ದಮ್ಮಾಮ್ ಕೆಪಿಎಲ್ ಸೀಸನ್-4: ಕುಂದಾಪುರ ಫೈಟರ್ಸ್ ಚಾಂಪಿಯನ್

ದಮ್ಮಾಮ್ ಕೆಪಿಎಲ್ ಸೀಸನ್-4: ಕುಂದಾಪುರ ಫೈಟರ್ಸ್ ಚಾಂಪಿಯನ್

ಸೌದಿ ಅರೇಬಿಯಾದ ದಮ್ಮಾಮ್‌ನ ಕನೂ ಕ್ರಿಕೆಟ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ MRI ಬಾಲ್ ಫ್ಲಡ್‌ಲೈಟ್ ಕ್ರಿಕೆಟ್ ಟೂರ್ನಮೆಂಟ್ ಕರ್ನಾಟಕ ಪ್ರೀಮಿಯರ್ ಲೀಗ್ (KPL) ಸೀಸನ್-4–2026ರಲ್ಲಿ ಕುಂದಾಪುರ ಫೈಟರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ರೋಚಕ ಫೈನಲ್ ಪಂದ್ಯದಲ್ಲಿ ಎದುರಾಳಿ ಸೂಪರ್ ಸ್ಟ್ರೈಕರ್ಸ್ ತಂಡವನ್ನು ಮಣಿಸಿದ ಕುಂದಾಪುರ ಫೈಟರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಚಾಂಪಿಯನ್ ತಂಡಕ್ಕೆ 14,444 ಸೌದಿ ರಿಯಾಲ್, ಭಾರತೀಯ ರೂಪಾಯಿಗಳಲ್ಲಿ ಸುಮಾರು ₹3.75 ಲಕ್ಷ ನಗದು ಬಹುಮಾನ ಲಭಿಸಿತು. ಸೂಪರ್ ಸ್ಟ್ರೈಕರ್ಸ್ ತಂಡ ರನ್ನರ್‌ಅಪ್ ಸ್ಥಾನ ಪಡೆದು 7,777 ಸೌದಿ ರಿಯಾಲ್, ಸುಮಾರು ₹2 ಲಕ್ಷ ಬಹುಮಾನ ಪಡೆಯಿತು.

ಕುಂದಾಪುರ ಫೈಟರ್ಸ್ ಪರ ಇಮ್ರಾನ್ ಕೋಟೇಶ್ವರ, ರಾಜ ಸಾಲಿಗ್ರಾಮ, ಸಾಗರ್ ಭಂಡಾರಿ, ಸರ್ಫರಾಜ್ ಬಾಹುಬಲಿ ಹಾಗೂ ಇಮ್ರಾನ್ ಜಾನ್ಸನ್ ಪ್ರಮುಖ ಪಾತ್ರ ವಹಿಸಿದರು.
ರಾಜ ಸಾಲಿಗ್ರಾಮ ಫೈನಲ್ ಪಂದ್ಯದ ಹೀರೋ
ಫೈನಲ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಕುಂದಾಪುರ ಫೈಟರ್ಸ್‌ನ ರಾಜ ಸಾಲಿಗ್ರಾಮ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರಿಗೆ 500 ಸೌದಿ ರಿಯಾಲ್ + 500 ಸೌದಿ ರಿಯಾಲ್ ಹಾಗೂ ಗಿಫ್ಟ್ ಹ್ಯಾಂಪರ್ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕುಂದಾಪುರ ಫೈಟರ್ಸ್‌ನ ಇಮ್ರಾನ್ ಕೋಟೇಶ್ವರ ಪಂದ್ಯಶ್ರೇಷ್ಠರಾದರೆ, ಎರಡನೇ ಸೆಮಿಫೈನಲ್‌ನಲ್ಲಿ ಸೂಪರ್ ಸ್ಟ್ರೈಕರ್ಸ್‌ನ ನುಮಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ರಮೀಜ್‌ಗೆ ಅತ್ಯುತ್ತಮ ಬೌಲರ್ ಪ್ರಶಸ್ತಿ
ಸೂಪರ್ ಸ್ಟ್ರೈಕರ್ಸ್ ತಂಡದ ಕೇರಳ ಮೂಲದ ರಮೀಜ್ ಅವರು ಟೂರ್ನಿಯಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಅವರಿಗೆ ಗಿಫ್ಟ್ ಹ್ಯಾಂಪರ್ ನೀಡಿ ಗೌರವಿಸಲಾಯಿತು.
ಕುಂದಾಪುರ ಫೈಟರ್ಸ್ ತಂಡದ ಸರ್ಫರಾಜ್ ಬಾಹುಬಲಿ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಗೆ ಭಾಜನರಾದರು. ಅವರಿಗೂ ಗಿಫ್ಟ್ ಹ್ಯಾಂಪರ್ ನೀಡಲಾಯಿತು.
ಮನ್ಸೂರ್ ಕೆಎಲ್ ಸರಣಿ ಶ್ರೇಷ್ಠ
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಸೂಪರ್ ಸ್ಟ್ರೈಕರ್ಸ್ ತಂಡದ ಮನ್ಸೂರ್ ಕೆಎಲ್ ಅವರು ಪ್ರತಿಷ್ಠಿತ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸರಣಿ ಶ್ರೇಷ್ಠ ಆಟಗಾರನಿಗೆ 43 ಇಂಚಿನ LED ಟಿವಿ, ಚಿನ್ನದ ಬಿಸ್ಕೆಟ್ ಹಾಗೂ ಗಿಫ್ಟ್ ಹ್ಯಾಂಪರ್ ಒಳಗೊಂಡ ವಿಶೇಷ ಬಹುಮಾನ ನೀಡಲಾಯಿತು.

ಸೌದಿ ಅರೇಬಿಯಾದಲ್ಲಿ ನಡೆದ KPL ಸೀಸನ್-4 ಹಲವು ತಂಡಗಳ ಸ್ಪರ್ಧಾತ್ಮಕ ಆಟಕ್ಕೆ ಸಾಕ್ಷಿಯಾಯಿತು. ಫ್ಲಡ್‌ಲೈಟ್‌ನಲ್ಲಿ ನಡೆದ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಅಂತಿಮವಾಗಿ ಕುಂದಾಪುರ ಫೈಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಟೂರ್ನಿಗೆ ತೆರೆ ಬಿದ್ದಿತು.

Leave a Reply

Your email address will not be published. Required fields are marked *