ಸೋಡಾ ಬಾಟಲ್ ಮಾರುತ್ತಿದ್ದ ಹುಡುಗ ಭಾರತದ ಫುಟ್ಬಾಲ್ ದಿಗ್ಗಜನಾದ ಕಥೆ..!

ಸೋಡಾ ಬಾಟಲ್ ಮಾರುತ್ತಿದ್ದ ಹುಡುಗ ಭಾರತದ ಫುಟ್ಬಾಲ್ ದಿಗ್ಗಜನಾದ ಕಥೆ..!

ಸೋಡಾ ಬಾಟಲ್ ಮಾರುತ್ತಿದ್ದ ಹುಡುಗ ಭಾರತದ ಫುಟ್ಬಾಲ್ ದಿಗ್ಗಜನಾದ ಕಥೆ..!

ಕೇರಳದ ತ್ರಿಶೂರ್’ನಲ್ಲೊಂದು ಮುನ್ಶಿಪಲ್ ಕಾರ್ಪೋರೇಷನ್ ಕ್ರೀಡಾಂಗಣ.. ಆಡುವ ಹುಡುಗರಿಗೆ, ಯುವಕರಿಗೆ.. ವಾಕಿಂಗ್ ಮಾಡಲು ಬರುವ ವಯಸ್ಕರಿಗೆಲ್ಲಾ ಆ ಮೈದಾನವೇ ಆಶ್ರಯದಾತ.. 

ಮೈದಾನದ ಹೊರಗೊಬ್ಬ ಮಿಂಚಿನ ಕಣ್ಣುಗಳ ಹುಡುಗ ನಿಂತಿರುತ್ತಿದ್ದ.. ಕೈಯಲ್ಲಿ ಸೋಡಾ ಬಾಟಲ್’ಗಳು.. ಒಂದು ಸೋಡಾ ಬಾಟಲ್ ಮಾರಿದರೆ ಅವನಿಗೆ 10 ಪೈಸೆ ದುಡ್ಡು ಸಿಗುತ್ತಿತ್ತು. 

ಬಡ ತಂದೆ ತಾಯಿಗೆ ನೆರವಾಗಲೆಂದು ಬೆಳಗ್ಗೆಯಿಂದ ಸಂಜೆಯವರೆಗೂ ತ್ರಿಶೂರ್ ಮುನ್ಶಿಪಲ್ ಕಾರ್ಪೊರೇಷನ್ ಮೈದಾನದ ಹೊರಗೆ ನಿಂತು ಸೋಡಾ ಬಾಟಲ್ ಮಾರುತ್ತಿದ್ದ ಹುಡುಗನ ಕಣ್ಣುಗಳು ಮಾತ್ರ ಯಾವಾಗಲೂ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಡುತ್ತಿದ್ದ ಹುಡುಗರನ್ನೇ ದಿಟ್ಟಿಸುತ್ತಿದ್ದವು. ಮೈದಾನದ ಗೇಟ್ ಬಳಿ ನಿಂತು ಆಟ ನೋಡುತ್ತಿದ್ದವನ ಕಣ್ಣುಗಳಲ್ಲಿ ಕೋಟಿ ಕನಸುಗಳು.

ಅವನಿಗೂ ಫುಟ್ಬಾಲ್ ಆಡಬೇಕೆಂಬ ಆಸೆ.. ಆದರೆ ಪರಿಸ್ಥಿತಿ ಅವನ ವಿರುದ್ಧವಾಗಿ ನಿಂತಿತ್ತು. ಜೀವನ ನಡೆಯಬೇಕೆಂದರೆ ಸೋಡಾ ಬಾಟಲ್’ಗಳನ್ನು ಮಾರಲೇಬೇಕಿತ್ತು. ಹಾಗೋ ಹೀಗೋ ಸಿಕ್ಕ ಸಮಯಗಳಲ್ಲಿ ಮೈದಾನಕ್ಕೆ ನುಗ್ಗಿ ಬಿಡುತ್ತಿದ್ದ. ಓರಗೆಯ ಹುಡುಗರು ಬೆಚ್ಚಿ ಬೀಳುವ ರೀತಿಯಲ್ಲಿ ಕಾಲ್ಚಳಕ ತೋರಿಸುತ್ತಿದ್ದ.. 

ವರ್ಷಗಳು ಉರುಳಿದವು.. ಸೋಡಾ ಬಾಟಲ್ ಮಾರುತ್ತಾ ಮಾರುತ್ತಾ ಕಾಲ್ಟೆಂಡಾಟದ ಅಭ್ಯಾಸ ನಡೆಸಿದವನು ಫುಟ್ಬಾಲ್’ನಲ್ಲಿ ಪಳಗಿ ಬಿಟ್ಟ.. ಹೀಗೇ ಒಂದು ದಿನ ಆಡುತ್ತಿದ್ದಾಗ ಅವನ ಪಾಲಿಗೆ ದೇವರಾಗಿ ಬಂದವರು ಕೇರಳ ಅಂದಿನ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಕೆ ಜೋಸೆಫ್. 

ಹುಡುಗನ ಫುಟ್ಬಾಲ್ ಕೌಶಲ್ಯ, ಕಾಲುಗಳಲ್ಲಿದ್ದ ಆ ವೇಗ, ಚೆಂಡನ್ನು ಕುಣಿಸುತ್ತಾ ಮುನ್ನುಗ್ಗುತ್ತಿದ್ದ ಪರಿಯನ್ನು ನೋಡಿದ ಜೋಸೆಫ್ ಒಂದು ಕ್ಷಣ ಬೆಕ್ಕಸ ಬೆರಗಾಗಿ ಬಿಡುತ್ತಾರೆ. ‘ಯಾರಿವನು’ ಎಂದು ವಿಚಾರಿಸುತ್ತಾರೆ. ನೇರವಾಗಿ ಹುಡುಗನ ಬಳಿ ಹೋದವರೇ, ‘ಬಾ ನನ್ನ ಜೊತೆ, ನಿನ್ನನ್ನು ಫುಟ್ಬಾಲ್ ಆಡಿಸುತ್ತೇನೆ’ ಎಂದು ಕರೆದೊಯ್ಯುತ್ತಾರೆ. ಹಾಗೆ ಬಂದು ತಲುಪಿದ್ದು ಕೇರಳ ಪೊಲೀಸ್ ಫುಟ್ಬಾಲ್ ಕ್ಲಬ್’ಗೆ. 17ನೇ ವರ್ಷದಲ್ಲಿ ಹುಡುಗ ಕೇರಳ ಪೊಲೀಸ್ ಫುಟ್ಬಾಲ್ ತಂಡ ಸೇರುತ್ತಾನೆ.. ಮುಂದಿನದ್ದು ಚರಿತ್ರೆ..

ತ್ರಿಶೂರ್’ನಲ್ಲಿ ಸೋಡಾ ಬಾಟಲ್’ಗಳನ್ನು ಮಾರುತ್ತಿದ್ದ ಅದೇ ಹುಡುಗ 1992ರಲ್ಲಿ ಭಾರತ ಪರ ಆಡುತ್ತಾನೆ.. ದೇಶದ ಬಹುತೇಕ ಫುಟ್ಬಾಲ್ ತಂಡಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಭಾರತದ ಅತೀ ದೊಡ್ಡ ಫುಟ್ಬಾಲ್ ಹೀರೋ ಆಗಿ ಬೆಳೆದು ನಿಲ್ಲುತ್ತಾನೆ.. ಅಂದ ಹಾಗೆ ಅವನ ಹೆಸರು ವಿಜಯನ್.. ಐ.ಎಂ ವಿಜಯನ್.. ಇನಿವಲಪ್ಪಿಲ್ ಮಣಿ ವಿಜಯನ್.

ಭೈಚುಂಗ್ ಭುಟಿಯಾ, ಸುನಿಲ್ ಛೆಟ್ರಿಗೂ ಮೊದಲು ಭಾರತದ ಫುಟ್ಬಾಲ್ ಚರಿತ್ರೆಯಲ್ಲಿ ರಾರಾಜಿಸಿದ್ದ ಹೆಸರು ಐ.ಎಂ ವಿಜಯನ್. 

1999ರಲ್ಲಿ ನಡೆದ ದಕ್ಷಿಣ ಏಷ್ಯನ್ ಫುಟ್ಬಾಲ್ ಫೆಡರೇಶನ್ ಕಪ್ ಗೆದ್ದುಕೊಟ್ಟದ್ದು ಅವರ ವೃತ್ತಿಬದುಕಿನ ಸುವರ್ಣ ಸಾಧನೆ. ಆ ಟೂರ್ನಿಯಲ್ಲಿ ಭೂತಾನ್ ವಿರುದ್ಧ ಕೇವಲ 12 ಸೆಕೆಂಡ್’ಗಳಲ್ಲಿ ಆ ಕಾಲಕ್ಕೆ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ವೇಗದ ಗೋಲು ಬಾರಿಸಿ ದಾಖಲೆ ಬರೆದಿದ್ದವರು ಐ.ಎಂ ವಿಜಯನ್.

1986ರಲ್ಲಿ 17 ವರ್ಷದವನಿದ್ದಾಗ ಕೇರಳ ಪೊಲೀಸ್ ಫುಟ್ಬಾಲ್ ತಂಡ ಸೇರಿದ್ದ ಐ.ಎಂ ವಿಜಯನ್, 2025ರಲ್ಲಿ ಕೇರಳ ಪೊಲೀಸ್ ಇಲಾಖೆಯಿಂದ ನಿವೃತ್ತರಾಗುತ್ತಾರೆ. 2003ರಲ್ಲಿ ಅರ್ಜುನ ಪ್ರಶಸ್ತಿ, ಈ ವರ್ಷ ಪದ್ಮಶ್ರೀ ಪ್ರಶಸ್ತಿ.. ವಿಜಯನ್ ಅವರ ಸ್ಫೂರ್ತಿಯುತ, ವೈಭವಯುತ ವೃತ್ತಿಜೀವನದ ಹಿಂದಿನ ಹೋರಾಟದ ಬದುಕೇ ಒಂದು ಚರಿತ್ರೆ..

 

-ಸುದರ್ಶನ್

Leave a Reply

Your email address will not be published. Required fields are marked *