ಉಡುಪಿ: ಬ್ಲೂ ಸ್ಟಾರ್ ಶಿರ್ವ ಕ್ರಿಕೆಟ್ ಕ್ಲಬ್‌ನ ಸಕ್ರಿಯ, ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡೇವಿಡ್ ಮಥಾಯಸ್ ನಿನ್ನೆ ನಿಧನರಾದರು. 1979 ರಿಂದ, ಸುಮಾರು 13-14 ವರ್ಷಗಳಿಂದ, ಬ್ಲೂ ಸ್ಟಾರ್ ಶಿರ್ವ ತಂಡದ ಆಡುವ ತಂಡದಲ್ಲಿ ಕಾಣಿಸಿಕೊಂಡ, ಡೇವಿಡ್ ಯಾವಾಗಲೂ ಉತ್ತಮ ಆಟಗಾರ ಎಂದು ಗುರುತಿಸಲ್ಪಟ್ಟಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಉಡುಪಿ ಪರಿಸರದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು.
ಭಾನುವಾರ ಅವರ ಸಾವಿನ ಸುದ್ದಿ ಹೊರಬಂದ ನಂತರ, ರಾಜ್ಯ ಟೆನಿಸ್ ಕ್ರಿಕೆಟ್ ನ ಕ್ರಿಕೆಟ್ ಬಂಧುಗಳು ಸಾಮಾಜಿಕ ಮಾಧ್ಯಮದಲ್ಲಿ ಗೌರವ ಸಲ್ಲಿಸಿದರು.
ಡೇವಿಡ್ ಮಥಾಯಸ್ ದುಃಖದ ನಿಧನಕ್ಕೆ ಇಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂತಾಪ ಸೂಚಿಸಿದ್ದು, ಡೇವಿಡ್ ಮಥಾಯಸ್ ಅವರ ನಿಧನದ ಬಗ್ಗೆ ಕೇಳಲು ನಿಜವಾಗಿಯೂ ದುಃಖವಾಗಿದೆ. ಕ್ರಿಕೆಟ್ ಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲೆಂದು ಉಡುಪಿ ಜಿಲ್ಲಾ ಟಿ.ಸಿ.ಎ ಕೋರುತ್ತದೆ. ಅವರ ಕುಟುಂಬ ವರ್ಗ ಮತ್ತು ಸ್ನೇಹಿತರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು
ಟಿ.ಸಿ.ಎ ಉಡುಪಿ ಸಂಸ್ಥೆ ಪ್ರಾರ್ಥಿಸುತ್ತದೆ.
ಬ್ಲೂ ಸ್ಟಾರ್ ಶಿರ್ವದ ಕ್ರಿಕೆಟಿಗ ಡೇವಿಡ್ ಮಥಾಯಸ್ ಅವರ ನಿಧನಕ್ಕೆ ಹಲವಾರು ಗಣ್ಯರು ಪ್ರತಿಕ್ರಿಯಿಸಿದ್ದಾರೆ.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ಖೇಲ್ ದಿವಸ್ ಎಂದೂ ಕರೆಯಲಾಗುತ್ತದೆ.
ಇದರ ಅಂಗವಾಗಿ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಉಡುಪಿ ಜಿಲ್ಲೆ ಮತ್ತು ಮಾಹೆ ಮಣಿಪಾಲ ಇವರುಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 29,2023 ರಂದು ಟಿ .ಎಂ. ಎ ಪೈ ಹಾಲ್, ಮಾಹೆ ಮಣಿಪಾಲದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು.
ವಿದ್ಯಾರ್ಥಿಗಳು ಕ್ರೀಡೆಯನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳಲು ಕ್ರೀಡೆ ಸಂಯೋಜಿತ ಕಲಿಕೆಗೆ ವಿಶೇಷ ಗಮನವನ್ನು ಟಿ.ಸಿ. ಎ ಉಡುಪಿ ನೀಡುತ್ತದೆ. ಈ ನಿಟ್ಟಿನಲ್ಲಿ ಕ್ರೀಡೆ ಕುರಿತ ರಸಪ್ರಶ್ನೆ ಕಾರ್ಯಕ್ರಮಕ್ಕೆ ಟಿ.ಸಿ. ಎ ಉಡುಪಿ ಚಾಲನೆ ನೀಡಲಿದೆ. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ತಮ್ಮ ಜ್ಞಾನವನ್ನು ಪ್ರದರ್ಶಿಸಲು , ವೈಶಿಷ್ಟ್ಯಗೊಳಿಸಲು ಅವಕಾಶವನ್ನು ಒದಗಿಸುವ ವಿಶಿಷ್ಟ ವೇದಿಕೆಯನ್ನು ಟಿ.ಸಿ. ಎ ಉಡುಪಿ ನೀಡುತ್ತದೆ ಟಿ.ಸಿ. ಎ ಉಡುಪಿಯ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಅದರ ವಿಜೇತರನ್ನಾಗಿ ಮಾಡುವುದಲ್ಲದೆ ಜಿಲ್ಲೆಯಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು ಉತ್ತೇಜನವನ್ನು ನೀಡುತ್ತದೆ. ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸಾಮರ್ಥ್ಯ ಕೂಡ ಅಷ್ಟೇ ಮುಖ್ಯ. ಟಿ.ಸಿ. ಎ ಉಡುಪಿ ನಡೆಸುವ ಕ್ವಿಜ್ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಜಾಗರೂಕತೆಯನ್ನು ಮೂಡಿಸುತ್ತದೆ ಮತ್ತು ಕ್ರೀಡಾ ಜ್ಞಾನವನ್ನು ಏಕಕಾಲದಲ್ಲಿ ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮ ಒಂದು ಪರಿಪೂರ್ಣ ಮಾರ್ಗವಾಗಿದೆ. ಈ ರಸಪ್ರಶ್ನೆ ಕಾರ್ಯಕ್ರಮವು ಶಾಲೆಗೆ ಹೋಗುವ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ, ಅದೇ ಸಮಯದಲ್ಲಿ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರಲು ಮಾತ್ರವಲ್ಲದೆ ಅವರನ್ನು ಮಾನಸಿಕ ಕೌಶಲ್ಯ ಮತ್ತು ಸಾಮರ್ಥ್ಯದ ಸ್ಪರ್ಧೆಯಲ್ಲಿ ತೊಡಗಿಸಲು ವಿನ್ಯಾಸಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಸಿ. ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ “ವಿದ್ಯಾರ್ಥಿಗಳಿಗಾಗಿ ನಾವು ಆಯೋಜಿಸಿರುವ ರಸಪ್ರಶ್ನೆ ಕಾರ್ಯಕ್ರಮ ಮತ್ತು ಕ್ರೀಡಾಕೂಟಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು ಸಂತೋಷದ ವಿಷಯ ಮತ್ತು ಇದು ಖಂಡಿತವಾಗಿಯೂ ಎಲ್ಲ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡಲಿದ್ದು, ಕ್ರೀಡಾ ಇತಿಹಾಸದ ಬಗ್ಗೆ ಅರಿವು ಮೂಡಿಸುತ್ತದೆ. ಪ್ರತಿ ವಿದ್ಯಾರ್ಥಿಯು ಈ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.”
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು, ಶಾಲೆಗಳು ಅಥವಾ ವಿದ್ಯಾರ್ಥಿಗಳು ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು ಮತ್ತು ಆಗಸ್ಟ್ ಕೊನೆಯಲ್ಲಿನಡೆಯುವ ರಸಪ್ರಶ್ನೆಯ ಸುತ್ತಿನಲ್ಲಿ ಭಾಗವಹಿಸುವ ತಮ್ಮ ವಿದ್ಯಾರ್ಥಿಗಳ ಹೆಸರನ್ನು ಸೂಚಿಸಬೇಕು.
ಚೇತನ್-9901850385
ಪ್ರವೀಣ್-9964244946
ಪ್ರಶಾಂತ್-8660457633
ಅಜೀಜ್-8310010819
ಹೆಸರಾಂತ ಕ್ವಿಜ್ ಮಾಸ್ಟರ್ ರಂಜನ್ ನಾಗರಕಟ್ಟೆ
ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಸಪ್ರಶ್ನೆ ಕಾರ್ಯಕ್ರಮದ ಸುತ್ತು ಯೂಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
ಉಡುಪಿ-ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರು ಶಾಲಾ ಕಾಲೇಜು ಮಕ್ಕಳಿಗಾಗಿ ನಿಗದಿತ 10 ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಹಮ್ಮಿಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಪದವಿಪೂರ್ವ ಕಾಲೇಜು ವಿಭಾಗ ಹಾಗೂ ಪದವಿ ಕಾಲೇಜು ವಿಭಾಗ ಈ ರೀತಿ 4 ವಿಭಾಗಗಳಲ್ಲಿ ಪಂದ್ಯಾಕೂಟವು ನಡೆಯಲಿದೆ. ಉಡುಪಿ ಜಿಲ್ಲೆಯ ಶಾಲಾ ಕಾಲೇಜು ತಂಡಗಳಿಗೆ ಇದರಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಲಾಗಿದೆ. ಅಕ್ಟೋಬರ್ 2023 ರಲ್ಲಿ ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕ್ ಮೈದಾನಗಳಲ್ಲಿ ಈ ಟೂರ್ನಮೆಂಟ್ ನಡೆಯಲಿರುವುದು. ಭಾಗವಹಿಸುವ ತಂಡಗಳಿಗೆ ಸಂಪೂರ್ಣವಾಗಿ ಉಚಿತ ಪ್ರವೇಶ ಮತ್ತು ಯೂಟ್ಯೂಬ್ ಲೈವ್ ಕೂಡಾ ಇರಲಿದೆ.
ಟಿ. ಸಿ. ಎ ಉಡುಪಿ ಶಾಲಾ -ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾವಳಿ ಇದು ಉದಯೋನ್ಮುಖ ಕ್ರಿಕೆಟಿಗರಿಗೆ ಕ್ರಿಕೆಟ್ ಆಡಲು ಮತ್ತು ವೃತ್ತಿಪರ ಕ್ರಿಕೆಟ್‌ಗೆ ತಮ್ಮ ಮೊದಲ ಹೆಜ್ಜೆಗಳನ್ನು ಇಡಲು ವೇದಿಕೆಯನ್ನು ಒದಗಿಸುತ್ತದೆ. ಇದು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಸ್ಟ್ಯಾಂಡರ್ಡ್ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಜರಗುವ ಈ ಪಂದ್ಯಾವಳಿಯು ಹೆಚ್ಚಿನ ಪ್ರಮುಖ ಶಾಲಾ ಕಾಲೇಜು ತಂಡಗಳ ಅತ್ಯುತ್ತಮ ಯುವ ಪ್ರತಿಭೆಗಳನ್ನು ಒಳಗೊಂಡಿರುತ್ತದೆ. ಟಿ. ಸಿ. ಎ ನಡೆಸುವ T10 ಪಂದ್ಯಾವಳಿಯ ಸ್ವರೂಪವು ಯುವ ಪ್ರತಿಭೆಗಳಿಗೆ ಒಂದೇ ವೇದಿಕೆಯಲ್ಲಿ ಆಡಲು ಮತ್ತು ಶಿಕ್ಷಣದ ಜೊತೆಗೆ ವೃತ್ತಿಪರ ಕ್ರಿಕೆಟ್‌ಗೆ ದಾರಿ ಮಾಡಿಕೊಡಲು ವೇದಿಕೆಯನ್ನು ಒದಗಿಸುತ್ತದೆ.
ಟಿ. ಸಿ. ಎ ಉಡುಪಿ ಆಯೋಜನೆಯ ಈ ಟೂರ್ನಮೆಂಟ್ ಗ್ರಾಸ್ ರೂಟ್ ಲೆವೆಲ್ ನಲ್ಲಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಪತ್ತೆಹಚ್ಚಲು ಮತ್ತು ಅವರ ನಿಜವಾದ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ನಿರ್ದೇಶನವನ್ನು ನೀಡುವ ಪರಿಣಾಮಕಾರಿ ಆರಂಭದ ಹಂತ ಆಗಿದೆ ಎಂದು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಹೇಳಿದ್ದಾರೆ.
ಯುವ ಕ್ರಿಕೆಟಿಗರಿಗೆ ವೃತ್ತಿಪರ ಆಟದಲ್ಲಿ ತೊಡಗಿಸಿಕೊಳ್ಳಲು ಈ ಕ್ರಿಕೆಟ್ ಟೂರ್ನಮೆಂಟ್ ಪರಿಪೂರ್ಣ ಮೆಟ್ಟಿಲು; ಇದು ನಾಳಿನ ಕ್ರಿಕೆಟ್ ತಾರೆಗಳನ್ನು ನಿರ್ಮಿಸುವ ಪಂದ್ಯಾವಳಿಯಾಗಿದೆ.
ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್ ಲೈವ್ ಚಾನೆಲ್ ಬಿಡುಗಡೆ!
ಕ್ರಿಕೆಟ್ ನ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಸ್ಪೋರ್ಟ್ಸ್ ಕನ್ನಡ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಜನಪ್ರಿಯವಾಗಿದೆ. ಇದೀಗ ನಾಲ್ಕನೇಯ ವಾರ್ಷಿಕೋತ್ಸವದ ಸಂಭ್ರಮದ ದಿನದಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ತನ್ನದೇ ಆದ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನೇರ ಪ್ರಸಾರಗೊಳಿಸಲು ಸ್ಪೋರ್ಟ್ಸ್ ಕನ್ನಡ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದೆ. ಜುಲೈ 07 ರಂದು ಉಡುಪಿಯ ವಂಡಾರು ಕ್ಷೇತ್ರದಲ್ಲಿ ಪ್ರಾರಂಭವಾದ ಈ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ರಾಜ್ಯ ಟೆನಿಸ್ ಕ್ರಿಕೆಟ್ ಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಜುಲೈ 7, ಶುಕ್ರವಾರದ ಶುಭದಿನದಂದು, ಬೆಳಗ್ಗಿನ ಶುಭಮುಹೂರ್ತದಲ್ಲಿ ಇಲ್ಲಿನ ವಂಡಾರು ಸುಬ್ರಹ್ಮಣ್ಯ ನಿಲಯದಲ್ಲಿ ಪೂಜ್ಯನೀಯ ಗುರುಗಳು, ವೇದ ಬ್ರಹ್ಮಶ್ರೀ ಶ್ರೀ. ರಮೇಶ್ ಬಾಯರಿ ವಂಡಾರು ಅವರ ಉಪಸ್ಥಿತಿಯಲ್ಲಿ ಆಶೀರ್ವಚನದೊಂದಿಗೆ ಆರಂಭಿಸಿದ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ಹೆಸರಿನ ಚಾನೆಲ್ ತನ್ನ ಚಾನೆಲ್ ನ ಪ್ರೊಮೊ ಬಿಡುಗಡೆಗೊಳಿಸಿತು. 07.07.2023 ಮುಂಜಾನೆ 07:07 ಕ್ಕೆ ದೀಪ ಪ್ರಜ್ವಲನೆ ಮೂಲಕ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸ್ಪೋರ್ಟ್ಸ್ ಕನ್ನಡ ಮೀಡಿಯಾ ಬಳಗದ ಯೂಟ್ಯೂಬ್ ಚಾನೆಲ್ ನ್ನು ಪೂಜ್ಯನೀಯ ಗುರುಗಳು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರ ಮಾತಿನ ಸಾರ ಇಲ್ಲಿದೆ.
*”ಸ್ಪೋರ್ಟ್ ಕನ್ನಡ ಕಳೆದ ನಾಲ್ಕು ವರ್ಷಗಳಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಇದೀಗ ಆ ಸಾಧನೆಯ 2ನೇ ಹಂತವನ್ನು ಇಂದು ಆರಂಭಿಸುತ್ತಾ ಇದೆ. ಆಟ ಎನ್ನುವುದು ಭಗವಂತನ ಲೀಲೆ. ಅದು ಮನಸಿಗ್ಗೆ ಹಿತವನ್ನು ನೀಡುತ್ತೆ. ಸ್ಪೋರ್ಟ್ಸ್ ಕನ್ನಡ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಜುಲೈ 7 ರಂದು ಈ ಲೈವ್ ಚಾನೆಲನ್ನು ಉದ್ಘಾಟಿಸಿದೆ. ಸಪ್ತಮಂ ದೈವ ಚಿಂತನಮ್.7 ರಲ್ಲಿ ಶುರು ಮಾಡಿದ್ರೆ ಅದು ಸಾಧನೆಯ ತುಂಬಾ ಎತ್ತರಕ್ಕೆ ಬೆಳೆಯುತ್ತೆ. ಗತಕಾಲದಲ್ಲಿ ,ಇತಿಹಾಸದಲ್ಲಿ ಕ್ರೀಡೆಯಲ್ಲಿ ತುಂಬಾ ಎತ್ತರಕ್ಕೆ ಬೆಳೆದ ಕೆಲವು ವ್ಯಕ್ತಿಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವಂತಹ ದೊಡ್ಡ ಸಾಧನೆಗೆ ಕೋಟ ರಾಮಕೃಷ್ಣ ಆಚಾರ್ಯರು ಹೊರಟಿದ್ದಾರೆ .ಗುರಿ ಅವರಲ್ಲಿ ಇದೆ. ಖಂಡಿತವಾಗಿಯೂ ಸ್ಪೋರ್ಟ್ ಕನ್ನಡ ತನ್ನ ಗುರಿಯನ್ನು ಮುಟ್ಟುತ್ತದೆಯೆಂದು ಆಶೀರ್ವಚಿಸಿದರು. ಯಾವುದೇ ವ್ಯಕ್ತಿ ಒಂದು ಸಾಧನೆಯನ್ನು ಮಾಡಬೇಕಾದರೆ ಅವರಲ್ಲಿ ಒಂದು ಸಂಕಲ್ಪ ಇರಬೇಕು. ಒಂದು ಗುರಿ ಇರಬೇಕು. ಅದನ್ನು ಮಾಡುತ್ತೇನೆ ಎಂಬ ಛಲ ಇರಬೇಕು. ಆ ಛಲಕ್ಕೆ ಹಿನ್ನೆಯಾಗಿ ಒಂದು ಗುರು ಶಕ್ತಿ ಅನ್ನೋದು ಬೇಕು. ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ. ಆರ್. ಕೆ ಯವರು ಮೂಲತ: ಎಲ್ಲಾ ಗುರುಗಳನ್ನು ಮುಂದಿಟ್ಟು ಕೆಲಸ ಮಾಡ್ತಾ ಇದ್ದಾರೆ. ಶೂನ್ಯದಿಂದ ಪ್ರಾರಂಭವಾದ ಈ ಪಯಣ ಇಷ್ಟು ಎತ್ತರಕ್ಕೂ ಬೆಳೆದರು ಕೂಡ ನಮ್ಮ ಮೂಲ ಎಲ್ಲಿಂದ ಪ್ರಾರಂಭವಾಯ್ತು, ನಾವು ಎಲ್ಲಿಂದ ಬೆಳೆದೆವು, ಹೇಗೆ ಬೆಳೆದೆವು ಎನ್ನುವ ನೆನಪಿಟ್ಟ ವಿಚಾರ ಅದು ಸೂಕ್ಷ್ಮ. ತಾನು ನಂಬಿದ ಗುರುಗಳನ್ನು ಸಮಾರಂಭದ ವೇದಿಕೆಗೆ ಕರೆದು, ತನಗೆ ವಿದ್ಯೆಯನ್ನು ಕಲಿಸಿಕೊಟ್ಟ ಗುರುಗಳಿಗೆ ಹಾಗು ವೃತ್ತಿಯನ್ನು ಕಲಿಸಿಕೊಟ್ಟ ಗುರುಗಳನ್ನುಆರಂಭದಲ್ಲಿ ಆರಿಸಿಕೊಂಡು ಈ ಲೈವ್ ಚಾನೆಲ್ ಉದ್ಘಾಟನೆಯ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಒಂದು ಪ್ರಾರಂಭ ಮಾಡಿರೋ ಸಾಧನೆ ಅದು ಕೇವಲ ರಾಜ್ಯಕಲ್ಲ, ಇಡೀ ರಾಷ್ಟ್ರಕ್ಕೆ ಪ್ರಸಾರ ಆಗುವ ಹಾಗೆ ಆಗಲಿ. ಸ್ಪೋರ್ಟ್ಸ್ ಕನ್ನಡದ ಕೀರ್ತಿ ಶಾಶ್ವತವಾಗಿ ಉಳಿಯಲಿ. ಇದನ್ನು ಬೆಳೆಸುವ ಶಕ್ತಿ ಆ ಭಗವಂತ ಅವರಿಗೆ ತುಂಬಲಿ ಎಂದು ಆಶೀರ್ವದಿಸಿದರು.
ಸ್ಪೋರ್ಟ್ಸ್ ಕನ್ನಡದ ಯೋಗ್ಯತೆಯನ್ನು ಕಂಡು ಅದಕ್ಕೆ ಸರಿಯಾಗಿ ಆಸ್ಪದ ನೀಡಿ ಸಹಕರಿಸುವ ಸ್ಟಾರ್ ವರ್ಟೆಕ್ಸ್ ನ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಅಭಿನಂದಿಸಿದರು.”*
ಈ ಸಂದರ್ಭ ಯೂಟ್ಯೂಬ್ ಚಾನೆಲ್ ನ ಪ್ರಾಯೋಜಕರಾದ ಬೆಂಗಳೂರಿನ ಸ್ಟಾರ್ ವರ್ಟೆಕ್ಸ್ ಕಂಪನಿಯ ಮಾಲಕಿ ಸಮಾಜ ಸೇವಕಿ ಮತ್ತು ಕ್ರೀಡಾ ಪ್ರೋತ್ಸಾಹಕಿ ಕುಮಾರಿ. ಡಾ. ಗಾಯತ್ರಿ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.
*”ಸ್ಪೋರ್ಟ್ಸ್ ಕನ್ನಡ ಈಗಾಗಲೇ ನಾಲ್ಕು ವರ್ಷಗಳನ್ನು ಪೂರೈಸಿ, ಐದನೆಯ ವರ್ಷದಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವುದರೊಂದಿಗೆ, ಕ್ರೀಡಾಭಿಮಾನಿಗಳನ್ನು ತಲುಪಲು ಅವರು ಮತ್ತೊಂದು ಸಂವಹನ ವಿಧಾನವನ್ನು ಹೊಂದಿದ್ದಾರೆ. ಕೆ. ಆರ್. ಕೆ ಯವರು ರಾಜ್ಯದ ಮೂಲೆ ಮೂಲೆಗೂ ಹೋಗಿ, ಒಳ್ಳೆಯ ಹೆಸರನ್ನು ಪಡೆದು, ತುಂಬಾ ಕ್ರೀಡಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.ಸ್ಪೋರ್ಟ್ಸ್ ಕನ್ನಡ ರಾಜ್ಯಾದ್ಯಂತ ಯಶನ್ಸನ್ನು ಕಂಡಿದೆ. ಸ್ಪೋರ್ಟ್ಸ್ ಕನ್ನಡದೊಂದಿಗೆ ಸಹಯೋಗ ನಿಜಕ್ಕೂ ಖುಷಿಯ ವಿಚಾರ’‘ಎಂದು ಸ್ಟಾರ್ ವರ್ಟೆಕ್ಸ್ ಕಂಪೆನಿಯ ಮಾಲಕಿ ಹಾಗೂ ಕೋಲಾರ ಜೆ.ಡಿ.ಎಸ್ ಮಹಿಳಾ ಘಟಕಾಧ್ಯಕ್ಷೆ ಕುಮಾರಿ.ಡಾ. ಗಾಯತ್ರಿ ಮುತ್ತಪ್ಪ ಹೇಳಿದರು.*
ಸ್ಪೋರ್ಟ್ಸ್ ಕನ್ನಡ ಚಾನೆಲ್‌ನ ಧ್ಯೇಯೋದ್ದೇಶಗಳನ್ನು ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್ ನ ಪ್ರಧಾನ ಸಂಪಾದಕ ಕೋಟ ರಾಮಕೃಷ್ಣ ಆಚಾರ್ಯ ವಿವರಿಸಿದರು. ”ಕರ್ನಾಟಕ ರಾಜ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಬೇಕು. ಉಡುಪಿಯಲ್ಲಿ ಈಗಾಗಲೇ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಿದೆ. ಇತರ ಜಿಲ್ಲೆಯಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗುವ ವಿಚಾರಗಳು ನಡೆಯುತ್ತಾ ಇವೆ” ಎಂದು ಭಾವುಕರಾಗಿ ಹೇಳಿದರು.
ಕೋಟ ರಾಮಕೃಷ್ಣ ಆಚಾರ್ಯ ಕುಟುಂಬಸ್ಥರು ಹಾಗೂ ಟೀಮ್ ಸ್ಪೋರ್ಟ್ಸ್ ಕನ್ನಡ ಬಳಗ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಿವೃತ್ತ ಶಿಕ್ಷಕರಾದ ಶ್ರೀ ವಿಶ್ವೇಶ್ವರ ಹಂದೆ, ಸ್ವರ್ಣೊದ್ಯಮಿ ಸೀತಾರಾಮ ಆಚಾರ್ ತೆಕ್ಕಟ್ಟೆ ಮುಂತಾದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಘು ಮಟಪಾಡಿ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುರೇಶ್ ಭಟ್ ಮೂಲ್ಕಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ಕೋಟ ರಾಮಕೃಷ್ಣ ಆಚಾರ್ಯ ಎನ್ನುವ ವ್ಯಕ್ತಿ ಕೇವಲ ಕ್ರೀಡಾ ಪ್ರೇಮಿಯಲ್ಲ. ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ವೈಭವೀಕರಣದಲ್ಲಿ ಕೋಟ ರಾಮಕೃಷ್ಣ ಆಚಾರ್ಯ ಒಂದು ದೊಡ್ಡ ವಿಶ್ವವಿದ್ಯಾಲಯ.
ಯಾರು ಏನೇ ಹೇಳಲಿ ಕ್ರಿಕೆಟ್ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ಬರಹಗಾರ ಕೆ. ಆರ್.ಕೆ. ಇವರ ಸ್ಪೋರ್ಟ್ಸ್ ಕನ್ನಡದ ಲೇಖನಗಳನ್ನು ಓದುವುದೆಂದರೆ ಅದೇನೋ ಮನಸ್ಸಿಗೆ ಖುಷಿ.
ಜೂಲೈ 7 ಅನ್ನೋದು ಬಹುಶಃ ಕೋಟ ರಾಮಕೃಷ್ಣ ಆಚಾರ್ಯರಿಗೆ ಹೇಳಿ ಮಾಡಿಸಿದ ದಿನ. ವಿಶ್ವ ಕ್ರಿಕೆಟ್ ಕಂಡ ಮಹಾನ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹುಟ್ಟಿದ ದಿನವದು. ಅದೇನೋ ಕಾಕತಾಳೀಯ. ಜುಲೈ 7, 2019 ರ ವಿಶೇಷ ದಿನದಂದು ಕೆ. ಆರ್.ಕೆ. ಸಾರಥ್ಯದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಲೋಕಾರ್ಪಣೆಗೊಂಡಿತು. ಕ್ರೀಡೆಯ ಮೇಲೆ ತನಗೆ ಇರುವ ಪ್ರೀತಿಯನ್ನು ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದರು. ಸ್ಪೋರ್ಟ್ಸ್ ಕನ್ನಡದ ಪ್ರಾಮುಖ್ಯತೆಯು ಮತ್ತಷ್ಟು ಬೆಳೆಯುತ್ತಲೇ ಇತ್ತು.
ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಕೆಲವರಿಗಂತೂ ಇವರ ಪೋಸ್ಟ್ ಗಳನ್ನೂ ನೋಡದೆ ಇದ್ದರೆ ಅದೇನೋ ಮನಸ್ಸಿಗೆ ಅಸಮಾಧಾನ. ಇದಾದ ಬಳಿಕ ಈಗ ಮತ್ತೊಮ್ಮೆ ಜುಲೈ 7, 2023 ರ ಶ್ರೇಷ್ಠ ದಿನದಂದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭವಾಗಲಿದೆ. ಮತ್ತೆ ಅದೇ ಜೂಲೈ 7 ಎಂಬ ಈ ಶುಭ ದಿನಾಂಕವು ಸ್ಪೋರ್ಟ್ಸ್ ಕನ್ನಡದ ಪಯಣದಲ್ಲಿ ಉಡುಗೊರೆಯಾಗಿ ಪ್ರಮುಖ ಪಾತ್ರವನ್ನು ವಹಿಸಲಿದೆ.
ಕ್ರೀಡೆಯ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚುತ್ತಿರುವ ಕಾರಣ ಹೊಸತೊಂದು ಅಭಿಯಾನವನ್ನು ಸ್ಪೋರ್ಟ್ಸ್ ಕನ್ನಡ ಆರಂಭಿಸುತ್ತಿದೆ. ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್ ಕಂಪನಿ ಪರಸ್ಪರ ಕೈಜೋಡಿಸಿವೆ. ಬಹುತೇಕ ಕ್ರೀಡೆಯನ್ನು ದೊಡ್ಡದಾಗಿಸುವ ಗುರಿಯನ್ನು ಇವರುಗಳು ಹೊಂದಿದ್ದಾರೆ. ಕ್ರೀಡಾ ಮಹತ್ವಾಕಾಂಕ್ಷೆ ಉತ್ತೇಜಿಸಲು ಸ್ಪೋರ್ಟ್ಸ್ ಕನ್ನಡ ಪರಿಪೂರ್ಣ ವೇದಿಕೆಯಾಗಲು ಹೊರಟಿದೆ.
ಇನ್ನೇನು ಶುಕ್ತವಾರ ಜುಲೈ 7, 2023 ರ ಶುಭ ಮುಹೂರ್ತದಲ್ಲಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಲಿದೆ. ಜುಲೈ 7 ಎಂಬ ದಿನ ಸ್ಪೋರ್ಟ್ಸ್ ಕನ್ನಡಕ್ಕೆ ಮತ್ತೆ ಅದೃಷ್ಟದ ದಿನವಾಗಲಿ ಹಾಗೂ ಈ ಚಾನೆಲ್ ಗೆಲ್ಲಲಿ.
ಉಡುಪಿ-ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಎಲ್ಲಾ ಸದಸ್ಯರೊಂದಿಗೆ ಮಾಸಿಕ ಸಮನ್ವಯ ಸಭೆಯನ್ನು ಆಯೋಜಿಸಿತು. ಜೂನ್ 28 ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ಕೈಗೊಂಡಿತು.
ಹಾಕಿ ದಂತಕಥೆ ಧ್ಯಾನ್ ಚಂದ್ ಅವರ ಜನ್ಮದಿನದಂದು ಆಗಸ್ಟ್ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಈ ಪ್ರಯುಕ್ತ ಆಗಸ್ಟ್ 29 ರಂದು ಶಾಲಾ ಮಕ್ಕಳಿಗೆ ಕ್ರಿಕೆಟ್ ಕ್ವಿಜ್ ನಡೆಸುವುದೆಂದು ನಿರ್ಧಾರಿಸಲಾಯಿತು. ಯುವ ವಿದ್ಯಾರ್ಥಿಗಳಿಗೆ ಹಿಂದಿನ ಮತ್ತು ವರ್ತಮಾನದ ಇತಿಹಾಸದ ಕ್ರಿಕೆಟ್ ಜ್ಞಾನದ ಬಗ್ಗೆ ಅರಿವು ನೀಡಲು ಇಂಟರ್ ಸ್ಕೂಲ್ ಮತ್ತು ಇಂಟರ್ ಕಾಲೇಜು ರಸಪ್ರಶ್ನೆ ನಡೆಸುವ ಉದ್ದೇಶ TCA ಉಡುಪಿಯದ್ದು.
“ಅಕ್ಟೊಬರ್ ತಿಂಗಳ ಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ನಡೆಸುವುದೆಂದು ನಿರ್ಧಾರಿಸಲಾಯಿತು. ಮಕ್ಕಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುವುದು, ಕ್ರಿಕೆಟ್ ಹೊರತುಪಡಿಸಿ ಅವರು ನಡೆಸುವ ಎಲ್ಲಾ ಕ್ರೀಡೆಗಳನ್ನು ವಿಭಾಗವಾರು ಅವಕಾಶವನ್ನು ನೀಡುವುದು ಮತ್ತು ಪ್ರತಿಭೆಯನ್ನು ಪೋಷಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಮಾರ್ಗದರ್ಶನ ಮಾಡುವುದು ಎಂಬ ನಿಟ್ಟಿನಲ್ಲಿ TCA ಉಡುಪಿ ಇದನ್ನು ನಡೆಸಲಿದೆ.ಇದು ರಾಜ್ಯದ ಯುವಕರು ಮತ್ತು ಮಕ್ಕಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿಯವರು ತಿಳಿಸಿದರು.
ಪ್ರಶಾಂತ್ ಅಂಬಲಪಾಡಿ ಕಾರ್ಯಕಾರಿ ಸದಸ್ಯರನ್ನು ಮತ್ತು ಪದಾಧಿಕಾರಿಗಳನ್ನು ಸ್ವಾಗತಿಸಿದರು…
ಉಡುಪಿ-ದಿನಾಂಕ 21.06.2023 ನೇ ಬುಧವಾರ ಸಂಜೆ 6:೦೦ಕ್ಕೆ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಸಾಮಾನ್ಯ ಸಭೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಇತ್ತೀಚೆಗಷ್ಟೇ ಅಗಲಿದ ಖ್ಯಾತ ವೀಕ್ಷಕ ವಿವರಣಾಗಾರರಾದಂತಹ ಜಾಕಿರ್ ಹುಸೇನ್ ಬಜ್ಪೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೊದಲು ಗೌರವ ಸಲ್ಲಿಸಲಾಯಿತು.
ರಾಜ್ಯಮಟ್ಟದ ಪಂದ್ಯಾಕೂಟವನ್ನು ನಡೆಸುವ ಬಗ್ಗೆ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಮಾತನಾಡಿ “ಎಲ್ಲಾ ಜಿಲ್ಲೆಗಳಲ್ಲಿ ಅಸೋಸಿಯೇಷನ್ ನ ಸ್ಥಾಪನೆಯ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಲಾಗುವುದು ಹಾಗೂ ಈ ಬಗ್ಗೆ ಹೆಚ್ಚಿನ ಜಿಲ್ಲೆ ಗಳಲ್ಲಿ ಉತ್ತಮ ಸ್ಪಂದನೆ ಇದೆ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದು ಕೂಡ ಹೇಳಿದರು.
ತದನಂತರ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಮುಂದಿನ ಸಭೆಯಲ್ಲಿ ಇದನ್ನೂ ಮಂಜೂರು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29 ರಂದು ವಿದ್ಯಾರ್ಥಿಗಳಿಗೆ ಕ್ರಿಕೆಟ್ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಚರ್ಚಿಸಲಾಯಿತು.
ಮುಂದಿನ ಸಭೆಯನ್ನು ಮುಂದಿನ ಗುರುವಾರ, ಜೂನ್ 29 ರಂದು ನಡೆಸಲಾಗುವುದು ಎಂದು ನಿರ್ಧರಿಸಲಾಯಿತು. ಈ ಸಭೆಯಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು. ಗೌತಮ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ-ಕ್ರಿಕೆಟ್ ನಮ್ಮ ರಾಷ್ಟ್ರೀಯ ಮನರಂಜನೆಯಾಗಿದೆ, ಇದನ್ನು ಲಕ್ಷಾಂತರ ಜನರು ಆಡುತ್ತಾರೆ, ವೀಕ್ಷಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಇದು ವಿನೋದ ನೀಡುವ ಸಾಮಾಜಿಕ ಕ್ರೀಡೆಯಾಗಿದೆ.
ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಟೆನಿಸ್ ಬಾಲ್ ಕ್ರಿಕೆಟ್‌ಗೆ ಉತ್ತಮ ವೇದಿಕೆಯನ್ನು ಸೃಷ್ಟಿಸುವ ಉದ್ದೇಶದಿಂದ ರೂಪುಗೊಂಡ ಒಂದು ಸಂಸ್ಥೆ. ಟೆನಿಸ್ ಬಾಲ್ ಮತ್ತು ಲೆದರ್ ಬಾಲ್ ಕ್ಷೇತ್ರದ ಗ್ರಾಮೀಣ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಸೆಪ್ಟೆಂಬರ್ 2021 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆ ಆಗಿ ಈ ಸಂಸ್ಥೆಯು ಅಸ್ಥಿತ್ವಕ್ಕೆ ಬಂದಿತು. ಟೆನಿಸ್ ಬಾಲ್ ಗೆ ಉತ್ತಮ ಅವಕಾಶ ಕಲ್ಪಿಸಲು ತಾಲೂಕುವಾರು, ಜಿಲ್ಲಾವಾರು ಟೂರ್ನಮೆಂಟ್ ಗಳನ್ನು ಆಯೋಜಿಸಿ ಪ್ರತಿಭಾನ್ವಿತ ಆಟಗಾರರನ್ನು ಮುಂಬರಲು ಅವಕಾಶ ಮಾಡಿ ಕೊಟ್ಟ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಇದೀಗ ರಾಜ್ಯಕ್ಕೆ ಮಾದರಿಯಾಗಿದೆ.
ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಮತ್ತು ಜಿಲ್ಲಾ ಮಟ್ಟದ ಪಂದ್ಯಾವಳಿಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಟೆನ್ನಿಸ್ಬಾಲ್ ಕ್ರಿಕೆಟ್ ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ಆಟಗಾರನ ಜವಾಬ್ದಾರಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಉತ್ತಮ ಶಿಸ್ತು ಮತ್ತು ಘನತೆಯೊಂದಿಗೆ ಈ ಸಂಸ್ಥೆ ನಡೆಸಿದ ಟೂರ್ನಮೆಂಟ್ ಗಳು ಟೆನಿಸ್ ಬಾಲ್‌ನ ಸುವರ್ಣ ದಿನಗಳು ಮತ್ತೆ ಕಾಣುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಟಿ.ಸಿ.ಎ ಉಡುಪಿ ಈಗಾಗಲೇ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಮತ್ತು ಕ್ರಿಕೆಟ್ ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಗೌರವಕ್ಕೆ ಪಾತ್ರವಾಗಿದೆ.
*ವಿದ್ಯಾರ್ಥಿ ದೆಸೆಯಿಂದಲೇ ಟೆನಿಸ್ಬಾಲ್ ಕ್ರಿಕೆಟ್ ಆಸಕ್ತಿ ಮೂಡಿಸುವತ್ತ ಟಿ.ಸಿ.ಎ ಚಿಂತನೆ*
ಪ್ರಸ್ತುತ ಶಾಲಾ- ಕಾಲೇಜು ಮಕ್ಕಳಿಗಾಗಿ ಪ್ರೈಮರಿ ಹಾಗು ಹೈಸ್ಕೂಲ್ ವಿಭಾಗ ಅದೇ ರೀತಿ ಜೂನಿಯರ್ ಕಾಲೇಜು ಹಾಗೂ ಡಿಗ್ರಿ ಕಾಲೇಜ್ ವಿಭಾಗಧಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗಳನ್ನೂ ನಡೆಸುವ ಪ್ರಯತಕ್ಕೆ ಕೈ ಹಾಕಿದೆ ಟಿ.ಸಿ.ಎ ಉಡುಪಿ. ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಮೊದಲ ಬಾರಿಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳು ಜೂನಿಯರ್ ಕಾಲೇಜು ಮತ್ತು ಪದವಿ ಕಾಲೇಜು ವಿಭಾಗಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿದೆ ಎಂದು ಟಿ.ಸಿ.ಎ ಉಡುಪಿಯ ಅಧ್ಯಕ್ಷರಾಗಿರುವ ಶ್ರೀಯುತ ಗೌತಮ್ ಶೆಟ್ಟಿ ಕುಂದಾಪುರ ಸ್ಪೋರ್ಟ್ಸ್ ಕನ್ನಡಕ್ಕೆ ವರದಿಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಈ ಟೂರ್ನಮೆಂಟ್ ಮೂಲಕ ಕ್ರಿಕೆಟ್ ಗೆ ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಟೂರ್ನಮೆಂಟ್ ನ ದಿನಾಂಕಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಪಂದ್ಯಾವಳಿಯು ನಮ್ಮ ಯುವಕರಲ್ಲಿ ನಾಯಕತ್ವ, ಶಿಸ್ತು, ಆತ್ಮವಿಶ್ವಾಸ, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಬೆಳೆಸುತ್ತದೆ. ಈ ವಿದ್ಯಾರ್ಥಿಗಳ ಕ್ರಿಕೆಟ್ ಕೌಶಲ್ಯಗಳು ಯಾವುದೇ ಮಟ್ಟದಲ್ಲಿರಲಿ ಭಾಗವಹಿಸುವಿಕೆಯನ್ನು ಸ್ವಾಗತಿಸುವುದು ಈ ಪಂದ್ಯಾವಳಿಯ ಉದ್ದೇಶವಾಗಿದೆ. ” ರಚನಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಇದು ಅವರ ಆಸಕ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತದೆ ಮತ್ತು ಕ್ರೀಡೆಯನ್ನು ಶ್ರದ್ಧೆಯಿಂದ ಮುಂದುವರಿಸಲು ಅವರನ್ನು ಪ್ರೇರೇಪಿಸುತ್ತದೆ” ಎಂದು ಸ್ಪೋರ್ಟ್ಸ್ ಕನ್ನಡದ ಸಂಪಾದಕ ಕೆ.ಆರ್.ಕೆ ಆಚಾರ್ಯ ತಿಳಿಸಿರುತ್ತಾರೆ.
ಶಾಲಾ ಕಾಲೇಜು ಯುವಕರು ಉತ್ತಮ ಟೆನಿಸ್ ಬಾಲ್ ಕ್ರಿಕೆಟ್ ಹಬ್ಬವನ್ನು ಸವಿಯುವಂತಾಗಲಿ ಎಂಬ ಶುಭ ಹಾರೈಕೆ ಗಳೊಂದಿಗೆ,
ಉಡುಪಿ-ನಾವು ಭಾರತೀಯರು ಕ್ರಿಕೆಟ್ ಆಟವನ್ನು ಧರ್ಮದಂತೆ ಆಚರಿಸುತ್ತೇವೆ, ಏಕೆಂದರೆ ಕ್ರಿಕೆಟ್‌ಗೆ ಹೆಚ್ಚಿದ ಗೌರವ ಮತ್ತು ಪ್ರೋತ್ಸಾಹದಿಂದಾಗಿ. ಇತ್ತೀಚೆಗೆ ದೇಶದಾದ್ಯಂತ ಕ್ರಿಕೆಟ್ ಪರ ಜೋರಾದ ಗಾಳಿ ಬೀಸುತ್ತಿದೆ.
ಇದು ಇಂದಿನ ದಿನಗಳಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರೂ ಕೂಡಾ ಆಡುವ ಕ್ರೀಡೆಯಾಗಿದೆ. ಇತ್ತೀಚಿನ ದಿನಗಳನ್ನು ‘ ದಿ ಗೋಲ್ಡನ್ ಏರಾ ಆಫ್ ದಿ ಇಂಡಿಯನ್ ವಿಮೆನ್’ಸ್ ಕ್ರಿಕೆಟ್ ‘ ಎಂದು ಹೇಳಬಹುದು.. ಇದೀಗ ಭಾರತ ಮಹಿಳಾ ತಂಡದಲ್ಲಿ ಹೊಸ ತಾರೆಯರು ಹುಟ್ಟಿಕೊಳ್ಳುತ್ತಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.
ಉಡುಪಿ ಮಹಿಳಾ ತಂಡದ ಶ್ರೇಷ್ಠ ಆಟಗಾರ್ತಿಯ ಪರಿಚಯ ಇಲ್ಲಿದೆ. ಸ್ನೇಹಿತರೇ, ಇಂದು ನಾವು ಉಡುಪಿಯ ಮಹಿಳಾ ಯುವ ಕ್ರಿಕೆಟ್ ಪ್ರತಿಭೆ ವೈಷ್ಣವಿ ಆಚಾರ್ಯ ಕಡಿಯಾಳಿ ಬಗ್ಗೆ ಹೇಳಲಿದ್ದೇವೆ. ಈ ಹೆಸರು ಅನೇಕ ಜನರಿಗೆ ಗೊತ್ತಿರಲಿಕ್ಕಿಲ್ಲ ಹೌದು! ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಸ್ಟಾರ್ ಮಹಿಳಾ ಆಟಗಾರ್ತಿ ವೈಷ್ಣವಿ ಆಚಾರ್ಯ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಆರಂಭದ ದಿನಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಟಪಾಡಿಯ ಕೆ ಆರ್ ಎಸ್ ಅಕಾಡೆಮಿಯ ಉದಯ ಕುಮಾರ್ ಕಟಪಾಡಿ ಆಕೆಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು. ಇತ್ತೀಚಿನ ದಿನಗಳಲ್ಲಿ ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನ ಮುಖ್ಯ ತರಬೇತುದಾರ ಶ್ರೀ ಪ್ರಭಾಕರ್ ಶೆಟ್ಟಿ ಅವರ ಅಡಿಯಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಾಳೆ, ಇವರು ತಮ್ಮ ವೇಗದ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಿಂದ ಗಮನ ಸೆಳೆದವರು. ಬಲಗೈ ಬ್ಯಾಟರ್ ಆಗಿರುವ ಇವರು ಬಲಗೈನಲ್ಲಿ ಬೌಲಿಂಗ್ ಮಾಡುತ್ತಾರೆ. 18 ವರ್ಷ ಪ್ರಾಯದ ವೈಷ್ಣವಿ ಆಚಾರ್ಯ ಪ್ರತಿಷ್ಠಿತ ವನಿತಾ ಕ್ರಿಕೆಟ್ ಕೂಟದಲ್ಲಿ ಭಾಗವಹಿಸುತ್ತಿರುವ ಆಟಗಾರ್ತಿ. ರಾಜ್ಯದಲ್ಲಿ ನಡೆದ ಅನೇಕ ಮಹಿಳಾ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತನ್ನ ಆಲ್ ರೌಂಡ್ ಪ್ರದರ್ಶನದಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅವರ ಬೌಲಿಂಗ್ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದು, ಇವರು ಭವಿಷ್ಯದ ಭರವಸೆಯ ಬೌಲರ್ ಎನಿಸಿದ್ದಾರೆ. ಜೊತೆಗೆ ಅವರ ಬ್ಯಾಟಿಂಗ್ ಸೆನ್ಸ್ ಅದ್ಭುತವಾಗಿದೆ. ಅಮೋಘ ಕ್ರಿಕೆಟ್ ಪ್ರದರ್ಶನಕ್ಕಾಗಿ ಹಲವಾರು ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ. ಕ್ರಿಕೆಟ್ ವಿಷಯ ಬಂದಾಗ ಈಕೆಯ ಆಟಕ್ಕೆ ಅನೇಕರು ಮನಸೋತಿದ್ದುಂಟು.
ಉಡುಪಿಯ ಸ್ನೇಹ ಟ್ಯೂಟೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿ ಯು ಸಿ ಓದುತ್ತಿರುವ ವೈಷ್ಣವಿ ಆಚಾರ್ಯ 19 ವರ್ಷದೊಳಗಿನ ಕರ್ನಾಟಕ ಮಹಿಳಾ ಟಿ 20 ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವ ಅವಕಾಶ ಪಡೆದಿದ್ದರು. 2022 ರಲ್ಲಿ ಮೊದಲ ಬಾರಿಗೆ ಅಂಡರ್ 19 ರಾಜ್ಯ ಸಂಭಾವ್ಯರ ಪಟ್ಟಿಯಲ್ಲಿ ಆಡುವ ಅರ್ಹತೆ ಸಂಪಾದಿಸಿದರು. 19 ವರ್ಷದೊಳಗಿನ ಟಿ 20 ತಂಡದ ಪಂದ್ಯಕ್ಕೆ ಆಯ್ಜೆಯಾಗಿದ್ದ ವೈಷ್ಣವಿ ಆಚಾರ್ಯ, ಇವರು ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂದೂ ಸಹ ಗುರುತಿಸಲ್ಪಟ್ಟಿದ್ದಾರೆ. ವನಿತಾ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ವೈಷ್ಣವಿ ಆಚಾರ್ಯ ರಾಜ್ಯ ವಲಯ ಸ್ಥಳೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.. ರಾಜ್ಯಾದ್ಯಂತ ನಡೆದ ಹಲವು ಟೂರ್ನಮೆಂಟ್ ನಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ಪಂದ್ಯಾವಳಿಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇದುವರೆಗಿನ ಸಾಧನೆ:
2022ರ ಅಕ್ಟೋಬರ್ ನಲ್ಲಿ ಅಂಡರ್ 19 ಕರ್ನಾಟಕ ತಂಡಕ್ಕೆ ಸೆಲೆಕ್ಟ್ ಆದ ವೈಷ್ಣವಿ ಆಚಾರ್ಯ 19 ವರ್ಷದೊಳಗಿನ ರಾಜ್ಯ ಸಂಭವನೀಯರು ಪಂದ್ಯದಲ್ಲಿ ರಾಜ್ಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.
ನಂತರ ರಾಜ್ಯ ವಲಯ ಸ್ಥಳೀಯ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದು, ಎರಡು ಬಾರಿ ಅವರು ಪ್ರತಿನಿಧಿಸಿದ ತಂಡ ವಿಜೇತರಾಗಿ ಹೊರಹೊಮ್ಮಿತು. ಬೌಲಿಂಗ್‌ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ವೈಷ್ಣವಿ ಆಚಾರ್ಯ ನಂತರ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ.
2022 ರಲ್ಲಿ ನೆನಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿ ಇವರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಮೈಸೂರ್ ನಲ್ಲಿ ನಡೆದ ಮಾಫ್ಯೂಸಿಲ್ ವಿಮೆನ್’ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್‌ಗಳ ಸಾಧನೆಗೈದು ವುಮನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು.
ಸಿ ಸಿ ಎಲ್ 2023 ರಲ್ಲಿ ರನ್ನರ್ ಅಪ್ ಪ್ರಶಸ್ತಿ
ಸಿ ಪಿ ಎಲ್ 2023 ರಲ್ಲೂ ಬ್ಯಾಕ್ ಟು ಬ್ಯಾಕ್ 5 ಬೌಂಡರಿಗಳನ್ನು ಬಾರಿಸಿ, ಅತ್ಯಧಿಕ ರನ್ ಹೊಡೆದು ವುಮನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದರು.
ಉಡುಪಿ ಸಿಂಗರ್ಸ್ ಟ್ರೋಫಿ 2023 ರಲ್ಲಿ ವಿನ್ನರ್ಸ್
ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿದ್ದು ಸ್ಥಳೀಯ ಮಟ್ಟದ ಟೂರ್ನಿಗಳಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್.
” ಕ್ರಿಕೆಟ್ ಮೇಲಿನ ಆಸಕ್ತಿಯಿಂದ, ಕಠಿಣ ಪರಿಶ್ರಮದಿಂದ ಮತ್ತು ಹಿರಿಯರ ಪ್ರೇರಣೆ, ಹಾಗೂ ಕೋಚ್ ಗಳ ಮಾರ್ಗದರ್ಶನದಿಂದ ಕ್ರಿಕೆಟ್‌ಪಟು ಆಗಿದ್ದೇನೆ. ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ಖಂಡಿತವಾಗಿಯೂ ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಸಾಧನೆಗೆ ನಿರಂತರ ಅಭ್ಯಾಸ ಹಾಗೂ ಶ್ರಮ ಮುಖ್ಯ. ಮೊದಲ ಬಾರಿ ಅಂಡರ್ 19 ರಾಜ್ಯ ತಂಡದ ಪಂದ್ಯದಲ್ಲಿಆಯ್ಕೆ ಆದಾಗ ಬಹಳಷ್ಟು ಸಂತಸ ತಂದಿತ್ತುಎಂದು ವೈಷ್ಣವಿ ಹೇಳಿದರು. ರಾಜ್ಯ ತಂಡಕ್ಕೆ ಆಯ್ಕೆಯಾಗುವ ಗುರಿ ಹೊಂದಿದ್ದು, ಹಲವು ಟೂರ್ನಿಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ” ಎಂದು ಸ್ಪೋರ್ಟ್ಸ್ ಕನ್ನಡದ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಕಳೆದ ಎರಡು ವರ್ಷಗಳಿಂದ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವೇಗಿ ವೈಷ್ಣವಿ ರಾಜ್ಯ ಕಿರಿಯರ ತಂಡದ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರ ತಂದೆ ಸತೀಶ್ ಆಚಾರ್ಯ ಅಕ್ಕಸಾಲಿಗರಾಗಿದ್ದಾರೆ ಮತ್ತು ಅವರ ತಾಯಿ ಗೀತಾ ಎಸ್ ಆಚಾರ್ಯ ಅವರು ಟೈಲರಿಂಗ್ ಅಂಗಡಿಯನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಆಸೆ ಅವಳಲ್ಲಿ ಬೇರೂರಿದೆ. ಮುಂದೆ ಬೆಂಗಳೂರಿನ ಪ್ರಸಿದ್ಧ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿ ಪಡೆಯುವ ಆಸೆ ಇದ್ದು, ಸೂಕ್ತ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ . ಉಡುಪಿಯ ಈ ಮಹಿಳಾ ಕ್ರಿಕೆಟ್ ಪ್ರತಿಭೆಗೆ ಈಗ ನೆರವಿನ ಹಸ್ತ ಬೇಕಿದೆ .
ವೈಷ್ಣವಿ ಆಚಾರ್ಯ ಸಾಧನೆಗೆ ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರಾದ ಕೆ ಆರ್ ಕೆ ಆಚಾರ್ಯ ಅಭಿನಂದಿಸಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಧನೆ ತೋರಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ, ತಾರೆಯಾಗಿ ಬೆಳೆದು ಉಡುಪಿ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಕಾರ್ಕಳ ಸಮೀಪದ ರಂಗನಪಲ್ಕೆ ಕೌಡೂರು ಸ್ಟೇಡಿಯಂ ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್ ೧೪ ಕ್ರಿಕೆಟ್ ಪಂದ್ಯಾಟಕ್ಕೆ ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಹಿರಿಯ ಆಟಗಾರರಾದ ಸದಾನಂದ ಶಿರ್ವ ಚಾಲನೆ ನೀಡಿದರು.
ಸಾಗರ, ಭದ್ರಾವತಿ,ಮೈಸೂರು, ಬ್ರಹ್ಮಾವರ, ಮಂಗಳೂರು, ಮಣಿಪಾಲ, ಶಿರ್ವ, ಪುತ್ತೂರು ಭಾಗದ ಒಟ್ಟು ೧೨ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ. ಮುಂದಿನ ಐದು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.
ಈ ಸಂದರ್ಭ ಕೌಡೂರು ಸ್ಟೇಡಿಯಂ ಸಂಸ್ಥಾಪಕ ಲಾರೆನ್ಸ್ ಸಲ್ದಾನ ಕೌಡೂರು, ಮೈದಾನದ ವ್ಯವಸ್ಥಾಪಕ ಮೆಲ್ವಿನ್ ನೊರೊನ್ಹಾ , ಪಂದ್ಯಾಟ ಸಂಯೋಜಕ ಸದಾನಂದ ಶಿರ್ವ ಮತ್ತಿತರರು ಇದ್ದರು.
ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಏಪ್ರಿಲ್ 8 ರಿಂದ 12 ರ ವರೆಗೆ, ಲೀಗ್ ಕಮ್ ನಾಕ್ ಔಟ್ ರೂಪದಲ್ಲಿ ಪ್ರತೀ ದಿನ ಮೂರು ಪಂದ್ಯಗಳು ನಡೆಯಲಿವೆ.
ಭಾಗವಹಿಸುವ ತಂಡಗಳು:
ಬೆಳ್ಳಿಪಾಡಿ ಆಳ್ವಾಸ್ ಅಕಾಡೆಮಿ ಬ್ರಹ್ಮಾವರ,
22 ಯಾರ್ಡ್ಸ್ ಸ್ಕೂಲ್ ಆಫ್ ಅಕಾಡೆಮಿ ಮಂಗಳೂರು,
ಪುತ್ತೂರು ಕ್ರಿಕೆಟ್ ಅಕಾಡೆಮಿ ಪುತ್ತೂರು,
ಸೇಂಟ್ ಅಲೋಶಿಯಸ್ ಕ್ರಿಕೆಟ್ ಅಕಾಡೆಮಿ ಮಂಗಳೂರು,HJC ಕ್ರಿಕೆಟ್ ಅಕಾಡೆಮಿ ಶಿರ್ವ,
ಉಡುಪಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ಮಣಿಪಾಲ,ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಕರಾವಳಿ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಸಾಗರ್ ಬಾಯ್ಸ್ ಇಲೆವೆನ್ ಸಾಗರ,
ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ಮೈಸೂರು,
ರಘುವೀರ್ ಕ್ರಿಕೆಟ್ ಅಕಾಡೆಮಿ ಭದ್ರಾವತಿ.
ಸನ್ ರೈಸ್ ಕ್ರಿಕೆಟ್ ಅಕಾಡೆಮಿ ಆಯೋಜಿಸಿರುವ ದಿ. ಶ್ರೀಮತಿ ಲೂಸಿ ಸಲ್ದಾನ ಇವರ ಸ್ಮರಣಾರ್ಥ ನಡೆಯುವ ರಾಜ್ಯಮಟ್ಟದ 14 ರ ವಯೋಮಿತಿಯ ಈ ಲೆದರ್ ಬಾಲ್ T-20 ಕ್ರಿಕೆಟ್ ಪಂದ್ಯಾವಳಿಗೆ ಸ್ಪೋರ್ಟ್ಸ್ ಕನ್ನಡ. ಕಾಮ್ ಶುಭಾಶಯ ಕೋರುತ್ತಿದೆ. ಕ್ರಿಕೆಟ್ ನಮ್ಮ ಪ್ರಮುಖ ಆಟ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರರು ಕ್ರೀಡಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ , ಕ್ರಿಕೆಟ್‌ನಲ್ಲಿ ಉತ್ಸಾಹವನ್ನು ಹೊಂದಿ ಮತ್ತು ಉತ್ತಮ ಪ್ರದರ್ಶನ ತೋರ್ಪಡಿಸಿ ಮುಂದಿನ ಕ್ರಿಕೆಟ್ ತಾರೆಯಾಗುವ ಅವಕಾಶವನ್ನು ಪಡೆದುಕೊಳ್ಳಿ ಎಂದು ಹಾರೈಸುತ್ತಿದೆ.