
Category: ಕಾಫಿ ವಿತ್ ಅರ್ ಕೆ


ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.





ಟೆನ್ನಿಸ್ ಬಾಲ್ ಕ್ರಿಕೆಟ್ ಇಂದು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ,ಯೂ ಟ್ಯೂಬ್ ಚಾನೆಲ್ ಗಳ ನೇರ ಪ್ರಸಾರ,ನಾನಾ ಮಾಧ್ಯಮಗಳ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ತಲುಪುತ್ತಿದ್ದು ಇನ್ನು ಕೆಲವು ವರ್ಷಗಳಲ್ಲಿ ಅತ್ಯುನ್ನತ ಮಟ್ಟ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ.ಈ ಬೆಳವಣಿಗೆಗಳಿಗೆ 80,90 ರ ದಶಕಗಳ ಆಟಗಾರರು ಮೆರೆದ ಕ್ರೀಡಾಸ್ಪೂರ್ತಿ, ಬರೆದ ಇತಿಹಾಸ,ತಂಡದ ಮೇಲಿನ ನಿಷ್ಟೆ ಈ ಎಲ್ಲಾ ವಿಚಾರಗಳೇ ಭದ್ರ ಬುನಾದಿ ಎನ್ನುದರಲ್ಲಿ ಎರಡು ಮಾತಿಲ್ಲ.
ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ತಂಡ “ಪಡುಬಿದ್ರಿ ಫ್ರೆಂಡ್ಸ್” ತಂಡದ ಸೇವೆ ಅವಿಸ್ಮರಣೀಯ.ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಹೊನಲು ಬೆಳಕಿನ ಪಂದ್ಯಾಟ ಸಂಘಟಿಸಿ ಟೆನ್ನಿಸ್ ಬಾಲ್ ಕ್ರಿಕೆಟ್ ನ ಮೆರುಗನ್ನು ಹೀಗೂ ಹೆಚ್ಚಿಸಬಹುದೆಂದು ರಾಜ್ಯಕ್ಕೆ ಪರಿಚಯಿಸಿ,ತನ್ನದೇ ಊರಿನ ಆಟಗಾರರನ್ನು ನೆಚ್ಚಿಕೊಂಡು ತಂಡವನ್ನು ಕಟ್ಟಿ,90 ರ ದಶಕದ ಪ್ರತಿಷ್ಟಿತ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ತಂಡ.ಕತ್ತುಕತ್ತಿನ ಹೋರಾಟದಲ್ಲಿ ಗಮನಾರ್ಹ ನಿರ್ವಹಣೆ ತೋರಿ ಬಂದ ಪ್ರಶಸ್ತಿಯ ಅಷ್ಟೂ ಮೊತ್ತವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ತಂಡದ ಈ ಎಲ್ಲಾ ಯಶಸ್ಸಿನ ಕಾರ್ಯಗಳ ಮೂಲಕ ರಾಜ್ಯದ ಅಗ್ರಮಾನ್ಯ ತಂಡವಾಗಿ ಕಟ್ಟಿದ ಆದರ್ಶ ನಾಯಕ ಶ್ರೀಯುತ “ಶರತ್ ಶೆಟ್ಟಿ ಪಡುಬಿದ್ರಿ”ಯವರು.
ಶರತ್ ಶೆಟ್ಟಿ ಯವರ ಕ್ರಿಕೆಟ್ ಜೀವನ ಶುರುವಾಗಿದ್ದೇ ಕುಂದಾಪುರದಿಂದ. ಪ್ರೌಢಶಾಲಾ ವ್ಯಾಸಂಗವನ್ನು ತೆಕ್ಕಟ್ಟೆಯಲ್ಲಿ ನಡೆಸುವ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಹಿರಿಯರಾದ ” ನಾಗೇಶಣ್ಣ”ರವರ “ಶ್ರೀಲತಾ ಕುಂದಾಪುರ” ತಂಡದಲ್ಲಿ ಆರಂಭಿಕ ದಾಂಡಿಗನಾಗಿ ಕ್ರಿಕೆಟ್ ಜೀವನ ಪ್ರಾರಂಭಿಸಿದ ಇವರು ಮುಂದೆ
ಪಡುಬಿದ್ರಿಯ “ಫಾರುಕ್” ರವರು ಕಟ್ಟಿದ ತಂಡ “ಪಡುಬಿದ್ರಿ ಫ್ರೆಂಡ್ಸ್” ನ್ನು ಮುನ್ನಡೆಸುವ ಅವಕಾಶ ಸಿಕ್ಕಾಗ ಸಹ ಆಟಗಾರರಾದ ಸುಭಾಶ್ ಕಾಮತ್ ಜೊತೆಗೂಡಿ ಅದ್ಭುತ ಸಂಯೋಜಿತ ತಂಡವನ್ನು ಕಟ್ಟುತ್ತಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ,M.P.L ಸರಣಿ ಶ್ರೇಷ್ಠ,ಟೆನ್ನಿಸ್ ಬಾಲ್ ನ ಸಭ್ಯ ಆಟಗಾರ ನಿತಿನ್ ಮೂಲ್ಕಿ,ಮ್ಯಾಜಿಕಲ್ ಆಲ್ ರೌಂಡರ್ ವಿನ್ಸೆಂಟ್, ಕ್ಲಾಸಿಕ್ ಬ್ಯಾಟ್ಸ್ ಮನ್ ರೂಪೇಶ್ ಶೆಟ್ಟಿ, ಹಿರಿಯ ಆಟಗಾರರಾದ ದಿ|ವೆಂಕಟೇಶ್,ಕಣ್ಣನ್ ನಾಯರ್,ಪ್ರಸಾದ್ ಪಡುಬಿದ್ರಿ ಹೀಗೆ ಹತ್ತು ಹಲವಾರು ಸವ್ಯಸಾಚಿ ಆಟಗಾರರನ್ನು ಟೆನ್ನಿಸ್ ಬಾಲ್ ಗೆ ಪರಿಚಯಿಸಿದ ಕೀರ್ತಿ ಕಳೆದ 2 ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಆದರ್ಶ ಕಪ್ತಾನ ಶರತ್ ಶೆಟ್ಟಿ ಯವರಿಗೆ ಸಲ್ಲುತ್ತದೆ.
ಮೊದಲ ಬಾರಿಗೆ ಉಜಿರೆಯಲ್ಲಿ ರಾಜ್ಯಮಟ್ಟದ ಪಂದ್ಯಾಟದಲ್ಲಿ ಜಯಿಸಿದ ಪಡುಬಿದ್ರಿ ತಂಡ ಮುಂದೆ ಗೆಲುವಿನ ನಾಗಾಲೋಟಗೈದಿತು.1999 ರಲ್ಲಿ 14 ಜಿಲ್ಲಾ,ರಾಜ್ಯ ಮಟ್ಟದ ಪ್ರಶಸ್ತಿಗಳನ್ನು, ಶರತ್ ಶೆಟ್ಟಿ ಯವರ ನಾಯಕತ್ವದಲ್ಲಿ ಒಂದೇ ವರ್ಷದಲ್ಲಿ 8 ಟೂರ್ನಿಗಳಲ್ಲಿ ಭಾಗವಹಿಸಿ ,7 ಬಾರಿ ಚಾಂಪಿಯನ್ ತಂಡವಾಗಿಯೂ,1 ಬಾರಿ ರನ್ನರ್ಸ್ ಆಗಿ ಮೂಡಿ ಬಂದಿದ್ದು ಉತ್ಕೃಷ್ಟ ನಾಯಕತ್ವಕ್ಕೆ ಸಾಕ್ಷಿ.ಮೊದ ಮೊದಲಿಗೆ ಬ್ಯಾಟಿಂಗಲ್ಲಿ ಮಿಂಚುತ್ತಿದ್ದ ಇವರು 90 ರ ದಶಕದಲ್ಲಿ ನೇಜಾರಿನಲ್ಲಿ ಎ.ಕೆ.ಸ್ಪೋರ್ಟ್ಸ್ ತಂಡದ ವಿರುದ್ಧದ ಸೆಮಿಫೈನಲ್ ನಲ್ಲಿ ಕೊನೆಯ ಎಸೆತ ದಲ್ಲಿ 6 ರನ್ ಗಳ ಅವಶ್ಯಕತೆ ಬಿದ್ದಾಗ ಸಿಕ್ಸರ್ ಸಿಡಿಸಿ ಗೆಲ್ಲಿಸಿದ 2 ಉದಾಹರಣೆಗಳಿವೆ.ಮೈದಾನದ ಮಿಡ್ ವಿಕೆಟ್,ಕವರ್ಸ್ ನ ಚುರುಕಿನ ಅದ್ಭುತ ಫೀಲ್ಡರ್,ಯುವ ಕ್ರಿಕೆಟಿಗರಿಗಾಗಿ ತನ್ನ ಬ್ಯಾಟಿಂಗ್ ಸರದಿ ಬದಲಾಯಿಸಿಕೊಂಡು, ಯುವ ಆಟಗಾರರು ದೂರ ದೂರಿಗೆ ವೃತ್ತಿ ನಿಮಿತ್ತ ತೆರಳಲು ಬಂದಾಗ ತಂಡದ ವ್ಯಾಮೋಹವನ್ನು ಬದಿಗಿಟ್ಟು ಆಟಗಾರರ ಭವಿಷ್ಯ ರೂಪಿಸಿದ ನಿಸ್ವಾರ್ಥ ನಾಯಕ.
ಗಮನಾರ್ಹ ವಿಷಯವೆಂದರೆ ಸಮಾಜದ ಅಶಕ್ತರಿಗಾಗಿ,ರೋಗಿಗಳಿಗಾಗಿ,ಸಹಾಯಾರ್ಥ ಸಂಘಟಿಸಲ್ಪಡುತ್ತಿದ್ದ ಪಂದ್ಯಾಟಗಳಲ್ಲಿ ಜಯಿಸಿದ ಪ್ರಶಸ್ತಿ ಮೊತ್ತ ಆಯಾ ಫಲಾನುಭವಿಗಳನ್ನೇ ತಲುಪುತ್ತಿದ್ದು ಕಪ್ತಾನನ ಮಾನವೀಯತೆಗೆ ಸಾಕ್ಷಿ.
ಪ್ರಸ್ತುತ ಉಡುಪಿ ವಲಯದ : “ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್” ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದು ನೇರ ನುಡಿಗಳ ಮೂಲಕ ಯುವ ಕ್ರಿಕೆಟಿಗರಿಗೆ ಶಿಸ್ತಿನ ನೇರ ಸಂದೇಶವನ್ನು ತಲುಪಿಸುತ್ತಿದ್ದು, ಲಯನ್ಸ್ ಹಾಗೂ ಜೇಸಿ ಕ್ಲಬ್ ಗಳ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವರು. ಶಟಲ್ ಬ್ಯಾಡ್ಮಿಂಟನ್ ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಆರ್.ಕೆ.ಆಚಾರ್ಯ ಕೋಟ…

ಉಡುಪಿ : ಕಳೆದ ತಿಂಗಳಿನಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಏಕಕಾಲದಲ್ಲಿ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಪ್ರೇಕ್ಷಕರ ಈ ಅಸಾಧಾರಣ 10 ರ ಪೋರಿ ತನುಶ್ರೀ ಪಿತ್ರೋಡಿಯ ಪ್ರದರ್ಶನ ನೋಡಿ ಬೆಕ್ಕಸಬೆರಗಾದರು.
ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖ ಪ್ರತಿಭೆಯ,ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ 15/3/2009 ರಂದು ಸಂಧ್ಯಾ,ಉದಯ್ ಕುಮಾರ್ ದಂಪತಿಗಳಿಗೆ ಮೊದಲ ಮಗಳಾಗಿ ಜನಿಸಿದರು.ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ 3 ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್ ಉಡುಪಿ ಇವರಲ್ಲಿ ನೃತ್ಯ ತರಬೇತಿಯನ್ನು ಆರಂಭಿಸಿ,ಸತತವಾಗಿ ಮುದ್ದು ಕೃಷ್ಣ ಸ್ಪರ್ಧೆ,ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಕಾರ್ಯಕ್ರಮ ನೀಡುವುದರ ಮೂಲಕ ಇದುವರೆಗೆ 342 ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುತ್ತಾರೆ.
ನೃತ್ಯ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಇವರಿಂದ ಭರತನಾಟ್ಯ ತರಬೇತಿಯನ್ನು, ಯೋಗ ತರಬೇತಿಯನ್ನು ಶ್ರೀ ಹರಿರಾಜ್ ಕಿನ್ನಿಗೋಳಿ ಇವರಿಂದಲೂ,ಹಾಗೂ ಆದಿತ್ಯ ಅಂಬಲಪಾಡಿ ಇವರಿಂದ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿರುವ ತನುಶ್ರೀ ಕಳೆದೆರಡು ವರ್ಷಗಳಿಂದ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಹಾಕಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯ ಮಜಾಟಾಕೀಸ್ ನ ಎರಡು ಸಂಚಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.
ತಾ 21/6/2018 ರಂದು ಯೋಗ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಹೆಸರಾಂತ ಚಾನೆಲ್ ಪಬ್ಲಿಕ್ ಟಿ.ವಿಯಲ್ಲಿ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದರು.ತಾ 14/11/2018 ರಂದು ಇಟಲಿಯ ರೋಮ್ ನಗರದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ
ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಗುರುತಿಸಿಕೊಂಡಿರುವುದು ಶ್ರೇಷ್ಠ ಸಾಧನೆ.
ವಿಶ್ವ ದಾಖಲೆಗಳ ಸವಿವರ : ತಾ 11-11-2017 ರಂದು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ನಿರಾಲಾಂಭ ಪೂರ್ಣ ಚಕ್ರಾಸನ” ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್ ಪುಟದಲ್ಲಿ ದಾಖಲೆಯ ಮೊದಲ ಅಧ್ಯಾಯ ಬರೆದರು.
ತಾ 7/4/2018 ರಂದು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ನೇತೃತ್ವದಲ್ಲಿ “Most full body revolution maintaining a chest stand position” ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ದೇಶಕ್ಕೆ ಕೀರ್ತಿ ತಂದಿರುತ್ತಾರೆ.
ತಾ 23/2/2019 ರಂದು “Most no of rolls in one minute in dhanurasana posture”ಯೋಗಾಸನದ ಭಂಗಿಯಲ್ಲಿ 1 ನಿಮಿಷದಲ್ಲಿ 62 ರೋಲ್ ಹಾಗೂ 100 ರೋಲ್ ಗಳನ್ನು ಕೇವಲ 1.40 ನಿಮಿಷದಲ್ಲಿ ಉರುಳಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಏಕಕಾಲದಲ್ಲಿ 2 ವಿಶ್ವದಾಖಲೆ ಸ್ಥಾಪಿಸಿ ಒಂದಿನಿತೂ ಸುಸ್ತಾದಂತೆ ಕಾಣದ ತನುಶ್ರೀ ಈ ದಾಖಲೆಯನ್ನು ಪುಲ್ವಾಮದಲ್ಲಿ ಮಡಿದ ಸೈನಿಕರಿಗೆ ಸಮರ್ಪಿಸಿರುತ್ತಾರೆ.
ಈ ಎಲ್ಲಾ ಸಾಧನೆಯ ಹಿಂದೆ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ದಶಕಗಳ ಅತಿ,ಶಿಸ್ತು ಮಾದರಿಯ ಇತಿಹಾಸವನ್ನು ಬರೆದ ” ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ)” ನ ಸಹಕಾರವನ್ನು ತನುಶ್ರೀ ಹಾಗೂ ಪೋಷಕರು ಸದಾ ಸ್ಮರಿಸುತ್ತಾರೆ. ತಂದೆ ಉದಯ್ ಕುಮಾರ್ ವೆಂಕಟರಮಣ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುತ್ತಾರೆ.
ಇತ್ತೀಚೆಗಷ್ಟೇ ಚಲನಚಿತ್ರಗಳಲ್ಲಿ ಅವಕಾಶವು ಗಿಟ್ಟಿಸಿಕೊಂಡಿದ್ದು,ಅನೇಕರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ತನುಶ್ರೀ ಪಿತ್ರೋಡಿಯ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ಪರವಾಗಿ ಆಶಿಸುತ್ತೇವೆ.
– ಆರ್.ಕೆ.ಆಚಾರ್ಯ ಕೋಟ