Categories
ಸ್ಪೋರ್ಟ್ಸ್

ಹಿಟ್ಲರನ ಅಹಂಕಾರ ಮುರಿದ ನೀಗ್ರೋ ಜೆಸ್ಸಿ ಓವೆನ್ಸ್ !

45 ನಿಮಿಷಗಳಲ್ಲಿ ಐದು ಅಥ್ಲೆಟಿಕ್ ವಿಶ್ವದಾಖಲೆ ಆತನು ಮಾಡಿ ಮುಗಿಸಿದ್ದ! 
——————————————————-
1936 ಬರ್ಲಿನ್ ಒಲಿಂಪಿಕ್ಸ್ ಕೂಟ ಆರಂಭ ಆಗಿತ್ತು! 
ಹಿಟ್ಲರನ ಸರ್ವಾಧಿಕಾರದ ಶಿಖರ ಬಿಂದುವಿನ ಕಾಲ ಅದು!  ಅಮೇರಿಕಾವನ್ನು ನಖಶಿಖಾಂತ ದ್ವೇಷ ಮಾಡುತ್ತಿದ್ದ ಹಿಟ್ಲರ್ ಆ ಕೂಟದಲ್ಲಿ ಅಮೆರಿಕಾಕ್ಕೆ ಒಂದೇ ಒಂದು ಪದಕವು ಕೂಡ  ದೊರೆಯಬಾರದು ಎಂದು ಯೋಜನೆಯನ್ನು ಮಾಡಿದ್ದ!
ಅಮೆರಿಕಾದ ಕ್ರೀಡಾಪಟುಗಳಿಗೆ ಯಾವ ಕನಿಷ್ಠತಮ ಕ್ರೀಡಾ ಸೌಲಭ್ಯಗಳನ್ನು ನೀಡಿರಲಿಲ್ಲ! ಅವರಿಗೆ ತೊಂದರೆಯಾಗಲಿ  ಎಂದು ನಿಬಿಡ ವೇಳಾಪಟ್ಟಿಯನ್ನು ಮಾಡಿಸಿದ್ದ. ಅವರಿಗೆ ಸರಿಯಾದ ಆಹಾರವನ್ನು ಕೊಡಲಿಲ್ಲ. ಅಮೆರಿಕಾದ ಹೆಚ್ಚಿನ ಕ್ರೀಡಾಪಟುಗಳು ಶೂಸ್ ಕೂಡ ಇಲ್ಲದೆ ಬರಿಗಾಲಲ್ಲಿ, ಹಸಿದ ಹೊಟ್ಟೆಯಲ್ಲಿ ಓಡಬೇಕಾಯಿತು!
ಹಿಟ್ಲರನ ಅಹಂಕಾರ ಮುರಿಯಲು ಎಂಬಂತೆ ಆ ನೀಗ್ರೋ ಅಲ್ಲಿಗೆ ಬಂದಿದ್ದ! 
——————————————————-
ಆತನ ಹೆಸರು ಜೆಸ್ಸಿ ಓವೆನ್ಸ್. ಬಡತನದ ಬೆಂಕಿಯಲ್ಲಿಯೇ ಬೆಂದವನು. ಆತನ ಹೆತ್ತವರಿಗೆ ಹತ್ತು ಮಕ್ಕಳು. ಈತನೇ ಕಿರಿಯನು. ವರ್ಣದ್ವೇಷದ  ಪರಾಕಾಷ್ಟೆಯ ಕಾಲ ಅದು. ಆತನ ಅಜ್ಜ, ಅಪ್ಪ ಎಲ್ಲರೂ ಗುಲಾಮರೇ ಆಗಿದ್ದವರು! ಜೆಸ್ಸಿಯು  ಯೌವ್ವನಕ್ಕೆ ಕಾಲಿಡುವ ಮೊದಲೇ ಧಾನ್ಯಗಳ ಕ್ವಿಂಟಾಲ್ ತೂಕದ ಮೂಟೆಗಳನ್ನು ಹೊತ್ತು ಹೊಟ್ಟೆಪಾಡು ಮಾಡುತ್ತಿದ್ದ!
ಆದರೆ ಆತನಿಗೆ ಓಡುವುದು ಅಂದರೆ ಭಾರೀ ಪ್ರೀತಿ. ಒಬ್ಬ ಕ್ರೀಡಾಪಟುವಿಗೆ ಬೇಕಾದ ಉಕ್ಕಿನ ಮಾಂಸಖಂಡಗಳು, ಉದ್ದವಾದ ಕಾಲುಗಳು ಆತನಿಗೆ ಇದ್ದವು. ಅಂತಹ ಜೆಸ್ಸಿ ಓವೆನ್ಸ್ ಹಿಟ್ಲರನ ಅಹಂಕಾರ ಮುರಿಯಲೋ ಎಂಬಂತೆ ಅಮೆರಿಕಾದಿಂದ ಹಡಗನ್ನು ಏರಿ ಬರ್ಲಿನ್ ಒಲಿಂಪಿಕ್ಸನ  ಮೈದಾನಕ್ಕೆ ಬಂದಿದ್ದ,  ಬರಿಗಾಲಲ್ಲಿ ಓಡುವ ಸಂಕಲ್ಪದ ಜೊತೆಗೆ!
ಆದರೆ ಅವನಿಗೆ ಅಡಿಡಾಸ್ ಶೂ ಕಂಪೆನಿಯು ಒಂದು ಜೊತೆ ಸ್ಪೋರ್ಟ್ಸ್ ಶೂಗಳನ್ನು ಕೊಟ್ಟು ತನ್ನ ರಾಯಭಾರಿ ಆಗಿ ಘೋಷಣೆ ಮಾಡಿತು. ಹಾಗೆ ರಾಯಭಾರಿ ಆಗಿ ಆಯ್ಕೆ ಆದ ಜಗತ್ತಿನ ಮೊದಲ ಕರಿಯ ಕ್ರೀಡಾಪಟು ಜೆಸ್ಸಿ!
ಆತ ಆಗಲೇ ವಿಶ್ವ ಚಾಂಪಿಯನ್ ಆಗಿದ್ದ! 
———————————–
ಕೇವಲ ಒಂದು ವರ್ಷದ ಹಿಂದೆ ಅಂದರೆ 1935ರ ಇಸವಿಯ ಮೇ 25ರಂದು ಮಿಚಿಗನ್ ನಗರದಲ್ಲಿ ನಡೆದ ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಆತನು ಕೇವಲ 45 ನಿಮಿಷಗಳ ಸಣ್ಣ  ಅವಧಿಯಲ್ಲಿ ಐದು ವಿಶ್ವದಾಖಲೆಗಳನ್ನು  ಮಾಡಿ ಕೀರ್ತಿಯ ಶಿಖರವನ್ನು ತಲುಪಿದ್ದ! ಅದರ ಜೊತೆಗೆ ಒಂದು ವಿಶ್ವದಾಖಲೆ ಕೂಡ ಅವನು ಸರಿಗಟ್ಟಿದ್ದನು. ಈ ರೀತಿಯ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾವ ಕ್ರೀಡಾಪಟುವೂ ಅದುವರೆಗೆ ಮಾಡಿರಲಿಲ್ಲ!  ಆದ್ದರಿಂದ ಒಲಿಂಪಿಕ್ಸ್ ಕೂಟವು ಆರಂಭ ಆಗುವ ಮೊದಲೇ ಆತ ‘ವಿಶ್ವದಾಖಲೆಯ ವೀರ’ ಎಂದು ಪ್ರಚಾರ ಪಡೆದಿದ್ದ!
ಆದ್ದರಿಂದ ಅವನನ್ನು ನೋಡಲು ಬರ್ಲಿನ್ ನಗರದ ಒಲಿಂಪಿಕ್ ಕ್ರೀಡಾಂಗಣದಲ್ಲಿ 80,000 ಜನರು ಕಿಕ್ಕಿರಿದು ಸೇರಿದ್ದರು! ಇಡೀ ಕ್ರೀಡಾಂಗಣದಲ್ಲಿ ಜೆಸ್ಸಿ ಜೆಸ್ಸಿ…….. ಎಂಬ ಉದ್ಘೋಷವು ಸಮುದ್ರದ ಅಲೆಗಳ ಹಾಗೆ ಅನುರಣನ ಆಗುತ್ತಿತ್ತು.
ಓವರ್ ಟು ಬರ್ಲಿನ್! 
——————————
1936ರ ಆಗಸ್ಟ್ 3ರಂದು ಬರ್ಲಿನ್ ಮೈದಾನದಲ್ಲಿ ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆಯ ನಡುವೆ ಜೆಸ್ಸಿ ಟ್ರಾಕ್ ಪ್ರವೇಶ ಮಾಡಿದ್ದನು. ಅದು ನೂರು ಮೀಟರ್ ಇವೆಂಟ್. 10.3 ಸೆಕೆಂಡ್ಸ್ ಟೈಮಿಂಗ್ಸ್ ಮೂಲಕ ಆತ ಚಿನ್ನದ ಪದಕವನ್ನು ಗೆದ್ದಾಗಿತ್ತು!
ಮರುದಿನ ಆತ ಲಾಂಗ್ ಜಂಪ್ ಹಾರಬೇಕಾಗಿತ್ತು. ಕಾಲಿಗೆ ಶಕ್ತಿ ಉಡುಗಿದ ಹಾಗೆ ಆಗಿತ್ತು. ಆತ್ಮವಿಶ್ವಾಸವು ಕುಸಿದು ಹೋಗಿತ್ತು. ಆಗ ಅದೇ ಹಿಟ್ಲರನ ಜರ್ಮನಿಯ ಇನ್ನೊಬ್ಬ ಲಾಂಗ್ ಜಂಪರ್, ಲೂಝ್ ಲಾಂಗ್ ಅಂತ ಅವನ ಹೆಸರು, ಜೆಸ್ಸಿಯ ನೆರವಿಗೆ ಬರುತ್ತಾನೆ. ಆತನ ತಪ್ಪುಗಳನ್ನು ಗುರುತು ಮಾಡಿಕೊಡುತ್ತಾನೆ. ಧೈರ್ಯ ತುಂಬಿಸುತ್ತಾನೆ. ಆಗ ಧೈರ್ಯ ತುಂಬಿಕೊಂಡ ಜೆಸ್ಸಿ 26 ಅಡಿ 5 ಇಂಚು ದೂರಕ್ಕೆ ಹಾರಿ ಎರಡನೇ ಚಿನ್ನದ ಪದಕ ಪಡೆದನು!
ಆಗ ಇದೇ ಅಮೆರಿಕಾದ ಕರಿಯ ಆಟಗಾರ ಮತ್ತು ಅದೇ ಹಿಟ್ಲರನ ಜರ್ಮನಿಯ ಬಿಳಿಯ ಆಟಗಾರರು ಪರಸ್ಪರ ಆಲಿಂಗನವನ್ನು  ಮಾಡಿಕೊಂಡು ಅಭಿನಂದಿಸಿಕೊಂಡಾಗ  ಹಿಟ್ಲರ್ ಅದನ್ನು ನೋಡಲಿಕ್ಕೆ ಆಗದೆ ಗ್ಯಾಲರಿಯಿಂದ ಎದ್ದು ಹೋದ ಅನ್ನುತ್ತದೆ ಇತಿಹಾಸ!
ಆಗಸ್ಟ್ 5-1936 ಮೂರನೇ ಚಿನ್ನ!
———————————–
ಮೂರನೇ ಚಿನ್ನಕ್ಕಾಗಿ ಆತ 200 ಮೀಟರ್ ದೂರವನ್ನು  ಓಡಿದಾಗ ಮತ್ತೆ ವಿಶ್ವದಾಖಲೆ ನಿರ್ಮಾಣ ಆಯಿತು. ಚಿನ್ನದ ಪದಕ ಕೊರಳಲ್ಲಿ ಕೂತಿತು! ಅದು 20.7 ಸೆಕೆಂಡ್ ಪಕ್ಕಾ ಟೈಮಿಂಗ್ಸ್!
ಆಗಸ್ಟ್ ಒಂಬತ್ತರಂದು ನಾಲ್ಕನೇ ಚಿನ್ನಕ್ಕಾಗಿ ಆತ ತನ್ನ ದೇಶ  ಅಮೆರಿಕಾದ 4×100 ಮೀಟರ್ ರಿಲೆ ತಂಡವನ್ನು ಲೀಡ್ ಮಾಡಬೇಕಾಯಿತು. ಅಲ್ಲಿ ಕೂಡ ಚಿನ್ನದ ಪದಕ ಅವನಿಗೆ  ದೊರೆಯಿತು!
ಜೆಸ್ಸಿ ಓವೆನ್ಸ್ ಇತಿಹಾಸ ಬರೆದಿದ್ದ! 
———————————–
ಅದುವರೆಗೆ ಯಾವ ಕ್ರೀಡಾಪಟು ಕೂಡ ಒಂದೇ ಒಲಿಂಪಿಕ್ ಕ್ರೀಡಾಕೂಟದ ಟ್ರಾಕ್ ಇವೆಂಟಿನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಪಡೆದಿರಲಿಲ್ಲ! ಬರ್ಲಿನ್ ಒಲಿಂಪಿಕ್ಸ್ ಆತನ ಮಹೋನ್ನತ ಸಾಧನೆಗೆ ಸಾಕ್ಷಿ ಆಯಿತು. ಅದರ ಜೊತೆಗೆ ಸರ್ವಾಧಿಕಾರಿ ಹಿಟ್ಲರನ ಅಹಂಕಾರ ನಾಶವಾಗಿತ್ತು!
ಆ ಒಲಿಂಪಿಕ್ಸ್ ದಾಖಲೆಯು ಮುಂದಿನ 48 ವರ್ಷಗಳ ಕಾಲ ಅಬಾಧಿತ ಆಗಿತ್ತು ಎಂದರೆ ಜೆಸ್ಸಿ ಸಾಧನೆಯ ಎತ್ತರ ನಮಗೆ ಗೊತ್ತಾದೀತು. 1984ರ ಒಲಿಂಪಿಕ್ಸ್ ಕೂಟದಲ್ಲಿ ಅದೇ ಅಮೆರಿಕಾದ ಮತ್ತೋರ್ವ ಕರಿಯ ಓಟಗಾರ ಕಾರ್ಲ್ ಲೂಯಿಸ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜೆಸ್ಸಿಯ ಸಾಧನೆಯನ್ನು ಸರಿಗಟ್ಟುತ್ತಾನೆ.
1999ರಲ್ಲಿ ಬಿಬಿಸಿಯು ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಜೆಸ್ಸಿ ‘ಶತಮಾನದ ಆರು ಮಹೋನ್ನತ ಕ್ರೀಡಾಪಟುಗಳ’ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಾನೆ! ಅಮೆರಿಕಾ ಆತನಿಗೆ ‘ನ್ಯಾಷನಲ್ ಹೀರೋ’ ಎಂಬ ಗೌರವ ನೀಡಿತು. ಆತನ ಸಾಧನೆಯ ಮೇಲೆ ಹಾಲಿವುಡ್ ಸಿನೆಮಾಗಳು ಬಂದವು. ಹೀಗೆ ಜೆಸ್ಸಿ ಓವೆನ್ಸ್ ಬದುಕಿದ್ದಾಗಲೇ ದಂತಕತೆ ಆಗಿ ಬಿಟ್ಟ!
ಇದೆಲ್ಲದರ ಜೊತೆಗೆ 1936ರ ಒಲಿಂಪಿಕ್ಸ್  ಕೂಟದಲ್ಲಿ  ಹಿಟ್ಲರನ ಸೊಕ್ಕನ್ನು ಮುರಿದ ಕಾರಣಕ್ಕೆ ಆತನು ಜಗತ್ತಿನ ಕಣ್ಮಣಿ ಆಗಿದ್ದನು!

Leave a Reply

Your email address will not be published.

one × four =