
ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ – 2025: ಬೆಂಗಳೂರು ಆತಿಥ್ಯಕ್ಕೆ ಸಜ್ಜು
ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ಮಟ್ಟದ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸ್ಸೋಸಿಯೇಷನ್ ಹಾಗೂ ಆಲ್ ಇಂಡಿಯಾ ಪಿಕಲ್‌ಬಾಲ್ ಅಸ್ಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ – 2025 (ಇಂಡಿಯಾ ಸೀರಿಸ್)” ಆಯೋಜಿಸಲಾಗುತ್ತಿದೆ. ಈ ಕ್ರೀಡಾ ಮಹೋತ್ಸವಕ್ಕೆ Skechers ಸಂಸ್ಥೆ ಕೈಜೋಡಿಸಿದೆ.
ಭಾರತದಲ್ಲಿ ವೇಗವಾಗಿ ಜನಪ್ರಿಯವಾಗುತ್ತಿರುವ ಪಿಕಲ್‌ಬಾಲ್ ಕ್ರೀಡೆಗೆ ಇದು ಮಹತ್ವದ ಮೈಲಿಗಲ್ಲು ಆಗಲಿದೆ. ವಿವಿಧ ದೇಶಗಳಿಂದ ಪ್ರಸಿದ್ಧ ಆಟಗಾರರು, ತಂಡಗಳು ಹಾಗೂ ತರಬೇತುದಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರ ಮಟ್ಟದ ಉದಯೋನ್ಮುಖ ಆಟಗಾರರಿಗೆ ಜಾಗತಿಕ ವೇದಿಕೆ ಒದಗಿಸುವ ಅಪರೂಪದ ಅವಕಾಶ ಇದಾಗಿದೆ.

ನವೆಂಬರ್ 21ರಿಂದ 23, 2025ರವರೆಗೆ, ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಜೆ.ಪಿ.ನಗರದ ದೊಡ್ಡಕಲ್ಲಸಂದ್ರದಲ್ಲಿರುವ ಟಾಪ್‌ಸ್ಪಿನ್ ಟೆನಿಸ್ ಅಕಾಡಮಿ ಈ ಪ್ರತಿಷ್ಠಿತ ಸ್ಪರ್ಧೆಗೆ ಆತಿಥ್ಯ ವಹಿಸುತ್ತಿದೆ.
ಈ ಟೂರ್ನಿಯ ಸಂಪೂರ್ಣ ನೇರಪ್ರಸಾರವನ್ನು Sports Kannada ಹಾಗೂ Sports Mail ವಾಹಿನಿಗಳು ಪ್ರಸಾರ ಮಾಡಲಿವೆ. ದೇಶದಾದ್ಯಂತದಿಂದಲೂ ಹಾಗೂ ವಿದೇಶದಲ್ಲಿರುವ ಅಭಿಮಾನಿಗಳಿಗೂ ಈ ಜಾಗತಿಕ ಕ್ರೀಡಾ ಉತ್ಸವವನ್ನು ಮನೆಯಿಂದಲೇ ಆನಂದಿಸುವ ಅವಕಾಶ ಒದಗಲಿದೆ.
ಪಿಕಲ್‌ಬಾಲ್ ಕ್ರೀಡೆಯ ಬೆಳವಣಿಗೆಗೆ ಭಾರತ ಈಗ ಜಾಗತಿಕ ವೇದಿಕೆಯಲ್ಲೂ ಅಚ್ಚುಮೆಚ್ಚಾಗಿದೆ ಎಂಬುದಕ್ಕೆ ಈ ಚಾಂಪಿಯನ್‌ಶಿಪ್ ಸಾಕ್ಷಿ. ಬೆಂಗಳೂರು ಮತ್ತೊಮ್ಮೆ ತನ್ನ ಕ್ರೀಡಾ ಸಂಸ್ಕೃತಿಯನ್ನು ವಿಶ್ವದ ಗಮನಕ್ಕೆ ತರುತ್ತಿದೆ.





