ಭಾರತದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಇತ್ತೀಚೆಗಷ್ಟೇ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತರು! ತೀರಾ ಹತಾಶೆ ತೋಡಿಕೊಂಡರು!
ನನ್ನ ಮನಸ್ಸು 34 ವರ್ಷಗಳ ಹಿಂದಕ್ಕೆ ಓಡಿತು.
ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.
1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!
ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.
“ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು  ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು  ಎರಡೂ ಅದ್ಭುತ ಆಗಿತ್ತು”
“ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ  ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”
“ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”
ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.
ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ  ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ  ಆರಂಭದಲ್ಲಿ  ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.
ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!
ಆದರೆ ಆತ ಬಹುಬೇಗ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 24ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.
ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪೆತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!
ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು  ಕೂಡ ಎಂದು ನಾವು ನೋಡಿದ್ದೇವೆ!
ಮುಂದೆ ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟು ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ  ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!
ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ  ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಸರ್ಜರಿ ಆಯ್ತು.
ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ  ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!
ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಒಂದು  ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಈಗ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO! 
ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ  ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!
Categories
ಯಶೋಗಾಥೆ

ಅಂಗವೈಕಲ್ಯವೆಂಬ ಅಡೆತಡೆಯ ನಡುವೆ ಅರಳಿದ ಪ್ರತಿಭೆ ಸುಮಾ ಪಂಜಿಮಾರ್

ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ವೈಕಲ್ಯತೆಗಳೆನೇ ಇರಲಿ, ನಮ್ಮ ಬದುಕಿನ ಬೀಳುಗಳಲ್ಲಿ ಮನೋಬಲವನ್ನು ಕಳೆದುಕೊಳ್ಳದೆ ಬದಲಾವಣೆಗೆ ಹರಿಕಾರರು ನಾವಾದಲ್ಲಿ ಸಾಧನೆಯನ್ನು ಶಿಖರವನ್ನೇರಬಹುದೆಂಬ ಮಾತಿಗೆ ಮಾದರಿಯಾಗಿ ವೈಕಲ್ಯತೆಯನ್ನು ಮೀರಿ ಕಲಾ ಸಾಧನೆಯ ಬೆನ್ನೇರಿ ಸಾಧನೆಯ ಹಾದಿಯಲ್ಲಿ ಬೆಳಗುತ್ತಿರುವ ವಿಶೇಷ ಪ್ರತಿಭೆ ಸುಮಾ ಪಂಜಿಮಾರ್.
        ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ ದಂಪತಿಗಳ ಪುತ್ರಿಯಾಗಿರುವ ಸುಮಾ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ತು ಕೆ. ಜಿ ತೂಕ ಹೊಂದಿರುವ ಇವರು ಪ್ರೌಢವಸ್ಥೆಯನ್ನು ದಾಟಿ ನಿಂತವರು. ಅಂಗವಿಕಲತೆ ಬದುಕಿನ ಕನಸುಗಳಿಗೆ ವಿರುದ್ಧವಾಗಿ ಅಬ್ಬರಿಸಿದರೂ ಆತ್ಮಸ್ಥೈರ್ಯವನ್ನೆಂದಿಗೂ ಕಳೆದುಕೊಳ್ಳದೆ ಜಟಿಲ ಸಮಸ್ಯೆಗಳ ನಡುವೆಯೇ ಬೆಳೆದುನಿಂತ ಪ್ರೇರಣಗಾಥೆಯಿವರು. ತನ್ನ ಕಲಿಕಾ ಉತ್ಸುಕತೆ, ತುಡಿತಕ್ಕೆ ಅಮ್ಮನ ತೋಳು ಆಸರೆಯಾಗಿ ನಿಂತಾಗ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯವರಿಗೆ ವಿದ್ಯಾಭ್ಯಾಸ ಪಡೆದರು.ಆ ಸಂದರ್ಭದಲ್ಲಿ ತನ್ನೊಂದಿಗೆ ಜೀವನಾಡಿಯಂತೆ ನಿಂತ ಶಿಕ್ಷಕವರ್ಗ, ಕುಟುಂಬ ತುಂಬಿದ ಧೈರ್ಯ ಹಾಗೂ ಪ್ರೀತಿಯನ್ನು ಈ ಸಂದರ್ಭದಲ್ಲಿ ಮನಸಾರೆ ಸ್ಮರಿಸಿಕೊಳ್ಳುತ್ತಾರೆ. ಮುಂದೆ ಕಲಿಕೆಯ ಹುಮ್ಮಸ್ಸು ತನ್ನಲ್ಲಿ ದೃಢವಾಗಿದ್ದರೂ ದೇಹದ ಸ್ವಾಧೀನತೆ  ತನ್ನ ಕನಸಿಗೆ ಸಾಥ್ ನೀಡಲಿಲ್ಲ. ಸ್ವತಂತ್ರವಾಗಿ ನಡೆಯುವುದೂ ಕಷ್ಟವೆನಿಸಿ ಹಾಸಿಗೆಯಲ್ಲೇ ಜೀವನ ಸವೆಸಬೇಕಾದ ಪರಿಸ್ಥಿತಿಯನ್ನೂ ಎದುರಿಸಿದರು.
         ಬದುಕುವ ಛಲ ನಮ್ಮಲ್ಲಿ ಬಲವಾಗಿದ್ದರೆ ನ್ಯೂನತೆಗಳೆಲ್ಲವೂ ಸೋತು ಶರಣಾಗುತ್ತದೆ ಎನ್ನುವ ಮಾತು ಇವರ ಜೀವನದಲ್ಲಿ ಸತ್ಯವಾಗಿ ತೋರಿತು. ತನ್ನ ಅಣ್ಣ ಗಣೇಶ್ ಪಂಜಿಮಾರ್ ತನ್ನಂತೆಯೇ ವಿಕಲಾಂಗರಾಗಿದ್ದರೂ ಚಿತ್ರಕಲಾವಿದನಾಗಿ ರೂಪುಗೊಂಡು ಸದಾ ಕ್ರಿಯಾತ್ಮಕತೆ,ಕಾರ್ಯಕ್ಷಮತೆಯಿಂದ ತೊಡಗುವ ಪರಿ ಇವರಿಗೂ ಸ್ಫೂರ್ತಿಯಾಯಿತು. ತನ್ನೆಲ್ಲಾ ನ್ಯೂನತೆಗಳನ್ನು ಮರೆತು ಸಾಧನೆಗೆ ಟೊಂಕ ಕಟ್ಟಿ ನಿಂತರು. ಸ್ಪೂರ್ತಿ,ಉತ್ಸಾಹ ಹುರುಪಿನೊಂದಿಗೆ ಕಲಾ ಪ್ರಯತ್ನಕ್ಕೆ ಕಾಲಿಟ್ಟು ಚಿತ್ರಕಲೆ, ಕರಕುಶಲತೆಯಲ್ಲಿ ತೊಡಗಿಸಿಕೊಂಡರು.ತನ್ನ ಆಸಕ್ತಿಯಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳಲು ಮೊದಮೊದಲು ಸಾಧ್ಯವಾಗದಿದ್ದರೂ ಪ್ರಯತ್ನ ಪಟ್ಟಂತೆಯೇ ಅಸಾಧ್ಯಗಳೆಲ್ಲವೂ ಸಾಧ್ಯವಾಗಿ ನಿಂತಿತು.
          ಕಾಲು ಹಾಗೂ ಕೈಗಳು ಇದುವರೆಗೂ ಎಂಟು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರೂ ಎಂದಿಗೂ ಮರುಕ ಪಟ್ಟುಕೊಳ್ಳದೆ ಋಣಾತ್ಮಕತೆಗೆ ಸವಾಲೆಸೆದು ಬೆಳೆದು ನಿಂತ ಇವರ ಯಶೋಗಾಥೆ ಶೂನ್ಯ ಭಾವನೆಯ ಮನಗಳಲ್ಲಿ ಬದಲಾವಣೆಯ ಬೆಳಕನ್ನು ತರಬಲ್ಲದು.
     ಸುಮಾ ಪಂಜಿಮಾರ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಎಂಬ ಯೂಟ್ಯೂಬ್,ಇನ್ಸ್ಟಾಗ್ರಾಂ,ಹಾಗೂ ಫೇಸ್ಬುಕ್ ನಲ್ಲಿ ಪೇಜ್ ಪರಿಚಯಿಸಿ  ತಮ್ಮ ಕಲಾಪ್ರದರ್ಶನಕ್ಕೆ ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ .ಇದುವರೆಗೂ 70 ಕ್ಕೂ ಹೆಚ್ಚು ಆಕರ್ಷಕ ಕರಕುಶಲತೆಯನ್ನು ರಚಿಸಿ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಇದುವರೆಗೆ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
      “ಅಂಗವೈಕಲ್ಯತೆಯ ಬಗ್ಗೆ ನನಗೆಂದಿಗೂ  ಕೀಳರಿಮೆ ಕಾಡಿಲ್ಲ. ಆತ್ಮಸ್ಥೈರ್ಯವೆಂಬ ಶಕ್ತಿ ನಮ್ಮಲಿದ್ದರೆ ಜೀವನ ಎಂದಿಗೂ ಅಪೂರ್ಣವೆನಿಸುವುದಿಲ್ಲ.ನನ್ನ ಕನಸುಗಳಿಗೆ ಪೂರಕವಾದ ಬೆಂಬಲ ಕುಟುಂಬ ಹಾಗೂ ಸಮಾಜದಿಂದ ದೊರೆತಿದೆ.ಪುಟ್ಟ ಪ್ರಯತ್ನಗಳಿಗೂ  ಸಿಕ್ಕ ಪ್ರೋತ್ಸಾಹದಿಂದ ದಿಟ್ಟ ಹೆಜ್ಜೆಯನ್ನಿಡಲು ಸಾಧ್ಯವಾಗಿದೆ. ವಿಕಲತೆಯೆಂದಿಗೂ ಶಾಪವಲ್ಲ.ದೇವರು ಕೊಟ್ಟ ವರ” ಎನ್ನುತ್ತಾರೆ ಸುಮಾ.
        ಸವಾಲುಗಳು ಜೀವನವನ್ನು ಆಸಕ್ತಿದಾಯಕವಾಗಿಸುತ್ತವೆ .ಆ ಸವಾಲುಗಳನ್ನು ಮೆಟ್ಟಿ ನಿಂತಾಗ ಜೀವನ ಪರಿಪೂರ್ಣವಾಗುತ್ತದೆ.ತನ್ನೆದುರಿಗೆ  ಸಾವಿರಾರು ಸವಾಲುಗಳಿದ್ದರೂ ಅದನ್ನೆಲ್ಲವನ್ನೂ ಮೀರಿ ಕಲೆಯಲ್ಲಿ ಭವಿಷ್ಯದ ಬೆಳಕು ಕಂಡ ಇವರ ಜೀವನಗಾಥೆ ಅಂಧಕಾರ ತುಂಬಿದ ಮನಗಳಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ.ಈ ವಿಶೇಷ ಪ್ರತಿಭೆಯ  ಸಾಧನೆಯ ಹಾದಿಗೆ ಇನ್ನಷ್ಟು ಗೌರವಗಳು ಅರಸಿ ಬರಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲೆಂದು ನಾವೆಲ್ಲರೂ ಆಶಿಸೋಣ.
Categories
ಯಶೋಗಾಥೆ

ಕ್ರೀಡಾ ಕ್ಷೇತ್ರದಲ್ಲಿ ಮಿನುಗುತ್ತಿರುವ ದ.ಕ ಜಿಲ್ಲೆಯ ಹೆಮ್ಮೆಯ ಸಾಧಕ ಹರಿಪ್ರಸಾದ್ ರೈ

‘ಮರಗಿಡಗಳ ತಲೆಯ ಒರೆಸಿ, ಹಿಮಬಿದ್ದ ನೆಲವ ಒರೆಸಿ’ ಎಂಬ ಕವಿವಾಣಿಯು ಹೇಗೆ ಸೂರ್ಯನಿಗೆ ಅನ್ವಯಿಸುತ್ತದೆಯೋ ಅಂತೆಯೇ ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅನೇಕ ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿರುವ ನಮ್ಮ ಹೆಮ್ಮೆಯ ಕ್ರೀಡಾ ಸಾಧಕ ಹರಿಪ್ರಸಾದ್ ರೈ.ಜಿ.
                01-06-1978  ರಂದು ಸಂಜೀವ ರೈ ಮತ್ತು ಶ್ರೀಮತಿ ರತ್ನಾವತಿ ರೈ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳ್ತಿಲದಲ್ಲಿ ಜನಿಸಿದ ಹರಿಪ್ರಸಾದ್ ರೈ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆ ತಿಂಗಳಾಡಿ ಹಾಗೂ ಕೆಯ್ಯೂರಿನಲ್ಲಿ ಪೂರ್ಣಗೊಳಿಸಿ ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದು ಬಿ.ಪಿ.ಎಡ್ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು.
            ಶಾಲಾ ದಿನಗಳಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ವಿವಿಧ ಹಂತಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಖೋ – ಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯ. 2005 ರಿಂದ 2008 ರವರೆಗೆ ಕೇರಳದ ಕೊಟ್ಟಯಂ ಬೆಥನಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ 2009 ರಿಂದ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ಅನೇಕ ಕ್ರೀಡಾಪ್ರತಿಭೆಗಳನ್ನು ತಮ್ಮ ತರಬೇತಿಯಲ್ಲಿ ಪಳಗಿಸಿ ಸಾಧನೆಯ ಶಿಖರವನ್ನೇರಲು ಇವರು ಶ್ರಮಿಸುವ ರೀತಿ ಶ್ಲಾಘನೀಯ.
         ನಿರಂತರವಾಗಿ ಕ್ರೀಡಾಪ್ರತಿಭೆಗಳಿಗೆ ಸಲಹೆ ಸೂಚನೆಗಳನ್ನಿತ್ತು ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಸತತ ಹನ್ನೊಂದು ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಯ ಗರಿಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ಖೋ-ಖೋ, ಕಬಡ್ಡಿ, ವಾಲಿಬಾಲ್, ತ್ರೋಬಾಲ್ ವಿಭಾಗಗಳಲ್ಲಿ ಅನೇಕ ಕ್ರೀಡಾ ಪ್ರತಿಭೆಗಳ ಕೀರ್ತಿ ಬೆಳಗುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.
         ಕ್ರೀಡೆಯೇ ಕಿರೀಟವೆನ್ನುವ ಹರಿಪ್ರಸಾದ್ ರೈ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು 2016 ರಲ್ಲಿ ಸ್ಪೇನ್ ದೇಶದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿರುತ್ತಾರೆ.ಇವರು ಈವರೆಗೂ ಸತತ ನಾಲ್ಕು ಬಾರಿ ರಾಷ್ಟ್ರ ಮಟ್ಟ ಹಾಗೂ ಎಂಟು ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.
              ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ನ ತಾಂತ್ರಿಕ ಅಧಿಕಾರಿಯಾಗಿ, ಕರ್ನಾಟಕ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಕಬಡ್ಡಿಯ ತೀರ್ಪುಗಾರರಾಗಿರುವ ಇವರ ಸಾಧನೆಯ ಹಾದಿಗೆ 2012-13 ರಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ‘ಯುವ ಪ್ರತಿಭಾ ಪುರಸ್ಕಾರ’,ರೋಟರಿ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಸಾಧನಾಶ್ರೀ ಪ್ರಶಸ್ತಿ ಹಾಗೂ ಅನೇಕ ಸಂಘ – ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
              ನಿರಂತರವಾಗಿ ಕ್ರೀಡಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸುತ್ತಾ ಅದೆಷ್ಟೋ ಕ್ರೀಡಾ ಪ್ರತಿಭೆಗಳ ಸಾಧನೆಯ ಹಾದಿಗೆ ಕಾರಣಕರ್ತರಾಗಿರುವ ಹರಿಪ್ರಸಾದ್ ರೈಯವರ ಮಾರ್ಗದರ್ಶನ ಇನ್ನಷ್ಟು ಕ್ರೀಡಾ ಪ್ರತಿಭೆಗಳಿಗೆ ದೊರೆತು ರಾಷ್ಟ್ರ,ಅಂತರಾಷ್ಟ್ರೀಯಮಟ್ಟದಲ್ಲಿ ಮಿಂಚುವಂತಾಗಲಿ. ಕ್ರೀಡಾಕ್ಷೇತ್ರದಲ್ಲಿ  ಇನ್ನೂ ಹೆಚ್ಚಿನ ಸಾಧನೆಗೆ ಭಗವಂತನ ಅನುಗ್ರಹವಿರಲಿ. ಇವರ ಸಾಧನೆಯ ಹಾದಿ ಇತರರಿಗೂ ಪ್ರೇರಣೆಯಾಗಲೆನ್ನುವುದೇ ಆಶಯ.
Categories
ಇತರೆ ಭರವಸೆಯ ಬೆಳಕು ಯಶೋಗಾಥೆ ರಾಜ್ಯ

ಕರಾವಳಿ ಕನ್ನಡಿಗ ಕೋಟ ರಾಮಕೃಷ್ಣ ಆಚಾರ್ಯರಿಗೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಟೆನ್ನಿಸ್ ಬಾಲ್ ಕ್ರಿಕೆಟ್ ಗೆ ಆಟಗಾರರ ಮಧ್ಯೆ ಒಂದು ಸಂಕೋಲೆಯನ್ನು  ಸೃಷ್ಟಿಸಿದ ಕರ್ನಾಟಕದ ಮೊತ್ತ ಮೊದಲ ಕ್ರೀಡಾ ವೆಬ್ ಸೈಟ್ ಎಂಬ ಕೀರ್ತಿಗೆ ಪಾತ್ರವಾಗಿದೆ
ಈ sportskannada.com . ಕೋಟ ರಾಮಕೃಷ್ಣ ಆಚಾರ್ ರವರು ಸತತ 10 ವರ್ಷಗಳ ಅಧ್ಯಯನ ಮತ್ತು ಅವಿರತ ಶ್ರಮದಿಂದ ಕರ್ನಾಟಕದಲ್ಲಿರುವ 1970 ರಿಂದ 2020 ರ ಕಾಲಘಟ್ಟದ ಹಿರಿಯ ಹಾಗೂ ಕಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರನ್ನು ಅವರಿದ್ದಲ್ಲೇ ಹೋಗಿ ಸಂದರ್ಶಿಸಿ ಅವರ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಿರಿಯ ಆಟಗಾರರ ಅನುಭವಗಳನ್ನು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಹಂಚಿ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಹಳೆಯ ಬೇರು ಹೊಸ ಚಿಗುರೊಡೆಯುದಕ್ಕೊಸ್ಕರ ನೀರೆರೆಯುವ ಪ್ರಯತ್ನವನ್ನ ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಹಿರಿಯ ಮತ್ತು ಕಿರಿಯ ಆಟಗಾರರನ್ನು “ರಾಜ್ಯ ಟೆನ್ನಿಸ್ ಕ್ರಿಕೆಟ್” ಎಂಬ ಗ್ರೂಪ್ ಮೂಲಕ ಒಗ್ಗೂಡಿಸುವ ಸಫಲ ಪ್ರಯತ್ನವನ್ನು ಮಾಡಿರುವ ಆರ್.ಕೆ sportskannada.com ವೆಬ್ಸೈಟ್ ಗಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ವೆಬ್ಸೈಟ್ ಲಾಂಚಿಂಗ್  ಕಾರ್ಯಕ್ರಮದ ಯಶಸ್ಸಿಗೆ  ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯವನ್ನು ಮಾಡಿರುವರು ಎನ್ನುವುದಕ್ಕೆ ಸಂತಸ ಪಡಬೇಕು ಹಾಗೂ ಯಾವುದೇ ಸಹಾಯಕ್ಕಾಗಿ ಆರ್.ಕೆ ಯವರು ಎಂದಿಗೂ ಕೈ ಚಾಚಿಲ್ಲ ಎಂಬುವುದು ನಾವು ಗಮನಿಸಬೇಕಾದ ಮುಖ್ಯ ವಿಷಯ.
ಕೇವಲ ಮೂರು ವರ್ಷದಲ್ಲೇ ಊಹಿಸಲಸಾಧ್ಯವಾಗುವಷ್ಟು ಸಾಧನೆಗಳನ್ನು ಮಾಡಿದ್ದಾರೆ. ಸುಮಾರು 2000ಕ್ಕಿಂತಲೂ ಹೆಚ್ಚು ಕ್ರೀಡಾಪಟುಗಳನ್ನು ಸಂದರ್ಶನ ನಡೆಸಿ ಅವರ ಬಗೆಗೆನ ಲೇಖನ, ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಗೊಳಿಸಿದ್ದಾರೆ.  ಅಸಂಖ್ಯಾತ ಅಭಿಮಾನಿ ಓದುಗರನ್ನು ಹೊಂದಿದ್ದು ಇದರಲ್ಲಿ ಬರುವ ಕ್ರೀಡಾ ಸುದ್ಧಿಗಳು, ವಿಶೇಷ ವರದಿಗಳು, ಉತ್ತಮ ಅಂಕಣಗಳಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿನಿತ್ಯ ಈ ವೆಬ್ ಸೈಟ್ನಲ್ಲಿ ಬರುವ ಹೊಸ ವಿಷಯಗಳಿಗಾಗಿ ಕಾದು ಕುಳಿತುಕೊಳ್ಳುವ ಒಂದಷ್ಟು ಜನ ಸಮೂಹವೇ ಇದೆ ಎಂದರೆ ತಪ್ಪಾಗದು.
ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಕಲಾ ಸಂಕುಲ ಸಂಸ್ಥೆ (ರಿ) ರಾಯಚೂರು ಇವರ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಆರ್ ಕೆ.ಯವರ ಮೇಲಿನ ಅಭಿಮಾನ ಇನ್ನಷ್ಟು ಇಮ್ಮಡಿಯಾಗಿದೆ. ಇದೇ ಬರುವ 28-11-2020ರಂದು ರಾಯಚೂರುನಲ್ಲಿ ನಡೆಯಲಿರುವ ಈ ಕಲ್ಯಾಣ ಕರ್ನಾಟಕ ಉತ್ಸವ್ದಲ್ಲಿ ವಿವಿಧ ಸಾಹಿತಿಗಳು,ಸಂಸದರು, ಶಾಸಕರು ಉಪಸ್ಥಿತರಿರುವ ವೇಧಿಕೆಯಲ್ಲಿ ಕ್ರೀಡ ಕ್ಷೇತ್ರಕ್ಕೆ ವಿಶಿಷ್ಟ ಸಾಧನೆಗೈದ ಸಾಮಾನ್ಯ ಯುವಕನೊಬ್ಬನು ಸನ್ಮಾನಿಸಲ್ಪಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇಷ್ಟೊಂದು ಸಾಧಿಸಿದರೂ, ಕಳೆದ 2 ವರ್ಷಗಳಲ್ಲಿ ಪ್ರಶಸ್ತಿಗಳ ಸಾಲೇ ಹರಿದು ಬಂದರೂ ಕ್ರೀಡಾಲೋಕದ ಮೇಲಿರುವ ಆರ್.ಕೆ ಯ ಕನಸು ಬೆಟ್ಟದಷ್ಟಿದೆ. ಇದು ಕೇವಲ ಆರಂಭ,ತಲುಪಬೇಕಾದ ಹಾದಿ ಬಲುದೂರವಿದೆ.
ಯಾವುದೇ ಸರಕಾರದ ಅಕಾಡೆಮಿಗಳ ನೆರವುಗಳಿಲ್ಲದೆ ತನ್ನ ಸ್ವಂತ ಪ್ರಯತ್ನದಲ್ಲಿ ಕ್ರೀಡಾರಂಗಕ್ಕೋಸ್ಕರ, ಕ್ರೀಡಾಪಟುಗಳಿಗೋಸ್ಕರ, ಹಿರಿಯ ನಿವೃತ್ತ ಆಟಗಾರರಿಗೊಸ್ಕರ, ಮುಂದಿನ ಯುವ ಪೀಳಿಗೆಗೊಸ್ಕರ ದುಡಿಯುತ್ತಿರುವ ನಮ್ಮ ಆರ್.ಕೆ ಗೆ ನಮ್ಮೆಲ್ಲರ ಪ್ರೊತ್ಸಾಹದ ಅಗತ್ಯವಿದೆ. ಆಶೀರ್ವಾದದ ಅಗತ್ಯವಿದೆ. ಆರ್ ಕೆ. ಯವರ ಕನಸಿನಂತೆ ನಮ್ಮ ರಾಜ್ಯದಲ್ಲೊಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಗೊಳ್ಳಲಿ.  ಸಮಾಜದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ಅಸಾಮಾನ್ಯ ರೀತಿಯ ಸಾಧನೆಯನ್ನು ಮಾಡಿದ ನಮ್ಮ ಆರ್ ಕೆ ಯವರಿಗೆ ಸರಕಾರದ ವಿವಿಧ ಪ್ರಶಸ್ತಿಗಳು ದೊರಕಲಿ. ಅವರ ಕಾರ್ಯಕ್ಕೆ ಸರಕಾರದ ಬೆಂಬಲ ಸಿಗಲಿ. ಅದರಿಂದ ಅವರ ಈ ಒಂದು ವಿಭಿನ್ನ ಪ್ರಯತ್ನ ಇನ್ನಷ್ಟು ಉತ್ತುಂಘ ಶಿಖರವನ್ನೇರಲಿ. ಆರ್.ಕೆ ಯಂತವರ ಪ್ರಯತ್ನದಿಂದ ನಮ್ಮ ಊರಿನ ಮಕ್ಕಳು ಮುಂದೆ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಆರ್.ಕೆ ಯ ಕನಸು ನನಸಾಗಲಿ ಎಂದು ನಾವೆಲ್ಲ ಹಾರೈಸೋಣ.
ದಿನೇಶ ಆಚಾರ್ಯ ಸಾಲಿಗ್ರಾಮ
Categories
ಕ್ರಿಕೆಟ್ ಯಶೋಗಾಥೆ

ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಸಚಿನ್ “ಮಹಾದೇವ”

“DON’T CELEBRATE UNTIL U WIN”

ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು.

ಹೌದು ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,ಕ್ರಿಕೆಟ್ ಕೇವಲ ಮೂರ್ಖರ ಆಟವಷ್ಟೇ ಎಂದು ತಿಳಿದವರು ಸ್ವಯಂ ಮೂರ್ಖರು ಎನ್ನೋ ವಾದ ನನ್ನದು. ಶಿಸ್ತುಸಂಯಮ,ಸಂಯೋಜನೆ,ಹೋರಾಟ,ಸೋಲು ಗೆಲುವಿನ ಸಮಭಾವದ ಸ್ವೀಕೃತಿ ಕ್ರಿಕೆಟ್ ನಿಂದ ನಾವು  ಜೀವನದಲ್ಲಿ  ಅಳವಡಿಸಿಕೊಳ್ಳಬೇಕಾದ ಮಹತ್ತರ ಅಂಶಗಳು.

2013 ರ ಮಾರ್ಚ್ ನ ಸಮಯ.ಮಹಾಶಿವರಾತ್ರಿಯಂದು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2 ಲಕ್ಷ ಮೊತ್ತದ ಅದ್ಧೂರಿ Y.P.L(ಯಲಹಂಕ ಪ್ರಿಮಿಯರ್ ಲೀಗ್)ಐತಿಹಾಸಿಕ ಟೂರ್ನಿಯು,ರಾಜ್ಯ ಟೆನ್ನಿಸ್ ವಲಯವನ್ನು ನಿಬ್ಬೆರಗಾಗಿಸಿತ್ತು ಫೈನಲ್ ಪಂದ್ಯಾಟ.ಉಡುಪಿ,ದ.ಕ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಯಿಂದ ಬಲಿಷ್ಟ ತಂಡಗಳು  ಬಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಬೆಂಗಳೂರಿನ ಯುವಕರ ಪಡೆ “ಎಸ್ ಝಡ್‌‌.ಸಿ.ಸಿ” ತಂಡ, ಟೆನ್ನಿಸ್ ಕ್ರಿಕೆಟ್ ನ (ಹಿರಿಯಣ್ಣ),ಸರಿ ಸುಮಾರು 5 ದಶಕಕ್ಕೂ ಮಿಗಿಲಾದ ಸುವರ್ಣ ಇತಿಹಾಸ ಬರೆದ “ಜೈ ಕರ್ನಾಟಕ ಬೆಂಗಳೂರು” ತಂಡವನ್ನು ಎದುರಿಸಲು ಸಜ್ಜಾಗಿದ್ದವು. ಜೈ ಕರ್ನಾಟಕ ಈ ಪಂದ್ಯಾಟದಲ್ಲಿ ನಿವೃತ್ತಿಯ ಹೊಸ್ತಿಲಲ್ಲಿದ್ದ ದಂತಕಥೆಗಳಾದ(ಸಾಂಬಾಜಿ,ಮನೋಹರ್,ಭಗವಾನ್,ನಾಗೇಶ್ ಸಿಂಗ್,ಮಹೇಶ್ (ಮ್ಯಾಕ್))ಹಿರಿಯ ಆಟಗಾರರನ್ನೇ ಕಣಕ್ಕಿಳಿಸಿತ್ತು‌.ಈ ಪಂದ್ಯಾಟದಲ್ಲಿ ಅದ್ಭುತ ಸವ್ಯಸಾಚಿ ಆಟಗಾರರಾದ ಜಾನ್,ಪ್ರದೀಪ್ ಗೌಡ ಹಾಗೂ ಕೀಪರ್ ಆಗಿ “ಕ್ರಿಕ್ ಸೇ ಗಿರೀಶ್ ರಾವ್, ಸಚಿನ್ ಮಹಾದೇವ್ ಯುವ ಆಟಗಾರರಾಗಿ ಪ್ರತಿನಿಧಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜೈ ಕರ್ನಾಟಕ 5 ಓವರ್ ನಲ್ಲಿ 18 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತ ತಲುಪಿದಾಗ ,ನಂಬುಗೆಯ ಆಲ್ ರೌಂಡರ್ ಜಾನ್ ಹಾಗೂ ಸಚಿನ್ ಮಹಾದೇವ್ ರ ಬಿರುಸಿನ ಅಜೇಯ 30 ರನ್ನಿನ ಭಾಗೇದಾರೀಕೆಯ ಆಟ ಎದುರಾಳಿಗೆ 8 ಓವರ್ ಗೆ 49 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನಿಗದಿಗೊಳಿಸಿತ್ತು. ಬೆಂಬತ್ತಿದ “ಎಸ್.ಝಡ್.ಸಿ.ಸಿ” ಆಲ್ ರೌಂಡರ್ ಫಾರ್ಮ್ ನ ಉಚ್ಛ್ರಾಯ ಹಂತದಲ್ಲಿದ್ದ ಸ್ವಸ್ತಿಕ್ ನಾಗರಾಜ್ ರವರ ಅಮೂಲ್ಯ ಆಟದ ನೆರವಿನಿಂದ ಕೊನೆಯ 2 ಓವರ್ ಗಳಲ್ಲಿ ಕೇವಲ 4 ರನ್ ಗಳಷ್ಟೇ ಗಳಿಸಬೇಕಾದ ಹಂತಕ್ಕೆ ತಲುಪಿಸಿ ಔಟಾಗಿದ್ದರು.ಬಹುತೇಕ ವಿಜಯದ ಹೊಸ್ತಿಲಲ್ಲಿದ್ದ ಎಸ್‌.ಝಡ್.ಸಿ.ಸಿ
ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿತ್ತು.ಮೈದಾನದ ಒಳ,ಹೊರಗೆ ಸಿಡಿಮದ್ದುಗಳ ಪ್ರದರ್ಶನ,ಬೆಂಬಲಿಗರು,ನೆರೆದಿದ್ದ ಪ್ರೇಕ್ಷಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
7 ನೇ ಓವರ್  ಅರುಣ್ ಎಸೆತಗಾರಿಕೆಯಲ್ಲಿ 3 ರನ್ ಹರಿದು ಬಂತು.ಕೊನೆಯ ಓವರ್ ನ ಜವಾಬ್ದಾರಿ ಯುವ ಸವ್ಯಸಾಚಿ “ಸಚಿನ್ ಮಹಾದೇವ್” ಹೆಗಲ ಮೇಲಾಯಿತು.ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ಮೇಡನ್ ಓವರ್ ಎಸೆದು 3 ವಿಕೆಟ್ ಉರುಳಿಸಿ,ನೆರೆದಿದ್ದ ಪ್ರೇಕ್ಷಕರನ್ನು ಮೂಕ  ವಿಸ್ಮಿತರನ್ನಾಗಿಸಿದ್ದರು.”ಜೈ ಕರ್ನಾಟಕ ಬೆಂಗಳೂರು” ಟ್ರೋಫಿ ಜಯಿಸಿತ್ತು. ಫೈನಲ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಚಿನ್ ಪಡೆದಿದ್ದರು. ಈ ಪಂದ್ಯಾಟದ ಯಶಸ್ಸು ಸಚಿನ್ ರನ್ನು ರಾಜ್ಯಾದ್ಯಂತ ಪ್ರಸಿದ್ಧಿಗೊಳಿಸಿತ್ತು.
Categories
ಕ್ರಿಕೆಟ್ ಯಶೋಗಾಥೆ

ಕನಸುಗಳ ಬೆನ್ನಟ್ಟಿ ಗೆದ್ದ ನಂತರವಷ್ಟೇ ನಿಂತ ಕ್ರೀಡಾಳು ಈತ…

ಅವನೊಬ್ಬನಿದ್ದ ಕ್ರೊಯೇಷಿಯನ್ ಆಟಗಾರ.ಹೆಸರು ಗೊರಾನ್ ಇವಾನಿಸವಿಚ್.ಸರಿಸುಮಾರು ಆರುವರೆ ಅಡಿಯ ಸ್ಪುರದ್ರೂಪಿ ಕ್ರೀಡಾಳು.ತನ್ನ ಹದಿನೇಳನೆಯ ವಯಸ್ಸಿನಲ್ಲಿ ಟೆನ್ನಿಸ್ ಲೋಕಕ್ಕೆ ವೃತ್ತಿಪರನಾಗಿ ಕಾಲಿಟ್ಟಿದ್ದ.ಮೊದಮೊದಲ ವರ್ಷಗಳಲ್ಲಿ ಸೋಲುಗಳನ್ನು ಕಂಡವನು,ಅತಿ ವೇಗವಾಗಿ ಆಟದಲ್ಲಿ ಸುಧಾರಣೆಗಳನ್ನು ತಂದುಕೊಂಡ.ಹಾಗೆ ಸುಧಾರಿಸಿಕೊಂಡು ವೃತ್ತಿ ಜೀವನದ ನಾಲ್ಕನೇ ವರ್ಷದ ವೇಳೆಗೆ ತನ್ನ ಬದುಕಿನ ಮೊದಲ ವಿಂಬಲ್ಡನದ ಫೈನಲ್ಲಿಗೇರಿದ.

ನಿಮಗೆ ಗೊತ್ತಿರಲಿ.ಟೆನ್ನಿಸ್ ರಂಗದಲ್ಲಿ ವಿಂಬಲ್ಡನ್‌ಗೆ ತನ್ನದೇ ಆದ ಮೌಲ್ಯವಿದೆ.ಉಳಿದ ಅದೆಷ್ಟೇ ಗ್ರಾಂಡ್ಸ್ಲಾಮ್‌ಗಳನ್ನು ಗೆದ್ದರೂ ಟೆನ್ನಿಸ್ ಕಾಶಿಯೆನ್ನಿಸಿಕೊಂಡಿರುವ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲದಿದ್ದರೆ ಆಟಗಾರ ಶ್ರೇಷ್ಟನೆಂದು ಪರಿಗಣಿತನಾಗಲಾರ. ಸಾಲುಸಾಲು ಪ್ರಶಸ್ತಿಗಳನ್ನು ಗೆದ್ದನಂತರವೂ ವಿಂಬಲ್ಡನ್ ಗೆದ್ದ ನಂತರವಷ್ಟೇ ರಾಫೆಲ್ ನಡಾಲ್‌ನನ್ನು ವಿಶ್ವ ಟೆನ್ನಿಸ್ ದಿಗ್ಗಜನೆಂದು ಗುರುತಿಸಿತ್ತು ಎನ್ನುವುದು ಅದಕ್ಕೊಂದು ಉದಾಹರಣೆ .ಹಾಗಿರುವ ವಿಂಬಲ್ಡನ್ ಟೆನ್ನಿಸ್‌ನ ಫೈನಲ್ ಪ್ರವೇಶಿಸಿದ್ದ ಗೊರಾನ್‌ಗೆ ಮೊದಲ ಬಾರಿ ಅನುಭವ ಕೊರತೆಯಿತ್ತು. ಎದುರಾಳಿಯಾಗಿದ್ದ ಅಗಾಸ್ಸಿಗೂ ಅದು ಮೊದಲ ವಿಂಬಲ್ಡನ್ ಫೈನಲ್ ಅನುಭವವೇ.ಆದರೆ ಅದಕ್ಕೂ ಮುನ್ನ ಮೂರು ಬಾರಿ ಪ್ರತಿಷ್ಟಿತ ಗ್ರಾಂಡ್‌ಸ್ಲಾಮ್ ಫೈನಲ್ ತಲುಪಿದ ಅನುಭವ ಅಗಾಸ್ಸಿಗಿತ್ತು.ಅಷ್ಟಾಗಿಯೂ ಇಬ್ಬರ ನಡುವಣ ಫೈನಲ್ ಪೂರ್ತಿ ಐದು ಸೆಟ್‌ಗಳವರೆಗೆ ನಡೆದಿತ್ತು.ಕೊನೆಗೆ ರೋಚಕ ಫೈನಲ್ಲಿನಲ್ಲಿ ಅಗಾಸ್ಸಿ ಗೆಲುವಿನ ನಗೆ ಬೀರಿದ್ದ.

ಗೆದ್ದ ಅಗಾಸಿಗೆ ಗೆಲುವಿನ ಸಂಭ್ರಮವಾದರೆ ಸೋತ ಗೊರಾನ್‌ಗೆ ನಿರಾಸೆ.ಆದರೆ ಗೋರಾನ್ ಸ್ಪೂರ್ತಿಯುತವಾಗಿಯೇ ಸೋಲನ್ನು ಸ್ವೀಕರಿಸಿದ್ದ.1992ರಲ್ಲಿ ಸೋತವನು ಪುನ: 1994ರಲ್ಲಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಗೋರಾನ್.ಈ ಬಾರಿ ಎದುರಿಗಿದ್ದವನು ದೈತ್ಯ ಪ್ರತಿಭೆ ಅಮೇರಿಕಾದ ಪೀಟ್ ಸಾಂಪ್ರಾಸ್.ಅದಾಗಲೇ ಪೀಟ್‌ಗೆ ಒಂದು ವಿಂಬಲ್ಡನ್ ಸೇರಿದಂತೆ ನಾಲ್ಕು ಗ್ರಾಂಡ್‌ಸ್ಲಾಮ್ ಗೆದ್ದ ಅನುಭವವಿತ್ತು.ಸಹಜವಾಗಿಯೇ ಪೀಟ್ ಆ ಬಾರಿಯ ಗೆಲುವಿಗೆ ನೆಚ್ಚಿನ ಆಟಗಾರನಾಗಿದ್ದ.ಸುಲಭವಾಗಿ ಸಾಂಪ್ರಾಸ್ ಗೆದ್ದು ಬಿಡುತ್ತಾನೆನ್ನುವುದು ಎಲ್ಲರ ಎಣಿಕೆಯಾಗಿತ್ತು.ನಿರೀಕ್ಷೆಯಂತೆ ಪೀಟ್ ಗೆದ್ದು ಬೀಗಿದ್ದ.ತೀವ್ರ ಹೋರಾಟ ನೀಡಿದ್ದ ಗೋರಾನ್‌ಗೆ ಮತ್ತೆ ಸೋಲಿನ ಆಘಾತ.ಮುಂದೆ ನಾಲ್ಕು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಗೆಲುವು ಗೋರಾನ್‌ಗಿರಲಿಲ್ಲ.ಆದರೆ ಸತತ ಪ್ರಯತ್ನದಿಂದ 1998ರಲ್ಲಿ ಮತ್ತೊಮ್ಮೆ ಆತ ವಿಂಬಲ್ಡನ್ ಫೈನಲ್ ತಲುಪಿಕೊಂಡ.ಎದುರಿಗಿದ್ದವನು ಮತ್ತದೇ ಪೀಟ್ ಸಾಂಪ್ರಾಸ್. ಅಷ್ಟೊತ್ತಿಗಾಗಲೇ ಸಾಂಪ್ರಾಸ್ ,ಟೆನ್ನಿಸ್ ಲೋಕದ ದಂತಕತೆಯಾಗಿದ್ದವನು,ನಾಲ್ಕು ವಿಂಬಲ್ಡನ್ ಸೇರಿದಂತೆ ಒಟ್ಟು ಹತ್ತು ಗ್ರಾಂಡ್‌ಸ್ಲಾಮ್ ಗೆದ್ದು ಅಗ್ರಸ್ಥಾನಿಯಾಗಿದ್ದವನು.ಈ ಬಾರಿ ಇವಾನೆಸವಿಚ್ ಅವನಿಗೊಬ್ಬ ಶಕ್ತ ಎದುರಾಳಿಯೂ ಅಲ್ಲ ಎನ್ನುವುದು ಎಲ್ಲರ ಎಣಿಕೆಯಾಗಿತ್ತು.ಎಲ್ಲರ ಎಣಿಕೆ ಸುಳ್ಳಾಗುವಂತೆ ಆಡಿದವನು ಗೋರಾನ್.ಐದು ಸೆಟ್ಟುಗಳಲ್ಲಿ ಸಾಂಪ್ರಾಸ್ಸ‌ನಿಗೆ ಅಕ್ಷರಶ: ಬೆವರಿಳಿಸಿಬಿಟ್ಟಿದ್ದ ಗೋರಾನ್.ಇನ್ನೇನು ಗೆಲ್ಲುತ್ತಾನೇನೋ ಎನ್ನುವ ಹಂತದಲ್ಲಿ ಅನಗತ್ಯ ತಪ್ಪುಗಳನ್ನೆಸಗಿ ಸೋತು ಹೋಗಿದ್ದ.

ಮೂರು ಮೂರು ಫೈನಲ್ ಸೋಲುಗಳ ನಂತರ ಅಧೀರನಾಗಿದ್ದ ಗೋರಾನ್.ಗೆಲುವು ತುಂಬ ಸಮೀಪ ಬಂದು ಮೋಸ ಮಾಡಿತ್ತು. ನಿರಾಶನಾಗಿದ್ದ ಗೋರಾನ್,ದೇಹ ಪ್ರಕೃತಿ ಹದಗೆಟ್ಟಿತ್ತು.ಪದೇ ಪದೇ ಗಾಯದ ಸಮಸ್ಯೆಯಿಂದ ಆತ ಬಳಲಾರಂಭಿಸಿದ್ದ.ಅನೇಕ ಟೂರ್ನಿಗಳಲ್ಲಿ ಗೈರು ಹಾಜರಾದ ಅವನ ರ‌್ಯಾಂಕಿಂಗ್ ಸಹಜವಾಗಿಯೇ  ಪಾತಾಳಕ್ಕಿಳಿದಿತ್ತು.ತೀರ 125ನೇ ರ‌್ಯಾಂಕಿಗಿಳಿದು ಹೋದ ಅವನೆಡೆಗೆ ಅಭಿಮಾನಿಗಳಿಗೊಂದು ವಿಷಾದವಿತ್ತು.ಆವತ್ತಿನ ಕ್ರೀಡಾಭಿಮಾನಿಗಳ ಪ್ರಕಾರ ಅವನ ಕ್ರೀಡಾ ಜೀವನ ಮುಗಿದು ಹೋಗಿತ್ತು.

ಇಲ್ಲ, ಮುಗಿದಿಲ್ಲ ಎನ್ನುತ್ತ ಮತ್ತೆ ಎದ್ದು ನಿಂತಿದ್ದ ಗೋರಾನ್ 2001ರಲ್ಲಿ.ಆ ವರ್ಷ ವಿಂಬಲ್ಡನ್ ಮಂಡಳಿ ಆತನಿಗೆ ಆತನ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ತನಗಿದು ಕೊನೆಯ ಅವಕಾಶವೆಂದರಿತ ಗೋರಾನ್, ರಣಗಂಭೀರವಾಗಿ ಸೆಣದಾಡಿದ್ದ.ಎಲ್ಲರ ನಿರೀಕ್ಷೆ ಮೀರಿ ಆತ ಮಗದೊಮ್ಮೆ ಫೈನಲ್ ತಲುಪಿಕೊಂಡಿದ್ದ.ಈ ಬಾರಿ ಅವನ ಎದುರಾಳಿ ಆವತ್ತಿನ ಅಗ್ರಸ್ಥಾನಿ ಪ್ಯಾಟ್ರಿಕ್ ರಾಪ್ಟರ್.ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮದಗಜಗಳಂತೆ ಸೆಣಸಿದ್ದರು ಇಬ್ಬರು.ಮೊದಲ ಮತ್ತು ಮೂರನೇ ಸೆಟ್ ಗೋರಾನ್ ಗೆದ್ದರೆ ಎರಡನೇ ಮತ್ತು ನಾಲ್ಕನೇ ಸೆಟ್ ರಾಪ್ಟರ್ ಗೆದ್ದಿದ್ದ.ನಿರ್ಣಾಯಕ ಸೆಟ್ ಅಕ್ಷರಶ: ಯುದ್ಧವೇ.ಇನ್ನೇನು ಕೊನೆಯ ಕ್ಷಣಗಳಲ್ಲಿ ಗೊರಾನ್ ಗೆಲ್ಲುತ್ತಾನೇನೋ ಎನ್ನಿಸುವಷ್ಟರಲ್ಲಿ ಮತ್ತೊಮ್ಮೆ ಅನಗತ್ಯ ತಪ್ಪುಗಳನ್ನು ಮಾಡಿಬಿಟ್ಟಿದ್ದ ಗೋರಾನ್.ಬಹುಶ: ಆ ಹೊತ್ತಿಗೆ ಗತಕಾಲದ ಸೋಲುಗಳ ನೆನಪು ಅವನ ಏಕಾಗ್ರತೆಯನ್ನು ತಾತ್ಕಾಲಿಕವಾಗಿ ಭಂಗಗೊಳಿಸಿತ್ತು.ಥತ್..!! ಮತ್ತೆ ಸೋತ ಎಂದುಕೊಂಡರು ಜನ.ಊಹುಂ.. ಬಾರಿ ಬಾಗಲಿಲ್ಲ ಅವನು.ಕೊನೆಯ ಹಂತಕ್ಕೆ ರ‌್ಯಾಪ್ಟರ್‌ನನ್ನು ಬಗ್ಗು ಬಡಿದು ಚೊಚ್ಚಲ ಗ್ರಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡುಬಿಟ್ಟ ಏಸ್‌ಗಳ ರಾಜನೆಂದು ಬಿರುದಾಂಕಿತನಾಗಿದ್ದ ಗೋರಾನ್ ಇವಾನೆಸವಿಚ್.

ಸೋಲುಗಳ ಮೇಲೆ ಸೋಲು,ಗಾಯದ ಸಮಸ್ಯೆ ಎಲ್ಲವನ್ನೂ ಮೆಟ್ಟಿನಿಂತು ತನ್ನ ವೃತ್ತಿ ಬದುಕಿನ ಸಂಜೆಯಲ್ಲಿ ಗ್ರಾಂಡ್‌ಸ್ಲಾಮ್ ಗೆದ್ದ ಗೋರಾನ್‌ನ ಕತೆ ಇಂದಿಗೂ ಅನೇಕರಿಗೆ ದಾರಿದೀಪ. ತನ್ನ ಹದಿನೇಳನೆಯ ವಯಸ್ಸಲ್ಲಿ ಕರಿಯರ್ ಆರಂಭಿಸಿದ ಗೋರಾನ್, ಪ್ರತಿಷ್ಟಿತ ಪ್ರಶಸ್ತಿ ಗೆದ್ದಿದ್ದು ತನ್ನ ಮೂವತ್ತೊಂದನೇ ವಯಸ್ಸಿನಲ್ಲಿ. ಸರಿಸುಮಾರು ಒಂದೂವರೆ ದಶಕಗಳ ಕಾಲದ ನಂತರ ಕನಸನ್ನು ನನಸಾಗಿಸಿಕೊಂಡ ಗೋರಾನ್‌ನ ಕತೆ ಯಾವತ್ತಿಗೂ ಸ್ಪೂರ್ತಿದಾಯಕವೇ. ಕನಸುಗಳ ಬೆನ್ನಟ್ಟಿ ಹೋದರೆ ಗೆಲ್ಲುವವರೆಗೂ ನಿಲ್ಲಬಾರದು ಎನ್ನುವುದಕ್ಕೆ ಇವಾನೆಸವಿಚ್ ಒಂದು ಉದಾಹರಣೆ.ಕ್ರೀಡಾ ಜಗತ್ತೇ ಹಾಗೆ.ಇಲ್ಲಿ ಸೋಲು ಗೆಲವುಗಳು ಮಾತ್ರವಲ್ಲ,ಬದುಕಿನ ಗೆಲುವಿಗೂ ಅನೇಕ ಚಂದದ ಪಾಠಗಳಿವೆ.ನೋಡುವುದನ್ನು ನಾವು ಕಲಿಯಬೇಕಷ್ಟೇ.

ಗುರುರಾಜ್ ಕೋಡ್ಕಣಿ