9 C
London
Wednesday, April 17, 2024
Homeಟೆನಿಸ್ಪೈಪೋಟಿಯ ನಡುವೆಯೂ ಚಂದದ ಸ್ನೇಹವಿತ್ತು ಅವರಿಬ್ಬರ ನಡುವೆ.....!!

ಪೈಪೋಟಿಯ ನಡುವೆಯೂ ಚಂದದ ಸ್ನೇಹವಿತ್ತು ಅವರಿಬ್ಬರ ನಡುವೆ…..!!

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img

ಅದು ಇಪ್ಪತ್ತೊಂದನೇ ಶತಮಾನದ ಆದಿಕಾಲ.ಟೆನ್ನಿಸ್ ಜಗತ್ತು ಒಂದು ಹಂತದ ಖಾಲಿತನ ಅನುಭವಿಸುವ ಅಪಾಯದಲ್ಲಿತ್ತು.ದಶಕಗಳ ಕಾಲ ಟೆನ್ನಿಸ್ ಸಾಮ್ರಾಜ್ಯವನ್ನು ಅಕ್ಷರಶ: ಸಾಮ್ರಾಟನಂತೆ ಆಳಿದ ಸಾಂಪ್ರಾಸ್ ನಿವೃತ್ತಿ ಘೋಷಿಸಿದ್ದ.ಅವನಷ್ಟೇ ಬಲಾಡ್ಯನಾಗಿದ್ದ,ಅವನಷ್ಟೇ ಅಧ್ಬುತ ಆಟಗಾರನಾಗಿದ್ದ  ಆಂಡ್ರಿ ಅಗಾಸ್ಸಿಯಲ್ಲಿ ಮೊದಲಿನ ಬಲವುಳಿದಿರಲಿಲ್ಲ.ಮರಾಟ್ ಸಫೀನ್,ಲೇಯ್ಟನ್ ಹೆವಿಟ್,ಆಂಡಿ ರಾಡಿಕ್‌ನಂಥಹ ಬಲಿಷ್ಜ ಆಟಗಾರರಿದ್ದರೂ ಸ್ಥಿರತೆಯ ಕೊರತೆ ಅವರ ಆಟದಲ್ಲಿತ್ತು.2002ರಲ್ಲಿ ಆಲ್ಬರ್ಟ್ ಕೋಸ್ಟಾ,ಥಾಮಸ್ ಜಾನ್ಸನ್‌ನಂಥಹ ಆಟಗಾರರು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಾಗ ಮತ್ತು ಮುಂದೆ ಆ ಆಟಗಾರರು ಒಂದೇ ಒಂದು ಪಂದ್ಯಾವಳಿಯಲ್ಲಿಯೂ ಫೈನಲ್ ತಲುಪಲು ವಿಫಲವಾದಾಗ ಪುರುಷ  ಟೆನ್ನಿಸ್ ಜಗತ್ತಿನ ಅಸ್ಥಿರತೆಯ ಪ್ರತೀಕವದು ಎಂದೇ ಅಭಿಮಾನಿಗಳು ಭಾವಿಸಿದ್ದ ಕಾಲವದು.ಆದರೆ ಅವರಿಗೆ ಗೊತ್ತಿರಲಿಲ್ಲ.ಮುಗಿಯಿತು ಇನ್ನು ಟೆನ್ನಿಸ್‌ನ ಸ್ವರ್ಣಯುಗ ಎಂದು ಅಭಿಮಾನಿಗಳು ಹಳಹಳಿಸುವಷ್ಟರಲ್ಲಿ ನಿಧಾನಕ್ಕೆ ಅಲ್ಲೊಬ್ಬ ಎದ್ದು ನಿಂತಿದ್ದ.1998ರ ವೇಳೆಗೆ ಟೆನ್ನಿಸ್ ಲೋಕದಲ್ಲಿ ವೃತ್ತಿಪರ ಆಟಗಾರನಾಗಿ ಅಡಿಯಿಟ್ಟವನ ಆಟದಲ್ಲಿ ಅದ್ಭುತ ಶಾಸ್ತ್ರೀಯತೆ ಇತ್ತು.ಸಾಮಾನ್ಯ ಮೈಕಟ್ಟಿನವನ ತೋಳುಗಳಲ್ಲಿ ಅದ್ಭುತ ಬಲವಿತ್ತು.ವೇಗದೊಂದಿಗೆ ಚಲನಶೀಲತೆಯಿತ್ತು.ಬೇಸ್‌ಲೈನ್ ಮತ್ತು ನೆಟ್ ಸಮೀಪದ ಆಟಗಳೆರಡರಲ್ಲೂ ಪರಿಣಿತನಾಗಿದ್ದ ಅವನಿಗೆ ಕೀರ್ತಿ ಗಳಿಸಿಕೊಳ್ಳುವುದು ಕಷ್ಟವೇನಾಗಿರಲಿಲ್ಲ.2001ರ ವಿಂಬಲ್ಡನ್ ಪಂದ್ಯವೊಂದರಲ್ಲಿ ಹತ್ತೊಂಬತ್ತರ ಹರೆಯದ  ಆಟಗಾರ ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಮತ್ತು ಆವತ್ತಿನ ಟೆನ್ನಿಸ್ ಲೋಕದ ದಂತಕತೆ ಸಾಂಪ್ರಾಸ್‌ನನ್ನು ನೇರ ಸೆಟ್ಟುಗಳಲ್ಲಿ ಮಣಿಸುವ ಮೂಲಕ ಟೆನ್ನಿಸ್ ಲೋಕಕ್ಕೆ ತನ್ನ ಆಗಮನವನ್ನು ಸಾರಿದ್ದ.ನಿಧಾನಕ್ಕೆ ಯಶಸ್ಸು ಅವನತ್ತ ದೃಷ್ಟಿ ಬೀರಲಾರಂಭಿಸಿತ್ತು.2002ರಲ್ಲಿ ತನ್ನ ಚೊಚ್ಚಲ ಮಾಸ್ಟರ್ಸ್ ಸರಣಿಯ ಪ್ರಶಸ್ತಿಯನ್ನು ಗೆದ್ದವನು 2003ರ ಹೊತ್ತಿಗೆ ವೃತ್ತಿ ಬದುಕಿನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದ.ಆವತ್ತಿನ ಮತ್ತೊಬ್ಬ ಖ್ಯಾತ ಆಟಗಾರ ಮಾರ್ಕ್ ಫಿಲಿಫೌಸಿಸ್‌ನನ್ನು ಮಣಿಸಿ ಬದುಕಿನ ಮೊದಲ ಗ್ರಾಂಡ್ ಗೆಲುವಿನ ರುಚಿ ಕಂಡ ಟೆನ್ನಿಸ್ ಮಾಂತ್ರಿಕನ ಹೆಸರು ರೋಜರ್ ಫೆಡರರ್..!!
ನಂತರ ಫೆಡರರ್ ಎಂಬ ದೈತ್ಯ ಪ್ರತಿಭೆಯದ್ದು ಅಕ್ಷರಶ: ಅಟ್ಟಹಾಸ.2004ರ ಆಸ್ಟ್ರೇಲಿಯನ್ ಓಪನ್ನಿನ ಫೈನಲ್ಲಿನಲ್ಲಿ ಮರಾಟ್ ಸಫಿನ್‌ನನ್ನು ಮಣಿಸಿದ ಫೆಡರರ್ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಲ್ಲದೇ ವಿಶ್ವದ ನಂಬರ್ ವನ್ ಆಟಗಾರನ ಸ್ಥಾನವನ್ನೂ ಅಲಂಕರಿಸಿಬಿಟ್ಟ.ಅದೇ ವರ್ಷದ ವಿಂಬಲ್ಡನ್‌ನಲ್ಲಿ ಆಂಡಿ ರಾಡಿಕ್,ಮತ್ತು ಯು ಎಸ್ ಓಪನ್ನಿನಲ್ಲಿ ಲೇಯ್ಟನ್ ಹೆವಿಟ್‌ರಂಥಹ ಘಟಾನುಘಟಿಗಳನ್ನು ಮಣಿಸಿ ಅಗ್ರಸ್ಥಾನಿಯಾಗಿಯೇ ವರ್ಷಾಂತ್ಯ ಕಂಡ ಫೆಡರರ್ ಲಕ್ಷಾಂತರ ಟೆನ್ನಿಸ್ ಅಭಿಮಾನಿಗಳ ಹೃದಯ ಸಾಮ್ರಾಟನಾಗಿ ಮೆರೆದುಬಿಟ್ಟ.ಅವನ ಬಲಿಷ್ಟ ಸರ್ವ್ ಗಳು,ಬೇಕೆಂದಾಗಲೆಲ್ಲ ಅವನ ರ‍್ಯಾಕೆಟ್ಟಿನಿಂದ ಹೊರಬೀಳುತ್ತವೇನೋ  ಎಂಬ ಅನುಮಾನ ಮೂಡಿಸುವ  ಖಚಿತಾಂಕ ಸರ್ವ(ಏಸ್)ಗಳು ,ಅವನನ್ನು ಪ್ರತಿ ಆಟದಲ್ಲಿಯೂ ಗೆಲ್ಲಿಸಲಾಂರಭಿಸಿದವು.ಆಟದ ಎಲ್ಲ ವಿಭಾಗಗಳಲ್ಲಿಯೂ ಮೆರೆಯತೊಡಗಿದ ಅವನಿಗೆ ಎದುರೇ ಇಲ್ಲದಂತಾಗಿ ಹೋಗಿತ್ತು ಟೆನ್ನಿಸ್ ಲೋಕದಲ್ಲಿ.ಟೆನ್ನಿಸ್ ಲೋಕದ ಆವತ್ತಿನ ಘಟಾನುಘಟಿಗಳೆಲ್ಲ ಅವನೆದುರು ಮಂಡಿಯೂರಿ ಬಿಡುತ್ತಿದ್ದರು.  2004ರ ವರ್ಷದ ನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಪೈಕಿ ಮೂರನ್ನು ಮುಡಿಗೇರಿಸಿಕೊಂಡ ಫೆಡರರ್ ಎಂಬ ಟೆನ್ನಿಸ್ ಚಕ್ರವರ್ತಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವವರು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ,ಟೆನ್ನಿಸ್ ಪಂಡಿತರಿಗೆ ಕಾಡುವ ಹೊತ್ತಲ್ಲಿ ಉತ್ತರವಾಗಿ ಎದುರಿಗೆ ನಿಂತವನ ಹೆಸರು ರಾಫೆಲ್ ನಡಾಲ್…!!
2001ರ ವೇಳೆಗೆ ವೃತ್ತಿ ಜೀವನವನ್ನು ಆರಂಭಿಸಿದವನು ನಡಾಲ್.2002ರ ವೇಳೆಗೆ ಸ್ಪೇನ್ ತಂಡ ಡೇವಿಸ್ ಕಪ್‍ನಲ್ಲಿ ಅಮೆರಿಕೆಯ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಡಾಲ್‌ನ ಆಟ ಫೆಡರರ್‌ಗಿಂತ ಕೊಂಚ ಭಿನ್ನ.ನಡಾಲ್ ತುಂಬ ಬಲಿಷ್ಟ ದೇಹದ ಆಟಗಾರ.ಅವನ ಕಾಲುಗಳಲ್ಲಿ ಚಿಗರೆಯ ಓಟವಿತ್ತು.ಬೇಸಲೈನ್‌ನ ಹಿಂದಿನಿಂದ ಆಡುತ್ತ,ಚೆಂಡಿಗೆ ಅಧ್ಭುತ ತಿರುವುಗಳನ್ನು ನೀಡುತ್ತ,ಇಡಿಯ ಅಂಕಣವನ್ನು ಸಲೀಸಾಗಿ ಓಡುತ್ತಲೇ ಆಟ ನಿರ್ವಹಿಸುವ ಪ್ರತಿಭಾನ್ವಿತ.ಕಾಲುಗಳಲ್ಲಿನ ಚಲನಶೀಲತೆ ಮತ್ತು ತೋಳ್ಬಲ ಅವನ ಗೆಲುವಿನ ಪ್ರಮುಖ ಅಂಶಗಳು.ವರದಿಯೊಂದರ ಪ್ರಕಾರ ನಡಾಲ್‌ನ ಫೊರ್ ಹ್ಯಾಂಡ್ ಹೊಡೆತಗಳು ಚೆಂಡಿಗೆ ಕೊಡುವ ತಿರುವುಗಳು ಅವಾಸ್ತವವೆನ್ನುವಷ್ಟು ಸಹಜವಾಗಿದ್ದವು.ಟೆನ್ನಿಸ್ ಸಂಶೋಧಕ ಜಾನ್ ಯಾಂಡೆಲ್ ,’ಅಗಾಸ್ಸಿ ಮತ್ತು ಸಾಂಪ್ರಾಸ್‌ನಂಥವರು ಫೋರ್ ಹ್ಯಾಂಡ್ ಹೊಡೆದಾಗ ನಿಮಿಷಕ್ಕೆ ಸರಾಸರಿ 1800ರಿಂದ 1900 ಆವರ್ತನಗಳು ಚೆಂಡಿಗಿರುತ್ತವೆ.ನಿಜಕ್ಕೂ ಅದು ಚಂದದ ಸ್ಪಿನ್ನಿಂಗ್. ಫೆಡರರ್‌ನ ರ‍್ಯಾಕೆಟ್ಟಿನಿಂದ ಹೊರಟ ಚೆಂಡಿಗೆ ಸರಾಸರಿ 2700 ಸುತ್ತುಗಳಿರುವುದು ಅದಕ್ಕಿಂತಲೂ ಅದ್ಭುತ.ಆದರೆ ನಡಾಲ್‍ನ ವಿಷಯಕ್ಕೆ ಬಂದಾಗ ನನಗೆ ಕೊಂಚ ಗೊಂದಲವಾಯಿತು.ಚೆಂಡಿಗೆ ನಿಮಿಷಕ್ಕೆ 4700ಆವರ್ತನಗಳಿರುವಂತೆ ಹೊಡೆಯುವ ಆತನ ಶೈಲಿ ಅತಿಮಾನುಷವೆನ್ನಿಸಿಬಿಟ್ಟಿತು’  ಎಂದು ಆಶ್ಚರ್ಯಭರಿತರಾಗಿ ನುಡಿಯುತ್ತಾರೆ.ಹೀಗಿದ್ದ ನಡಾಲ್ ,ಫೆಡರರ್‌ನನ್ನು ಮುಖಾಮುಖಿಯಾಗದೇ ಇರುವುದಾದರೂ ಹೇಗೆ ಸಾಧ್ಯ ಅಲ್ಲವೇ..?

ಮೊದಲ ಬಾರಿ ಇವರಿಬ್ಬರೂ ಭೇಟಿಯಾಗಿದ್ದು 2004ರ ಮಿಯಾಮಿ ಓಪನ್ನಿನಲ್ಲಿ.ಆಸ್ಟ್ರೇಲಿಯನ್ ಓಪನ್ ಗೆದ್ದು ನಂ.೧ ಸ್ಥಾನದಲ್ಲಿದ್ದ ಫೆಡರರ್ ಅದಾಗಲೇ ಅದ್ಭುತ ಲಯದಲ್ಲಿದ್ದವನು.ಅದೇ ಆಸ್ಟ್ರೇಲಿಯನ್ ಓಪನ್ನಿನ ಮೂರನೆಯ ಸುತ್ತಿನಲ್ಲಿ ಸೋಲು ಕಂಡಿದ್ದ ಹದಿನೇಳರ ಹರೆಯದ ನಡಾಲ್ ವಿಶ್ವ ರ‍್ಯಾಂಕಿಂಗ್‍ನ ಪಟ್ಟಿಯಲ್ಲಿ 34ರಲ್ಲಿದ್ದವನು.ಫೆಡರರ್‌ನ ಸುಲಭ ತುತ್ತು ಇವನು ಎನ್ನುವುದೇ ಎಲ್ಲರ ಊಹೆ.ಆದರೆ ಆ ದಿನ  ಕತೆ ಕೊಂಚ ಬದಲಾಗಿತ್ತು.ಮೊದಲ ಬಾರಿಗೆ ಫೆಡರರ್ ಎಂಬ ದೈತ್ಯನನ್ನು ಎದುರಿಸುತ್ತಿದ್ದ ನಡಾಲ್ ಎಂಬ ಸ್ಪೇನ್ ಗೂಳಿ ಮೊದಲ ಭೇಟಿಯಲ್ಲಿಯೇ ನೇರ ಸುತ್ತುಗಳಿಂದ ಗೆಲುವು ಸಾಧಿಸಿದ್ದ.ಆ ಮೂಲಕ ಎಲ್ಲ ಟೆನ್ನಿಸ್ ಅಭಿಮಾನಿಗಳು ಆಶ್ಚರ್ಯದಿಂದ  ಹುಬ್ಬೇರಿಸುವಂತೆ ಮಾಡಿದ್ದ.ವಿಚಿತ್ರವೆಂದರೆ ಇದೇ ಮಿಯಾಮಿ ಓಪನ್‌ನ 2005ರ ಫೈನಲ್ಲಿನಲ್ಲಿ ನಡಾಲ್‍ನನ್ನು ಐದುಸೆಟ್ಟುಗಳ ಕಠಿಣ ಪರಿಶ್ರಮದ ನಂತರ ಮಣಿಸುವ ಮೂಲಕ ಸಮಬಲ ಸಾಧಿಸಿಕೊಂಡಿದ್ದ ರೋಜರ್.ಅಷ್ಟಾಗಿಯೂ ಉಳಿದ ಆಟಗಾರರ ಮೇಲೆ ಫೆಡರರ್‌ನ  ಪ್ರಭುತ್ವ ಮುಂದುವರೆದಿತ್ತು.ಅದರ ನಡುವೆಯೇ ಟೆನ್ನಿಸ್ ಲೋಕ ನಡಾಲ್‌ನ ಪ್ರತಿಭೆಯನ್ನೂ ಸೂಕ್ಷ್ಮವಾಗಿ ಗಮನಿಸಲಾರಂಭಿಸಿತ್ತು.ಇವರಿಬ್ಬರ ಭೇಟಿ ಮತ್ತೆ ಯಾವಾಗ ಎಂದುಕೊಳ್ಳುವಷ್ಟರಲ್ಲಿ 2005ರ ಸೆಮಿಫೈನಲ್ ಎದುರಿಗೆ ನಿಂತಿತ್ತು.

ಇವತ್ತಿಗೆ ನಡಾಲ್ ಫ್ರೆಂಚ್ ಓಪನ್ ಪಂದ್ಯಾವಳಿಗಳ ಸೂಪರ್ ಹೀರೊ.ಬಹುಶ: ಆತ ಫ್ರೆಂಚ್ ಓಪನ್ನಿನ ಮಣ್ಣಿನಂಕಣದಲ್ಲಿ ಮಾಡಿರಬಹುದಾದ ಸಾಧನೆಯನ್ನು ಇನ್ನೊಬ್ಬ ಆಟಗಾರ ಮರುಕಳಿಸುವುದು ಕಷ್ಟಾತೀಕಷ್ಟ.ಆದರೆ ಅಂದು ಹಾಗಲ್ಲ.ಅದು ಅವನ ಚೊಚ್ಚಲ ಫ್ರೆಂಚ್ ಓಪನ್ ಟೂರ್ನಿ.ಅಸಲಿಗೆ ಅದು ಚೊಚ್ಚಲ ಫ್ರೆಂಚ್ ಓಪನ್ ಎಂಬುದೊಂದು ದೊಡ್ಡ ವಿಷಯವೇ ಅಲ್ಲ ಎನ್ನುವಂತೆ ಆಡಿದ್ದ ನಡಾಲ್‍ನ ಎದುರಿಗೆ ಉಪಾಂತ್ಯಕ್ಕೆ ಅಡ್ಡವಾಗಿ ನಿಂತವನು ಅಗ್ರ ಶ್ರೇಯಾಂಕಿತ ಫೆಡರರ್.ಹೋರಾಟ 1 – 1 ರಿಂದ ಸಮಬಲದಲ್ಲಿದ್ದುದ್ದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿತ್ತು.ಆದರೆ ಪಂದ್ಯ ನಿಜಕ್ಕೂ ಹೇಳಿಕೊಳ್ಳುವಷ್ಟು ಕುತೂಹಲಕಾರಿಯಾಗಿ ಇರಲಿಲ್ಲ.ಎರಡನೇ  ಸೆಟ್ ಗೆದ್ದು ಕೊಂಚ ಪ್ರತಿರೋಧವೊಡ್ಡಿದ ಫೆಡರರ್ ಸುಲಭಕ್ಕೆ ನಡಾಲ್‌ನ ಬಿರುಸು ಆಟಕ್ಕೆ ಶರಣಾಗಿದ್ದ.ತನ್ನ ಚೊಚ್ಚಲ ಪಂದ್ಯಾವಳಿಯಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಡಾಲ್,ಆವೆಮಣ್ಣಿನಂಕಣದಲ್ಲಿ ತನ್ನ ಆಟದ ಬಲಾಡ್ಯತೆಯನ್ನು ಸಾಬೀತುಪಡಿಸಿದ್ದ.

2006ರ ವೇಳೆಗೆ ನಡಾಲ್ ಆಟವೂ ಸಾಕಷ್ಟು ಪ್ರಗತಿ ಕಂಡಿತ್ತು.ಹುಲ್ಲಿನಂಕಣದ ಮೇಲೆ ಗೆಲುವು ಕಾಣಲು ಅಂದಿಗೂ ಇಂದಿಗೂ ತಿಣುಕಾಡುವ ನಡಾಲ್ ಗಟ್ಟಿಯಂಕಣಗಳಲ್ಲಿ ಯಶಸ್ಸು ಕಾಣಲಾರಂಭಿಸಿದ್ದ.ಹಾಗಾಗಿ ಸಾರ್ವಕಾಲಿಕ ಶ್ರೇಷ್ಟರ ಪಟ್ಟಿ ಸೇರಲು ಓಟದಲ್ಲಿದ್ದ ಫೆಡರರ್ ಮತ್ತು ನಡಾಲ್ ಪರಸ್ಪರ ಒಬ್ಬರಿಗೊಬ್ಬರು ಮುಖಾಮುಖಿಯಾಗದೇ ಇರುವುದು ಸಾಧ್ಯವಾಗಲೇ ಇಲ್ಲ.2006ರಲ್ಲೇ ಈ ಪೈಪೋಟಿ ತಾರಕಕ್ಕೇರಿತ್ತು.ಅದೇ ವರ್ಷ ವಿಭಿನ್ನ ಅಂಕಣಗಳಲ್ಲಿ ಆರು ಬಾರಿ ಭೇಟಿಯಾದರು ಇಬ್ಬರೂ.ಆರರಲ್ಲಿ ನಾಲ್ಕು ಬಾರಿ ನಡಾಲ್ ಗೆದ್ದನಾದರೂ ಮೂರು ಬಾರಿ ಆವೆಮಣ್ಣಿನಂಕಣದಲ್ಲಿ ಭೇಟಿಯಾಗಿದ್ದು ಅವನ ಮೇಲುಗೈಗೆ ಕೊಂಚ ಧನಾತ್ಮಕ ಅಂಶವಾಯಿತು.

ಎಲ್ಲ ಆಟಗಾರರನ್ನು ಸುಲಭಕ್ಕೆ ಮಣಿಸುತ್ತಿದ್ದ ಫೆಡರರ್ ಅದೇಕೋ ನಡಾಲ್‌ನೆದುರು ಗೆಲುವಿಗೆ ತಿಣುಕುತಿದ್ದ.ಆರಂಭಿಕ ವರ್ಷಗಳ ಸೋಲು ಅವನಲ್ಲೊಂದು ಮಾನಸಿಕ ಅಡ್ಡಿಯುಂಟುಮಾಡಿತ್ತೇನೋ ಎಂಬ ಅನುಮಾನ ಅನೇಕರಿಗಿತ್ತು.2006ರ ವಿಂಬಲ್ಡನ್‍ನ ಫೈನಲ್ಲಿನಲ್ಲಿ ಮೊದಲ ಸೇಟ್ ಅತಿ ಸುಲಭಕ್ಕೆ ಗೆದ್ದನಂತರವೂ ಕೊಂಚ ತಿಣುಕಾಡಿ ಗೆದ್ದಿದ್ದು ಈ ಅನುಮಾನಕ್ಕೆ ಕಾರಣವಾಗಿತ್ತು.ನಿಮಗೆ ಗೊತ್ತಿರಲಿ.ವಿಂಬಲ್ಡನ್‌ನ ಹುಲ್ಲಿನಂಕಣ ಕಂಡ ಅತ್ಯಂತ ಬಲಿಷ್ಠ ಆಟಗಾರನೆಂದರೆ ರೋಜರ್ ಫೆಡರರ್.ಫೆಡರರ್‌ನ ಅನೇಕ ಕೌಶಲ್ಯಗಳು ನಡಾಲ್‌ಗಿರದಿದ್ದರೂ ಪಂದ್ಯ ಆರಂಭವಾಗುವ ಮುನ್ನವೇ ಒಂದು ಮಾನಸಿಕ ಮೇಲುಗೈ ನಡಾಲ್ ಸಾಧಿಸಿಬಿಟ್ಟಿರುತ್ತಿದ್ದನೇನೋ ಎನ್ನಿಸುತ್ತಿತ್ತು.ಆದರೂ ಹುಲ್ಲಿನಂಕಣದ ಮೇಲೆ ನಡಾಲ್‌ನಿಗೆ ಫೆಡರರ್‌ನ ಮೇಲೆ ಗೆಲುವು ಮರೀಚಿಕೆಯಾಗಿತ್ತು.2006ಮತ್ತು 2007ರ ವಿಂಬಲ್ಡನ್ ಫೈನಲ್ಲಿನಲ್ಲಿ ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದರೂ ಎರಡು ಬಾರಿಯೂ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ.2005,2006,2007ರ ಮೂರು ಫ್ರೆಂಚ್ ಓಪನ್ ಗೆದ್ದ ನಡಾಲ್‍ನಿಗಿನ್ನೂ ಉಳಿದ ಪಂದ್ಯವಳಿಗಳನ್ನು ಗೆದ್ದು ತನ್ನ ಪ್ರತಿಭೆಯನ್ನು ಸಾಬೀತುಪಡಿಸುವ ಅನಿವಾರ್ಯತೆವಿತ್ತು.ಅದರಲ್ಲೂ ವಿಂಬಲ್ಡನ್ ಗೆಲ್ಲದೇ ಹೋದರೆ ಟೆನ್ನಿಸ್ ಆಟಗಾರನ ಶ್ರೇಷ್ಠತೆಯಲ್ಲೇನೋ ಅಪೂರ್ಣತೆಯಿದೆ  ಎನ್ನುವುದು ಇವತ್ತಿಗೂ ಟೆನ್ನಿಸ್ ಲೋಕದ ಅಭಿಪ್ರಾಯ.ಹಾಗಾಗಿ ನಡಾಲ್‌ನಿಗೆ ವಿಂಬಲ್ಡನ್ ಗೆಲ್ಲಲೇಬೇಕಿತ್ತು.ಆದರೆ ಫೆಡರರ್‌ನಂಥಹ ಹುಲ್ಲಿನಂಕಣದ ದೈತ್ಯನಿರುವಾಗ ಅದು ಸುಲಭ ಸಾಧ್ಯವಾ..?

ಕೆಲವು ಆಟಗಾರರು ಇಷ್ಟವಾಗುವುದೇ ಅವರುಗಳಲ್ಲಿನ ಗೆಲುವಿನ ಛಾತಿಗೆ.ಆ ಎದೆಗಾರಿಕೆ ನಡಾಲ್‌ನಿಗಿತ್ತು.  ರೋಜರ್‌ನೆದುರು ಹುಲ್ಲಿನ ಮೇಲೆ ಗೆಲ್ಲುವುದು ಅತಿಕಷ್ಟವೆಂದು ಅವನಿಗೆ ತಿಳಿದಿತ್ತು.ಅಸಾಧ್ಯವಲ್ಲವೆನ್ನುವುದನ್ನು ಅವನು ಜಗತ್ತಿಗೆ ತೋರಿಸಬೇಕಿತ್ತು.ಅವನ ಸಾಹಸಕ್ಕೆ ಸಾಕ್ಷಿಯಾಗಿದ್ದು 2008ರ ವಿಂಬಲ್ಡನ್ ಅಂತಿಮ ಪಂದ್ಯ.ನಡಾಲ್ ಮೂರನೇಯ ಬಾರಿಗೆ ಹುಲ್ಲಿನಂಕಣದಲ್ಲಿ ಫೆಡರರ್‌ನನ್ನು ಎದುರಿಸುತ್ತಿದ್ದ.ಅಪಜಯದ ನೆರಳು ಅವನ ಬೆನ್ನಹಿಂದೆ ಇತ್ತು.ಮೊದಲೆರಡು ಸುತ್ತನ್ನು ಸುಲಭವಾಗಿ ನಡಾಲ್ ಸೋತಾಗ ಅಭಿಮಾನಿಗಳು ಫೆಡರರ್‌ನ ಮತ್ತೊಂದು ವಿಂಬಲ್ಡನ್ ಪಾರುಪತ್ಯವಿದು ಎಂದೇ ಭಾವಿಸಿದ್ದರು.ಆದರೆ ಆಟದ ರೋಮಾಂಚಕತೆಯಿರುವುದೇ ಅಂಥಹ ಕ್ಷಣಗಳಲ್ಲಿ ಎಂಬುದನ್ನು ಜನ ಮರೆತಿದ್ದರು.ಇತಿಹಾಸ ಸಣ್ಣಗೆ  ತಿರುಗಲಾರಂಭಿಸಿತ್ತು.ಮೂರನೇ ಮತ್ತು ನಾಲ್ಕನೇ ಸೆಟ್ಟುಗಳಲ್ಲಿ ತೀವ್ರ ಪ್ರತಿರೋಧವೊಡ್ಡಿದ್ದ ಟೈ ಬ್ರೇಕರ್‌ನಲ್ಲಿ ನಡಾಲ್ ಎರಡೂ ಸೆಟ್ಟುಗಳನ್ನು ಗೆದ್ದು ಪಂದ್ಯವನ್ನು ಸಮಬಲದ ಸ್ಥಿತಿಗೆ ತಂದು ನಿಲ್ಲಿಸಿಬಿಟ್ಟಿದ್ದ.ಅಭಿಮಾನಿಗಳಿಗೆ ಅಕ್ಷರಶ: ರಸದೌತಣ.ಅಂತಿಮ ಸೆಟ್ಟಿನಲ್ಲಿ ಇಬ್ಬರೂ ಮದಗಜಗಳಂತೆ ಸೆಣಸಾಡಿದ್ದನ್ನು ಯಾವ ಟೆನ್ನಿಸ್ ಅಭಿಮಾನಿ ಮರೆಯಲು ಸಾಧ್ಯ..? ರೋಜರ್ ಆಟದಲ್ಲಿ ಸಮುದ್ರದ ಗಾಂಭೀರ್ಯತೆಯಿದ್ದರೆ,ನಡಾಲ್‌ ಧುಮ್ಮಿಕ್ಕುವ ಜಲಪಾತ.ಕೊನೆಗೂ ಇತಿಹಾಸ ಬದಲಾಗಿತ್ತು.ಮೊಟ್ಟಮೊದಲ ಬಾರಿಗೆ ಹುಲ್ಲಿನಂಕಣದಲ್ಲಿ ಫೆಡರರ್‌ನನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಗೆದ್ದಿದ್ದ ನಡಾಲ್.ಮೊದಲ ಬಾರಿಗೆ ’ಇವನೂ ಸಹ ಫೆಡರರ್ ಮಟ್ಟದ ಆಟಗಾರನೆನ್ನುವುದರಲ್ಲಿ ಅನುಮಾನವಿಲ್ಲ’ಎಂದಿದ್ದರು ಪಂಡಿತರು.ಆ ಹೊತ್ತಿಗೆ ಇವರೀರ್ವರ ಪೈಪೋಟಿಯ ಪಟ್ಟಿಯಲ್ಲಿ ನಡಾಲ್ 12 – 6 ರ ಮುನ್ನಡೆ ಸಾಧಿಸಿದ್ದ.ಇದೇ ಗೆಲುವಿನ ದಾಟಿಯನ್ನು ಮುಂದುವರೆಸಿದ ನಡಾಲ್ 2009ರ ಆಸ್ಟ್ರೇಲಿಯನ್ ಓಪನ್ನಿನಲ್ಲಿ ಫೆಡರರ್‌ನೆದುರು ಗೆದ್ದಾಗ ಸೋಲಿನ ಹತಾಶೆಯಲ್ಲಿ ಗಳಗಳ ಅತ್ತಿದ್ದ ಫೆಡರರ್‌ನ ಅಳು ಅಭಿಮಾನಿಗಳ ಮನಕಲುಕಿದ್ದು ಖಂಡಿತ ಸುಳ್ಳಲ್ಲ.ಆದರೆ ಅದೇ ವರ್ಷ ಇನ್ನೊಂದು ಪವಾಡವೂ ನಡೆಯಿತು.ಫ್ರೆಂಚ್ ಓಪನ್ನಿನ ಏಕಮೇವಾದ್ವಿತಿಯ ರಾಜನಂತೆ ಮೆರೆಯುತ್ತಿದ್ದ ನಡಾಲ್,ಅನಿರೀಕ್ಷಿತವಾಗಿ ನಾಲ್ಕನೆಯ  ಸುತ್ತಿನಲ್ಲಿ ರಾಬಿನ್ ಸೋಡರ್‌ಲಿಂಗ್ ಎಂಬ ಆಟಗಾರನೆದುರು ಸೋತು ಹೋದ.ಅಂಥದ್ದೊಂದು ಸುವರ್ಣವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡ ಫೆಡರರ್ ತನ್ನ ಚೊಚ್ಚಲ ಮತ್ತು ಏಕೈಕ ಫ್ರೆಂಚ್ ಓಪನ್ ಗೆದ್ದುಕೊಂಡು ಕರಿಯರ್ ಸ್ಲಾಮ್ ಪೂರ್ತಿಗೊಳಿಸಿಕೊಂಡ.2015ರ ವೇಳೆಗೆ ಸೋಲು ಗೆಲುವಿನ ಪೈಪೊಟಿಯಲ್ಲಿ 23 – 11ರ ಮುನ್ನಡೆಯಲ್ಲಿದ್ದವನು ನಡಾಲ್.ಆನಂತರ ಅನೇಕ ಸರಿಸುಮಾರು ಎರಡು ವರ್ಷಗಳ ಕಾಲ ಪರಸ್ಪರರನ್ನು ಭೇಟಿಯಾಗದೇ ಹೋಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು ಎನ್ನುವಾಗಲೇ 2017ರ ಆಸ್ಟ್ರೇಲಿಯನ್ ಓಪನ್ನಿನಲ್ಲಿ ಮತ್ತೆ ಮುಖಾಮುಖಿಯಾದರು ದಿಗ್ಗಜರು.ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ನಡೆದರೂ ಸೋಲಿನ ಸುಳಿಯಿಂದ ಪಂದ್ಯ ಗೆದ್ದುನಿಂತವನು ಫೆಡರರ್.ಆ ಮೂಲಕ ತನ್ನೊಳಗಿನ ಮಾನಸಿಕ ಭಯವೊಂದರ ಮೇಲೆ ಅವನು ಜಯ ಸಾಧಿಸಿದ್ದನಾ..? ಗೊತ್ತಿಲ್ಲ.ಆದರೆ ಆ ಜಯ ಮುಂದೆ ಫೆಡರರ್,ಸತತ ಮೂರು ಪಂದ್ಯಗಳಲ್ಲಿ ನಡಾಲ್ ಮೇಲಿನ ಗೆಲುವಿಗೆ ಕಾರಣವಾಯಿತು.ಸೋಲು ಗೆಲುವಿನ ಅಂತರವೂ ತಗ್ಗಿತ್ತು.ಕೊನೆಯ ಬಾರಿ ಇಬ್ಬರೂ ಪರಸ್ಪರ ಮುಖಾಮುಖಿಯಾದಾಗ ರೋಜರ್ ಫೆಡರರ್ ಗೆಲುವು ಸಾಧಿಸಿದ್ದ.ಸಧ್ಯಕ್ಕೆ ಈ ಪಟ್ಟಿ 24 – 16ರಲ್ಲಿ ನಡಾಲ್ ಪರವಾಗಿ ನಿಂತಿದೆ.

ಟೆನ್ನಿಸ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಟ ಪೈಪೋಟಿಗಳಲ್ಲಿ ನಿಸ್ಸಂಶಯವಾಗಿ ನಡಾಲ್ ಮತ್ತು ಫೆಡರರ್ ನಡುವಣ ಜಿದ್ದಾಜಿದ್ದಿ ಅಗ್ರಸ್ಥಾನಿಯಾಗಿ ನಿಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ.ಅಭಿಮಾನಿಗಳಿಗೆ ಬಿಡಿ,ಸ್ವತ: ಪಂದ್ಯಾವಳಿಗಳ ಆಯೋಜಕರಿಗೆ ಇವರಿಬ್ಬರ ಬಲಾಬಲಗಳ ಪರೀಕ್ಷೆಯ ಕುತೂಹಲವೆಷ್ಟಿತ್ತೆಂದರೆ ಆವೇಮಣ್ಣಿನಂಕಣದ ಸಾಮ್ರಾಟನಾಗಿರುವ ನಡಾಲ್ ಮತ್ತು ಹುಲ್ಲಿನಂಕಣದ ಚಕ್ರವರ್ತಿ ಫೆಡರರ್‌ನ ನಡುವಣ ’ಕ್ಲಾಶ್ ಆಫ್ ಸರ್ಫೇಸ್‍ಸ್’ಎಂಬ ವಿಭಿನ್ನ ಮಾದರಿಯ ಪಂದ್ಯ ಆಯೋಜಿಸಿ ಆಟಗಾರರ ನೈಜ ಸಾಮರ್ಥ್ಯ ಅರಿವಿಗೆ ಪ್ರಯತ್ನಿಸಿದ್ದರು ಆಯೋಜಕರು.ಅಂಕಣದ ಒಂದು ಭಾಗ ಹುಲ್ಲಿನದ್ದಾಗಿದ್ದರೆ ಮತ್ತೊಂದು ಪಾರ್ಶ್ವ ಆವೆಮಣ್ಣಿನದ್ದಾಗಿತ್ತು ಎನ್ನುವುದು ಈ ಪಂದ್ಯದ ವಿಶೇಷ.2007ರಲ್ಲಿ ಸರಿಸುಮಾರು ಹದಿನಾರು ಲಕ್ಷ ಡಾಲರುಗಳಷ್ಟು ಖರ್ಚಿನಲ್ಲಿ ,ಹತ್ತೊಂಬತ್ತು ದಿನಗಳ ಕಾಲಾವಧಿಯಲ್ಲಿ ನಿರ್ಮಾಣವಾದ ವಿಶಿಷ್ಟ ಅಂಕಣದ ಆ ಪಂದ್ಯದಲ್ಲಿ ನಡಾಲ್ ಟೈಬ್ರೇಕರಿನಡಿ ಗೆಲುವು ಸಾಧಿಸಿದ್ದ.

ಆದರೆ ಅದೊಂದು ಪಂದ್ಯವನ್ನೇ ಸಾರ್ವಕಾಲಿಕ ಶ್ರೇಷ್ಠರ ನಡುವಣ ಮೇಲು ಕೆಳಗಿನ ವ್ಯಾಖ್ಯಾನಕ್ಕೆ ಮಾನದಂಡವಾಗಿ ಬಳಸುವುದು ಮೂರ್ಖತನವಾದೀತು.ನಡಾಲ್‍ನ ವೀರಾಭಿಮಾನಿಯಾಗಿರುವ ನಾನು ಮತ್ತು ನನ್ನಂಥಹ ಅನೇಕರೂ ರೋಜರ್ ಫೆಡರರ್‌ನ ಆಟದಲ್ಲಿನ ಕಲಾತ್ಮಕತೆ ನಡಾಲ್ ಆಟದಲ್ಲಿಲ್ಲ ಎನ್ನುವುದನ್ನು ಒಪ್ಪಲೇಬೇಕು.ಫೆಡರರ್‌ನಷ್ಟು ಸುಲಭಕ್ಕೆ ಏಸ್‌ಗಳನ್ನು ಸಿಡಿಸುವುದು ಸಹ ನಡಾಲ್‌ಗೆ ಸಾಧ್ಯವಾಗಿಲ್ಲ.ಹಾಗೆಂದು ನಡಾಲ್ ಸಾಮಾನ್ಯನೇನಲ್ಲ.ನಡಾಲ್‌ನ ಒಳಹೊರಗು ಫೋರ್ ಹ್ಯಾಂಡ್‍ ಹೊಡೆತವನ್ನು ಮೀರಿಸುವ ಇನ್ನೊಬ್ಬ ಆಟಗಾರನಿಲ್ಲ.ಅವನಂತೆ ಗಾಳಿಯಲ್ಲಿಯೇ ಚೆಂಡಿಗೊಂದು ತಿರುವು ಕೊಡುವ,ಮೈದಾನದುದ್ದಕ್ಕೂ ಓಡಾಡುವ ಸಾಮರ್ಥ್ಯವಿರುವ ಆಟಗಾರರು ತೀರ ಕಡಿಮೆ.ಒಟ್ಟಾರೆ ಅಂಕಿಅಂಶಗಳಲ್ಲಿ ಫೆಡರರ್ ಒಟ್ಟು ಇಪ್ಪತ್ತು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರೆ,ನಡಾಲ್ ಗೆದ್ದ ಪ್ರಶಸ್ತಿಗಳ ಸಂಖ್ಯೆ ಹದಿನೆಂಟು.ನಡಾಲ್ ಹುಲ್ಲಿನಂಕಣದಲ್ಲಿ ದುರ್ಬಲ ಎಂಬುದು ಅನೇಕರ ಅಂಬೋಣ.ಫೆಡರರ್ ಆವೆಮಣ್ಣಿನಂಕಣದಲ್ಲಿ ದುರ್ಬಲ ಎನ್ನುವುದು ಕೆಲವರ ಅಭಿಪ್ರಾಯ.ಸೂಕ್ಷ್ಮವಾಗಿ ಗಮನಿಸಿದರೆ ಎರಡೂ ಮಾತುಗಳು ಸತ್ಯವಲ್ಲ.ಐದು ಬಾರಿ ವಿಂಬಲ್ಡನ್ ಫೈನಲ್ಲಿ ತಲುಪಿಕೊಂಡ ನಡಾಲ್ ಎರಡು ವಿಂಬಲ್ಡನ್ ಗೆದ್ದಿದ್ದರೆ,ಐದು ಬಾರಿ ಫ್ರೆಂಚ್ ಓಪನ್ ಫೈನಲ್ ಆಡಿದ ರೋಜರ್ ಒಮ್ಮೆ ಫ್ರೆಂಚ್ ಓಪನ್ ಗೆದ್ದು ತನ್ನ ಶ್ರೇಷ್ಠತೆ  ಸಾಬೀತುಪಡಿಸಿದ್ದಾನೆ.ಟೆನ್ನಿಸ್ ಮುಕ್ತಯುಗದಲ್ಲಿ ಕರಿಯರ್ ಸ್ಲಾಮ್ ಸಾಧಿಸಿದ ಪಟ್ಟಿಯಲ್ಲಿ ಇಬ್ಬರ ಹೆಸರು ರಾರಾಜಿಸುತ್ತಿದೆ.ಎಂಟು ವಿಂಬಲ್ಡನ್ ಗೆದ್ದ ಫೆಡರರ್‌ನ ದಾಖಲೆ ವಿಂಬಲ್ಡನ್ನಿನ  ದಾಖಲೆಯಾದರೆ,ಹನ್ನೆರಡು ಫ್ರೆಂಚ್ ಓಪನ್ ಗೆದ್ದ ನಡಾಲ್‌ನದ್ದು ಯಾವುದೇ ಗ್ರಾಂಡ್‍ಸ್ಲಾಮ್ ಪಂದ್ಯಾವಳಿಯ  ಸಾರ್ವಕಾಲಿಕ  ದಾಖಲೆ. ದಾಖಲೆಗಳ ಪಟ್ಟಿಯಲ್ಲಿ ಒಬ್ಬರು ಸೇರಾದರೇ ಮತ್ತೊಬ್ಬರು ಸವ್ವಾಸೇರು.

ಇಷ್ಟರ ನಡುವೆಯೂ ಉಳಿದ ಅನೇಕ ಜಿದ್ದಾಜಿದ್ದಿನ ಕತೆಗಳಿಗಿಂತ  ಫೆಡಾಲ್ (ಫೆಡರರ್-ನಡಾಲ್) ಪೈಪೋಟಿ ಭಿನ್ನವಾಗಿ ನಿಲ್ಲುವುದು ಅವರಿಬ್ಬರ ನಡುವಿನ ಚಂದದ ಸ್ನೇಹದ ಕಾರಣಕ್ಕೆ.ಪರಸ್ಪರರ ಪ್ರತಿಭೆಯನ್ನು ಗುರುತಿಸಿ,ಪೈಪೋಟಿಯ ನಡುವೆಯೇ ಒಬ್ಬರನ್ನೊಬ್ಬರು ಅದ್ಭುತವಾಗಿ ಗೌರವಿಸುವ ಆಟಗಾರರು. ಅದೊಮ್ಮೆ ’ಯಾರಾದರೂ ನಾನು ರೋಜರ್‌ಗಿಂತ ಮೇಲಿನ ಮಟ್ಟದ ಆಟಗಾರ ಎಂದು ಹೇಳಿದರೆ ಖಂಡಿತ ಅವರಿಗೆ ಟೆನ್ನಿಸ್ ಬಗ್ಗೆ ಏನೂ ಗೊತ್ತಿಲ್ಲವೆಂದೇ ಅರ್ಥ’ಎಂದು ಅಭಿಮಾನದಿಂದ ನುಡಿದ್ದಿದ್ದ ನಡಾಲ್ . ತುಂಬ ವರ್ಷಗಳ ನಂತರ 2017ರಲ್ಲಿ ನಡಾಲ್‌ನನ್ನೇ ಮಣಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಫೆಡರರ್’ಈ ಅಂತಿಮ ವಿಜಯವನ್ನು ಹಂಚಿಕೊಳ್ಳುವುದು ಸಾಧ್ಯವಾದರೆ ನಾನು ಖಂಡಿತವಾಗಿಯೂ ನಡಾಲ್ ಜೊತೆಗೆ ಜಯವನ್ನು ಹಂಚಿಕೊಳ್ಳುತ್ತಿದ್ದೆ’ಎಂದು ನುಡಿದು ತನ್ನ ಪ್ರಬುದ್ಧತೆ ಮೆರೆದಿದ್ದ.ಏನೇ ಆದರೂ ಖಾಲಿತನ ಕಾಡತೊಡಗಿದ್ದ ಟೆನ್ನಿಸ್ ಲೋಕಕ್ಕೆ ಸ್ವರ್ಣಯುಗದ ಹೆಸರನ್ನು ಪುನರ್ಸ್ಥಾಪಿಸಿದ್ದು ಇದೇ ಜೋಡಿಯ ಪೈಪೋಟಿ ಎಂದರೆ ಉತ್ಪ್ರೇಕ್ಷೆಯಿಲ್ಲ.ಸಧ್ಯಕ್ಕೆ ಈ ಪೈಪೋಟಿಯಿನ್ನೂ ಮುಗಿದಿಲ್ಲ.ಇವರಿಬ್ಬರ ನಡುವೆ ಇವರಿಬ್ಬರಿಗೂ ಸರಿಯಾದ ಪೈಪೊಟಿ ಕೊಟ್ಟು ಬೆಳೆಯುತ್ತಿರುವ ಇನ್ನೊಬ್ಬ ಸರ್ಬಿಯನ್ ಆಟಗಾರನೂ ಇದ್ದಾನೆ.ಅವನ ಮತ್ತು ಇವರುಗಳ ನಡುವಣ ಪೈಪೋಟಿಯ ಕತೆಯೂ ಇಷ್ಟೇ ರೋಚಕ.ಅದನ್ನು ಮತ್ತೊಂದು ವಾರಕ್ಕೆ ಕಾಯ್ದಿರಿಸೋಣ ಅಲ್ಲವೇ…?

-ಗುರುರಾಜ ಕೊಡ್ಕಣಿ ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seven + ten =