ಒಲಿಂಪಿಕ್ಸ್ ನಲ್ಲಿ ಸಾಧನೆ, ಹೊಸ ಹೊಸ ದಾಖಲೆಗಳು ಬರೆಯಲ್ಪಡುತ್ತಿರುವ ಹೊತ್ತಿಗೆ ಇಂಥದ್ದೊಂದು ದುರಂತ ಸಹ ನಡೆದು ಹೋಗಿದೆ. ಜೈವಿಕವಾಗಿ ಪುರುಷನಾಗಿದ್ದರೂ ತಾನು ‘ ಮಹಿಳೆ ‘ ಎಂದು ಗುರುತಿಸಿಕೊಳ್ಳುವ ಅಲ್ಜಿರಿಯನ್ ಬಾಕ್ಸರ್ ಇಮಾನೇ ಖಲೀಫ್, ಕೇವಲ 46 ಸೆಕೆಂಡುಗಳಲ್ಲಿ ಇಟಲಿಯ ಏಂಜೆಲಾ ಕೆರಿನಿಯನ್ನು ಸೋಲಿಸಿದನು.
ಸೋಲಿಸಿದ ಎನ್ನುವುದಕ್ಕಿಂತ ಕೆರಿನಿ ತಾನಾಗಿಯೇ ಸೋಲೊಪ್ಪಿಕೊಂಡಳು ಎನ್ನುವುದು ಸರಿಯಾದೀತು. ‘ತನ್ನ ವೃತ್ತಿ ಬದುಕಿನಲ್ಲಿ ತಾನೆಂದಿಗೂ ಇಷ್ಟು ಜೋರಾಗಿ ಏಟು ತಿಂದಿಲ್ಲ, ನನ್ನ ಮೂಗು ಮುರಿದು ಹೋಗಿದೆ. ನಾನೊಬ್ಬ ವೃತ್ತಿಪರ ಬಾಕ್ಸರ್. ಆದರೆ ಇಲ್ಲಿ ಆಗುತ್ತಿರುವುದು ಅನ್ಯಾಯ ‘ ಎಂದು ಅರಚುತ್ತ ಬಾಕ್ಸಿಂಗ್ ಅಂಕಣದಿಂದ ಹೊರನಡೆದಳು ಕೆರಿನಿ. ಅದಾಗಲೇ ಒಮ್ಮೆ ದೆಹಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಸ್ಪರ್ಧೆಯ ಸಮಯಕ್ಕೆ ಲಿಂಗ ಪರೀಕ್ಷೆಯಲ್ಲಿ ವಿಫಲನಾಗಿದ್ದ ಖಲಿಫ್ ನನ್ನು ಒಲಿಂಪಿಕ್ಸ್ ಆಯ್ಕೆ ಮಂಡಳಿ ಅನುಮತಿಸಿದ್ದೇಕೆ ಎನ್ನುವ ತಕರಾರುಗಳು ಜೋರಾಗಿ ಭುಗಿಲೆದ್ದಿವೆ. ಲೇಖಕಿ ‘ಜೆಕೆ ರೋಲಿಂಗ್’, ಇಲಾನ್ ಮಸ್ಕ್ ನಂತಹ ಅನೇಕರು ಈ ಬೆಳವಣಿಗೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಅತಿಯಾದ ಸಮಾನತಾವಾದದಿಂದಲೇ ಶುರುವಾದ ಈ ‘ ಲಿಂಗ ಸಮಾನತೆ’,’ ಲಿಂಗ ಸರ್ವನಾಮ’ಗಳ ಹುಚ್ಚು ಈಗ ಈ ಹಂತಕ್ಕೆ ಬಂದು ನಿಂತಿದೆ. ಅತೀಯಾದ ಮಹಿಳಾವಾದವೂ ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಹೆಣ್ಣು ಗಂಡಿಗೆ ಸಮ ಎನ್ನುತ್ತಲೇ ಹೆಣ್ಣು ಮತ್ತು ಗಂಡು ಎನ್ನುವ ಜೈವಿಕ ವ್ಯಾಖ್ಯಾನಗಳು ದಾಟಿ ಹೋಗಿ ಕೊನೆಗೆ ‘ ಜೈವಿಕತೆಗೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗ ಎನ್ನುವುದು ನಮ್ಮನ್ನು ನಾವು ಹೇಗೆ ಗುರುತಿಸಿಕೊಳ್ಳುತ್ತೇವೆ ಎನ್ನುವುದು ಆಧಾರದ ಮೇಲೆ ನಿರ್ಧರಿತ’ ಎನ್ನುವ ಮನುಕುಲದ ಅತ್ಯಂತ ದೊಡ್ಡ ಹುಚ್ಚಿನತ್ತ ಬಂದು ನಿಂತಿತು.ಭಾರತದಲ್ಲಿ ಈ ಹುಚ್ಚು ಅಲ್ಲಿಷ್ಟು ಇಲ್ಲಿಷ್ಟು ಈಗೀಗ ಕಾಣುತ್ತಿದೆಯಾದರೂ ಪಾಶ್ಚಾತ್ಯ ರಾಷ್ಟ್ರಗಳನ್ನು ಆವರಿಸಿಕೊಂಡಷ್ಟು ಆವರಿಸಿಕೊಂಡಿಲ್ಲ.
ಆದರೆ ಪಾಶ್ಚಾತ್ಯದಲ್ಲಿ ಈ ಹುಚ್ಚು ಎಬ್ಬಿಸಿರುವ ರಾಡಿ ಅಷ್ಟಿಷ್ಟಲ್ಲ. ಬ್ರಿಟನ್‌ನಂಥ so called ಬುದ್ದಿವಂತರ ದೇಶದಲ್ಲಿ ‘ ಲೆಡಿಸ್ ಎಂಡ್ ಜಂಟಲ್ಮೆನ್’ ಎಂದು ವಿಮಾನದಲ್ಲಿ ಘೋಷಿಸಿದರು ಎನ್ನುವ ಕಾರಣಕ್ಕೆ ‘ ಹಾಂ..!! ಏನು ಹಾಗಂದ್ರೆ, ಬರೀ ಲೇಡಿಸ್ ಮತ್ತು ಮೆನ್ ಮಾತ್ರವೇ ಇರೊದಾ..’ ಎಂದು ಜಗಳವಾಡಿ ಘೋಷಿಸಿದವನ ಕೆಲಸವನ್ನೇ ಕಿತ್ತುಕೊಳ್ಳಲಾಯಿತು ಎಂದರೆ ಹುಚ್ಚಾಟದ ಮಟ್ಟ ಊಹಿಸಿ. ಆರಂಭದಲ್ಲಿ ಅನೇಕ ಮಹಿಳಾವಾದಿಗಳೇ ಬೆಂಬಲಿಸಿದ್ದ ಈ ಅರ್ಥಹೀನ ವಾದ ಇಂದು ಮಹಿಳೆಯರ ಹಕ್ಕಿಗೆ ಕುತ್ತು ತಂದಿರುವುದು ದೊಡ್ಡ ವಿಪರ್ಯಾಸವೇ.
‘ವಿದ್ಯಾರ್ಹತೆ, ಬುದ್ದಿವಂತಿಕೆ ಯಂಥ ಸಾಮಾಜಿಕ ವಿಷಯಗಳಲ್ಲಿ ಮಹಿಳೆ ಪುರುಷನಿಗೆ ಸಮನಾಗಬಹುದೇ ಹೊರತು ದೈಹಿಕವಾಗಿ ಮಹಿಳೆ ಮತ್ತು ಪುರುಷರು ಯಾವತ್ತಿಗೂ ವಿಭಿನ್ನವೇ ಎನ್ನುವುದನ್ನು ಸಾಮಾಜಿಕವಾಗಿ ದೊಡ್ಡ ಸ್ಥಾನದಲ್ಲಿರುವ ಅರೆಬರೆ ಮಹಿಳಾವಾದಿಗಳು ಒಪ್ಪದೇ ಹೋದರೆ ಈ ಹುಚ್ಚಾಟಗಳು ಇನ್ನಷ್ಟು ಅದ್ವಾನವಾಗುವುದಂತೂ ಸತ್ಯ .
ಈ ಹುಚ್ಚು ಭಾರತವನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಮುನ್ನ ನಾವೂ ಸಹ ಎಚ್ಚರಗೊಳ್ಳಬೇಕಿದೆ. ಈಗಾಗಲೇ ಸೀರೆ ಉಟ್ಟು ‘ಸಮಾನತೆ’ ಎನ್ನುತ್ತಿರುವ ಗಂಡಸರನ್ನು ಕಾಣುತ್ತಿದ್ದೇವೆ. ಹೀಗೆ ಮುಂದುವರೆದರೆ ‘ ನಾನು ಮಾನಸಿಕವಾಗಿ ಹೆಣ್ಣು, ನನಗೂ ಮಹಿಳೆಯರ ವಿಶ್ರಾಂತಿಗ್ರಹಗಳಿಗೆ ಪ್ರವೇಶ ಕೊಡಿ’ ಎನ್ನುವ ಕಾಮುಕ ಗಂಡಸರಿಗೂ ಕೊರತೆ ಇರದು ನೋಡಿ.