Categories
ಕ್ರಿಕೆಟ್

ಚೆಸ್, ಕ್ರಿಕೆಟ್ ಮತ್ತು ಅನಿಶ್ಚಿತತೆ!

ಕ್ರಿಕೆಟ್ ಮತ್ತು ಚೆಸ್ ಆಟದಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಬದುಕಿನಲ್ಲಿ ಕೂಡ! 
ಎಷ್ಟೋ ಬಾರಿ ನಮ್ಮ ತಪ್ಪು ನಡೆಗಳೆ ನಮ್ಮನ್ನು ಗೆಲ್ಲಿಸುತ್ತವೆ! 
———————————————————
ಚೆಸ್ ಮತ್ತು ಕ್ರಿಕೆಟ್ ಆಟಗಳು ಬಹಳಷ್ಟು ವಿಶೇಷತೆಯನ್ನು ಪಡೆದವುಗಳು. ಅದಕ್ಕೆ ಕಾರಣ ಏನೆಂದರೆ ಆ ಆಟಗಳ ಒಳಗೆ ಅಡಗಿರುವ ಅನಿಶ್ಚಿತತೆ ಮತ್ತು ವಿಕಲ್ಪಗಳು. ಅವು ನಮ್ಮ ಬದುಕಿನ ಪ್ರತಿಫಲನದ ಕನ್ನಡಿಗಳು ಕೂಡ ಆಗಿವೆ!
ಜಗತ್ತಿನ ಬಲಾಢ್ಯ ಕ್ರಿಕೆಟ್ ತಂಡವಾದ ಭಾರತವನ್ನು ಕ್ರಿಕೆಟ್ ಶಿಶುಗಳಾದ ಬಾಂಗ್ಲಾ ದೇಶವು  ಸೋಲಿಸಿದ ಉದಾಹರಣೆ ಇಲ್ಲವೇ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದು ಹೀಗೆ  ಆಗಬೇಕು, ಹಾಗೆಯೇ ಆಗಬೇಕು ಎಂದು! ಆದರೆ ಅದು ಹಾಗೆ ಆಗುವುದಿಲ್ಲ! ಹೀಗೆ ಕೂಡ ಆಗಲೇ ಬೇಕು ಅಂದಿಲ್ಲ! ಯಾಕೆಂದರೆ ವಿಧಿಯ ನಿರ್ಧಾರ ಬೇರೆಯೇ ಇರುತ್ತದೆ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನು/ ಅವಳು ಹೀಗೇ ಇರಬೇಕು, ಹಾಗೆಯೇ ಇರಬೇಕು ಎಂದು!  ಅವನು/ ಅವಳು ನೀವು ಅಂದುಕೊಂಡ ಹಾಗೆಯೇ  ಯಾಕಿರಬೇಕು? ಅವನು ಅವನೇ! ಅವಳು ಅವಳೇ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅದೊಂದು
ಘಟನೆಯು ನನ್ನ ಜೀವನದಲ್ಲಿ ನಡೆಯದೇ ಹೋಗಿದ್ದರೆ ಚೆನ್ನಾಗಿತ್ತು ಎಂದು! ಆದ್ರೆ ಸ್ವಲ್ಪ ಕೂತು ಯೋಚನೇ ಮಾಡಿ. ಅದೇ ಘಟನೆ ನಿಮಗೆ ಲಾಂಗ್ ರೆಂಜಲ್ಲಿ ಅದ್ಭುತ ಫಲಿತಾಂಶ ಕೊಟ್ಟಿರುತ್ತದೆ!
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ಅದೊಂದು ಸೋಲು ನನಗೆ  ಬಾರದೆ ಹೋಗಿದ್ದರೆ ಚೆನ್ನಾಗಿತ್ತು ಎಂದು! ಜಗತ್ತಿನ ಯಾವುದೇ ಆಟದಲ್ಲಿ ಎಲ್ಲರೂ, ಎಲ್ಲಾ ಕಾಲಕ್ಕೂ ಗೆಲ್ಲಲು ಸಾಧ್ಯವಿದೆಯೇ? ಸೋಲು ನಮಗೆ ಒಂದಲ್ಲ ಒಂದು ಗಟ್ಟಿ ಅನುಭವ ಕೊಟ್ಟಿರುತ್ತದೆ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದೊಂದು ನಿರ್ಧಾರ ತಪ್ಪಾಗಿ ಹೋಯಿತಲ್ಲ ಎಂದು! ಆದ್ರೆ ನಿರ್ಧಾರ ಸರಿಯಾ ತಪ್ಪಾ ಎಂದು ಗೊತ್ತಾಗುವುದು ಫಲಿತಾಂಶ ಬಂದ ನಂತರ ಅಲ್ವಾ!
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನನ್ನು ಅಥವಾ ಅವಳನ್ನು ನಂಬಿ ಮೋಸಹೋದೆ ಎಂದು! ಆದ್ರೆ ನೀವು ಸೋಲಲು ಕಾರಣ ನೀವು ಅಲ್ಲ. ತಪ್ಪು ವ್ಯಕ್ತಿಗಳ ಮೇಲೆ ನೀವು ಇಟ್ಟ ಅತಿಯಾದ ನಂಬಿಕೆ! ಇದು ಗೊತ್ತಾದರೆ ನೀವು ಮುಂದೆ ಜಾಗ್ರತೆ ವಹಿಸುವುದಿಲ್ಲವೆ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು! ಆದ್ರೆ ನಮ್ಮನ್ನು ತುಂಬಾ ಪ್ರೀತಿ ಮಾಡುವವರು ಮತ್ತು ಅರ್ಥ ಮಾಡಿಕೊಳ್ಳುವವರು ನಮ್ಮ ಪಕ್ಕದಲ್ಲಿಯೇ ಇರುತ್ತಾರೆ! ನಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವ ನಾವು ಉಳಿದವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನ ಅದೃಷ್ಟ,  ಗ್ರಹಚಾರವೇ ಸರಿ ಇಲ್ಲ ಎಂದು! ಆದರೆ ನಮ್ಮ ಗೇಮ್ ಪ್ಲಾನ್ ಮತ್ತು ಪ್ರಯತ್ನದಲ್ಲಿ ತಪ್ಪುಗಳು ಇರುತ್ತವೆ. ಅದನ್ನು ಮೊದಲು ಸರಿ ಪಡಿಸಬೇಕು ತಾನೇ?
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವನು ಅಥವ ಅವಳು ನನಗೆ ಸಪೋರ್ಟ್ ಮಾಡಲಿಲ್ಲ ಎಂದು! ಆದರೆ ಯೋಚನೆ ಮಾಡಿ, ತನ್ನ ಮೇಲೆ ಭರವಸೆ ಇಡದೆಯೆ ಬೇರೆಯವರನ್ನು ನಾವು ಹೆಚ್ಚು ಅವಲಂಬನೆ ಮಾಡಿದ್ದು ತಪ್ಪಲ್ಲವೇ?
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ವಿರಾಟ್ ಕೊಹ್ಲಿ ಹಾಗೆ ಮಾಡಿದ್ದು ತಪ್ಪು. ಹೀಗೆ ಮಾಡಬೇಕಿತ್ತು ಎಂದು!  ಆದರೆ ಗಮನಿಸಿ ಕೊಹ್ಲಿ ಆ ನಿರ್ಧಾರ  ತೆಗೆದುಕೊಂಡದ್ದು ಕ್ರಿಕೆಟ್ ಗ್ರೌಂಡಲ್ಲಿ! ಕೋಟಿ ಕೋಟಿ ಜನರ ಮುಂದೆ ಮತ್ತು ನೂರಾರು ಟಿವಿ ಕ್ಯಾಮೆರಾಗಳ ಎದುರು! ಆಗ ಅವನಿಗೆ ಗೈಡ್ ಮಾಡಲು ಅಲ್ಲಿ ಯಾರಿದ್ದರು?
ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವಳು ಅವನನ್ನು ಯಾಕೆ ಮದುವೆ ಆದಳು? ಅವನು ಅವಳನ್ನು ಯಾಕೆ ಮದುವೆ ಆದ? ಅದು ಅವರವರ ಖಾಸಗಿ ಬದುಕು. ಪ್ರತೀ ಒಬ್ಬರ ಆದ್ಯತೆಗಳು ಬೇರೆ ಬೇರೆಯೇ ಇರುತ್ತವೆ. ಎಲ್ಲರೂ ನಮ್ಮ ಹಾಗೆ ಯಾಕೆ ಯೋಚನೆ ಮಾಡಬೇಕು? ಅವರನ್ನು ಪ್ರಶ್ನೆ ಮಾಡಲು ನಾವು ಯಾರು?
ಎಷ್ಟೋ ಬಾರಿ ಒಂದು ರಿಯಾಲಿಟಿ ಶೋ ಅಥವಾ ಸ್ಪರ್ಧೆ ಮುಗಿದಾಗ ನಾವು ಹೇಳುತ್ತೇವೆ ಏನೆಂದರೆ ತೀರ್ಪುಗಾರರು ಅನ್ಯಾಯವನ್ನು  ಮಾಡಿದರು ಎಂದು! ಆದರೆ ಅವರ ಮುಂದೆ ಹಲವು ಮಾನದಂಡ ಇರುತ್ತದೆ ಮತ್ತು ಸ್ಕೋರ್ ಶೀಟ್ ಇರುತ್ತದೆ ಎಂಬುದನ್ನು ನಾವು ಮರೆತಿರುತ್ತೇವೆ. ಒಂದು ಸ್ಪರ್ಧೆ ನಾವು ವೀಕ್ಷಕರಾಗಿ ನೋಡುವುದಕ್ಕೂ, ತೀರ್ಪುಗಾರನಾಗಿ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ ಎಂದು ನಮಗೆ ಅರ್ಥ ಆದರೆ ಎಷ್ಟೋ ನೋವುಗಳು ಕಡಿಮೆ ಆಗುತ್ತವೆ.
ಒಟ್ಟಿನಲ್ಲಿ ನಾನು ಹೇಳಲು ಹೊರಟದ್ದು ಏನೆಂದರೆ ನಮ್ಮ ಬದುಕು ಇದೇ ರೀತಿಯ ಅನಿಶ್ಚಿತತೆಯ ಮೂಟೆ! ಇಲ್ಲಿ ಕೆಲವು ಸಂಗತಿಗಳು ನಾವು ಪ್ರೆಡಿಕ್ಟ್  ಮಾಡಿದ ಹಾಗೆ ನಡೆಯುವುದಿಲ್ಲ. ನಡೆಯಬೇಕು ಅಂತ ಕೂಡ ಇಲ್ಲ!
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನೂರಾರು ಟಿವಿ
ಕ್ಯಾಮೆರಾಗಳ ಮುಂದೆ ಅಂಪಾಯರ್ ಒಂದೇ ಒಂದು ತಪ್ಪು ತೀರ್ಪನ್ನು ಕೊಟ್ಟಿರುತ್ತಾನೆ. ಆಗ ತಂಡಗಳ DRS ಆಯ್ಕೆ  ಮುಗಿದಿರುತ್ತದೆ.  ಆ ತೀರ್ಪು ಪಂದ್ಯದ ಫಲಿತಾಂಶವನ್ನು ಬದಲಾವಣೆ ಮಾಡುತ್ತದೆ. ಈ ಅನುದ್ದೇಶಿತ ತಪ್ಪುಗಳೇ ಕ್ರಿಕೆಟ್ ಆಟದ ಬ್ಯೂಟಿ ಆಗಿರುತ್ತವೆ!
That’s the BEAUTY of CRICKET! 
And that’s the BEAUTY of LIFE too!
ಕ್ರಿಕೆಟ್ ಮತ್ತು ಬದುಕು ಎರಡೂ ಅನಿಶ್ಚಿತತೆಗಳ ಮೂಟೆ ಎನ್ನುವುದೇ ಇಂದಿನ ಭರತವಾಕ್ಯ.
ಭಾರತ ಇಂದು ಪಾಕ್ ವಿರುದ್ಧ ಏಷಿಯಾ ಕಪ್ ಪಂದ್ಯವನ್ನು  ಆಡುತ್ತಿದೆ. ಅದು ಯುದ್ಧ ಅಲ್ಲ. ಅದೊಂದು ಸ್ಪರ್ಧೆ ಅಷ್ಟೇ. ಒತ್ತಡ ಮಾಡಿಕೊಳ್ಳದೆ ಪಂದ್ಯ ವೀಕ್ಷಣೆ ಮಾಡೋಣ.
ಭಾರತಕ್ಕೆ ಆಲ್ ದ ಬೆಸ್ಟ್. 
Categories
ಕ್ರಿಕೆಟ್

ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಬಹುದೇ?

ಮುಂದೈತೆ ಕಷ್ಟದ ಹಾದಿ, ಭಾರತಕ್ಕೆ ಇವೆ ನೂರಾರು ಸವಾಲುಗಳು. 
ಗೆದ್ದು ಬಾ ಭಾರತ ಅನ್ನೋದೇ ನಮ್ಮ ಹಾರೈಕೆ. 
———————————–
ಇಂದು ಭಾರತ ಏಷಿಯಾ ಕಪ್ ಗೆದ್ದು ಸಂಭ್ರಮ ಪಟ್ಟಿತು. ಭಾರತ ಗೆಲ್ಲುವುದು ಖಾತ್ರಿ ಇತ್ತು. ಆದರೆ ಇಷ್ಟೊಂದು ಸುಲಭವಾಗಿ ನಮ್ಮ ಹುಡುಗರು ಗೆಲ್ಲುತ್ತಾರೆ ಅನ್ನೋದು ಗೊತ್ತಿರಲಿಲ್ಲ.
ಮೊಹಮ್ಮದ್ ಸಿರಾಜ್ – ದ ಫೈಟಿಂಗ್ ಸ್ಪಿರಿಟ್! 
———————————-
ಇಂದಿನ ವಿಜಯದ ಶ್ರೇಯಸ್ಸು ಖಂಡಿತವಾಗಿಯೂ ಈ ಹುಡುಗನಿಗೆ ದೊರೆಯಬೇಕು. ಹೈದರಾಬಾದಿನ ಒಬ್ಬ ಬಡ ರಿಕ್ಷಾ ಡ್ರೈವರ್ ಮಗನಾಗಿ ಕಷ್ಟದ ಬಾಲ್ಯವನ್ನು ಕಳೆದ ಆತ RCB ತಂಡದಲ್ಲಿ ಐಪಿಎಲ್ ಆಡುತ್ತಾ ಹೋರಾಟದ ಮೂಲಕ ತನ್ನ ಕ್ರಿಕೆಟ್ ಬದುಕನ್ನು ಕಟ್ಟಿಕೊಂಡವನು. 7-1-21-6 ಒಂದು ಘಾತಕವಾದ ಸ್ಪೆಲ್. ಅದು ಏಷಿಯಾ ಕಪ್ ಫೈನಲಿನಲ್ಲಿ ಬಂತು ಎನ್ನುವಾಗ ಆತನ ಬಗ್ಗೆ ಹೆಮ್ಮೆ ಮೂಡುತ್ತದೆ. ಮುಂದಿನ ವಿಶ್ವಕಪ್ ಕೂಟದಲ್ಲಿ ಕೂಡ ಬುಮ್ರ ಮತ್ತು ಸಿರಾಜ್ ಅವರ ಆರಂಭಿಕ ಸ್ಪೆಲ್ ಭಾರತಕ್ಕೆ ನಿರ್ಣಾಯಕ ಆಗಬಹುದು.
ಈ ವರ್ಷ ಭಾರತದಲ್ಲಿ ಕ್ರಿಕೆಟ್ ದೀಪಾವಳಿ.
———————————-
ಭಾರತದಲ್ಲಿ ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಜೋರು. ಅದೇ ಹೊತ್ತಿಗೆ ಈ ಬಾರಿ ಭಾರತದಲ್ಲಿ 13ನೆಯ ವಿಶ್ವಕಪ್ ಕ್ರಿಕೆಟ್ ಕೂಟವು  ತೆರೆದುಕೊಳ್ಳುತ್ತಿದೆ. ಈ ಬಾರಿ ಆತಿಥ್ಯ ಕೂಡ ಭಾರತ ಅನ್ನೋದು ನಮಗೆ ಹೆಮ್ಮೆ. ಭಾರತ ಆತಿಥ್ಯ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕ್ಕೀ ಆದರೂ ಕ್ರಿಕೆಟ್ ನಮ್ಮಲ್ಲಿ ಒಂದು ಧರ್ಮ ಎಂದೇ ಕರೆಯಲ್ಪಡುತ್ತದೆ. ಇಷ್ಟೊಂದು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ! ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಿನೆಮಾ ಸ್ಟಾರಗಳಿಗಿಂತ ಹೆಚ್ಚು ಜನಪ್ರಿಯರು. ಚುಟುಕು ಕ್ರಿಕೆಟ್ ಪಂದ್ಯಗಳು ಎಂದಾಗ ಭಾರತದ ಕ್ರಿಕೆಟ್ ಗ್ರೌಂಡುಗಳು ತುಂಬಿ ತುಳುಕುವುದು ಖಂಡಿತ. ಅದರಲ್ಲಿಯೂ ಭಾರತ ಪಾಕ್ ಪಂದ್ಯವು ನಡೆಯುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ (ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ, ಅಹ್ಮದಾಬಾದ್) ಯಾವ ರೀತಿ ತುಂಬಿ ನಿಲ್ಲಬಹುದು ಎಂದು ಊಹೆ ಮಾಡಲು ನಮಗೆ ಕಷ್ಟ ಆಗಬಹುದು. ಇಂದು ಎಲ್ಲ ಕ್ರಿಕೆಟ್ ತಂಡಗಳಲ್ಲಿಯೂ ಹೊಡಿ ಬಡಿ ಬ್ಯಾಟರಗಳು ಇರುವ ಕಾರಣ ಈ ಬಾರಿಯ ಕ್ರಿಕೆಟ್ ದೀಪಾವಳಿ ಇನ್ನೂ ಹೆಚ್ಚು ಸದ್ದು ಮಾಡಬಹುದು.
ಈ ಬಾರಿ ಭಾರತ ತಂಡ ಹೇಗೆ? 
——————————
1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಈಗಾಗಲೇ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕಪ್ತಾನರು. ಈ ಬಾರಿ ರೋಹಿತ್ ಶರ್ಮಾ ಕಪ್ತಾನ ಆಗಿ ಒಳ್ಳೆಯ ನಾಯಕತ್ವದ ಅರ್ಹತೆ ಹೊಂದಿದ್ದಾರೆ. ಮುಂಬೈ ತಂಡಕ್ಕೆ ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಕಪ್ತಾನ ಅವರು. ಆದ್ದರಿಂದ ಭಾರತಕ್ಕೆ ನಾಯಕತ್ವದ ಸ್ಟ್ರಾಂಗ್ ಬೇಸ್ ಇದೆ. ಭಾರತದ ಅತ್ಯುತ್ತಮ ಆಟಗಾರ ರಾಹುಲ್ ದ್ರಾವಿಡ್ ಅವರ ಅಪಾರ ಅನುಭವ ಮತ್ತು ಕ್ರಿಕೆಟ್ ಪಾಠಗಳು ಭಾರತಕ್ಕೆ ವರವಾಗಿ ಬರುತ್ತವೆ. ಕೋಚಿಂಗ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ.
ಉತ್ತಮ ಸಮತೋಲನದ ತಂಡ.
———————————-
ಆರಂಭಿಕ ಆಟಗಾರರಾಗಿ ರೋಹಿತ್ ಮತ್ತು ಶುಭಮನ ಗಿಲ್ ಏಷಿಯಾ ಕಪ್ ಪಂದ್ಯದಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಗಿಲ್ ಅವರ ಸರಾಸರಿ 65ರ ಮೇಲೆ ದಾಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಿಲ್ ಸಿಡಿಸಿದ ಶತಕ ತುಂಬಾನೇ ಅತ್ಯುತ್ತಮ ಆಗಿತ್ತು. ಪಾಕ್ ವಿರುದ್ಧ ಕೊಹ್ಲಿ ಮತ್ತು ರಾಹುಲ್ ಹೊಡೆದ ಶತಕಗಳು ಹೆಚ್ಚು ಕಾಲ ಸ್ಮರಣೆಯಲ್ಲಿ ಉಳಿಯುವಂತದ್ದು.
ದೊಡ್ಡ ದೊಡ್ಡ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ನಿರೀಕ್ಷೆ ಮೀರಿ ಹಿಂದೆ ಮಿಂಚಿದ್ದಾರೆ. ಆದ್ದರಿಂದ ಅವರ ಫಾರ್ಮ್  ಬಗ್ಗೆ ತಲೆ ಹೆಚ್ಚು ಕೆಡಿಸುವ ಅಗತ್ಯ ಇಲ್ಲ.
ಮಿಡಲ್ ಆರ್ಡರ್ ಕೆ ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ ಪಾಂಡ್ಯ ಅವರಿಂದ ಬಲಿಷ್ಠಗೊಂಡಿದೆ. ಏಷಿಯಾ ಕಪ್ ಪಂದ್ಯಗಳಲ್ಲಿ ರಾಹುಲ್ ಅವರ ಕೀಪಿಂಗ್ ಕ್ಲಿಕ್ ಆಗಿದೆ. ಸೂರ್ಯ ಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರು ಕೂಡ ಪ್ರತಿಭಾವಂತರು. ಅವರ ಮೇಲೆ ನಿರೀಕ್ಷೆ ಬೆಟ್ಟದಷ್ಟು ಇದೆ.
ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಉತ್ತಮ ಕೊಡುಗೆ ಆಗಿ ಏಷಿಯಾ ಕಪ್ಪಿನಲ್ಲಿ ಮಿಂಚಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಧಾಳಿ ಭಾರತೀಯ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ವಿಶ್ವದ ಎಲ್ಲ ಗ್ರೌಂಡಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಶಾರ್ದೂಲ್ ಒಳ್ಳೆಯ ಆಲ್ರೌಂಡರ್ ಆಟಗಾರ. ಆತನ ಮೇಲೆ ಭರವಸೆ ಇಡಬಹುದು. ಹಾರ್ದಿಕ ಪಾಂಡ್ಯ ಬೌಲಿಂಗ್ ಕ್ಲಿಕ್ ಆದರೆ ಭಾರತಕ್ಕೆ ಗೆಲುವು ಸುಲಭ ಅನ್ನೋದು ಏಷಿಯಾ ಕಪ್ ಕೂಟದಲ್ಲಿ ಸಾಬೀತು ಆಗಿದೆ. ಭಾರತದ ಕ್ರಿಕೆಟ್ ತಂಡ ಈ ಬಾರಿ ಹಿಂದಿಗಿಂತ ಹೆಚ್ಚು ಸಮತೋಲನ ಹೊಂದಿದೆ. ವಿರಾಟ್ ಮತ್ತು ರೋಹಿತ್ ನಿಂತು ಆಡಿದರೆ ಎಷ್ಟು ದೊಡ್ಡ ಮೊತ್ತದ ಚೇಸಿಂಗ್ ಕೂಡ ಕಷ್ಟ ಅಲ್ಲ.
ಭಾರಕ್ಕೆ ಇರುವ ಸವಾಲುಗಳು.
——————————
೧) ನಿರ್ಣಾಯಕ ಪಂದ್ಯಗಳಲ್ಲಿ ಸೂರ್ಯ, ಶ್ರೇಯಸ್ ಅಯ್ಯರ್ ಕೈ ಕೊಡುತ್ತಾರೆ.
೨) ಅತಿಯಾಗಿ ಏಕ್ಸಪೇರಿಮೆಂಟ್ ಮಾಡುವ ರಾಹುಲ್ ದ್ರಾವಿಡ್. ಏಷಿಯಾ ಕಪ್ ಕೂಟದಲ್ಲಿ ಬಾಂಗ್ಲಾ ವಿರುದ್ಧ ಸೋಲಲು ಇದು ಕಾರಣ.
೩) ಭಾರತದ ಫೀಲ್ಡಿಂಗ್ ನೇಪಾಳ ವಿರುದ್ಧದ ಪಂದ್ಯದಲ್ಲಿ ಕೈ ಕೊಟ್ಟಿತ್ತು.  ಫೀಲ್ಡಿಂಗ್ ಇನ್ನೂ ಬಿಗಿ ಆಗಬೇಕು.
೪) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ, ನ್ಯುಜಿಲಾಂಡ್, ಇಂಗ್ಲೆಂಡ್ ಹೆಚ್ಚು ಅಪಾಯಕಾರಿ ತಂಡಗಳು. ಅವುಗಳ ಎದುರು ಭಾರತ ಇತ್ತೀಚೆಗೆ ಹೆಚ್ಚು ಪಂದ್ಯ ಆಡಿಲ್ಲ. ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಟೀಮ್ ಈ ಬಾರಿ ಕೂಡ ಹೆಚ್ಚು ಸ್ಟ್ರಾಂಗ್ ಇದೆ. ಚಾಂಪಿಯನ್ ತಂಡ ಇಂಗ್ಲೆಂಡ್ ಈ ಬಾರಿ ಮಿರಾಕಲ್ ಮಾಡಬಹುದು.
೪) ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅವರ ಫಿಟ್ನೆಸ್ ಬಗ್ಗೆ ಗೊಂದಲ ಇದೆ.
೫) ಐವತ್ತು ಓವರ್ ಆಟ ಆದ ಕಾರಣ ನಿಂತು ಆಡುವ ಆಟ ಬೇಕು. ಐಪಿಎಲ್ ಕೂಟದ ಜೋಶನಲ್ಲಿ ಹೋದರೆ ಅಪಾಯ ಹೆಚ್ಚು.
ಇದುವರೆಗೆ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಮೂರನೇ ಬಾರಿಗೆ ಟ್ರೋಫಿ ಎತ್ತಿ ಮಿಂಚಲಿ ಎನ್ನುವುದು ಶತಕೋಟಿ  ಭಾರತೀಯರ ಹಾರೈಕೆ.
Categories
ಯಶೋಗಾಥೆ ಸ್ಪೋರ್ಟ್ಸ್

‘ಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್.

ಆಕೆ ಶತಮಾನದ ಕ್ರೀಡಾಪಟು – ವಿಲ್ಮಾ ರುಡಾಲ್ಫ್. 
ನಾನು ತುಂಬಾ ಡಿಪ್ರೆಸ್ ಆದಾಗ ಮೊದಲು ಓದುವುದು ಆಕೆಯ ಕಥೆ!
———————————-
ವರ್ಣ ದ್ವೇಷದ ಬೆಂಕಿಯ  ಕುಲುಮೆಯಲ್ಲಿ ಚಂದವಾಗಿ  ಅರಳಿದ ಒಂದು ಅದ್ಭುತವಾದ  ಕ್ರೀಡಾ ಪ್ರತಿಭೆಯನ್ನು ತಮಗೆ ಇಂದು  ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತಿರುವೆ. ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’ ಎಂದು ಕರೆಯಿತು. ಆಕೆಯ ಸಾಧನೆಯು ಮುಂದೆ ಸಾವಿರ ಸಾವಿರ ಕಪ್ಪು ವರ್ಣದ ಸಾಧಕರಿಗೆ ಪ್ರೇರಣೆ ನೀಡಿತು. ಆಕೆ ವಿಲ್ಮಾ ರುಡಾಲ್ಫ್.
ಆಕೆಯು ಬಾಲ್ಯದಲ್ಲಿ ಎಲ್ಲರಿಗೂ ಬೇಡವಾದ ಮಗು ಆಗಿದ್ದಳು!
——————————
ಆಕೆ ಹುಟ್ಟಿದ್ದು ಅಮೆರಿಕಾದ ಸೈಂಟ್ ಬೆಥ್ಲೆಹೆಮ್ ಎಂಬ ಪುರಾತನ ಪುಟ್ಟ ನಗರದಲ್ಲಿ. ಅವಳು Premature Baby ಆಗಿ ಹುಟ್ಟಿದವಳು. ಹುಟ್ಟುವಾಗ ಅವಳ ತೂಕ ನಾಲ್ಕೂವರೆ  ಪೌಂಡ್ ಮಾತ್ರ ಆಗಿತ್ತು. ಮಗು ಬದುಕುವ ಭರವಸೆ ವೈದ್ಯರಿಗೆ ಇರಲಿಲ್ಲ! ಅವಳ ಅಪ್ಪ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದರು. ತೀವ್ರ ಬಡತನ. ಜೊತೆಗೆ ಅಪ್ಪನಿಗೆ ಎರಡು ಮದುವೆ ಆಗಿತ್ತು.  ಆತನಿಗೆ ಹುಟ್ಟಿದ್ದು 22 ಮಕ್ಕಳು! ಅದರಲ್ಲಿ ವಿಲ್ಮಾ 20ನೆಯ ಮಗು! ಆದ್ದರಿಂದ ಅವಳು ಅಪ್ಪನಿಗೆ ಬೇಡವಾದ ಮಗಳು. ಅಮ್ಮನ ಮುದ್ದಿನ ಮಗಳು.
ಬಾಲ್ಯದಲ್ಲಿ ಅಮರಿತು ಸಾಲು ಸಾಲು ಕಾಯಿಲೆಗಳು!
——————————
ಅಂತಹ ಹುಡುಗಿಗೆ ಬಾಲ್ಯದಲ್ಲಿ ಸಾಲು ಸಾಲು ಕಾಯಿಲೆಗಳ ಸರಮಾಲೆಯೇ ಎದುರಾಯಿತು. ಎರಡು ವರ್ಷದಲ್ಲಿ ಪುಟ್ಟ ಮಗುವಿಗೆ ನ್ಯೂಮೋನಿಯಾ ಬಂದು ಅವಳ ಅರ್ಧ ಶಕ್ತಿಯನ್ನು ತಿಂದು ಹಾಕಿತ್ತು. ಚೇತರಿಸಲು ಅವಕಾಶ ಕೊಡದೆ ಬೆನ್ನಿಗೆ ಬಂದದ್ದು ಸ್ಕಾರ್ಲೆಟ್ ಜ್ವರ. ಮೈ ಮೇಲೆ ರಕ್ತ ವರ್ಣದ ಗುಳ್ಳೆಗಳು ಬಂದು ಕೀವು ತುಂಬುವ ಖಾಯಿಲೆ ಅದು. ಅಮ್ಮ ಮಗಳ ಆರೈಕೆ ಮಾಡಿ ಹೈರಾಣಾಗಿ ಬಿಟ್ಟರು! ಸರಿಯಾಗಿ ಐದನೇ ವರ್ಷ ತುಂಬುವ ಹೊತ್ತಿಗೆ ಮಗುವಿಗೆ ಮತ್ತೆ ತೀವ್ರ ಜ್ವರ ಬಂತು. ಪರೀಕ್ಷೆ ಮಾಡಿದಾಗ ವೈದ್ಯರು ಪತ್ತೆ ಹಚ್ಚಿದ್ದು ಪೋಲಿಯೋ ಎಂಬ ಮಹಾ ಕಾಯಿಲೆ! ಆಗಿನ ಕಾಲದಲ್ಲಿ ಭಯ ಹುಟ್ಟಿಸುವ ಕಾಯಿಲೆ ಅದು!
ಪೋಲಿಯೋಗ್ರಸ್ತ ತೆವಳುವ ಮಗು.
———————————–
ಅವಳ ವಯಸ್ಸಿನ ಬೇರೆ ಮಕ್ಕಳು ಶಾಲೆಗೆ ಹೋಗಲು ಆರಂಭ ಮಾಡಿದ್ದರು. ಆದರೆ ವಿಲ್ಮಾ ನೆಲದಲ್ಲಿ  ತೆವಳುತಿದ್ದಳು. ವಾಶ್ ರೂಮಿಗೆ ಅವಳನ್ನು ಅಮ್ಮ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು ! ಅವರಿದ್ದ ನಗರದಲ್ಲಿ ಆಗ ನೀಗ್ರೋಗಳಿಗೆ ಆಸ್ಪತ್ರೆಗಳಿಗೆ ಪ್ರವೇಶ ಇರಲಿಲ್ಲ. ಎಲ್ಲ ವೈದ್ಯಕೀಯ ಸೌಲಭ್ಯಗಳೂ ಬಿಳಿ ಚರ್ಮದವರಿಗೆ ಮೀಸಲು!  ಆದ್ದರಿಂದ ಅವಳ ಚಿಕಿತ್ಸೆಗೆ ಅಮ್ಮ ಅವಳನ್ನು 50 ಮೈಲು ದೂರದ ನಗರಕ್ಕೆ ಹೋಗಿ ಬರಬೇಕಾಯಿತು. ಅದೂ ಸತತ ಎರಡು ವರ್ಷ! ಏಳು ವರ್ಷದ ಮಗಳನ್ನು ಆ ಮಹಾ ತಾಯಿಯು ಸೊಂಟದ ಮೇಲೆ ಕೂರಿಸಿ  ಆಸ್ಪತ್ರೆಯ ವಾರ್ಡಿನಿಂದ ವಾರ್ಡಿಗೆ ಎಡತಾಕುವುದನ್ನು ನೋಡಿದವರಿಗೆ ‘ಅಯ್ಯೋ ಪಾಪ’ ಅನ್ನಿಸುತಿತ್ತು.
‘ಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು. ಹೊರಗೆ ಮಕ್ಕಳು ಆಡುವುದನ್ನು ನೋಡಬೇಕು’ ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು. ಈ ಹುಡುಗಿಯು ಕಿಟಕಿಯಿಂದ ಹೊರಗೆ ಮೈದಾನದಲ್ಲಿ ಮಕ್ಕಳು ಆಡುವುದನ್ನು, ಓಡುವುದನ್ನು  ನೋಡುತ್ತಾ ಸಂಭ್ರಮಿಸುವುದು, ಖುಷಿ ಪಡುವುದನ್ನು ನೋಡುತ್ತಾ ಅಮ್ಮನ ಮುಖದಲ್ಲಿ ಅಪರೂಪದ ನಗುವಿನ ಗೆರೆಯು ಚಿಮ್ಮುತ್ತಿತ್ತು! ಮನೆಯ ಒಳಗೆ ಗೋಡೆ ಹಿಡಿದುಕೊಂಡು ನಡೆಯಲು ಮೊದಲು ಪ್ರಯತ್ನ ನಡೆಯಿತು. ಅದರೊಂದಿಗೆ ಆರ್ಥೋಪೆಡಿಕ್ ಚಿಕಿತ್ಸೆಗಳು ನಡೆದವು. ದೀರ್ಘ ಕಾಲ ಫಿಸಿಯೋ ತೆರೆಪಿಯು ನಡೆದು ಬಲಗಾಲಿನ ಶಕ್ತಿ ಮರಳಿತು. ಆದರೆ ಎಡಗಾಲಿನ ಶಕ್ತಿಯು ಕುಂಠಿತವಾಗಿತ್ತು. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವಳ ಪಾದಗಳು ಅಸಮ ಆಗಿದ್ದವು. ಅವಳ ಸೈಜಿನ ಶೂಗಳು ಎಲ್ಲಿಯೂ ಸಿಗುತ್ತಿರಲಿಲ್ಲ!
ಈ ಸಮಸ್ಯೆಗಳ ನಡುವೆ ಅಮ್ಮನಿಗೆ ಮಗಳ ಶಾಲೆಯ ಚಿಂತೆ. ಅವಳು ಏಳು ವರ್ಷ ಪ್ರಾಯದಲ್ಲಿ ನೇರವಾಗಿ ಎರಡನೇ ತರಗತಿಗೆ ಸೇರ್ಪಡೆ ಆದವಳು.
ಅವಳು ಎಡಗಾಲನ್ನು ಕೊಂಚ ಎಳೆದುಕೊಂಡು ನಡೆಯುವ ರೀತಿಯನ್ನು ನೋಡಿ ಅವಳ ಓರಗೆಯ ಮಕ್ಕಳಿಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು. ಅಣಕು, ಕೀಟಲೆ ಮಾಡಿ ಅವಳ ಕಣ್ಣಲ್ಲಿ ನೀರು ತರಿಸುತ್ತಿದ್ದರು.
ಇದರಿಂದ ನೊಂದುಕೊಂಡ ವಿಲ್ಮಾ ತರಗತಿಗಳಿಗೆ ಚಕ್ಕರ್ ಹೊಡೆದು ಮೈದಾನದಲ್ಲಿ ಹೆಚ್ಚು ಹೊತ್ತನ್ನು ಕಳೆಯುವುದನ್ನು ಅಭ್ಯಾಸ ಮಾಡಿದಳು.ಅದೇ  ರೀತಿ ಎಡಗಾಲಿಗೆ ಆಧಾರವನ್ನು  ಕೊಡುವ ಲೆಗ್ ಬ್ರೇಸ್ ಹಾಕಿ ವೇಗವಾಗಿ ನಡೆಯಲು ಆರಂಭ ಮಾಡಿದಳು. ಅವಳ ಒಳಗೆ ಅದಮ್ಯವಾದ ಒಂದು ಚೈತನ್ಯ ಇರುವುದನ್ನು ಒಬ್ಬ ಕೋಚ್ ದಿನವೂ ನೋಡುತ್ತಿದ್ದರು. ಅವರ ಹೆಸರು ಎಡ್ ಟೆಂಪಲ್.
ಓಡು ಕಪ್ಪು ಜಿಂಕೆ,  ಓಡು!
————————-
ಅವಳಿಗೆ ದೇವರು ಅದ್ಭುತವಾದ  ಎತ್ತರವನ್ನು ಕೊಟ್ಟಿದ್ದರು ( 5 ಅಡಿ 11 ಇಂಚು). ಪ್ರೌಢಶಾಲೆಯ ಹಂತಕ್ಕೆ  ಬಂದಾಗ ಎಡಗಾಲಿನ ಶಕ್ತಿಯು ಮರಳಿತ್ತು. ನಡೆಯುವಾಗ ಒಂದು ಸಣ್ಣ ಜರ್ಕ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವೂ  ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ
ಬಾಸ್ಕೆಟಬಾಲ್ ಟೀಮಿಗೆ ಅವಳು ಆಯ್ಕೆ ಆದಾಗ ಕುಣಿದು ಸಂಭ್ರಮ ಪಟ್ಟಿದ್ದಳು. ಇಡೀ
ಬಾಸ್ಕೆಟ್ಬಾಲ್ ಕೋರ್ಟಲ್ಲಿ ಅವಳು ಮಿಂಚಿನಂತೆ ಓಡುವುದನ್ನು ನೋಡಿದ  ಕೋಚ್ ಅವಳನ್ನು ಅಥ್ಲೆಟಿಕ್ಸ ತಂಡಕ್ಕೆ ಸೇರಿಸಿ ಕೋಚಿಂಗ್ ಆರಂಭಿಸಿದರು. ಎಡ್ ಟೆಂಪಲ್ ಎಂಬ ಆ ಕೋಚ್ ಅವಳಲ್ಲಿ ಇದ್ದ ಅದ್ಭುತವಾದ  ಕ್ರೀಡಾ ಪ್ರತಿಭೆಯನ್ನು ಪುಟವಿಟ್ಟ ಚಿನ್ನದಂತೆ ಹೊರತಂದರು. ಅವಳು ಮೊದಲ ಬಾರಿ  ಭಾಗವಹಿಸಿದ ಓಪನ್ ಕ್ರೀಡಾಕೂಟದಲ್ಲಿ ಎಲ್ಲಾ  ಒಂಬತ್ತು ಸ್ಪರ್ದೆಗಳಲ್ಲಿ ಕೂಡ ಚಿನ್ನದ ಪದಕವನ್ನು ಗೆದ್ದಿದ್ದಳು!  ಅವಳ ಒಳಗೆ ಎಂದಿಗೂ ದಣಿಯದ, ಸೋಲನ್ನು ಸುಲಭವಾಗಿ  ಒಪ್ಪಿಕೊಳ್ಳದ, ಬಿದ್ದಲ್ಲಿಂದ ಪುಟಿದು ಮತ್ತೆ ಎದ್ದುಬರುವ ಚೈತನ್ಯ ಶಕ್ತಿ ಇತ್ತು!
ಬಾಲ್ಯದಲ್ಲಿ ತೆವಳುತ್ತಿದ್ದ ಮಗು ಒಲಿಂಪಿಕ್ಸ್ ಮೆಡಲ್ ಪಡೆಯಿತು!
———————————-
1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕಣದಲ್ಲಿ ಅವಳು ಅಮೇರಿಕಾವನ್ನು ಪ್ರತಿನಿಧಿಸಿ ರಿಲೇ ಓಟದಲ್ಲಿ ಒಂದು ಕಂಚಿನ ಪದಕ ಮಾತ್ರ ಗೆದ್ದಳು. ಆಗ ಅವಳಿಗೆ ಕೇವಲ 16 ವರ್ಷ!ಮತ್ತೆ ಸ್ಪಷ್ಟ ಗುರಿಯೊಂದಿಗೆ ಪ್ರಾಕ್ಟೀಸ್ ಮಾಡಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಪ್ರವೇಶ ಪಡೆದಳು.
ಅದು 1960ರ ರೋಮ್ ಒಲಿಂಪಿಕ್ಸ್. ಜಗತ್ತಿನಾದ್ಯಂತ ಟಿವಿ ಕವರೇಜ್ ಆಗ ತಾನೆ
ಆರಂಭ ಆಗಿತ್ತು! ಆದ್ದರಿಂದ ಸಹಜವಾಗಿ ಒಲಿಂಪಿಕ್ಸ್ ಕ್ರೇಜ್ ಹೆಚ್ಚಿತ್ತು. ಮೈದಾನದಲ್ಲಿ ಕೂಡ 43 ಡಿಗ್ರಿ ಉಷ್ಣತೆ ಇತ್ತು! ಆ ಒಲಿಂಪಿಕ್ಸ್ ಕಣದಲ್ಲಿ ವಿಲ್ಮಾ ರುಡಾಲ್ಫ್ ಬಿರುಗಾಳಿಯ ಹಾಗೆ ಓಡಿದಳು. 100 ಮೀಟರ್ ಚಿನ್ನದ ಪದಕ ಪಡೆದು ಜಗತ್ತಿನ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿ ಆಕೆ ಪಡೆದರು! ಟೈಮಿಂಗ್ 11.2 ಸೆಕೆಂಡ್ಸ್! ಅದು ಆ ಕಾಲದ  ವಿಶ್ವದಾಖಲೆ ಆಗಿತ್ತು! 200 ಮೀಟರ್ ಓಟದಲ್ಲಿ ಮತ್ತೆ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ! ಟೈಮಿಂಗ್ 22.9 ಸೆಕೆಂಡ್ಸ್! ಮತ್ತೆ 4X100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ! ಹೀಗೆ ಮೂರು ಚಿನ್ನದ ಪದಕ ಒಂದೇ ಕೂಟದಲ್ಲಿ ಪಡೆದ ವಿಶ್ವದ  ಮೊದಲ ಮಹಿಳಾ ಅಥ್ಲೆಟ್ ಎಂಬ ಕೀರ್ತಿಯು ಅವಳಿಗೆ ದೊರೆಯಿತು!
ವಿಲ್ಮಾ ರುಡಾಲ್ಫ್  ಸ್ಥಾಪಿಸಿದ ಎರಡು ವಿಶ್ವಮಟ್ಟದ ದಾಖಲೆಗಳು ಮುಂದೆ  ಹಲವು ವರ್ಷಗಳ ಕಾಲ ಅಬಾಧಿತವಾಗಿ  ಉಳಿದವು. ಆ ಎತ್ತರದ  ಸಾಧನೆಯ ನಂತರ ವಿಲ್ಮಾ
ವಿಶ್ವಮಟ್ಟದ ಹಲವು  ಕೂಟಗಳಲ್ಲಿ ನಿರಂತರವಾಗೀ ಓಡಿದಳು ಮತ್ತು ಓಡಿದ್ದಲ್ಲೆಲ್ಲ ಪದಕಗಳನ್ನು ಸೂರೆ ಮಾಡಿದಳು.
ತನ್ನ 22ನೆಯ ವರ್ಷದಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ವಿಲ್ಮಾ ಕ್ರೀಡೆಗೆ ವಿದಾಯ ಕೋರಿದರು! 1964ರ ಟೋಕಿಯೋ ಒಲಿಂಪಿಕ್ಸನಲ್ಲಿ ಭಾಗವಹಿಸುವ ಅವಕಾಶ ಇದ್ದರೂ ಕೂಡ ಸ್ಪರ್ಧೆ ಮಾಡಲೇ ಇಲ್ಲ!
ವಿಲ್ಮಾ ರುಡಾಲ್ಫ್ – ಶತಮಾನದ ಕ್ರೀಡಾಪಟು.
——————————
ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಾರಿಗೆ  ಪೀಡಿತವಾದ, ಕಪ್ಪುವರ್ಣ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾ ಸಾಧನೆಗಳ ಮೂಲಕ ಇತಿಹಾಸ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ಒಂದು ಪತ್ರಿಕೆ ಕರೆಯಿತು. ಅವಳ ಆತ್ಮಚರಿತ್ರೆ ‘ವಿಲ್ಮಾ- The Story of Wilma Rudolph’ ಲಕ್ಷಾಂತರ ಮಂದಿಗೆ ಪ್ರೇರಣೆ ಕೊಟ್ಟಿತು. ಅವಳ ಸಾಧನೆಗಳ ಬಗ್ಗೆ 21 ಪ್ರಸಿದ್ಧ ಲೇಖಕರು ಪುಸ್ತಕಗಳನ್ನು    ಬರೆದಿದ್ದಾರೆ. ಅವಳ ಬದುಕಿನ ಕಥೆ ಅಮೆರಿಕ ಮತ್ತು ಇತರ ದೇಶಗಳ ಕಾಲೇಜಿನ ಪಠ್ಯ ಪುಸ್ತಕಗಳಲ್ಲಿ ಮುಂದೆ ಸ್ಥಾನ ಪಡೆಯಿತು.
ಈಗ ಹೇಳಿ ವಿಲ್ಮಾ ಗ್ರೇಟ್ ಹೌದಾ?
Categories
ಕ್ರಿಕೆಟ್ ಯಶೋಗಾಥೆ

ಸ್ಟುವರ್ಟ್ ಬ್ರಾಡ್ ಎಂಬ ಫೈಟಿಂಗ್ ಸ್ಪಿರಿಟ್.

2007-  ಓವರಿಗೆ ಆರು ಸಿಕ್ಸರ್
2023-  602 ವಿಕೆಟ್ಸ್ ಪಡೆದು ನಿವೃತ್ತಿ!
ವಿಲನ್ ಆಗಿ ಆರಂಭ. ಲೆಜೆಂಡ್ ಆಗಿ ಮುಕ್ತಾಯ!
———————————–
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್  ನಡುವಿನ ಪ್ರತಿಷ್ಠಿತ ಆಷಸ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನ ಇಡೀ ಮೈದಾನದಲ್ಲಿ ಸ್ಟ್ಯಾಂಡಿಂಗ್ ಓವೇಷನ್ ಪಡೆದು, ತನ್ನ ಸಹ ಆಟಗಾರರಿಂದ ಗಾರ್ಡ್ ಆಫ್ ಆನರ್ ಪಡೆದು ಒಬ್ಬ ಕ್ರಿಕೆಟರ್ ನಿವೃತ್ತಿ ಪಡೆಯುತ್ತಾನೆ ಅಂದರೆ ಆತ ಖಂಡಿತವಾಗಿ ಲೆಜೆಂಡ್ ಆಗಿರಬೇಕು! ಹೌದು, ಈ ಸೋಮವಾರ ಕ್ರಿಕೆಟ್ ಗ್ರೌಂಡ್ ಪೂರ್ತಿ ಎಮೋಷನಲ್ ಆಗಿ ಬದಲಾಗಿತ್ತು. ಅದಕ್ಕೆ ಕಾರಣ ಆದದ್ದು ಇಂಗ್ಲಿಷ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ನಿವೃತ್ತಿ!
ಭಾರತೀಯರಿಗೆ ಈ ಹೆಸರು ಯಾವತ್ತೂ ಮರೆತು ಹೋಗುವುದಿಲ್ಲ!
———————————–
ಅದಕ್ಕೆ ಕಾರಣ  2007ರ ಐಸಿಸಿ T20 ವಿಶ್ವಕಪ್. ಅಂದು ಭಾರತದ ಯುವರಾಜ್ ಸಿಂಗ್ ಮೈಯ್ಯಲ್ಲಿ ಆವೇಶ ಬಂದ ಹಾಗೆ ಒಂದು ಓವರಿನಲ್ಲಿ ಆರು ಸಿಕ್ಸ್ ಚಚ್ಚಿದ್ದು ಇದೇ ಸ್ಟುವರ್ಟ್ ಬ್ರಾಡ್ ಓವರಿಗೆ! ಆ ಒಂದು ಓವರ್ ಮುಗಿದಾಗ ಯುವರಾಜ್ ಹೀರೋ ಆಗಿದ್ದರು ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡಿಗೆ ವಿಲನ್ ಆಗಿದ್ದರು!  ಇಂದು ಅದೇ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟಿನಲ್ಲಿ 602 ವಿಕೆಟ್ ಪಡೆದು ನಿವೃತ್ತನಾಗುತ್ತಿದ್ದಾನೆ.
ಯುವರಾಜ್ ಅವರಿಂದ ಹಾಗೆ ಚಚ್ಚಿಸಿಕೊಳ್ಳುವಾಗ ಸ್ಟುವರ್ಟ್ ಬ್ರಾಡ್ ವಯಸ್ಸು ಕೇವಲ 21 ಆಗಿತ್ತು. ಆನಂತರ ನಾನು ಕ್ರಿಕೆಟ್ ಮೈದಾನದಲ್ಲಿ ತುಂಬಾ ಕಲಿತೆ ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾನೆ.
ಅವನಲ್ಲಿ ನಾನು ಕಂಡ ಆ ಟ್ರಾನ್ಸಫರ್ಮೇಶನ್ ನಿಜಕ್ಕೂ ಅದ್ಭುತ ಎಂದೇ ನನ್ನ ಭಾವನೆ.
ಆತನ ತಂದೆ ಕೂಡ ಟೆಸ್ಟ್ ಕ್ರಿಕೆಟ್ ಆಡಿದ್ದರು.
———————————–
ಸ್ಟುವರ್ಟ್ ಬ್ರಾಡ್ ತಂದೆ ಕ್ರಿಸ್ ಬ್ರಾಡ್ 1984-89ರ ಅವಧಿಯಲ್ಲಿ ಅದೇ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಈ ಸ್ಟುವರ್ಟ್ ಹುಟ್ಟುವಾಗ 12 ವಾರಗಳ ಪ್ರಿಮೆಚ್ಯೂರ್ ಬೇಬಿ ಆಗಿದ್ದವನು. ಆಗ ಅವನನ್ನು ಡಾಕ್ಟರ್ ಜಾನ್ ಎಂಬ ವೈದ್ಯ ಬದುಕಿಸಿಕೊಟ್ಟವರು.  ಅದರಿಂದಾಗಿ ಸ್ಟುವರ್ಟ್ ಬ್ರಾಡ್ ಹೆಸರಿನ ಮಧ್ಯದಲ್ಲಿ ಜಾನ್ ಅಂಟಿಕೊಂಡಿತು. ಹದಿನಾರು ವರ್ಷದವರೆಗೆ ಕೇವಲ ಹಾಕ್ಕಿ ಆಡಿಕೊಂಡು ಇದ್ದವನು ಸ್ಟುವರ್ಟ್. ಆತನು ತಂಡದ ಗೋಲ್ ಕೀಪರ್ ಆಗಿದ್ದನು. ಆದರೆ ಯಾವುದೋ ಒಂದು ಮಾಯೆಗೆ ಒಳಗಾಗಿ ಅಪ್ಪನಿಂದ ಸ್ಫೂರ್ತಿ ಪಡೆದು ಮುಂದೆ ಕ್ರಿಕೆಟ್ ಜಗತ್ತನ್ನು ಪ್ರವೇಶ ಮಾಡಿದ್ದನು. ಮುಂದೆ 2006ರಿಂದ 2023ರ ವರೆಗೆ 17 ವರ್ಷಗಳ ಕಾಲ ಆತನು ಇಂಗ್ಲೆಂಡ್ ಪರವಾಗಿ ಆಡಿದ್ದು ಒಂದು ದಾಖಲೆ.
6 ಅಡಿ ಐದು ಇಂಚು ಎತ್ತರದ ಹುಡುಗ ಸ್ಟುವರ್ಟ್. 
——————————
ಈ ಎತ್ತರವು ಆತನಿಗೆ ದೈವದತ್ತವಾಗಿ ಬಂದಿತ್ತು. ಇನ್ನೂ ಒಂದು ವಿಶೇಷ ಎಂದರೆ ಆತನು ಎಡಗೈ ಬೌಲರ್, ಬಲಗೈ ಬ್ಯಾಟ್ಸಮನ್! ಅವನದ್ದೇ ಇಂಗ್ಲೆಂಡ್ ತಂಡದ ಇನ್ನೊಬ್ಬ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಜೊತೆಗೆ 111 ಟೆಸ್ಟ್ ಪಂದ್ಯ ಆಡಿದ ದಾಖಲೆ ಕೂಡ ಆತನ ಹೆಸರಲ್ಲಿ ಇದೆ. ಜಗತ್ತಿನ ಅತ್ಯಂತ ಯಶಸ್ವೀ ವೇಗದ ಬೌಲರಗಳು ಒಂದೇ ತಂಡದ ಭಾಗವಾಗಿರುವುದು ಕೂಡ ಉಲ್ಲೇಖನೀಯ.  ಸ್ಟುವರ್ಟ್ 165 ಟೆಸ್ಟ್ ಪಂದ್ಯ ಆಡಿ 602 ವಿಕೆಟ್ ಪಡೆದರೆ ಇದೇ ಜೇಮ್ಸ್ ಆಂಡರ್ಸನ್ 689 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ.
ಟೆಸ್ಟ್ ಕ್ರಿಕೆಟಿನಲ್ಲಿ 600+ ವಿಕೆಟ್ ಪಡೆದವರು ಕೇವಲ ಐದು ಜನರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದವರು. ನಮ್ಮದೇ ಭಾರತದ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ. ಅವರು ಮೂರೂ ಜನ ಸ್ಪಿನ್ ಬೌಲರಗಳು. ಉಳಿದವರು ಸ್ಟುವರ್ಟ್ ಮತ್ತು ಆಂಡರ್ಸನ್ ಇಬ್ಬರೂ ವೇಗದ ಬೌಲರಗಳು. ಅದರಲ್ಲಿ ಸ್ಟುವರ್ಟ್ ಬ್ರಾಡ್ ಈಗ ಆಶಸ್ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಸ್ಟುವರ್ಟ್ ಬ್ರಾಡ್ ವಿಲನ್ ಆದದ್ದು ಅದೇ ಮೊದಲು ಅಲ್ಲ! 
———————————-
ಈ ಸ್ಟುವರ್ಟ್ ಬ್ರಾಡ್ 2007ರಲ್ಲಿ ಯುವರಾಜ್ ಸಿಂಗ್ ಕೈಯ್ಯಲ್ಲಿ ಹೊಡೆಸಿಕೊಂಡು ವಿಲನ್ ಆದದ್ದು ನಮಗೆ ಗೊತ್ತೇ ಇದೆ. ಇನ್ನೊಮ್ಮೆ 2009ರಲ್ಲಿ ದುರ್ಬಲ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಕೈಗೆ ಎತ್ತಿಕೊಂಡು ಏಳು ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಸ್ಟುವರ್ಟ್ ಬ್ರಾಡ್ ವಿಫಲ ಆಗಿದ್ದನು. ಆ ಓವರಿನಲ್ಲಿ ಎರಡು ರನ್ ಔಟ್ ಅವಕಾಶ ಮತ್ತು ಒಂದು ಸುಲಭದ ಕ್ಯಾಚ್ ಕೈ ಚೆಲ್ಲಿ ಆತನು  ಎರಡನೇ ಬಾರಿಗೆ ವಿಲನ್ ಆಗಿದ್ದನು.  ಇಷ್ಟೆಲ್ಲ ಆದರೂ ಆತನ ಟೀಮ್ ಮ್ಯಾನೇಜಮೆಂಟ್  ಆತನನ್ನು 17 ವರ್ಷ ಆಡಿಸಿತು ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿರಬೇಕು.
ಸ್ಟುವರ್ಟ್ ಬ್ರಾಡ್ ದಾಖಲೆಗಳು ನಿಜವಾಗಿಯೂ ಅದ್ಭುತ ಆಗಿವೆ.
——————————
ಆ ಎರಡು ಘಟನೆಗಳನ್ನು ಬಿಟ್ಟರೆ ಸ್ಟುವರ್ಟ್ ಹಲವಾರು ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ತೋರಿದ್ದಾನೆ. ಅತ್ಯಂತ ಕಠಿಣವಾದ ಆಶಸ್ ಸರಣಿಯಲ್ಲಿ ಸ್ಟುವರ್ಟ್ ಎಂದಿಗೂ ಹಿಂದೆ ಬಿದ್ದದ್ದು ಇಲ್ಲವೇ ಇಲ್ಲ! 165 ಟೆಸ್ಟ್ ಪಂದ್ಯಗಳಲ್ಲಿ 602 ವಿಕೆಟ್ ಅಂದರೆ ಅದು ನಿಜಕ್ಕೂ ಅದ್ಭುತ ಸಾಧನೆ. 20 ಬಾರಿ ಐದು ವಿಕೆಟ್ ಗೊಂಚಲು, 3 ಬಾರಿ ಹತ್ತು ವಿಕೆಟ್ ಗೊಂಚಲು ಪಡೆದ ದಾಖಲೆಯು ಖಂಡಿತವಾಗಿ ಸಣ್ಣದು ಅಲ್ಲ. 15/8 ಅವರ ಬೆಸ್ಟ್ ಫಿಗರ್. ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಹ್ಯಾಟ್ರಿಕ್ ಸಾಧನೆ ಕೂಡ ಆತನ ಹೆಸರಲ್ಲಿ ಇದೆ. ಪಾಕ್ ವಿರುದ್ಧ ನಂಬರ್ 9 ಬ್ಯಾಟ್ಸಮನ್ ಆಗಿ ಕ್ರೀಸಿಗೆ ಬಂದು 169 ರನ್ ಚಚ್ಚಿದ್ದು ಕೂಡ ಅವನ ದಾಖಲೆಯ ಭಾಗ!
ನಂಬರ್ 9 ಅಥವ ನಂಬರ್ 10 ಬ್ಯಾಟ್ಸಮನ್ ಆಗಿ ಕ್ರೀಸಿಗೆ ಬಂದು ಅತೀ ಹೆಚ್ಚು ಹೊತ್ತು ಕ್ರೀಸಿನಲ್ಲಿ ಒಂದೇ ಒಂದು ಸ್ಕೋರ್ ಮಾಡದೆ ನಿಂತ ( 103 ನಿಮಿಷ) ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಹೆಸರಲ್ಲಿ ಇದೆ. ಡೇವಿಡ್ ವಾರ್ನರನನ್ನು 17 ಬಾರಿ ಔಟ್ ಮಾಡಿದ ದಾಖಲೆ ಕೂಡ ಅದ್ಭುತವಾಗಿದೆ.
ಅಸ್ತಮಾ ಜೊತೆ ಕೂಡಾ ಫೈಟ್
——————————
ಆತನ ಬೌಲಿಂಗ್ ಆಕ್ಷನ್ ತುಂಬಾ ಚಂದ. ಸ್ಟುವರ್ಟ್ ಬ್ರಾಡ್ ತುಂಬಾ ದೂರದಿಂದ ಓಡಿಕೊಂಡು ಬರುವುದಿಲ್ಲ. ಆದರೆ ಆತನು ಅತ್ಯುತ್ತಮ ಸ್ವಿಂಗ್ ಬೌಲರ್. ಹೆಚ್ಚಿನ ಎಸೆತಗಳು ಗುಡ್ ಲೆಂಗ್ತ್ ಆಗಿದ್ದು ಬ್ಯಾಟ್ಸಮನಗಳು  ಗೊಂದಲಕ್ಕೆ ಈಡಾಗುತ್ತಾರೆ  ಅನ್ನುವುದೇ ಆತನ ನಿಖರತೆಯ ಪ್ರಮಾಣ ಪತ್ರ.
ಬಾಲ್ಯದಿಂದಲೂ ಕಾಡುತ್ತಿದ್ದ  ಅಸ್ತಮಾ ಜೊತೆ ಕೂಡ ಅವನು ದೀರ್ಘ ಕಾಲ ಫೈಟ್ ಮಾಡಬೇಕಾಯಿತು. ಎಷ್ಟೋ ಬಾರಿ ಮೈದಾನದಲ್ಲಿ ಉಸಿರು ಕಟ್ಟಿದ  ಅನುಭವ ಆಗಿ ಸ್ಟುವರ್ಟ್ ಕುಸಿದು ಹೋದ ಸಂದರ್ಭಗಳು ಇವೆ .
ಹಾಗೆ ಸ್ಟುವರ್ಟ್ ಬ್ರಾಡ್ ಇಂದು ವಿಶ್ವವಿಜಯೀ ಆಗಿದ್ದಾನೆ. ಇಂಗ್ಲೆಂಡ್ ಗೆದ್ದಿರುವ ಪ್ರತೀ ಕ್ರಿಕೆಟ್ ಸರಣಿಗಳಲ್ಲಿ ಮತ್ತು ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿಕೊಟ್ಟ ಕೀರ್ತಿಯಲ್ಲಿ ಒಂದು ಭಾಗವು ಸ್ಟುವರ್ಟ್ ಬ್ರಾಡಗೆ ಖಂಡಿತ ದೊರೆಯಬೇಕು. ಇನ್ನೂ ತನ್ನಲ್ಲಿ ಒಂದೆರಡು ವರ್ಷ ಕ್ರಿಕೆಟ್ ಇದೆ ಎನ್ನುವಾಗಲೇ ಈ 37 ವರ್ಷದ ವೇಗಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಆತನ ODI ಮತ್ತು T20 ದಾಖಲೆಗಳೂ ತುಂಬಾ ಚೆನ್ನಾಗಿವೆ. ಅಂತಹ ಚಾಂಪಿಯನ್ ಆಟಗಾರ ಇನ್ನು ಇಂಗ್ಲೆಂಡ್ ಪರವಾಗಿ ಆಡುವುದಿಲ್ಲ ಅನ್ನುವಾಗ ಒಂದು ಶೂನ್ಯ ಕ್ರಿಯೇಟ್ ಆಗುತ್ತದೆ. ಆ ಶೂನ್ಯವನ್ನು ಸದ್ಯಕ್ಕೆ ತುಂಬುವುದು ಯಾರು?
ವಿಲನ್ ಆಗಿ ಕ್ರಿಕೆಟ್ ಆರಂಭ, ಲೆಜೆಂಡ್ ಆಗಿ ನಿರ್ಗಮನ ಅನ್ನುವ ಮಾತು ಅದು ಸ್ಟುವರ್ಟ್ ಬ್ರಾಡ್ ಅವನಿಗೆ ಖಂಡಿತವಾಗಿ ಹೊಂದಿಕೆ ಆಗುತ್ತದೆ.
Categories
ಫುಟ್ಬಾಲ್

ಭಾರತದ ಫುಟ್ಬಾಲ್ ದಂತಕಥೆ – ಸುನೀಲ್ ಚೆಟ್ರಿ.

ಗೋಲು ಗಳಿಕೆಯಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನ ಪಡೆದ ಆಟಗಾರ. ರೊನಾಲ್ಡೋ ಮತ್ತು ಮೆಸ್ಸಿ ಮಾತ್ರ ಆತನಿಗಿಂತ ಮುಂದೆ!
———————————–
ಕ್ರಿಕೆಟ್ ಅಂದರೆ ಧರ್ಮ, ಕ್ರಿಕೆಟಿಗರು ಅಂದರೆ ದೇವರು ಎಂದು ಪೂಜಿಸಲ್ಪಡುವ ಭಾರತದಲ್ಲಿ ಒಬ್ಬ ಫುಟ್ಬಾಲ್ ಆಟಗಾರ 21 ವರ್ಷಗಳಿಂದ ದೇಶಕ್ಕಾಗಿ  ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್ ಬಿಟ್ಟರೆ ಬೇರೆ ಯಾವ ಸಪೋರ್ಟ್ ಕೂಡ ಇಲ್ಲದ ಸನ್ನಿವೇಶದಲ್ಲಿ ಕೂಡ ಈ ದೈತ್ಯ ಪ್ರತಿಭೆಯ ಆಟಗಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾನೆ ಅಂದರೆ ಅದು ನಿಜವಾಗಿಯೂ ಅದ್ಭುತ! ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಆಗಿ ಭಾರತದಲ್ಲಿ ಫುಟ್ಬಾಲ್ ಕ್ರೇಜನ್ನು ಜೀವಂತವಾಗಿ  ಉಳಿಸಿದ್ದಾನೆ ಅಂದರೆ ಆತ ಖಂಡಿತವಾಗಿಯೂ ಲೆಜೆಂಡ್ ಆಗಿರಬೇಕು.
ಆತನೇ ಭಾರತದ ಫುಟ್ಬಾಲ್ ತಂಡದ ಕ್ಯಾಪ್ಟನ್, ಮಿಂಚು ಹರಿಸುವ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ.
38ರ ಹರೆಯದಲ್ಲಿಯೂ ಅದೇ ವೇಗ, ಅದೇ ಕಸುವು, ಅದೇ ಗೆಲುವಿನ ಹಸಿವು. 
——————————
ಮೊನ್ನೆ ನಡೆದ SAFF ಪಂದ್ಯಕೂಟದ ಸ್ಪರ್ಧಾತ್ಮಕ ಪಂದ್ಯಗಳನ್ನು ನೋಡಿದವರಿಗೆ ಸುನೀಲ್ ಆಟದ ತಾಂತ್ರಿಕತೆ ಥಟ್ಟನೆ ಸೆಳೆಯುತ್ತದೆ. ಆತ ಗ್ರೌಂಡಿನಲ್ಲಿ ಇದ್ದಾನೆ ಅಂದರೆ ಬೇರೆ ಯಾವ ಆಟಗಾರನೂ ಕಾಣುವುದಿಲ್ಲ ಅನ್ನೋದು ನೂರಕ್ಕೆ ನೂರು ನಿಜ. ಇಡೀ ಗ್ರೌಂಡ್ ಆವರಿಸಿಕೊಂಡು ಆಡುವ ಆಟ ಆತನದ್ದು. ಬಾಲನ್ನು ಡ್ರಿಬಲ್ ಮಾಡಿಕೊಂಡು ಮೈದಾನದ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ತೆಗೆದುಕೊಂಡು ಹೋಗುವ ಸ್ಕಿಲ್ ಅದು ಅದ್ಭುತ. ಆತನ ಕಾಲುಗಳಿಗೆ ಬಾಲ್ ದೊರೆಯಿತು ಅಂದರೆ ಅದು ಗೋಲ್ ಆಗದೆ ವಿರಮಿಸುವುದಿಲ್ಲ! ಸುನೀಲ್ ಗ್ರೌಂಡಿನಲ್ಲಿ ಇರುವಷ್ಟು ಹೊತ್ತು ಅವನ ತಂಡವನ್ನು ಸೋಲಲು ಬಿಡುವುದಿಲ್ಲ ಎನ್ನುವುದು ನೂರಾರು ಬಾರಿ ಸಾಬೀತಾಗಿದೆ. ಮೊನ್ನೆಯ SAAF ಕೂಟದಲ್ಲಿ ಮೂರನೇ ಬಾರಿಗೆ ಟಾಪ್ ಗೋಲು ಸ್ಕೋರರ್ ಆದದ್ದು, ನಾಲ್ಕನೇ ಬಾರಿಗೆ ಪ್ಲೇಯರ್ ಆಫ್ ದ ಟೂರ್ನಮೆಂಟ್ ಆದದ್ದು, ಭಾರತಕ್ಕೆ ಹೊಳೆಯುವ SAAF ಟ್ರೋಫಿಯನ್ನು ನಾಲ್ಕನೇ ಬಾರಿಗೆ ಗೆಲ್ಲಿಸಿಕೊಟ್ಟದ್ದು ಯಾವುದೂ ಸಣ್ಣ ಸಾಧನೆ ಅಲ್ಲ. ಸುನೀಲ್ ಚೆಟ್ರಿಗೆ 38 ವರ್ಷ ಆಯ್ತು ಅಂದರೆ ನಂಬೋರು ಯಾರು?
ಸುನೀಲ್ ಚೇಟ್ರಿ ಒಬ್ಬ ಸೈನಿಕನ ಮಗ. 
———————————–
1984 ಆಗಸ್ಟ್ 3ರಂದು ಸಿಕಂದರಾಬಾದನಲ್ಲಿ ಹುಟ್ಟಿದ ಸುನೀಲ್ ತಂದೆ ಒಬ್ಬ ಸೈನಿಕ ಆಗಿದ್ದರು ಮತ್ತು ಭಾರತದ ಆರ್ಮಿ ಫುಟ್ಬಾಲ್ ಟೀಮನಲ್ಲಿ ಆಡಿದ್ದರು. ಅದರಿಂದಾಗಿ ಫುಟ್ಬಾಲ್ ಆಸಕ್ತಿ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು ಎನ್ನಬಹುದು. ತನ್ನ
18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್. ಕ್ಲಬಗಳ ಪರವಾಗಿ ಇದುವರೆಗೆ ಆಡಿದ 452 ಪಂದ್ಯಗಳಲ್ಲಿ 217 ಗೋಲ್ ಗಳಿಸಿದ ರಾಷ್ಟ್ರೀಯ ದಾಖಲೆ ಆತನ ಹೆಸರಿನಲ್ಲಿ ಇದೆ! ಮೂರು ಖಂಡಗಳಲ್ಲಿ ಫುಟ್ಬಾಲ್ ಆಡಿದ ಭಾರತದ ಆಟಗಾರ ಕೂಡ ಅವರೊಬ್ಬರೇ!
ಜಾಗತಿಕ ಮಟ್ಟದಲ್ಲಿ ಭಾರತದ ಧ್ವಜಧಾರಿ. 
———————————–
ನಮಗೆಲ್ಲ ತಿಳಿದಿರುವಂತೆ ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಆಟ ಅಂದರೆ ಫುಟ್ಬಾಲ್!  ಆದರೆ ಭಾರತದ ಫುಟ್ಬಾಲ್ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಆದರೂ ಸುನೀಲ್ ಅಂಡರ್ 20, ಅಂಡರ್ 23 ವಿಶ್ವಮಟ್ಟದ  ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2002ರಿಂದ ಇಂದಿನವರೆಗೆ ಭಾರತ ಆಡಿದ ಎಲ್ಲ ಏಷಿಯಾ ಮತ್ತು ವಿಶ್ವಮಟ್ಟದ ಟೂರ್ನಮೆಂಟಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. ಸತತ ಏಳು ಬಾರಿ ಏಷಿಯಾ ಮಟ್ಟದ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿ ಪಡೆದಿದ್ದಾರೆ. FPAI ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿದ್ದಾರೆ. 2018ರಲ್ಲಿ ಇಂಡಿಯನ್ ಸೂಪರ್ ಕಪ್ ಕೂಟದಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ. ತಾನು ಆಡಿದ ಪ್ರತೀ ಪಂದ್ಯಗಳಲ್ಲೂ ಸೆಂಟರ್ ಫಾರ್ವರ್ಡ್ ಆಟಗಾರನಾಗಿ ಮಿಂಚಿದ್ದಾರೆ. ಅವರ ಆಕ್ರಮಣಕಾರಿ ಆಟ, ಚುರುಕಾದ ಪಾದಗಳ ಚಲನೆ, ದೇಹದ ಮೇಲಿನ ನಿಯಂತ್ರಣ, ಎರಡೂ ಕಾಲುಗಳಿಂದ ಬಾಲ್ ಡ್ರಿಬಲ್ ಮಾಡುವ ಸಾಮರ್ಥ್ಯ, ದಣಿವು ಅರಿಯದ ದೇಹದ ತ್ರಾಣ, ಪಂದ್ಯದ  ಕೊನೆಯ ಕ್ಷಣದವರೆಗೂ ಕ್ವಿಟ್ ಮಾಡದ ಮನೋ ಸಾಮರ್ಥ್ಯ ಅವರನ್ನು ಚಾಂಪಿಯನ್ ಆಟಗಾರನಾಗಿ ರೂಪಿಸಿವೆ.
ಗೋಲು ಗಳಿಕೆಯಲ್ಲಿ ವಿಶ್ವದಲ್ಲಿಯೇ ನಂಬರ್ 3! 
———————————–
ಅಂತಾರಾಷ್ಟ್ರೀಯ ಗೋಲು ಗಳಿಕೆಯಲ್ಲಿ ಈಗ ಸುನೀಲ್ ಚೆಟ್ರಿ ಕೇವಲ ಮೂರನೇ ಸ್ಥಾನದಲ್ಲಿ ಇದ್ದಾರೆ! ಅವರು 142 ಪಂದ್ಯಗಳಲ್ಲಿ 92 ಗೋಲು ಹೊಡೆದಿದ್ದಾರೆ. ಅದರಲ್ಲಿ ನಾಲ್ಕು ಹ್ಯಾಟ್ರಿಕ್ ಇವೆ. ಅವರಿಗಿಂತ ಮುಂದೆ ಇರುವ ಫುಟ್ಬಾಲ್ ಲೆಜೆಂಡ್ಸ್ ಅಂದರೆ ರೊನಾಲ್ಡೋ ( 123 ಗೋಲುಗಳು) ಮತ್ತು ಲಿಯೋನೆಲ್ ಮೆಸ್ಸಿ( 103 ಗೋಲುಗಳು) ಮಾತ್ರ! ಭಾರತಕ್ಕೆ ದೊರೆಯುತ್ತಿರುವ ಸೀಮಿತ ಅವಕಾಶಗಳಲ್ಲಿ ಸುನೀಲ್ ಈ ಸಾಧನೆ ಮಾಡಿದ್ದು ನನಗೆ ನಿಜಕ್ಕೂ ಗ್ರೇಟ್ ಅಂತ ಅನ್ನಿಸುತ್ತದೆ.
ಇನ್ನೊಂದು ಹೋಲಿಕೆ ಕೊಡಬೇಕೆಂದರೆ ಭಾರತದಲ್ಲಿ ಎರಡನೆಯ ಅತೀ ದೊಡ್ಡ ಗೋಲು ಗಳಿಕೆ ಮಾಡಿದವರೆಂದರೆ ಭೈಚುಂಗ್ ಭಾಟಿಯಾ. ಅವರು ಹೊಡೆದ ಜಾಗತಿಕ ಮಟ್ಟದ ಗೋಲುಗಳ ಸಂಖ್ಯೆ ಕೇವಲ 27! ಫುಟ್ಬಾಲಿನಲ್ಲಿ ಸುನೀಲ್ ಚೆಟ್ರಿ ಮಾಡಿದ ದಾಖಲೆಗಳನ್ನು ಸದ್ಯಕ್ಕೆ ಯಾವ ಭಾರತೀಯ ಆಟಗಾರನೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
ಪ್ರಶಸ್ತಿಗಳು ಸುನೀಲಿಗೆ ಹೊಸದಲ್ಲ.
———————————-
ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಸುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ಸದ್ಯಕ್ಕೆ ನಿವೃತ್ತಿ ಆಗುವ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ  ಲೆಜೆಂಡ್ ಆಟಗಾರ ಎಂದು ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಅಲ್ಲವೇ?
Categories
ಕ್ರಿಕೆಟ್

ಭಾರತೀಯ ಟೆಸ್ಟ್ ಕ್ರಿಕೆಟಿನ ಅನಭಿಷಿಕ್ತ ದೊರೆ – ಸುನೀಲ್ ಗವಾಸ್ಕರ್.

10,000 ಟೆಸ್ಟ್ ರನ್ ಪೇರಿಸಿದ ಜಗತ್ತಿನ ಮೊದಲ ಆಟಗಾರನಿಗೆ ಇಂದು ಹುಟ್ಟಹಬ್ಬದ ಸಂಭ್ರಮ. 
———————————–
ಭಾರತೀಯ ಕ್ರಿಕೆಟ್ ಇಂದು ವೈಭವದ ದಿನಗಳನ್ನು ಕಾಣುತ್ತಿದೆ. ಸಚಿನ್, ವಿರಾಟ್, ಸೆಹವಾಗ್, ದ್ರಾವಿಡ್, ಧೋನಿ, ಗಂಗೂಲಿ, ಕುಂಬ್ಳೆ, ಕಪಿಲ್  ಮೊದಲಾದ ಆಟಗಾರರು ಭಾರತದ ಕ್ರಿಕೆಟ್ ವೈಭವಕ್ಕೆ ಖಂಡಿತ ಕಾರಣ ಆಗಿದ್ದಾರೆ.
ಆದರೆ ಭಾರತೀಯ ಟೆಸ್ಟ್ ಕ್ರಿಕೆಟನಲ್ಲಿ ಎಂದಿಗೂ ಅಳಿಸಲು ಆಗದ ಛಾಪು ಮೂಡಿಸಿ ಹತ್ತಾರು ದಾಖಲೆಗಳನ್ನು ಬರೆದ ಭಾರತೀಯ ಟೆಸ್ಟ್ ಕ್ರಿಕೆಟಿನ ದಂತಕಥೆ ಸುನೀಲ್ ಮನೋಹರ್ ಗವಾಸ್ಕರ್ ಕೊಡುಗೆ ಖಂಡಿತವಾಗಿ ಸಣ್ಣದಲ್ಲ.
ಇಂದವರಿಗೆ 74 ನೆಯ ಜನ್ಮದಿನ. 
ಮುಂಬೈಯ ಮೂಲಕ ಉದಿಸಿದ ಕ್ರಿಕೆಟ್ ತಾರೆ. 
——————————
ಸುನೀಲ್ ಗವಾಸ್ಕರ್ ಹುಟ್ಟಿದ್ದು ಮುಂಬೈಯಲ್ಲಿ ( 10 ಜುಲೈ, 1949). ಆಗಲೂ ಒಂದು ಸ್ವಾರಸ್ಯ ಘಟನೆ ನಡೆಯಿತು. ಹುಟ್ಟಿದ ಮಗುವನ್ನು ನೋಡಲು ಅವರ ಅಜ್ಜಿ ಎರಡನೇ ಬಾರಿಗೆ ಆಸ್ಪತ್ರೆಗೆ ಬಂದಿದ್ದರಂತೆ. ಅವರು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ನೋಡಿ ‘ಇದು ನಮ್ಮ ಮಗು ಅಲ್ಲವೇ ಅಲ್ಲ! ನಮ್ಮ ಮಗುವಿನ ಕಿವಿಯ ಹಾಲೆಯಲ್ಲಿ  ಒಂದು ರಂದ್ರ ಇತ್ತು ‘ ಎಂದು ಹಟಕ್ಕೆ ಕೂತರು. ಮತ್ತೆ ಆಸ್ಪತ್ರೆಯ ಸಿಬ್ಬಂದಿ ಹುಡುಕಿದಾಗ ಇದೇ ಮಗು ಒಂದು ಮೀನುಗಾರ ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿತ್ತು.
‘ಅಜ್ಜಿ ನನ್ನನ್ನು ಸರಿಯಾಗಿ  ಗಮನಿಸಿದ ಕಾರಣ ನಾನು ಅಮ್ಮನ ಜೊತೆಗೆ ಉಳಿದೆ. ಇಲ್ಲಾಂದ್ರೆ ಮೀನುಗಾರರ ಕುಟುಂಬದ ಪಾಲಾಗುತ್ತಿದ್ದೆ. ಯಾರಿಗೆ ಗೊತ್ತು ಮೀನು ಹಿಡಿಯುವುದರಲ್ಲಿ ದಾಖಲೆ ಮಾಡುತ್ತಿದ್ದನೋ ಏನೋ!’ ಎಂದು ಗವಾಸ್ಕರ್ ಮುಂದೆ ತಮಾಶೆಗೆ ಒಮ್ಮೆ ಹೇಳಿದ್ದರು. ಮುಂಬೈಯ ಸೈಂಟ್ ಕ್ಸೇವಿಯರ್ ಹೈಸ್ಕೂಲಿಲ್ಲಿ ಓದುತ್ತಿರುವಾಗ ಅವರ ಕ್ರಿಕೆಟ್ ಪ್ರತಿಭೆ ಎಲ್ಲರಿಗೂ ತಿಳಿಯಿತು. 1966ರಲ್ಲಿ ಅವರು ಅದೇ ಶಾಲೆಯ ಪರವಾಗಿ ನಾಲ್ಕು ಶತಕ ಸಿಡಿಸಿದ್ದರು. ಅದರಲ್ಲಿ ಎರಡು ಡಬಲ್ ಸೆಂಚುರಿಗಳು!
ಟೆಸ್ಟ್ ಕ್ರಿಕೆಟ್ ಪ್ರವೇಶ ವಿಳಂಬ ಆಯಿತು. 
———————————-
ಇಷ್ಟೆಲ್ಲ ಸಾಧನೆ ಮಾಡಿದ್ದರೂ ಟೆಸ್ಟ್ ಕ್ರಿಕೆಟ್ ಪ್ರವೇಶ ಅವರಿಗೆ ತುಂಬಾ ವಿಳಂಬ ಆಯಿತು ಎಂದೇ ಹೇಳಬಹುದು. ಅದಕ್ಕೆರಡು ಕಾರಣಗಳು. ಒಂದು ಆಗ ಭಾರತ ಟೆಸ್ಟ್ ಸ್ಕ್ವಾಡನಲ್ಲಿ ಹಲವು ಆಟಗಾರರು ಹಲವು ವರ್ಷಗಳಿಂದ ಬೇರು ಬಿಟ್ಟಿದ್ದರು. ಇನ್ನೊಂದು ಕಾರಣ ಅವರ ಸೋದರ ಮಾವ ಮಾಧವ ಮಂತ್ರಿ ( ಅವರು ಮಾಜಿ ಕ್ರಿಕೆಟರ್ ಕೂಡ) ಅವರು ಮಹಾರಾಷ್ಟ್ರದ ಕ್ರೀಡಾಮಂತ್ರಿ ಆಗಿದ್ದರು. ತಮ್ಮ ಅಳಿಯನಿಗೆ ಅವಕಾಶ ಕೊಟ್ಟರೆ ಜನ ಏನು ಹೇಳುತ್ತಾರೋ ಎಂಬ ಆತಂಕ ಅವರಲ್ಲಿ ಇತ್ತು! ಇದರಿಂದಾಗಿ ಭಾರತೀಯ ಟೆಸ್ಟ್ ಸ್ಕ್ವಾಡಗೆ ಕರೆ ಪಡೆದಾಗ ಗವಾಸ್ಕರ್ ಅವರಿಗೆ 22 ದಾಟಿತ್ತು.
ಮೊದಲ ಸರಣಿಯಲ್ಲಿ ವಿಶ್ವ ದಾಖಲೆಯ ಇನ್ನಿಂಗ್ಸ್. 
———————————-
ಸುನೀಲ್ ಗವಾಸ್ಕರ್ ಅವರು ಆಡಿದ ಮೊದಲ ಸರಣಿ ವೆಸ್ಟ್ ಇಂಡೀಸ್ ವಿರುದ್ಧ. ಆಗ ವಿಂಡೀಸ್ ಅಂದರೆ ನಾಲ್ಕು ಭಯಾನಕ ವೇಗದ ಬೌಲರಗಳ ಬ್ಯಾಟರಿ ಎಂದೇ ಕರೆಯಲ್ಪಡುತ್ತಿತ್ತು. ಆದರೆ ತನ್ನ ಚೊಚ್ಚಲ ಸರಣಿಯಲ್ಲಿ ಗವಾಸ್ಕರ್ ನಾಲ್ಕು ಶತಕ ಸಿಡಿಸಿದರು! 154.80 ಸರಾಸರಿಯಲ್ಲಿ 774 ರನ್ ಗುಡ್ಡೆ ಹಾಕಿ ವಿಶ್ವದಾಖಲೆ ಬರೆದರು! ಆ ದಾಖಲೆಯು ಇಂದಿಗೂ ಅಬಾಧಿತ ಆಗಿದೆ ಎನ್ನುವುದು ಗವಾಸ್ಕರ್ ಹೆಗ್ಗಳಿಕೆ.
ಅದೇ ವಿಂಡೀಸ್ ವಿರುದ್ಧ ಗವಾಸ್ಕರ್ ಮುಂದೆ 65.45 ಸರಾಸರಿಯಲ್ಲಿ 2749 ರನ್ ಚಚ್ಚಿದರು. ಅದರಲ್ಲಿ 13 ಶತಕಗಳು ಕೂಡ ಇವೆ! ಈ ದಾಖಲೆ ಕೂಡ ಇಂದಿಗೂ ರಾಷ್ಟ್ರೀಯ ದಾಖಲೆ ಆಗಿಯೇ ಉಳಿದಿದೆ.
ಆಗಿನ ಕಾಲಕ್ಕೆ ಟೆಸ್ಟ್ ಆಡುತ್ತಿದ್ದ ಎಲ್ಲ ರಾಷ್ಟ್ರಗಳ ವಿರುದ್ಧ ಅವರು ಶತಕಗಳನ್ನು ಹೊಡೆದರು. ವಿದೇಶದ ನೆಲದಲ್ಲಿ ಕೂಡ ಚೆನ್ನಾಗಿ ಆಡಿದರು. ಕ್ರಿಕೆಟಿನ ಡಾನ್ ಆದ ಡಾನ್ ಬ್ರಾಡ್ಮನ್ ಅವರ ಶತಕಗಳ( 29) ದಾಖಲೆಯನ್ನು ಮುರಿದರು.
ಸ್ಮರಣೀಯ ಟೆಸ್ಟ್ ದಾಖಲೆಗಳು.
——————————— ಕೇವಲ ಐದು ಅಡಿ ನಾಲ್ಕು ಇಂಚು ಎತ್ತರದ ಈ ಲಿಟಲ್ ಮಾಸ್ಟರ್ (ಮುಂದೆ ಸಚಿನ್ ಕೂಡ ಇದೇ ಹೆಸರು ಪಡೆದರು) ಟೆಸ್ಟ್ ಕ್ರಿಕೆಟಿಗೆ ಹೇಳಿ ಮಾಡಿಸಿದ ಆಟಗಾರ. ಆಕ್ರಮಣ ಅವರಿಗೆ ಗೊತ್ತೇ ಇಲ್ಲ. ಆದರೆ ಸಿಂಗಲ್, ಡಬಲ್ ರನ್ನುಗಳ ಮೂಲಕ ಜೊತೆಯಾಟ ಕಟ್ಟುವುದು ಗವಾಸ್ಕರ್ ಅವರಿಗೆ ಸಲೀಸು. ಹದಿನೆಂಟು ಬೇರೆ ಬೇರೆ ಆಟಗಾರರ ಜೊತೆಗೆ ಶತಕದ ಜೊತೆಯಾಟದ ದಾಖಲೆ ಕೂಡ ಅವರ ಹೆಸರಿನಲ್ಲಿ ಇದೆ. ಚೇತನ್ ಚೌಹಾಣ್ ಮತ್ತು ಸುನೀಲ್ ಗವಾಸ್ಕರ್ ಅವರ ಆರಂಭಿಕ ಜೊತೆಯಾಟ ಯಾವಾಗಲೂ ಭಾರತವನ್ನು ಆಧರಿಸುತ್ತಿತ್ತು. ಫ್ಲಿಕ್ ಮತ್ತು ಕವರ್ ಡ್ರೈವ್ ಅವರಿಗೆ ಇಷ್ಟವಾದ ಹೊಡೆತಗಳು. ಸುನೀಲ್ ಗವಾಸ್ಕರ್ ಭಾರತ ಕಂಡ ಅತ್ಯುತ್ತಮ ರಿಸ್ಟ್ ಆಟಗಾರ. ಅವರ ಟೆಸ್ಟ್ ದಾಖಲೆಗಳು ಅವರ ಹೆಸರಿನಷ್ಟೆ ಮನೋಹರ ಆಗಿವೆ.
125 ಟೆಸ್ಟ್ ಪಂದ್ಯಗಳಲ್ಲಿ 10,122ರನ್ ಸೂರೆ. ಅದರಲ್ಲಿ 34 ಶತಕಗಳು. 45 ಅರ್ಧ ಶತಕಗಳು. ಸರಾಸರಿ 51.12! ಅಜೇಯ 231 ಅವರ ಬೆಸ್ಟ್ ಇನ್ನಿಂಗ್ಸ್.
ಪ್ರಥಮ ದರ್ಜೆ ಪಂದ್ಯಗಳಲ್ಲಿ 81 ಶತಕಗಳ ಜೊತೆ 25,834 ರನ್ ಅವರ ಖಾತೆಯಲ್ಲಿ ಇವೆ.
ಟೆಸ್ಟ್ ಕ್ರಿಕೆಟಿನಲ್ಲಿ 10,000 ರನ್ ಗಡಿಯನ್ನು ದಾಟಿದ ವಿಶ್ವದ ಮೊದಲ ಆಟಗಾರ ಗವಾಸ್ಕರ್. ಮುಂದೆ ಅದನ್ನು ಆಸ್ಟ್ರೇಲಿಯನ್ ಆಟಗಾರ ಅಲನ್ ಬಾರ್ಡರ್ ಮುರಿದರು. ಆಗ ಗ್ರೌಂಡಿನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಗವಾಸ್ಕರ್ ಪಿಚ್ ತನಕ ಹೋಗಿ ಬಾರ್ಡರ್ ಅವರನ್ನು ಅಭಿನಂದಿಸಿದರು. ಆಗ ಅವರು ಹೇಳಿದ ಮಾತು – ದಾಖಲೆಗಳು ಇರುವುದೇ ಮುರಿಯುವುದಕ್ಕೆ!
ಮುಂದೆ ಅವರ ಗೆಳೆತನದ ಪ್ರತೀಕವಾಗಿ ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಡೆಯುವಾಗ ನೀಡಲಾಗುವ ಟ್ರೋಫಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಎಂದೇ ಹೆಸರು ನೀಡಲಾಗಿದೆ.
ಅವರ ಕೆಲವು ಟೆಸ್ಟ್ ದಾಖಲೆಗಳು.
———————————-
1) ಹತ್ತು ಸಾವಿರ ಗಡಿ ದಾಟಿದ ವಿಶ್ವದ ಮೊದಲ ಆಟಗಾರ.
2) ಮೂರು ಬಾರಿ ಎರಡೂ ಇನ್ನಿಂಗ್ಸಗಳಲ್ಲಿ ಶತಕ ಸಿಡಿಸಿದ ಆಟಗಾರ.
 3) ಚೊಚ್ಚಲ ಸರಣಿಯಲ್ಲಿ 774 ರನ್ ವಿಶ್ವ ದಾಖಲೆ.
4) ಒಂದು ಕ್ಯಾಲೆಂಡರ್ ವರ್ಷದಲ್ಲಿ ಶತಕ ಬಾರಿಸುವ ಸಾಧನೆಯನ್ನು ಅವರು ನಾಲ್ಕು ಬಾರಿ ಮಾಡಿದ್ದಾರೆ.
5) ಒಳ್ಳೆಯ ಫೀಲ್ಡರ್ ಆಗಿದ್ದ ಗವಾಸ್ಕರ್ ಸ್ಲಿಪ್ ಪೊಸಿಷನನಲ್ಲಿ ನೂರಕ್ಕೂ ಅಧಿಕ ಕ್ಯಾಚ್ ಪಡೆದ ಭಾರತದ ಮೊದಲ ಆಟಗಾರ.
6) ಬ್ರಾಡ್ಮನ್ ದಾಖಲೆ ಮುರಿದು 34 ಶತಕ ಬಾರಿಸಿದ ಮೊದಲ ಆಟಗಾರ. ( ಮುಂದೆ ಸಚಿನ್ ಆ ದಾಖಲೆಯನ್ನು ಮುರಿದರು)
ಏಕದಿನದ ಕ್ರಿಕೆಟಿನಲ್ಲಿ ಮಸುಕಾದ ಸಾಧನೆ. 
——————————
ಬದಲಾದ ಕಾಲಘಟ್ಟದಲ್ಲಿ ODI ಪಂದ್ಯಗಳು ಆರಂಭವಾದಾಗ ಭಾರತೀಯ ಕ್ರಿಕೆಟ್ ತಂಡ ತನ್ನ ಟೆಸ್ಟ್ ಮನಸ್ಥಿತಿಯಿಂದ  ಹೊರಬರಲೆ ಇಲ್ಲ!  ಗವಾಸ್ಕರ್ ಕೂಡ ಕಷ್ಟ ಪಟ್ಟರು. ಮೊದಲ ODI ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಡೀ ಆರುವತ್ತು ಓವರ್ ಆಡಿ ಅಜೇಯ 36ರನ್ ಗಳಿಸಿದ ವಿಶ್ವದಾಖಲೆ ಕೂಡ ಗವಾಸ್ಕರ್ ಅವರ ಹೆಸರಲ್ಲಿ ಇದೆ! ಮುಂದೆ 1979, 1983 ವಿಶ್ವಕಪ್ ಪಂದ್ಯಗಳಲ್ಲಿ ಕೂಡ ಗವಾಸ್ಕರ್ ಆಡಿದರು.
1983ರ ಕಪಿಲ್ ನಾಯಕತ್ವದ ವಿಶ್ವ ಕಪ್ ವಿಜೇತ ಭಾರತೀಯ ತಂಡದಲ್ಲಿಯೂ ಅವರು ಆಡಿದರು.  108 ODI ಪಂದ್ಯಗಳನ್ನು ಆಡಿರುವ ಗವಾಸ್ಕರ್ 35.13 ಸರಾಸರಿಯಲ್ಲಿ 3092ರನ್ ಗವಾಸ್ಕರ್ ಒಟ್ಟು ಮಾಡಿದ್ದಾರೆ. ಅದರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಒಂದು ಶತಕ ಕೂಡ ಇದೆ.
ದಾಖಲೆಗಳನ್ನು ಮೀರಿದ ಕ್ರಿಕೆಟರ್ 
———————————–
ಅವರ ಹಲವು ದಾಖಲೆಗಳನ್ನು ಮುಂದೆ ಸಚಿನ್ ಮುರಿದರು. ಇನ್ನೂ ಕೆಲವು ದಾಖಲೆಗಳನ್ನು ಮುಂದೆ ವಿರಾಟ್ ಕೋಹ್ಲಿ ಮುರಿಯಬಹುದು. ವಿಶ್ವ ಕ್ರಿಕೆಟಿನಲ್ಲಿ ಹತ್ತಾರು ಆಟಗಾರರು ಅವರ ದಾಖಲೆಗಳನ್ನು ಮೀರಿ ನಿಂತಿದ್ದಾರೆ. ಆದರೆ ಒಬ್ಬ ಸಜ್ಜನ ಕ್ರಿಕೆಟರ್ ಆಗಿ, ಉದಯೋನ್ಮುಖ ಆಟಗಾರರಿಗೆ ಪ್ರೇರಣೆಯಾಗಿ, ಒಬ್ಬ ಅದ್ಭುತ ಕಾಮೆಂಟರೆಟರ್ ಆಗಿ, ಭಾರತೀಯ ಕ್ರಿಕೆಟ್ ತಂಡದ ಮೆಂಟರ್ ಆಗಿ ಅವರ ಸೇವೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ.
ಇಂದು ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಸುನೀಲ್ ಗವಾಸ್ಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ, ವಿಸಡನ್ ಕ್ರಿಕೆಟರ್, ಶ್ರೇಷ್ಟವಾದ ಅರ್ಜುನ ಪ್ರಶಸ್ತಿ, ಸಿ.ಕೆ. ನಾಯ್ಡು ಜೀವಮಾನದ ಪ್ರಶಸ್ತಿ, ಐಸಿಸಿಸಿ ಹಾಲ್ ಆಫ್ ಫ್ರೇಮ್ ಗೌರವ ಎಲ್ಲವೂ ದೊರಕಿದೆ.
ರಾಜೇಂದ್ರ ಭಟ್ ಕೆ.
Categories
ಅಥ್ಲೆಟಿಕ್ಸ್

ಜಿಮ್ನಾಸ್ಟಿಕ್ ಮಹಾರಾಣಿ ಸಿಮೋನ್ ಬೈಲ್ಸ್.

ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಈವರೆಗೆ ಸೋತದ್ದೇ ಇಲ್ಲ! 
———————————–
2013ರಿಂದ ಭಾಗವಹಿಸಿದ ಪ್ರತೀಯೊಂದು ವಿಶ್ವಮಟ್ಟದ  ಕೂಟಗಳಲ್ಲಿ ಅಮೆರಿಕಾದ ಈ ಜಿಮ್ನಾಸ್ಟಿಕ್ ಮಹಾರಾಣಿಯು ಒಂದಲ್ಲ ಒಂದು ಪದಕವನ್ನು ಪಡೆಯದೇ ಹಿಂದೆ ಬಂದಿರುವ ಒಂದು ಉದಾಹರಣೆಯೂ  ದೊರೆಯುವುದಿಲ್ಲ! ಆಕೆ ಇದ್ದಾಳೆ ಅಂದರೆ ಯಾವುದೇ ಜಿಮ್ನಾಸ್ಟಿಕ್ ಕೂಟದಲ್ಲಿ ಚಿನ್ನದ ಪದಕದ ಆಸೆ ಬೇರೆ ಯಾರೂ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ!
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಸಿಮೋನ್ ಇದುವರೆಗೆ ಗೆದ್ದಿರುವ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ 34! ಅದರಲ್ಲಿ 25 ಚಿನ್ನದ ಪದಕಗಳೇ ಆಗಿವೆ! ಅದರಲ್ಲಿ ಕೂಡ ಒಲಿಂಪಿಕ್ಸ್    ಪದಕಗಳ ಸಂಖ್ಯೆ ಒಟ್ಟು 7!
ವರ್ತಮಾನದ  ಜಿಮ್ನಾಸ್ಟಿಕ್ ರಂಗದ ಎಲ್ಲಾ  ದಾಖಲೆಗಳು ಆಕೆಯ ಹೆಸರಿನಲ್ಲಿ ಇವೆ! ಆಕೆಯ ಬದುಕೇ ಒಂದು ಅದ್ಭುತ ಯಶೋಗಾಥೆ!
ಅಜ್ಜ ಸಾಕಿದ ಮೊಮ್ಮಗಳು ಸಿಮೋನ್.
———————————–
ಈ ವಿಶ್ವದಾಖಲೆಯ ಹುಡುಗಿಯ ಬಾಲ್ಯವು ದಾರುಣವೆ ಆಗಿತ್ತು. ಅಪ್ಪ ತಾನು ಹುಟ್ಟಿಸಿದ ನಾಲ್ಕು ಮಕ್ಕಳನ್ನು ತನ್ನ ಹೆಂಡತಿಯ ಮಡಿಲಲ್ಲಿ ಹಾಕಿ ಬೇರೆ ಯಾರೋ ಮಹಿಳೆಯ ಸೆರಗು ಹಿಡಿದು ಹೊರಟುಹೋಗಿದ್ದರು! ತಾಯಿಗೆ ತನ್ನ ನಾಲ್ಕು ಸಣ್ಣ ಮಕ್ಕಳನ್ನು ಸಾಕುವುದು ತುಂಬಾ ಕಷ್ಟ ಆದಾಗ ಅವರನ್ನು ಬೇರೆ ಬೇರೆ ಚರ್ಚಿನ ವಶಕ್ಕೆ ಒಪ್ಪಿಸಿದರು.
ಆಗ ಆಕೆಯ ಅಪ್ಪ(ಅಂದರೆ ಮಕ್ಕಳ ಅಜ್ಜ) ತನ್ನ ಎರಡು ಮೊಮ್ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಹಾಗೆ ಅಜ್ಜ ರಾನ್ ಬೈಲ್ಸ್ ಅವರ ವಶಕ್ಕೆ ಬಂದ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬಳು ಸಿಮೋನ್. ಮತ್ತೊಬ್ಬಳು ತಂಗಿ ಆಂಡ್ರಿ.
ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ!
———————————-
ಅಜ್ಜನ ಕೃಪೆಯಿಂದ ಶಾಲೆಗೆ ಸೇರಿದ ಸಿಮೋನಗೆ ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ ಉಂಟಾಯಿತು. ಒಳ್ಳೆಯ ಕೋಚ್ ದೊರೆತರು. ಹೇಳಿ ಕೇಳಿ ಜಿಮ್ನಾಸ್ಟಿಕ್ ತುಂಬಾ ಕಠಿಣವಾದ ಗೇಮ್. ದೇಹವನ್ನು ಯಾವ ಕೋನದಲ್ಲಾದರು ಬಗ್ಗಿಸುವ ಸವಾಲು ಒಂದೆಡೆ. ಅದರ ಜೊತೆ ವೇಗ, ನಿಖರತೆ, ಟೈಮಿಂಗ್, ಜಂಪ್, ಬ್ಯಾಲೆನ್ಸ್, ಓಟ, ಏಕಾಗ್ರತೆ, ದೃಢವಾದ ಮಾನಸಿಕ ಶಕ್ತಿ… ಹೀಗೆ ಎಲ್ಲವೂ ಇದ್ದರೆ ಮಾತ್ರ ಜಿಮ್ನಾಸ್ಟಿಕ್ ಒಲಿಯುತ್ತದೆ.
ಕಠಿಣವಾದ ತರಬೇತು – ದುರ್ಗಮವಾದ ಹಾದಿ!
———————————–
ಹಾಗೆ ಕಲಿಕೆಯ ಜೊತೆಗೆ ದಿನಕ್ಕೆ 4-6 ಘಂಟೆಗಳ ತರಬೇತು ಆಕೆ ಪಡೆಯುತ್ತಾರೆ. ಕೇವಲ ನಾಲ್ಕು ಅಡಿ ಎಂಟು ಇಂಚು ಎತ್ತರ ಇರುವ ಆಕೆಗೆ ಎಲುಬು ಮುರಿತ ಮತ್ತು ಸರ್ಜರಿಗಳು  ಕಾಮನ್ ಆದವು. ಆಗೆಲ್ಲ 15 ದಿನ ವಿಶ್ರಾಂತಿ ಪಡೆಯುತ್ತಿದ್ದ ಸಿಮೋನ್ ಮತ್ತೆ ಮತ್ತೆ ಎದ್ದು ಬರುತ್ತಿದರು.
ಜಿಮ್ನಾಸ್ಟಿಕ್ ಎಂದರೆ ಮಕ್ಕಳ ಆಟವಲ್ಲ!
———————————-
ಜಿಮ್ನಾಸ್ಟಿಕನ ಬೇರೆ ಬೇರೆ ವಿಭಾಗಗಳಾದ ವಾಲ್ಟ್, ಪೋಲ್ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್ ಮತ್ತು ಸರ್ವಾಂಗೀಣ ಇವೆಲ್ಲಾ  ವಿಭಾಗಗಳಲ್ಲಿಯು ಪಾರಮ್ಯವನ್ನು ಪಡೆಯಲು ಸಿಮೋನಗೆ ಆರೇಳು ವರ್ಷಗಳು ಬೇಕಾದವು. ಅದರ ಜೊತೆಗೆ ಪೀಪಲ್ ಯುನಿವರ್ಸಿಟಿಯ ಮೂಲಕ MBA ಪದವಿಯನ್ನು ಆಕೆ ಪಡೆಯುತ್ತಾರೆ. ತನ್ನ ಹದಿನಾರನೇ ವರ್ಷದಲ್ಲಿ ಸಿಮೋನ್ ಬೈಲ್ಸ್ ವಿಶ್ವಮಟ್ಟದ ಸ್ಪರ್ಧೆಯಲ್ಲಿ  ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲಿಂದ ಆಕೆ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ!
ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಸೋಲು ಕಂಡದ್ದೇ ಇಲ್ಲ!
———————-:——-——2013ರ ಇಸವಿಯಿಂದ ಇಂದಿನವರೆಗೆ ಭಾಗವಹಿಸಿದ ಎಲ್ಲ ಅಮೆರಿಕಾ ಮತ್ತು ವಿಶ್ವಮಟ್ಟದ ಕೂಟಗಳಲ್ಲಿ ಆಕೆ ಒಂದಲ್ಲ ಒಂದು ದಾಖಲೆಯನ್ನು ಬರೆಯುತ್ತ ಇದ್ದಾರೆ. ಇದುವರೆಗೆ ಆಕೆ ಪಡೆದ ಒಟ್ಟು 34 ಅಂತಾರಾಷ್ಟ್ರೀಯ ಪದಕಗಳಲ್ಲಿ 25 ಹೊಳೆಯುವ ಚಿನ್ನದ ಪದಕಗಳೇ ಇವೆ! ಅವುಗಳಲ್ಲಿ ಬರೋಬ್ಬರಿ ಏಳು ಒಲಿಂಪಿಕ್ ಪದಕಗಳು!
ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್ ಕೂಟದಲ್ಲಿ ಆಕೆಗೆ 25 ಪದಕಗಳು ದೊರೆತಿವೆ. ಅದರಲ್ಲಿ 19 ಚಿನ್ನದ ಪದಕಗಳು!
ಇದುವರೆಗೆ ಆಕೆ ಪಡೆದ ಪದಕಗಳ ಟ್ಯಾಲಿ ಈ ರೀತಿ ಇದೆ – ಚಿನ್ನ 25, ಬೆಳ್ಳಿ 4 ಮತ್ತು ಕಂಚು 5!
ಆಕೆಯ ಎಲ್ಲಾ ದಾಖಲೆಗಳು ಅನನ್ಯ, ಅಭಾದಿತ!
——————————
ಜಿಮ್ನಾಸ್ಟಿಕ್  ಸ್ಪರ್ಧೆಯ ಎಲ್ಲ ವಿಭಾಗಗಳಲ್ಲಿಯು ಅಂದರೆ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್, ಆಲ್ರೌಂಡ್ ಸ್ಪರ್ಧೆ ಇವೆಲ್ಲಾ ಸ್ಪರ್ಧಾ ವಿಭಾಗಗಳಲ್ಲಿ ಕೂಡ ಆಕೆ ರಾಶಿ ಪದಕವನ್ನು ಗೆದ್ದಿದ್ದಾರೆ! ಜಗತ್ತಿನ ಯಾವ ಜಿಮ್ನಾಸ್ಟ್ ಕೂಡ ಆಕೆಯ ದಾಖಲೆಗಳ ಹತ್ತಿರ ಕೂಡ ಬರಲು ಸಾಧ್ಯವೇ ಇಲ್ಲ! ಇನ್ನೂ ಐದಾರು ವರ್ಷ ಅವರು ನಿವೃತ್ತಿ ಆಗುವುದಿಲ್ಲ ಅಂದರೆ ಈ ಅನನ್ಯ ದಾಖಲೆಗಳು ಎಲ್ಲಿಯವರೆಗೆ ತಲುಪಬಹುದು ಎಂದು ಒಮ್ಮೆ ಯೋಚನೆ ಮಾಡಿ.
ಆಕೆ ಈ ಬಾರಿ ಸುದ್ದಿಯಾಗಿದ್ದು ಬೇರೆ ಕಾರಣಕ್ಕೆ!
———————————-
ಇಷ್ಟೆಲ್ಲ ಸಾಧನೆಯನ್ನು ಮಾಡಿದ ಸಿಮೋನ್ ಈ ಬಾರಿ ಸುದ್ದಿ  ಮಾಡಿದ್ದು ಬೇರೆಯೇ ಕಾರಣಕ್ಕೆ! ಅದೂ ಒಳ್ಳೆಯ ಕಾರಣಕ್ಕೆ!
ಅಮೆರಿಕದ ಜಿಮ್ನಾಸ್ಟಿಕ್ ಟೀಮಿನ ವೈದ್ಯರಾದ ಡಾ.ಲಾರಿ ನಾಸರ್ ಎಂಬಾತನು ತನ್ನ ಮೇಲೆ ಮತ್ತು ಇತರ ಮಹಿಳಾ ಜಿಮ್ನಾಸ್ಟ್ ಪಟುಗಳ ಮೇಲೆ ತರಬೇತಿಯ ಹೆಸರಿನಲ್ಲಿ ಅತ್ಯಾಚಾರವನ್ನು ಮಾಡಿದ್ದಾನೆ ಎಂದಾಕೆ ಮೊದಲು ತನ್ನ ಟ್ವಿಟರ್ ಮೂಲಕ ಜಗತ್ತಿಗೆ ತಿಳಿಸುತ್ತಾರೆ!
ಆಗ ಇಡೀ ಅಮೆರಿಕಾ ದೇಶವು  ಆಕೆಯ ನೆರವಿಗೆ ನಿಲ್ಲುತ್ತದೆ. ಆ ಸಂತ್ರಸ್ತ ಮಹಿಳಾ ಪಟುಗಳು ಕೂಡ ತಮಗಾದ ದೌರ್ಜನ್ಯ  ಒಪ್ಪಿಕೊಂಡು ಆಕೆಯ ನೆರವಿಗೆ ನಿಲ್ಲುತ್ತಾರೆ. ಅಮೆರಿಕದ ಕೋರ್ಟಲ್ಲಿ ದೀರ್ಘ ವಿಚಾರಣೆಯು  ನಡೆಯುತ್ತದೆ. ತನ್ನ ನಿಬಿಡ ಕ್ರೀಡಾ ಚಟುವಟಿಕೆಗಳ ನಡುವೆ ಆಕೆ ಕೋರ್ಟಿಗೆ ಬಂದು ದಿಟ್ಟವಾಗಿ ಸಾಕ್ಷಿ ಹೇಳುತ್ತಾರೆ. ಆಮಿಷಗಳಿಗೆ, ಒತ್ತಡಗಳಿಗೆ ಮಣಿಯುವುದಿಲ್ಲ. ಕೊನೆಗೆ ಆಕೆ ಆ ಕೇಸನ್ನು ಗೆಲ್ಲುತ್ತಾರೆ!
ಇಷ್ಟೆಲ್ಲ ಆದರೂ ಅಮೆರಿಕನ್ FBI ಸಂಸ್ಥೆಯು ಆ ವೈದ್ಯನ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಿಡಿದು ನಿಲ್ಲುತ್ತಾರೆ. ಆ ಸಂಸ್ಥೆಯ ಮೇಲೆ ಆಕೆ ಒಂದು ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ!
ಈ ಕಾರಣಕ್ಕೂ ಸಿಮೋನ್ ಬೈಲ್ಸ್  ನಮಗೆ ತುಂಬಾನೇ ಇಷ್ಟ ಆಗುತ್ತಾರೆ! ಆಕೆಗೆ ಜಿಮ್ನಾಸ್ಟಿಕ್ ಮಹಾರಾಣಿ ಎಂಬ ಬಿರುದು ಸುಮ್ಮನೆ ಬಂದದ್ದು ಅಲ್ಲವೇ ಅಲ್ಲ.
Categories
ಕ್ರಿಕೆಟ್

ಭಾರತವು ಗೆದ್ದ ಮೊದಲ ಕ್ರಿಕೆಟ್ ವಿಶ್ವಕಪ್ ನೆನಪು.

ಆ ಐತಿಹಾಸಿಕ ಘಟನೆಗೆ ಇಂದಿಗೆ 40 ವರ್ಷ.
1983- ಜೂನ್ 25 ಭಾರತ ಕ್ರಿಕೆಟ್ ತಂಡ ಇತಿಹಾಸ ಬರೆದಿತ್ತು!
——————————
ನನಗೆ ಈ ದೃಶ್ಯವು ಕೊಟ್ಟಷ್ಟು ಪ್ರೇರಣೆಯನ್ನು ಬೇರೆ ಯಾವುದೂ ಕೊಡಲು ಸಾಧ್ಯವೇ ಇಲ್ಲ. ಕಾರ್ಕಳದ ನಮ್ಮ ಮನೆಯ ಜಗಲಿಯಲ್ಲಿ ನಾವು ಒಂದಿಷ್ಟು ಗೆಳೆಯರು ಕಿವಿಗೆ ಪುಟ್ಟ ರೇಡಿಯೋ ಹಚ್ಚಿ ವೀಕ್ಷಕ ವಿವರಣೆ ಕೇಳಿದ ನೆನಪು ಮರೆತು ಹೋಗುವುದಿಲ್ಲ! ಭಾರತ ಗೆದ್ದಾಗ ಮಧ್ಯರಾತ್ರಿಯ ಹೊತ್ತು ಎಲ್ಲರೂ ಸೇರಿ ಒಂದಿಷ್ಟು ದುಡ್ಡನ್ನು ಒಟ್ಟು ಮಾಡಿ  ಕಾರ್ಕಳದ ಪಟಾಕಿ ಅಂಗಡಿಯವರನ್ನು ಎಬ್ಬಿಸಿ ಪಟಾಕಿ ತಂದು ರಸ್ತೆಯುದ್ದಕ್ಕೂ ಸಿಡಿಸಿದ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ!
ಆ ಘಟನೆ ನಡೆಯದೆ ಹೋಗಿದ್ದರೆ!
———————————–
ಭಾರತ ಲಿಫ್ಟ್ ಮಾಡಿದ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅದು! ಅದರಿಂದಾಗಿ ಮುಂದೆ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು. ಭಾರತದ  ಕ್ರಿಕೆಟಿಗರು ಶ್ರೀಮಂತ ಆದರು! ಸಚಿನ್, ವಿರಾಟ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಧೋನಿ, ಯುವರಾಜ್, ಸೆಹವಾಗ್, ರೋಹಿತ್ ಶರ್ಮಾ, ದ್ರಾವಿಡ್, ಗಂಗೂಲಿ, ಗಂಭೀರ್…………….. ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಮುಂದೆ ಭಾರತದಲ್ಲಿ ಮೆರೆಯಲು ಆ ಘಟನೆಯು ಕಾರಣ ಆಯಿತು.
ಎಲ್ಲಕ್ಕಿಂತ ಮುಖ್ಯವಾಗಿ ಅಂದು ಕಪಿಲ್ ಹುಡುಗರು ಗೆಲ್ಲದೇ ಹೋಗಿದ್ದರೆ ಐಪಿಎಲ್ ಪಂದ್ಯಾಟವು ಭಾರತದಲ್ಲಿ ಆರಂಭ ಆಗುತ್ತಲೇ ಇರಲಿಲ್ಲ!
ಇನ್ನೂ ಪ್ರಮುಖವಾಗಿ ಹೇಳಬೇಕೆಂದರೆ ಅಂದು ಆ ಘಟನೆ ನಡೆಯದೆ ಹೋದರೆ ಭಾರತದಲ್ಲಿ ಕ್ರಿಕೆಟ್  ‘ಒಂದು ಧರ್ಮ’  ಆಗುತ್ತಲೇ ಇರಲಿಲ್ಲ!
ಆ ಟೂರ್ನಿಯು ಆರಂಭ ಆಗುವ ಮೊದಲು ಭಾರತ ಅಂಡರ್ ಡಾಗ್ ಆಗಿತ್ತು! 
———————————–
1983ರ ವಿಶ್ವಕಪ್ ಆರಂಭ ಆಗುವ ಮೊದಲು ಭಾರತ ತಂಡದ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಕಾರಣ ಹಿಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ಭಾರತದ ನಿರ್ವಹಣೆಯು ತುಂಬಾನೇ ಕಳಪೆ ಆಗಿತ್ತು. ಭಾರತೀಯ ಆಟಗಾರರು ಟೆಸ್ಟ್ ಮಾದರಿಯ ಡಿಫೆನ್ಸಿವ್ ಆದ ಮೈಂಡ್ ಸೆಟನಿಂದ ಹೊರಬರಲು ಕಷ್ಟ ಪಡುತ್ತಿದ್ದರು!
ಮತ್ತೊಂದು ಕಡೆ ಬಲಿಷ್ಠ ವೆಸ್ಟ್ ಇಂಡೀಸ್ ಹಿಂದಿನ ಎರಡೂ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದ ಕೀರ್ತಿ ಪಡೆದಿತ್ತು. ಹೆಚ್ಚು ಕಡಿಮೆ ಅದೇ ಸ್ಟಾರ್ ಆಟಗಾರರು ಆ ತಂಡದಲ್ಲಿ ಇದ್ದರು. ಕ್ಲೈವ್ ಲಾಯ್ಡ್ ಎಂಬ ಬಲಾಢ್ಯ ಕ್ಯಾಪ್ಟನ್ ಕಟ್ಟಿದ ತಂಡ ಅದು. ಜಗತ್ತಿನ ಅತ್ಯಂತ ಶ್ರೇಷ್ಠ ವೇಗದ ಬೌಲರಗಳು ಮತ್ತು ಬ್ಯಾಟಿಂಗ್ ಡೈನಾಸಾರಗಳು ಅವರ ತಂಡದಲ್ಲಿ ಇದ್ದರು!
ಭಾರತ ತಂಡಕ್ಕೆ ಹೊಸ ಕ್ಯಾಪ್ಟನ್ ಕಪಿಲದೇವ್ ಸಾರಥ್ಯ! ಯಾವ ಆಟಗಾರನಿಗೂ ಸ್ಟಾರ್ ವ್ಯಾಲ್ಯೂ ಇರಲಿಲ್ಲ. ಆದರೆ ಹೆಚ್ಚಿನವರು ಆಲರೌಂಡರ್ ಆಟಗಾರರು. ಫೈಟಿಂಗ್ ಸ್ಪಿರಿಟ್ ಇದ್ದವರು. ಆದರೆ…
ಕಪಿಲ್ ನಾಯಕತ್ವವೇ ಅದ್ಭುತ!
——————————
ತನ್ನ ಯುವ ಪಡೆಯನ್ನು ಇಂಗ್ಲಾಂಡಿಗೆ ತಂದು ಇಳಿಸಿದಾಗ ಕಪಿಲ್ ದೇವ್ ಹೇಳಿದ ಮಾತು ತುಂಬಾ ಪ್ರೆರಣಾದಾಯಿ ಆಗಿತ್ತು.
“ನನ್ನ ಹುಡುಗರೇ. ನಮ್ಮ ತಂಡದ ಮೇಲೆ ಯಾರಿಗೆ ಕೂಡ ದೊಡ್ಡ ನಿರೀಕ್ಷೆ ಇಲ್ಲ. ಸೋತರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ! ಆದರೆ ವೆಸ್ಟ್ಇಂಡೀಸ್ ಚಾಂಪಿಯನ್ ತಂಡ. ಅವರಿಗೆ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಅದೇ ನಮಗೆ ಈ ಬಾರಿ ಬಂಡವಾಳ ಆಗಬೇಕು!” ಎಂದಿದ್ದರು.
ಅದೇ ನಮ್ಮ ತಂಡಕ್ಕೆ ಟಾನಿಕ್ ಆಗಿತ್ತು. ಇಡೀ ವಿಶ್ವಕಪ್  ಟೂರ್ನಿಯಲ್ಲಿ ಕಪಿಲದೇವ್ ಅವರ ಸ್ಫೂರ್ತಿಯುತವಾದ  ನಾಯಕತ್ವವೇ ಭಾರತವನ್ನು ಗೆಲ್ಲಿಸಿದ್ದು ಎಂದು ಖಚಿತವಾಗಿ ಹೇಳಬಹುದು.
ಮರೆಯಲಾಗದ ಜಿಂಬಾಬ್ವೆ ಪಂದ್ಯ!
———————————–
ಆ ಟೂರ್ನಿಯಲ್ಲಿ ಇದ್ದ ತಂಡಗಳು ಒಟ್ಟು ಎಂಟು. ಅದರಲ್ಲಿ ದುರ್ಬಲ ತಂಡ ಅಂದರೆ ಜಿಂಬಾಬ್ವೆ. ಆದರೆ ಭಾರತಕ್ಕೆ ಆ ಜಿಂಬಾಬ್ವೆ ವಿರುದ್ಧದ ಪಂದ್ಯವೆ ಬಿಸಿ ತುಪ್ಪ ಆಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 17 ರನ್ನಿಗೆ ಐದು ವಿಕೆಟಗಳನ್ನು ಕಳೆದುಕೊಂಡಿತ್ತು! ಉಳಿದವರು ಕೇವಲ ಮತ್ತು ಕೇವಲ ಬಾಲಂಗೋಚಿಗಳು. ಆಗ ಬ್ಯಾಟ್ ಹಿಡಿದು ಬಂದ ಕಪಿಲದೇವ್ ಮೈಯ್ಯಲ್ಲಿ ಅಂದು ಆವೇಶ ಬಂದ ಹಾಗಿತ್ತು!
ಮೈದಾನದ ಎಲ್ಲ ಕಡೆ ಚೆಂಡನ್ನು ಡ್ರೈವ್ ಮಾಡುತ್ತಾ ಕಪಿಲ್ ಅಂದು ಗಳಿಸಿದ್ದು ಅಜೇಯ 175 ರನ್! 16 ಬೌಂಡರಿಗಳು ಮತ್ತು 6 ಮನಮೋಹಕ ಸಿಕ್ಸರಗಳು! ಅಂದು ಭಾರತ ಸೋತಿದ್ದರೆ ಭಾರತಕ್ಕೆ ಗಂಟು ಮೂಟೆ ಕಟ್ಟಬೇಕಾಗಿತ್ತು!ಆದರೆ ತನ್ನ ವಿರೋಚಿತ ಇನ್ನಿಂಗ್ಸ್ ಮೂಲಕ ಕಪಿಲದೇವ್ ಭಾರತವನ್ನು ಗೆಲ್ಲಿಸಿದ್ದರು!
ಆಗ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ಟಿವಿಯಲ್ಲಿ ನೇರಪ್ರಸಾರ ಆಗುತ್ತಿದ್ದವು. ಆದರೆ ಜಿಂಬಾಬ್ವೆ ಪಂದ್ಯದ ದಿನ ಬಿಬಿಸಿಯ ಸ್ಟಾಫ್ ಮುಷ್ಕರ ಹೂಡಿದ್ದ ಕಾರಣ ಆ ಪಂದ್ಯದ ವೈಭವ ಮತ್ತು ಕಪಿಲ್ ದೇವ್ ಅವರ ಸಾಹಸವನ್ನು ಕ್ರಿಕೆಟ್ ಜಗತ್ತು ನೋಡಲು ಸಾಧ್ಯ ಆಗಲಿಲ್ಲ!
ಸೆಮಿಫೈನಲ್ ಪಂದ್ಯಗಳು! 
—————————-
ಒಂದು ಕಡೆ ವಿಂಡೀಸ್ ನಿರೀಕ್ಷೆ ಮಾಡಿದ ಹಾಗೆ ಪಾಕ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆಯಿತು. ಮತ್ತೊಂದು ಕಡೆ ಭಾರತ ತಂಡವು ಕ್ರಿಕೆಟ್ ಜನಕರಾದ  ಇಂಗ್ಲಾಂಡ ತಂಡವನ್ನು ಅವರದೇ ನೆಲದಲ್ಲಿ ಆರು ವಿಕೆಟಗಳ ಅಂತರದಲ್ಲಿ ಬಗ್ಗು ಬಡಿದು ಫೈನಲ್ ಪ್ರವೇಶ ಪಡೆಯಿತು.
ವಿಂಡೀಸ್ ತಂಡಕ್ಕೆ ಅದು ಮೂರನೇ ಫೈನಲ್. ಭಾರತಕ್ಕೆ ಅದು ಚೊಚ್ಚಲ ಫೈನಲ್!
1983ರ ಜೂನ್ 25ರಂದು ಏನಾಯಿತು?
———————————–
ಅದು “ಕ್ರಿಕೆಟ್ ಸ್ವರ್ಗ”ಎಂದು ಕರೆಸಿಕೊಂಡಿದ್ದ ಲಾರ್ಡ್ಸ್ ಮೈದಾನ! ಅಂದು ಇಡೀ ಮೈದಾನದ ತುಂಬಾ ವಿಂಡೀಸ್ ಬೆಂಬಲಿಗರು ತುಂಬಿದ್ದರು. ಭಾರತದ ಬೆಂಬಲಿಗರು 10% ಕೂಡ ಇರಲಿಲ್ಲ. ಭಾರತ ಟ್ರೋಫಿ ಗೆಲ್ಲುವ ಭರವಸೆಯು ಭಾರತೀಯರಿಗೇ ಇರಲಿಲ್ಲ!
ಆ ಟೂರ್ನಿಯಲ್ಲಿ ನಡೆದ ಪ್ರತೀ ಪಂದ್ಯವೂ 60 ಓವರ್ ಪಂದ್ಯ ಆಗಿತ್ತು. ಟಾಸ್ ಗೆದ್ದ ವಿಂಡೀಸ್ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನ ಮಾಡಿತು. ಭಾರತ ಕುಂಟುತ್ತ ಕುಂಟುತ್ತ 183 ರನ್ ಮಾಡಿತು. ಶ್ರೀಕಾಂತ್ 38 ಮಾಡಿದ್ದೆ ಗರಿಷ್ಟ ಸ್ಕೋರ್. ಸಂದೀಪ್ ಪಾಟೀಲ್ ಮತ್ತು ಮೋಹಿಂದರ್ ಅಮರನಾಥ್ ತಕ್ಕಮಟ್ಟಿಗೆ ಆಡಿದರು.
ಅದಕ್ಕೆ ಕಾರಣ ವಿಂಡೀಸ್ ತಂಡದ ವೇಗದ ಬೌಲಿಂಗ್ ಬ್ಯಾಟರಿ. ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ದೈತ್ಯ ಜಾಯಲ್ ಗಾರ್ನರ್, ಲಾರಿ ಗೊಮ್ಸ್ ಇವರೆಲ್ಲರೂ ಅಂದು ಭಾರತೀಯ ತಂಡವನ್ನು ಕಟ್ಟಿ ಹಾಕಿದ್ದರು!
ವಿಂಡೀಸ್ ತಂಡದ ಅತಿಯಾದ ಆತ್ಮವಿಶ್ವಾಸವು ಲಂಚ್ ನಂತರದ ಆಟದಲ್ಲಿ ಅವರಿಗೆ ಮುಳು ಆಯಿತು ಎಂದೇ ಹೇಳಬಹುದು.
ದೈತ್ಯ ಆರಂಭಿಕ ಆಟಗಾರರಾದ ಗಾರ್ಡನ್ ಗ್ರಿನೀಜ್ ಮತ್ತು ಡೆಸ್ಮಂಡ್ ಹೈನ್ಸ್ ಆ ಕಾಲಕ್ಕೆ ವಿಶ್ವದಾಖಲೆ ಹೊಂದಿದ್ದವರು. ಗ್ರೀನೀಜ್ ಕ್ರೀಸಿಗೆ ಹೋಗುವಾಗ ತನ್ನ ತಂಡದ ಇತರ ಸಹ ಆಟಗಾರರಿಗೆ ‘ನೀವು ಪ್ಯಾಡ್ ಕಟ್ಟುವ ಅಗತ್ಯವೇ ಇಲ್ಲ.  ನಾವಿಬ್ಬರೇ ಮ್ಯಾಚನ್ನು ಗೆಲ್ಲಿಸಿ ಬರುತ್ತೇವೆ’ ಎಂದು ಹೇಳಿ ಕ್ರೀಸಿಗೆ ಬಂದಿದ್ದ!
ಆದರೆ ಭಾರತದ ಯುವ ಬೌಲರಗಳು ಅಂದು ಅದ್ಭುತವನ್ನೇ ಮಾಡಿದರು. ಮೊದಲ ವಿಕೆಟ್ ಅಗ್ಗದಲ್ಲಿ ಉರುಳಿದಾಗ ಭಾರವಾದ ಬ್ಯಾಟ್ ಹಿಡಿದು ಕ್ರೀಸಿಗೆ ಬಂದವನು ವಿಂಡೀಸ್ ಬ್ಯಾಟಿಂಗ್ ಲೆಜೆಂಡ್ ವಿವ್ ರಿಚರ್ಡ್ಸ್!
ನಿರಂತರ ಬೌಂಡರಿಗಳು ಸದ್ದು ಮಾಡಿದಾಗ ವಿಂಡೀಸ್ ಮೂರನೇ ಟ್ರೋಫಿ ಎತ್ತಿ ಬಿಟ್ಟಿತ್ತು ಅನ್ನಿಸಲು ತೊಡಗಿತ್ತು! ಆದರೆ ಕಪಿಲ್ ದೇವ್ ಸುಮಾರು 30 ಹೆಜ್ಜೆ ಹಿಂದಕ್ಕೆ ಓಡಿ ಹಿಡಿದ ಒಂದು ಕ್ಯಾಚ್ ವಿವ್ ರಿಚರ್ಡ್ಸ್ ಕತೆ ಮುಗಿಸಿತು!
ಅಲ್ಲಿಂದ ಮುಂದೆ ನಡೆದದ್ದು ಭಾರತದ್ದೇ ಕಾರುಬಾರು! 
—————————————————– ಚಾಂಪಿಯನ್ ವಿಂಡೀಸ್ ತಂಡ 140ಕ್ಕೆ ಆಲೌಟ್! ಭಾರತ ತಂಡಕ್ಕೆ 43 ರನ್ ವಿಜಯ! ಅಂದು ಮದನಲಾಲ್ ಮತ್ತು  ಮೋಹಿಂದರ ಅಮರನಾಥ್ ತಲಾ ಮೂರು ವಿಕೆಟ್ ಪಡೆದಿದ್ದರು.
ಟೂರ್ನಿ ಆರಂಭ ಆಗುವ ಮೊದಲು ಅಂಡರ್ ಡಾಗ್ ಎಂದು ಕರೆಸಿಕೊಂಡಿದ್ದ  ಭಾರತೀಯ ಯುವ ತಂಡವು ಕ್ರಿಕೆಟ್ ದೈತ್ಯರಾದ ವಿಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಹೆಡೆಮುರಿ ಕಟ್ಟಿಬಿಟ್ಟಿತ್ತು! ಇದು ಯಾರೂ ಊಹೆ ಕೂಡ ಮಾಡದ ಗೆಲುವು ಎಂದೇ ಹೇಳಬಹುದು.
ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಕಪಿಲದೇವ್ ನೀಲಿ ಬಣ್ಣದ ಬ್ಲೇಜರ್ ಧರಿಸಿ ಪ್ರುಡೆನ್ಶಿಯಲ್ ಕಪ್ ಎತ್ತಿಹಿಡಿದ  ಫೋಟೋ ಇಡೀ ಭಾರತೀಯ ಕ್ರಿಕೆಟ್ ರಂಗದ ವೈಭವದ ಮುನ್ಸೂಚನೆ ಆಗಿತ್ತು!
ಭಾರತಕ್ಕದು ನಿಜವಾಗಿ ಸ್ಫೂರ್ತಿಯ ಸೆಲೆ! 
———————————–
ಭಾರತೀಯ ಹಾಕ್ಕಿ ತಂಡವು ಅದರ ಮೊದಲೇ ಎಂಟು ಬಾರಿ ಒಲಿಂಪಿಕ್ಸ್ ಚಿನ್ನವನ್ನು ಗೆದ್ದ ಸಾಧನೆ ಮಾಡಿ ಆಗಿತ್ತು! ಹಾಕ್ಕಿ ಮಾಂತ್ರಿಕ ಧ್ಯಾನ ಚಂದ್ ಅವರು ಆಗಲೇ ಭಾರತದ ಐಕಾನ್ ಆಗಿದ್ದರು.
ಹಾಗೆಯೇ ಮುಂದೆ ಭಾರತದ ಕ್ರಿಕೆಟ್ ತಂಡವು ಹಲವು ವಿಶ್ವಮಟ್ಟದ ಟ್ರೋಫಿಗಳನ್ನು ಗೆದ್ದಿತು! ಭಾರತೀಯ ಕ್ರಿಕೆಟ್  ತಂಡದಲ್ಲಿ ಮಹಾ ಮಹಾ ಆಟಗಾರರು ಬಂದರು. ಆದರೆ ಆ ಚೊಚ್ಚಲ ವಿಶ್ವಕಪ್ ವಿಜಯವು ಭಾರತಕ್ಕೆ ಒಂದು ಚಿನ್ನದ ಪ್ರಭಾವಳಿ! ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದು ನಮಗೆಲ್ಲ ಸ್ಮರಣೀಯ!
ಅದರ ಪೂರ್ತಿ ಶ್ರೇಯಸ್ಸು ಕಪಿಲ್ ದೇವ್ ಮತ್ತು ಅವರ ಹುಡುಗರಿಗೆ ಸಲ್ಲಬೇಕು.
Categories
ಟೆನಿಸ್

ದೇವರೇ, ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್!

ಮರಣದ ದವಡೆಯಲ್ಲಿ ಕೂಡ ಆತನಿಗೆ ಯಾವ ವಿಷಾದವೂ ಇರಲಿಲ್ಲ!
——————————
ಅಮೆರಿಕಾದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ  ರೋಮಾಂಚನ ಉಂಟುಮಾಡುವ ಬದುಕಿನ  ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ  ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.
ಆತನ ಹೆಸರು ಆರ್ಥರ್ ಆಶ್.
———————————–
ಆತ ಒಬ್ಬ ಕರಿಯ ಟೆನ್ನಿಸ್ ಆಟಗಾರ. ತುಳಿತಕ್ಕೆ ಒಳಗಾದ ಸಮುದಾಯದಿಂದ ಎದ್ದು ಬಂದವನು. ಅಮೆರಿಕದ  ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ಬ್ಲಾಕ್ ಟೆನ್ನಿಸ್ ಆಟಗಾರ ಆತ. ತನ್ನ ವಿಸ್ತಾರವಾದ ಟೆನ್ನಿಸ್ ಜೀವನದಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಈ ಮೂರೂ ಗ್ರಾನಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವನು! ಅವನ ಟೆನ್ನಿಸ್ ಸಾಧನೆಯು ಜಗತ್ತಿನ ಗಮನ ಸೆಳೆದದ್ದು, ಆತನಿಗೆ ಲಕ್ಷ ಲಕ್ಷ  ಪ್ರೀತಿ ಮಾಡುವ ಅಭಿಮಾನಿಗಳು ದೊರೆತದ್ದು ಎಲ್ಲವೂ ಉಲ್ಲೇಖನೀಯ. ಆತ ಬದುಕಿದ್ದಾಗ ಟೆನ್ನಿಸ್ ಲೆಜೆಂಡ್ ಎಂದು ಕರೆಸಿಕೊಂಡಿದ್ದ .
ಆದರೆ ಆತನ ಅಂತಿಮ ದಿನಗಳು ಅತ್ಯಂತ ದಾರುಣ ಆಗಿದ್ದವು. 
———————————–
ಆದರೆ ಅವನ ಜೀವನದ ಕೊನೆಯ 14 ವರ್ಷಗಳು ಅತ್ಯಂತ  ದುಃಖದಾಯಕ ಆಗಿದ್ದವು. ಅವನು ಎರಡು ಬಾರಿ ಅತ್ಯಂತ ಸಂಕೀರ್ಣವಾದ ಬೈಪಾಸ್ ಸರ್ಜರಿಗೆ ಒಳಗಾದನು.  ಮುಂದೆ ಅಷ್ಟೇ ಸಂಕೀರ್ಣವಾದ ಮೆದುಳಿನ ಸರ್ಜರಿಯು ನಡೆಯಿತು. ಆತನ  ದೇಹದ ಅರ್ಧದಷ್ಟು ಭಾಗವು  ಪಾರಾಲೈಸ್ ಆಯಿತು. ಕೊನೆಗೆ ಆಗಿನ ಕಾಲಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿ ಆಗಿದ್ದ ಏಡ್ಸ್ ಕಾಯಿಲೆಯು ಆತನಿಗೆ ಅಮರಿತು. ಇದರಿಂದ ಆರ್ಥರ್ ಆಶ್ ಪಡಬಾರದ ಪಾಡುಪಟ್ಟನು. ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡುವಾಗ ಅವನಿಗೆ AIDS ಸೋಂಕು ತಗುಲಿತ್ತು. ಆಗ ನಿಜವಾದ ಸಾವು ಬದುಕಿನ ದೀರ್ಘ ಹೋರಾಟದ ಹದಿನಾಲ್ಕು   ವರ್ಷಗಳನ್ನು ಅವನು ದಾಟಬೇಕಾಯಿತು.
ಒಬ್ಬ ಅಭಿಮಾನಿಯು ಆತನಿಗೆ ಪತ್ರ ಬರೆದಿದ್ದ. 
———————————-
ಆಗ ಒಬ್ಬ ಅಭಿಮಾನಿಯು ತುಂಬಾ ಪ್ರೀತಿಯಿಂದ ಅವನಿಗೆ ಒಂದು ಪತ್ರವನ್ನು ಬರೆದಿದ್ದ. ಅದರ ಒಟ್ಟು ಸಾರಾಂಶವು ಹೀಗೆ ಇತ್ತು – ಅರ್ಥರ್. ಇಷ್ಟೊಂದು ಸಮಸ್ಯೆಗಳು ಬಂದಾಗಲೂ, ದೇವರೇ, ನೀನು ಹೀಗೇಕೆ ಮಾಡಿದೆ ಎಂದು ಯಾಕೆ ಕೇಳುವುದಿಲ್ಲ? ನಿನಗೇಕೆ ವಿಷಾದ ಇಲ್ಲ?
ಅದಕ್ಕೆ ಆರ್ಥರ್ ಕೊಟ್ಟ ಉತ್ತರವು  ಹೆಚ್ಚು ಮಾರ್ಮಿಕ ಆಗಿತ್ತು.
ನಾನೇಕೆ ವಿಷಾದ ಪಡಲಿ ಎಂದು ಬಿಟ್ಟ ಆರ್ಥರ್! 
———————————–
“ಗೆಳೆಯಾ, ನಿನ್ನ ಕಳಕಳಿಗೆ ಥ್ಯಾಂಕ್ಸ್ ಹೇಳುವೆ. ಆದರೆ ಯೋಚನೆ ಮಾಡು. ನಾನು ಟೆನ್ನಿಸ್ ಆಟ ಆಡಲು ಮೊದಲ ಬಾರಿಗೆ ಕೋರ್ಟಿಗೆ ಇಳಿದಾಗ ಜಗತ್ತಿನಲ್ಲಿ ಐದು ಕೋಟಿ ಜನ ಟೆನ್ನಿಸ್ ಆಡ್ತಾ ಇದ್ದರು. ಅದರಲ್ಲಿ 50 ಲಕ್ಷ ಮಂದಿ ಜಿಲ್ಲಾ ಮಟ್ಟವನ್ನು  ದಾಟಿರಬಹುದು. ಅವರಲ್ಲಿ ಐದು ಲಕ್ಷ ಮಂದಿ ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರಬಹುದು. ಕೇವಲ ಐವತ್ತು ಸಾವಿರ ಮಂದಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವನ್ನು ಪಡೆದಿರಬಹುದು.  ಕೇವಲ ಐದು ಸಾವಿರ ಮಂದಿಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವು ದೊರೆತಿರುವ ಸಾಧ್ಯತೆಯು ಇರಬಹುದು. ಅದರಲ್ಲಿ ಐನೂರು ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರಬಹುದು.
ಅವರಲ್ಲಿ ಕೇವಲ ಐವತ್ತು ಮಂದಿ ವಿಂಬಲ್ಡನ್ ಕೂಟದ ಮೊದಲ ಸುತ್ತನ್ನು ತಲುಪಿರುವ ಸಾಧ್ಯತೆ ಇದೆ. ಎಂಟು ಮಂದಿ ಮಾತ್ರ ಕ್ವಾಟರ್ ಫೈನಲ್ ತಲುಪಿರುವ ಸಾಧ್ಯತೆ ಇದೆ. ನಾಲ್ಕು ಮಂದಿ ಮಾತ್ರ ಸೆಮಿಫೈನಲ್ ಆಡುವ ಭಾಗ್ಯ ಪಡೆದಿರುತ್ತಾರೆ.
ಕೇವಲ ಇಬ್ಬರು ಮಾತ್ರ ವಿಂಬಲ್ಡನ್ ಫೈನಲ್ ಸುತ್ತು ತಲುಪುತ್ತಾರೆ. ಗಾಡ್ಸ್ ಗ್ರೇಸ್! ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಜಗತ್ತಿನ ಕೇವಲ ಇಬ್ಬರು ಶ್ರೇಷ್ಟವಾದ  ಟೆನ್ನಿಸ್ ಆಟಗಾರರು ಪಡೆಯುವ ವಿರಳ  ಅವಕಾಶವು ಅಂದು ನನಗೆ ದೊರಕಿತ್ತು. ನಾನು ಜಗತ್ತಿನ ಕೇವಲ ನಂಬರ್ ಟೂ ಆಟಗಾರನಾಗಿ ಬೆಳ್ಳಿಯ ಹೊಳೆಯುವ ಟ್ರೋಫಿ   ಎತ್ತಿ ಹಿಡಿದು ಭಾರೀ ಖುಷಿ ಪಟ್ಟಿದ್ದೆ! ಆಗ ಅಯ್ಯೋ ದೇವರೇ, ನೀನು ಯಾಕೆ ಹೀಗೆ ಮಾಡಿದೆ ಎಂದು ನಾನು ಕೇಳಲಿಲ್ಲ! ನನ್ನ ಜೀವನದ ಸಂತೋಷದ ಪರಾಕಾಷ್ಠೆಯ ಕ್ಷಣಗಳಲ್ಲಿ ನಾನು ದೇವರನ್ನು ಪ್ರಶ್ನೆ ಮಾಡಲಿಲ್ಲ. ಈಗ ನನಗೆ ತೀವ್ರ ಆರೋಗ್ಯದ ಸಮಸ್ಯೆಗಳು ಎದುರಾದಾಗ ಹೇಗೆ ದೇವರನ್ನು  ಕೇಳಲಿ?”
ಸ್ನೇಹಿತರೇ, ನಮಗೆ ದೇವರು ದೊಡ್ಡ ಹೆಸರು, ಕೀರ್ತಿ, ಹತ್ತಾರು ಪ್ರಶಸ್ತಿ, ಎತ್ತರದ ಪದವಿ, ಅಧಿಕಾರ, ರಾಶಿ ದುಡ್ಡು,  ಭಾರೀ ಪ್ರಭಾವ, ತುಂಬಾ ಹ್ಯಾಪಿನೆಸ್ ಕೊಟ್ಟಾಗ ನಾವು ದೇವರೇ, ಹೀಗೇಕೆ ಮಾಡಿರುವೆ ಎಂದು ಗಟ್ಟಿಯಾಗಿ ಕೇಳಿದ್ದು  ಇದೆಯಾ? ಹಾಗಿರುವಾಗ  ಸಮಸ್ಯೆಗಳು ಬಂದಾಗ, ಆರೋಗ್ಯ ಹಾಳಾದಾಗ, ಹಣ ಕಾಸು ನಷ್ಟ ಆದಾಗ ಯಾಕೆ ದೇವರನ್ನು ಪ್ರಶ್ನೆ ಮಾಡಬೇಕು?
ಅಂದ ಹಾಗೆ 1993ರಲ್ಲಿ ತನ್ನ ಐವತ್ತನೇ ವರ್ಷದಲ್ಲಿ ಆರ್ಥರ್ ಆಶ್ ತನ್ನ ಬದುಕಿಗೆ ಚುಕ್ಕೆ ಇಟ್ಟನು.
ಟೆನ್ನಿಸ್ ಲೆಜೆಂಡ್ ಆರ್ಥರ್ ಆಶ್ ಹೇಳಿದ್ದು ನಿಜ ಎಂದು ನಿಮಗೆ ಅನ್ನಿಸುತ್ತಿದೆಯಾ?
Categories
Uncategorized

ದೀಪಾ ಮಲ್ಲಿಕ್ ಬದುಕು ಎಷ್ಟೊಂದು ಅದ್ಭುತ! ಎಷ್ಟೊಂದು ಸ್ಫೂರ್ತಿದಾಯಕ!

ಈಕೆಯ ಸಾಧನೆಯು ನಿಮಗೆ ಸ್ಫೂರ್ತಿ ಕೊಡದಿದ್ದರೆ ನಾನು ಇನ್ನು ಬರೆಯುವುದಿಲ್ಲ!
———————————-
21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು! ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ! ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣವೂ  ಇಲ್ಲ! ಮನೆಯಲ್ಲಿ ಇರುವ ಒಬ್ಬಳು  ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವಿಕಲತೆ!
ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು  ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ ಮಾಡಲು ಸಾಧ್ಯವೇ?
ಆದರೆ ಭಾರತದ ಅತೀ ಶ್ರೇಷ್ಟವಾದ ಪಾರಾ ಅಥ್ಲೀಟ್ ದೀಪಾ ಮಲ್ಲಿಕ್ ಅದನ್ನು ದಿಟ್ಟ ಹೋರಾಟದ ಮೂಲಕ ಸಾಧಿಸಿ ತೋರಿಸಿದ್ದಾರೆ. ಆಕೆಯ ಬದುಕು, ಛಲ ಮತ್ತು ಅನನ್ಯ ಹೋರಾಟ ನಿಜವಾಗಿಯೂ ಗ್ರೇಟ್!
ದೀಪಾ ಹುಟ್ಟು ಹೋರಾಟಗಾರ್ತಿ!
———————————-
ದೀಪಾ ಹುಟ್ಟಿದ್ದು ಹರ್ಯಾಣದಲ್ಲಿ ಸೆಪ್ಟೆಂಬರ್ 30, 1970ರಂದು. ತಂದೆ, ಅಣ್ಣ ಎಲ್ಲರೂ ಸೈನಿಕರು. ಕೈ ಹಿಡಿದ ಪತಿ ಬಿಕ್ರಂ ಮಲಿಕ್ ಕಾರ್ಗಿಲ್ ಯೋಧರು. ಬಾಲ್ಯದಿಂದ ಕ್ರೀಡೆ ಮತ್ತು ಬೈಕ್ ಸವಾರಿ ಅವರ ಕ್ರೇಜ್. ಯಾವ ಸಾಹಸವನ್ನು ಮಾಡಲು ಕೂಡ ಹಿಂಜರಿಯುವ  ಹುಡುಗಿಯೇ ಅಲ್ಲ. ಮದುವೆಯ ನಂತರ ಬಹಳ ಪ್ರೀತಿ ಮಾಡುವ ಗಂಡನ ಪೂರ್ಣ ಪ್ರಮಾಣದ ಬೆಂಬಲ ಅವರ ಸಾಹಸಗಳಿಗೆ ದೊರೆತಿತ್ತು.
ಆದರೆ ಅವರ ಬದುಕಿನಲ್ಲಿ ಎರಡು ಅಪಘಾತಗಳು ನಡೆದು ಹೋದವು. ಅವುಗಳು ಅವರ ಬದುಕಿನ ಕರಾಳ ಅಧ್ಯಾಯಗಳು!
ಮಗಳು ಬೈಕ್ ಅಪಘಾತದಲ್ಲಿ ಪಾರಾಲೈಸ್ ಆದಳು.
——————————
ಮೊದಲ ಆಘಾತ ನಡೆದದ್ದು ಅವರ ಪುಟ್ಟ ಮಗಳು ದೇವಿಕಾ ಬೈಕ್ ಅಪಘಾತಕ್ಕೆ ಒಳಗಾದಾಗ. ಮಗಳ ತಲೆಗೆ ಪೆಟ್ಟಾಗಿತ್ತು. ದೇಹದ ಎಡಭಾಗವು ಪೂರ್ತಿಯಾಗಿ ಪಾರಾಲೈಸ್ ಆಗಿತ್ತು. ಅದಕ್ಕೆ ವೈದ್ಯಕೀಯದ ಭಾಷೆಯಲ್ಲಿ ‘ಹೆಮಿ ಪ್ಲೆಜಿಯಾ ‘ಎಂದು ಹೆಸರು. ಅದರಿಂದಾಗಿ ದೀಪಾ ಮಲ್ಲಿಕ್ ತನ್ನ ಸಾಹಸದ ಪ್ಯಾಶನಗಳನ್ನು ಮರೆತು ಮಗಳ ಆರೈಕೆ ಮತ್ತು ಶುಶ್ರೂಷೆಯಲ್ಲಿ ಮುಳುಗಿಬಿಟ್ಟರು.
ದೀಪಾ ಬದುಕಿನಲ್ಲಿ ಎರಡನೆಯ ಆಘಾತ ನಡೆದೇ ಬಿಟ್ಟಿತು! 
——————————
ಮುಂದೆ 1999ರ ಕಾರ್ಗಿಲ್ ಯುದ್ದವು ಆರಂಭ ಆದಾಗ ಪತಿ ಬಿಕ್ರಂ ಮಲಿಕ್ ಭಾರತೀಯ ಸೇನೆಯ ಯೋಧನಾಗಿ ರಣಭೂಮಿಯಲ್ಲಿ ಇದ್ದರು. ಪತ್ನಿಗೆ ಅವರ ಸಂಪರ್ಕವು ಸಾಧ್ಯವೇ ಇರಲಿಲ್ಲ. ಅದೇ ಹೊತ್ತಿಗೆ ದೀಪಾ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತು.
ಸುಮಾರು ದಿನಗಳಿಂದ ಅವರ ಬೆನ್ನು ಮೂಳೆಯ ನೋವು ಕಾಡುತ್ತಿತ್ತು. ಪರೀಕ್ಷೆ ಮಾಡಲು ಹೋದಾಗ ವೈದ್ಯರು ಹೇಳಿದ್ದಿಷ್ಟು –  ನಿಮ್ಮ ಬೆನ್ನು ಮೂಳೆಯಲ್ಲಿ ಒಂದು ಅಪಾಯಕಾರಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡದೆ ಹಾಗೆ ಬಿಟ್ಟರೆ ಸಾವು ಖಂಡಿತ. ಆಪರೇಷನ್ ಮಾಡಿದರೆ ನಿಮ್ಮ ದೇಹದ ಒಂದು ಭಾಗ ಪಾರಾಲೈಸ್  ಆಗುವುದು ಖಂಡಿತ! ಆಯ್ಕೆ ನಿಮ್ಮದು!
ಗಂಡ ಯುದ್ಧಭೂಮಿಯಲ್ಲಿ ಇದ್ದ ಕಾರಣ ಅವರ ಅಭಿಪ್ರಾಯವನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದೀಪಾ ಧೈರ್ಯವಾಗಿ ಆಪರೇಶನ್ ಮಾಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಒಂದು ವಾರ ಬಿಟ್ಟು ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತವಾಗಿ ಇತ್ತು – ಒಂದು ವಾರ ನಾನು ನನ್ನ ಕಾಲ ಮೇಲೆ ಸ್ವಾವಲಂಬಿ ಆಗಿ ಫೀಲ್ ಜೊತೆಗೆ ನಡೆಯಬೇಕು!
ಅತ್ಯಂತ ಯಾತನಾಮಯ ಶಸ್ತ್ರ ಚಿಕಿತ್ಸೆ ಅದು! 
——————————
ನಂತರ ಒಬ್ಬರೇ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಅತ್ಯಂತ ಯಾತನಾಮಯ ಆದ ಶಸ್ತ್ರಚಿಕಿತ್ಸೆ ಅದು. 183 ಹೊಲಿಗೆಗಳನ್ನು  ಹಾಕಿಸಿಕೊಂಡು ಆಕೆ ಕಣ್ಣು ತೆರೆದಾಗ ಅವರ ದೇಹದ ಎದೆಯ ಕೆಳಗಿನ ಭಾಗ ಪೂರ್ತಿ ಪಾರಾಲೈಜ್ ಆಗಿತ್ತು. ವೀಲ್ ಚೇರ್ ಬದುಕು ಅನಿವಾರ್ಯ ಆಗಿತ್ತು!
ಈ ಸ್ಥಿತಿಗೆ ‘ ಪಾರಾ ಪ್ಲೆಜಿಕ್ ‘ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ದೇಹದ ಅರ್ಧ ಭಾಗವು ನಿಯಂತ್ರಣ ಕಳೆದುಕೊಳ್ಳುವುದು ಮಾತ್ರವಲ್ಲ ಮಲ, ಮೂತ್ರಗಳ ಮೇಲೆ ಕೂಡ ನಿಯಂತ್ರಣಗಳು ತಪ್ಪಿ ಹೋಗುವುದು. ಒಂದು ಗ್ಲಾಸ್ ನೀರು ಕುಡಿಯಲು ಕೂಡ ಹಿಂದೆ ಮುಂದೆ ನೋಡಬೇಕಾದ ನೋವಿನ  ಅನಿವಾರ್ಯತೆ! ಯಾವ ಆಹಾರ ಸೇವಿಸಲು ಕೂಡ ವೈದ್ಯರ ಅನುಮತಿಯನ್ನು ಪಡೆಯಬೇಕು! ಆದ್ದರಿಂದ ಪಾರಾಪ್ಲೆಜಿಕ್ ಸಮಸ್ಯೆ ಇದ್ದವರು ತಮ್ಮ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ದೀಪಾ ಮಲಿಕ್  ಬೇರೆಯವರ ಹಾಗೆ ಯೋಚನೆ ಮಾಡಲೇ ಇಲ್ಲ!
ಗಂಡನ ಬೆಂಬಲ ಪಡೆದು ದೀಪಾ 
ಮತ್ತೆ ಸಾಹಸಕ್ಕೆ ಇಳಿದರು!
——————————
1999ರ ಕಾರ್ಗಿಲ್ ಯುದ್ದವನ್ನು ಗೆದ್ದು ಗಂಡ ಮನೆಗೆ ಬಂದಾಗ ಮನೆಯಲ್ಲಿ ಎರಡೆರಡು ಪಾರಾಲೈಸ್ ಆದ ನೊಂದ ಜೀವಗಳು! ಕಣ್ಣೀರು ಸುರಿಸುತ್ತ ಮಲಗಿದ ಹೆಂಡತಿ. ಆದರೆ ಬಿಕ್ರಂ ಸಿಂಗ್ ಒಬ್ಬ ದಿಟ್ಟ ಸೈನಿಕನಾಗಿ ಹೆಂಡತಿಗೆ ಧೈರ್ಯ ತುಂಬಿದರು. ಬದುಕಿನ ನೋವನ್ನು ಮರೆಯಲು ಅವರ ಬಾಲ್ಯದ ಕ್ರೀಡೆ ಮತ್ತು ಪ್ಯಾಶನಗಳನ್ನು ಮುಂದುವರೆಸುವ ಸಲಹೆ ಕೊಟ್ಟರು. ತಾನು ಪೂರ್ತಿಯಾಗಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಪತಿಯ ಪೂರ್ಣ ಪ್ರಮಾಣದ ಬೆಂಬಲ ಪಡೆದ ದೀಪಾ ಮಲಿಕ್ ಮತ್ತೆ ಕ್ರೀಡಾ ಜಗತ್ತನ್ನು ಪ್ರವೇಶ ಮಾಡಲು ದಿಟ್ಟ ನಿರ್ಧಾರ ಮಾಡಿದ್ದರು. ಧೈರ್ಯವಾಗಿ ಮನೆಯಿಂದ ಹೊರಗೆ ಕಾಲಿಟ್ಟರು.
ಮುಂದೆ ಆಕೆಯ ಮುಂದೆ ಇದ್ದದ್ದು ಹೋರಾಟದ ಬದುಕು! 
———————————–
ಬೈಕ್ ಮತ್ತು ಕಾರ್ ಓಡಿಸಲು ದೆಹಲಿಯ ಸ್ಪೈನಲ್ ಇಂಜುರಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಠಿಣವಾದ ತರಬೇತು ಪಡೆದರು. ಈಜು ಕಲಿತರು. ಬೈಕ್ ಮತ್ತು ಕಾರಲ್ಲಿ ಹಲವು ಮಾರ್ಪಾಟು  ಮಾಡಿಸಿದರು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಡಬಾರದ ಕಷ್ಟವನ್ನು ಪಟ್ಟರು. ಅದೆಲ್ಲವೂ ಹೋರಾಟದ ದಿನಗಳು. ಅರ್ಧ ದೇಹ ಮತ್ತು ಪೂರ್ಣ ಸ್ಥೈರ್ಯಗಳು ಅವರ ಬೆಂಬಲಕ್ಕೆ ನಿಂತಿದ್ದವು!
2006ರಲ್ಲಿ ಕೌಲಾಲಂಪುರದಲ್ಲಿ ನಡೆದ ಈಜುವ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪದಕವು  ದೊರೆಯಿತು. 2008ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ದವಾಗಿ ಒಂದು ಕಿಲೋಮೀಟರ್ ದೂರ ಈಜಿ ಅವರು ಲಿಮ್ಕಾ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪದಕ ಗೆದ್ದ ಕೇವಲ ಭಾರತದ್ದೆ ಅಲ್ಲ ಇಡೀ ಜಗತ್ತಿನ ಮೊತ್ತ ಮೊದಲ ಪಾರಾಪ್ಲೆಜೀಕ್ ಕ್ರೀಡಾಪಟು ದೀಪಾ ಮಲಿಕ್ ಆಗಿದ್ದರು!
ನಂತರ ಅವರು ಹಿಂದೆ ಮುಂದೆ ನೋಡುವ ಪ್ರಸಂಗವೇ ಬರಲಿಲ್ಲ. ಅವರ ಗೆಲುವಿನ ಕೆಲವು ಹೆಜ್ಜೆಗಳು ಹೀಗಿವೆ.
ಎಲ್ಲವೂ ದಾಖಲೆ, ದಾಖಲೆ ಮತ್ತು  ದಾಖಲೆ! 
———————————–
೧) 2009ರಲ್ಲಿ ವಿಶೇಷವಾಗಿ ಮಾರ್ಪಾಡು ಮಾಡಿದ ಬೈಕನ್ನು  58 ಕಿಲೋಮೀಟರ್ ದೂರಕ್ಕೆ ನಿರಂತರ
ಓಡಿಸಿ ದಾಖಲೆ ಬರೆದರು.
೨) ಅದೇ ವರ್ಷ ಜಗತ್ತಿನ ಅತೀ ಎತ್ತರದ ರೈಡ್ ಟು ಹಿಮಾಲಯ ಹೆಸರಿನ ಮೋಟಾರ್ ರಾಲಿಯಲ್ಲಿ ನೇವಿಗೆಟರ್ ಆಗಿ ದೀಪಾ ಮಲಿಕ್  ಭಾಗವಹಿಸಿದರು. ಅದು ಮೈ ಕೊರೆಯುವ ಚಳಿಯಲ್ಲಿ ಎಂಟು ದಿನಗಳ ಸುದೀರ್ಘ ಕಾಲ ಸಾಗಿದ, 1700 ಕಿಲೋಮೀಟರ್ ಪ್ರಯಾಣದ, 18,000 ಅಡಿ ಎತ್ತರದ ದುರ್ಗಮ ರಸ್ತೆಗಳ ರಾಲಿ ಆಗಿತ್ತು. ಇದನ್ನು ಗೆದ್ದ ದೀಪಾ ಎರಡನೇ ಬಾರಿಗೆ ಲಿಮ್ಕಾ ಬುಕ್ ದಾಖಲೆಗೆ ಸೇರಿದರು!
೩) ಮುಂದಿನ ವರ್ಷ ದೀಪಾ ಇನ್ನೊಂದು ಸಾಹಸಕ್ಕೆ ಮುಂದಾದರು. ಅದು 3,000 ಕಿಲೋಮೀಟರ್ ಪ್ರಯಾಣದ ಡಸರ್ಟ್ ಸ್ಟಾರ್ಮ್ ರಾಲಿ. ಅದು ಕೂಡ ಮರುಭೂಮಿ ಸೀಳಿಕೊಂಡು ಹೋಗುವ ರಾಲಿ! ಅಲ್ಲೂ ಅವರ ಆತ್ಮವಿಶ್ವಾಸವು ಅವರನ್ನು ಗೆಲ್ಲಿಸಿತು!
೪) ಮುಂದೆ ಅವರು ಶಾಟ್ ಪುಟ್ ಮತ್ತು ಜಾವೇಲಿನ್ ಥ್ರೋ ಮೇಲೆ ಗಮನವಿಟ್ಟರು. 2010ರ ಏಷಿಯನ್ ಪಾರಾ ಗೇಮ್ಸ್ ಚೀನಾದಲ್ಲಿ ನಡೆದಾಗ ಕಂಚಿನ ಪದಕ ಗೆದ್ದರು. ಮುಂದೆ 2011ರಲ್ಲಿ ನ್ಯೂಜಿಲ್ಯಾಂಡಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್ಶಿಪ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
೫) 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಪಾರಾ ಏಷಿಯನ್ ಗೇಮ್ಸಲ್ಲಿ ಜಾವೇಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದರು.
೬) 2016ರ ರಿಯೋ ಪಾರಾ ಒಲಿಂಪಿಕ್ಸ್ ಕೂಟದಲ್ಲಿ
ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾಗವಹಿಸಲು ದೀಪಾ ಭಾರೀ ತಯಾರಿ ನಡೆಸಿದರು. ಆಗ ತೀವ್ರವಾದ ದೈಹಿಕ ತೊಂದರೆಗಳು ಎದುರಾದವು. ಪ್ರತೀ ಬಾರಿ ಶಾಟ್ ಪುಟ್ ಎಸೆದಾಗ ಮಲ ಅಥವ ಮೂತ್ರ ವಿಸರ್ಜನೆ ಆಗಿ ಡಯಪರ್ ಬದಲಾವಣೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ದೀಪಾ ಮಲಿಕ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಅದರ ನಡುವೆ ಅವರ ಬೆನ್ನ ಹಿಂದೆ ನಡೆದ  ಹಲವು ವಿಶ್ವಾಸದ್ರೋಹದ ಘಟನೆಗಳು, ಕೋರ್ಟು ಅಲೆದಾಟ ಅವರನ್ನು ಹಿಂಡಿ ಹಿಪ್ಪೆ ಮಾಡಿದವು. ಕ್ರೀಡೆಗೆ ಸಿದ್ಧತೆ ಮಾಡಬೇಕಾದ ಪೂರ್ತಿ ಹೊತ್ತು ಕೋರ್ಟನ ಓಡಾಟದಲ್ಲಿ ಕಳೆದುಹೋಗಿತ್ತು. ದೀಪಾ ಕೋರ್ಟಲ್ಲಿ ಕೂಡ ತಮ್ಮ ಪರವಾದ ತೀರ್ಪನ್ನು ಪಡೆದರು ಮತ್ತು ರಿಯೋ ಪಾರಾ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು.
2016ರ ಸೆಪ್ಟೆಂಬರ್ 14 ರಂದು ರಿಯೋದಲ್ಲಿ ವೀಲ್ ಚೇರ್ ಮೇಲೆ ಕುಳಿತು ತನ್ನ ದೇಹದ ಪೂರ್ಣವಾದ  ಶಕ್ತಿಯನ್ನು ತನ್ನ ಭುಜಗಳಿಗೆ ಬಸಿದು 4.61 ಮೀಟರ್ ದಾಖಲೆಯ ದೂರಕ್ಕೆ ಆಕೆ ಶಾಟ್ ಪುಟನ್ನು ಎಸೆದು ಬಿಟ್ಟಿದ್ದರು! ಆ ದಿನ ದೀಪಾ ಅವರಿಗೆ ದೊರೆತದ್ದು ಹೊಳೆವ ಬೆಳ್ಳಿಯ ಪದಕ! ಭಾರತದ ತ್ರಿವರ್ಣ ಧ್ವಜ ರಿಯೋದಲ್ಲಿ ಹಾರಿದಾಗ ದೀಪಾ ಕಣ್ಣೀರು ಸುರಿಸಿದರು.
ಅದು ಭಾರತವು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಗೆದ್ದ ಮೊದಲ ಪದಕ ಆಗಿತ್ತು ಮತ್ತು ಆ ಸಾಧನೆ ಮಾಡಿದ ಜಗತ್ತಿನ ಮೊದಲ ಪಾರಾಪ್ಲೆಜಿಕ್ ಕ್ರೀಡಾಪಟು ಆಗಿ ದೀಪಾ ಮಲಿಕ್ ಮೂಡಿ ಬಂದಿದ್ದರು! ಆಗ ಅವರಿಗೆ 46 ವರ್ಷ!
೭) ಮುಂದೆ ಜಕಾರ್ತದಲ್ಲಿ ನಡೆದ ಏಷಿಯನ್ ಪಾರಾ ಗೇಮ್ಸ್ ಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಅವರು ಗೆದ್ದರು.
೮) ಸತತ ಮೂರು ಏಷಿಯನ್ ಪಾರಾ ಕೂಟಗಳಲ್ಲಿ ಪದಕ ಗೆದ್ದ  (2010, 2014, 2018) ಭಾರತದ  ಮೊದಲ ಕ್ರೀಡಾಪಟು ಆಗಿದ್ದರು ದೀಪಾ ಮಲಿಕ್!
೯) ಆಕೆ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ 81. ಅದರಲ್ಲಿ 58 ಪದಕಗಳು ರಾಷ್ಟ್ರ ಮಟ್ಟದ್ದು ಮತ್ತು 23 ಪದಕಗಳು ಅಂತಾರಾಷ್ಟ್ರೀಯ ಮಟ್ಟದ್ದು!
೧೦) ದೀಪಾ ಮಲಿಕ್ ಅವರಿಗೆ ರಾಷ್ಟ್ರಮಟ್ಟದ  ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎರಡೂ ಸಂದಿವೆ.
೧೧) ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ಅಂದಿನ ಇಡೀ ಕಾರ್ಯಕ್ರಮವು ಭಾವಪೂರ್ಣ ಆಗಿತ್ತು. ಆಕೆಯ ಕತೆಯನ್ನು ಅವರ ಬಾಯಿಂದಲೇ ಕೇಳಿ ಪ್ರಧಾನಿ ನರೇಂದ್ರ ಮೋದಿ ರೋಮಾಂಚನ ಪಟ್ಟಿದ್ದರು!
೧೨) ದೀಪಾ ಅರ್ಧ ದೇಹದ ಪಾರಾಲೈಸ್ ಆದ ತನ್ನ ಮಗಳು ದೇವಿಕಾ ಅವರನ್ನು ಕೂಡ ಓರ್ವ ಭವಿಷ್ಯದ ಪಾರಾ ಅಥ್ಲೀಟ್ ಆಗಿ ರೂಪಿಸುತ್ತಿದ್ದಾರೆ!
ಈಗ ನೀವು ಹೇಳಿ. ದೀಪಾ ಮಲಿಕ್ ಬದುಕು ಸ್ಫೂರ್ತಿಯ ಚಿಲುಮೆ ಹೌದಾ?