1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ ಲಂಕಾ ತಂಡದ ಕೋಚ್ ಆಗಿದ್ದವರು ಆಸ್ಟ್ರೇಲಿಯಾದ ಡೇವ್ ವಾಟ್ಮೋರ್. ನಂತರ ವಾಟ್ಮೋರ್ national cricket academyಗೆ ಡೈರೆಕ್ಟರ್ ಆಗಿ ಬೆಂಗಳೂರಿಗೆ ಬಂದಿದ್ದರು.
13-14 ವರ್ಷಗಳ ಹಿಂದಿನ ಮಾತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ logistic manager ಆಗಿದ್ದ ರಮೇಶ್ ರಾವ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿ ಕರುಣ್ ನಾಯರ್ NCA ನೆಟ್ಸ್’ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ. ಹುಡುಗನ ಆಟ ಆಕರ್ಷಣೀಯವೆನಿಸಿತು. ಹಾಗೇ ಸ್ವಲ್ಪ ಹೊತ್ತು ನೋಡುತ್ತಾ ನಿಂತೆ. ಆಗ ಡೇವ್ ವಾಟ್ಮೋರ್ NCA ಒಳಗಿನಿಂದ ಬಂದರು. ಬಂದವರೇ ಕರುಣ್ ನಾಯರ್ ಆಡುತ್ತಿರುವುದನ್ನು ನೋಡಿ ಮೊದಲು ಹೇಳಿದ ಮಾತು, ‘’ಜಿ.ಆರ್ ವಿಶ್ವನಾಥ್’’. ಆ ದಿನ ವಾಟ್ಮೋರ್ ಕಣ್ಣಿಗೆ ಕರುಣ್ ನಾಯರ್ ಜಿ.ಆರ್. ವಿಶಿ ಅವರಂತೆ ಕಂಡಿದ್ದ. ‘’ಕುಳ್ಳ’’ಗಿದ್ದಾನೆ ಎಂಬುದು ಒಂದು ಕಾರಣವಾದರೆ, ಅದನ್ನೂ ಮೀರಿದ್ದು ಕರುಣ್ ನಾಯರ್’ನ ಆಟ.
ಬದುಕು ಅದೆಷ್ಟು ಅನಿಶ್ಚಿತ ಎಂದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದವನು, ಒಂದು ಕಾಲದಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿ ನಂತರ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಕ್ಯಾಪ್ಟನ್ ಆಗಿದ್ದವನು. ಈಗ ನೋಡಿದರೆ ಯಾವ ಐಪಿಎಲ್’ಗೆ ಬೇಡದ ಆಟಗಾರ.
ಹಾಗೆಂದು ಇಲ್ಲಿ ಬಾಗಿಲು ಮುಚ್ಚಿತೆಂದು ಕರುಣ್ ಕೈ ಕಟ್ಟಿ ಮನೆಯಲ್ಲಿ ಕೂತಿಲ್ಲ. ಹೊಸ ಸವಾಲಿಗೆ ಎದೆಯೊಡ್ಡಿ ಇಂಗ್ಲೆಂಡ್’ನಲ್ಲಿ #Northamptonshire ಕೌಂಟಿ ಕ್ರಿಕೆಟ್ ಆಡುತ್ತಿದ್ದಾನೆ. ನಿನ್ನೆ #Glamorgan ವಿರುದ್ಧ ಅಮೋಘ ದ್ವಿಶತಕ ಬಾರಿಸಿದ್ದಾನೆ. (253 ಎಸೆತಗಳಲ್ಲಿ 202 ನೌಟೌಟ್).
ಕರುಣ್ ನಾಯರ್ ಒಂದು ರೀತಿಯಲ್ಲಿ ನತದೃಷ್ಟ ಕ್ರಿಕೆಟಿಗ. ಯಶಸ್ಸಿನ ಉತ್ತುಂಗಕ್ಕೇರಿ ಅಷ್ಟೇ ಬೇಗ ಪಾತಾಳಕ್ಕೆ ಬಿದ್ದವನು. 2013-14 ಮತ್ತು 2014-15ನೇ ಸಾಲಿನಲ್ಲಿ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಿದ್ದ ಫೇಮಸ್ ಕರ್ನಾಟಕ ತಂಡದ ನಂಬಿಕಸ್ಥ ದಾಂಡಿಗನಾಗಿದ್ದವನು ಕರುಣ್. 2019ರಲ್ಲಿ ಇದೇ ಕರುಣ್ ನಾಯಕತ್ವದಲ್ಲಿ ಕರ್ನಾಟಕ ವಿಜಯ್ ಹಜಾರೆ ಚಾಂಪಿಯನ್’ಷಿಪ್ ಗೆದ್ದಿತ್ತು. ಆದರೆ ನಂತರದ ದಿನಗಳಲ್ಲಿ ಎದುರಿಸಿದ ಸತತ ವೈಫಲ್ಯಗಳು ಕರುಣ್’ಗೆ ಕರ್ನಾಟಕ ತಂಡದ ಬಾಗಿಲನ್ನೇ ಮುಚ್ಚಿ ಬಿಟ್ಟವು.
ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಒಂದು ವರ್ಷ ಮನೆಯಲ್ಲಿ ಕೂತಿದ್ದಾಗ ಕರುಣ್ ನಾಯರ್ ಅಕ್ಷರಶಃ ಕುಗ್ಗಿ ಹೋಗಿದ್ದ. ‘’Dear cricket, give me one chance’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಂಗಲಾಚುವಷ್ಟರ ಮಟ್ಟಿಗೆ ಕರುಣ್ ಹತಾಶನಾಗಿದ್ದ.
ಕರುಣ್ ನಾಯರ್’ಗೆ ಕರ್ನಾಟಕದಲ್ಲಿ ಮುಚ್ಚಿದ ಬಾಗಿಲು ವಿದರ್ಭದಲ್ಲಿ ತೆರೆಯಿತು. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಮೋಘ ಆಟವಾಡಿ ವಿದರ್ಭ ತಂಡವನ್ನು ಫೈನಲ್’ವರೆಗೆ ಕೊಂಡೊಯ್ದಿದ್ದ.
ಇನ್ನು ಐಪಿಎಲ್. ಅಲ್ಲೂ ಕರುಣ್ ನಾಯರ್’ಗೆ ಡೋರ್ ಕ್ಲೋಸ್ ಆಗಿದೆ. ಕಳೆದ ವರ್ಷ ಕೆ.ಎಲ್ ರಾಹುಲ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿಕೊಂಡಿದ್ದ ಕರುಣ್’ಗೆ ಈ ಬಾರಿ ಯಾವ ತಂಡದಲ್ಲೂ ಅವಕಾಶ ಸಿಕ್ಕಿಲ್ಲ.
ಇಲ್ಲಿ ಅವಕಾಶಕ್ಕಾಗಿ ಕಾಯುತ್ತಾ ಕೂರುವ ಬದಲು ತನ್ನ ಆಟವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳುವ ಗುರಿಯೊಂದಿಗೆ, ಮಾನಸಿಕವಾಗಿ ಇನ್ನಷ್ಟು ಸದೃಢನಾಗುವ ಧ್ಯೇಯದೊಂದಿಗೆ ಕಳೆದ ವರ್ಷದಂತೆ ಈ ಬಾರಿಯೂ ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾನೆ. ಕಳೆದ ವರ್ಷ 2 ಶತಕಗಳನ್ನು ಬಾರಿಸಿದ್ದ ಕರುಣ್, ಈ ವರ್ಷ ದ್ವಿಶತಕದೊಂದಿಗೆ ಅಬ್ಬರಿಸಿದ್ದಾನೆ.
ಕರುಣ್ ನಾಯರ್’ಗೆ ಈಗ 32 ವರ್ಷ. ಆತನೊಳಗೆ ಇನ್ನೂ ಐದಾರು ವರ್ಷದ ಕ್ರಿಕೆಟ್ ಇದ್ದೇ ಇದೆ. ಅವಕಾಶಗಳು ಹೇಗೆ ಬೇಕಾದರೂ, ಯಾವ ರೂಪದಲ್ಲಿ ಬೇಕಾದರೂ ಬರಬಹುದು. 37ನೇ ವರ್ಷದಲ್ಲಿ ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ ಟಿ20 ವಿಶ್ವಕಪ್ ಆಡಿಲ್ಲವೇ..! ಅಂತಹ ಒಂದು ಟೈಮ್ ಕರುಣ್’ಗೆ ಭಾರತ ತಂಡದಲ್ಲಿ ಅಲ್ಲವಾದರೂ, ಕರ್ನಾಟಕ ಪರವಾಗಿಯಾದರೂ ಬರಬಹುದು.
ಹೀಗೇ ಆಡುತ್ತಿರು ಕರುಣ್.., ಕತ್ತಲು ಸರಿದ ಮೇಲೆ ಬೆಳಕು ಮೂಡಲೇಬೇಕು.