ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು ಗೆಲ್ಲುವ ಹೊತ್ತಿಗೆ ಈ ಹುಡುಗ ಇಪ್ಪತ್ತೊಂದನೇ ವಯಸ್ಸಿಗೆ ಮೂರು ಬೇರೆ ಬೇರೆ ಅಂಕಣಗಳಲ್ಲಿ ಗ್ರಾಂಡ್ ಸ್ಲಾಮ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರನೆನ್ನಿಸಿದ.
ಆವೆಮಣ್ಣಿನಂಕಣದಲ್ಲಿ ಸ್ಪೇನ್ ಆಟಗಾರನ ಹಿಡಿತ ಮುಗಿಯಿತು ಎನ್ನಿಸಿದ್ದು ಮೊದಲ ಸುತ್ತಿನಲ್ಲೇ ರಾಫಾ ನಡಾಲ್ ,ಅಲೆಕ್ಸಾಂಡರ್ ಝ್ವರೇವ್ ನ ಕೈಯಲ್ಲಿ ಸೋಲು ಕಂಡಾಗ. ಇಲ್ಲ, ಮುಗಿಯಲಿಲ್ಲ ಎನ್ನುತ್ತ ಪುಟಿದು ಬಂದವನು ತನ್ನ ಗುರು ರಾಫಾನ ಸೋಲಿನ ಸೇಡು ತೀರಿಸಿಕೊಂಡ ಈ ಹುಡುಗ ಕಾರ್ಲೊಸ್ ಅಲ್ಕರಾಜ್. ಐದು ಸೆಟ್ ಗಳ ಧೀರ್ಘ ಹೋರಾಟ ಕಂಡ ಅತಿಮ ಪಂದ್ಯದಲ್ಲಿ 6-3 ,2- 6 ,5-7, 6-1, 6-2 ರಲ್ಲಿ ಜ್ವರೇವ್ ನೆದುರು ಗೆಲುವು ಸಾಧಿಸಿದ್ದು ಅಭಿನಂದನಾರ್ಹ. ತುಂಬ ಕ್ಲಾಸಿಕ್ ಎನ್ನಿಸುವ ಪಂದ್ಯವಲ್ಲದಿದ್ದರೂ ಸಾಕಷ್ಟು ರೋಚಕತೆ ಕಂಡ ಪಂದ್ಯ. ದೊಡ್ಡ ಸರ್ವ್ ನ ಆಟಗಾರ ಜ್ವರೇವ ಸಾಕಷ್ಟು ಲಯ ಕಳೆದುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದೇ ಕಾರಣಕ್ಕೋ ಏನೋ, ಸರ್ವ್ ನ ನಡುವೆ ಅತಿಯಾದ ಸಮಯ, ಚೆಂಡು ಚೆನ್ನಾಗಿಲ್ಲ ಎನ್ನುವ ದೂರುಗಳಂಥ ಋಣಾತ್ಮಕ ತಂತ್ರಗಳನ್ನು ಆತ ಆಗಾಗ ಬಳಸಿದ್ದೂ ಸಹ ಕಂಡುಬಂದಿತ್ತು. ಅಪ್ರಯತ್ನಪೂರ್ವಕ ಪ್ರಮಾದಗಳು, ಸಾಲು ಸಾಲು ಡಬಲ್ ಫಾಲ್ಟ್ ಗಳು ಆತನ ಗೆಲುವಿನ ಓಟಕ್ಕೆ ಇನ್ನಷ್ಟು ಬ್ರೇಕ್ ಹಾಕಿದವು. ಅಲ್ಕರಾಜ್ ಕೂಡ ಅದ್ಬುತ ಲಯದಲ್ಲೇನೂ ಇರದಿದ್ದರೂ ಅಂತಿಮ ಕ್ಷಣದಲ್ಲಿ ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡುಬಿಟ್ಟ. ಪರಿಣಾಮವಾಗಿ ತನ್ನ ವೃತ್ತಿ ಬದುಕಿನ ಮೂರನೇ ಗ್ರಾಂಡ್ ಸ್ಲಾಮ್ ಗೆಲುವು ಅವನದ್ದಾಯಿತು.
ಈ ಗೆಲುವಿನ ಮೂಲಕ ಹಲವಾರು ದಾಖಲೆ ನಿರ್ಮಿಸಿರುವ ಕಾರ್ಲೊಸ್, ಪುರುಷ ಟೆನ್ನಿಸ್ ಜಗತ್ತು ಆಸಕ್ತಿ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿರುವಾಗ ಅಭಿಮಾನಿಗಳ ಮನದಲ್ಲಿ ಹೊಸದೊಂದು ಆಶಾಕಿರಣ ಮೂಡಿಸಿದ್ದಾನೆ. ಬಹುಶಃ ತನ್ನ ಸಮಕಾಲೀನನಾದ ಇಟಲಿಯ ಯಾನಿಕ್ ಸಿನ್ನರ್ ಜೊತೆಗಿನ ಜಿದ್ದು ಮುಂದುವರೆದರೆ , ಗಾಯದ ಸಮಸ್ಯೆ ಇಬ್ಬರನ್ನೂ ಕಾಡದೇ ಹೋದರೆ ಬಹುಶಃ ಫೆಡರರ್ ನಡಾಲ್ ಕಂಡ ಪೈಪೊಟಿಯಂಥ ಪೈಪೋಟಿ ಈ ತಲೆಮಾರಿನ ಟೆನ್ನಿಸ್ ಅಭಿಮಾನಿಗಳಿಗೆ ಕಾಣಿಸಲಿಕ್ಕೂ ಸಾಕು.
ಇಷ್ಟಾಗಿ ಅಂಗಳದಲ್ಲಿ ಆಟ ನೋಡುವಾಗ ಬಿಗ್ ತ್ರಿ ಯ ಪಂದ್ಯಗಳಲ್ಲಿದ್ದ ಕಲಾತ್ಮಕತೆ, ಶಾಸ್ತ್ರೀಯತೆ ಇವತ್ತಿನ ಪಂದ್ಯಗಳಲ್ಲಿ ಕಾಣುವುದು ತೀರ ಕಡಿಮೆ ಎನ್ನಿಸುತ್ತದೆ. ಉದ್ದದ ರ‌್ಯಾಲಿಗಳು, ಚಂದದ ಬೇಸ್ ಲೈನ್ ಹೊಡೆತಗಳು, ಅಂಗಳದ ಓಡಾಟಗಳಂಥಹ ಅಂಶಗಳು ಇತ್ತೀಚೆಗೆ ಕಾಣುವುದೇ ಇಲ್ಲವೇನೋ ಎನ್ನುವಂತಾಗಿ ರುಚಿಕರ ಅಡುಗೆಗೆ ಉಪ್ಪು ಕಡಿಮೆ ಎನ್ನುವಂತಾಗಿದೆ
ಏನೇ ಆದರೂ ಬದಲಾವಣೆಯೊಂದೇ ಶಾಶ್ವತ ಎನ್ನುವ ಫಿಲಾಸಫಿ ಕ್ರೀಡೆಗೂ ಸತ್ಯವೇ ಎನ್ನುವುದಂತೂ ಸತ್ಯ. ಈ ಹುಡುಗ ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್ ಗೆದ್ದುಬಿಟ್ಟರೆ ಸರಿಸುಮಾರು ಇಪ್ಪತ್ತು ಚಿಲ್ಲರೇ ವರ್ಷಗಳ ನಂತರ ಕರಿಯರ್ ಗ್ರಾಂಡ್ ಸ್ಲಾಮ್ ಗೆದ್ದ ಮೊದಲ ಮತ್ತು ಮುಕ್ತ ಟೆನ್ನಿಸ್ ಯುಗದ ಆರನೇ ಆಟಗಾರನಾಗುವ ಹೆಮ್ಮೆ ಇವನದ್ದಾಗುತ್ತದೆ.
Congratulations..!! Carlitos