Categories
ಟೆನಿಸ್

ದೇವರೇ, ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್!

ಮರಣದ ದವಡೆಯಲ್ಲಿ ಕೂಡ ಆತನಿಗೆ ಯಾವ ವಿಷಾದವೂ ಇರಲಿಲ್ಲ!
——————————
ಅಮೆರಿಕಾದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ  ರೋಮಾಂಚನ ಉಂಟುಮಾಡುವ ಬದುಕಿನ  ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ  ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.
ಆತನ ಹೆಸರು ಆರ್ಥರ್ ಆಶ್.
———————————–
ಆತ ಒಬ್ಬ ಕರಿಯ ಟೆನ್ನಿಸ್ ಆಟಗಾರ. ತುಳಿತಕ್ಕೆ ಒಳಗಾದ ಸಮುದಾಯದಿಂದ ಎದ್ದು ಬಂದವನು. ಅಮೆರಿಕದ  ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ಬ್ಲಾಕ್ ಟೆನ್ನಿಸ್ ಆಟಗಾರ ಆತ. ತನ್ನ ವಿಸ್ತಾರವಾದ ಟೆನ್ನಿಸ್ ಜೀವನದಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಈ ಮೂರೂ ಗ್ರಾನಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವನು! ಅವನ ಟೆನ್ನಿಸ್ ಸಾಧನೆಯು ಜಗತ್ತಿನ ಗಮನ ಸೆಳೆದದ್ದು, ಆತನಿಗೆ ಲಕ್ಷ ಲಕ್ಷ  ಪ್ರೀತಿ ಮಾಡುವ ಅಭಿಮಾನಿಗಳು ದೊರೆತದ್ದು ಎಲ್ಲವೂ ಉಲ್ಲೇಖನೀಯ. ಆತ ಬದುಕಿದ್ದಾಗ ಟೆನ್ನಿಸ್ ಲೆಜೆಂಡ್ ಎಂದು ಕರೆಸಿಕೊಂಡಿದ್ದ .
ಆದರೆ ಆತನ ಅಂತಿಮ ದಿನಗಳು ಅತ್ಯಂತ ದಾರುಣ ಆಗಿದ್ದವು. 
———————————–
ಆದರೆ ಅವನ ಜೀವನದ ಕೊನೆಯ 14 ವರ್ಷಗಳು ಅತ್ಯಂತ  ದುಃಖದಾಯಕ ಆಗಿದ್ದವು. ಅವನು ಎರಡು ಬಾರಿ ಅತ್ಯಂತ ಸಂಕೀರ್ಣವಾದ ಬೈಪಾಸ್ ಸರ್ಜರಿಗೆ ಒಳಗಾದನು.  ಮುಂದೆ ಅಷ್ಟೇ ಸಂಕೀರ್ಣವಾದ ಮೆದುಳಿನ ಸರ್ಜರಿಯು ನಡೆಯಿತು. ಆತನ  ದೇಹದ ಅರ್ಧದಷ್ಟು ಭಾಗವು  ಪಾರಾಲೈಸ್ ಆಯಿತು. ಕೊನೆಗೆ ಆಗಿನ ಕಾಲಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿ ಆಗಿದ್ದ ಏಡ್ಸ್ ಕಾಯಿಲೆಯು ಆತನಿಗೆ ಅಮರಿತು. ಇದರಿಂದ ಆರ್ಥರ್ ಆಶ್ ಪಡಬಾರದ ಪಾಡುಪಟ್ಟನು. ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡುವಾಗ ಅವನಿಗೆ AIDS ಸೋಂಕು ತಗುಲಿತ್ತು. ಆಗ ನಿಜವಾದ ಸಾವು ಬದುಕಿನ ದೀರ್ಘ ಹೋರಾಟದ ಹದಿನಾಲ್ಕು   ವರ್ಷಗಳನ್ನು ಅವನು ದಾಟಬೇಕಾಯಿತು.
ಒಬ್ಬ ಅಭಿಮಾನಿಯು ಆತನಿಗೆ ಪತ್ರ ಬರೆದಿದ್ದ. 
———————————-
ಆಗ ಒಬ್ಬ ಅಭಿಮಾನಿಯು ತುಂಬಾ ಪ್ರೀತಿಯಿಂದ ಅವನಿಗೆ ಒಂದು ಪತ್ರವನ್ನು ಬರೆದಿದ್ದ. ಅದರ ಒಟ್ಟು ಸಾರಾಂಶವು ಹೀಗೆ ಇತ್ತು – ಅರ್ಥರ್. ಇಷ್ಟೊಂದು ಸಮಸ್ಯೆಗಳು ಬಂದಾಗಲೂ, ದೇವರೇ, ನೀನು ಹೀಗೇಕೆ ಮಾಡಿದೆ ಎಂದು ಯಾಕೆ ಕೇಳುವುದಿಲ್ಲ? ನಿನಗೇಕೆ ವಿಷಾದ ಇಲ್ಲ?
ಅದಕ್ಕೆ ಆರ್ಥರ್ ಕೊಟ್ಟ ಉತ್ತರವು  ಹೆಚ್ಚು ಮಾರ್ಮಿಕ ಆಗಿತ್ತು.
ನಾನೇಕೆ ವಿಷಾದ ಪಡಲಿ ಎಂದು ಬಿಟ್ಟ ಆರ್ಥರ್! 
———————————–
“ಗೆಳೆಯಾ, ನಿನ್ನ ಕಳಕಳಿಗೆ ಥ್ಯಾಂಕ್ಸ್ ಹೇಳುವೆ. ಆದರೆ ಯೋಚನೆ ಮಾಡು. ನಾನು ಟೆನ್ನಿಸ್ ಆಟ ಆಡಲು ಮೊದಲ ಬಾರಿಗೆ ಕೋರ್ಟಿಗೆ ಇಳಿದಾಗ ಜಗತ್ತಿನಲ್ಲಿ ಐದು ಕೋಟಿ ಜನ ಟೆನ್ನಿಸ್ ಆಡ್ತಾ ಇದ್ದರು. ಅದರಲ್ಲಿ 50 ಲಕ್ಷ ಮಂದಿ ಜಿಲ್ಲಾ ಮಟ್ಟವನ್ನು  ದಾಟಿರಬಹುದು. ಅವರಲ್ಲಿ ಐದು ಲಕ್ಷ ಮಂದಿ ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರಬಹುದು. ಕೇವಲ ಐವತ್ತು ಸಾವಿರ ಮಂದಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವನ್ನು ಪಡೆದಿರಬಹುದು.  ಕೇವಲ ಐದು ಸಾವಿರ ಮಂದಿಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವು ದೊರೆತಿರುವ ಸಾಧ್ಯತೆಯು ಇರಬಹುದು. ಅದರಲ್ಲಿ ಐನೂರು ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರಬಹುದು.
ಅವರಲ್ಲಿ ಕೇವಲ ಐವತ್ತು ಮಂದಿ ವಿಂಬಲ್ಡನ್ ಕೂಟದ ಮೊದಲ ಸುತ್ತನ್ನು ತಲುಪಿರುವ ಸಾಧ್ಯತೆ ಇದೆ. ಎಂಟು ಮಂದಿ ಮಾತ್ರ ಕ್ವಾಟರ್ ಫೈನಲ್ ತಲುಪಿರುವ ಸಾಧ್ಯತೆ ಇದೆ. ನಾಲ್ಕು ಮಂದಿ ಮಾತ್ರ ಸೆಮಿಫೈನಲ್ ಆಡುವ ಭಾಗ್ಯ ಪಡೆದಿರುತ್ತಾರೆ.
ಕೇವಲ ಇಬ್ಬರು ಮಾತ್ರ ವಿಂಬಲ್ಡನ್ ಫೈನಲ್ ಸುತ್ತು ತಲುಪುತ್ತಾರೆ. ಗಾಡ್ಸ್ ಗ್ರೇಸ್! ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಜಗತ್ತಿನ ಕೇವಲ ಇಬ್ಬರು ಶ್ರೇಷ್ಟವಾದ  ಟೆನ್ನಿಸ್ ಆಟಗಾರರು ಪಡೆಯುವ ವಿರಳ  ಅವಕಾಶವು ಅಂದು ನನಗೆ ದೊರಕಿತ್ತು. ನಾನು ಜಗತ್ತಿನ ಕೇವಲ ನಂಬರ್ ಟೂ ಆಟಗಾರನಾಗಿ ಬೆಳ್ಳಿಯ ಹೊಳೆಯುವ ಟ್ರೋಫಿ   ಎತ್ತಿ ಹಿಡಿದು ಭಾರೀ ಖುಷಿ ಪಟ್ಟಿದ್ದೆ! ಆಗ ಅಯ್ಯೋ ದೇವರೇ, ನೀನು ಯಾಕೆ ಹೀಗೆ ಮಾಡಿದೆ ಎಂದು ನಾನು ಕೇಳಲಿಲ್ಲ! ನನ್ನ ಜೀವನದ ಸಂತೋಷದ ಪರಾಕಾಷ್ಠೆಯ ಕ್ಷಣಗಳಲ್ಲಿ ನಾನು ದೇವರನ್ನು ಪ್ರಶ್ನೆ ಮಾಡಲಿಲ್ಲ. ಈಗ ನನಗೆ ತೀವ್ರ ಆರೋಗ್ಯದ ಸಮಸ್ಯೆಗಳು ಎದುರಾದಾಗ ಹೇಗೆ ದೇವರನ್ನು  ಕೇಳಲಿ?”
ಸ್ನೇಹಿತರೇ, ನಮಗೆ ದೇವರು ದೊಡ್ಡ ಹೆಸರು, ಕೀರ್ತಿ, ಹತ್ತಾರು ಪ್ರಶಸ್ತಿ, ಎತ್ತರದ ಪದವಿ, ಅಧಿಕಾರ, ರಾಶಿ ದುಡ್ಡು,  ಭಾರೀ ಪ್ರಭಾವ, ತುಂಬಾ ಹ್ಯಾಪಿನೆಸ್ ಕೊಟ್ಟಾಗ ನಾವು ದೇವರೇ, ಹೀಗೇಕೆ ಮಾಡಿರುವೆ ಎಂದು ಗಟ್ಟಿಯಾಗಿ ಕೇಳಿದ್ದು  ಇದೆಯಾ? ಹಾಗಿರುವಾಗ  ಸಮಸ್ಯೆಗಳು ಬಂದಾಗ, ಆರೋಗ್ಯ ಹಾಳಾದಾಗ, ಹಣ ಕಾಸು ನಷ್ಟ ಆದಾಗ ಯಾಕೆ ದೇವರನ್ನು ಪ್ರಶ್ನೆ ಮಾಡಬೇಕು?
ಅಂದ ಹಾಗೆ 1993ರಲ್ಲಿ ತನ್ನ ಐವತ್ತನೇ ವರ್ಷದಲ್ಲಿ ಆರ್ಥರ್ ಆಶ್ ತನ್ನ ಬದುಕಿಗೆ ಚುಕ್ಕೆ ಇಟ್ಟನು.
ಟೆನ್ನಿಸ್ ಲೆಜೆಂಡ್ ಆರ್ಥರ್ ಆಶ್ ಹೇಳಿದ್ದು ನಿಜ ಎಂದು ನಿಮಗೆ ಅನ್ನಿಸುತ್ತಿದೆಯಾ?
Categories
ಟೆನಿಸ್

ರಾಕೆಟ್ ಕೈ ಚೆಲ್ಲಿದ ಟೆನ್ನಿಸ್ ಜಗತ್ತಿನ ಅನಭಿಷಿಕ್ತ ದೊರೆ ರೋಜರ್ ಫೆಡರರ್

ಆಧುನಿಕ ಟೆನ್ನಿಸ್ ಜಗತ್ತಿನ ಅನಭಿಷಿಕ್ತ ದೊರೆ ರೋಜರ್ ಫೆಡರರ್ ಇಂದು ಟೆನ್ನಿಸಿಗೆ ವಿದಾಯವನ್ನು ಕೋರಿದ್ದಾರೆ.
41 ವರ್ಷದ ಈ ಸ್ವಿಸ್ ದೇಶದ ಸ್ಮಾರ್ಟ್ ಟೆನ್ನಿಸಿಗ ತನ್ನ 24 ವರ್ಷಗಳ ಸುದೀರ್ಘ ಮತ್ತು ವರ್ಣರಂಜಿತವಾದ ಟೆನ್ನಿಸ್ ಬದುಕಿಗೆ ಇಂದು ಪೂರ್ಣ ವಿರಾಮ ಹಾಕಿದ್ದಾರೆ! ಒಂದು ರೀತಿಯಲ್ಲಿ ಇದು ನಿರೀಕ್ಷಿತವಾದ ನಿರ್ಧಾರ ಎನ್ನಬಹುದು.
ಆತನ ದಾಖಲೆಗಳನ್ನು ಗಮನಿಸಿದಾಗ ಅವುಗಳು ನಿಜಕ್ಕೂ ಅದ್ಭುತವೇ ಆಗಿದೆ. ಹದಿನೆಂಟನೇ ವಯಸ್ಸಿಗೆ ವಿಂಬಲ್ಡನ್ ಜ್ಯೂನಿಯರ್ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ ಆತ  ಜಾಗತಿಕ ಟೆನ್ನಿಸ್ ರಂಗಕ್ಕೆ ಪದಾರ್ಪಣೆಯನ್ನು ಮಾಡಿದ್ದರು. ಮುಂದೆ ಮೊದಲನೆಯ ವಿಂಬಲ್ಡನ್ ಕಿರೀಟವನ್ನು ಗೆದ್ದಾಗ ಆತನಿಗೆ ಕೇವಲ 21 ವರ್ಷ!
ಮುಂದೆ ರೋಜರ್ ಫೆಡರರ್ ಆಡಿದ್ದು 1500ಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು! ಗೆಲುವಿನ ಪ್ರಮಾಣ 60%ಗಿಂತ ಹೆಚ್ಚು ಇದೆ. ಒಟ್ಟು 103 ATP ಪ್ರಶಸ್ತಿಗಳನ್ನು ಗೆದ್ದ ಯಶಸ್ವೀ ಆಟಗಾರ ಆತ! ಅದರಲ್ಲಿ ಗ್ರಾನ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯೇ 20!
ಅದರಲ್ಲಿ ಎಂಟು ಹೊಳೆಯುವ ವಿಂಬಲ್ಡನ್ ಕಿರೀಟಗಳು, ಐದು ಅಮೆರಿಕನ್ ಓಪನ್ ಕಿರೀಟಗಳು ಇವೆ. ಅದರ ಜೊತೆಗೆ ಮೂರು ಒಲಿಂಪಿಕ್ ಪದಕಗಳು ಇವೆ. ಒಟ್ಟು 310 ವಾರ ವಿಶ್ವದ ನಂಬರ್ ಒನ್ ಆಟಗಾರನಾಗಿ ಮೆರೆದ ಏಕೈಕ ಟೆನ್ನಿಸಿಗ ಫೆಡರರ್!
ಆತನ ಬಲಿಷ್ಠವಾದ ಮುಂಗೈ ಹೊಡೆತಗಳು, ಎದುರೇ ಇಲ್ಲದ ಸರ್ವಗಳು, ಕೋರ್ಟಿನ ಮೂಲೆ ಮೂಲೆಗೂ  ಪಾದರಸದ ಪಾದಗಳ ಚಲನೆ, ಆಕ್ರಮಣಕಾರಿಯಾದ ಆಟ, ದಣಿವು ಅರಿಯದ ಫಿಟ್ನೆಸ್, ಎಂದಿಗೂ ಸೋಲನ್ನು ಒಪ್ಪದ  ಮೈಂಡ್ ಸೆಟ್……. ಇವುಗಳು ರೋಜರ್ ಫೆಡರರ್ ಅವರ ಪ್ರಬಲ ಅಸ್ತ್ರಗಳು.
ಆಧುನಿಕ ಟೆನ್ನಿಸ್ ಲೋಕವು ಮಿಂಚಿದ್ದು ಇದೇ ಮೂರು ಲೆಜೆಂಡ್ ಆಟಗಾರರಿಂದ. ಅವರೆಂದರೆ ಇದೇ ರೋಜರ್ ಫೆಡರರ್, ನೋವಾನ್ ಜಾಕೋವಿಕ್ ಮತ್ತು ರಾಫೆಲ್ ನಡಾಲ್!
ಫೆಡರರ್ 20 ಗ್ರಾನಸ್ಲಾಂ ಗೆದ್ದಿದ್ದರೆ, ಜಾಕೊವಿಕ್ ಗೆದ್ದಿದ್ದು 21 ಗ್ರಾನ್ಸಲಾಂ, ರಾಫೆಲ್ ನಡಾಲ್ ಗೆದ್ದಿದ್ದು 22 ಗ್ರಾನ್ಸಲಾಂ ತಳಿಗೆಗಳನ್ನು! ಈ ತ್ರಿವಳಿ ಟೆನ್ನಿಸ್ ಆಟಗಾರರು ಪರಸ್ಪರ ಮುಖಾಮುಖಿ ಆದರೆ ಕೋರ್ಟಲ್ಲಿ ಗುಡುಗು, ಸಿಡಿಲು, ಮಿಂಚುಗಳು ಒಟ್ಟೊಟ್ಟಿಗೆ ಕಾಣಿಸುತ್ತಿದ್ದವು.
ಅದರಲ್ಲಿ ಒಬ್ಬೊಬ್ಬರೇ ಈಗ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಇಂದು ರೋಜರ್ ಫೆಡರರ್ ಅವರ ಸರದಿ. ಕಳೆದ ಹಲವು  ವರ್ಷಗಳಿಂದ ಗಾಯ, ಸರ್ಜರಿ, ನೋವುಗಳಿಂದ ನೊಂದಿದ್ದ ಆತ ಇಂದು ಟೆನ್ನಿಸ್ ರಾಕೆಟ್ ಕೈ ಚೆಲ್ಲಿ ಇಂದು ಗುಡ್ ಬೈ  ಹೇಳಿದ್ದಾರೆ.
ಒಂದೊಂದು ಪಂದ್ಯವನ್ನು ಗೆದ್ದವನು ವಿನ್ನರ್. ಸತತವಾಗಿ ಗೆಲ್ಲುವವನು ಖಂಡಿತ ಚಾಂಪಿಯನ್! ಗೆಲುವನ್ನು ಅಭ್ಯಾಸ ಮಾಡಿಕೊಂಡವನು ಲೆಜೆಂಡ್! ಫೆಡರರ್ ನಿಶ್ಚಿತವಾಗಿ  ಮೂರನೇ ಗುಂಪಿಗೆ ಸೇರುತ್ತಾನೆ.

ಹೋಗಿ ಬನ್ನಿ ಲೆಜೆಂಡ್!

ರಾಜೇಂದ್ರ ಭಟ್ ಕೆ.

Categories
ಟೆನಿಸ್

ಎಪ್ಪತ್ತನಾಲ್ಕರಲ್ಲಿ ಈ ಮೂವರೆ ಎತ್ತಿದ್ದು ಅರವತ್ತ ಒಂದು..!!

ಹಾರ್ಡ್ ಕೋರ್ಟಿನಲ್ಲಿ ನಡೆದ ನಿನ್ನೆಯ ಮೆಲ್ಬೋರ್ನ್ ಮೇಲಾಟದಲ್ಲಿ ಮಡ್ವಡೇವ್ ವಿರುಧ್ಧ ರೋಚಕವಾಗಿ ರಫಾಲ್ ನಡಾಲ್  ಜಯಭೇರಿ ಬಾರಿಸುವ ಮೂಲಕ ಪುರುಷರ ಟೆನಿಸ್‌ ಇತಿಹಾಸದಲ್ಲಿ ಇಪ್ಪತ್ತೊಂದು ಗ್ರಾಂಡ್ ಸ್ಲಾಮ್ ಎತ್ತಿದ ವಿಶ್ವದಾಖಲೆ ಬರೆದುಬಿಟ್ಟರು.
ಈ ಶತಮಾನದ ಸಮಕಾಲಿನರು ಸರ್ವಶ್ರೇಷ್ಠರು ಆದ ಫೆಡರರ್, ಜೊಕೊವಿಕ್, ನಡಾಲ್ ನಡುವಿನ ತ್ರಿಬಲ್ ತ್ರೆಟ್ ಸರಣಿಯಲ್ಲಿ ಸದ್ಯಕ್ಕೆ ನಡಾಲ್ ಇತಿಹಾಸ ನಿರ್ಮಿಸಿ ಲೀಡ್ ಪಡೆದುಕೊಂಡರು ಕೂಡ ಜೊಕೊವಿಕ್ ಓವರ್‌ಟೇಕ್ ಮಾಡುವುದು ಖಚಿತ. ವಯಸ್ಸು, ಫಿಟ್ನೆಸ್ ಕಾರಣದಿಂದ ರೋಜರ್ ಪೆಡರರ್ ಇನ್ಮುಂದೆ ಸ್ಲಾಮ್ ಗೆಲ್ಲುವುದು ಅನುಮಾನ ಆದರೆ ವ್ಯಾಕ್ಸಿನೇಷನ್‌ ವಿವಾದದಿಂದಾಗಿ ಆಸ್ಟ್ರೇಲಿಯಾ ಓಪನ್ ಮಿಸ್ ಮಾಡಿಕೊಂಡ ನಂಬರ್ ಒನ್ ಜೊಕೊವಿಕ್ ಸದ್ಯ ಇರುವ ಫಾರ್ಮಿನಲ್ಲಿ ಮುಂದಿನ ಫ್ರೆಂಚ್, ಯು ಎಸ್ ಓಪನ್ ಮತ್ತು ವಿಂಬಲ್ಡನ್‌ ಮೇಲೆ ಕಣ್ಣಿಟ್ಟಿರುವುದು ಸತ್ಯ, ಗೆಲ್ಲುವುದು ಗ್ಯಾರಂಟಿ.
ನಡಾಲ್ ವಿಶ್ವದಾಖಲೆಗೆ ಕಂಟಕ ಇರುವುದಂತು ಖಂಡಿತ.
ಇದರ ನಡುವೆ ಇಂತಹದ್ದೊಂದು ಆರೋಗ್ಯಕರ ಟೆನಿಸ್ ಸಮರಗಳಿಗೆ ಕ್ರೀಡಾ ಸೊಬಗಿಗೆ ಸಾಕ್ಷಿಯಾಗುವುದರ ಜೊತೆಗೆ ಇವರುಗಳ ಆಟವನ್ನು ಕಣ್ತುಂಬಿಕೊಳ್ಳುವುತ್ತಿರುವುದು ಬಹಳ ಖುಷಿಯ ಸಂಗತಿ..
ಎರಡು ದಶಕಗಳ ಹಿಂದೆ ಈ‌ ಮೂರು ಬಲಾಡ್ಯರ ಟೆನಿಸ್ ಪ್ರವೇಶ ಆಗುವ ಮೊದಲಿನ ಕಥೆ ಹೀಗಿರಲಿಲ್ಲ. ಅಂಡ್ರೆ ಅಗಸ್ಸಿ ಕೊನೆಯ ಸ್ಲಾಮ್ ಗೆದ್ದದ್ದು 2003ನೇ ಇಸವಿಯಲ್ಲಿ. ಅದೆ ವರ್ಷ ರೊಜರ್ ಪೆಡರರ್ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಗೆಲ್ಲುವ ಮೊದಲು ಒಬ್ಬನೆ  ಒಬ್ಬ ಪುರುಷ ಆಟಗಾರ ಸಿಂಗಲ್ಸ್‌ ‌ನಲ್ಲಿ ಹದಿನೈದು ಗ್ರಾನ್ ಸ್ಲಾಮ್ ಮೇಲೆ ಹಕ್ಕು ಚಲಾಯಿಸಿರಲಿಲ್ಲ. ಪೀಟ್ ಸಂಪ್ರಾಸ್ ಗೆದ್ದ ಹದಿನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳೆ ರೆಕಾರ್ಡ್ ಆಗಿತ್ತು.!
ಮಹಿಳೆಯರಲ್ಲಿ ಮಾತ್ರ ಆ ಕಾಲದಲ್ಲಿ ಮಾರ್ಗರೆಟ್ ಕೋರ್ಟ್ 24, ಸ್ಟೆಫಿ ಗ್ರಾಫ್ 22 ಗ್ರಾಂಡ್ ಸ್ಲಾಮ್ ಗೆದ್ದಿದ್ದರು. ಸದ್ಯ ನಮ್ಮ ಕಾಲದ ಯು.ಎಸ್ ಸೆನ್ಸೆಷನ್ ಸೆರೆನಾ ವಿಲಿಯಮ್ಸ್ 23 ಗೆದ್ದು ಚಾಲ್ತಿಯಲ್ಲಿದ್ದಾರೆ..
ನೂರ ನಲವತ್ತೈದು ವರ್ಷಗಳ ಟೆನಿಸ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ
ನಿನ್ನೆಯದನ್ನು ಹೊರತುಪಡಿಸಿ ರೊಜರ್ ಪದಾರ್ಪಣೆಯ ನಂತರ ಹತ್ತೊಂಬತ್ತೆ ವರ್ಷಗಳಲ್ಲಿ ಈ ಮೂರು ಅತಿರಥರು ದೋಚಿದ್ದು ಭರ್ತಿ ಅರವತ್ತು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು..ತಲಾ ಇಪ್ಪತ್ತರಂತೆ. ನಿನ್ನೆಯದು ಅರವತ್ತ ಒಂದನೇಯದು‌.. ಮತ್ತುಳಿದ ಸಹಸ್ರಕ್ಕು ಮಿಕ್ಕಿದ ಟೆನಿಸ್ ಆಟಗಾರರು ಎತ್ತಿದ್ದು‌ ಕೇವಲ ಹದಿಮೂರು ಗ್ರಾಂಡ್ ಸ್ಲಾಮ್…
ಅಬ್ಬಾಬ್ಬಾ…!
ತ್ರಿಮೂರ್ತಿಗಳ ಪಾರುಪತ್ಯದ ನಡುವೆ ಸೊರಗಿ ಹೋಗಿದ್ದು ಆ್ಯಂಡಿ ರಾಡಿಕ್, ಮರ್ರೆ, ವಾವ್ರಿಂಕ, ಮರಿನ್ ಸಿಲಿಕ್, ಪೊಟ್ರೊ, ಮಡ್ವಡೇವ್ ಅಂತ ಪ್ರತಿಭಾನ್ವಿತರು.  ಇಲ್ಲವಾದಲ್ಲಿ ಈ ಆಟಗಾರರ ಜೋಳಿಗೆಯಲ್ಲಿ ಮತ್ತಷ್ಟು ಪ್ರಶಸ್ತಿಗಳು ತುಂಬಿಕ್ಕೊಳ್ಳುತ್ತಿದ್ದವು.
ಹೇಗೆಂದರೆ ಸತತ ಹತ್ತು ಬ್ಯಾಲನ್ ಡೀಓರ್ ಗೆದ್ದ ಮೆಸ್ಸಿ ಮತ್ತು ರೊನಾಲ್ಡೊ ಡೊಮಿನೆನ್ಸ್ ನಡುವೆ ಸಿಕ್ಕಿಬಿದ್ದ ನೇಮರ್, ಬೆಂಜಮಾ,ಇನಿಯಸ್ತ, ಹಜಾರ್ಡ್, ಗ್ರೀಜ್‌ಮನ್ ರೀತಿ..
ಅವರು ಚಾಂಪಿಯನ್ ಆಟಗಾರರೆ ಆದರೆ ಇವರು ಚಾಂಪಿಯನ್ ಆಫ್ ಚಾಂಪಿಯನ್ಸ್…
ಪ್ರದೀಪ್ ಪಡುಕರೆ
Categories
ಟೆನಿಸ್

ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ!

ನನಗಿನ್ನೂ ನೆನಪಿದೆ ಅವನೊಟ್ಟಿಗಿನ ಮೊಟ್ಟ ಮೊದಲ ಅಭ್ಯಾಸದ ಘಟನೆ.ಆವತ್ತಿಗೆ ಆತ ದೇಶದ ಅತ್ಯಂತ ಪ್ರತಿಭಾನ್ವಿತ ಆಟಗಾರರ ಪೈಕಿ ಒಬ್ಬನೆಂದು ಖ್ಯಾತನಾಗಿದ್ದ.
ಅವನ ಹೆಸರು ಕೇಳಿದ್ದೆನಾದರೂ ನೋಡಿದ್ದು ಅದೇ ಮೊದಲ ಸಲ.ಸಾಮಾನ್ಯವಾಗಿ  ಹಿರಿಯ ಆಟಗಾರರೊಟ್ಟಿಗೆ ಅಭ್ಯಾಸದ ಆಟವಾಡುವಾಗ ಸಹ ಹೊಸ ಆಟಗಾರರಲ್ಲಿ ಸಣ್ಣದ್ದೊಂದು ಉದ್ವೇಗವಿರುತ್ತದೆ.ಹಿರಿಯರನ್ನು ಮೆಚ್ಚಿಸಬೇಕೆನ್ನುವ ಹಂಬಲ,ಹಿರಿಯರನ್ನು ಮೀರಿಸುವ ಚಿಕ್ಕ ಉತ್ಸಾಹ.ಹಾಗಾಗಿ ಸಹಜವಾಗಿಯೇ ಕಿರಿಯ ಆಟಗಾರರು ಒತ್ತಡಕ್ಕೊಳಗಾಗುತ್ತಾರೆ.ಆತ ನನ್ನೊಟ್ಟಿಗೆ ಅಭ್ಯಾಸಕ್ಕಿಳಿಯುವ ಮುನ್ನ ಆತನ ಬಗೆಗೂ ನಾನು ಹಾಗೆಂದುಕೊಂಡಿದ್ದೆ.ಆದರೆ ಅಲ್ಲಿ ನಡೆದದ್ದೇ ಬೇರೆ.ಆತ ಬಂದ. ನನ್ನತ್ತ ಸಣ್ಣಗೆ ನಸುನಕ್ಕವನು ರ‍್ಯಾಕೆಟ್ಟು ಹಿಡಿದವನೇ ನೇರ ಆಟಕ್ಕಿಳಿದ.ಹಾಗೆಂದ ಮಾತ್ರಕ್ಕೆ ಆತ ಭಯಂಕರ ಧೈರ್ಯವಂತನೆಂದು ನೀವು ಎಣಿಸಿದ್ದರೆ ನಿಮ್ಮ ಎಣಿಕೆ ತಪ್ಪು.ಆತನಿಗೆ ಆ ವಯಸ್ಸಿಗಾಗಲೇ ಏನೋ ಸಣ್ಣ ನಿರಾಸಕ್ತಿ.ಸೋತರೂ ಗೆದ್ದರೂ ತನಗೇನೂ ನಷ್ಟವಿಲ್ಲವೆಂಬ ಅನಾಸಕ್ತ ಭಾವ.ಆ ಚಿಕ್ಕ ವಯಸ್ಸಿಗೆ ಆತನ ಆ ಭಾವ ನನ್ನಲ್ಲಿ ನಿಜಕ್ಕೂ ಅಚ್ಚರಿಯುಂಟು ಮಾಡಿತ್ತು.ಆ ವಯಸ್ಸಿಗೆ ಅಷ್ಟು ಆಲಸ್ಯದ ಭಾವ ಸರಿಯಲ್ಲ ಅಂತಲೇ ಅನ್ನಿಸಿತ್ತು.ಅಷ್ಟಾಗಿಯೂ ಆತ ಅದೇ ವರ್ಷದ ಮಾರ್ಸೈ ಪಂದ್ಯಾವಳಿಯ ಅಂತಿಮ ಪಂದ್ಯದ ನನ್ನ ಎದುರಾಳಿಯಾಗಿದ್ದ.ಕೊನೆಯ ಸೆಟ್ ಆತ 7-6ರ ಅಂತರದಲ್ಲಿ ಸೋತಾಗ ಆತ ತೀವ್ರ ಭಾವುಕನಾಗಿ ಹೋಗಿದ್ದ.ಪ್ರಶಸ್ತಿ ಪ್ರಧಾನ ಸಮಾರಂಭದ ಹೊತ್ತಿಗೆ ಆತ ಗಳಗಳನೇ ಅತ್ತು ಬಿಟ್ಟಿದ್ದ.ಅದು ಆತನ ವೃತ್ತಿಜೀವನ ಮೊದಲ ಫೈನಲ್ ಪಂದ್ಯಗಳಲ್ಲೊಂದಾಗಿತ್ತು.ಆದರೂ ಆತ ಅತ್ತಾಗ ’ಅಯ್ಯೋ ಅಳಬೇಡ ಬಿಡು,ಹುಡುಗಾ..’ ಎಂದು ನುಡಿಯಬೇಕೆನ್ನಿಸಿತ್ತು”ಎಂದು ನುಡಿದವರು ಮಾರ್ಕ್ ರೊಸೆಟ್.1992ರ ಒಲಂಪಿಕ್ಸ್‌ನಲ್ಲಿ  ಪೀಟ್ ಸಾಂಪ್ರಾಸ್,ಗೋರಾನ್ ಇವಾನೆಸವಿಚ್,ಮೈಕಲ್ ಚಾಂಗ್‌ರಂತಹ ದೈತ್ಯರ ಉಪಸ್ಥಿತಿಯಲ್ಲಿಯೂ  ಸ್ವಿಜರ್ಲೆಂಡ್ ದೇಶಕ್ಕಾಗಿ ಅಚ್ಚರಿಯ ಸ್ವರ್ಣ ಗೆದ್ದ ಟೆನ್ನಿಸ್ ಕ್ರೀಡಾಳು. ಹಾಗೆ ಆತನಿಗೆ  ಅಚ್ಚರಿ ಮೂಡಿಸಿದ್ದ ಯುವ ಕ್ರೀಡಾಪಟುವಿನ  ಹೆಸರು ರೋಜರ್ ಫೆಡರರ್..!!!
ಹೌದು.ಆರಂಭದ ದಿನಗಳಲ್ಲಿ ರೋಜರ್ ಫೆಡರರ್ ಎನ್ನುವ ಟೆನ್ನಿಸ್ ಜಗದ ದಂತಕತೆ ಇದ್ದದ್ದೇ ಹಾಗೆ.ಬಿಡುಬೀಸಾಗಿ,ಅಸ್ತವ್ಯಸ್ತ ಶಿಸ್ತು ಸಂಯಮಗಳಿಲ್ಲದ ಒರಟನಂತೆ.ಮೇಲೆ ರೊಸೆಟ್ ಹೇಳಿದ ಪಂದ್ಯಾವಳಿ  ಮಾತ್ರವಲ್ಲ,ಆರಂಭಿಕ ದಿನಗಳಲ್ಲಿ ಆತ ಆಡಿದ ಬಹುತೇಕ ಪಂದ್ಯಾವಳಿಗಳಲ್ಲಿ ಆತನದ್ದು ಒರಟು ವರ್ತನೆಯೇ.ಇದನ್ನು ಸ್ವತ: ಒಪ್ಪಿಕೊಳ್ಳುತ್ತಾನೆ ರೋಜರ್ ಫೆಡರರ್.ಫ್ರೆಂಚ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ.’ವೃತ್ತಿಜೀವನದ ಆರಂಭದಲ್ಲಿ ನಾನು ಮಹಾಮುಂಗೋಪಿಯಾಗಿದ್ದೆ.ಸಣ್ಣಪುಟ್ಟ ತಪ್ಪುಗಳಿಗೂ ನಾನು ಕಿರುಚಾಡುತ್ತಿದ್ದೆ.ಒಂದು ಗೇಮ್ ಸೋತರೂ ಕೈಯಲ್ಲಿದ್ದ ರ‍್ಯಾಕೆಟ್ ರಪ್ಪನೇ ನೆಲಕ್ಕೆ ಬಾರಿಸುತ್ತಿದ್ದೆ.ಪಂದ್ಯ ಸೋತರಂತೂ ಮುಗಿದೇ ಹೋಯಿತು,ಕೈಯಲ್ಲಿದ್ದ ರ‍್ಯಾಕೆಟ್‍ನ್ನು ನೆಲಕ್ಕೆ ಬಡಿದು ಪುಡಿಪುಡಿಯಾಗಿಸುತ್ತಿದ್ದೆ.ಹಾಗೆ ಪುಡಿಯಾಗಿಸಿದ ರ‍್ಯಾಕೆಟ್ಟುಗಳಿಗೆ ಲೆಕ್ಕವೇ ಇಲ್ಲ.ಅದರಲ್ಲೂ 2001ರ ಹ್ಯಾಂಬರ್ಗ್ ಪಂದ್ಯಾವಳಿಯಲ್ಲಿ ನಾನು ಸೋತಾಗ ನಾನು ಅದೆಷ್ಟು ವ್ಯಗ್ರನಾಗಿದ್ದೆನೆಂದರೆ ಕೈಯಲ್ಲಿದ್ದ ನನ್ನ ರ‍್ಯಾಕೆಟ್ ಮತ್ತೊಮ್ಮೆ ಪುಡಿಪುಡಿಯಾಗಿತ್ತು.ನನಗೆ  ಪಂದ್ಯದ ನಿರ್ಣಾಯಕರಿಂದ ಎಚ್ಚರಿಕೆಗಳು ಸಿಕ್ಕಿದ್ದವು.ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ವರ್ತನೆಯ ಬಗ್ಗೆ ಕಟು ಟೀಕೆಗಳ ವರದಿಗಳು ಪ್ರಕಟವಾಗಿದ್ದವು.ಅದು ಬಹುಶ: ನನ್ನ ಬದುಕಿನ ಮೊಟ್ಟ ಮೊದಲ ತಿರುವು ಬಿಂದುವಾಗಿತ್ತು.ಪಂದ್ಯ ಮುಗಿದ ಕಾಲಕ್ಕೆ ನನಗೆ ಜ್ಞಾನೋದಯವಾಗಿತ್ತು.ನಾನು ಗೆಲುವಿನ ತುಂಬ ಸಮೀಪದಲ್ಲಿ ಎಡವಿದ್ದೆ ಎನ್ನುವುದೇನೋ ನಿಜ,ಆದರೆ ತೀರ ಅಷ್ಟು ಅನಾಗರೀಕ ವರ್ತನೆ ನನಗೆ ಬೇಕಿತ್ತಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೆ. ಅದಾಗಲೇ ನಾನು ಟೆನ್ನಿಸ್ ಎನ್ನುವ ಆಟವೇ ನನ್ನ ಬದುಕು ಎಂದು ತೀರ್ಮಾನಿಸಿಯಾಗಿತ್ತು.ನಿಜಕ್ಕೂ ಟೆನ್ನಿಸ್ ಎನ್ನುವುದೇ ನನ್ನ ವೃತ್ತಿ ಬದುಕು ಎಂದಾದರೆ ತೀರ ಈ ಮಟ್ಟದ ವರ್ತನೆ ನನ್ನ ವೃತ್ತಿಪರತೆಗೆ ಮಾರಕವೆನ್ನುವುದು ಅರಿವಾದ ಹೊತ್ತು ಅದು.ಎಂಥದ್ದೇ ಸಂದರ್ಭ ಬಂದರೂ ಇನ್ನು ಮುಂದೆ ನನ್ನ ಭಾವೋದ್ವೇಗದ ಮೇಲೆ ನಿಯಂತ್ರಣ ಕಳೆದು ಕೊಳ್ಳಬಾರದು ಎಂದು ನಿರ್ಧರಿಸಿದ್ದೆ.ಹಾಗೆ ನಿರ್ಧರಿಸಿದ  ಕೆಲವೇ ದಿನಗಳಲ್ಲಿ ನನ್ನಲ್ಲಾದ ಬದಲಾವಣೆಗಳನ್ನು ನಾನು ಗಮನಿಸಲಾರಂಭಿಸಿದ್ದೆ.ನನಗೆ ಆಟದ ಅಂಗಳದಲ್ಲಿ ನನ್ನ ತಪ್ಪುಗಳು ಅರ್ಥವಾಗಲಾರಂಭಿಸಿದ್ದವು.ನನ್ನ ಆಟದ ದೌರ್ಬಲ್ಯಗಳು ಗೋಚರಿಸಲಾರಂಭಿಸಿದ್ದವು.ನನ್ನ ವರ್ತನೆಯಲ್ಲಿ ಸುಧಾರಣೆ ಕಾಣಿಸಲಾರಂಭಿಸಿದ ನಂತರ ನನ್ನ ಆಟವೂ ಸುಧಾರಿಸಲಾರಂಭಿಸಿತ್ತು.ಎಲ್ಲಕ್ಕಿಂತ ಹೆಚ್ಚಾಗಿ ನಾನು ಉದ್ವೇಗರಹಿತನಾಗಿ ಆಡುವುದನ್ನು ಕಲಿತದ್ದರಿಂದ ಇನ್ನೂ ಒಂದು ಲಾಭ ನನಗಾಗಿತ್ತು.ಅದೇನು ವಿಚಿತ್ರ  ತರ್ಕವೋ ಗೊತ್ತಿಲ್ಲ,ಕಿರುಚಾಟ ಗಲಾಟೆಗಳಿಲ್ಲದ ನನ್ನನ್ನು ನನ್ನ ಎದುರಾಳಿಗಳು ತೀರ ಸಾಮಾನ್ಯ ಆಟಗಾರನಂತೆ ನೋಡಲಾರಂಭಿಸಿದ್ದರು.ಒಂದು ಅತಿಯಾದ ಆತ್ಮವಿಶ್ವಾಸ ನನ್ನೆದುರಿಗೆ ಅವರಿಗಿರುತ್ತಿತ್ತು. ಆ ಕಾರಣಕ್ಕೂ ಅನಗತ್ಯದ ತಪ್ಪುಗಳನ್ನು ಮಾಡುವ ಎದುರಾಳಿಗಳು ಸಹ ನನ್ನೆದುರು ಸೋತದ್ದಿದ್ದೆ.ನಿಧಾನಕ್ಕೆ ನನಗೆ ಆಟದ ಹಿಡಿತ ಅರ್ಥವಾಗತೊಡಗಿತ್ತು.ಉದ್ವಿಗ್ನತೆಯ ಮೇಲಿನ ನಿಯಂತ್ರಣ ನನ್ನನ್ನು ಗೆಲ್ಲಿಸಲಾರಂಭಿಸಿತ್ತು’ಎಂದು ನುಡಿದು ನಕ್ಕಿದ್ದ ರೋಜರ್ ಫೆಡರರ್ ಎನ್ನುವ ಸ್ವಿಸ್ ಮಾಂತ್ರಿಕ.
ಹೀಗೆ ನುಡಿಯುವ ರೋಜರ್ ಬದುಕಿನಲ್ಲಿ ಅದೇ ಹೊತ್ತಿಗೆ ಅವಘಡವೊಂದು ನಡೆದಿತ್ತು.2002 ರ ಹೊತ್ತಿಗೆ ಆತನ ತುಂಬ ಪ್ರೀತಿಯ ತರಬೇತಿದಾರ ಪೀಟರ್ ಕಾರ್ಟರ್ ಕಾರು ಅಪಘಾತವೊಂದರಲ್ಲಿ ಮೃತನಾಗಿದ್ದ.ರೋಜರ್ ಕೆನೆಡಿಯನ್ ಓಪನ್ ಆಡುತ್ತಿದ್ದ ಹೊತ್ತು ಅದು.ತರಬೇತುದಾರನ ಸಾವಿನ ಸುದ್ದಿ ಕೇಳುತ್ತಲೇ ಬಿಕ್ಕಿಬಿಕ್ಕಿ ಅಳುತ್ತ ಹೊಟೆಲ್ಲಿನ ಕೋಣೆಯಿಂದ ಆಚೆಗೆ ಓಡಿ ಹುಚ್ಚನಂತೆ ಕಿರುಚಾಡಿದ್ದನಂತೆ ಫೆಡರರ್.ಆದರೆ  ಆ ಉದ್ವೇಗದ್ದು ಅಲ್ಪಾವಧಿಯ ಆಯಸ್ಸು.ನೆಚ್ಚಿನ ಜೊತೆಗಾರನ ಸಾವಿನ ನಂತರ ಆತ ಮತ್ತಷ್ಟು ಗಟ್ಟಿಯಾಗಿದ್ದ. ಕಠಿಣ ಪರಿಶ್ರಮದಿಂದ ತನ್ನ ಆಟವನ್ನು ಪರಿಪೂರ್ಣತೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದ.ಮುಂದಿನದ್ದು ಇತಿಹಾಸ.2003ರಲ್ಲಿ ಮಾರ್ಕಸ್ ಫಿಲಿಫೌಸಿಸ್‌ನನ್ನು ಸೋಲಿಸುವ ಮೂಲಕ ಚೊಚ್ಚಲ ವಿಂಬಲ್ದನ್ ಗೆದ್ದ ಫೆಡರರ್ ಟೆನ್ನಿಸ್ ಕ್ಷೇತ್ರಕ್ಕೆ ತನ್ನ ಯೋಗ್ಯತೆಯನ್ನು ಸಾರಿದ್ದ.2004ರಲ್ಲಿ ಆತನದ್ದು ಅಂಗಳದಲ್ಲಿ ಅಕ್ಷರಶ: ರುದ್ರತಾಂಡವ.ವರ್ಷದ ನಾಲ್ಕು ಗ್ರಾಂಡ್‌ಸ್ಲಾಮ್‌ಗಳ ಪೈಕಿ ಮೂರನ್ನು ಗೆಲ್ಲುವುದರ ಮೂಲಕ ಹದಿನೈದು ವರ್ಷಗಳ ಹಿಂದಿನ ಮ್ಯಾಟ್ ವಿಲಾಂಡರ್‌ನ ದಾಖಲೆಯನ್ನು ಸರಿಗಟ್ಟಿದ ಫೆಡರರ್.ಮುಂದೆ ಆತನನ್ನು ಹಿಡಿಯುವವರೇ ಇರಲಿಲ್ಲ.ರಾಫಾ ನಡಾಲ್,ನೋವಾಕ್ ಜೋಕೊವಿಚ್‌ರಂಥಹ ಬಲಾಡ್ಯ ಎದುರಾಳಿಗಳ ನಡುವೆಯೂ ತನ್ನದೇ ಆಟದಿಂದ ವಿಜೃಂಭಿಸಿದವನಾತ.ಇವತ್ತಿಗೆ ಇಪ್ಪತ್ತು ಗ್ರಾಂಡ್‌ಸ್ಲಾಮ್‌ಗಳ ಒಡೆಯ ಫೆಡರರ್.ನಂತರದ ದಿನಗಳಲ್ಲಿ  ರಾಫಾ ನಡಾಲ್ ,ಅತಿಹೆಚ್ಚು ಗ್ರಾಂಡ್‍ಸ್ಲಾಮ್ ಗೆದ್ದ ಫೆಡರರ್‌ನ ದಾಖಲೆಯನ್ನು ಸರಿಗಟ್ಟಿದ.ಮತ್ತೊಬ್ಬ ಅದ್ಭುತ ಆಟಗಾರ ಜೊಕೊವಿಚ್ ಸಹ ಅದೇ ಹಾದಿಯಲ್ಲಿದ್ದಾನೆ.ಹಾಗಾಗಿ ಟೆನ್ನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರನ್ಯಾರು ಎನ್ನುವ ಪ್ರಶ್ನೆ ಸಧ್ಯಕ್ಕಂತೂ ಚರ್ಚಾರ್ಹ.ಆದರೆ ಎಲ್ಲ ಚರ್ಚೆಗಳಿಗಾಚೆಗೆ ವರ್ಷಗಟ್ಟಲೆಯಿಂದ ಆತನ ಆಟವನ್ನು ಗಮನಿಸಿದಾಗ,ತನ್ನದೇ ಆದ SABR ,ಟ್ವೀನರ್ ನಂತಹ ಹೊಡೆತಗಳನ್ನು ಆತ ಬಳಸುವ ರೀತಿಯನ್ನು ಕಂಡಾಗ ಟೆನ್ನಿಸ್ ಜಗತ್ತು ಕಂಡ ಅತ್ಯಂತ ಕಲಾತ್ಮಕ ಆಟಗಾರ ಯಾರು ಎಂಬ ಪ್ರಶ್ನೆಗೆ ಮಾತ್ರ ರೋಜರ್ ಫೆಡರರ್ ಎನ್ನುವುದೊಂದೇ ಉತ್ತರ.
ಯೋಚಿಸಿ ನೋಡಿ,ಟೆನ್ನಿಸ್ ಎನ್ನುವುದು ಸರಿಸುಮಾರು ಇನ್ನೂರು ಚದರಮೀಟರಗಳಷ್ಟಿರುವ ಅಂಗಳದಲ್ಲಿ ಆಡುವ ಆಟ.  ಸಿಂಗಲ್ಸ್ ಆಟದ ನಿಯಮಾವಳಿಗಳಡಿಯಲ್ಲಿ ಆಡಲು ಯೋಗ್ಯ ಸ್ಥಳ ಸರಿಸುಮಾರು ನೂರಾಮೂವತ್ತು ಚದರ ಮೀಟರುಗಳು.ಒಬ್ಬ ಆಟಗಾರನಿಗೆ ಲಭ್ಯವಿರುವ ಸ್ಥಳಾವಕಾಶ ನೂರಾ ನಾಲ್ಕು ಚದರ ಮೀಟರುಗಳಷ್ಟು ಮಾತ್ರ.ಅಷ್ಟೇ ಸ್ಥಳಾವಕಾಶದಲ್ಲಿ ಎದುರಾಳಿಯ ಕಣ್ಣು ತಪ್ಪಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುವ ಆಟ ಟೆನ್ನಿಸ್.ಟೆನ್ನಿಸ್ ಆಟದ  ಮೂಲ ನಿಯಮವಿರುವುದೇ ಇಷ್ಟು. ಎದುರಾಳಿಯ ಅಂಗಳದಲ್ಲಿ ಎದುರಾಳಿಯ ರ‍್ಯಾಕೆಟ್ಟಿಗೆ ಚೆಂಡು ಸಿಗದಂತೆ ತಪ್ಪಿಸುವ ಆಟ.ಮೇಲ್ನೋಟಕ್ಕೆ ತೀರ ಸುಲಭವೆನ್ನಿಸುವ ಆಟವೇ. ಹಾಗೆಂದು ಅಂಗಳಕ್ಕೆ      ರ‍್ಯಾಕೆಟ್ಟು ಹಿಡಿದು ಇಳಿದ ಪ್ರತಿ ಆಟಗಾರನೂ ಇಲ್ಲಿ  ಯಶಸ್ಸು ಕಾಣಲಿಲ್ಲ.ಕಾರಣವೇನು ಎಂಬ ಪ್ರಶ್ನೆಗೆ   ಭಯಂಕರ ದೈಹಿಕ ಸಾಮರ್ಥ್ಯಬೇಕು ಎನ್ನುತ್ತಿರೇನೋ. ಆದರೆ  ರೋಜರ್ ಫೆಡರರ್‌ನ ಸಮಕಾಲೀನರಲ್ಲಿ ಅವನಷ್ಟೇ ದೈಹಿಕ ಸಾಮರ್ಥ್ಯವಿದ್ದ ನೂರಾರು ಆಟಗಾರರಿದ್ದರು.ಅವನಿಗಿಂತ ಎತ್ತರದ ಆಟಗಾರರಿದ್ದರು.ಅವನಿಗಿಂತ ಬಲಿಷ್ಟ ಮೈಕಟ್ಟಿನ ಕ್ರೀಡಾಳುಗಳಿದ್ದರು.ಆದರೂ ಒಬ್ಬ ಟೆನ್ನಿಸ್ ಪಟುವಿಗೆ ಸಹ ರೋಜರ್ ಫೆಡರರ್‌ನ ಸಾಧನೆಯ ಸಮೀಪಕ್ಕೂ ಬಂದು ನಿಲ್ಲಲಾಗಲಿಲ್ಲ.ಕಾರಣ ಹುಡುಕುತ್ತ ಹೊರಟರೆ ಸಿಗುವ ಉತ್ತರವೊಂದೆ.ಉಳಿದೆಲ್ಲ ಆಟಗಾರರನ್ನು ಮೀರಿಸಿದ್ದ ಅಂಶವೊಂದು ರೋಜರ್‌ ಬಳಿಯಿತ್ತು.ಅದು ಆಟದ ಮೇಲಿದ್ದ ಆತನ ಅದ್ಭುತ ಹಿಡಿತ.ಅದೊಂದೇ ಆತನನ್ನು ವಿಶ್ವಶ್ರೇಷ್ಠನನ್ನಾಗಿಸಿದ್ದು.
ಫೆಡರರ್‌ನ ಕ್ರೀಡಾ ಬದುಕಿನ ಈ ಬದಲಾವಣೆಯ ಕುರಿತು ಓದಿದಾಗಲೆಲ್ಲ ನನ್ನ ಮನಸು ಪದೇ ಪದೇ ತತ್ವಶಾಸ್ತ್ರಕ್ಕೆ ಶರಣಾಗುತ್ತದೆ.ಗೆಲುವು ಎಂದರೆ ಇನ್ನೇನಿಲ್ಲ ಅದು ಹಿಡಿತವೇ.  ಆಟ ಪಕ್ಕಕ್ಕಿಡಿ, ಸರಿಯಾಗಿ  ಯೋಚಿಸಿದರೆ ನಮ್ಮ ಬದುಕು ಸಹ ಹೀಗೆ ಅಲ್ಲವಾ..? ಬದುಕಿನ ಗೆಲುವಿಗೆ ಪರಿಶ್ರಮ ,ಗಟ್ಟಿ ನಿರ್ಧಾರಗಳ ಜೊತೆಗೆ ನಮಗೆ ಬೇಕಿರುವುದು ಸಹನೆ.ಸಹನೆ ಎಂದರೆ ಮತ್ತದೇ ಹಿಡಿತ. ನಮ್ಮ ಮೇಲಿನ ನಮ್ಮ ಹಿಡಿತ. ಕೋಪದ ಮೇಲಿನ ಹಿಡಿತ,ಹತಾಶೆಯ ಮೇಲಿನ ಹಿಡಿತ,ಅಸಹನೆ ರೋಷಗಳ ಮೇಲಿನ ಹಿಡಿತ.ಒಟ್ಟಾರೆಯಾಗಿ ಭಾವಗಳ ಮೇಲಿನ ಹಿಡಿತ.ನಮ್ಮ ಮೇಲೊಂದು ಸ್ವಯಂ ನಿಯಂತ್ರಣ.ಆ ನಿಯಂತ್ರಣವೊಂದಿದ್ದು ಬಿಟ್ಟರೇ ನಮ್ಮ ಬದುಕೆನ್ನುವ  ಟೆನ್ನಿಸ್ ಅಂಗಳಕ್ಕೆ ನಾವೇ ವಿಜಯಿ ಫೆಡರರ್.
Categories
ಟೆನಿಸ್

ಭಾರತದ ಯುವಕರನ್ನ ವಿಶ್ವಟೆನ್ನಿಸ್‌ರಂಗದತ್ತ ಸೆಳೆದ ಅಗ್ರಗಣ್ಯನೀತ…

ಬಹುಶಃ ನನ್ನ ತಲೆಮಾರಿನ ಹುಡುಗರಿಗೆ ಟೆನ್ನಿಸ್ ಲೋಕದತ್ತ ಸೆಳೆದ ಮೊದಲ ಆಟಗಾರ ಲಿಯಾಂಡರ್ ಪೇಸ್.1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಆತ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಟ ಥಾಮಸ್ ಎನಕ್ವಿಸ್ಟ್‌ರನ್ನು ಸೋಲಿಸಿ ಸೆಮಿಪೈನಲ್ ತಲುಪಿದಾಗ ಆತ ಪದಕ ಗೆಲ್ಲುವನೇನೋ ಎಂಬ ನಿರೀಕ್ಷೆಯಿತ್ತು.
ಆದರೆ ಎದುರಿಗಿದ್ದಿದ್ದು  ಆವತ್ತಿನ ಬಲಾಡ್ಯ ಅಗಾಸ್ಸಿ.ಸೆಮಿಪೈನಲ್ ಸೋತ ನಂತರವೂ ಲಿಯಾಂಡರ್ ‘ಕಂಚು ಪದಕ ತಂದೇ ತರುವೆ’ಎಂದಾಗ ಬಹುತೇಕ ಭಾರತೀಯರಿಗೆ ಸಂತಸವಾಗಿತ್ತು.ಮಾತಿಗೆ ತಕ್ಕಂತೆ ಕಂಚಿನ ಪದಕ ತಂದ ಲಿಯಾಂಡರ್ ದೇಶದ ಸಾರ್ವಕಾಲಿಕ ಶ್ರೇಷ್ಟ ಟೆನ್ನಿಸ್ ಆಟಗಾರನಾಗಿ ಮಿಂಚಿದ್ದು ಈಗ ಇತಿಹಾಸ.
ಆದರೆ ಅವನ ಶ್ರೇಷ್ಠತೆಗೆ ಜೊತೆಯಾಗಿದ್ದು ಮಹೇಶ್ ಭೂಪತಿ.ಆವತ್ತಿಗೆ ವಿಶ್ವ ಡಬಲ್ಸ್‌ನಲ್ಲಿ ಮಹೇಶ್ ಪೇಸ್ ಜೋಡಿ ವಿಶ್ವದ ಶ್ರೇಷ್ಠ ಡಬಲ್ಸ್ ಜೋಡಿಗಳಲ್ಲೊಂದು.ಒಂದೇ ವರ್ಷದಲ್ಲಿ ವರ್ಷದ ನಾಲ್ಕೂ ಗ್ರಾಂಡಸ್ಲಾಮ್‌ಗಳ ಫೈನಲ್ ತಲುಪಿಕೊಂಡ ಏಕೈಕ ಜೋಡಿಯಿದು.1999ರಲ್ಲಿ ಈ ಸಾಧನೆ ಮಾಡಿದ ಜೋಡಿ ಆ ವರ್ಷದ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದುಕೊಂಡಿತ್ತು.ಜೋಡಿಯಾಗಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಿದ್ದು ಸಹ ಈ ಜೋಡಿಯ ಮತ್ತೊಂದು ಸಾಧನೆ.
ನಿಸ್ಸಂಶಯವಾಗಿ ನಮ್ಮನ್ನು ಟೆನ್ನಿಸ್ ಲೋಕದತ್ತ ಸೆಳೆದ ಜೋಡಿಯಿದು.ಆಗ ಮಧ್ಯಮವರ್ಗಿಯ ಮನೆಗಳಲ್ಲಿ ಟಿವಿ ಇರುತ್ತಿದ್ದದ್ದೇ ದೊಡ್ಡ ವಿಷಯ.ಇನ್ನು ದುಬಾರಿ ಕ್ರೀಡಾ ವಾಹಿನಿಗಳಂತೂ ಕನಸಿನ ಮಾತು.ಪ್ರತಿನಿತ್ಯ ಬೆಳಗೆದ್ದು ಏಳರ ದೂರದರ್ಶನ ವಾರ್ತೆ ನಮಗಿದ್ದ ಏಕೈಕ ಆಧಾರ.ಅಪ್ಪ ಟಿವಿ ಹಾಕುತ್ತಿದ್ದರು.ಹದಿನೈದು ನಿಮಿಷಗಳ ವಾರ್ತೆಗಳ ಮುಖ್ಯಾಂಶಗಳ ಪೈಕಿ ಕೊನೆಯಲ್ಲಿ ವಾರ್ತಾವಾಚಕಿ ‘ಲಿಯಾಂಡರ್ ಮಹೇಶ್ ಕೀ ಜೀತ್’ ಎಂದರೆ ವಾರ್ತೆಯನ್ನು ಪೂರ್ತಿ ಕೇಳಿಸಿಕೊಳ್ಳುವುದು,’ಹಾರ್’ ಎಂದರೆ ಮರುಕ್ಷಣವೇ ಟಿವಿ ಆಫ್. ನನ್ನ  ಸ್ವರ್ಣ ಬಾಲ್ಯದ ನೆನಪುಗಳಿಗೆ ಈ ಜೋಡಿಯ ಕೊಡುಗೆಯೂ ಕಡಿಮೆಯೇನಿಲ್ಲ ಬಿಡಿ.
ಆನಂತರ ತಮ್ಮದೇ ವೈಯಕ್ತಿಕ ಅಹಮಿಕೆಯಿಂದ ದೂರ ಸರಿದ ಈ ಆಟಗಾರರು ಹಲವು ಪ್ರಶಸ್ತಿಗಳನ್ನು ಗೆದ್ದರಾದರೂ ಅವರಿಬ್ಬರು ಜೊತೆಯಾಗಿ ಕಂಡ ಗೆಲುವಿನಷ್ಟು ಸಂತಸ  ಭಾರತೀಯರಿಗೆ ಅಭಿಮಾನಿಗಳಿಗೆ ಅವರ ವೈಯಕ್ತಿಕ  ಗೆಲುವು ಕೊಡಲಿಲ್ಲ ಎನ್ನುವುದು ಸತ್ಯ.
ಜೂನ್ ಏಳರಂದು ಮಹೇಶ್ ಭೂಪತಿಯವರಿಗೆ ನಲ್ವತ್ತೇಳರ ಹರೆಯ.ಜಪಾನಿನ ರಿಕಾ ಹಿರಾಕಿಯೊಂದಿಗೆ ಸೇರಿ ಮಿಶ್ರ ಡಬಲ್ಸ್‌ನ ಮೊದಲ ಪ್ರೆಂಚ್ ಓಪನ್ ಗೆದ್ದದ್ದು ಭಾರತೀಯ ಟೆನ್ನಿಸ್ ಲೋಕದ ಮೊದಲ ಗ್ರಾಂಡ್‌ಸ್ಪಾಮ್ ಸಾಧನೆ.ಅದಲ್ಲದೇ ಆತ 1999ರ ಹೊತ್ತಿಗೆ ವಿಶ್ವ ಡಬಲ್ಸ್ ಆಟಗಾರರ ಪೈಕಿ ನಂಬರ್ 1 ಆಟಗಾರನಾಗಿದ್ದನೆನ್ನುವುದು ಸಹ ಗಮನಾರ್ಹ.ಆ ಸಾಧನೆಯನ್ನು ಎರಡು ಬಾರಿ ಮಾಡಿದ ಏಕೈಕ ಭಾರತೀಯ ಆಟಗಾರನೀತ.
ಅಲ್ಲಿಷ್ಟು ಇಲ್ಲಿಷ್ಟು ಸಾಂಪ್ರಾಸ್ ಅಗಾಸ್ಸಿ ಎಂದು ತೊದಲುವ ಹೊತ್ತಿಗೆ ನಮಗೆ ವಿಶ್ವ ಟೆನ್ನಿಸ್ ಲೋಕದ ಹುಚ್ಚು ಹತ್ತಿಸಿ ಎಳೆದೊಯ್ದ ವಿಶ್ವಶ್ರೇಷ್ಠನಿಗೆ ಹುಟ್ಟುಹಬ್ಬದ ಶುಭಾಶಯಗಳು.
Categories
ಟೆನಿಸ್

ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು

ವಿಶ್ವ ಟೆನ್ನಿಸ್ ಲೋಕದಲ್ಲಿ ಬಾಬಿ ರಿಗ್ಗ್ ಎನ್ನುವ ಪ್ರತಿಭಾನ್ವಿತ ಆಟಗಾರನೊಬ್ಬನಿದ್ದ.ಮೂರು ಗ್ರಾಂಡ್‌ಸ್ಲಾಮ್ ಗೆದ್ದು ತನ್ನ ವೃತ್ತಿಕಾಲದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನಾಗಿ ಮೆರೆದವನು ರಿಗ್ಸ್.ಅದೇನಾಯಿತೋ ಗೊತ್ತಿಲ್ಲ,
ತಾನು ನಿವೃತ್ತನಾದ ಕಾಲಕ್ಕೆ ಒಂದು ವಿಲಕ್ಷಣ ಅಹಮಿಕೆ ಅವನ ನೆತ್ತಿಗೇರಿತ್ತು.ಏಕಾಏಕಿ ಆತ ಮಹಿಳಾ ಟೆನ್ನಿಸ್ ಲೋಕವನ್ನ ಟೀಕಿಸಲಾರಂಭಿಸಿದ್ದ.ಮಹಿಳೆಯರ ಟೆನ್ನಿಸ್ ಎನ್ನುವುದೇ ಒಂದು ಅರ್ಥಹೀನ ಕ್ರೀಡೆ,ಮಹಿಳೆಯರು ಟೆನ್ನಿಸ್ ಆಡುವುದಕ್ಕೆ ಅಯೋಗ್ಯರು ಎಂಬರ್ಥದಲ್ಲಿ ಮಾತುಗಳನ್ನಾಡುತ್ತಿದ್ದ ಅವನ ಮಾತುಗಳಿಗೆ ಆರಂಭಿಕ ನಿರ್ಲಕ್ಷ್ಯಗಳು ಎದುರಾಗಿದ್ದವು.ಆದರೆ ಅವನು ಸುಮ್ಮನಾಗಲಿಲ್ಲ.ತನ್ನೆಡೆಗಿನ ಉಪೇಕ್ಷೆಯಿಂದ ಇನ್ನಷ್ಟು ಕೆರಳಿದವನು ಮತ್ತೆ ಮತ್ತೆ ನಾಲಿಗೆಯನ್ನು ಹರಿಬಿಟ್ಟಿದ್ದ.’ತನಗೀಗ 55 ವರ್ಷ ವಯಸ್ಸು.ಆದರೆ ಅದನ್ನ ಪರಿಗಣನೆಗೆ ತೆಗೆದುಕೊಳ್ಳಬೇಡಿ.ತಾನು ಈ ವಯಸ್ಸಿನಲ್ಲಿಯೂ ಮಹಿಳಾ ಟೆನ್ನಿಸ್‌ನ ಅಗ್ರಶ್ರೇಯಾಂಕಿತರನ್ನ ಸುಲಭಕ್ಕೆ ಸೋತು ಸುಣ್ಣವಾಗಿಸುತ್ತೇನೆ,ಅವರು ನನಗಿಂತ ಚಿಕ್ಕವರಾಗಿರಲಿ ದೊಡ್ಡವರಿರಲಿ ನನಗೆ ಲೆಕ್ಕವಿಲ್ಲ’ಎಂದು ಅಬ್ಬರಿಸಿದ್ದ.ಆತ ಹಾಗೆ ಅಬ್ಬರಿಸಿ ಆಹ್ವಾನವಿತ್ತಿದ್ದು ಅಂದಿನ ಯುವ ಆಟಗಾರ್ತಿ ಬಿಲ್ ಜೀನ್ ಕಿಂಗ್‌ಳಿಗೆ.ಆದರೆ ಆಕೆಗೆ ಅವನೆಡೆಗೆ ದಿವ್ಯ ನಿರ್ಲಕ್ಷ್ಯ. ಹಾಗಾಗಿ ಆವತ್ತಿಗೆ ರಿಗ್ಸ್‌ನ ಎದುರಾಳಿಯಾಗಿದ್ದವಳು ಮಹಿಳಾ ಟೆನ್ನಿಸ್ ಲೋಕದ ದಂತ ಕತೆ ಮಾರ್ಗರೇಟ್ ಕೋರ್ಟ್.ಆಕೆ ಆವತ್ತಿಗೆ ಟೆನ್ನಿಸ್ ಲೋಕದ ಅಗ್ರಶ್ರೇಯಾಂಕಿತ ಆಟಗಾರ್ತಿ. ಸಾಲುಸಾಲು ಪ್ರಶಸ್ತಿಗಳು ಆಕೆಯ ಬೆನ್ನಿಗಿದ್ದವು.ಆದರೆ ಆಕೆಯ ಪ್ರತಿಭೆ ಆವತ್ತಿಗೇಕೊ  ಆಕೆಯ ಕೈ ಹಿಡಿಯಲಿಲ್ಲ.ಅವಳೆದರು ಅಕ್ಷರಶಃ ಆರ್ಭಟ ರಿಗ್ಸ್‌ನದ್ದು.  ತನ್ನ ಅಹಮಿಕೆಯ ತೃಪ್ತಿಗೆಂಬಂತೆ ಆಟವಾಡಿದ ರಿಗ್ಸ್ ಆಕೆಯನ್ನು ಚಿಕ್ಕ ಮಕ್ಕಳಂತೆ ಸೋಲಿಸಿದ್ದ.ಮೂರು ಸೆಟ್‌ಗಳ ಪಂದ್ಯವನ್ನು ಆತ 6-2,6-1 ರ ನೇರ ಅಂತರದಲ್ಲಿ ಜಯಿಸಿದ್ದ.
ಒಂದರ್ಥದಲ್ಲಿ ರಿಗ್ಸ್‌ನ ಗೆಲುವು ಆವತ್ತಿನ ಸಮಾಜದ ಪುರುಷಂಹಕಾರವನ್ನು ಮತ್ತೊಮ್ಮೆ ಕೆರಳಿಸಿತ್ತು. ಸಮಾನತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಪಾಶ್ಚಿಮಾತ್ಯ ಸಮಾಜದ ಪತ್ರಿಕೆಗಳು ರಿಗ್ಸ್‌ನ ಚಿತ್ರವನ್ನು ಮುಖಪುಟದಲ್ಲಿ ಹಾಕಿ ಮೆರೆಸಿದ್ದವು.’ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ‘ ಮತ್ತು ‘ಟೈಮ್ ‘ನಂಥಹ ಪ್ರತಿಷ್ಠಿತ ಪತ್ರಿಕೆಗಳ ಮುಖಪುಟದಲ್ಲಿಯೂ ಬಾಬಿ ರಿಗ್ಸ್ ರಾರಾಜಿಸುತ್ತಿದ್ದ.
ಗೆಲುವಿನ ನಶೆ ನೆತ್ತಿಗೇರಿತ್ತು.ಮತ್ತೆ ಹುಚ್ಚುಚ್ಚಾಗಿ ಮಾತನಾಡಲಾರಂಭಿಸಿದ್ದ ಬಾಬಿ .ಈ ಬಾರಿ ಟೆನ್ನಿಸ್ ಟೀಕಾಕಾರ ಮತ್ತು ನಿರೂಪಕ ಜಾಕ್ ಕ್ರಾಮರ್ ಸಹ ರಿಗ್ಸ್‌ನ ಹುಚ್ಚಾಟಕ್ಕೆ ದನಿಗೂಡಿಸಿದ್ದ.ಇವರಿಬ್ಬರ ಹುಚ್ಚಾಟಕ್ಕೆ ಅನಗತ್ಯದ ಪುರುಷಹಂಕಾರದ ಮೆರೆದಾಟಕ್ಕೆ ಒಂದು ಉತ್ತರ ಬೇಕಿತ್ತು.ಒಂದು ಸವಾಲು ಬೇಕಿತ್ತು.ಆಗ ಸವಾಲಾಗಿ ನಿಂತವಳು ಬಿಲ್ಲಿ ಜೀನ್ ಕಿಂಗ್ .ಪಂದ್ಯಕ್ಕೆ ತಾನು ತಯಾರು ಎಂದಿದ್ದಳು.ತಕ್ಷಣವೇ ಆಯೋಜಕರು ಪಂದ್ಯಕ್ಕೊಂದು ವೇದಿಕೆ ಸಿದ್ದಪಡಿಸಿದ್ದರು.1973 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈ ಪಂದ್ಯಕ್ಕೆ ಆವತ್ತಿಗೆ ಆಯೋಜಕರಿಟ್ಟ ಹೆಸರು
‘Battle of sexes’
ಪಂದ್ಯ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಶುರುವಾಗಿತ್ತು.ಆಗಷ್ಟೇ ನಂಬರ್ ಒನ್ ಸ್ಥಾನಕ್ಕೆ ಹೋಗಿ ಕುಳಿತಿದ್ದ ಬಿಲ್ ಜೀನ್ ಕಿಂಗ್ ಅಮೇರಿಕಾದ ಆಟಗಾರ್ತಿ. ಆಟಕ್ಕೂ ಮುನ್ನ ತೀರ ಗಂಭೀರವದನಳಾಗಿದ್ದ ಆಕೆಯೆಡೆಗೆ ರಿಗ್ಸ್‌ನದ್ದು ಯಾವತ್ತಿನ ಉಡಾಫೆ.ಮೊದಲ ಸೆಟ್ ಆರಂಭವಾದಾಗ 3 – 2 ರಿಂದ ಹಿಂದಿದ್ದ ಬಿಲ್ಲಿ ಜೀನ್‌ಳ ಸರ್ವ್ ಬ್ರೇಕ್ ಮಾಡಿದ್ದ ರಿಗ್ಸ್.ನೋಡುಗರಿಗೆ ಆ ಕ್ಷಣಕ್ಕೆ ಇದು ಸಹ ಮೊದಲ ಪಂದ್ಯದ ಕತೆಯೇ ಬಿಡಿ ಎಂದೆನ್ನಿಸಿರಲಿಕ್ಕೂ ಸಾಕು.ಆದರೆ ಬಿಲ್ಲಿ ಜೀನ್‌ಳಿಗೆ ಹಾಗನ್ನಿಸಿರಲಿಲ್ಲ.ಅವಳಿಗೆ ತನ್ನ ಶಕ್ತಿಯ ಮೇಲೆ ನಂಬಿಕೆಯಿತ್ತು.ಗಟ್ಟಿಯಾದ ಆತ್ಮವಿಶ್ವಾಸವಿತ್ತು.ರಿಗ್ಸ್‌ನ ಅಹಮಿಕೆ ಮುರಿಯಬೇಕೆನ್ನುವ ಹಠವಿತ್ತು.ಬಹುಶಃ ಆ ಹಠದಿಂದಲೇ ಎನ್ನುವಂತೆ ಆಕೆ ಪಂದ್ಯದ ಮೊದಲ ಸೆಟ್ 6 – 4 ರಿಂದ ಜಯಿಸಿದ್ದಳು.ಹಾಗೆ ಪಂದ್ಯದ ಮೊದಲ ಸೆಟ್ ಗೆದ್ದವಳಿಗೆ ಆತ್ಮವಿಶ್ವಾಸ ಮತ್ತಷ್ಟು ಗಟ್ಟಿಯಾಗಿತ್ತೇನೋ.ತನ್ನ ಆಟದ ಲಯಕ್ಕೆ ಮರಳಿದ್ದಳು ಬಿಲ್ಲಿ ಜೀನ್.ಮುಂದಿನದ್ದು ಇತಿಹಾಸ.ಪಂದ್ಯವನ್ನು ಆಕೆ ನೇರ ಸೆಟ್‌ಗಳಲ್ಲಿ 6–4, 6–3, 6–3ರಿಂದ ಪಂದ್ಯವನ್ನು ಜಯಿಸಿದ್ದಳು.ಮೊದಲ ಬಾರಿಗೆ ಟೆನ್ನಿಸ್ ಪಂದ್ಯವೊಂದರಲ್ಲಿ ಪುರುಷ ಸ್ಪರ್ಧಿಯನ್ನು ಸೋಲಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಆಕೆಯ ಮುಡಿಗೇರಿತ್ತು.
ಆಕೆಯ ವಿಜಯವನ್ನು ವಿಶ್ವದಾದ್ಯಂತ ಸರಿಸಮಾರು ಒಂಬತ್ತು ಕೊಟಿ ಜನ ಕಣ್ತುಂಬಿಕೊಂಡಿದ್ದರು. ಮೈದಾನದಲ್ಲಿಯೇ ಸುಮಾರು ಮೂವತ್ತು ಸಾವಿರ ಜನ ಪಂದ್ಯ ವೀಕ್ಷಿಸಿದ್ದರು.
ವಿಚಿತ್ರವೆಂದರೆ ಈ ಪಂದ್ಯದ ಆಕೆಯ ವಿಜಯ ರಿಗ್ಸ್‌ಗಿಂತ ಹೆಚ್ಚಾಗಿ ನಿರೂಪಕ ಕ್ರಾಮರ್‌ನ ಅಹಮಿಕೆಗೆ ಪೆಟ್ಟುಕೊಟ್ಟಿತ್ತು.ವಯಸ್ಸಿನ ಅಂತರವೆನ್ನುವುದು ಲೆಕ್ಕಕ್ಕಿಲ್ಲ ಎಂಬಂತೆ ಮಾತನಾಡಿದ್ದ ರಿಗ್ಸ್ ಸೋತಾಕ್ಷಣ ಅವನ ವಕೀಲನಂತೆ ಮಾತನಾಡಿದ ಕ್ರಾಮರ್,’ಇದು ಬಿಲ್ಲಿ ಜೀನ್‌ಳ ಸಂಪೂರ್ಣ ಜಯವೆಂದು ನನಗನ್ನಿಸದು.ಆಕೆಗೂ ಅವನಿಗೂ ಸಾಕಷ್ಟು ವಯಸ್ಸಿನ ಅಂತರವಿದೆ.ಇದನ್ನು battle of sexes ಎನ್ನುವುದಕ್ಕಿಂತ battle of ages ಎನ್ನಬಹುದಷ್ಟೇ’ ಎಂದು ಉಡಾಫೆಯ ಮಾತಾಡಿದ್ದ.ಅವನ ಬಗ್ಗೆ ಮಾತನಾಡಿದ್ದ ಬಿಲ್ಲಿ ಜೀನ್,’ಅವನಿಗೆ ಈ ಪಂದ್ಯವೇ ಅರ್ಥಹೀನವೆನ್ನಿಸಿತ್ತು.ಹಾಗಾಗಿ ಅವನ ಅಭಿಪ್ರಾಯವೇ ಅರ್ಥಹೀನ’ ಎಂದು ತಿರುಗೇಟು ಕೊಟ್ಟಿದ್ದಳು.
‘ನಾನು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು.ನನಗೆ ಮಾತ್ರವಲ್ಲದೇ ಮಹಿಳಾ ಟೆನ್ನಿಸ್‌ಗೂ ಈ ಪಂದ್ಯದ ಗೆಲುವಿನ ಅಗತ್ಯವಿತ್ತು.ನಾನು ಸೋತಿದ್ದರೆ ಮಹಿಳಾ ಟೆನ್ನಿಸ್‌ನೆಡೆಗೆ ನೋಡುಗರ ಭಾವವೇ ಬದಲಾಗುತ್ತಿತ್ತು.ಬಹುಶಃ ಮಹಿಳಾ ಟೆನ್ನಿಸ್ ಎನ್ನುವುದು ಐವತ್ತು ವರ್ಷ ಹಿಂದಕ್ಕೆ ಹೋಗಿರುತ್ತಿತ್ತು’ ಎಂದಿದ್ದ ಬಿಲ್ಲಿ ಜೀನ್‌ಳ ಮಾತುಗಳಲ್ಲಿ ಸತ್ಯವಿತ್ತು.ಆಕೆಯ ಗೆಲುವು ಅದೆಷ್ಟೋ ಹೆಣ್ಣುಮಕ್ಕಳಿಗೆ ಟೆನ್ನಿಸನತ್ತ ಆಸಕ್ತಿ ಮೂಡಿಸಿತ್ತು.ಒಂದರ್ಥದಲ್ಲಿ ಮಹಿಳಾ ಟೆನ್ನಿಸ್ ಕುರಿತು   ಟೆನ್ನಿಸ್ ಲೋಕದ ಆಲೊಚನಾ ಲಹರಿಯೂ ಇತ್ಯಾತ್ಮಕವಾಗಿ ಬದಲಾಗಿತ್ತು ಎಂದರೆ ತಪ್ಪಾಗಲಾರದು.ಮುಂದೆ ಬಹುಕಾಲ ಟೆನ್ನಿಸ್ ಲೋಕವನ್ನು ಆಳಿದ್ದಳು ಬಿಲ್ಲಿ ಜೀನ್ ಕಿಂಗ್.ನಿವೃತ್ತಿಯ ಹೊತ್ತಿಗೆ ಹನ್ನೆರಡು ಸಿಂಗಲ್ಸ್ ,ಹದಿನಾರು ಡಬಲ್ಸ್ ಮತ್ತು ಹನ್ನೊಂದು ಮಿಕ್ಸಡ್ ಡಬಲ್ಸ್ ಗೆದ್ದಿದ್ದ ಆಕೆ ಇಂದಿಗೂ ಟೆನ್ನಿಸ್ ಲೋಕದ ದಂತ ಕತೆಗಳ ಪೈಕಿ ಒಬ್ಬಾಕೆ.
ಇತ್ತೀಚೆಗೆ ಬಿಡುಗಡೆಯಾದ ‘ಯುವರತ್ನ ‘ಸಿನಿಮಾದಲ್ಲಿ  ಪುರುಷ ಕ್ರಿಕೆಟ್ ತಂಡದೆದುರು ಮಹಿಳಾ ಕ್ರಿಕೆಟ್ ತಂಡವನ್ನು ತಂದು ನಿಲ್ಲಿಸುವ ದೃಶ್ಯವೊಂದನ್ನು ನೋಡಿದಾಗ ನನಗೆ ಈ ಕತೆ ನೆನಪಾಯಿತು.
Categories
ಕ್ರಿಕೆಟ್ ಟೆನಿಸ್

ಉದ್ಯಾವರ-“ಸಮಾಗಮ ಟ್ರೋಫಿ-2021” 90 ರ ದಶಕದಲ್ಲಿ ಗತವೈಭವ ಮೆರೆದ ತಂಡಗಳ ಕ್ರಿಕೆಟ್ ಪಂದ್ಯಾಕೂಟ.

90 ರ ದಶಕದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಾವರ ಪರಿಸರದ ಹಿರಿಯ ಆಟಗಾರರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ,ಉದ್ಯಾವರದ ಕ್ರೀಡಾ ಪ್ರೋತ್ಸಾಹಕರು,ಕುತ್ಪಾಡಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಶ್ರೀ.ವಸಂತ್ ಕುತ್ಪಾಡಿ ಇವರ ಸಾರಥ್ಯದಲ್ಲಿ,90 ರ ದಶಕದಲ್ಲಿ ಗತವೈಭವ ಮೆರೆದ ಉದ್ಯಾವರ ಪರಿಸರದ ಆಹ್ವಾನಿತ 9 ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಕೂಟ “ಸಮಾಗಮ ಟ್ರೋಫಿ-2021” ಆಯೋಜಿಸಲಾಗಿದೆ
ಮಾರ್ಚ್ 7 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಪ‌ಂದ್ಯಾಟ ನಡೆಯಲಿದ್ದು,ತನ್ನ ತಂಡದ ಪರವಾಗಿ ಸೇವೆ ಸಲ್ಲಿಸಿದ ಆಟಗಾರರಿಗೆ,35 ವರ್ಷ ಮತ್ತು ಮೇಲ್ಪಟ್ಟವರಿಗೆ ಹಾಗೂ ವಿಶೇಷವಾಗಿ 30 ರಿಂದ 35 ವರ್ಷದ ಗರಿಷ್ಠ 3 ಆಟಗಾರರಿಗೆ ತಂಡದಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ.ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶಾತಿ ಹಾಗೂ ವಿಜಯೀ ತಂಡಗಳಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಭಾಗವಹಿಸುವ 9 ತಂಡಗಳ ವಿವರ ಈ ಕೆಳಗಿನಂತಿದೆ.
1) ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ-ಪ್ರವೀಣ್ ಪಿತ್ರೋಡಿ ಸಾರಥ್ಯದಲ್ಲಿ
2)ಸಭಾ ಕ್ರಿಕೆಟರ್ಸ್-ರಿಯಾಜ್ ಪಳ್ಳಿ ಸಾರಥ್ಯದಲ್ಲಿ
3)ಜನಪ್ರಿಯ ಕ್ರಿಕೆಟರ್ಸ್-ರಾಘು ಉದ್ಯಾವರ ಸಾರಥ್ಯದಲ್ಲಿ
4)ಸಂಪಿಗೆ ನಗರ ಫ್ರೆಂಡ್ಸ್-ಪ್ರಶಾಂತ್ ಸಾರಥ್ಯದಲ್ಲಿ
5)11 ಸ್ಟಾರ್-ವಿನೋದ್ ಪಿತ್ರೋಡಿ ಸಾರಥ್ಯದಲ್ಲಿ
6)ಆಜಾದ್ ಕ್ರಿಕೆಟರ್ಸ್-ಆಬಿದ್ ಸಾರಥ್ಯದಲ್ಲಿ
7)ಕರಾವಳಿ ಕ್ರಿಕೆಟರ್ಸ್-ಲೋಹಿತ್ ಕುಮಾರ್ ಪಿತ್ರೋಡಿ ಸಾರಥ್ಯದಲ್ಲಿ
8)ಬೊಳ್ಜೆ ಫ್ರೆಂಡ್ಸ್-ರಾಜಾ ಬೊಳ್ಜೆ ಸಾರಥ್ಯದಲ್ಲಿ
9)ಕುತ್ಪಾಡಿ ಫ್ರೆಂಡ್ಸ್-ಆಯೂಬ್ ಸಾಹೇಬ್ ಸಾರಥ್ಯದಲ್ಲಿ.
ಹೆಚ್ಚಿನ ವಿವರಗಳಿಗಾಗಿ 9886619217,9964380701,9743577986 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.
Categories
ಟೆನಿಸ್

ಕಡೆಯವರೆಗೂ ಆತ್ಮವಿಶ್ವಾಸವಿರಬೇಕು ಅವನ ಮೇಲೆ ಅವನಿಗಿದ್ದಂತೆ…..

ಈ ವರ್ಷದ ಫ್ರೆಂಚ್ ಓಪನ್ ಪಂದ್ಯಾವಳಿ ಆರಂಭವಾಗುವ ಮುನ್ನ, ನಡಾಲ್‌ನ  ಓಟವನ್ನು ಜೋಕೊವಿಚ್ ನಿಲ್ಲಿಸಲಿದ್ದಾನೆ ಎನ್ನುವುದು ಟೆನ್ನಿಸ್ ಪಂಡಿತರ ಲೆಕ್ಕಾಚಾರವಾಗಿತ್ತು.
ವರ್ಷದುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಜೋಕೊವಿಚ್‌ ಮತ್ತು  ರೋಮ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯಗಳಲ್ಲಿಯೇ ಹೊರಬಿದ್ದಿದ್ದ ನಡಾಲ್‌ ನಡುವಣದ ಜಿದ್ದಾಜಿದ್ದಿಯಲ್ಲಿ ಈ ಬಾರಿ ಜೋಕೊವಿಚ್‌ನದ್ದೇ ಮೇಲುಗೈ ಎಂದು ಎಲ್ಲರೂ ಭಾವಿಸಿದ್ದರು.ಆಡಿದ್ದ  ಇಪ್ಪತ್ತೊಂಬತ್ತು ಪಂದ್ಯಗಳ ಪೈಕಿ ಕೇವಲ ಒಂದೇ  ಪಂದ್ಯಗಳನ್ನು ಸೋತಿದ್ದ ಜೋಕೊ.ಸೋತ ಪಂದ್ಯವೂ ಸಹ ಸೋಲಿನಂತಿರದೇ ಟೆನ್ನಿಸ್ ನಿಯಮಾವಳಿಗಳಿ ಉಲ್ಲಂಘನೆಗೆ ಶಿಕ್ಷೆಯೆನ್ನುವಂತಿದ್ದಿದ್ದರಿಂದ ಅದು ಕೇವಲ ಲೆಕ್ಕಾಚಾರದ ಸೋಲಾಗಿತ್ತಷ್ಟೇ
.ಹಾಗಾಗಿ ಆತ ಅಲ್ಲಿಯವರೆಗೆ ಅಜೇಯನೇ ಎನ್ನಬಹುದು.ಸಹಜವಾಗಿಯೇ ಆಗ ಆಡಿದ ಹತ್ತೊಂಬತ್ತು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳನ್ನು ಸೋತಿದ್ದ ನಡಾಲ್‌ಗಿಂತ ಸಾಕಷ್ಟು ಬಲಶಾಲಿಯಾಗಿ ಗೋಚರಿಸುತ್ತಿದ್ದ.ಅದೇ ಕಾರಣಕ್ಕೆ ಟೆನ್ನಿಸ್ ಲೋಕದ ಪಂಡಿತರ ಕಣ್ಣುಗಳು ಫ್ರೆಂಚ್ ಓಪನ್ ಫೈನಲ್ಲಿನ ಮೇಲೆ ನೆಟ್ಟಿದ್ದವು.ಹನ್ನೆರಡು ಬಾರಿ ಪಂದ್ಯಾವಳಿಯನ್ನು ಗೆದ್ದು ದಾಖಲೆ ನಿರ್ಮಿಸಿದ ನಡಾಲ್‌‌ನ ಮೇಲೆ ಸ್ಥಿರತೆಯ ನಿರೀಕ್ಷೆಯ ಒತ್ತಡವಿತ್ತು.ಫ್ರೆಂಚ್ ಓಪನ್ ಅಂಕಣ ಅವನದ್ದೇ ಎನ್ನುವಷ್ಟು ಆಪ್ತವಾಗಿದ್ದರೂ ಅವನ ತಂಡಕ್ಕೆ ದುಗುಡ.ಜೋಕೊವಿಚ್‌ನೆದುರು ಅದೇಕೋ ಪ್ರತಿಬಾರಿಯೂ ತಿಣುಕಾಡುವ ನಡಾಲ್‌ ಬಗ್ಗೆ ಅವರಿಗೇನೋ ಸಣ್ಣ ಆತಂಕದ ಲೆಕ್ಕಾಚಾರವಿದ್ದಿರಲಿಕ್ಕೂ ಸಾಕು.ಹಾಗಿರುವಾಗಲೇ ಫೈನಲ್ಲಿನಲ್ಲಿ ಮತ್ತೆ ಜೋಕೊವಿಚ್‌ನನ್ನು ಎದುರಿಸಬೇಕಾದ ಅನಿವಾರ್ಯತೆ ನಡಾಲ್‌ನದ್ದು,ತನ್ನ ಪಾಡಿಗೆ ತಾನೆಂಬಂತೆ ಆತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಫೈನಲ್ ಪಂದ್ಯದ ಅಂತಿಮ ಹದಿನೈದು ನಿಮಿಷಗಳಿರುವಾಗ ಆಯೋಜಕರು ಕೊಟ್ಟ ಸುದ್ದಿಗೆ ಅಳುಕಿಬಿಟ್ಟಿದ್ದರು ನಡಾಲ್‌ನ ತಂಡದವರು.
’ವಾತಾವರಣ ಸಮಸ್ಯೆ ಇರುವುದರಿಂದ ಈ ಬಾರಿಯ ಅಂತಿಮ ಪಂದ್ಯದ ಮೇಲ್ಚಾವಣಿಯನ್ನು ಮುಚ್ಚಲಾಗುತ್ತದೆ.ಇದು ಮೊದಲ ಒಳಾಂಗಣ ಫೈನಲ್ ಪಂದ್ಯವಾಗಲಿದೆ..’
ಅದಾಗಲೇ ಕೊಂಚ ಅಳುಕಿನಲ್ಲಿದ್ದ ನಡಾಲ್‌ ತಂಡಕ್ಕೆ ಇನ್ನಷ್ಟು ಆತಂಕ ಶುರುವಾಗಿತ್ತು.ಒಳಾಂಗಣ ಪಂದ್ಯಗಳ ಜಟಾಪಟಿಯಲ್ಲಿ ಜೊಕೊವಿಚ್‌ನದ್ದು ನಡಾಲ್‍ನ ಮೇಲೆ ಅಂಕಿಅಂಶಗಳ ಮೇಲುಗೈ.ಒಟ್ಟಾರೆಯಾಗಿ ಆ ಹೊತ್ತಿಗೆ ಮಾನಸಿಕವಾಗಿ ನಡಾಲ್‌ಗಿಂತ ಜೋಕೊವಿಚ್ ಗೆಲುವಿನ ಸಾಧ್ಯತೆಗಳು ಹೆಚ್ಚು ಎನ್ನುವ ಭಾವ ನಡಾಲ್ ನಿರ್ವಹಣಾ ತಂಡದ ಮನಸಿನಾಳದಲ್ಲೆಲ್ಲೋ ಮೂಡಿರಲಿಕ್ಕೂ ಸಾಕು.ಇದನ್ನು   ನಡಾಲ್‌ಗೆ  ತಿಳಿಸುವುದು  ಹೇಗೆ ಎಂದು ಕೋಚ್ ಕಾರ್ಲೋಸ್ ಮೋಯಾ ಚಿಂತಾಕ್ರಾಂತರಾಗಿದ್ದರಂತೆ.ಆದರೆ ಹೆಚ್ಚು ಸಮಯವಿರಲಿಲ್ಲ.ತೀರ ಪಂದ್ಯದ ಅಂಕಣಕ್ಕೆ ಪ್ರವೇಶಿಸುವ ಹೊತ್ತಿಗೆ ತಿಳಿಸುವುದು ತಪ್ಪಾದೀತು ಎಂದುಕೊಂಡ ಮೋಯಾ,ತಕ್ಷಣವೇ ನಡಾಲ್‌ನಿಗೆ ವಿಷಯ ಅರುಹಿದರಂತೆ.ವಿಷಯ ಕಿವಿಗೆ ಬಿದ್ದ ಕ್ಷಣಕ್ಕೆ ನಡಾಲ್ ಒಮ್ಮೆ ಹುಬ್ಬು ಮೇಲೇರಿಸಿದನಂತೆ.ನಡಾಲ್ ಅಂತಿಮ ಹಂತದ ಒತ್ತಡಕ್ಕೆ ಎನ್ನುವುದು ಮೋಯಾರ ಆ ಹೊತ್ತಿಗೆ ಅರ್ಥೈಸುವಿಕೆ.ಆದರೆ ನಡಾಲ್  ಹೇಳಿದ್ದು ಒಂದೇ ಮಾತು..
’I dont care,It doesnt change anything,I AM GOING TO WIN THIS MATCH…’
ಮುಂದಿನದ್ದು ಇತಿಹಾಸ.ಪಂದ್ಯವನ್ನು 6 – 0,6-2,7-5 ರ ನೇರ ಸೆಟ್‌ಗಳಲ್ಲಿ ಗೆದ್ದಿದ್ದ ಆವೇಮಣ್ಣಿನಂಕಣದ ರಾಜ.  ಬಹುಶ: ಜೊಕೊವಿಚ್ ನಂತಹ ಮಹಾನ್ ಆಟಗಾರ ತನ್ನ ವೃತ್ತಿ ಬದುಕಿನಲ್ಲಿ ಕಂಡ ಅತ್ಯಂತ ಕಳಪೆ ಸೋಲುಗಳಲ್ಲಿ ಒಂದು 2020ರ ಫ್ರೆಂಚ್ ಓಪನ್ನಿನ ಅಂತಿಮ ಪಂದ್ಯ.ಅವನಿಗೆ ಆ ವರ್ಷದ ಮೊದಲ ಅಧಿಕೃತ ಸೋಲು ಸಹ ಅದೇ .’ಪಂದ್ಯಾವಳಿಯ ಆರಂಭಕ್ಕೂ ಮುನ್ನ,ಈ ಬಾರಿಯ ಫ್ರೆಂಚ್ ಓಪನ್ ಪಂದ್ಯಾವಳಿಯ ಪರಿಸ್ಥಿತಿಗಳು ನನಗೆ ವರವಾಗಲಿದೆ ಎಂದುಕೊಂಡಿದ್ದೆ.ಸೇಮಿಫೈನಲ್ಲಿನವರೆಗೂ ಚಂದವೇ ಆಡಿದ್ದೆ.
ಆದರೆ ಅಂತಿಮ ಪಂದ್ಯವೇ ಬೇರೆ.ಆತ ಇಂದಿನ ಪಂದ್ಯದ ಎಲ್ಲ ವಿಭಾಗಗಳಲ್ಲಿಯೂ ನನ್ನ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿಬಿಟ್ಟ.ಹದಿಮೂರು ಬಾರಿ ಫ್ರೆಂಚ್ ಓಪನ್ ಗೆಲ್ಲುವುದು ಅತಿಮಾನುಷ ಸಾಧನೆ.ಸಾಧನೆಯ ಪರಾಕಾಷ್ಠೆ ಎನ್ನಬಹುದೇನೊ.ಹತ್ತಾರು ಗಾಯದ ಸಮಸ್ಯೆಗಳ ನಂತರವೂ ಆತ ಮತ್ತೆ ಮತ್ತೆ ಎದ್ದು ಬರುತ್ತಾನೆ.ಬಹುಶ: ನನ್ನ ಕೆಟ್ಟ ಸೋಲಿನಿಂದ ನಾನು ಕಲಿಯಬೇಕಾಗಿದ್ದು ಇದೇ’ಎಂದು ನುಡಿದ ಜೋಕೊವಿಚ್ ನಡಾಲ್‌ನನ್ನು ಪ್ರಶಂಸಿಸಿದ್ದ.
ಈ ಘಟನೆಯ ಕುರಿತು ಕೇಳಿದಾಗಲೆಲ್ಲ ಅನ್ನಿಸುವುದೊಂದೇ.ಬದುಕಲ್ಲಿ ರಾಶಿ ರಾಶಿ ಸಮಸ್ಯೆಗಳಿವೆ ನಿಜ.ಆದರೆ ಎಲ್ಲ ದುಗುಡ ದುಮ್ಮಾನಗಳ ನಡುವೆ ನಮ್ಮ ಸಹಾಯಕ್ಕೆ ನಿಲ್ಲುವುದು ನಮ್ಮ ಮನಸ್ಥಿತಿಯೇ.ಸೋಲಿನ ಭೀತಿ ಎದುರಾದಾಗ  ಅನಗತ್ಯದ  ಆತಂಕಗಳನ್ನು ಪಕ್ಕಕ್ಕಿಟ್ಟು ನಡಾಲ್‌ನಂತೆ ’I AM GOING TO WIN TODAY’ ಎನ್ನುತ ಆತ್ಮವಿಶ್ವಾಸದಿಂದ ಎದ್ದು  ಹೊರಟರೆ ಬದುಕು ಇನ್ನಷ್ಟು ಸಲೀಸಾದೀತೇನೋ ಅಲ್ಲವಾ..??
Categories
ಟೆನಿಸ್

“‘ಅಪ್ಪನ ಒತ್ತಾಯಕ್ಕೆ ಮೈದಾನಕ್ಕೆ ಇಳಿದವಳು ಜಗತ್ತು ಗೆದ್ದಳು “

ಹಾಗೆಂದವಳು ಸ್ಟೆಫಿ ಗ್ರಾಫ್‌.ಜರ್ಮನಿಯ ಟೆನ್ನಿಸ್ ಸುಂದರಿ.ಗೆದ್ದ ಟೂರ್ನಿಗಳಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದಾದರೂ ನಿಸ್ಸಂಶಯವಾಗಿ ಮಹಿಳಾ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಕ್ರೀಡಾಳು.
ಬದುಕಿನ ತುಂಬ ಚಿಕ್ಕವಯಸ್ಸಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದವಳು ಸ್ಟೆಫಿ.ಉಳಿದ ಅನೇಕ ಟೆನ್ನಿಸ್ ಕ್ರೀಡಾಪಟುಗಳಿಗೆ ಹೋಲಿಸಿದರೆ ಈಕೆಯ ಕತೆ ಕೊಂಚ ಭಿನ್ನ.ಇವತ್ತಿನ ಟೆನ್ನಿಸ್ ಲೋಕದ ದಂತೆಕತೆಗಳಾಗಿರುವ ನಡಾಲ್ ಜೋಕೊವಿಚ್‌ರಂಥವರಿಗೆ ಟೆನ್ನಿಸ್ ಎನ್ನುವ ಚೆಂಡಾಟ ಬಾಲ್ಯದ ಮೊದಲ ಆಕರ್ಷಣೆ.ಸಹಜವಾಗಿ ಟೆನ್ನಿಸ್ ಕೋರ್ಟ್‌ನ ಸೆಳೆತವುಳ್ಳವರು ಅವರೆಲ್ಲ.ಆದರೆ ಗ್ರಾಫ್ ಹಾಗಲ್ಲ.ಆಕೆಯ ಬಾಲ್ಯಕ್ಕೆ ಟೆನ್ನಿಸ್ ಮೊದಲ ಆಯ್ಕೆಯೇನೂ ಆಗಿರಲಿಲ್ಲ.ಆದರೆ ಅಪ್ಪ ಪೀಟರ್‌ನಿಗೆ ಮಗಳು ಟೆನ್ನಿಸ್ ತಾರೆಯಾಗಬೇಕೆನ್ನುವ ಕನಸು.ಹಾಗಾಗಿ ಮೂರನೇ ವಯಸ್ಸಿಗಾಗಲೇ ಆಕೆಯ ಕೈಗೆ ಟೆನ್ನಿಸ್ ರಾಕೆಟ್ ಕೊಟ್ಟುಬಿಟ್ಟಿದ್ದ ಅಪ್ಪ.ಮನೆಯ ಹಜಾರದಲ್ಲಿಯೇ ಆಟವಾಡುವ ಮಗಳಿಗೆ ಅಪ್ಪ ಹೇಳುತ್ತಿದ್ದದ್ದು ಒಂದೇ ಮಾತು .ಗೋಡೆಗೆ ಬಡಿದು ಮರುಪುಟಿಯುವ ಚೆಂಡನ್ನು ಕನಿಷ್ಟ ಇಪ್ಪತ್ತೈದು ಬಾರಿ ನೀನು ಗೋಡೆಗೆ ಹೊಡೆಯುವಂತಾದರೆ ನಿನಗೆ ಸಂಜೆಗೊಂದು ಐಸ್‌ಕ್ರೀಮ್ ಗ್ಯಾರಂಟಿ..!!
ಐಸ್ ಕ್ರೀಮ್ ಆಸೆಗೆ ಆಟ ಶುರುವಿಟ್ಟುಕೊಂಡ ಸ್ಟೇಫಿಗೆ ನಿಧಾನಕ್ಕೆ ಆಟದ ಮೇಲೆ ಆಸಕ್ತಿ ಮೂಡಲಾರಂಭಿಸಿತ್ತು.ಚಿಕ್ಕವಯಸ್ಸಿನಿಂದಲೇ ಭಯಂಕರ ಅಂಕೆಯಲ್ಲಿಟ್ಟು ಬೆಳೆಸಿದವನು ಅಪ್ಪ.ಆಕೆಯ ಟೆನ್ನಿಸ್ ವೃತ್ತಿ ಜೀವನ ಶುರುವಾಗುತ್ತಲೇ ಆಕೆಯ ಪ್ರತಿಯೊಂದರ ಮೇಲೂ ಅಪ್ಪನ ನಿಗಾ ಇತ್ತು.ಆಕೆಯ ಗೆಳೆಯರು,ಆಕೆಯ ಹಣಕಾಸಿನ ವಿಷಯ,ದಿನದ ಶೆಡೂಲ್ಯ ಎನ್ನವೂ ಅಪ್ಪನದ್ದೇ ಲೆಕ್ಕಾಚಾರ.ಕೊನೆಗೆ ಪಾರ್ಟಿಗೆಂದು ಹೊರಗೆ ಹೋಗುವುದಾದರೆ ರಾತ್ರಿ ಒಂಭತ್ತಕ್ಕೆ ಮನೆಯಲ್ಲಿರಬೇಕು ಎನ್ನುವುದು ಸಹ ಅಪ್ಪನ ನಿಯಮ..!!
ತನ್ನ ಹದಿಮೂರನೇ ವಯಸ್ಸಿಗಾಗಲೇ ವೃತ್ತಿ ಜೀವನ ಆರಂಭಿಸಿದವಳಿಗೆ ಆಟದೆಡೆಗೆ ಭಯಂಕರ ಸಮರ್ಪಣಾ ಭಾವ.ವೃತ್ತಿ ಜೀವನವಾರಂಭಿಸಿದ ಒಂದೆರಡು ವರ್ಷಗಳ ಕಾಲದಲ್ಲಿಯೇ ಆಕೆಯ ಆಟದ ಶೈಲಿಯನ್ನು ಗಮನಿಸಲಾರಂಭಿಸಿದ್ದರು ಟೆನ್ನಿಸ್ ಪಂಡಿತರು.1985 – 86ರ ಹೊತ್ತಿಗಾಗಲೇ ಗ್ರಾಂಡ್‌ಸ್ಲಾಮ್ ಟೂರ್ನಿಗಳ ಸೆಮಿಫೈನಲ್‌ ಹಂತಕ್ಕೆ ತಲುಪಿಕೊಳ್ಳುತ್ತಿದ್ದ ಗ್ರಾಫ್‌ನ ಸಾಮರ್ಥ್ಯ ನಿಧಾನಕ್ಕೆ ಅಭಿಮಾನಿಗಳಿಗೂ ಅರಿವಾಗಲಾರಂಭಿಸಿತ್ತು.
ಆದರೆ ಅದು ನವ್ರಾಟಿಲೋವಾ ಮತ್ತು ಕ್ರಿಸ್ ಎವರ್ಟ್‌ರಂಥಹ ಘಟಾನುಘಟಿಗಳಿದ್ದ ಕಾಲ.ಅವರನ್ನು ಎದುರಿಸುವಲ್ಲಿ ಆಕೆಗೆ ಆರಂಭಿಕ ಅನುಭವದ ಕೊರತೆ.ಹಾಗಾಗಿಯೇ ಏನೋ,85-86ರ ಕಾಲಕ್ಕೆ ಒಂಬತ್ತು ಪಂದ್ಯಗಳನ್ನು ಈ ಟೆನ್ನಿಸ್‌ದ್ವಯರೆದುರು ಸೋತುಬಿಟ್ಟಳು ಸ್ಟೆಫಿ.ಅಷ್ಟಾಗಿಯೂ ಆಕೆ ನಿರಾಶಳಾಗಿರಲಿಲ್ಲ.ಪ್ರತಿಬಾರಿಯ ಸೋಲು ಹೊಸದೇನೊ ಕಲಿಸುತ್ತದೆ ಎನ್ನು ಮನೋಭಾವ ಆಕೆಗೆ.ಸಣ್ಣದ್ದೊಂದು ತಿರುವಿಗಾಗಿ ಕಾಯುತ್ತಿದ್ದಳಾಕೆ.ಹಾಗೆ ಆಕೆ ಕಾಯುತ್ತಿದ್ದ ತಿರುವು ಆಕೆಗೆ 1987ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸಿಕ್ಕುಬಿಟ್ಟಿತ್ತು.ತೀವ್ರ ಸೆಣಸಾಟದ ಫೈನಲ್ ಪಂದ್ಯದಲ್ಲಿ ಆವತ್ತಿನ ಅಗ್ರಶ್ರೇಯಾಂಕಿತ ಆಟಗಾರ್ತಿ ನವ್ರಾಟಿಲೋವಾಳನ್ನು ಬಗ್ಗು ಬಡಿದಿದ್ದಳು ಗ್ರಾಫ್.ಆವತ್ತಿಗೆ ಮೊದಲ ಬಾರಿ ತಾನು ಅಗ್ರಶ್ರೇಯಾಂಕಿತ ಆಟಗಾರ್ತಿಯರನ್ನು ಸೋಲಿಸಬಲ್ಲೆನೆನ್ನುವ ವಿಶ್ವಾಸ ಆಕೆಯಲ್ಲಿ ಮೂಡಿತ್ತು.ಮಾನಸಿಕ ಅಡ್ಡಿಯೊಂದು ತೊಲಗಿತ್ತು.ಮುಂದಿನದು ಈಗ ಇತಿಹಾಸ.
80ರ ದಶಕದ ನಡುವಿನ ಕಾಲದಿಂದ ಹಿಡಿದು 90ರ ಉತ್ತರಾರ್ಧದ ಟೆನ್ನಿಸ್ ಜಗವನ್ನು ಅಕ್ಷರಶಃ ಸಾಮ್ರಾಜ್ಞಿಯಂತೆ ಆಳಿಬಿಟ್ಟಳು ಸ್ಟೇಫಿ.ಒಂದಾದ ನಂತರ ಒಂದರಂತೆ ಗ್ರಾಂಡ್‌ಸ್ಲಾಮ್ ಗೆಲ್ಲುತ್ತ ಹೊರಟ ಗ್ರಾಫ್‌ಳನ್ನು ಟೆನ್ನಿಸ್ ಲೋಕದಲ್ಲಿ ತಡೆಯುವವರೇ ಇಲ್ಲದಂತಾಗಿತ್ತು.1988ರ ವರ್ಷವನ್ನಂತೂ ಆಕೆ ಆಪೋಶನ ತೆಗೆದುಕೊಂಡುಬಿಟ್ಟಳೆಂದರೆ ತಪ್ಪಾಗಲಾರದು.ವರ್ಷದ ನಾಲ್ಕೂ ಗ್ರಾಂಡ್ ಸ್ಲಾಮ್ ಗೆಲ್ಲುವ ಮೂಲಕ ಆ ಸಾಧನೆಗೈದ ಮೂರನೇ ಮಹಿಳಾ ಟೆನ್ನಿಸ್ ಪಟುವಾಗಿ ಹೊರಹೊಮ್ಮಿದಳು.ಆದರೆ ಅದು ಅಷ್ಟಕ್ಕೆ ನಿಲ್ಲಲಿಲ್ಲ.ಆ ವರ್ಷದ ಓಲಿಂಪಿಕ್ಸ್ ಚಿನ್ನದ ಪದಕವನ್ನೂ ಸಹ ಗೆಲ್ಲುವ ಮೂಲಕ ಆಕೆ ‘ಗೊಲ್ಡನ್ ಗ್ರಾಂಡ್‌ಸ್ಲಾಮ್’ಗೆದ್ದ ಏಕೈಕ ಟೆನ್ನಿಸ್ ಪಟು ಎಂದು ಇತಿಹಾಸ ಬರೆದಳು.ಆ ವರ್ಷದ ಆಕೆಯ ಪ್ರಾಬಲ್ಯ ಹೇಗಿತ್ತೆಂದರೆ ಫ್ರೆಂಚ್ ಓಪನ್ ಫೈನಲ್ ಗೆಲ್ಲಲು ಆಕೆ ತೆಗೆದುಕೊಂಡಿದ್ದ ಸಮಯ ಕೇವಲ 32 ನಿಮಿಷಗಳು.ಎದುರಾಳಿಯಾಗಿದ್ದ ನತಾಶಾ ಜ್ವರೆವಾಳನ್ನು ಆಕೆ 6 -0 6 -0 ದ ನೇರ ಸೆಟ್‌ಗಳಲ್ಲಿ ಅಕ್ಷರಶಃ ಧೂಳಿಪಟ ಮಾಡಿದ್ದಳು ಸ್ಟೆಫಿ.
ವೃತ್ತಿ ಜೀವನದಲ್ಲಿ ಒಟ್ಟೂ ಇಪ್ಪತ್ತೆರಡು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದ ಗ್ರಾಫ್ ಹಲವಾರು ದಾಖಲೆಗಳ ಒಡತಿ.ಪ್ರತಿ ಪಂದ್ಯಾವಳಿಯನ್ನೂ ನಾಲ್ಕು ಬಾರ ಗೆದ್ದಿರುವ ಏಕೈಕ ಆಟಗಾರ್ತಿ. 377ವಾರಗಳ ಕಾಲ ರ್ಯಾಂಕಿಗ್ ಪಟ್ಟಿಯಲ್ಲಿ ಅಗ್ರಶ್ರೇಯಾಂಕಿತಳಾಗಿ ಮೆರೆದ ಗ್ರಾಫ್‌ಳದ್ದು ಅತಿ ಹೆಚ್ಚು ಕಾಲ ಅಗ್ರಶ್ರೆಯಾಂಕರ ಪಟ್ಟಿಯಲ್ಲಿದ್ದ ಆಟಗಾರರ (ಪುರುಷ ಮತ್ತು ಮಹಿಳಾ ಪಟುಗಳು ಸೇರಿದಂತೆ)ಪಟ್ಟಿಯಲ್ಲಿಯೂ ಅಗ್ರಸ್ಥಾನ.
ಇಷ್ಟಾಗಿ ಎಲ್ಲವೂ ಸರಾಗಿವಾಗಿಯೇನೂ ಇರಲಿಲ್ಲ ಆಕೆಗೆ.ವೃತ್ತಿ ಬದುಕಿನಲ್ಲಿ ಐವತ್ತಕ್ಕೂ ಹೆಚ್ಚುಬಾರಿ ಗಾಯ್ ಸಮಸ್ಯೆಯನ್ನು ಕಂಡಳಾಕೆ.ತನ್ನ ವಿಶಿಷ್ಟ ಆಟದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಆಕೆಗೆ ಒಂದು ಹಂತಕ್ಕೆ ಅಭಿಮಾನಿಗಳೇ ಮುಳುವಾಗಲಾರಂಭಿಸಿದ್ದರು.ಒಮ್ಮೆ ಆಕೆ ನೆಟ್ ಪ್ರಾಕ್ಟಿಸ್ ಮಾಡುತ್ತಿದ್ದ ಸಮಯಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗದಿದ್ದರೆ ಸತ್ತೇ ಹೋಗುತ್ತೇನೆಂದು ಕೈ ಕತ್ತರಿಸಿಕೊಂಡಾಗ ತೀರ ವಿಚಲಿತಳಾಗಿದ್ದಳಾಕೆ.ಹೋದಲ್ಲಿ ಬಂದಲ್ಲಿ ಅಭಿಮಾನಿಗಳ ಕಾಟ ತೀವ್ರವಾಗಿತ್ತು ಆಕೆಗೆ.1993ರಲ್ಲಿ ಆಕೆಯ ಹುಚ್ಚು ಅಭಿಮಾನಿಯೊಬ್ಬ ಆಕೆಯ ಮೇಲಿನ ಅಭಿಮಾನಕ್ಕೆ ಮೊನಿಕಾ ಸೆಲೆಸ್‌ಳನ್ನು ಚೂರಿಯಿಂದ ಇರಿದಾಗ ಬಿಕ್ಕಿಬಿಕ್ಕಿ ಅತ್ತಿದ್ದಳಂತೆ ಸ್ಟೇಫಿ.ಅಭಿಮಾನಿಯ ವರ್ತನೆ ಆಕೆಗೆ ನೋವು ತಂದಿದ್ದರೂ ಟೆನ್ನಿಸ್ ಪ್ರಿಯರ ಸಿಟ್ಟು ವಿನಾಕಾರಣ ಸ್ಟೆಫಿಯ ಮೇಲೆ ತಿರುಗಿತ್ತು.1993ರ ವಿಂಬಲ್ಡನ್ ಪಂದ್ಯಾವಳಿಗಳಲ್ಲಿ ,’ಇದೆಲ್ಲ ನಿನ್ನಿಂದಾಗಿಯೇ ಆಗಿದ್ದು ಸ್ಟೆಫಿ’ ಎನ್ನುವ ಬೋರ್ಡುಗಳು ಆಕೆಯ ಮನೋಸ್ಥೈರ್ಯವನ್ನು ಕುಗ್ಗಿಸಿದ್ದಂತೂ ಸುಳ್ಳಲ್ಲ.ಅಷ್ಟಾಗಿ ಆಕೆ ಗಟ್ಟಿಗಿತ್ತಿ.ಜನರ ಅರ್ಥಹೀನ ವಿರೋಧದ ನಡುವೆಯೂ ವರ್ಷದ ವಿಂಬಲ್ಡನ್ ಗೆಲ್ಲುವ ಮೂಲಕ ಜನರ ಮನಸನ್ನು ಮತ್ತೆ ಗೆಲ್ಲುವಲ್ಲಿ ಸಫಲಳಾಗಿದ್ದಳು.
ಆಕೆಯ ಆಟವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.ನೋಡಿ ಗೊತ್ತಿದ್ದವರಿಗೆ ಅದರ ಭಾವವೇ ಬೇರೆ ತೆರನಾದದ್ದು.ರೋಜರ್ ಫೆಡರರ್ ಆಟವೆನ್ನುವುದು ಕ್ರೀಡಾ ಕಾವ್ಯದಂತೆನ್ನಿಸಿದರೆ ,ಸ್ಟೆಫಿಯ ಆಟವೆನ್ನುವುದು ಬ್ಯಾಲೆಯಂಥದ್ದು.ಅದೇ ಕಾರಣಕ್ಕೋ ಏನೋ
ಸಾವಿರ ಟೆನ್ನಿಸ್ ಆಟಗಾರರು ಬರಬಹುದು,ಟೆನ್ನಿಸ್ ಜಗತ್ತಿಗೆ ಮತ್ತೊಬ್ಬ ಸ್ಟೆಫಿ ಗ್ರಾಫ್ ಬರುವುದು ಸಾಧ್ಯವಿಲ್ಲ ಎನ್ನುವುದು ಅಭಿಮಾನಿಗಳ ಮಾತು.ಒಪ್ಪಬಹುದೇನೋ ಅಲ್ಲವಾ..??
Categories
ಟೆನಿಸ್

ಸುಲಭಕ್ಕೆ ಸೋಲೊಪ್ಪಿಕೊಳ್ಳದ ಉಡದ ಹಿಡಿತದ ಹಿಂದೆಯೂ ಇದೆ ಬೆವರಗಾಥೆ.

“ಮೊನಿಕಾ ಸೆಲೆಸ್ ನಂತರ ನಾನು ಕಂಡ ಅತ್ಯಧ್ಬುತ ಟೆನ್ನಿಸ್ ಪ್ರತಿಭೆಯಿದು”
ಎಂದುದ್ಗರಿಸಿದ್ದರು ಯುಗೊಸ್ಲೋವಾಕಿಯಾದ ಟೆನ್ನಿಸ್ ತರಬೇತಿಯ ದಂತಕತೆ ಯೆಲೆನಾ ಗೆನ್ಸಿಕ್ .ಮೊನಿಕಾ ಸೆಲೆಸ್,ಗೊರಾನ್ ಇವಾನೆಸವಿಚ್ ,ಇವಾ ಮಜೋಲಿಯಂಥಹ ಘಟಾನುಘಟಿಗಳನ್ನು ಅಣಿಗೊಳಿಸಿದ್ದ  ಯೆಲೆನಾ ತನ್ನೆದುರಿಗೆ ಆಟವಾಡುತ್ತಿದ್ದ ಹುಡುಗನ ಭವಿಷ್ಯವನ್ನು ತಾವೇ ಬರೆಯಲು ಸಿದ್ದರಾಗಿದ್ದರು.ವಜ್ರದ ಅಸಲಿ ಬೆಲೆ ವಜ್ರದ ವ್ಯಾಪಾರಿಗೆ ಮಾತ್ರ ಅರ್ಥವಾಗುತ್ತದೆ ಎನ್ನುವಂತೆ ಹುಡುಗನ ಪ್ರತಿಭೆಯ ತಾಕತ್ತು ಅವರಿಗೆ ಅರ್ಥವಾಗಿತ್ತು.ಆರನೇ ವಯಸ್ಸಿಗೆ ಅವರ ಕೈಗೆ ಸಿಕ್ಕು ಮುಂದೆ ಭರ್ತಿ ಆರು ವರ್ಷಗಳ ಕಾಲ ಅವರಿಂದ ಕಠಿಣ ತರಬೇತಿ ಪಡೆದು ಟೆನ್ನಿಸ್ ಅಂಕಣಕ್ಕಿಳಿಯುವ ನೋವಾಕ್ ಜೋಕೊವಿಚ್ ಎನ್ನುವ ಹುಡುಗ ಮುಂದೆ ಟೆನ್ನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ದಂತಕತೆಗಳ ಪೈಕಿ ಒಬ್ಬನಾಗುತ್ತಾನೆನ್ನುವುದು ಸ್ವತ:  ಯೆಲೆನಾ ಗೆನ್ಸಿಕ್ ರಿಗೂ ತಿಳಿದಿರಲಿಕ್ಕಿಲ್ಲವೇನೋ…
ಇಂದು ಟೆನ್ನಿಸ್ ಪಂದ್ಯಗಳಲ್ಲಿ ಸುಲಭಕ್ಕೆ ಸೋಲೊಪ್ಪಿಕೊಳ್ಳದ ಉಡದ ಹಿಡಿತದ ನೋವಾಕ್ ಜೋಕೊವಿಚ್‌ನ ಟೆನ್ನಿಸ್ ಲೋಕದ ಪಯಣದಾರಂಭವೂ ತುಂಬ ಆಸಕ್ತಿಕರ.ಆತ ಟೆನ್ನಿಸ್ ಎನ್ನುವ ಆಟದ ಬಗ್ಗೆ ಮೊದಲ ಬಾರಿಗೆ ಕೇಳಿದ್ದು ತನ್ನ ನಾಲ್ಕನೇ ವಯಸ್ಸಿನಲ್ಲಿ.ಅದರ ಬಗ್ಗೆ ಹೇಳುವ ಜೋಕೊವಿಚ್ ,’ಅದೊಮ್ಮೆ ಅಪ್ಪನ ರೆಸ್ಟೊರೆಂಟ್‌ನ ಹೊರಗೆ ಆಡುತ್ತಿದ್ದ ನಾನು ಪಕ್ಕದಲ್ಲಿಯೇ ನಡೆಯುತ್ತಿದ್ದ ಕಾಮಗಾರಿಯನ್ನು ಸುಮ್ಮನೇ  ಗಮನಿಸಿದೆ.ಒಂದಷ್ಟು ಕೆಲಸಗಾರರು ನೆಲವನ್ನು ಸಮತಟ್ಟುಗೊಳಿಸುತ್ತ ಮಣ್ಣು ಹಾಕುತ್ತಿದ್ದರೆ,ಒಂದಷ್ಟು ಜನ ಮೂಲೆಯಲ್ಲಿ ಕೂತು ಬಲೆಯೊಂದನ್ನು ಸರಿಪಡಿಸುತ್ತಿದ್ದರು.ನನಗೇನೋ ಕುತೂಹಲ.ಅವರೆಡೆಗೆ ತೆರಳಿ ,ಏನು ಮಾಡಿತ್ತಿದ್ದೀರಿ ಇಲ್ಲಿ ಎಂದು ಕೇಳಿದ್ದೆ.ಇಲ್ಲೊಂದು ಟೆನ್ನಿಸ್ ಕ್ರೀಡಾಂಗಣ ನಿರ್ಮಿಸಲಿದ್ದೇವೆ ಎಂಬ ಉತ್ತರ ಅವರದ್ದು.ಟೆನ್ನಿಸ್ ಎನ್ನುವ ಪದ ಹಾಗೆ ಮೊದಲ ಬಾರಿ ಕೇಳಿದ್ದು ನಾನು.ಫುಟ್ಬಾಲ್ ಗೊತ್ತಿತ್ತು,ಆದರೆ ಇದೇನಿದು ಟೆನ್ನಿಸ್..? ಎನ್ನಿಸಿತು.ಅಪ್ಪನ ಬಳಿ ಮಾಹಿತಿ ಪಡೆದುಕೊಂಡೆ.ಆದೇಕೋ ಅದರ ಮೂಲಭೂತ ವಿವರಗಳನ್ನು ಕೇಳಿಕೊಂಡ ನನಗೆ ಟೆನ್ನಿಸ್ ಎನ್ನುವ ನಾನು ಕಂಡುಕೇಳರಿಯದ ಆಟದ ಬಗ್ಗೆ ಪ್ರೇಮ ಹುಟ್ಟಿಕೊಂಡುಬಿಟ್ಟಿತು.ಅಲ್ಲಿಂದ ಶುರುವಾಯಿತು ನನ್ನ ಟೆನ್ನಿಸ್ ಲೋಕದ ಜರ್ನಿ’ಎಂದು ನುಡಿದು ನಸುನಗುತ್ತಾರೆ.
ಹಾಗೆಂದ ಮಾತ್ರಕ್ಕೆ ಜೋಕೊವಿಚ್‌ರ ಟೆನ್ನಿಸ್ ಲೋಕದ ವಿಜಯಯಾತ್ರೆ ತೀರ ಸುಲಭವೇನೂ ಆಗಿರಲಿಲ್ಲ.ಬೆಲ್ಗ್ರೆಡ್‌ನ ತಮ್ಮ ಮನೆಯ ಸುತ್ತಮುತ್ತ ಹೆಚ್ಚಿನ ಫುಟ್ಬಾಲ್ ಕ್ರೀಡೆಯ ಅಭಿಮಾನಿಗಳನ್ನು ಹೊಂದಿದ್ದ ಜೊಕೊವಿಚ್‌ಗೆ ಟೆನ್ನಿಸ್ ಎನ್ನುವ ಆಟಕ್ಕೊಬ್ಬ ಜೊತೆಗಾರ ಬೇಕಿತ್ತು.ತನ್ನ ಮಗನಿಗೆ   ಅಪ್ಪ ಬೆನ್ನುಬಿದ್ದು ಟೆನ್ನಿಸ್ ರ‍್ಯಾಕೆಟ್ ಮತ್ತು ಬಾಲ್ ಕೊಡಿಸಿದ್ದರಾದರೂ ಜೊತೆಗಾರನ ಕೊರತೆಯನ್ನು ಮಾತ್ರ ಅಪ್ಪನಿಂದ ನೀಗಿಸಲಾಗಿರಲಿಲ್ಲ.ಆದರೆ ತೀರ ಆ ಚಿಕ್ಕ ವಯಸ್ಸಿನಲ್ಲಿಯೇ ತಾನೊಬ್ಬ ಟೆನ್ನಿಸ್ ಆಟಗಾರನಾಗಬೇಕು ಎಂದು ನಿರ್ಧರಿಸಿಬಿಟ್ಟಿದ್ದ ಜೋಕೊಗೆ ಅದ್ಯಾವ ಲೆಕ್ಕ..? ಆತ ಪುಟ್ಟ ಕೈಗಳಿಂದ ಚೆಂಡನ್ನು ತನ್ನ ಮನೆಯ ಗೋಡೆಗೆಸೆದು ರ‍್ಯಾಕೆಟ್ಟಿನಿಂದ ಹೊಡೆಯುತ್ತ ಏಕಾಂಗಿಯಾಗಿ ಟೆನ್ನಿಸ್ ಕಲಿಯತೊಡಗಿದ.ಆಟದೆಡೆಗೆ ಆತನ ಶೃದ್ಧೆ ಎಂಥದ್ದಿತ್ತೆಂದರೆ ಒಂಟಿಯಾಗಿ ಗಂಟೆಗಟ್ಟಲೇ ಗೋಡೆಯೊಂದಿಗೆ ಟೆನ್ನಿಸ್ ಆಡುತ್ತಿದ್ದ ಜೋಕೊವಿಚ್‌ಗೆ ಸಂಜೆಯಾಗಿ ಕತ್ತಲಾದರೂ ಆಟ ಮುಗಿಸುವ ಪರಿವೆ ಇರುತ್ತಿರಲಿಲ್ಲವಂತೆ.ಅಂಥದ್ದೇ ಒಂದು ದಿನಗಳಲ್ಲಿ ಆತ ಯೆಲೆನಾರ ಕಣ್ಣಿಗೆ ಬಿದ್ದದ್ದು.
ಇಷ್ಟರ ನಂತರವೂ ಜೋಕೊವಿಚ್‌ನ ಬದುಕು ಸುಲಭದ್ದೇನೂ ಆಗಿರಲಿಲ್ಲ.ಟೆನ್ನಿಸ್ ತರಬೇತಿ ಆರಂಭವಾದ ಕೆಲವೇ ವರ್ಷಗಳಲ್ಲಿ ನ್ಯಾಟೊ ಯುದ್ದದ ದಾಳಿಗಳು ನಡೆಯಲಾಂರಭಿಸಿದವು.ಬೆಲ್ಗ್ರೆಡ್‌ನ ಮೇಲೆ ಸತತ ಬಾಂಬಿನ ದಾಳಿಗಳಾಗಲಾರಂಭಿಸಿದ್ದವು.ಊರ ತುಂಬ ಆತಂಕದ ವಾತಾವರಣ.ಆಗಸದಲ್ಲಿ ಯುದ್ಧವಿಮಾನಗಳು ಕಾಣುತ್ತಿದ್ದಂತೆ ಸೈರನ್ ಬಾರಿಸಲಾಗುತ್ತಿತ್ತು.ತಕ್ಷಣವೇ ಜನ ಮಾಡುತ್ತಿದ್ದ ಕೆಲಸಗಳನ್ನೆಲ್ಲ ಬಿಟ್ಟು ಓಡುತ್ತ  ಮನೆಯ ನೆಲಮಾಳಿಗೆಯನ್ನು ಸೇರಿಕೊಂಡುಬಿಡುತ್ತಿದ್ದರು.ಹಾಗೆ ನೆಲಮಾಳಿಗೆ ಸೇರಿಕೊಂಡ ಕೆಲವೇ ಕ್ಷಣಗಳಲ್ಲಿ ಊರ ತುಂಬ ಬಾಂಬು ಸ್ಪೋಟದ ಸದ್ದು.ಅಡಗಿ ಕೂತ ಪ್ರತಿಯೊಬ್ಬರ ಎದೆಯಲ್ಲಿಯೂ ನಡುಕ.ನೆಲಮಾಳಿಗೆ ಸೇರಿಕೊಳ್ಳುವುದು ನಿಜವೇ ಆಗಿದ್ದರೂ ಬಾಂಬು ಎಲ್ಲಿ ಬೇಕಿದ್ದರೂ ಬೀಳಬಹುದೆನ್ನುವ ಭಯವೇ ಜನರ ಮಾನಸಿಕ ಸ್ಥೈರ್ಯವನ್ನು ಅಡಗಿಸಿಬಿಡುತ್ತಿತ್ತು.ಟೆನ್ನಿಸ್ ಹಾಗಿರಲಿ ,ಬದುಕು ಕಟ್ಟಿಕೊಳ್ಳುವುದೇ ಕಷ್ಟವೆನ್ನಿಸಿದ್ದ ಸಮಯವದು.ಬದುಕು  ಜೋ ಕೊವಿಚ್‌ನೆಡೆಗೆ ಅಪಹಾಸ್ಯಗೈದಿದ್ದ ಕಾಲ..ಏಳನೇಯ ವಯಸ್ಸಿಗಾಗಲೇ ಆತ ಪೀಟ್ ಸಾಂಪ್ರಾಸ್‌ ವಿಂಬಲ್ಡನ್ ಗೆದ್ದಿದ್ದನ್ನು ಟಿವಿಯಲ್ಲಿ ಕಂಡಿದ್ದ.ಚಿನ್ನದ ವರ್ಣದ ಮಿರಿಮಿರಿ ಮಿಂಚುವ ವಿಂಬಲ್ಡನ್ ಟ್ರೋಫಿಯನ್ನು ಪೀಟ್‌ನ ಕೈಯಲ್ಲಿ ಕಂಡಾಗ ಆತ ಮತ್ತೊಮ್ಮೆ ತೀರ್ಮಾನಿಸಿದ್ದ.ನಾನೂ ಸಹ ಆ ಪ್ರಶಸ್ತಿಯನ್ನು ಗೆಲ್ಲಬೇಕು,ತಾನೂ ಸಹ ಜಗತ್ತಿನ ನಂಬರ್ ಒನ್ ಆಟಗಾರನಾಗಬೇಕು .ಹಾಗಂದುಕೊಂಡವನು ತನ್ನ ಬಳಿ ಲಭ್ಯವಿದ್ದ ಸಾಮಗ್ರಿಗಳಿಂದ, ಚಿನ್ನದ ವರ್ಣದ ಬಣ್ಣದಿಂದ ನಕಲಿ ವಿಂಬಲ್ಡನ್ ಟ್ರೋಫಿಯೊಂದನ್ನು ತಯಾರಿಸಿದ್ದ.ತನ್ನ ಗೆಳೆಯರಿಗೆ ಅದನ್ನು ತೋರಿಸಿ ’ಒಂದಲ್ಲ ಒಂದು ದಿನ ತಾನೂ ಸಹ ಜಗತ್ತಿನ ನಂಬರ್ ಒನ್ ಆಟಗಾರನಾಗಲಿದ್ದೇನೆ.ಕನಿಷ್ಟ ಒಂದಾದರೂ ವಿಂಬಲ್ಡನ್ ಗೆಲ್ಲಲಿದ್ದೇನೆ’ಎಂದಿದ್ದ.ಆವತ್ತೂ ಸಹ ಆತನಿಗೆ ಗೆಳೆಯರಿಂದ ಎದುರಾಗಿದ್ದು ಮತ್ತದೇ ಅಪಹಾಸ್ಯ.
ಆದರೆ ಜೋಕೊವಿಚ್ ಎನ್ನುವ ಗಟ್ಟಿಮನಸಿನ ಹುಡುಗನಿಗೆ ಸ್ಪಷ್ಟವಾಗಿ ಗೊತ್ತಿತ್ತು.  ತನ್ನ ಬದುಕಿನ ಗುರಿ ಪರ್ವತದಷ್ಟು ದೊಡ್ಡದು.ಅದನ್ನು ಸಾಧಿಸುವ ದಾರಿಯಲ್ಲಿ ಸಾಕಷ್ಟು ವ್ಯಂಗ್ಯ ,ಹಿಯ್ಯಾಳಿಕೆಗಳು ತನಗೆ ಎದುರಾಗಲಿವೆ. ಗೆಲ್ಲಬೇಕು ಎಂದಾದರೆ ತನ್ನೆಡೆಗಿನ ಅಪಹಾಸ್ಯದೆಡೆಗೆ ತಾನೊಂದು ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಳ್ಳಬೇಕು. ಅಪಹಾಸ್ಯಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ.ಇಲ್ಲಿ ಗೆಲ್ಲುವುದೇನಿದ್ದರೂ ಅಪಹಾಸ್ಯಗಳೆಡೆಗಿನ ನಿರ್ಲಕ್ಷ್ಯ ಮತ್ತು ಮನೋಬಲವೇ ಎಂದುಕೊಂಡವನು ಬೆಲ್ಗ್ರೆಡ್‍ನ ಯುದ್ಧದ ವಾತಾವರಣ ತಿಳಿಯಾಗುತ್ತಲೇ ಮತ್ತೆ ಅಖಾಡಾಕ್ಕಿಳಿದಿದ್ದ.ಅಪ್ಪನ ಬಡತನ,ಪಂದ್ಯಾವಳಿಗಳಿಗೆ ಕಟ್ಟಬೇಕಿರುವ ಫೀಸ್‌ಗಾಗಿ ಪರದಾಟದಂಥಹ ಪರಿಸ್ಥಿತಿಯಲ್ಲಿಯೂ ಆತ ಕಷ್ಟಪಟ್ಟು ತನ್ನ ಹದಿನಾಲ್ಕನೇಯ ವಯಸ್ಸಿಗೆ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ.
ಆಡಿದ ಮೊದಲ ಯುರೋಪಿಯನ್ ಪಂದ್ಯಾವಳಿಯಲ್ಲಿಯೇ ಭರ್ಜರಿ ಯಶಸ್ಸು ಆತನದ್ದು. 2001ರ ಯುರೋಪಿಯನ್ ಚಾಂಪಿಯನ್‌ನ ಸಿಂಗಲ್ಸ್ ,ಡಬಲ್ಸ್ ಮತ್ತು ತಂಡದ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಆತ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದ.ಮುಂದೆ 2004ರಲ್ಲಿ ವಿಂಬಲ್ಡನ್‌ಗೆ ಅರ್ಹತೆ ಪಡೆದರೂ ಅನುಭವದ ಕೊರತೆ ಮೂರನೇ ಸುತ್ತಿನಲ್ಲಿ ಆತನನ್ನು ಟೂರ್ನಿಯಿಂದ ಹೊರಗೆ ಬೀಳುವಂತೆ ಮಾಡಿತು.ಆದರೆ ಅಷ್ಟರಮಟ್ಟಿಗಿನ ಆತನ ಸಾಧನೆ ಆತನನ್ನು ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ನೂರರ ಸ್ಥಾನದೊಳಕ್ಕೆ ಸೇರಿಸಿತ್ತು.ಮುಂದೆ 2007ರಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನ ಸೆಮಿಫೈನಲ್ ಆಡಿದ್ದ ಜೊಕೊವಿಚ್‌ನ ಪ್ರತಿಭೆ ನಿಧಾನಕ್ಕೆ ವಿಶ್ವ  ಟೆನ್ನಿಸ್ ಪ್ರಿಯರ ಗಮನಕ್ಕೆ ಬರಲಾರಂಭಿಸಿತ್ತು.ಅದೇ ವರ್ಷ ಮಾಂಟ್ರಿಯಲ್‍ನ ಪಂದ್ಯಾವಳಿಯಲ್ಲಿ ನಡಾಲ್,ಫೆಡರರ್ ಮತ್ತು ಆಂಡಿ ರಾಡಿಕ್‌ರಂತಹ ಘಟಾನುಘಟಿಗಳನ್ನ್ನು ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಜಯಿಸಿ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಜೊಕೊವಿಚ್ ಟೆನ್ನಿಸ್ ಜಗತ್ತಿಗೆ ತನ್ನ ಆಗಮನ ಸುದ್ದಿಯನ್ನು ಗಟ್ಟಿಯಾಗಿ ಹೇಳಿದ್ದ.
ನಿಮಗೆ ಗೊತ್ತಿರಲಿ.ಆತ ತನ್ನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯನ್ನು ಗೆದ್ದಿದ್ದು 2008ರಲ್ಲಿ.ಅದು ಫೆಡಾಲ್ ಜೋಡಿಯ ಪರ್ವಕಾಲ.ಜಂಟಿಯಾಗಿ ಅವರಿಬ್ಬರೇ ಅಷ್ಟರಲ್ಲಾಗಲೇ ಹದಿನೈದು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಕೊಂಡಾಗಿತ್ತು. ಪ್ರಶಸ್ತಿ ಗೆಲ್ಲುವುದು ಹಾಗಿರಲಿ,ಆವತ್ತಿಗೆ ಅವರಿಬ್ಬರಲ್ಲಿ ಒಬ್ಬರನ್ನು ದಾಟಿಕೊಂಡು ಪಂದ್ಯಾವಳಿಯೊಂದರ ಫೈನಲ್  ತಲುಪಿಕೊಳ್ಳುವುದೇ ಹರಸಾಹಸವಾಗಿತ್ತು.ಯಾವುದೇ ಪಂದ್ಯಾವಳಿಯಾದರೂ ಇವರಲ್ಲೊಬ್ಬ ಗೆಲ್ಲಬೇಕು ಎನ್ನುವುದು ಆವತ್ತಿನ ಟೆನ್ನಿಸ್ ಅಭಿಮಾನಿಗಳ,ಪಂಡಿತರ ತರ್ಕ.
ಊಹುಂ,ಹಾಗಾಗದು.ಹಾಗಾಗುವುದಕ್ಕೆ ತಾನು ಬಿಡಲಾರೆ ಎಂದು ನಿರ್ಧರಿಸಿದ್ದವನು ಜೋಕೊವಿಚ್.ಹಾಗೆ ನಿರ್ಧರಿಸಿದವನು ಅದನ್ನು ಸಾಧಿಸಿಯೂ ಬಿಟ್ಟ.’ಫೆಡಾಲ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅವರನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಇದು ನನ್ನ ಈ ಟೂರ್ನಿಯ ಅಂತಿಮ ಪಂದ್ಯ.ಇದನ್ನು ಗೆದ್ದುಬಿಡಬೇಕಷ್ಟೇ ಎಂದುಕೊಳ್ಳುತ್ತಿದ್ದೆ.ಅ ಭಾವವೇ ತನ್ನನ್ನು ಆಗಾಗ ಗೆಲ್ಲಿಸಿದ್ದು.ಸೋತಾಗ ಅದೇ ಅಂತಿಮ ಪಂದ್ಯವಾಗುತ್ತಿದ್ದದ್ದೂ ಸುಳ್ಳೇನಲ್ಲ ನೋಡಿ’ಎಂದು ನಗುತ್ತಾನೆ ಜೊಕೊವಿಚ್.
ತಿರುಗಿ ನೋಡಿದರೆ ಹತ್ತಾರು ದಾಖಲೆಗಳ ಸರದಾರ ಜೋಕೊವಿಚ್.ಸಾರ್ವಕಾಲೀಕ ಶ್ರೇಷ್ಟದ್ವಯರನ್ನು ಅತೀ ಹೆಚ್ಚು ಬಾರಿ ಎದುರಿಸಿದ ಮತ್ತು ಅತಿ ಹೆಚ್ಚು ಬಾರಿ ಸೋಲಿಸಿದ ದಾಖಲೆಯೂ ಅವನದ್ದೇ.ಹೆಚ್ಚುಕಡಿಮೆ ಉಳಿದೆಲ್ಲ ಆಟಗಾರರನ್ನು ತಮ್ಮ ದೈತ್ಯ ಪ್ರತಿಭೆಯಿಂದ ಬಹುತೇಕ ನುಂಗಿಯೇ ಹಾಕಿದ ರೋಜರ್ ಫೇಡರರ್ ಮತ್ತು ರಾಫೆಲ್ ನಡಾಲರ ಪಾರಮ್ಯದ ನಡುವೆಯೇ ಅವರ ಸಾಧನೆಯನ್ನು ಮೀರುವತ್ತ ನಡೆದಿರುವ ಜಿದ್ದಿನ ಆಟಗಾರ.ಅಂದುಕೊಂಡಂತೆ ನಡೆದರೆ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಎಲ್ಲ ಅರ್ಹತೆಯುಳ್ಳ ಆಟಗಾರ ಜೋಕೊವಿಚ್.
” Whenever nothing hurts, put a little stone in your shoe, and start walking.” ಎನ್ನುತ್ತಾನೆ ಜೊಕೊವಿಚ್. ಗೆಲುವು ಬದುಕಿನ ದೊಡ್ಡ ಸಂತಸ.ಆದರೆ ಬದುಕಿನ ನೋವುಗಳನ್ನು ನಾವು ಮರೆಯಬಾರದು,ನೋವೇ ಇಲ್ಲವೆನ್ನುವ ಪರಿಸ್ಥಿತಿಗಳಲ್ಲಿ ಧರಿಸಿರುವ ಬೂಟಿನೊಳಕ್ಕೊಂದು ಸಣ್ಣನೇಯ ಕಲ್ಲು ಹಾಕಿಕೊಂಡು ನಡೆಯಿರಿ.ನೋವು ಚೆನ್ನಾಗಿ ನೆನಪಿರುತ್ತದೆ ಎನ್ನುವ ಅವನ ಬದುಕಿನ ಕತೆ ನಿಜಕ್ಕೂ ಪ್ರೇರಣಾದಾಯಕ.ಪ್ರತಿ ಸಾಧಕನ ಬದುಕಲ್ಲಿಯೂ ಹೀಗೆ ಕಷ್ಟಗಳು ಎದುರಾಗುವುದೇಕೆ..?ಎದುರಾದ ಕಷ್ಟಗಳನ್ನು ಮೆಟ್ಟಿ ನಿಂತ ಅವರವರ ಸ್ಥೈರ್ಯವೇ ಅವರನ್ನು ಸಾಧಕರಾಗಿ ಮಾಡುವುದಾ..?.ನೆತ್ತಿಯ ಮೇಲೆ ಬಾಂಬು ಬಿದ್ದು ಜೀವ ಹೋಗುವ ಪರಿಸ್ಥಿತಿಯಲ್ಲಿಯೂ ಸಾಧನೆಯ ಬಗ್ಗೆ ಯೋಚಿಸುವುದು ಹೇಗೆ ಸಾಧ್ಯ..? ತಾನು ಮುಂದೊಮ್ಮೆ ಜಗದ ಅಗ್ರ ಶ್ರೇಯಾಂಕಿತ ಆಟಗಾರನಾಗುತ್ತೇನೆ ಎಂದು ಅದು ಹೇಗೆ ಆತ ಅಷ್ಟು ಖಚಿತವಾಗಿ ನುಡಿದ..? ಸಾಧಕರಲ್ಲಿ ಹೇಗೆ ಬೆಳೆಯುತ್ತದೆ ಈ ಮನಸ್ಥಿತಿ..? ತೀರ ಸಾಮಾನ್ಯ ಮನುಷ್ಯನೊಬ್ಬ ಹೀಗೆ ಸಾಧಕನಾಗುವ ಈ  ವಿಸ್ಮಯವೇನು..? ಎನ್ನುವ ಹತ್ತು ಹಲವು ಮೆಚ್ಚುಗೆಯ ಪ್ರಶ್ನೆಗಳು ನನಗೆ.ವೈಯಕ್ತಿಕವಾಗಿ ನನಗೆ ಜೋಕೊವಿಚ್ ನೆಚ್ಚಿನ ಆಟಗಾರನೇನಲ್ಲ.ರೋಜರ್ ಫೆಡರರ್‌ನಷ್ಟು ನಾನು ಆತನನ್ನು ಮೆಚ್ಚಲಿಲ್ಲ.ರಾಫಾ ನಡಾಲ್ ಎನ್ನುವ ಸ್ಪೇನ್‌ನ ಟೆನ್ನಿಸ್ ದಂತಕತೆ ಗೆದ್ದಾಗ ಕುಣಿದಷ್ಟು,ಸೋತಾಗ ಕಣ್ಣಂಚಲ್ಲಿ ಹನಿಯೊಂದು ಮೂಡಿದಷ್ಟು ಭಾವದ ಎಳ್ಳಷ್ಟನ್ನೂ ಸಹ ಜೋಕೊವಿಚ್ ನನ್ನಲ್ಲಿ ಮೂಡಿಸಿಲ್ಲ.ಅಷ್ಟಾಗಿ  ಒಬ್ಬ ಸಾಧಕನಾಗಿ ಜೋಕೊವಿಚ್‌ನ ಸಾಧನೆಯೆಡೆಗೆ ನನ್ನದು ಯಾವತ್ತಿಗೂ ಅಭಿಮಾನದ ಮೆಚ್ಚುಗೆಯ ಮುಗಿಯದ ಅಚ್ಚರಿ.ಯಾವತ್ತಾದರೂ ಇದನ್ನು ಬರೆಯೋಣವೆಂದುಕೊಂಡಿದ್ದೆ.  ಅದೇಕೋ ಏನೋ ’ಧೋನಿ ಸಾಧಕನಲ್ಲ ,ಕೋಹ್ಲಿಯಂತೂ ಬರೀ ಲಕ್ಕಿ,ಸಚಿನ್ ಮಹಾನ್ ಸ್ವಾರ್ಥಿ ಆಟಗಾರ’ಎನ್ನುವ ಫೇಸ್ಬುಕ್ ಪಂಡಿತರ ದುರಿತ ಕಾಲಕ್ಕೆ ಈ ಬರಹವನ್ನು ಬರೆದುಬಿಡೋಣ ಎನ್ನಿಸಿತು ನೋಡಿ.