ಈ ಕಥೆಯನ್ನು ಕೇಳಿದರೆ ಎಂಥವರಲ್ಲಾದರೂ ಜೀವನೋತ್ಸಾಹ ಚಿಮ್ಮುತ್ತದೆ..!
ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಾಕೆ ಒಬ್ಬ ಹೆಣ್ಣು.. ಜೊತೆಗಾರೊಂದಿಗೆ ದೇಶಕ್ಕೆ 2ನೇ ಪದಕ ಗೆದ್ದುಕೊಟ್ಟಾಕೆಯೂ ಒಬ್ಬ ಹೆಣ್ಣು. 2 ಕಂಚು ಗೆದ್ದಿರುವ ಭಾರತದ ಚಿನ್ನದ ಹುಡುಗಿ ಮನು ಭಾಕರ್.
ಇದೂ ಕೂಡ ಒಲಿಂಪಿಕ್ಸ್’ನಲ್ಲಿ ಭಾಗವಹಿಸುವ ಜೀವಮಾನದ ಕನಸನ್ನು 58ನೇ ವರ್ಷದಲ್ಲಿ ನನಸಾಗಿಸಿಕೊಂಡ ಒಬ್ಬ ಹಠವಾದಿ ಹೆಣ್ಣಿನ ಕಥೆ.
ಚೀನಾದಲ್ಲಿ ಹುಟ್ಟಿ 58ನೇ ವರ್ಷದಲ್ಲಿ ಚಿಲಿ ದೇಶವನ್ನು ಒಲಿಂಪಿಕ್ಸ್’ನಲ್ಲಿ ಪ್ರತಿನಿಧಿಸಿದ ಒಬ್ಬ ಛಲದಂಕಮಲ್ಲೆಯ ಕಥೆಯಿದು.
ಝಿಯಿಂಗ್ ಜೆಂಗ್..
1966ರಲ್ಲಿ ಚೀನಾದ ಗುವಾಂಗ್’ಜೌನಲ್ಲಿ ಟೇಬಲ್ ಟೆನಿಸ್ ಅನ್ನೇ ಉಸಿರಾಡುತ್ತಿದ್ದ ಕುಟುಂಬದಲ್ಲಿ ಹುಟ್ಟಿದವರು. 9ನೇ ವರ್ಷದವರೆಗೆ ತಾಯಿಯೇ ಕೋಚ್. ಪುಟ್ಟ ಹುಡುಗಿಯನ್ನು ಟೇಬಲ್ ಟೆನಿಸ್ ಟ್ರೈನಿಂಗ್’ಗೆ ಕರೆದೊಯ್ಯುತ್ತಿದ್ದ ತಂದೆಗೆ ಇದ್ದದ್ದು ಒಂದೇ ಕನಸು. ಮಗಳನ್ನು ಒಲಿಂಪಿಕ್ ಅಖಾಡದಲ್ಲಿ ನೋಡುವುದು.
ಕ್ಷಿಪ್ರಗತಿಯಲ್ಲಿ ಸಾಧನೆಯ ಮೆಟ್ಟಿಲುಗಳನ್ನೇರುತ್ತಾ ಬಂದಿದ್ದ ಹುಡುಗಿ 16ನೇ ವರ್ಷದಲ್ಲಿ ನ್ಯಾಷನಲ್ ಚಾಂಪಿಯನ್ ಆಗುತ್ತಾಳೆ. 18ನೇ ವರ್ಷ ತುಂಬುವ ಹೊತ್ತಿಗೆ ಆ ಕಾಲಕ್ಕೆ ಜಗತ್ತಿನ ಬೆಸ್ಟ್ ಟೇಬಲ್ ಟೆನಿಸ್ ಆಟಗಾರ್ತಿ ಎಂದು ಕರೆಸಿಕೊಂಡಿದ್ದ ಝಿಯಿಂಗ್ ಜೆಂಗ್, ತಂದೆಯ ಕನಸನ್ನು ನನಸು ಮಾಡುವುದೊಂದೇ ಗುರಿ ಎಂಬಂತೆ ತಪಸ್ಸು ಶುರು ಮಾಡಿದ್ದಳು.
ಆದರೆ ಬದಲಾದ ಟೇಬಲ್ ಟೆನಿಸ್ ನಿಯಮ ಆಕೆಯ ದೌರ್ಬಲ್ಯವನ್ನು ಎತ್ತಿ ತೋರಿಸಿ ಬಿಟ್ಟಿತು.
1988ರ ಸಿಯೋಲ್ ಒಲಿಂಪಿಕ್ಸ್’ಗೂ ಮೊದಲು ಟೇಬಲ್ ಟೆನಿಸ್ ಪ್ಯಾಡಲ್’ನ ಎರಡೂ ಬದಿಗಳು ಒಂದೇ ಬಣ್ಣವನ್ನು (ಕಪ್ಪು ಬಣ್ಣ) ಹೊಂದಿರಬಹುದಾಗಿತ್ತು. ಆದರೆ 1988ರಲ್ಲಿ ಈ ನಿಯಮಕ್ಕೆ ಬದಲಾವಣೆ ತರಲಾಯಿತು. ಪ್ಯಾಡಲ್’ನ ಎರಡೂ ಬದಿಗಳಿಗೆ ಪ್ರತ್ಯೇಕ ಬಣ್ಣಗಳು ಬಂದವು. ಒಂದೇ ಬಣ್ಣವಿದ್ದಾಗ ಪ್ಯಾಡಲ್ ಅನ್ನು ಕ್ಷಿಪ್ರಗತಿಯಲ್ಲಿ ತಿರುಗಿಸುತ್ತಾ ಎದುರಾಳಿಯನ್ನು ಗೊಂದಲಕ್ಕೀಡು ಮಾಡುತ್ತಿದ್ದ ಝಿಯಿಂಗ್ ಜೆಂಗ್ ಪ್ರತೀ ಹೆಜ್ಜೆಯಲ್ಲೂ unpredictable ಆಗಿ ಬಿಡುತ್ತಿದ್ದಳು.
ಎದುರಾಳಿಗೆ ಗೊತ್ತೇ ಆಗದಂತೆ ಪ್ಯಾಡಲ್ ಅನ್ನು ತಿರುಗಿಸುತ್ತಾ ಆಡುತ್ತಿದ್ದ ರೀತಿ, ಆ ಕೌಶಲ್ಯವೇ ಆಕೆಯನ್ನು special player ಆಗಿಸಿದ್ದು. ಆದರೆ ನಿಯಮ ಬದಲಾಗುತ್ತಿದ್ದಂತೆ ಶಕ್ತಿಯೇ ಆಕೆಯ ದೌರ್ಬಲ್ಯವಾಗಿ ಬಿಟ್ಟಿತು. ಆಟಕ್ಕೆ ನಿಂತು ಬಿಟ್ಟರೆ ಲೀಲಾಜಾಲವಾಗಿ ಗೆದ್ದು ಬಿಡುತ್ತಿದ್ದವಳಿಗೆ ಮುಂದೆ ಎದುರಾಗಿದ್ದು ಸೋಲು, ಸೋಲು ಮತ್ತು ಸೋಲು. ಆಡುವುದನ್ನೇ ನಿಲ್ಲಿಸಿ ಬಿಟ್ಟ ಝಿಯಿಂಗ್ ಜೆಂಗ್ 20ನೇ ವರ್ಷಕ್ಕೆ ನಿವೃತ್ತಿ ಘೋಷಿಸಿ ಬಿಟ್ಟಳು. ಅಲ್ಲಿಗೆ ಒಲಿಂಪಿಕ್ಸ್ ಕನಸು ನುಚ್ಚುನೂರು.
ಇಲ್ಲಿ ಮುಳುಗಿದ ಸೂರ್ಯ ಮತ್ತೆಲ್ಲೋ ಎದ್ದು ಬಂದು ಪ್ರಜ್ವಲಿಸುತ್ತಾನೆ. ಅದು ಜಗದ ನಿಯಮ.
ಝಿಯಿಂಗ್ ಜೆಂಗ್’ಗೆ ಚೀನಾದಲ್ಲಿ ಮುಚ್ಚಿದ ಬಾಗಿಲು ಚಿಲಿಯಲ್ಲಿ ತೆರೆಯಿತು.. 1989ರಲ್ಲಿ ಚಿಲಿಯ ಶಾಲೆಯೊಂದು ಝಿಯಿಂಗ್’ಗೆ ಕೋಚಿಂಗ್ ಆಹ್ವಾನ ಕೊಟ್ಟಿತು. ಬದುಕು ಬದಲಾಗಿದ್ದು ಅಲ್ಲಿಂದಲೇ.
ಮತ್ತೆ ಪ್ಯಾಡಲ್ ಕೈಗೆತ್ತಿಕೊಂಡರು ಜೆಂಗ್.. 41ನೇ ವರ್ಷದಲ್ಲಿ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್’ಷಿಪ್ ಗೆದ್ದರು. ಆದರೆ ಮಗ ಟೇಬಸ್ ಟೆನಿಸ್ ಆಡಲು ಶುರು ಮಾಡುತ್ತಿದ್ದಂತೆ ಮತ್ತೆ ಆಟ ನಿಲ್ಲಿಸಿದರು.
15 ವರ್ಷಗಳ ನಂತರ..
ಜಗತ್ತನ್ನು ಕೋವಿಡ್ ಕಾಡುತ್ತಿದ್ದ ಸಮಯ. ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಝಿಯಿಂಗ್ ಜೆಂಗ್ ಮತ್ತೆ ಪ್ಯಾಡಲ್ ಕೈಗೆತ್ತಿಕೊಳ್ಳುತ್ತಾರೆ… ಈ ಬಾರಿ ಜಸ್ಟ್ ಟೈಮ್ ಪಾಸ್’ಗೆ ಅಷ್ಟೇ..
ಜೀವನದಲ್ಲಿ ಸಿಗುವ ತಿರುವುಗಳು ಕೆಲವೊಮ್ಮೆ ಬದುಕನ್ನೇ ಬದಲಿಸಿ ಬಿಡುತ್ತವೆ. ಕೋವಿಡ್ ಸಮಯದಲ್ಲಿ ಶುರು ಮಾಡಿದ ಆಟ ಜೆಂಗ್ ಬದುಕಿಗೆ ದೊಡ್ಡ ತಿರುವನ್ನೇ ಕೊಟ್ಟು ಬಿಟ್ಟಿತು. ಈ ಬಾರಿ ಆರಂಭಿಸಿದ ಆಟವನ್ನು ಆಕೆ ನಿಲ್ಲಿಸಲಿಲ್ಲ. ಚಿಲಿ ಟೇಬಲ್ ಟೆನಿಸ್ ಫೆಡರೇಷನ್ ಸಹಕಾರದೊಂದಿಗೆ 57ನೇ ವಯಸ್ಸಲ್ಲಿ 2023ರ ಸೌತ್ ಅಮೆರಿಕನ್ ಚಾಂಪಿಯನ್’ಷಿಪ್’ಗೆ ಅರ್ಹತೆ ಪಡೆಯುತ್ತಾರೆ. 2023ರ ಪಾನ್ ಅಮೆರಿಕನ್ ಚಾಂಪಿಯನ್’ಷಿಪ್’ನಲ್ಲಿ ಬೆಳ್ಳಿ ಪದಕ ಗೆದ್ದ ಝಿಯಿಂಗ್ ಜೆಂಗ್ ಚಿಲಿಯ ಟೇಬಲ್ ಟೆನಿಸ್ ಸೆನ್ಸೇಷನ್ ಆಗಿ ಹೊರ ಹೊಮ್ಮಿದ್ದಷ್ಟೇ ಅಲ್ಲ, 2024ರ ಪ್ಯಾರಿಸ್ ಒಲಿಂಪಿಕ್ಸ್’ಗೆ ಅರ್ಹತೆ ಪಡೆದೇ ಬಿಡುತ್ತಾರೆ. ಆ ಕ್ಷಣವನ್ನು ಕಣ್ತುಂಬಿಕೊಂಡು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಖುಷಿ ಪಟ್ಟದ್ದು ಅದೊಂದು ಜೀವ.. ಝಿಯಿಂಗ್ ಜೆಂಗ್ ಅವರ 92 ವರ್ಷದ ಆ ವಯೋವೃದ್ಧ ತಂದೆ..
ಒಲಿಂಪಿಕ್ಸ್’ನ ಪ್ರಾಥಮಿಕ ಸುತ್ತಿನಲ್ಲೇ ಸೋತರೂ, ಝಿಯಿಂಗ್ ಜೆಂಗ್ ಸೋತು ಗೆದ್ದಿದ್ದಾರೆ.