ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

ಮಂಗಳೂರು, ಜುಲೈ 2: ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಆಶ್ರಯದಲ್ಲಿ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯು ಬುಧವಾರ ನಗರದ ಕೊಟ್ಟಾರ ಪಡುಕೋಡಿಯಲ್ಲಿರುವ ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿಯಲ್ಲಿ ಶುಭಾರಂಭಗೊಂಡಿತು.

ಪಂದ್ಯಾವಳಿಯ ಮೊದಲ ದಿನ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳೊಂದಿಗೆ ಸ್ಪರ್ಧೆಗಳು ಆರಂಭಗೊಂಡು, ಬಳಿಕ 19 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗ, ಪುರುಷರ ಸಿಂಗಲ್ಸ್ ಮತ್ತು ಎನ್‌ಎಂಎಸ್ ವಿಭಾಗಗಳ ಪಂದ್ಯಗಳು ನಡೆಯಿತು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ವಹಿಸಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಟಗಾರರಿಗೆ ಶುಭ ಹಾರೈಸಿದರು. ಎಲ್ಲಾ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಯಶಸ್ಸು ಸಾಧಿಸಲಿ ಹಾಗೂ ಮಂಗಳೂರಿನಲ್ಲಿ ಆಹ್ಲಾದಕರ ಅನುಭವ ಹೊಂದಲಿ ಎಂದು ಆಶಿಸಿದರು.

ಸೇಂಟ್ ಥೆರೇಸಾ ಶಾಲೆಯ ಕರಸ್ಪಾಂಡೆಂಟ್ ಸಿಸ್ಟರ್ ಶೈಲಾ ಮಾತನಾಡಿ, ಗೆಲುವು-ಸೋಲು ಕ್ರೀಡೆಯ ಒಂದು ಭಾಗವಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ನಿರಂತರ ಪ್ರಯತ್ನ ಮಾಡುವ ಪ್ರತಿಯೊಬ್ಬ ಆಟಗಾರರೂ ಚಾಂಪಿಯನ್‌ಗಳೇ ಎಂದು ಹೇಳಿದರು. ಕ್ರೀಡಾಪಟುಗಳು ಪಂದ್ಯಗಳಲ್ಲಿ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವ ಹಾಗೂ ಜೀವನದಲ್ಲಿಯೂ ವಿಜಯಿಗಳಾಗಬೇಕು ಎಂದು ಅವರು ಕರೆ ನೀಡಿದರು.

ಸೇಂಟ್ ಥೆರೇಸಾ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್, ಎಲ್ಲ ಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದು, ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪ್ರೇರೇಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿ, ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *