Categories
Uncategorized ಕ್ರಿಕೆಟ್

ಮಂಗಳೂರಿನಲ್ಲಿ ಪ್ರೀಮಿಯರ್ ಲೀಗ್- SVT TROPHY 2024

2024 ರ ಜನವರಿ 13 ಮತ್ತು 14 ರಂದು “ಎಸ್ ವಿ ಟಿ ಟ್ರೋಫಿ 2024, ಸೀಸನ್ 2”  ಶೀರ್ಷಿಕೆಯ  ಕ್ರಿಕೆಟ್ ಪಂದ್ಯಾಟವನ್ನು ಎಸ್ ವಿ ಟಿ ಸ್ವಯಂಸೇವಕರ ಅಸೋಸಿಯೇಷನ್ ಮಂಗಳೂರು ಪ್ರಸ್ತುತಪಡಿಸುತ್ತಿದೆ.
”ಕ್ರಿಕೆಟ್ ಏಕ್ ನೆವನ್, ಹೇಂ ಸ್ವಯಂ ಸೇವಕ ಸಮ್ಮಿಲನ್” ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ಸ್ವಯಂ ಸೇವಕರಿಗೋಸ್ಕರ ಆಯೋಜಿಸಲ್ಪಡುವ ಈ ಫ್ಲಡ್ ಲೈಟ್ ಕ್ರಿಕೆಟ್ ಪಂದ್ಯಾವಳಿಯು ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.
2023ರ ಏಪ್ರಿಲ್ ತಿಂಗಳಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ  SVT TROPHY 2023 ಅಭೂತ ಪೂರ್ವ ಯಶಸ್ಸು ಮತ್ತು ವಿಜೃಂಭಣೆಯಿಂದ ಅದ್ದೂರಿಯಾಗಿ ಸಂಪನ್ನಗೊಂಡಿತ್ತು. ಕಳೆದ ಬಾರಿ SVT TROPHY 2023ರಲ್ಲಿ  46 ವರ್ಷ ಮೇಲ್ಪಟ್ಟ ಸ್ವಯಂ ಸೇವಕರ ಪಂದ್ಯಾಕೂಟದಲ್ಲಿ  4 ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಶ್ರೀನಿವಾಸ ತಂಡ ಪ್ರಶಸ್ತಿ ವಿಶೇತ ತಂಡವಾಗಿ ಹೊರಹೊಮ್ಮಿದ್ದು ಆಕರ್ಷಕ ಟ್ರೋಫಿ ಮತ್ತು ಸ್ಮರಣಿಕೆಯನ್ನು ಪಡೆದಿತ್ತು. ಕಠಾರಿ ವೀರ ತಂಡ ಎರಡನೇ ಪ್ರಶಸ್ತಿ ತನ್ನದಾಗಿಸಿತ್ತು. 15 ವರ್ಷದಿಂದ 45 ವರ್ಷದೊಳಗಿನ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದು ನಾಗನಕಟ್ಟೆ ಪ್ಯಾಂಥರ್ಸ್ ಪ್ರಥಮ,  ಶ್ರಂಗೇರಿ ರೈಸಿಂಗ್ ಸ್ಟಾರ್ಸ್ ದ್ವಿತೀಯ ಬಹುಮಾನ ಪಡೆದಿತ್ತು.
ಕಳೆದ ಬಾರಿ  ಯಶಸ್ವಿಯಾಗಿ ನಡೆದ ಪಂದ್ಯಾವಳಿಯಿಂದ ಪ್ರೇರಣೆಗೊಂಡು ಈ ಬಾರಿ  ಮತ್ತೆ  ಪಂದ್ಯಾಟ ಆಯೋಜನೆ ಮಾಡುವ ಇರಾದೆಯನ್ನು ಇಟ್ಟುಕೊಂಡು ಇದಕ್ಕೆ ಬೇಕಾದ ಒಂದು ಸಮಿತಿಯನ್ನು ಎಸ್ ವಿ ಟಿ ಸ್ವಯಂಸೇವಕರ ಸಂಘ ರಚಿಸಿದೆ.  ಹೊನಲು ಬೆಳಕಿನಲ್ಲಿ  ನಡೆಯುವ ಈ ಪಂದ್ಯಾವಳಿಯಲ್ಲಿ 46 ವರ್ಷ ಮೇಲ್ಪಟ್ಟ ಸ್ವಯಂಸೇವಕರ  ತಂಡಗಳು ಮತ್ತು  ಅದೇ ರೀತಿ 15 ವರ್ಷದಿಂದ 45 ವರ್ಷದೊಳಗಿನ ಸ್ವಯಂಸೇವಕರ ತಂಡಗಳು ಭಾಗವಹಿಸಲಿವೆ. ಇದು ಹರಾಜು ಆಧಾರಿತ ಪಂದ್ಯಾವಳಿಯಾಗಿದ್ದು ಇತ್ತೀಚಿಗೆ ಡಿಸೆಂಬರ್ 9 ರಂದು ಇದರ ಹರಾಜು ಪ್ರಕ್ರಿಯೆಯು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಹರಾಜು ಪ್ರಕ್ರಿಯೆಯ ನಿಷ್ಣಾತ   ಕಾತ್ಯಾಯಿನಿ ಮಠದ ಎಂ ಗೋಪಾಲ ಕೃಷ್ಣ ಭಟ್ (ಗೋಪಿ ಭಟ್ ಮಾಮ್) ಇವರು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದರು.
SVT VOLUNTEERS ASSOCIATION ಅಧ್ಯಕ್ಷರಾಗಿರುವ ಶ್ರೀ ಜಿ ಸುರೇಶ್  ಕಾಮತ್ ಅವರು ಈ ವರ್ಷದ ಪಂದ್ಯಾವಳಿ ಮತ್ತು ಅಸೋಸಿಯನ್ ಸದಸ್ಯರ ಬಗ್ಗೆ ಮಾಹಿತಿ ನೀಡಿದರು. ಈ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಸ್ವಯಂ ಸೇವಕರು, ದೇವಳದ ಮೊಕ್ತೇಸರರು ಹಾಗೂ  ಪ್ರಸಿದ್ಧ ಉದ್ಯಮಿ ಆಗಿರುವ ಸಾಹುಕಾರ್ ಎಂ ಕಿರಣ್ ಪೈ, ಕಾರ್ಯದರ್ಶಿಯಾಗಿ ಉದ್ಯಮಿ,  XL ಸ್ಟುಡಿಯೋ ಮಾಲಕ ಕೆ ಮಂಜುನಾಥ್ ಶೆಣೈ, ಖಜಾಂಚಿ ಯಾಗಿ ದೇವಸ್ಥಾನದ ಸ್ವಯಂ ಸೇವಕರು ವಾಣಿಜ್ಯ ಅಕೌಂಟೆಂಟ್ ಆಗಿರುವ  ಸುಧೀರ್ ಭಗತ್  ಇವರುಗಳನ್ನು ಒಳಗೊಂಡಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷರು ತಿಳಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಡಿಗೆ ದಾಮೋದರ್ ಶೆಣೈ, ಸ್ವಯಂಸೇವಕರಾಗಿರುವ  ಬಿ ರಾಮಚಂದ್ರ ಕಾಮತ್ ಮತ್ತು ಹರೀಶ್ ಕಾಮತ್ ಇವರುಗಳು ಇದ್ದಾರೆ.  ಕ್ರೀಡಾ ಸಮಿತಿಯ ಚೀಫ್ ಕೋಆರ್ಡಿನೇಟರ್ ಆಗಿ ಕಾರ್ಯಕ್ರಮ ನಿರೂಪಕರು ಮತ್ತು ಜಿ ಎಸ್ ಬಿಗಳ  ಮಾತ್ರ ಭಾಷೆಯ ಜನಪ್ರಿಯ ವಿವರಣೆಗಾರರಾದಂತಹ ಎಂ ಗೋಪಾಲ ಕೃಷ್ಣ ಭಟ್ ಇವರು ಕಾರ್ಯನಿರ್ವಹಿಸಲಿದ್ದಾರೆ. ಸದಸ್ಯರುಗಳಾದ  ಡಿ ನರಸಿಂಹ ಭಟ್ ಡೊಂಗರಕೇರಿ, ಲ್ಲಕ್ಷ್ಮೀಶ ಬಾಳಿಗ, ಕಂದೇಲ್  ವಸಂತ್ ಕಾಮತ್, ಅನಂತ್ ರಾಯ್ ಪೈ , ಕೊಂಚಾಡಿ ನರಸಿಂಹ ಶೆಣೈ, ವಿಘ್ನೇಶ್ ಪ್ರಭು, ರಮೇಶ್ ಕಾಮತ್, ವಿಘ್ನೇಶ್ ಹೆಗ್ಡೆ, ಪಡುಬಿದ್ರಿ ಅನಿರುದ್ಧ ಭಟ್,ಜಗದೀಶ್ ಶೆಣೈ, ಎಂ ಸತೀಶ್ ಕಾಮತ್, ದೀಪಕ್ ಭಂಡಾರಿ,ಅನ್ವಿತ್ ಮಲ್ಯ, ವಿವೇಕ್ ಪ್ರಭು ಮತ್ತು ವಿಘ್ನೇಶ್  ನಾಯಕ್ ಇವರೆಲ್ಲರ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಕ್ರಿಕೆಟ್ ಪಂದ್ಯಾವಳಿಯು ಜರುಗಲಿದೆ.
ಇದೇ ಪಂದ್ಯಾವಳಿ ಸಂಧರ್ಭದಲ್ಲಿ ಅಯ್ದ ಹಿರಿಯ ಸ್ವಯಂ ಸೇವಕರ ಸೇವೆ ಗುರುತಿಸಿ ಆಯೋಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ.
SVT TROPHY ಆಯೋಜಕರು ಹಾಗೂ ಸ್ವಯಂ ಸೇವಕರ ವತಿಯಿಂದ  ದೇವರ ಅನುಗ್ರಹದಿಂದ ಈ ಪಂದ್ಯಾ ಕೂಟವು ಉತ್ಸವ ವಿಜೃಂಭಣೆಯಿಂದ ನಡೆಯಲಿ.
ಆಲ್ ದಿ ಬೆಸ್ಟ್ ಎಸ್. ವಿ. ಟಿ ಪ್ರೀಮಿಯರ್ ಲೀಗ್.
ಶುಭಾಶಯಗಳೊಂದಿಗೆ,
✍ ಸುರೇಶ್ ಭಟ್ ಮೂಲ್ಕಿ
ವೀಕ್ಷಕ ವಿವರಣೆಗಾರರು ಮತ್ತು ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ
{ ಸ್ಪೋರ್ಟ್ಸ್ ಕನ್ನಡ  ಕ್ರೀಡಾ ಈವೆಂಟ್ ಬ್ರಾಡ್‌ಕಾಸ್ಟಿಂಗ್ ಕಂಪನಿಯಾಗಿದ್ದು ಲೈವ್ ಕ್ರಿಕೆಟ್  ಟೂರ್ನಮೆಂಟ್ ಮತ್ತು ಇನ್ನಿತರ ಈವೆಂಟ್‌ಗಳನ್ನು ಪ್ರಸಾರ ಮಾಡುತ್ತದೆ: -ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್  ನಮ್ಮನ್ನು ಸಂಪರ್ಕಿಸಿ @ 6363022576 ಅಥವಾ  9632178537 }
Categories
Uncategorized

ವೆಸ್ಟ್ ಇಂಡೀಸ್ ಬ್ಯಾಟರ್ ಗಳ ಬೆವರಿಳಿಸಿದ ಭಾರತದ ಸ್ಪಿನ್ ಬೌಲರ್ ಗಳು; ಇಶಾನ್ ಕಿಶನ್ ಅವರ ಅರ್ಧಶತಕದ ನಂತರ ಗೆದ್ದ ಭಾರತ

ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್ ಏಕದಿನ ಪಂದ್ಯದಲ್ಲಿ, ಭಾರತ ತಂಡವು ಉತ್ತಮ ಪ್ರದರ್ಶನ ನೀಡಿ 7 ವಿಕೆಟ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 23 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಆಯಿತು.  ಇದಕ್ಕೆ ಉತ್ತರವಾಗಿ ಆಡಿದ ಭಾರತ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಭಾರತ  ತಂಡ ಮೊದಲು ಫೀಲ್ಡಿಂಗ್ ಮಾಡಿತು. ಟೀಮ್ ಇಂಡಿಯಾದ ಬೌಲರ್‌ಗಳು ಈ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ್ದಾರೆ. ವೆಸ್ಟ್ ಇಂಡೀಸ್ ಒಂದರ ಹಿಂದೆ ಒಂದರಂತೆ ಹಲವಾರು ವಿಕೆಟ್ ಕಳೆದುಕೊಂಡಿತು. ಕೈಲ್ ಮೇಯರ್ಸ್ (2) ವಿಕೆಟ್‌
ಪತನದ ನಂತರ ಅದು ಕೊನೆಯವರೆಗೂ ಮುಂದುವರೆಯಿತು. ಭಾರತದ ಸ್ಪಿನ್ನರ್ ಗಳಾದ ಜಡೇಜಾ ಮತ್ತು ಕುಲದೀಪ್ ಯಾದವ್ ಅವರನ್ನು ಎದುರಿಸಲು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿಲ್ಲ. ಶಾಯ್ ಹೋಪ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರ ಬ್ಯಾಟ್‌ನಿಂದ 43 ರನ್‌ಗಳ ಇನ್ನಿಂಗ್ಸ್ ಕಂಡುಬಂದಿತು. ಇವರಲ್ಲದೆ ಅಲಿಕ್ ಅತಾಂಜೆ ಮತ್ತು ಬ್ರೆಂಡನ್ ಕಿಂಗ್ ಕ್ರಮವಾಗಿ 22 ಮತ್ತು 17 ರನ್ ಗಳಿಸಿದರು. ವೆಸ್ಟ್ ಇಂಡೀಸ್ ತಂಡ 23 ಓವರ್‌ಗಳಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು.
ಭಾರತ ತಂಡದ ಪರ ಕುಲದೀಪ್ ಯಾದವ್ 3 ಓವರ್ ಗಳಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ರವೀಂದ್ರ ಜಡೇಜಾ ಕೂಡ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಕೂಡ 1-1 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಪಡೆದರು. ಇದು ಮುಖೇಶ್ ಕಮರ್ ಅವರ ಚೊಚ್ಚಲ ಪಂದ್ಯವಾಗಿತ್ತು . ಇದಕ್ಕೆ ಉತ್ತರವಾಗಿ ಭಾರತ ಕೂಡ ಕಳಪೆ ಆರಂಭ ಪಡೆಯಿತು. ಗಿಲ್ ಮತ್ತು ಇಶಾನ್ ಕಿಶನ್ ಓಪನಿಂಗ್ ಮಾಡಿದರು. ಗಿಲ್ 7 ರನ್ ಗಳಿಸುವ ಮೂಲಕ ಜೇಡನ್ ಸೀಲ್ಸ್‌ಗೆ ಬಲಿಯಾದರು. ಅವರ ನಂತರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದು 19 ರನ್‌ಗಳಿಗೆ ಔಟಾದರು. ಇಶಾನ್ ಕಿಶನ್ ಒಂದು ತುದಿಯಲ್ಲಿ ನಿಂತಿದ್ದರು. 5 ರನ್ ಗಳಿಸಿದ್ದಾಗ ಪಾಂಡ್ಯ ರನೌಟ್ ಆದರು. ದಿಟ್ಟ ಬ್ಯಾಟಿಂಗ್ ಮಾಡುತ್ತಿದ್ದ ಕಿಶನ್ 45 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 52 ರನ್ ಗಳಿಸಿ ಔಟಾದರು. . ರೋಹಿತ್ ಶರ್ಮಾ ಆಡಲು ಇಳಿದರೂ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿಯೇ ಉಳಿದರು. ರೋಹಿತ್ ಜಡೇಜಾ ಜೊತೆಗೂಡಿ ತಂಡವನ್ನು 5 ವಿಕೆಟ್ ಗಳಿಂದ ಗೆಲ್ಲಿಸಿದರು. ಜಡೇಜಾ ಔಟಾಗದೆ 16 ಮತ್ತು ರೋಹಿತ್ 8 ರನ್ ಗಳಿಸಿದರು.
Categories
Uncategorized

ದೀಪಾ ಮಲ್ಲಿಕ್ ಬದುಕು ಎಷ್ಟೊಂದು ಅದ್ಭುತ! ಎಷ್ಟೊಂದು ಸ್ಫೂರ್ತಿದಾಯಕ!

ಈಕೆಯ ಸಾಧನೆಯು ನಿಮಗೆ ಸ್ಫೂರ್ತಿ ಕೊಡದಿದ್ದರೆ ನಾನು ಇನ್ನು ಬರೆಯುವುದಿಲ್ಲ!
———————————-
21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು! ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ! ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣವೂ  ಇಲ್ಲ! ಮನೆಯಲ್ಲಿ ಇರುವ ಒಬ್ಬಳು  ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವಿಕಲತೆ!
ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು  ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ ಮಾಡಲು ಸಾಧ್ಯವೇ?
ಆದರೆ ಭಾರತದ ಅತೀ ಶ್ರೇಷ್ಟವಾದ ಪಾರಾ ಅಥ್ಲೀಟ್ ದೀಪಾ ಮಲ್ಲಿಕ್ ಅದನ್ನು ದಿಟ್ಟ ಹೋರಾಟದ ಮೂಲಕ ಸಾಧಿಸಿ ತೋರಿಸಿದ್ದಾರೆ. ಆಕೆಯ ಬದುಕು, ಛಲ ಮತ್ತು ಅನನ್ಯ ಹೋರಾಟ ನಿಜವಾಗಿಯೂ ಗ್ರೇಟ್!
ದೀಪಾ ಹುಟ್ಟು ಹೋರಾಟಗಾರ್ತಿ!
———————————-
ದೀಪಾ ಹುಟ್ಟಿದ್ದು ಹರ್ಯಾಣದಲ್ಲಿ ಸೆಪ್ಟೆಂಬರ್ 30, 1970ರಂದು. ತಂದೆ, ಅಣ್ಣ ಎಲ್ಲರೂ ಸೈನಿಕರು. ಕೈ ಹಿಡಿದ ಪತಿ ಬಿಕ್ರಂ ಮಲಿಕ್ ಕಾರ್ಗಿಲ್ ಯೋಧರು. ಬಾಲ್ಯದಿಂದ ಕ್ರೀಡೆ ಮತ್ತು ಬೈಕ್ ಸವಾರಿ ಅವರ ಕ್ರೇಜ್. ಯಾವ ಸಾಹಸವನ್ನು ಮಾಡಲು ಕೂಡ ಹಿಂಜರಿಯುವ  ಹುಡುಗಿಯೇ ಅಲ್ಲ. ಮದುವೆಯ ನಂತರ ಬಹಳ ಪ್ರೀತಿ ಮಾಡುವ ಗಂಡನ ಪೂರ್ಣ ಪ್ರಮಾಣದ ಬೆಂಬಲ ಅವರ ಸಾಹಸಗಳಿಗೆ ದೊರೆತಿತ್ತು.
ಆದರೆ ಅವರ ಬದುಕಿನಲ್ಲಿ ಎರಡು ಅಪಘಾತಗಳು ನಡೆದು ಹೋದವು. ಅವುಗಳು ಅವರ ಬದುಕಿನ ಕರಾಳ ಅಧ್ಯಾಯಗಳು!
ಮಗಳು ಬೈಕ್ ಅಪಘಾತದಲ್ಲಿ ಪಾರಾಲೈಸ್ ಆದಳು.
——————————
ಮೊದಲ ಆಘಾತ ನಡೆದದ್ದು ಅವರ ಪುಟ್ಟ ಮಗಳು ದೇವಿಕಾ ಬೈಕ್ ಅಪಘಾತಕ್ಕೆ ಒಳಗಾದಾಗ. ಮಗಳ ತಲೆಗೆ ಪೆಟ್ಟಾಗಿತ್ತು. ದೇಹದ ಎಡಭಾಗವು ಪೂರ್ತಿಯಾಗಿ ಪಾರಾಲೈಸ್ ಆಗಿತ್ತು. ಅದಕ್ಕೆ ವೈದ್ಯಕೀಯದ ಭಾಷೆಯಲ್ಲಿ ‘ಹೆಮಿ ಪ್ಲೆಜಿಯಾ ‘ಎಂದು ಹೆಸರು. ಅದರಿಂದಾಗಿ ದೀಪಾ ಮಲ್ಲಿಕ್ ತನ್ನ ಸಾಹಸದ ಪ್ಯಾಶನಗಳನ್ನು ಮರೆತು ಮಗಳ ಆರೈಕೆ ಮತ್ತು ಶುಶ್ರೂಷೆಯಲ್ಲಿ ಮುಳುಗಿಬಿಟ್ಟರು.
ದೀಪಾ ಬದುಕಿನಲ್ಲಿ ಎರಡನೆಯ ಆಘಾತ ನಡೆದೇ ಬಿಟ್ಟಿತು! 
——————————
ಮುಂದೆ 1999ರ ಕಾರ್ಗಿಲ್ ಯುದ್ದವು ಆರಂಭ ಆದಾಗ ಪತಿ ಬಿಕ್ರಂ ಮಲಿಕ್ ಭಾರತೀಯ ಸೇನೆಯ ಯೋಧನಾಗಿ ರಣಭೂಮಿಯಲ್ಲಿ ಇದ್ದರು. ಪತ್ನಿಗೆ ಅವರ ಸಂಪರ್ಕವು ಸಾಧ್ಯವೇ ಇರಲಿಲ್ಲ. ಅದೇ ಹೊತ್ತಿಗೆ ದೀಪಾ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತು.
ಸುಮಾರು ದಿನಗಳಿಂದ ಅವರ ಬೆನ್ನು ಮೂಳೆಯ ನೋವು ಕಾಡುತ್ತಿತ್ತು. ಪರೀಕ್ಷೆ ಮಾಡಲು ಹೋದಾಗ ವೈದ್ಯರು ಹೇಳಿದ್ದಿಷ್ಟು –  ನಿಮ್ಮ ಬೆನ್ನು ಮೂಳೆಯಲ್ಲಿ ಒಂದು ಅಪಾಯಕಾರಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡದೆ ಹಾಗೆ ಬಿಟ್ಟರೆ ಸಾವು ಖಂಡಿತ. ಆಪರೇಷನ್ ಮಾಡಿದರೆ ನಿಮ್ಮ ದೇಹದ ಒಂದು ಭಾಗ ಪಾರಾಲೈಸ್  ಆಗುವುದು ಖಂಡಿತ! ಆಯ್ಕೆ ನಿಮ್ಮದು!
ಗಂಡ ಯುದ್ಧಭೂಮಿಯಲ್ಲಿ ಇದ್ದ ಕಾರಣ ಅವರ ಅಭಿಪ್ರಾಯವನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದೀಪಾ ಧೈರ್ಯವಾಗಿ ಆಪರೇಶನ್ ಮಾಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಒಂದು ವಾರ ಬಿಟ್ಟು ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತವಾಗಿ ಇತ್ತು – ಒಂದು ವಾರ ನಾನು ನನ್ನ ಕಾಲ ಮೇಲೆ ಸ್ವಾವಲಂಬಿ ಆಗಿ ಫೀಲ್ ಜೊತೆಗೆ ನಡೆಯಬೇಕು!
ಅತ್ಯಂತ ಯಾತನಾಮಯ ಶಸ್ತ್ರ ಚಿಕಿತ್ಸೆ ಅದು! 
——————————
ನಂತರ ಒಬ್ಬರೇ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಅತ್ಯಂತ ಯಾತನಾಮಯ ಆದ ಶಸ್ತ್ರಚಿಕಿತ್ಸೆ ಅದು. 183 ಹೊಲಿಗೆಗಳನ್ನು  ಹಾಕಿಸಿಕೊಂಡು ಆಕೆ ಕಣ್ಣು ತೆರೆದಾಗ ಅವರ ದೇಹದ ಎದೆಯ ಕೆಳಗಿನ ಭಾಗ ಪೂರ್ತಿ ಪಾರಾಲೈಜ್ ಆಗಿತ್ತು. ವೀಲ್ ಚೇರ್ ಬದುಕು ಅನಿವಾರ್ಯ ಆಗಿತ್ತು!
ಈ ಸ್ಥಿತಿಗೆ ‘ ಪಾರಾ ಪ್ಲೆಜಿಕ್ ‘ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ದೇಹದ ಅರ್ಧ ಭಾಗವು ನಿಯಂತ್ರಣ ಕಳೆದುಕೊಳ್ಳುವುದು ಮಾತ್ರವಲ್ಲ ಮಲ, ಮೂತ್ರಗಳ ಮೇಲೆ ಕೂಡ ನಿಯಂತ್ರಣಗಳು ತಪ್ಪಿ ಹೋಗುವುದು. ಒಂದು ಗ್ಲಾಸ್ ನೀರು ಕುಡಿಯಲು ಕೂಡ ಹಿಂದೆ ಮುಂದೆ ನೋಡಬೇಕಾದ ನೋವಿನ  ಅನಿವಾರ್ಯತೆ! ಯಾವ ಆಹಾರ ಸೇವಿಸಲು ಕೂಡ ವೈದ್ಯರ ಅನುಮತಿಯನ್ನು ಪಡೆಯಬೇಕು! ಆದ್ದರಿಂದ ಪಾರಾಪ್ಲೆಜಿಕ್ ಸಮಸ್ಯೆ ಇದ್ದವರು ತಮ್ಮ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ದೀಪಾ ಮಲಿಕ್  ಬೇರೆಯವರ ಹಾಗೆ ಯೋಚನೆ ಮಾಡಲೇ ಇಲ್ಲ!
ಗಂಡನ ಬೆಂಬಲ ಪಡೆದು ದೀಪಾ 
ಮತ್ತೆ ಸಾಹಸಕ್ಕೆ ಇಳಿದರು!
——————————
1999ರ ಕಾರ್ಗಿಲ್ ಯುದ್ದವನ್ನು ಗೆದ್ದು ಗಂಡ ಮನೆಗೆ ಬಂದಾಗ ಮನೆಯಲ್ಲಿ ಎರಡೆರಡು ಪಾರಾಲೈಸ್ ಆದ ನೊಂದ ಜೀವಗಳು! ಕಣ್ಣೀರು ಸುರಿಸುತ್ತ ಮಲಗಿದ ಹೆಂಡತಿ. ಆದರೆ ಬಿಕ್ರಂ ಸಿಂಗ್ ಒಬ್ಬ ದಿಟ್ಟ ಸೈನಿಕನಾಗಿ ಹೆಂಡತಿಗೆ ಧೈರ್ಯ ತುಂಬಿದರು. ಬದುಕಿನ ನೋವನ್ನು ಮರೆಯಲು ಅವರ ಬಾಲ್ಯದ ಕ್ರೀಡೆ ಮತ್ತು ಪ್ಯಾಶನಗಳನ್ನು ಮುಂದುವರೆಸುವ ಸಲಹೆ ಕೊಟ್ಟರು. ತಾನು ಪೂರ್ತಿಯಾಗಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಪತಿಯ ಪೂರ್ಣ ಪ್ರಮಾಣದ ಬೆಂಬಲ ಪಡೆದ ದೀಪಾ ಮಲಿಕ್ ಮತ್ತೆ ಕ್ರೀಡಾ ಜಗತ್ತನ್ನು ಪ್ರವೇಶ ಮಾಡಲು ದಿಟ್ಟ ನಿರ್ಧಾರ ಮಾಡಿದ್ದರು. ಧೈರ್ಯವಾಗಿ ಮನೆಯಿಂದ ಹೊರಗೆ ಕಾಲಿಟ್ಟರು.
ಮುಂದೆ ಆಕೆಯ ಮುಂದೆ ಇದ್ದದ್ದು ಹೋರಾಟದ ಬದುಕು! 
———————————–
ಬೈಕ್ ಮತ್ತು ಕಾರ್ ಓಡಿಸಲು ದೆಹಲಿಯ ಸ್ಪೈನಲ್ ಇಂಜುರಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಠಿಣವಾದ ತರಬೇತು ಪಡೆದರು. ಈಜು ಕಲಿತರು. ಬೈಕ್ ಮತ್ತು ಕಾರಲ್ಲಿ ಹಲವು ಮಾರ್ಪಾಟು  ಮಾಡಿಸಿದರು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಡಬಾರದ ಕಷ್ಟವನ್ನು ಪಟ್ಟರು. ಅದೆಲ್ಲವೂ ಹೋರಾಟದ ದಿನಗಳು. ಅರ್ಧ ದೇಹ ಮತ್ತು ಪೂರ್ಣ ಸ್ಥೈರ್ಯಗಳು ಅವರ ಬೆಂಬಲಕ್ಕೆ ನಿಂತಿದ್ದವು!
2006ರಲ್ಲಿ ಕೌಲಾಲಂಪುರದಲ್ಲಿ ನಡೆದ ಈಜುವ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪದಕವು  ದೊರೆಯಿತು. 2008ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ದವಾಗಿ ಒಂದು ಕಿಲೋಮೀಟರ್ ದೂರ ಈಜಿ ಅವರು ಲಿಮ್ಕಾ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪದಕ ಗೆದ್ದ ಕೇವಲ ಭಾರತದ್ದೆ ಅಲ್ಲ ಇಡೀ ಜಗತ್ತಿನ ಮೊತ್ತ ಮೊದಲ ಪಾರಾಪ್ಲೆಜೀಕ್ ಕ್ರೀಡಾಪಟು ದೀಪಾ ಮಲಿಕ್ ಆಗಿದ್ದರು!
ನಂತರ ಅವರು ಹಿಂದೆ ಮುಂದೆ ನೋಡುವ ಪ್ರಸಂಗವೇ ಬರಲಿಲ್ಲ. ಅವರ ಗೆಲುವಿನ ಕೆಲವು ಹೆಜ್ಜೆಗಳು ಹೀಗಿವೆ.
ಎಲ್ಲವೂ ದಾಖಲೆ, ದಾಖಲೆ ಮತ್ತು  ದಾಖಲೆ! 
———————————–
೧) 2009ರಲ್ಲಿ ವಿಶೇಷವಾಗಿ ಮಾರ್ಪಾಡು ಮಾಡಿದ ಬೈಕನ್ನು  58 ಕಿಲೋಮೀಟರ್ ದೂರಕ್ಕೆ ನಿರಂತರ
ಓಡಿಸಿ ದಾಖಲೆ ಬರೆದರು.
೨) ಅದೇ ವರ್ಷ ಜಗತ್ತಿನ ಅತೀ ಎತ್ತರದ ರೈಡ್ ಟು ಹಿಮಾಲಯ ಹೆಸರಿನ ಮೋಟಾರ್ ರಾಲಿಯಲ್ಲಿ ನೇವಿಗೆಟರ್ ಆಗಿ ದೀಪಾ ಮಲಿಕ್  ಭಾಗವಹಿಸಿದರು. ಅದು ಮೈ ಕೊರೆಯುವ ಚಳಿಯಲ್ಲಿ ಎಂಟು ದಿನಗಳ ಸುದೀರ್ಘ ಕಾಲ ಸಾಗಿದ, 1700 ಕಿಲೋಮೀಟರ್ ಪ್ರಯಾಣದ, 18,000 ಅಡಿ ಎತ್ತರದ ದುರ್ಗಮ ರಸ್ತೆಗಳ ರಾಲಿ ಆಗಿತ್ತು. ಇದನ್ನು ಗೆದ್ದ ದೀಪಾ ಎರಡನೇ ಬಾರಿಗೆ ಲಿಮ್ಕಾ ಬುಕ್ ದಾಖಲೆಗೆ ಸೇರಿದರು!
೩) ಮುಂದಿನ ವರ್ಷ ದೀಪಾ ಇನ್ನೊಂದು ಸಾಹಸಕ್ಕೆ ಮುಂದಾದರು. ಅದು 3,000 ಕಿಲೋಮೀಟರ್ ಪ್ರಯಾಣದ ಡಸರ್ಟ್ ಸ್ಟಾರ್ಮ್ ರಾಲಿ. ಅದು ಕೂಡ ಮರುಭೂಮಿ ಸೀಳಿಕೊಂಡು ಹೋಗುವ ರಾಲಿ! ಅಲ್ಲೂ ಅವರ ಆತ್ಮವಿಶ್ವಾಸವು ಅವರನ್ನು ಗೆಲ್ಲಿಸಿತು!
೪) ಮುಂದೆ ಅವರು ಶಾಟ್ ಪುಟ್ ಮತ್ತು ಜಾವೇಲಿನ್ ಥ್ರೋ ಮೇಲೆ ಗಮನವಿಟ್ಟರು. 2010ರ ಏಷಿಯನ್ ಪಾರಾ ಗೇಮ್ಸ್ ಚೀನಾದಲ್ಲಿ ನಡೆದಾಗ ಕಂಚಿನ ಪದಕ ಗೆದ್ದರು. ಮುಂದೆ 2011ರಲ್ಲಿ ನ್ಯೂಜಿಲ್ಯಾಂಡಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್ಶಿಪ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
೫) 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಪಾರಾ ಏಷಿಯನ್ ಗೇಮ್ಸಲ್ಲಿ ಜಾವೇಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದರು.
೬) 2016ರ ರಿಯೋ ಪಾರಾ ಒಲಿಂಪಿಕ್ಸ್ ಕೂಟದಲ್ಲಿ
ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾಗವಹಿಸಲು ದೀಪಾ ಭಾರೀ ತಯಾರಿ ನಡೆಸಿದರು. ಆಗ ತೀವ್ರವಾದ ದೈಹಿಕ ತೊಂದರೆಗಳು ಎದುರಾದವು. ಪ್ರತೀ ಬಾರಿ ಶಾಟ್ ಪುಟ್ ಎಸೆದಾಗ ಮಲ ಅಥವ ಮೂತ್ರ ವಿಸರ್ಜನೆ ಆಗಿ ಡಯಪರ್ ಬದಲಾವಣೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ದೀಪಾ ಮಲಿಕ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಅದರ ನಡುವೆ ಅವರ ಬೆನ್ನ ಹಿಂದೆ ನಡೆದ  ಹಲವು ವಿಶ್ವಾಸದ್ರೋಹದ ಘಟನೆಗಳು, ಕೋರ್ಟು ಅಲೆದಾಟ ಅವರನ್ನು ಹಿಂಡಿ ಹಿಪ್ಪೆ ಮಾಡಿದವು. ಕ್ರೀಡೆಗೆ ಸಿದ್ಧತೆ ಮಾಡಬೇಕಾದ ಪೂರ್ತಿ ಹೊತ್ತು ಕೋರ್ಟನ ಓಡಾಟದಲ್ಲಿ ಕಳೆದುಹೋಗಿತ್ತು. ದೀಪಾ ಕೋರ್ಟಲ್ಲಿ ಕೂಡ ತಮ್ಮ ಪರವಾದ ತೀರ್ಪನ್ನು ಪಡೆದರು ಮತ್ತು ರಿಯೋ ಪಾರಾ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು.
2016ರ ಸೆಪ್ಟೆಂಬರ್ 14 ರಂದು ರಿಯೋದಲ್ಲಿ ವೀಲ್ ಚೇರ್ ಮೇಲೆ ಕುಳಿತು ತನ್ನ ದೇಹದ ಪೂರ್ಣವಾದ  ಶಕ್ತಿಯನ್ನು ತನ್ನ ಭುಜಗಳಿಗೆ ಬಸಿದು 4.61 ಮೀಟರ್ ದಾಖಲೆಯ ದೂರಕ್ಕೆ ಆಕೆ ಶಾಟ್ ಪುಟನ್ನು ಎಸೆದು ಬಿಟ್ಟಿದ್ದರು! ಆ ದಿನ ದೀಪಾ ಅವರಿಗೆ ದೊರೆತದ್ದು ಹೊಳೆವ ಬೆಳ್ಳಿಯ ಪದಕ! ಭಾರತದ ತ್ರಿವರ್ಣ ಧ್ವಜ ರಿಯೋದಲ್ಲಿ ಹಾರಿದಾಗ ದೀಪಾ ಕಣ್ಣೀರು ಸುರಿಸಿದರು.
ಅದು ಭಾರತವು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಗೆದ್ದ ಮೊದಲ ಪದಕ ಆಗಿತ್ತು ಮತ್ತು ಆ ಸಾಧನೆ ಮಾಡಿದ ಜಗತ್ತಿನ ಮೊದಲ ಪಾರಾಪ್ಲೆಜಿಕ್ ಕ್ರೀಡಾಪಟು ಆಗಿ ದೀಪಾ ಮಲಿಕ್ ಮೂಡಿ ಬಂದಿದ್ದರು! ಆಗ ಅವರಿಗೆ 46 ವರ್ಷ!
೭) ಮುಂದೆ ಜಕಾರ್ತದಲ್ಲಿ ನಡೆದ ಏಷಿಯನ್ ಪಾರಾ ಗೇಮ್ಸ್ ಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಅವರು ಗೆದ್ದರು.
೮) ಸತತ ಮೂರು ಏಷಿಯನ್ ಪಾರಾ ಕೂಟಗಳಲ್ಲಿ ಪದಕ ಗೆದ್ದ  (2010, 2014, 2018) ಭಾರತದ  ಮೊದಲ ಕ್ರೀಡಾಪಟು ಆಗಿದ್ದರು ದೀಪಾ ಮಲಿಕ್!
೯) ಆಕೆ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ 81. ಅದರಲ್ಲಿ 58 ಪದಕಗಳು ರಾಷ್ಟ್ರ ಮಟ್ಟದ್ದು ಮತ್ತು 23 ಪದಕಗಳು ಅಂತಾರಾಷ್ಟ್ರೀಯ ಮಟ್ಟದ್ದು!
೧೦) ದೀಪಾ ಮಲಿಕ್ ಅವರಿಗೆ ರಾಷ್ಟ್ರಮಟ್ಟದ  ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎರಡೂ ಸಂದಿವೆ.
೧೧) ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ಅಂದಿನ ಇಡೀ ಕಾರ್ಯಕ್ರಮವು ಭಾವಪೂರ್ಣ ಆಗಿತ್ತು. ಆಕೆಯ ಕತೆಯನ್ನು ಅವರ ಬಾಯಿಂದಲೇ ಕೇಳಿ ಪ್ರಧಾನಿ ನರೇಂದ್ರ ಮೋದಿ ರೋಮಾಂಚನ ಪಟ್ಟಿದ್ದರು!
೧೨) ದೀಪಾ ಅರ್ಧ ದೇಹದ ಪಾರಾಲೈಸ್ ಆದ ತನ್ನ ಮಗಳು ದೇವಿಕಾ ಅವರನ್ನು ಕೂಡ ಓರ್ವ ಭವಿಷ್ಯದ ಪಾರಾ ಅಥ್ಲೀಟ್ ಆಗಿ ರೂಪಿಸುತ್ತಿದ್ದಾರೆ!
ಈಗ ನೀವು ಹೇಳಿ. ದೀಪಾ ಮಲಿಕ್ ಬದುಕು ಸ್ಫೂರ್ತಿಯ ಚಿಲುಮೆ ಹೌದಾ?
Categories
Uncategorized ಕ್ರಿಕೆಟ್

ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವಿ ಪಿ ಎಲ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ

ಮಂಗಳೂರು-ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವತಿಯಿಂದ 4ನೇ  ವರ್ಷದ ಕ್ರಿಕೆಟ್ ಪಂದ್ಯಾವಳಿ  (cricket tournament) ಬಂಟ್ವಾಳ ತಾಲೂಕಿನ ಬರಿಮಾರು ಮಹಮ್ಮಾಯಿ ದೇವಸ್ಥಾನದ  ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಅಂತಿಮ ಪಂದ್ಯಾವಳಿಯ ನಾಣ್ಯ  ಚಿಮ್ಮುವಿಕೆಯನ್ನು ಶ್ರೀ   ಗೋಪಾಲಕೃಷ್ಣ ಭಟ್ ಮಂಗಳೂರು  ( ಗೋಪಿ ಭಟ್ ) ನೇರವೇರಿಸಿದರು. ಫೈನಲ್ ಪಂದ್ಯಾವಳಿಯ ಎರಡೂ ತಂಡದ ಆಟಗಾರರಿಗೆ ಶುಭಾಶಯ ತಿಳಿಸಿದರು.
ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಭಟ್ ‘ಜಿಸ್  ಸೂಪರ್ ಕಿಂಗ್ಸ್ ತಂಡ, ರನ್ನರ್ ಅಪ್ ಆಗಿ ಮುಂಬಯಿಯ ರಾಕಿಂಗ್ ವೈದಿಕ್ಸ್ ತಂಡ ಪಡೆದುಕೊಂಡಿದೆ. ರಾಜ್ಯದೆಲ್ಲೆಡೆಯ  ಹಾಗೂ ಹೊರರಾಜ್ಯದ ಒಟ್ಟು  8 ತಂಡಗಳು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ರಂಜಿತ್  ಭಟ್ರ  ಭಟ್ ಬ್ರದರ್ಸ್ ತಂಡವು ಭರತ್ ಭಟ್ ನಾಯಕತ್ವದ ಕೇರಳದ ಅನಂತ್ ವೈದಿಕ್ಸ್ ಮಂಜೇಶ್ವರ ವನ್ನು ಪರಾಭವಗೊಳಿಸಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಸಮಾರೋಪ ಸಮಾರಂಭ ಉದ್ದೇಶಿಸಿ  ಶ್ರೀ ಕ್ಷೇತ್ರ ಬರಿಮಾರುವಿನ ಅನುವಂಶಿಕ ಮೊಕ್ತೇಸರರು, ಧರ್ಮದರ್ಶಿಗಳು ಶ್ರೀ ರಾಕೇಶ್ ಪ್ರಭು,  ಮಾತನಾಡಿ, 4 ವರ್ಷಗಳಿಂದ ಅನೇಕ ಕ್ರೀಡಾಪಟುಗಳನ್ನು ಈ ವೇದಿಕೆ ಪರಿಚಯಿಸಿ ಪ್ರೋತ್ಸಾಹಿಸಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 ಮಹಮ್ಮಾಯಿ ದೇವಸ್ಥಾನದ  ರವೀಶ್ ಪ್ರಭು ಮಾತನಾಡಿ, ಪ್ರತಿ ವರ್ಷವೂ ಹಲವು ಪಂದ್ಯಾವಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮುಂದಿನ ಪೀಳಿಗೆಗೆ ಹಲವು ಕ್ರೀಡಾಪಟುಗಳನ್ನು ಪರಿಚಯಿಸಲಿದೆ ಎಂದರು.
ವೇದಿಕೆಯ ಅಧ್ಯಕ್ಷ  ಪಂಡಿತ್ ಎಂ. ಕಾಶಿನಾಥ ಆಚಾರ್ಯ ಮಾತನಾಡಿ, ಬೇರೆ ಬೇರೆ ಭಾಗದಲ್ಲಿದ್ದ ಸಮಾಜದ  ವೈದಿಕರು  ಒಂದೆಡೆ ಸೇರಲು ಈ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದ್ದು ಯಶ್ವಸಿಯಾಗಿ 4 ವರ್ಷ ಪೂರೈಸಲಾಗಿದೆ. ಸ್ನೇಹಕ್ಕಾಗಿ ಕ್ರೀಡೆ ಆಯೋಜಿಸುತ್ತಾ ಬಂದಿದ್ದು ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದರು.
ವಿಜೇತ ತಂಡಗಳಿಗೆ , ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರ್ಚಕರು ಮೂಲ್ಕಿ ರಮಾನಾಥ್ ಭಟ್, ಚಾಂಪಿಯನ್ ತಂಡದ ನಾಯಕ  ಸುದೇಶ್ ಭಟ್ ಮೂಡಬಿದ್ರೆ , ರನ್ನರ್ ಅಪ್ ತಂಡದ ನಾಯಕ  ಹರೀಶ್ ಭಟ್ ಮುಂಬಯಿ  ಮತ್ತಿತರರು ಇದ್ದರು.
ವೈದಿಕರ ಈ ಪಂದ್ಯಾಕೂಟದಲ್ಲಿ ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತುಳು ಹಾಗೂ ಜೊತೆ ಜೊತೆಗೆ ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯನ್ನು ನೀಡಿದ್ದು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಗೋಪಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶುಭವಾಗಲಿ,
ಅವಕಾಶಕ್ಕಾಗಿ ಧನ್ಯವಾದಗಳು
ಸುರೇಶ್ ಭಟ್ ಮೂಲ್ಕಿ
ದೂ: 98454 83433
Categories
Uncategorized

ಕ್ಯಾಪ್ಟನ್ ಕೂಲ್ ಧೋನಿ ಬಳಿಕ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ: ಹಾರ್ದಿಕ್ ಪಾಂಡ್ಯ

ಬಲಿಷ್ಠ ನ್ಯೂಜಿಲೆಂಡ್ ಎದುರು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ತಂಡದ ಗೆಲುವಿನ ನಂತರ ಮಾಧ್ಯಮದ ಎದುರು
ಧೋನಿ ಬಳಿಕ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿ ನನ್ನ ಮೇಲಿದೆ ಮತ್ತು ಜವಾಬ್ದಾರಿ ಹೆಚ್ಚಾಗಿದೆ ಎಂದ ಪಾಂಡ್ಯ
ಅಹಮದಾಬಾದ್‌(ಫೆ.02): ಬಲಿಷ್ಠ ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 168 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಈ ಪಂದ್ಯದ ಗೆಲುವಿನೊಂದಿಗೆ
ಹತ್ತಾರು ದಾಖಲೆಯೊಂದಿಗೆ 2-1 ಅಂತರದಲ್ಲಿ ಟಿ20 ಸರಣಿಯನ್ನು ತನ್ನ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಎದುರಿನ ಈ ಬಾರಿ ಅಂತರದ ಗೆಲುವು ಟಿ20 ಕ್ರಿಕೆಟ್‌ ಮಾದರಿಯಲ್ಲಿ ಟೀಂ ಇಂಡಿಯಾ ಜಯಿಸಿದ ಅತಿ ದೊಡ್ಡ ಅಂತರದ ಗೆಲುವು ಎನಿಸಿಕೊಂಡಿತು.
ಇದರ ಜೋತೆಗೆ ತವರು ನೆಲದಲ್ಲಿ ಭಾರತೀಯರು ಜಯಿಸಿದ ಸತತ 13ನೇಯ ಟಿ20 ಸರಣಿಯ ಗೆಲುವು ಎನಿಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ದಾಂಡಿಗನಾಗಿ ಅಂಕಣಕ್ಕೆ ಇಳಿದ ಶುಭ್‌ಮನ್‌ ಗಿಲ್‌ ಕೇವಲ 64 ಎಸೆತಗಳಲ್ಲಿ ಅಜೇಯ 126 ರನ್ ಬಾರಿಸುವುದರ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಭಾರತ ಕೇವಲ 4 ವಿಕೆಟ್‌ ಕಳೆದುಕೊಂಡು 234 ರನ್‌ ಬಾರಿಸಿತು.
ಭಾರತೀಯರು ಕಲೆಹಾಕಿದ ದೊಡ್ಡ ಮೊತ್ತ ನೋಡಿಯೇ ದಿಕ್ಕೆಟ್ಟು ಹೋಗಿದ್ದ ಕಿವೀಸ್‌ ತನ್ನ ಬ್ಯಾಟಿಂಗ್ ಸರಣಿಯನ್ನು ಆರಂಭಿಸಿತೆ ಹೊರತು ಯಾವ ಕ್ಷಣದಲ್ಲೂ ಪ್ರತಿರೋಧ ತೋರಲಿಲ್ಲ.ಭಾರತೀಯರ ಬೌಲಿಂಗ್ ಎದುರು ಹೆಣಗಾಡಿದ ಕಿವೀಸ್ 12.1 ಓವರಲ್ಲಿ ಕೇವಲ 66ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬಾರಿ ಅಂತರದಿಂದ ಸೋಲಿಗೆ ಶರಣಾಯಿತು. ಡ್ಯಾರಿಲ್‌ ಮಿಚೆಲ್‌(35), ಸ್ಯಾಂಟ್ನರ್‌(13) ಈ ಇಬ್ಬರು ಆಟಗಾರರನ್ನು ಬಿಟ್ಟರೆ ಉಳಿದವರೆಲ್ಲ ಬಂದಷ್ಟೆ ವೇಗವಾಗಿ ಪೆವಿಲಿಯನ್ ಗೆ ಮರಳಿದ್ದರು. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಬೌಲಿಂಗ್ ಮಾಡಿ ಕೇವಲ 16 ರನ್ ಗಳಿಗೆ ನ್ಯೂಜಿಲೆಂಡ್ ನ 4 ವಿಕೆಟ್ ಕಬಳಿಸಿದರೆ. ಭಾರತೀಯ ಯುವ ವೇಗಿ ಉಮ್ರಾನ್‌ ಹಾಗೂ ಆರ್ಶದೀಪ್‌, ಶಿವಂ ಮಾವಿ ತಲಾ 2 ವಿಕೆಟ್‌ ಪಡೆದು ನ್ಯೂಜಿಲೆಂಡ್ ತಂಡವನ್ನು ಕಡಿಮೆ ರನ್ ಗಳಿಗೆ ಕಟ್ಟಿಹಾಕಿ ಭಾರತ ತಂಡಕ್ಕೆ ಬಾರಿ ಅಂತರದ ಗೆಲುವು ತಂದು ಕೊಟ್ಟರು.
ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಷ್ಟೇ ಅಲ್ಲದೇ, ಬ್ಯಾಟಿಂಗ್‌ನಲ್ಲೂ ಕೇವಲ 17 ಎಸೆತಗಳನ್ನು ಎದುರಿಸಿ 30 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ, ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.ಅಂತೆಯೇ ಶುಭಮನ್ ಗಿಲ್ ಪಂದ್ಯದ ಶ್ರೇಷ್ಠ ಆಟಗಾರನಾಗಿ ಪ್ರಶಸ್ತಿ ಮುಡಿಗೆರಿಸಿ ಕೊಂಡರು
ಕಳೆದ ವರ್ಷದ ಗಾಯದ ಸಮಸ್ಯೆಯಿಂದ ಕೇಲವು ಪಂದ್ಯಗಳಿಂದ ದೂರ ಉಳಿದಿದ್ದ ಪಾಂಡ್ಯ ನಂತರ ಚೇತರಿಸಿಕೊಂಡು ತಂಡಕೂಡಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ತಿರುಗಿ ನೋಡಲಿಲ್ಲ ತನ್ನ ಬ್ಯಾಟಿಂಗ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ  ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈ ಹಾಕುವುದಕ್ಕಿಂತ ಹೆಚ್ಚಾಗಿ ಸ್ಟ್ರೈಕ್ ರೊಟೇಟ್ ಮಾಡುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಇದೀಗ ತಮ್ಮ ಆಟದ ಶೈಲಿಯನ್ನು ಕೊಂಚ ಬದಲಿಸಿಕೊಂಡು ತಾಳ್ಮೆಯಿಂದ ಪ್ರತಿ ಬಾಲನ್ನು ಎದುರಿಸಿ ತಕ್ಕ ಉತ್ತರ ನೀಡುತ್ತಿದ್ದಾರೆ.ಇದನ್ನು ಸ್ವತಹ ಪಾಂಡ್ಯನೆ ಒಪ್ಪಿಕೊಂಡಿದ್ದಾರೆ.
ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ” ನಾನು ಯಾವಾಗಲೂ ಸಿಕ್ಸರ್ ಬಾರಿಸುವುದನ್ನು ಎಂಜಾಯ್ ಮಾಡುತ್ತಿದ್ದೆ, ಯಾಕೆಂದರೇ ನಾನು ಬೆಳೆದುಬಂದಿದ್ದೇ ಹಾಗೆ. ಆದರೆ ನಾನು ಜತೆಯಾಟದ ಮೇಲೆ ಹೆಚ್ಚು ನಂಬಿಕೆ ಇಡುತ್ತೇನೆ. ನಾನು ನನ್ನ ಸಹ ಆಟಗಾರನಿಗೆ ಹಾಗೂ ತಂಡಕ್ಕೆ ನಾನಿದ್ದೇನೆ ಎನ್ನುವ ಭರವಸೆ ನೀಡುತ್ತೇನೆ ಹಾಗೂ ಕ್ರೀಸ್‌ನಲ್ಲಿ ತಾಳ್ಮೆಯಿಂದಿರಲು ಬಯಸುತ್ತೇನೆ. ನಾನು ಇವರೆಲ್ಲರಿಗಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದೇನೆ. ನಾನು ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅರಿತುಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ನನ್ನ ಸ್ಟ್ರೈಕ್‌ರೇಟ್ ಕಡಿಮೆಯಾಗಬಹುದು. ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಲು ಬಯಸುತ್ತೇನೆ. ನಾನು ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಯಾಕೆಂದರೆ, ನಾನು ಬೇರೆಯವರು ಈ ಕಷ್ಟಕರ ಪಾತ್ರವನ್ನು ನಿಭಾಯಿಸಲಿ ಎಂದು ಬಯಸುವುದಿಲ್ಲ. ಎದುರಾಳಿಗಳು ಒತ್ತಡದಲ್ಲಿದ್ದಾರೆ ಎಂದರೆ ನಾವು ಅವರನ್ನು ಬೆನ್ನತ್ತಬಹುದು. ನಾನೇ ನೇತೃತ್ವ ತೆಗೆದುಕೊಂಡು ಮುಂದುವರೆಯುತ್ತೇನೆ. ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಕೌಶಲ್ಯದ ಕಡೆಗೂ ಗಮನ ಕೊಡುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನಾನು ಮಹೇಂದ್ರ ಸಿಂಗ್ ಧೋನಿ ಅವರಂತೆಯೇ, ಕೆಳಕ್ರಮಾಂಕದಲ್ಲಿ ಆಡುವ ಬಗ್ಗೆ ಹೆಚ್ಚು ಆಲೋಚಿಸಲು ಹೋಗುವುದಿಲ್ಲ. ನಾನು ಆರಂಭದಲ್ಲಿ ಚೆಂಡನ್ನು ಮೂಲೆ ಮೂಲೆಗೆ ಸಿಕ್ಸರ್‌ಗಟ್ಟುತ್ತಿದ್ದೆ. ಆದರೆ ಧೋನಿ ನಿವೃತ್ತಿಯಾದ ಬಳಿಕ, ದಿಢೀರ್ ಎನ್ನುವಂತೆ ಆ ಜವಾಬ್ದಾರಿ ಈಗ ನನ್ನ ಹೆಗಲೇರಿದೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ತಂಡಕ್ಕೆ ಒಳ್ಳೆಯದಾಗುತ್ತದೇ ಎಂದರೇ ನಾನು ಮಂದ ಗತಿಯಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಆಲೋಚಿಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.ಅದೇನೇ ಇರಲಿ ದೋನಿ ನಂತರದಲ್ಲಿ  ಭಾರತ ತಂಡಕ್ಕೆ ಉತ್ತಮ ನಾಯಕನೊಬ್ಬ ಸಿಕ್ಕಿರುವುದು ಭಾರತೀಯರು ಹೆಮ್ಮೆ ಪಡುವಂತಾಗಿದೆ.
Categories
Uncategorized ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಡಿಸೆಂಬರ್ 29 ಇಂದಿನಿಂದ ಕುಂದಾಪುರದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಜಾನ್ಸನ್ ಟ್ರೋಫಿ-2022/23

ಕುಂದಾಪುರ: ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ಜಾನ್ಸನ್ ಟ್ರೋಫಿ ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇದರ ಅಧ್ಯಕ್ಷರಾದ ರವೀಂದ್ರ ಹೆಗ್ಡೆ ಹೇಳಿದರು.
ಬುಧವಾರ ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಪಂದ್ಯಾಟದ ಎರಡನೇ ದಿನವಾದ ಡಿಸೆಂಬರ್ 30ರ ಶುಕ್ರವಾರ ಸಂಜೆ 7 ಗಂಟೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಸುರೇಂದ್ರ ಶೆಟ್ಟಿ, ಜಯಶೀಲ ಶೆಟ್ಟಿ, ಅನ್ಸಾಫ್, ವಿಶ್ವಾಸ್ ಮೆಲ್ವಿನ್ ಡಿಸೋಜಾ, ವೀಣಾ ಭಾಸ್ಕರ್, ಸಂಪತ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಜಯ್ ಶೆಟ್ಟಿ ತೆಕ್ಕಟ್ಟೆ, ಸುಭಾಶ್ ಶೆಟ್ಟಿ ಹೊಳ್ಮಗೆ, ಪ್ರವೀಣ್ ಶೆಟ್ಟಿ ವಂಡಾರ್, ಲಕ್ಷ್ಮೀ ಮಂಜು ಬಿಲ್ಲವ, ಶ್ರೀಪಾದ್ ಉಪಾಧ್ಯ, ಸತೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಡಿಸೆಂಬರ್ 29 ರಿಂದ ಜನವರಿ 1 ರ ತನಕ ನಾಲ್ಕು ದಿನಗಳ ಕಾಲ ನಡೆಯಲಿರುವ ಲೀಗ್ ಕಮ್ ನಾಕೌಟ್ ಮಾದರಿಯ ಪಂದ್ಯಾಟವು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿಷ್ಠಿತ 28 ತಂಡಗಳ ನಡುವೆ ನಡೆಯಲಿದೆ ಎಂದರು.
*ಜಿಲ್ಲೆಯ ಇತಿಹಾದಲ್ಲೇ ಮೊದಲ ಬಾರಿಗೆ:*
ಜಿಲ್ಲೆಯಲ್ಲೇ ಮೊದಲ ಬಾರಿಗೆ 4 ಲಕ್ಷ ನಗದಿನ ಅಂತರಾಷ್ಟ್ರೀಯ ಮಟ್ಟದ ಪಂದ್ಯಾಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತೀ ತಂಡಕ್ಕೂ 30,000 ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದ್ದು, ಪಂದ್ಯಾಟದ ಪ್ರಥಮ ಬಹುಮಾನ 4,04,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನವಾಗಿ 2,02,000 ಹಾಗೂ ಶಾಶ್ವತ ಫಲಕ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಎಲೆಕ್ಟ್ರಿಕ್ ದ್ವಿಚಕ್ರ ಬೈಕ್ ಅನ್ನು ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ನೀಡಿ ಗೌರವಿಸಲಾಗುವುದು ಎಂದವರು ಮಾಹಿತಿ ನೀಡಿದರು.
*ವಿಶೇಷ ಆಕರ್ಷಣೆ:*
ರಾಜ್ಯದ ಪ್ರತಿಷ್ಠಿತ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ಪಂದ್ಯಾಟದ ನೇರ ಪ್ರಸಾರವನ್ನು ಭಿತ್ತರಿಸಲಿದೆ. ಕ್ರೀಡಾಂಗಣದ ಹೊರಭಾಗದಲ್ಲಿ ಎಲ್‍ಇಡಿ ಟಿವಿ ಪರದೆ ಅಳವಡಿಸಲಾಗಿದ್ದು, ಕೆಲವು ತೀರ್ಮಾನಗಳು ಮೂರನೇ ಅಂಪೈರ್ ಮೂಲಕ ಟಿವಿ ಪರದೆಯಲ್ಲಿ ಭಿತ್ತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು, ಚೆನ್ನೈ, ದಾವಣಗೆರೆ, ಚಿತ್ರದುರ್ಗಾ, ತೀರ್ಥಹಳ್ಳಿ, ಮಂಡ್ಯ, ಮೈಸೂರು, ಗೋವಾ, ಭದ್ರಾವತಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 28 ತಂಡಗಳು ಜಾನ್ಸನ್ ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಾನ್ಸನ್ ಕ್ರಿಕೆಟರ್ಸ್‍ನ ಕಾರ್ಯದರ್ಶಿ ಮನೋಜ್ ನಾಯರ್, ನಾಯಕ ರಾಜಾ ಸಾಲಿಗ್ರಾಮ, ಪ್ರದೀಪ್ ಹೆಗ್ಡೆ ಇದ್ದರು.
Categories
Uncategorized

ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲು ಕಾರಣವೇನು ? ಡಿ. 26ರಂದೆ ಏಕೆ ಪಂದ್ಯಗಳನ್ನು ಆಯೋಜಿಸಲಾಗುತ್ತದೆ?

ಬಾಕ್ಸಿಂಗ್ ಡೇ ಈ ಟೆಸ್ಟ್ ಸರಣಿಯನ್ನು ಡಿ. 26ರಂದೇ ಆಯೋಜಿಸಲು ಕಾರಣ?
ಡಿಸೆಂಬರ್ 26 ರಂದು ನಡೆಯುವ ಟೆಸ್ಟ್ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಯು ಕ್ರಿಕೆಟ್ ಪ್ರೇಮಿಗಳಲ್ಲಿ ಹೆಚ್ಚು ಕೂತುಹಲವನ್ನು‌ ಮೂಡಿಸಿದೆ ಎನ್ನಲಾಗಿತ್ತಿದೆ ಇದನ್ನು ಸಾಮಾನ್ಯವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಭಾರತದಂತಹ ಅನೇಕ ಕಾಮನ್‌ವೆಲ್ತ್ ದೇಶಗಳಲ್ಲಿ ಆಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ವಾರ್ಷಿಕ ಕಾರ್ಯಕ್ರಮವಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
*ಬಾಕ್ಸಿಂಗ್ ಡೇ ಟೆಸ್ಟ್ ಎಂದು ಏಕೆ ಕರೆಯಲಾಗುವುದು?*
ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಡಿಸೆಂಬರ್‌ 26 ರಿಂದ ‘ಬಾಕ್ಸಿಂಗ್‌ ಡೇ ಟೆಸ್ಟ್’ ಆಯೋಜಿಸಲಾಗುತ್ತದೆ. ಇನ್ನು ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನದ ಆಟ ಡಿಸೆಂಬರ್ 26 ರಂದೆ ನಡೆಯುತ್ತದೆ. ಆಸ್ಟ್ರೇಲಿಯಾ ಇದೇ ದಿನದಂದು ಇಂಗ್ಲೆಂಡ್ ವಿರುದ್ಧ ಆಡಿದ್ರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿವೆ
*ಬಾಕ್ಸಿಂಗ್ ಡೇ ಎಂದು ಹೆಸರು ಬರಲು ಕಾರಣ?*
ಬಾಕ್ಸಿಂಗ್ ಡೇ ಎನ್ನುವುದು ಸ್ಪೋರ್ಟ್ ಬಾಕ್ಸಿಂಗ್ ಅಥವಾ ಬಾಕ್ಸಿಂಗ್‌ನ ಇನ್ಯಾವುದೇ ರೀತಿಯಲ ಕ್ರೀಡೆಗೆ ಸಂಬಂಧಿಸಿದಲ್ಲ ಎಂಬುದು ಗಮನಾರ್ಹವಾಗಿದೆ. ವಾಸ್ತವವಾಗಿ, ಇದರ ಹಿಂದೆ ಹತ್ತು ಹಲವು ಕಾರಣಗಳಿವೆ, ಅದಕ್ಕಾಗಿಯೇ ಇದನ್ನು ಬಾಕ್ಸಿಂಗ್ ಡೇ ಟೆಸ್ಟ್ ಸರಣಿ ಎಂದು ಕರೆಯಲಾಗುತ್ತದೆ. ಈ ಹೆಸರಿನ ಹಿಂದೆ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಕಾರಣಗಳಿವೆ.
ಅದರ ಒಂದು ವಿವರಣೆಯ ಪ್ರಕಾರ, ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸ್ವೀಕರಿಸಿದ ಉಡುಗೊರೆಗಳಿಂದಾಗಿ ಬಾಕ್ಸಿಂಗ್ ದಿನಕ್ಕೆ ಅದರ ಹೆಸರು ಪ್ರಚಲಿತಕ್ಕೆ ಬಂದಿದೆ. ಬ್ರಿಟನ್‌ನಲ್ಲಿ, ಕ್ರಿಸ್ಮಸ್ ಬಾಕ್ಸ್ ಅನ್ನು ಕ್ರಿಸ್ಮಸ್ ಉಡುಗೊರೆ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಬಾಕ್ಸಿಂಗ್ ಡೇ ಯುಕೆಯಲ್ಲಿ ಉದ್ಯೋಗದಾತರಿಂದ ಉಡುಗೊರೆಗಳನ್ನು ಪಡೆದ ಸೇವಕರಿಗೆ ಅಧಿಕೃತ ರಜಾದಿನವಾಗಿದೆ ಮತ್ತು ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ಬಂದ ಉಡುಗೊರೆಗಳನ್ನು ಡಿಸೆಂಬರ್ 26 ರಂದು ಬಿಚ್ಚಲು ಕುಟುಂಬಗಳು ಮುಂದಾಗುತ್ತವೆ.
*ಬಾಕ್ಸಿಂಗ್ ಡೇ ದಿನದ ಪ್ರಾಮುಖ್ಯತೆ*
ಮತ್ತೊಂದೆಡೆ, ಎರಡನೇ ಅರ್ಥದ ಪ್ರಕಾರ, ಬಾಕ್ಸಿಂಗ್ ಡೇ ಎಂದರೆ ಬಡವರಿಗೆ ಹಣ ತುಂಬಿದ ಪೆಟ್ಟಿಗೆ ಅಥವಾ ಉಡುಗೊರೆಯನ್ನು ನೀಡುವ ದಿನ ಎಂದು ಮತ್ತು ಅವರು ಕ್ರಿಸ್‌ಮಸ್‌ನ ಮರುದಿನ ಅದನ್ನು ತೆರೆಯುತ್ತಾರೆ. ಅಮೆರಿಕನ್ನರ ಪ್ರಕಾರ, ಕ್ರಿಸ್ಮಸ್ ನಂತರದ ದಿನವನ್ನು ಗಿಫ್ಟ್ ಓಪನಿಂಗ್ ಡೇ ಎಂದು ಕರೆಯಲಾಗುವುದು, ಈ ಕಾರಣದಿಂದಾಗಿ ಉಡುಗೊರೆಯೊಂದಿಗೆ ಬಂದ ಬಾಕ್ಸ್ ಗಳನ್ನು ತೆರೆದು ನೊಡಲಾಗುತ್ತದೆ ಪೆಟ್ಟಿಗೆಗಳನ್ನು ಅನ್ಬಾಕ್ಸ್ ಮಾಡಲಾಗುತ್ತದೆ.
ಈ ಕಾರಣದಿಂದಲೇ ಈ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ ಇದನ್ನು ಕೇಲವು ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಗಳಿಗೂ ಹೆಸರಿಟ್ಟು ಡಿಸೆಂಬರ್ 26 ರಂದೆ ಟೆಸ್ಟ್ ನ ದಿನಾಂಕವನ್ನು ನಿಗದಿ ಪಡಿಸಿ ಸರಣಿ ಗೆಲುವಿಗಾಗಿ ಕ್ರಿಕೆಟ್ ಅಂಕಣಕ್ಕೆ ಇಳಿದು ಹೊರಾಡುತ್ತವೆ
Categories
Uncategorized ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

T.C.A ಪ್ರಾಯೋಜಿತ ಕಾರ್ಕಳ ತಾಲೂಕು ಕ್ರಿಕೆಟ್ ಪಂದ್ಯಾಟ ಭಾಗವಹಿಸುವ 7 ತಂಡಗಳು ಹೀಗಿದೆ!

ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳದಲ್ಲಿ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಡಿಸೆಂಬರ್ 4 ಮತ್ತು 5 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
*1)ಶಿವಭಕ್ತ ಕಾರ್ಕಳ-ನಾಯಕ-ನಿತೇಶ್*
*2)ಎಸ್‌.ಬಿ‌.ಸಿ ಬಜಗೋಳಿ-ನಾಯಕ-ಕಿಶೋರ್*
*3)ನಿಟ್ಟೆ-ನಾಯಕ-ಶಶಿಕಾಂತ್*
*4)ಆರ್‌.ಕೆ.ಕುಂಟಾಡಿ-ನಾಯಕ- ಅಜಿತ್*
*5)ಇಲೆವೆನ್ ಬೆಳ್ಮಣ್-ನಾಯಕ-ಸದಾನ್*
*6)ಗ್ರೌಂಡ್ ಫ್ರೆಂಡ್ಸ್ ಬೆಳ್ಮಣ್-ನಾಯಕ-ಗಣೇಶ್*
*7)ಟೀಮ್ ಆರ್.ಕೆ‌.ಕಾರ್ಕಳ-ನಾಯಕ-ಸತೀಶ್*
M9 ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು, ಹೆಚ್ಚಿನ ಮಾಹಿತಿಗಾಗಿ ಸತೀಶ್-9880587355
ಇವರನ್ನು ಸಂಪರ್ಕಿಸಬಹುದು.
Categories
Uncategorized

ಶ್ರೀಲಂಕಾದ ಈ ಸ್ಪೋಟಕ ಆಟಗಾರನ ಕಾಲಿನ‌ ಗಂಭೀರ ಕಾಯಿಲೆಯನ್ನು ಗುಣಪಡಿಸಿದ ಮುಂಬಯಿ ವೈದ್ಯ.

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಸೊಂಟ ಮತ್ತು ಕಾಲುಗಳಲ್ಲಿ   ಇದ್ದ ಕೆಲವು ಗಂಭೀರ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದರು, ಅವರು ಸ್ವಲ್ಪ ನಡೆಯಬೇಕಾದರೆ ಸ್ಟ್ಯಾಂಡ್ ಅನ್ನು ಆಶ್ರಯಿಸುತ್ತಿದ್ದರು.  ಜಯಸೂರ್ಯ ಅವರಿಗೆ ಆಸ್ಟ್ರೇಲಿಯಾದಲ್ಲಿ (ಮೆಲ್ಬೋರ್ನ್) ಮಾತ್ರವಲ್ಲದೆ ಶ್ರೀಲಂಕಾದ ಕೊಲಂಬೊದ ನವಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಅವರಿಗೆ ಎಲ್ಲಿಯೂ ಪರಿಹಾರ ಸಿಗಲಿಲ್ಲ.
ಜಯಸೂರ್ಯ ಅವರ ಈ ಸ್ಥಿತಿಯನ್ನು ನೋಡಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊ. ಅಜರುದ್ದೀನ್  ಆಯುರ್ವೇದ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುವ ಡಾ.ಪ್ರಕಾಶ್ ಟಾಟಾ ಅವರಿಂದ  ಚಿಕಿತ್ಸೆ ತೆಗೆದುಕೊಳ್ಳುವಂತೆ  ಸಲಹೆ ನೀಡಿದರು.  ಅಜರುದ್ದೀನ್‌ ಸಲಹೆ ಮೇರೆಗೆ ಜಯಸೂರ್ಯ ಮುಂಬೈಗೆ ಬಂದು ಡಾ. ಟಾಟಾ ಅವರ ನಿವಾಸಕ್ಕೆ ತೆರಳಿ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು, ನಂತರ ಡಾ. ಟಾಟಾ ಜಯಸೂರ್ಯರನ್ನು ಪರೀಕ್ಷಿಸಿ ಅವರನ್ನು ಗುಣಪಡಿಸುವ ಭರವಸೆ ನೀಡಿದರು.
ಈ ಕಾಯಿಲೆಯಿಂದ ಹೊರಬರಲು ಜಯಸೂರ್ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅಂತ ಡಾ. ಟಾಟಾ ಅವರಿಗೆ ಚೆನ್ನಾಗಿ ತಿಳಿದಿತ್ತು. ಜಯಸೂರ್ಯ ಅವರನ್ನ ವಾಪಸ್ ಶ್ರೀಲಂಕಾಗೆ ಕಳುಹಿಸಿ ಇನ್ನೊಬ್ಬ ವೈದ್ಯ ಮಾಕನ್ ವಿಶ್ವಕರ್ಮ ಅವರೊಟ್ಟಿಗೆ ಒಂದು ವಾರ  ಪಾತಾಳ್ಕೊಟ್ ನ ದಟ್ಟವಾದ ಕಾಡಿನಲ್ಲಿ ಒಂದು ವಾರ ಅಲೆದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಅದನ್ನು ಚಿಂದ್ವಾಡ ಕ್ಕೆ ತಂದು ಔಷಧವನ್ನು ತಯಾರಿಸಿದರು.
ಚಿಂದ್ವಾಡಾ ದಿಂದ 78 ಕಿ ಮಿ ದೂರ ಇರುವ ಪಾತಾಳ್ಕೊಟ್ ನ ಕಾಡು ಗಿಡಮೂಲಿಕೆಗಳನ್ನು ತುಂಬಿದೆ. ಅಪರೂಪದ ಗಿಡಮೂಲಿಕೆಗಳ  ಭಂಡಾರವೇ ಈ ಕಾದಲ್ಲಿ ಇದೆ ಅಂತ ಹೇಳಲಾಗುತ್ತದೆ. ಒಟ್ಟಾರೆ 89 ಚದರ ಕಿಮೀ ವ್ಯಾಪ್ತಿಯಲ್ಲಿರುವ ಈ ಕಣಿವೆ 1700 ಅಡಿ ಆಳದಲ್ಲಿದೆ.ಇಲ್ಲಿ ಸೂರ್ಯನ ಕಿರಣ ತಲುಪೋದು ಮಧ್ಯಾಹ್ನ 12 ಗಂಟೆಗೆ ಮಾತ್ರ.ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಗಿಡಮೂಲಿಕೆಗಳನ್ನು ಉಪಯೋಗಿಸಿ ಬೇರೆ ಕಡೆ ಗುಣಪಡಿಸಲಾಗದ ರೋಗವನ್ನೆಲ್ಲ ವಾಸಿ ಮಾಡ್ತಾರೆ ಅಂತಾನೂ ಹೇಳ್ತಾರೆ.
 ಗಿಡಮೂಲಿಕೆ ಸಂಗ್ರಹಿಸಿದ ನಂತರ, ಡಾ.ಪ್ರಕಾಶ್ ಟಾಟಾ ಸಹೋದ್ಯೋಗಿ ಜೈ ಹೋ ಫೌಂಡೇಶನ್ ಅಧ್ಯಕ್ಷ ತರುಣ್ ತಿವಾರಿ ಅವರೊಂದಿಗೆ ಶ್ರೀಲಂಕಾಕ್ಕೆ ತೆರಳಿದರು.  ಶ್ರೀಲಂಕಾ ತಲುಪಿದ ನಂತರ, ಜಯಸೂರ್ಯ ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿ ಕೇವಲ 72 ಗಂಟೆಗಳನ್ನು ತೆಗೆದುಕೊಂಡು ಜಯಸೂರ್ಯನನ್ನು ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡ್ತಾರೆ.
 ಮೆಲ್ಬೋರ್ನ್‌ ಹಾಗೂ ನವಲೋಕ್ ಆಸ್ಪತ್ರೆಯಲ್ಲಿ ಆಧುನಿಕ ವಿಜ್ಞಾನ ಮಾಡಲಾಗದ ಕೆಲಸವನ್ನು  ಭಾರತದ ಆಯುರ್ವೇದ  ಮಾಡಿ ಮುಗಿಸಿದೆ!
Categories
Uncategorized

ಉಡುಪಿ-ಸಾಗರ್ ಚಾಂಪಿಯನ್ಸ್ ಟ್ರೋಫಿ-2021 ಮಾರ್ಚ್ 13 ಮತ್ತು 14 ರಂದು.

ಸಾಗರ್ ಸ್ಪೋರ್ಟ್ಸ್ ಕ್ಲಬ್(ರಿ)
ಕುಕ್ಕಿಕಟ್ಟೆ ಇವರ ಆಶ್ರಯದಲ್ಲಿ,ರಂಜಿತ್ ಶೆಟ್ಟಿ ಅಂಬಲಪಾಡಿ ಇವರ ಗೌರವ ಉಪಸ್ಥಿಯಲ್ಲಿ,ಎ.ಕೆ.ಸ್ಪೋರ್ಟ್ಸ್ ನ ಮಾಜಿ ಆಟಗಾರ ಸಾಗರ್ ವಿಶ್ವ ಹಾಗೂ ಸಾಗರ್ ಪ್ರವೀಣ್ ಇವರ ಸಾರಥ್ಯದಲ್ಲಿ ಮಾರ್ಚ್ 13 ಮತ್ತು 14 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ “ಸಾಗರ್ ಚಾಂಪಿಯನ್ಸ್ ಟ್ರೋಫಿ-2021” ಪಂದ್ಯಾವಳಿ ಆಯೋಜಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಉಡುಪಿ,ದ.ಕ ಜಿಲ್ಲೆಯ ತಂಡಗಳ ಗಣನೀಯ ಇಳಿಕೆಯ ಪ್ರಮಾಣ ಮನಗಂಡು, ಉಡುಪಿ,ಕುಂದಾಪುರ,ಮಂಗಳೂರು ಪರಿಸರದ ಸ್ಥಳೀಯ ಆಟಗಾರರನ್ನು ರಾಜ್ಯ,ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಸಲುವಾಗಿ,ಸಾಗರ್ ಸ್ಪೋರ್ಟ್ಸ್ ಕ್ಲಬ್(ರಿ)ವಿಶಿಷ್ಟ,ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗೆ ಸೀಮಿತವಾಗಿರುವ
ಈ ಪಂದ್ಯಾಟದಲ್ಲಿ ಹೊರಹೊಮ್ಮಿದ ಯುವ ಪ್ರತಿಭೆಗಳನ್ನು ಒಗ್ಗೂಡಿಸುವ ಘನ ಉದ್ದೇಶ ಈ ಪಂದ್ಯಾಕೂಟದ್ದಾಗಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಸಾಗರ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾಕೂಟದ
ಪ್ರಥಮ‌ ಪ್ರಶಸ್ತಿ ವಿಜೇತ ತಂಡ 1,00,001 ನಗದು,ರನ್ನರ್ ಅಪ್,
50,005 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಾಗರ್ ವಿಶ್ವ-9844612725,ಸಾಗರ್ ಪ್ರವೀಣ್-9886324431,ಪ್ರಜ್ವಲ್-99019435220 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.