Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಭರವಸೆಯ ಬೆಳಕು

ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಯ ವೆಚ್ಚ ಭರಿಸಲು ಸ್ಪಂದನ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ  ಡಿಪಾರ್ಟ್ ಮೆಂಟ್ ಆಫ್ ಜನರಲ್ ಸರ್ವಿಸ್, ಏರ್ ಕಂಡೀಶನ್ ಡಿಪಾರ್ಟ್ ಮೆಂಟ್ ಇವರ ನೇತೃತ್ವದಲ್ಲಿ ಸ್ಪಂದನ ಟ್ರೋಫಿ-2024, ಸೀಸನ್ 2 ಎನ್ನುವ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಮಾಹೆ ಉದ್ಯೋಗಿಗಳಿಗೆ ಆಯೋಜಿಸಿದೆ. ಮಾರ್ಚ್ 16 ಮತ್ತು 17 ರಂದು ಮಾಹೆ ಎಂಡ್ ಪಾಯಿಂಟ್ ಗ್ರೌಂಡ್  ನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಈ ಟೂರ್ನಮೆಂಟ್ ಆಯೋಜನೆಗೊಂಡಿದೆ.
ಮಾರ್ಚ್ 16 ರಂದು  ಬೆಳಗಿನ ಜಾವ 10:00 ಗಂಟೆಗೆ ಈ ಪಂದ್ಯಾಟ ಉದ್ಘಾಟನೆ ನಡೆಯಲಿದೆ. ಮಾಹೆ ಮಣಿಪಾಲದ ಉಪಕುಲಪತಿ  ಲೆಫ್ಟಿನೆಂಟ್ ಜನರಲ್ ಡಾ.ಎಂ ಡಿ ವೆಂಕಟೇಶ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಈ ಟೂರ್ನಮೆಂಟ್ಗೆ ಚಾಲನೆ ನೀಡಲಿರುವರು. ಗೌರವ ಅತಿಥಿಗಳಾಗಿ ಮಾಹೆ ಮಣಿಪಾಲದ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಜಿ. ಸಿ. ಮುತ್ತಣ್ಣ, ಪ್ರೊ ವೈಸ್ ಚಾನ್ಸಲರ್ ಹೆಲ್ತ್ ಸೈನ್ಸಸ್ ನ ಡಾ. ಶರತ್ ರಾವ್ ಕೆ, ಕೆ ಎಂ ಸಿ ಮಣಿಪಾಲದ ಡೀನ್ ಡಾಕ್ಟರ್ ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್,ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಅವಿನಾಶ್ ಶೆಟ್ಟಿ,ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ (PHO) ವಿಭಾಗದ ಮುಖ್ಯಸ್ಥರು ಡಾ. ವಾಸುದೇವ್ ಭಟ್, ಉಜ್ವಲ್ ಕನ್ಸ್ಟ್ರಕ್ಷನ್ಸ್ ಮತ್ತು ಡೆವಲಪ್ ಮೆಂಟ್ ಮಣಿಪಾಲದ ಶ್ರೀ ಅಜಯ್ ಪಿ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.
17 ಮಾರ್ಚ್ 2024 ರಂದು ಟೂರ್ನಿಯು ಮುಕ್ತಾಯಗೊಂಡು ಆ ಬಳಿಕ ಸುಮಾರು ಐದೂವರೆ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಟೂರ್ನಮೆಂಟ್ ನ ಲೈವ್ ಸ್ಟ್ರೀಮಿಂಗ್ ಇರಲಿದೆ.
`Donate to Serve a Life’ಎಂಬ ಟ್ಯಾಗ್ ಲೈನ್ ನೊಂದಿಗೆ  ಮಣಿಪಾಲ್ ಆಕ್ಸೆಸ್ ಲೈಫ್ ಇದು ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹು-ಶಿಸ್ತಿನ ಬೆಂಬಲ ಆರೈಕೆಯನ್ನು ಒದಗಿಸುತ್ತದೆ. ‘.ಈ ಟೂರ್ನಿಯಿಂದ ಸಂಗ್ರಹಿಸಿದ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ಉಪಯೋಗಿಸಲಾಗುವುದು. ಮಕ್ಕಳ  ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ  ಈ ಕ್ರಿಕೆಟ್ ಪಂದ್ಯಾವಳಿಯು  ಬಹಳಷ್ಟು ಅರ್ಥಪೂರ್ಣವಾಗಿದೆ.
Categories
ಭರವಸೆಯ ಬೆಳಕು

ಜೇಸಿ ಸಪ್ತಾಹ ದಲ್ಲಿ ಝಹೀರ್ ಅಹಮದ್ ನಾಖುದಾ ರವರಿಗೆ ಸಾಧಕ ಸನ್ಮಾನ

ಕುಂದಾಪುರ-ಸೆಪ್ಟೆಂಬರ್ 9-2023 ರಂದು ನಡೆದ “ಜೇಸಿಐ ಕುಂದಾಪುರ ಸಿಟಿ ಜೇಸಿ ಸಪ್ತಾಹ -2023” ಅಭಿನಂಧನಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ,ಸಮಾಜ ಸೇವಕ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಗಂಗೊಳ್ಳಿಯ ಝಹೀರ್ ಅಹಮದ್ ನಾಖುದಾರವರನ್ನು “ಸಾಧಕ ಸನ್ಮಾನ” ರೂಪದಲ್ಲಿ ಗುರುತಿಸಿ ಸನ್ಮಾನಿಸಿಲಾಯಿತು.
ಕುಂದಾಪುರ ದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ  ಹಮ್ಮಿಕೊಳ್ಳಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಆಸ್ಪತ್ರೆಯಾ ವೈದ್ಯಾಧಿಕಾರಿ ಡಾ. ನಾಗೇಶ್ ಸರ್, ಕುಂದಾಪುರದ ಠಾಣಾಧಿಕಾರಿಯಾದ ವಿನಯ್ ಕೊರಳಹಳ್ಳಿ ಸರ್, ಜೇಸಿ ಸೌಜನ್ಯ ಹೆಗಡೆ, ಕೆ ಆರ್ ನಾಯ್ಕ್, ಜೇಸಿ ರಾಘವೇಂದ್ರ ಚರಣ ನಾವಡ, ಜೇಸಿ ನಾಗೇಶ್ ನಾವಡ, ಜೇಸಿಐ ಕುಂದಾಪುರದ ಅಧ್ಯಕ್ಷರಾದ ಡಾಕ್ಟರ್ ಸೋನಿ, ಸ್ಥಾಪಕ ಅಧ್ಯಕ್ಷ ಜೇಸಿ ಹುಸೇನ್ ಹೈಕಾಡಿ, ಕ್ರೀಡಾ ಸಾಧಕರದ ಸತೀಶ್ ಖಾರ್ವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಕ್ರೀಡಾ ಪ್ರೋತ್ಸಾಹಕರಾಗಿ ಗುರುತಿಸಿಕೊಂಡ ಜಹೀರ್ ಅಹಮದ್ ನಾಖುದಾ ಅವರಿಗೆ ಸ್ಪೋರ್ಟ್ಸ್  ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಅಭಿನಂದನೆಗಳು…
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್ ಭರವಸೆಯ ಬೆಳಕು

ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ವೈಷ್ಣವಿ ಕಡಿಯಾಳಿ

ವೈಷ್ಣವಿ ಆಚಾರ್ಯ ಕಡಿಯಾಳಿ ಎನ್ನುವ ಉಡುಪಿ  ಮೂಲದ ಹುಡುಗಿ  ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿಯಲ್ಲಿ ಕ್ರಿಕೆಟ್  ತರಬೇತಿಯನ್ನು ಪಡೆಯುತ್ತಿದ್ದು ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರು ಓಕೆಶನಲ್ಸ್  ತಂಡದ ಪರವಾಗಿ ಆಡುವ ಇವರು  ಬೌಲಿಂಗ್ ನಲ್ಲಿ ತಮ್ಮ ತಂಡಕ್ಕೆ ಪ್ರಧಾನ ಆಧಾರಸ್ತಂಭವಾಗಿದ್ದಾರೆ. ಇತ್ತೀಚೆಗೆ ಕೆ ಎಸ್ ಸಿ ಎ  ಆಯೋಜಿಸಿದ  ಜೆಎಸ್ಎಸ್  ಮೈದಾನದಲ್ಲಿ ನಡೆದ ಪಂದ್ಯಾಕೂಟದಲ್ಲಿ ಅತ್ಯುತ್ತಮವಾದ ಬೌಲಿಂಗ್ ದಾಳಿಯನ್ನು ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಿನರ್ವ ತಂಡದ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ  ತಾನು ಎಸೆದಂತ 6 ಓವರುಗಳಲ್ಲಿ 33ಕ್ಕೆ ಐದು ವಿಕೆಟ್  ಪಡೆದುಕೊಂಡು ಅತ್ಯುತ್ತಮ ಬೌಲರ್ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ತಾನು ಆಡಿದ ಎರಡನೇ ಪಂದ್ಯದಲ್ಲಿ  3 ಓವರುಗಳಲ್ಲಿ ಒಂದು ವಿಕೆಟ್ ಪಡಕೊಂಡು ವಿಜಯದ ರೂವಾರಿಯೂ ಈಕೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ನಿಯಂತ್ರಣಕಾರಿ ಬೌಲಿಂಗ್ ನಡೆಸಿದ್ದರು. ಬೆಂಗಳೂರು ಓಕೆಶನಲ್ಸ್ ನ್ನು ಪ್ರತಿನಿಧಿಸುವ ವೈಷ್ಣವಿ  ಕಡಿಯಾಳಿಯವರ ತಂಡ  ಇದೀಗ ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿದೆ. ತಮ್ಮ ತಂಡವನ್ನುಈ ಹಂತದ ವರೆಗೆ ಕರೆದೊಯ್ದ ಕೀರ್ತಿ ವೈಷ್ಣವಿ ಗೆ ಸಲ್ಲುತ್ತದೆ.
ಇಷ್ಟೇ ಅಲ್ಲದೆ  ಪ್ರಸ್ತುತ ಸನ್ನಿವೇಶದಲ್ಲಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯುವ ಸೆಲೆಕ್ಷನ್ ಟ್ರಯಲ್ಸ್ ಫಾರ್ ಅಂಡರ್ 19 ಗೆ ಸಿದ್ದತೆಯನ್ನು ನಡೆಸುತ್ತಿದ್ದಾರೆ.
ಈ ಮೊದಲು ಕಟಪಾಡಿಯ ಕೆ ಆರ್ ಎಸ್ ಅಕಾಡೆಮಿ ಮತ್ತು ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ವೈಷ್ಣವಿ ಕಡಿಯಾಳಿ ಅವರ ಪ್ರತಿಭೆಯನ್ನು  ಶಾಲಾ ಮತ್ತು ಸ್ಥಳೀಯ ಕ್ರೀಡಾಕೂಟಗಳಲ್ಲಿ ಗಮನಿಸಲಾಯಿತು. ಕ್ರಿಕೆಟ್ ನತ್ತ ಪ್ರೇರಣೆ ಪಡೆದು  ಕ್ರೀಡಾ ವೃತ್ತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಕೌಶಲ್ಯವನ್ನು ಸಾಬೀತು ಪಡಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿ ಸೇರಿ ವೃತ್ತಿಪರ ತರಬೇತಿಯನ್ನು  ಬೌಲಿಂಗ್ ಕೋಚ್ ಆದ ಮೊಹಮ್ಮದ್ ಆಲಿ ಮತ್ತು ನೂರುದ್ದೀನ್ ಇವರುಗಳ ಮಾರ್ಗದರ್ಶನದಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.  ತನ್ನ ಕನಸನ್ನು ಸಾಧಿಸಲು ತನ್ನ ತನ್ಮನಗಳನ್ನು ಸಮರ್ಪಿಸಿ ನಿಯಮಿತ  ಅಭ್ಯಾಸವನ್ನು ನಡೆಸಿ ತನ್ನ ಕನಸನ್ನು ಮುಂದುವರೆಸುತ್ತಿದ್ದಾರೆ.
ವೈಷ್ಣವಿ ಕಡಿಯಾಳಿ ಎನ್ನುವ ಪ್ರತಿಭೆ ಇದೇ ರೀತಿ ಮುಂದುವರೆದು ಶ್ಲಾಘನೀಯ ಪ್ರದರ್ಶನ ನೀಡಿ ಉಡುಪಿಯನ್ನು ಹೆಮ್ಮೆಪಡುವಂತೆ ಮಾಡಲಿ.
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಚೆಸ್ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಗ್ನಾನಂದ್

ಭಾರತದ ಭರವಸೆಯ ಯುವ ಚೆಸ್ ಆಟಗಾರ ಆರ್.ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಸ್ಟರ್​ ಗೇಮ್​ ಚೆಸ್​ನಲ್ಲಿ ತಮಿಳುನಾಡಿನ 16 ರ ಹರೆಯದ ಹುಡುಗ ಜೂನಿಯರ್ ಗ್ರಾಂಡ್ ಮಾಸ್ಟರ್  ಆರ್​  ಪ್ರಗ್ನಾನಂದ್​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ರನ್ನು ಮತ್ತೊಮ್ಮೆ ಸೋಲಿಸುವ ಮೂಲಕ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಶಾಕ್​ ನೀಡಿದ್ದಾರೆ.
ಆರ್ ಪ್ರಗ್ನಾನಂದ್ ರ  ಗೆಲುವನ್ನು ಚೆಸ್ ಲೋಕ ಸಂಭ್ರಮಿಸಿದೆ. ಸೆಮಿಫೈನಲ್‌ನಲ್ಲಿ ಪ್ರಗ್ನಾನಂದನ್ ಅವರು ಟೈಬ್ರೇಕರ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಗ್ನಾನಂದ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಈ ಗೆಲುವಿನೊಂದಿಗೆ ಪ್ರಗ್ನಾನಂದ ಅವರು ಫಿಡೆ ಚೆಸ್ ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ್ ಅವರು ಪ್ರಗ್ನಾನಂದ ಅವರಿಗಿಂತ ಮೊದಲು ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಗ್ನಾನಂದನ್ ಈಗ ಕಾರ್ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ಸನ್‌ರನ್ನು ಎದುರಿಸಲಿದ್ದಾರೆ. ಪ್ರಗ್ನಾನಂದನ್ ಫೈನಲ್ ಪಂದ್ಯದಲ್ಲಿ FIDE ಚೆಸ್ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ.
ಈ ಗೆಲುವಿಗಾಗಿ ಮಾಜಿ ವಿಶ್ವ ಚಾಂಪಿಯನ್ ಮತ್ತು ರಷ್ಯಾದ ಚೆಸ್ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಪ್ರಗ್ನಾನಂದ ಅವರನ್ನು ಅಭಿನಂದಿಸಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಪ್ರಶಸ್ತಿ ಹಣಾಹಣಿಗಾಗಿ ಅವರಿಗೆ ಶುಭ ಹಾರೈಸಿದರು.
ಪ್ರಗ್ನಾನಂದ್ ಅವರನ್ನು ಈ ಹಂತಕ್ಕೆ ತಲುಪುವಲ್ಲಿ ಅವರ ತಾಯಿ ನಾಗಲಕ್ಷ್ಮಿ ಅವರ ಪಾತ್ರವಿದೆ,  ಈ ಪಂದ್ಯಾವಳಿಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪ್ರಗ್ನಾನಂದ್ ಅವರು ತಮ್ಮ ತಾಯಿಯ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ನನ್ನ ತಾಯಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ತಾಯಿಯೇ ನನ್ನ ದೊಡ್ಡ ಬೆಂಬಲ ಮತ್ತು ನನಗೆ  ಸರ್ವಸ್ವ! ಆಟದಲ್ಲಿ ಸೋತ ನಂತರವೂ, ಅವಳು ನನ್ನನ್ನು ನಿಭಾಯಿಸಲು ಮತ್ತು ಶಾಂತಗೊಳಿಸಲು ಪ್ರಯತ್ನಿಸುತ್ತಾಳೆ ಎಂದು ಅವರು ಹೇಳಿದರು. ಇದರೊಂದಿಗೆ ಪ್ರತಿ ಟೂರ್ನಮೆಂಟ್‌ಗೆ ಮಗನ ಜೊತೆಗಿರುವ ಪ್ರಗಣಾನಂದ್ ಅವರ ತಾಯಿಯೂ ಮೆಚ್ಚುಗೆಗೆ ಪಾತ್ರರಾದರು.
Categories
ಭರವಸೆಯ ಬೆಳಕು

ಆಗಸ್ಟ್ 06 ರಂದು ಬೆಂಗಳೂರಿನಲ್ಲಿ ಕರಾವಳಿ ಸಿರಿ ಕ್ಲಬ್ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ!!

ಸಣ್ಣದೊಂದು ಕನಸು ದೊಡ್ಡ ಯೋಚನೆ ಮೂಲಕ ಚಿಕ್ಕ ತಂಡದೊಂದಿಗೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ ಭರವಸೆಯ ಬೆಳಕಾಗಿ  ಒಂದು ಸಂಘಟನೆ ಪ್ರಾರಂಭವಾಗುತ್ತಾ ಇದೆ.
ಇದರ ಉಧ್ಘಾಟನಾ ಸಮಾರಂಭ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಾಳೆಯ ದಿನ ತಾರೀಕು  6 ಆಗಸ್ಟ್ ಭಾನುವಾರದಂದು ಬೆಂಗಳೂರಿನ ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, N1&2,5ನೇ ವಾರ್ಡ್, 8ನೇ ಅಡ್ಡ ರಸ್ತೆ, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ದಲ್ಲಿರುವ ನಾರಾಯಣ ಗುರು ಸಭಾಭವನ  ಇಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಶ್ರೀ ಮಹಾಲಕ್ಷ್ಮಿ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರು ಮತ್ತು ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರು ಆಗಿರುವಂತಹ ಶ್ರೀ ಗೋವಿಂದ ಬಾಬು ಪೂಜಾರಿ ಇವರು ಕರಾವಳಿ ಸಿರಿ ಕ್ಲಬ್ ಬೆಂಗಳೂರುನ ಉದ್ಘಾಟನೆ ಮಾಡಲಿರುವರು. ಇವರೊಂದಿಗೆ ಅನೇಕ ಚಲನ ಚಿತ್ರ ನಟರು,  ಸಿನಿಮಾ ನಿರ್ಮಾಪಕರು, ಚಲನ ಚಿತ್ರ ನಿರ್ದೇಶಕರು ಮತ್ತು  ಹೆಸರಾಂತ ನಿರೂಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಭಾಗವಹಿಸಲಿದ್ದಾರೆ.  ಸ್ಪೋರ್ಟ್ಸ್ ಕನ್ನಡ ವೆಬ್ ಸೈಟ್ ನ ಪ್ರಧಾನ ಸಂಪಾದಕ  ಕೋಟ ಶ್ರೀ ರಾಮಕೃಷ್ಣ ಆಚಾರ್ಯ ಇವರ ಗೌರವ ಉಪಸ್ಥಿತಿಯಲ್ಲಿ, ಪತ್ರಕರ್ತ ಮತ್ತು ಅಭಿಮತ ತಂಡದ ಸಂಸ್ಥಾಪಕ ವಸಂತ ಗಿಳಿಯಾರ್, ಬೆಂಗಳೂರಿನ ಹೋಟೆಲ್ ಉದ್ಯಮಿ ರಘುರಾಮ ಶೆಟ್ಟಿ ಮತ್ತು ಚಲನಚಿತ್ರ ನಟಿ ಅನುಷಾ ರೈ ಉಪಸ್ಥಿತರಿರುವರು. ಈ ಸಂದರ್ಭ ಸಮಾಜಸೇವೆ, ಸಂಗೀತ, ಯಕ್ಷಗಾನ  ಕಲಾಕ್ಷೇತ್ರಗಳಲ್ಲಿ  ಸಾಧನೆಯನ್ನು ಮಾಡಿದಂತಹ ಕರಾವಳಿಯ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಗೌರವಾರ್ಪಣೆ ಕಾರ್ಯಕ್ರಮವು ಕೂಡ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದ ನಂತರ ನಂತರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೈಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಸಾರಥ್ಯದ ಕಲಾಶಕ್ತಿ ಕನ್ನುಕೆರೆ ತೆಕ್ಕಟ್ಟೆ ಇವರಿಂದ ‘ನಗೆ ಕೊಪ್ಪರಿಗೆ’ ಎಂಬ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ‘ಯಕ್ಷಗಾನ ನಾಟ್ಯ ವೈಭವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಸಿರಿ ಕ್ಲಬ್  ನ  ಈ ಎಲ್ಲಾ ಕಾರ್ಯಕ್ರಮಗಳಿಗೆ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಲಿದ್ದು, ಸ್ಪೋರ್ಟ್ಸ್ ಕನ್ನಡ ಸಂಪೂರ್ಣ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
ಜಾತಿ, ಧರ್ಮದ ಭೇದವಿಲ್ಲದೆ ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧರಾಗಿ, ಸಂಘಟನೆಯ ಮೂಲಕ ಸಮಾಜಸೇವೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಸಿರಿ ಕ್ಲಬ್ ನ ಎಲ್ಲಾ ಉದ್ದೇಶಗಳು, ಯೋಜನೆಗಳು ಈಡೇರಲಿ. ನಮ್ಮ ನುಡಿ, ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ ಮುಂದಿನ ಹೆಜ್ಜೆ ಇಡುವಂತಾಗಲಿ.
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.

ಕರಾವಳಿ ಎನ್ನುವುದೇ ಒಂದು ಸೊಬಗು. ಪರಶುರಾಮನ ಈ ನಾಡು ಅನ್ನುವುದೇ ಒಂದು ಆಕರ್ಷಣೆ….!
ಇಲ್ಲಿನ ಕಡಲು, ಮತ್ತದರ ಕಿನಾರೆಗಳು, ನದಿ, ಗುಡ್ಡಗಳು, ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಬಣ್ಣಿಸಲಾಗದಷ್ಟು ಅಧ್ಭುತ. ಕರಾವಳಿಯ ಗಂಡುಕಲೆ ಯಕ್ಷಗಾನ,ಭೂತಾರಾಧನೆ, ಕಂಬಳ,ತೇರು, ಜಾತ್ರೆ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಪಟ್ಟಿ.  ಈ ಕರಾವಳಿ ಎನ್ನುವ ಬೆರಗಿನೊಳಗೆ ಯಾವುದೂ ಇಲ್ಲ ಹೇಳಿ?? ಅದನ್ನೆಷ್ಟು ಕಣ್ತುಂಬಿ ಕೊಂಡರೂ ಅದು ಕಮ್ಮಿಯೇ.. ಬೆಂಗಳೂರು ನಗರದಲ್ಲೂ ಸಾಕಷ್ಟು ಕರಾವಳಿಗರು ನೆಲೆಸಿದ್ದಾರೆ. ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಹೀಗೆ ವಿವಿಧ ಪ್ರಕಾರಗಳಲ್ಲಿ ಚಟುವಟಿಕೆ ನಡೆಸಲು ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮದೇಯದೊಂದಿಗೆ ಒಂದು  ವಿಶೇಷ  ಸಂಸ್ಥೆ  ಹುಟ್ಟಿಕೊಂಡಿದೆ. ಸಣ್ಣದೊಂದು ಕನಸು ದೊಡ್ಡ ಯೋಚನೆಯೊಂದಿಗೆ ಚಿಕ್ಕ ತಂಡದೊಂದಿಗೆ ನಮ್ಮ ನಿಮ್ಮೆಲ್ಲರ  ಮುಂದೆ ಭರವಸೆಯ ಬೆಳಕಾಗಿ ಇದು ಬರಲಿದೆ….
ಬರುವ ಆಗಸ್ಟ್ 6 ರಂದು  ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ಬೆಂಗಳೂರು ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ  ಈ ಸಂಸ್ಥೆಯ  ಉದ್ಘಾಟನಾ ಕಾರ್ಯಕ್ರಮ. ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕರಾವಳಿ ಸಿರಿ ಕ್ಲಬ್ ನಡೆಸುವ ಚಟುವಟಿಕೆಗಳು ಬೆಂಗಳೂರು ನಗರದಲ್ಲಿ ನೆಲೆಸಿರುವ ಕರಾವಳಿಯ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆ.  ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಉದಯೋನ್ಮುಖ ಹಾಗೂ ಪ್ರತಿಭಾವಂತ ಕರಾವಳಿಯ ಮಕ್ಕಳಿಂದ ವಿವಿಧ ರೀತಿಯ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಾಂಸ್ಕೃತಿಕ ಪರಂಪರೆ ಮತ್ತು ಎಲ್ಲಾ ಸಂಸ್ಕೃತಿಗಳ ಸಮಾನ ಘನತೆಯನ್ನು ಉತ್ತೇಜಿಸುವ ಮೂಲಕ,  ಬೆಂಗಳೂರಲ್ಲಿ ವಾಸವಾಗಿರುವ ಕರಾವಳಿಗರ ನಡುವಿನ ಬಾಂಧವ್ಯವನ್ನು ಈ ಸಂಸ್ಥೆ ಬಲಪಡಿಸಲಿದೆ,
ಕರಾವಳಿ ಸಿರಿ ಕ್ಲಬ್ ಬೆಂಗಳೂರಿನ  ಗುರಿ “ಶಾಂತಿ ನಿರ್ಮಾಣಕ್ಕೆ ಕೊಡುಗೆ ನೀಡುವುದು, ಬಡತನದ ನಿರ್ಮೂಲನೆ, ಉದಯೋನ್ಮುಖ ಸಾಮಾಜಿಕ ಮತ್ತು ನೈತಿಕ ಸವಾಲುಗಳನ್ನು ಪರಿಹರಿಸುವುದು, ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಳೆಸುವುದು. ಬೆಂಗಳೂರು ನಗರದಲ್ಲಿ ಈ ಸಂಸ್ಥೆಯು ಏರ್ಪಡಿಸುವ ನಿರಂತರ  ಕಾರ್ಯಕ್ರಮಗಳು ಬೆಂಗಳೂರು ಕರಾವಳಿಗರ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಿದೆ. ಈ ಸಂಸ್ಥೆಯೇ ಹೇಳುವ ಪ್ರಕಾರ  ಕೀರ್ತಿ ಸಂಪಾದಿಸುವ ಯೋಚನೆ ಅವರದಲ್ಲ , ಆಸೆ ಆಕಾಂಕ್ಷಿಗಳನ್ನ ಹೊತ್ತು ಬರುವ ತಂಡ  ಕರಾವಳಿ ಸಿರಿ ಕ್ಲಬ್ ನದ್ದಲ್ಲ..
ಯೋಚನೆಗಳು ಇಂತಿವೆ…
1) ರಕ್ತದಾನ ಶ್ರೇಷ್ಠದಾನ ಅಮೂಲ್ಯ ದಾನವಂತೆ  ಮಂಗಳೂರು, ಉಡುಪಿ, ಕುಂದಾಪುರ ಭಾಗದವರು ಬೆಂಗಳೂರಿನ ಕಡೆ ಬಂದಾಗ ರಕ್ತದ ಅವಶ್ಯಕತೆ ಇದ್ದಾಗ ಅಂತವರ ನೆರವಿಗೆ  ಒಂದು ತಂಡವಾಗಿ ಬರುವ ಕಲ್ಪನೆಯೊಂದಿಗೆ….
2) ಸ್ವಚ್ಛ ಭಾರತ್ ಕನಸಿನೊಂದಿಗೆ ಮುಂದಿರುವ ಹಾದಿಯೊಂದಿಗೆ ಮುಂದಿರುವ ಯೋಚನೆಗಳೊಂದಿಗೆ….
3) ಕರಾವಳಿಯ  ನಮ್ಮ ನುಡಿಯನ್ನ ,ನಮ್ಮ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ…
4) ಕ್ರೀಡೆಗಳಲ್ಲಿ ಪ್ರತಿಬಿಂಬಿಸುವ ಹಾಗೆ
5)  ಆರ್ಥಿಕವಾಗಿ ಸಾಮಾಜಿಕವಾಗಿ ಯೋಚನೆಗೂ ಮಿಲುಕದ ಅತಿ ಹೀನ ಪರಿಸ್ಥಿತಿಯಲ್ಲಿರುವ  ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರಾಗಿ ನೆರವಾಗುವ ಬಗ್ಗೆ…
6) ನೆರೆ ಹೊರೆ ಹಾನಿಗಳ ವಿಚಾರವಾಗಿ ಸ್ವಯಂಸೇವಕರಂತೆ ತೊಗಡಗಿಸಿಕೊಳ್ಳುವ ಬಗ್ಗೆ…
7) ದೂರದ ಊರಿಂದ ಬಂದು ಬೆಂಗಳೂರಿನಲ್ಲಿ ಸಣ್ಣಪುಟ್ಟ ಕನಸಿನೊಂದಿಗೆ   ಹೋಟೆಲ್ , ಬೇಕರಿ ಮಾಡಿಕೊಂಡು ಜೀವನ ನಡೆಸುವವರಿಗೆ ಸಮಸ್ಯೆ ಬಂದಾಗ ಅವರ ಪರವಾಗಿ ನಿಲ್ಲುವ ಬಗ್ಗೆ  …
8) ಕರಾವಳಿಯ ಸಂಸ್ಕೃತಿಯನ್ನಎತ್ತಿ ಹಿಡಿಯುವ ಬಗ್ಗೆ
ಇವರಲ್ಲಿರುವ ಕನಸುಗಳು ನೂರೊಂದು. ಹೀಗೆ ಹಲವು ಕನಸುಗಳು ಕೂಡಿಕೊಳ್ಳಲಿದೆ … ಕರಾವಳಿ ಸಿರಿ ಕ್ಲಬ್ ಕನಸನ್ನ ಕಂಡಿದೆ. ಇದು ಅವರಿಗಾಗಿ ಕಂಡ ಕನಸಲ್ಲ.  ನಮ್ಮವರಿಗಾಗಿ ಕಂಡಂತ ಕನಸು ….
ಪ್ರೋತ್ಸಾಹಿಸುವ ವಿಚಾರ ನಮ್ಮೆಲ್ಲ ಕರಾವಳಿಗರದ್ದು , ನಾವೂ ಕೂಡ ಅವರಲ್ಲಿಲ್ಲಿ ಒಬ್ಬರು ಎನ್ನುವ ಹಾಗೆ ಹರಸಿ ಹಾರೈಸಿ ಆಶೀರ್ವದಿಸೋಣ….
Categories
ಭರವಸೆಯ ಬೆಳಕು

ಸರಳ ಇಂಗ್ಲೀಷ್ ಕಲಿಕೆಗೆ ಪೂರಕ ಚಟುವಟಿಕೆ ಆಧಾರಿತ ಪುಸ್ತಕ ಕೊಡುಗೆ ನೀಡಿದ ಗೌತಮ್ ಶೆಟ್ಟಿ

ಕೊರವಡಿ  ಅಂಗನವಾಡಿ ಕೇಂದ್ರಕ್ಕೆ ಉಚಿತ ಪುಸ್ತಕ ವಿತರಣೆ
ಕುಂದಾಪುರ:  ಇಲ್ಲಿಗೆ ಸಮೀಪದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ  ದಿನಾಂಕ 12 ಜುಲೈ, 2023ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ  ಶ್ರೀಯುತ ಗೌತಮ್ ಶೆಟ್ಟಿ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನುಉಚಿತವಾಗಿ ವಿತರಿಸಲಾಯಿತು.
”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು  ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ  ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ.
ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ ಬಡ ಮಕ್ಕಳ ಭವಿಷ್ಯ ಬದಲಾಗಲಿದೆ ಮತ್ತು ಅನಕ್ಷರತೆ ನಿವಾರಣೆಯಾಗುತ್ತದೆ ಎನ್ನುವುದು ಗೌತಮ್ ಶೆಟ್ಟಿಯವರ ಚಿಂತನೆ.
ಈ ಕಾರ್ಯಕ್ರಮಕ್ಕೆ ಶಾಲಾ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ  ಸಂಧರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ್ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು,  ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಪ್ರಭಾವತಿ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೋಜಾ, ಅಂಗನವಾಡಿ ಹಿತೈಷಿ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ,ದಿನೇಶ್ ಮೊಗವೀರ ಉಪಸ್ಥಿತರಿದ್ದರು. ಸಹಶಿಕ್ಷಕಿ ನೇತ್ರಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಂತಿ ಡಿಸೋಜಾ, ಶ್ರೀಮತಿ ಶೋಭಾ ಪೂಜಾರ್ತಿ, ಅತಿಥಿ ಶಿಕ್ಷಕಿ ಸುದೀಪ, ಗೌರವ ಶಿಕ್ಷಕಿಯರಾದ ಜ್ಯೋತಿ, ಪ್ರಮೀಳಾ, ಕಾವ್ಯ, ಅಂಗನವಾಡಿ ಸಹಾಯಕಿ ಪದ್ಮಾವತಿ ಸಹಕರಿಸಿದರು.  ಅಂಗನವಾಡಿ ಶಿಕ್ಷಕಿ ಶ್ರೀಮತಿ ಶೋಭಾ ವಂದನಾರ್ಪಣೆಗೈದರು.
Categories
ಕ್ರಿಕೆಟ್ ಭರವಸೆಯ ಬೆಳಕು

ಸಿನಿಮಾ ರಂಗಕ್ಕೆ ಸಿ‌.ಸಿ‌‌.ಎಲ್ ಖ್ಯಾತಿಯ ರಾಜೀವ್ ಹನು ಭರ್ಜರಿ ಕಮ್ ಬ್ಯಾಕ್-ಉಸಿರೇ ಉಸಿರೇ ನಾಯಕ ನಟನಾಗಿ ಎಂಟ್ರಿ…!!!

ರಾಜೀವ್ ಹನು ಕನ್ನಡ ಚಿತ್ರರಂಗದ ಪ್ರಮುಖ ನಟ. ಬಾಲ್ಯದಲ್ಲಿ, ಅವರು ಅನೇಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಶಾಲಾ ಕ್ರೀಡಾ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ರಾಜೀವ್ ಫಿಟ್ನೆಸ್ ಉತ್ಸಾಹಿ. ಅವರು ತನ್ನ ದಿನವನ್ನು ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಮೂಲಕ ಪ್ರಾರಂಭಿಸುತ್ತಿದ್ದರು. 2006 ರಲ್ಲಿ ಶ್ರೀ ರೇಣು ಗೌಡರು ಬೆಂಗಳೂರಿನ ಟೀಮ್ ಫ್ರೆಂಡ್ಸ್ ಬೆಂಗಳೂರಿನಲ್ಲಿ ಅವರನ್ನು ಕ್ರಿಕೆಟ್‌ಗೆ ಪರಿಚಯಿಸಿ ಅಂದಿನಿಂದ ರಾಜೀವ್  ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಹಿಂತಿರುಗಲಿಲ್ಲ.
ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ರೇಣು ಗೌಡರ ಮಾಲೀಕತ್ವದ ಬಲಿಷ್ಠ  ಫ್ರೆಂಡ್ಸ್ ಬೆಂಗಳೂರು ತಂಡದ ಬಲಾಢ್ಯ ಬ್ಯಾಟಿಂಗ್ ಅಸ್ತ್ರವಾಗಿ ಆ ತಂಡವನ್ನು ಕೂಡ ಪ್ರತಿನಿಧಿಸಿದರು. ಪಡುಬಿದ್ರಿಯಲ್ಲಿ ನಡೆದ ವೆಂಕಟೇಶ್ ಟ್ರೋಫಿ 2016ರಲ್ಲಿ ಶರತ್ ಶೆಟ್ಟಿಯವರು  ರಾಜೀವ್ ಗೆ ಅಭಿನಂದನೆ ಸಲ್ಲಿಸಿ ಗೌರವಿಸಿದ್ದರು. ಎಂಪಿಎಲ್ ಮಂಗಳೂರು ಪ್ರೀಮಿಯರ್ ಲೀಗ್  ನಲ್ಲಿ ಬೆದ್ರ ಬುಲ್ಸ್ ಟೀಮ್‌ನ ಪರವಾಗಿ ಆಡಿದ ಸ್ಟಾರ್ ಪ್ಲೇಯರ್ ರಾಜೀವ್ ಹನು.
ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಸುದೀಪ್ ಅವರು ರಾಜೀವ್ ಅವರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಪರಿಚಯಿಸಿದರು. ಜನಪ್ರಿಯ  ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ( CCL)ನ ಭಾಗವಾಗಿದ್ದ ರಾಜೀವ್, ದಕ್ಷಿಣ ಭಾರತದ ಖ್ಯಾತ ನಟ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಆಡಿದ ಆಲ್‌ರೌಂಡರ್  ಕ್ರಿಕೆಟಿಗ.  ರಾಜೀವ್ ಲೀಗ್‌ನಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅವರು ಒಮ್ಮೆ 33 ಎಸೆತಗಳಲ್ಲಿ 111 ರನ್ ಗಳಿಸಿದರು.ಇದು ನಿಜವಾಗಿಯೂ ವಿಶೇಷವಾಗಿತ್ತು ಏಕೆಂದರೆ ಆಗ ಅವರು ಕೇವಲ 24 ದಿನಗಳ ಹಿಂದೆ ಮೊಣಕಾಲಿನ ಆಪರೇಷನ್ ಆಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದರು.  ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ವಿವಿಧ ಸೀಸನ್‌ಗಳಲ್ಲಿ ಆಡಿ ರಾಜೀವ್ ಬಹಳ ಪ್ರಸಿದ್ಧರಾದರು.
ಇದೀಗ ನಟನಾಗಿ ಪರಿವರ್ತಿತ ಕ್ರಿಕೆಟಿಗ ರಾಜೀವ್ ಹನು ಸಿನಿಮಾ ಲೋಕ ದಲ್ಲಿ ಮಿಂಚುತಿದ್ದಾರೆ. ಅವರು ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಕನ್ನಡ ಸೀನ್ 8 ರ ಕನ್ನಡ ಆವೃತ್ತಿಯಲ್ಲಿ ಇತರ ಸ್ಪರ್ಧಿಗಳೊಂದಿಗೆ ಪ್ರಬಲ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ರಾಜೀವ್ ಅವರು 2007 ರಲ್ಲಿ ಸ್ನೇಹನಾ ಪ್ರೀತೀನಾ ಚಿತ್ರದ ಮೂಲಕ ದಕ್ಷಿಣ-ಭಾರತೀಯ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.  ಇಲ್ಲಿಯವರೆಗೆ ಹಲವಾರು ಜನಪ್ರಿಯ  ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಜಿಂದಗಿ, RX ಸೂರಿ, ಅಮವಾಸೆ, ಬೆಂಗಳೂರು 560023 ಇತ್ಯಾದಿ. ‘ಹೆಬ್ಬುಲಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಇದೀಗ  ‘ಉಸಿರೇ ಉಸಿರೆ’ ಎಂಬ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಅಫೀಷಿಯಲ್ ಟೀಸರ್ ಇತ್ತೀಚೆಗಷ್ಟೇ  ಬಿಡುಗಡೆ ಆಗಿದೆ, ಏತನ್ಮಧ್ಯೆ, ಕಿಚ್ಚ ಸುದೀಪ್, ಪಾಪ್ಯುಲರ್ ಸಿಸಿಎಲ್ ಪ್ಲೇಯರ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ, ರಾಜೀವ್ ಅವರ ಚೊಚ್ಚಲ ಚಿತ್ರ ಉಸಿರೇ ಉಸಿರೇಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಜೀವ್ ನಾಯಕನಾಗಿ ನಟಿಸುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ‘ಸ್ತ್ರೀಶಕ್ತಿ’ ಚಿತ್ರದಲ್ಲಿ ನಟಿಸಿದ್ದರು.  ಅದರ ನಂತರ ರಾಜೀವ್ ಪೋಷಕ ಪಾತ್ರಗಳಿಗೆ ಸೀಮಿತರಾದರು. ಇದೀಗ ರಾಜೀವ್ ಈ ಚಿತ್ರದ ಮೂಲಕ ನಾಯಕನಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಉಸಿರೇ ಉಸಿರೇ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹೀರೊ. ರಾಜೀವ್ಗೆ ಶ್ರೀಜಿತ ಹೀರೊಯಿನ್. ಇವರೊಂದಿಗೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಲಿ, ಬ್ರಹ್ಮಾನಂದಂ, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವ, ಸುಶ್ಮಿತಾ  ಅವರಂತಹ ನಟರನ್ನು ಒಳಗೊಂಡಿದೆ.
ಚಿತ್ರವನ್ನು ಹೆಚ್ ಆರ್ ರಾಜೇಶ್ ನಿರ್ಮಿಸುತ್ತಿದ್ದು, ಸಿ ಎಂ ವಿಜಯ್ ನಿರ್ದೇಶಿಸುತ್ತಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಕರು.
ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಹಿರಿಯ, ಕಿರಿಯ ಕ್ರಿಕೆಟಿಗರೊಂದಿಗೆ ಜೀವನದ ಅನುಭವಗಳನ್ನು ಹಂಚಿಕೊಂಡು,ಮಕ್ಕಳು ಹಾಗೂ ಪೋಷಕರಿಗೆ ಕ್ರೀಡೆಯ ಮಹತ್ವವನ್ನು ವಿವರಿಸಿದ ಚಲನಚಿತ್ರ ನಟ,ಸಿ‌.ಸಿ‌‌.ಎಲ್ ಖ್ಯಾತಿಯ ರಾಜೀವ್ ಹನುಗೆ ಅಭಿನಂದನೆಗಳು.
ರಾಜೀವ್ ಹನು ಮತ್ತು ‘ಉಸಿರೇ ಉಸಿರೆ’ ಚಿತ್ರಕ್ಕೆ  ರಾಜ್ಯ ಟೆನ್ನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್, ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ವತಿಯಿಂದ  ಶುಭಾಶಯಗಳು…
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಭರವಸೆಯ ಬೆಳಕು ಸ್ಪೋರ್ಟ್ಸ್

ಆಟ ಎನ್ನುವುದು ಭಗವಂತನ ಲೀಲೆ”….ವೇದ ಬ್ರಹ್ಮಶ್ರೀ ವಂಡಾರು ಶ್ರೀ ರಮೇಶ್ ಬಾಯರಿ

ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್​ ಲೈವ್ ಚಾನೆಲ್​ ಬಿಡುಗಡೆ!
ಕ್ರಿಕೆಟ್ ನ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ​ ಸ್ಪೋರ್ಟ್ಸ್ ಕನ್ನಡ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಜನಪ್ರಿಯವಾಗಿದೆ. ಇದೀಗ ನಾಲ್ಕನೇಯ  ವಾರ್ಷಿಕೋತ್ಸವದ ಸಂಭ್ರಮದ ದಿನದಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್  ತನ್ನದೇ  ಆದ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು  ನೇರ ಪ್ರಸಾರಗೊಳಿಸಲು ಸ್ಪೋರ್ಟ್ಸ್ ಕನ್ನಡ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದೆ. ಜುಲೈ 07 ರಂದು ಉಡುಪಿಯ ವಂಡಾರು ಕ್ಷೇತ್ರದಲ್ಲಿ ಪ್ರಾರಂಭವಾದ ಈ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್  ರಾಜ್ಯ ಟೆನಿಸ್ ಕ್ರಿಕೆಟ್ ಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಜುಲೈ 7, ಶುಕ್ರವಾರದ  ಶುಭದಿನದಂದು, ಬೆಳಗ್ಗಿನ ಶುಭಮುಹೂರ್ತದಲ್ಲಿ ಇಲ್ಲಿನ ವಂಡಾರು ಸುಬ್ರಹ್ಮಣ್ಯ ನಿಲಯದಲ್ಲಿ ಪೂಜ್ಯನೀಯ ಗುರುಗಳು, ವೇದ ಬ್ರಹ್ಮಶ್ರೀ  ಶ್ರೀ. ರಮೇಶ್ ಬಾಯರಿ ವಂಡಾರು ಅವರ ಉಪಸ್ಥಿತಿಯಲ್ಲಿ ಆಶೀರ್ವಚನದೊಂದಿಗೆ  ಆರಂಭಿಸಿದ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್​ ಲೈವ್ ಚಾನೆಲ್ ಹೆಸರಿನ ಚಾನೆಲ್  ತನ್ನ  ಚಾನೆಲ್ ನ ಪ್ರೊಮೊ ಬಿಡುಗಡೆಗೊಳಿಸಿತು.  07.07.2023 ಮುಂಜಾನೆ  07:07 ಕ್ಕೆ ದೀಪ ಪ್ರಜ್ವಲನೆ ಮೂಲಕ ಈ   ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸ್ಪೋರ್ಟ್ಸ್ ಕನ್ನಡ ಮೀಡಿಯಾ ಬಳಗದ  ಯೂಟ್ಯೂಬ್‌ ಚಾನೆಲ್‌ ನ್ನು ಪೂಜ್ಯನೀಯ ಗುರುಗಳು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರ ಮಾತಿನ ಸಾರ ಇಲ್ಲಿದೆ.
*”ಸ್ಪೋರ್ಟ್ ಕನ್ನಡ ಕಳೆದ ನಾಲ್ಕು ವರ್ಷಗಳಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಇದೀಗ ಆ ಸಾಧನೆಯ 2ನೇ ಹಂತವನ್ನು ಇಂದು ಆರಂಭಿಸುತ್ತಾ ಇದೆ.  ಆಟ ಎನ್ನುವುದು ಭಗವಂತನ ಲೀಲೆ. ಅದು ಮನಸಿಗ್ಗೆ ಹಿತವನ್ನು ನೀಡುತ್ತೆ. ಸ್ಪೋರ್ಟ್ಸ್ ಕನ್ನಡ ಕ್ರಿಕೆಟ್  ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಜುಲೈ 7 ರಂದು  ಈ ಲೈವ್ ಚಾನೆಲನ್ನು ಉದ್ಘಾಟಿಸಿದೆ. ಸಪ್ತಮಂ ದೈವ ಚಿಂತನಮ್.7 ರಲ್ಲಿ ಶುರು ಮಾಡಿದ್ರೆ ಅದು ಸಾಧನೆಯ ತುಂಬಾ ಎತ್ತರಕ್ಕೆ ಬೆಳೆಯುತ್ತೆ. ಗತಕಾಲದಲ್ಲಿ ,ಇತಿಹಾಸದಲ್ಲಿ  ಕ್ರೀಡೆಯಲ್ಲಿ ತುಂಬಾ ಎತ್ತರಕ್ಕೆ ಬೆಳೆದ ಕೆಲವು ವ್ಯಕ್ತಿಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವಂತಹ ದೊಡ್ಡ ಸಾಧನೆಗೆ ಕೋಟ ರಾಮಕೃಷ್ಣ ಆಚಾರ್ಯರು ಹೊರಟಿದ್ದಾರೆ .ಗುರಿ ಅವರಲ್ಲಿ ಇದೆ. ಖಂಡಿತವಾಗಿಯೂ ಸ್ಪೋರ್ಟ್ ಕನ್ನಡ ತನ್ನ ಗುರಿಯನ್ನು  ಮುಟ್ಟುತ್ತದೆಯೆಂದು ಆಶೀರ್ವಚಿಸಿದರು.  ಯಾವುದೇ ವ್ಯಕ್ತಿ ಒಂದು ಸಾಧನೆಯನ್ನು ಮಾಡಬೇಕಾದರೆ  ಅವರಲ್ಲಿ ಒಂದು ಸಂಕಲ್ಪ ಇರಬೇಕು.  ಒಂದು ಗುರಿ ಇರಬೇಕು. ಅದನ್ನು  ಮಾಡುತ್ತೇನೆ ಎಂಬ ಛಲ ಇರಬೇಕು. ಆ ಛಲಕ್ಕೆ ಹಿನ್ನೆಯಾಗಿ ಒಂದು ಗುರು ಶಕ್ತಿ ಅನ್ನೋದು ಬೇಕು. ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ. ಆರ್. ಕೆ ಯವರು ಮೂಲತ: ಎಲ್ಲಾ ಗುರುಗಳನ್ನು ಮುಂದಿಟ್ಟು ಕೆಲಸ ಮಾಡ್ತಾ ಇದ್ದಾರೆ. ಶೂನ್ಯದಿಂದ ಪ್ರಾರಂಭವಾದ ಈ ಪಯಣ  ಇಷ್ಟು ಎತ್ತರಕ್ಕೂ ಬೆಳೆದರು ಕೂಡ ನಮ್ಮ ಮೂಲ ಎಲ್ಲಿಂದ ಪ್ರಾರಂಭವಾಯ್ತು, ನಾವು ಎಲ್ಲಿಂದ ಬೆಳೆದೆವು, ಹೇಗೆ ಬೆಳೆದೆವು  ಎನ್ನುವ ನೆನಪಿಟ್ಟ ವಿಚಾರ ಅದು ಸೂಕ್ಷ್ಮ.  ತಾನು ನಂಬಿದ ಗುರುಗಳನ್ನು ಸಮಾರಂಭದ ವೇದಿಕೆಗೆ ಕರೆದು, ತನಗೆ ವಿದ್ಯೆಯನ್ನು ಕಲಿಸಿಕೊಟ್ಟ ಗುರುಗಳಿಗೆ ಹಾಗು ವೃತ್ತಿಯನ್ನು ಕಲಿಸಿಕೊಟ್ಟ ಗುರುಗಳನ್ನುಆರಂಭದಲ್ಲಿ ಆರಿಸಿಕೊಂಡು ಈ ಲೈವ್ ಚಾನೆಲ್ ಉದ್ಘಾಟನೆಯ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಒಂದು ಪ್ರಾರಂಭ ಮಾಡಿರೋ ಸಾಧನೆ ಅದು ಕೇವಲ ರಾಜ್ಯಕಲ್ಲ, ಇಡೀ ರಾಷ್ಟ್ರಕ್ಕೆ ಪ್ರಸಾರ ಆಗುವ ಹಾಗೆ ಆಗಲಿ. ಸ್ಪೋರ್ಟ್ಸ್ ಕನ್ನಡದ ಕೀರ್ತಿ  ಶಾಶ್ವತವಾಗಿ ಉಳಿಯಲಿ. ಇದನ್ನು ಬೆಳೆಸುವ ಶಕ್ತಿ ಆ ಭಗವಂತ ಅವರಿಗೆ ತುಂಬಲಿ ಎಂದು ಆಶೀರ್ವದಿಸಿದರು.
ಸ್ಪೋರ್ಟ್ಸ್ ಕನ್ನಡದ ಯೋಗ್ಯತೆಯನ್ನು ಕಂಡು ಅದಕ್ಕೆ ಸರಿಯಾಗಿ ಆಸ್ಪದ ನೀಡಿ ಸಹಕರಿಸುವ ಸ್ಟಾರ್ ವರ್ಟೆಕ್ಸ್ ನ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಅಭಿನಂದಿಸಿದರು.”*
ಈ ಸಂದರ್ಭ ಯೂಟ್ಯೂಬ್ ಚಾನೆಲ್ ನ ಪ್ರಾಯೋಜಕರಾದ ಬೆಂಗಳೂರಿನ ಸ್ಟಾರ್ ವರ್ಟೆಕ್ಸ್ ಕಂಪನಿಯ ಮಾಲಕಿ ಸಮಾಜ ಸೇವಕಿ ಮತ್ತು ಕ್ರೀಡಾ ಪ್ರೋತ್ಸಾಹಕಿ  ಕುಮಾರಿ. ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.
*”ಸ್ಪೋರ್ಟ್ಸ್ ಕನ್ನಡ ಈಗಾಗಲೇ  ನಾಲ್ಕು ವರ್ಷಗಳನ್ನು ಪೂರೈಸಿ, ಐದನೆಯ  ವರ್ಷದಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವುದರೊಂದಿಗೆ, ಕ್ರೀಡಾಭಿಮಾನಿಗಳನ್ನು ತಲುಪಲು ಅವರು ಮತ್ತೊಂದು ಸಂವಹನ ವಿಧಾನವನ್ನು ಹೊಂದಿದ್ದಾರೆ. ಕೆ. ಆರ್. ಕೆ ಯವರು ರಾಜ್ಯದ ಮೂಲೆ ಮೂಲೆಗೂ ಹೋಗಿ, ಒಳ್ಳೆಯ ಹೆಸರನ್ನು ಪಡೆದು, ತುಂಬಾ ಕ್ರೀಡಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.ಸ್ಪೋರ್ಟ್ಸ್ ಕನ್ನಡ ರಾಜ್ಯಾದ್ಯಂತ ಯಶನ್ಸನ್ನು ಕಂಡಿದೆ. ಸ್ಪೋರ್ಟ್ಸ್ ಕನ್ನಡದೊಂದಿಗೆ ಸಹಯೋಗ ನಿಜಕ್ಕೂ ಖುಷಿಯ ವಿಚಾರ’ಎಂದು ಸ್ಟಾರ್ ವರ್ಟೆಕ್ಸ್ ಕಂಪೆನಿಯ ಮಾಲಕಿ ಹಾಗೂ ಕೋಲಾರ ಜೆ.ಡಿ.ಎಸ್ ಮಹಿಳಾ ಘಟಕಾಧ್ಯಕ್ಷೆ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ  ಹೇಳಿದರು.*
ಸ್ಪೋರ್ಟ್ಸ್ ಕನ್ನಡ ಚಾನೆಲ್‌ನ ಧ್ಯೇಯೋದ್ದೇಶಗಳನ್ನು ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್ ನ ಪ್ರಧಾನ ಸಂಪಾದಕ ಕೋಟ ರಾಮಕೃಷ್ಣ ಆಚಾರ್ಯ ವಿವರಿಸಿದರು. ”ಕರ್ನಾಟಕ ರಾಜ್ಯದಲ್ಲಿ ಟೆನಿಸ್  ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಬೇಕು. ಉಡುಪಿಯಲ್ಲಿ ಈಗಾಗಲೇ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಿದೆ. ಇತರ ಜಿಲ್ಲೆಯಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗುವ ವಿಚಾರಗಳು ನಡೆಯುತ್ತಾ ಇವೆ” ಎಂದು  ಭಾವುಕರಾಗಿ ಹೇಳಿದರು.
ಕೋಟ ರಾಮಕೃಷ್ಣ ಆಚಾರ್ಯ ಕುಟುಂಬಸ್ಥರು  ಹಾಗೂ ಟೀಮ್ ಸ್ಪೋರ್ಟ್ಸ್ ಕನ್ನಡ  ಬಳಗ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಿವೃತ್ತ ಶಿಕ್ಷಕರಾದ ಶ್ರೀ ವಿಶ್ವೇಶ್ವರ ಹಂದೆ, ಸ್ವರ್ಣೊದ್ಯಮಿ ಸೀತಾರಾಮ ಆಚಾರ್ ತೆಕ್ಕಟ್ಟೆ ಮುಂತಾದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ರಾಘು ಮಟಪಾಡಿ  ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುರೇಶ್ ಭಟ್ ಮೂಲ್ಕಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಭರವಸೆಯ ಬೆಳಕು ಯಶೋಗಾಥೆ

ಜುಲೈ 7 ಅನ್ನೋ ದಿನ ವರದಾನಯಾಯಿತೇ ಸ್ಪೋರ್ಟ್ಸ್ ಕನ್ನಡಕ್ಕೆ!!!

ಕೋಟ ರಾಮಕೃಷ್ಣ ಆಚಾರ್ಯ ಎನ್ನುವ ವ್ಯಕ್ತಿ ಕೇವಲ ಕ್ರೀಡಾ ಪ್ರೇಮಿಯಲ್ಲ. ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ವೈಭವೀಕರಣದಲ್ಲಿ ಕೋಟ ರಾಮಕೃಷ್ಣ ಆಚಾರ್ಯ  ಒಂದು ದೊಡ್ಡ ವಿಶ್ವವಿದ್ಯಾಲಯ.
ಯಾರು ಏನೇ ಹೇಳಲಿ ಕ್ರಿಕೆಟ್‌ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ಬರಹಗಾರ ಕೆ. ಆರ್.ಕೆ.  ಇವರ ಸ್ಪೋರ್ಟ್ಸ್ ಕನ್ನಡದ ಲೇಖನಗಳನ್ನು ಓದುವುದೆಂದರೆ ಅದೇನೋ ಮನಸ್ಸಿಗೆ ಖುಷಿ.
ಜೂಲೈ 7 ಅನ್ನೋದು ಬಹುಶಃ ಕೋಟ ರಾಮಕೃಷ್ಣ ಆಚಾರ್ಯರಿಗೆ  ಹೇಳಿ ಮಾಡಿಸಿದ ದಿನ. ವಿಶ್ವ ಕ್ರಿಕೆಟ್‌ ಕಂಡ ಮಹಾನ್‌ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹುಟ್ಟಿದ ದಿನವದು. ಅದೇನೋ ಕಾಕತಾಳೀಯ.  ಜುಲೈ 7, 2019 ರ ವಿಶೇಷ ದಿನದಂದು ಕೆ. ಆರ್.ಕೆ. ಸಾರಥ್ಯದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಲೋಕಾರ್ಪಣೆಗೊಂಡಿತು. ಕ್ರೀಡೆಯ ಮೇಲೆ ತನಗೆ ಇರುವ ಪ್ರೀತಿಯನ್ನು ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದರು. ಸ್ಪೋರ್ಟ್ಸ್ ಕನ್ನಡದ ಪ್ರಾಮುಖ್ಯತೆಯು ಮತ್ತಷ್ಟು ಬೆಳೆಯುತ್ತಲೇ ಇತ್ತು.
ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಕೆಲವರಿಗಂತೂ ಇವರ ಪೋಸ್ಟ್ ಗಳನ್ನೂ ನೋಡದೆ ಇದ್ದರೆ ಅದೇನೋ ಮನಸ್ಸಿಗೆ ಅಸಮಾಧಾನ.  ಇದಾದ ಬಳಿಕ  ಈಗ ಮತ್ತೊಮ್ಮೆ  ಜುಲೈ 7, 2023 ರ ಶ್ರೇಷ್ಠ ದಿನದಂದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭವಾಗಲಿದೆ. ಮತ್ತೆ ಅದೇ ಜೂಲೈ 7 ಎಂಬ ಈ  ಶುಭ ದಿನಾಂಕವು ಸ್ಪೋರ್ಟ್ಸ್ ಕನ್ನಡದ ಪಯಣದಲ್ಲಿ ಉಡುಗೊರೆಯಾಗಿ ಪ್ರಮುಖ ಪಾತ್ರವನ್ನು ವಹಿಸಲಿದೆ.
ಕ್ರೀಡೆಯ ಮೇಲೆ  ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚುತ್ತಿರುವ ಕಾರಣ ಹೊಸತೊಂದು ಅಭಿಯಾನವನ್ನು ಸ್ಪೋರ್ಟ್ಸ್ ಕನ್ನಡ ಆರಂಭಿಸುತ್ತಿದೆ. ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್  ಕಂಪನಿ ಪರಸ್ಪರ ಕೈಜೋಡಿಸಿವೆ. ಬಹುತೇಕ  ಕ್ರೀಡೆಯನ್ನು ದೊಡ್ಡದಾಗಿಸುವ ಗುರಿಯನ್ನು ಇವರುಗಳು ಹೊಂದಿದ್ದಾರೆ. ಕ್ರೀಡಾ ಮಹತ್ವಾಕಾಂಕ್ಷೆ ಉತ್ತೇಜಿಸಲು  ಸ್ಪೋರ್ಟ್ಸ್ ಕನ್ನಡ  ಪರಿಪೂರ್ಣ ವೇದಿಕೆಯಾಗಲು ಹೊರಟಿದೆ.
ಇನ್ನೇನು ಶುಕ್ತವಾರ ಜುಲೈ  7, 2023 ರ ಶುಭ ಮುಹೂರ್ತದಲ್ಲಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್  ಬಿಡುಗಡೆಯಾಗಲಿದೆ. ಜುಲೈ 7 ಎಂಬ ದಿನ ಸ್ಪೋರ್ಟ್ಸ್ ಕನ್ನಡಕ್ಕೆ ಮತ್ತೆ ಅದೃಷ್ಟದ ದಿನವಾಗಲಿ ಹಾಗೂ ಈ  ಚಾನೆಲ್‌ ಗೆಲ್ಲಲಿ.
ಪ್ರಶಂಸೆ ಹಾಗು ಅಭಿನಂದನೆಗಳೊಂದಿಗೆ,
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡದ ಅಭಿಮಾನಿ