ಮಿಸ್ಟರಿ ಸ್ಪಿನ್ನರ್‌ಗಳಿಗೆ ಯಾವಾಗಲೂ ವಿಶೇಷವಾಗಿ ಶಾರ್ಟ್ಎಸ್ಟ್ ಫಾರ್ಮ್ಯಾಟ್ ಆಫ್ ದಿ ಗೇಮ್ ನಲ್ಲಿ ಹೆಚ್ಚಿನ ಬೇಡಿಕೆಯಿದೆ. ತನ್ನ ಅದ್ಭುತ ಬೌಲಿಂಗ್ ಕೌಶಲ್ಯದ ಪ್ರತಿಭೆಯಿಂದ ಬ್ಯಾಟ್ಸ್‌ಮನ್‌ಗಳನ್ನು ಭಯಭೀತಗೊಳಿಸಿರುವ ಪ್ರತಿಭಾವಂತ ಮಿಸ್ಟರಿ ಸ್ಪಿನ್ನರ್ ಉಡುಪಿ ಮೂಲದ ದೀಪಕ್ ದೇವಾಡಿಗ ಅಲೆವೂರು.
2023ರ ಮಹಾರಾಜ ಟ್ರೋಫಿಯ ಹರಾಜಿನಲ್ಲಿ ಉಡುಪಿಯ ಹುಡುಗ ದೀಪಕ್ ದೇವಾಡಿಗ ಅಲೆವೂರು ಅವರನ್ನು ಶಿವಮೊಗ್ಗ ಲಯನ್ಸ್‌ಗೆ ಆಯ್ಕೆ ಮಾಡಲಾಗಿತ್ತು ಏಕಕಾಲದಲ್ಲಿ ಎರಡು ವಿಭಿನ್ನ ದಿಕ್ಕುಗಳಲ್ಲಿ ಚೆಂಡನ್ನು ತಿರುಗಿಸುವ ಈ ಸ್ಪಿನ್ನರ್ ಬೌಲಿಂಗ್‌ನಲ್ಲಿ ಹಲವು ಮಾರ್ಪಾಡುಗಳನ್ನು ಅತ್ಯಂತ ಆಕರ್ಷಕವಾಗಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮನಸ್ಸಿಗೆ ಮುದ ನೀಡುವ ಇವರ ಮನಸೆಳೆಯುವ ಎಸೆತಗಳು ಬ್ಯಾಟರ್‌ಗಳನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಮಹಾರಾಜ ಟೂರ್ನಿಯಲ್ಲಿ ಆಡಿರುವ ಶಿವಮೊಗ್ಗ ಲಯನ್ಸ್ ಮಾಂತ್ರಿಕ ತನ್ನ ಚೊಚ್ಚಲ ಸರಣಿಯ ಪಂದ್ಯದಲ್ಲಿ ಎದುರಾಳಿಗಳ ಬ್ಯಾಟಿಂಗ್ ಲೈನ್‌ಅಪ್‌ಗೆ ಕುಣಿಕೆ ಬಿಗಿಗೊಳಿಸಿ ವಿಕೆಟನ್ನು ಪಡೆದು ತನ್ನ ಸ್ಪಿನ್ ಬೌಲಿಂಗ್‌ನಿಂದ ಛಾಪು ಮೂಡಿಸಿ ಶಿವಮೊಗ್ಗ ಲಯನ್ಸ್ ಗೆ ಸಂಪೂರ್ಣ ಪ್ಯಾಕೇಜ್ ಆಗಿ ಹೊರಹೊಮ್ಮಿದ್ದರು.

ಇತ್ತೀಚಿಗೆ ಮುಕ್ತಾಯಗೊಂಡ ಐಪಿಎಲ್ 2024 ರ ಆರ್‌ಸಿಬಿ ತಂಡದ ನೆಟ್ ಬೌಲರ್ ಆಗಿ ಇವರು ಗಮನ ಸೆಳೆದಿದ್ದರು. ದೀಪಕ್ ಅಲೆವೂರು ಆರ್‌ಬಿಸಿಯ ನೆಟ್ಸ್‌ನಲ್ಲಿ ತಮ್ಮ ಬೌಲಿಂಗ್‌ನಿಂದ ಸಂಚಲನ ಮೂಡಿಸಿದ್ದಾರೆ. ದೀಪಕ್ ಅಲೆವೂರು ಅಂತಹ ಬೌಲರ್ ಆಗಿದ್ದು, ಅವರ ವಿರುದ್ಧ ಬ್ಯಾಟಿಂಗ್ ಯಾವುದೇ ಬ್ಯಾಟ್ಸ್‌ಮನ್‌ಗೆ ಸವಾಲಾಗಿದೆ. ಆರ್‌ಸಿಬಿಯ ನೆಟ್ ಸೆಷನ್‌ಗಳ ಭಾಗವಾಗಿದ್ದ ಇವರು ಐಪಿಎಲ್ ಮುಕ್ತಾಯದ ಬಳಿಕ ಉಡುಪಿಗೆ ಮರಳಿದ ಸಂಧರ್ಭ ದೀಪಕ್ ದೇವಾಡಿಗ ಅಲೆವೂರು ಅವರನ್ನು ಸ್ಪೋರ್ಟ್ಸ್ ಕನ್ನಡ ಸಂದರ್ಶಿಸಿತು.
ಸಂದರ್ಶನದ ಆಯ್ದ ಭಾಗಗಳು:
ಪ್ರಶ್ನೆ) ಆರ್‌ಸಿಬಿ ಗೆ ನೆಟ್ ಬೌಲರ್ ಆಗಿ ಆಯ್ಕೆ ಆಗಿದ್ದು ಹೇಗೆ?
ಉ) ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡುವ ನಾನು ಮಿಸ್ಟರಿ ಸ್ಪಿನ್ನರ್. ಗೂಗ್ಲಿ, ಲೆಗ್ ಬ್ರೇಕ್, ಆಫ್-ಬ್ರೇಕ್, ಟಾಪ್ ಸ್ಪಿನ್ನರ್, ಕೇರಂ ಬಾಲ್, ಅಥವಾ ನೇರ ಎಸೆತ ಸೇರಿದಂತೆ ಯಾವುದೇ ಸ್ಪಿನ್ನನ್ನು ನಿಭಾಯಿಸಬಲ್ಲೆ. ನಮ್ಮ ರಾಜ್ಯದಲ್ಲಿ ಅಷ್ಟೇ ಆಲ್ಲಾ,, ನಮ್ಮ ದೇಶದಲ್ಲೂ ಕೆಲವೇ ಕೆಲವು ಮಿಸ್ಟರಿ ಸ್ಪಿನ್ನರ್ ಗಳು ಇರೋದು. ನನ್ನ ಈ ಪ್ರತಿಭೆಯನ್ನು ಗುರುತಿಸಿ ಆರ್ ಸಿ ಬಿ ಯ ಬೌಲಿಂಗ್ ಕೋಚ್ ಮಲೋಲನ್ ರಂಗರಾಜನ್ ಸರ್ ಐಪಿಎಲ್ 2024 ರ ಸೀಸನ್ ನಲ್ಲಿ ಆರ್‌ಸಿಬಿಗಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಕರೆದರು. ಅದು ಅತ್ಯಂತ ಸ್ಮರಣೀಯ ಕ್ಷಣ. ತುಂಬಾ ಖುಷಿಯಾಯ್ತು. ಒಪ್ಪಂದಕ್ಕೆ ಸಹಿ ಹಾಕಿದೆ.

ಪ್ರಶ್ನೆ) ಆರ್‌ಸಿಬಿ ನೆಟ್ ಬೌಲರ್ ಆಗಿ ನಿಮ್ಮ ಅನುಭವ ?
ಉ) ಆರ್‌ಸಿಬಿ ಆಡುವ ಪ್ರತಿ ಐಪಿಎಲ್ ಪಂದ್ಯದ ಮುನ್ನಾ ದಿನ ನೆಟ್ ಪ್ರಾಕ್ಟೀಸ್ ಇರುತ್ತಿತ್ತು. ಆರ್ ಸಿ ಬಿಯ ಎಲ್ಲಾ ಬ್ಯಾಟ್ಸ್ಮನ್ ಗಳಿಗೂ ನಾನು ನೆಟ್ಸ್ ನಲ್ಲಿ ಬೌಲಿಂಗ್ ಮಾಡಬೇಕಿತ್ತು. ಸ್ಟಾರ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ಇವರೆಲ್ಲರಿಗೂ ನಾನು ಬೌಲಿಂಗ್ ಮಾಡಬೇಕಾಗಿತ್ತು. ಆರ್ ಸಿ ಬಿ ಗೆ ನೆಟ್ ಬೌಲರ್ ಆಗಿ ಆಯ್ಕೆ ಆಗುವ ಮೊದಲು ಕೂಡ ಒಮ್ಮೆ ದಿನೇಶ್ ಕಾರ್ತಿಕ್ ಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇಡೀ ಟೂರ್ನಿಯುದ್ದಕ್ಕೂ ಆರ್‌ಸಿಬಿ ಪ್ರಯಾಣಿಸುವ ದೇಶದ ಎಲ್ಲಾ ಭಾಗಗಳಿಗೆ ಪ್ರಯಾಣಿಸಬೇಕಾಯಿತು. ತಂಡವು ನನಗೆ ನೀಡಿದ ಜವಾಬ್ದಾರಿಗಳನ್ನು ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ.

ಪ್ರಶ್ನೆ) ಆರ್‌ಸಿಬಿ ಆಟಗಾರರು ಮತ್ತು ಮ್ಯಾನೇಜ್ಮೆಂಟ್ ಜೊತೆಗೆ ನಿಮ್ಮ ಒಡನಾಟ ಹೇಗಿತ್ತು?
ಉ) ತಂಡದ ಅಭ್ಯಾಸ ಅವಧಿಯಲ್ಲಿ ನೆಟ್ ಬೌಲರ್ ಆಗಿ ಆಯ್ಕೆಯಾದಾಗ ಆಟಗಾರರು ಮತ್ತು ತರಬೇತುದಾರರನ್ನು ಮೆಚ್ಚಿಸಲು ಒಂದು ಒಳ್ಳೆಯ ಅವಕಾಶ ಸಿಕ್ಕಿತು. ಎಲ್ಲರೂ ಕೂಡ ನನ್ನ ಸ್ಪಿನ್ ಬೌಲಿಂಗ್ ನಿಂದ ಪ್ರಭಾವಿತರಾಗಿದ್ದಾರೆ. ಇದು ನನ್ನಂತಹ ಯುವ ಪ್ರತಿಭೆಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಮುಖ ವೇದಿಕೆಯಾಗಿತ್ತು. ದೇಶಿಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಆಟಗಾರರ ವಿರುದ್ಧ ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಆರ್‌ಸಿಬಿ ವೇದಿಕೆಯನ್ನು ಒದಗಿಸಿದೆ. ಇಲ್ಲಿ ಸಿಕ್ಕಿದ ಅನುಭವದಿಂದ ನನ್ನ ಕೌಶಲ್ಯಗಳು ಅಭಿವೃದ್ಧಿ ಹೊಂದಬಹುದು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿದ ನಮ್ಮ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಆರ್‌ಸಿಬಿ ಮ್ಯಾನೇಜ್ಮೆಂಟ್ ನನಗೆ ಉಜ್ವಲ ಭವಿಷ್ಯವನ್ನು ಆಶಿಸಿದರು. ಅವರೆಲ್ಲರೂ ತುಂಬಾ ಫ್ರೆಂಡ್ಲಿ ಆಗಿದ್ದರು. ನನ್ನ ಕೌಶಲ್ಯಗಳನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂದು ಹೇಳಿಕೊಟ್ಟಿದ್ದಾರೆ. ತಂಡವು ನನ್ನನ್ನು ಸೂಕ್ಷ್ಮವಾಗಿ ಗಮನಿಸಿದೆ ಮತ್ತು ಫ್ರಾಂಚೈಸ್ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ವಿಶೇಷವಾಗಿ ಈ ಬಾರಿಯ ನನ್ನ ಹುಟ್ಟುಹಬ್ಬ RCB ಜೊತೆ ಆಚರಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಅದೊಂದು ಅವಿಸ್ಮರಣೀಯ ಕ್ಷಣ.

ಪ್ರಶ್ನೆ) ಐಪಿಎಲ್ ನಲ್ಲಿ ಆಡಬೇಕು ಎನ್ನುವ ಆಸೆ ಏನಾದರೂ ಇದೆಯೇ?
ಉ) ಖಂಡಿತ. ನಾನು ಈ ಬಾರಿಯ ಐಪಿಎಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಟ್ರಯಲ್ಸ್ ಕೂಡ ನೀಡಿದ್ದೆ. ಆದರೆ ದುರದೃಷ್ಟವಶಾತ್ ಹರಾಜಿನಲ್ಲಿ ಆಯ್ಕೆ ಆಗಿಲ್ಲ. ಮುಂದೆ ಮತ್ತೆ ಪ್ರಯತ್ನಿಸುವೆ ಮತ್ತು ಆಯ್ಕೆಗೊಳ್ಳುವೆ ಎಂಬ ವಿಶ್ವಾಸ ನನಗಿದೆ.
ಈ ಸಲ ನಾನು ಆರ್‌ಸಿಬಿ ಜೊತೆ ನೆಟ್ ಬೌಲರ್ ಆಗಿದ್ದೆ. ತಂಡವು ನನ್ನನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಿದಾಗ, ಅವರು ಅಭ್ಯಾಸ ಪಂದ್ಯಗಳಲ್ಲಿ ನನಗೆ ಅವಕಾಶಗಳನ್ನು ನೀಡಿದ್ದಾರೆ. ಅಲ್ಲಿ ನಾನು ನನ್ನ ಸಾಮರ್ಥ್ಯವನ್ನು ತೋರಿಸಿದ್ದೇನೆ ಮತ್ತು ಪ್ರದರ್ಶನ ನೀಡಿದ್ದೇನೆ. ಆರ್‌ಸಿಬಿಯಿಂದಾಗಿ ಒಳ್ಳೆಯ ಅನುಭವ ಸಿಕ್ಕಿದೆ.ಬಹಳಷ್ಟು ಕಲಿತಿದ್ದೇನೆ. ಮುಂದೆ ನನ್ನ ಆಟದ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮುಂದಿನ ವರ್ಷ ನನಗೆ ಅವಕಾಶ ಸಿಗಬಹುದು ಎಂಬ ಭರವಸೆ ಇದೆ.
ಇದಕ್ಕೂ ಮೊದಲು ಮಂಗಳೂರು ವಲಯವನ್ನು ಪ್ರತಿನಿಧಿಸಿದ ದೀಪಕ್ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು ಮತ್ತು ತಮ್ಮ ಸ್ಪಿನ್ ಬೌಲಿಂಗ್ ನಿಂದ ವ್ಯಾಪಕವಾಗಿ ಜನಪ್ರಿಯರಾಗಿದ್ದರು.ಕೆಎಸ್ ಸಿಎ ಆಯೋಜಿಸಿದ್ದ 25 ವರ್ಷದೊಳಗಿನವರ ವಲಯ ಟೂರ್ನಿಯಲ್ಲಿ ಬೌಲಿಂಗ್ ಮಾಡಿದ ದೀಪಕ್ ಅದ್ಭುತ ನಿಯಂತ್ರಣ ಹಾಗೂ ಪ್ರಭಾವಿ ಪ್ರದರ್ಶನದ ಮೂಲಕ ಅತ್ಯುತ್ತಮ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಗಮನ ಸೆಳೆದ್ದಿದ್ದರು. ಶಾಲಾ ಕಾಲೇಜು ದಿನಗಳಿಂದಲೇ ಹಾರ್ಡ್ ಬಾಲ್ ತರಬೇತಿ ಪಡೆಯುತ್ತಿದ್ದ ದೀಪಕ್, ಅಂತರ್ ಕಾಲೇಜು ಟೂರ್ನಿಗಳಲ್ಲಿ ಟ್ರಂಪ್ ಕಾರ್ಡ್ ಬೌಲರ್ ಆಗಿ ಕೆಲಸ ಮಾಡಿದ್ದಾರೆ. ಇಂಜಿನಿಯರಿಂಗ್ ಓದುತ್ತಿದ್ದಾಗ ಪಂದ್ಯಾವಳಿಯೊಂದರಲ್ಲಿ ದೀಪಕ್ ಗಾಯಗೊಂಡು ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದಾಗ್ಯೂ, ಕ್ರಿಕೆಟಿಗನಾಗಿ ದೊಡ್ಡದಾಗಿ ಮಾಡುವ ತನ್ನ ಕನಸನ್ನು ನನಸಾಗಿಸುವ ಹಾದಿಯಲ್ಲಿ ಅವರು ಅದನ್ನು ಎಂದಿಗೂ ಬಿಡಲಿಲ್ಲ. ಗಮನಾರ್ಹವಾಗಿ, ದೀಪಕ್ ಟೆನಿಸ್ ಬಾಲ್ ಕ್ರಿಕೆಟ್ ಅನ್ನು ಆಡಿದವರು. ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ದೀಪಕ್ ಅವರು ತುಲನಾತ್ಮಕವಾಗಿ ಅಪರಿಚಿತ ಆಟಗಾರರಾಗಿದ್ದರು, ವೆಂಕಟರಮಣ ಪಿತ್ರೋಡಿಯ ಪ್ರವೀಣ್ ಪಿತ್ರೋಡಿ ಹಾಗೂ ಉಡುಪಿಯ ಹಿರಿಯ ಕೋಚ್ ಆಗಿರುವಂತಹ ಇಬ್ರಾಹಿಂ ಆತ್ರಾಡಿ ಇವರುಗಳು ದೀಪಕ್ ಅಲೆವೂರು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಪತ್ತೆಹಚ್ಚಲು ಮತ್ತು ಬೆಳಕಿಗೆ ತರಲು ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಿದರು. ವೀರಕೇಸರಿ ಅಲೆವೂರು ತಂಡದ ಖಾಯಂ ಆಟಗಾರ ದೀಪಕ್ ಏಕೆ ಸ್ಪೋರ್ಟ್ಸ್ ಉಡುಪಿ, ರಿಯಲ್ ಫೈಟರ್ಸ್ ಮಲ್ಪೆ ತಂಡಗಳಲ್ಲಿ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಪ್ರತಿನಿಧಿಸಿದ್ದಾರೆ.
ಒಟ್ಟಾರೆಯಾಗಿ, ಉಡುಪಿ ಮೂಲದ ಆಟಗಾರ ದೀಪಕ್ ದೇವಾಡಿಗ ಇನ್ನೂ ಹೆಚ್ಚಿನ ಪಂದ್ಯಗಳನ್ನು ಆಡಿ, ಮುಂಬರುವ ಪಂದ್ಯಗಳಲ್ಲಿ ವಿಕೆಟ್‌ಗಳ ಸಾಧನೆಗಳನ್ನು ಮಾಡಿ, ಸುದೀರ್ಘ ಸ್ವರೂಪದಲ್ಲಿ ಗಮನಿಸಬೇಕಾದ ವ್ಯಕ್ತಿಯಾಗಿ ವೃತ್ತಿಜೀವನದ ಯೋಗ್ಯ ದಾಖಲೆಯನ್ನು ಹೊಂದಲಿ.