ಅರಸೀಕೆರೆಯಲ್ಲಿ ಲೆಜೆಂಡ್ಸ್ ಟ್ರೋಫಿ–2025 ರಾಜ್ಯಮಟ್ಟದ 40+ ಲೆಜೆಂಡ್ ಕ್ರಿಕೆಟ್ ಟೂರ್ನಿ ಯಶಸ್ವಿ
ಅರಸೀಕೆರೆ:
ಫ್ರೆಂಡ್ಸ್ ಕ್ರಿಕೆಟ್ ಕ್ಲಬ್, ಅರಸೀಕೆರೆ ಇವರ ಆಶ್ರಯದಲ್ಲಿ ಆಯೋಜಿಸಲಾದ ಲೆಜೆಂಡ್ಸ್ ಟ್ರೋಫಿ–2025 ರಾಜ್ಯಮಟ್ಟದ 40 ವರ್ಷ ಮೇಲ್ಪಟ್ಟ ಲೆಜೆಂಡ್ ಕ್ರಿಕೆಟ್ ಟೂರ್ನಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅನುಭವಿ ಆಟಗಾರರು ಟೂರ್ನಿಗೆ ವಿಶೇಷ ಮೆರುಗನ್ನು ನೀಡಿದರು.
ಫೈನಲ್ ಪಂದ್ಯದಲ್ಲಿ ಯುನೈಟೆಡ್ ಕಿಂಗ್ಸ್, ಬೆಂಗಳೂರು ತಂಡವು ಶಿಸ್ತುಬದ್ಧ ಆಟ ಪ್ರದರ್ಶಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ವಿಜೇತ ತಂಡಕ್ಕೆ ರೂ.1 ಲಕ್ಷ ನಗದು ಬಹುಮಾನ ನೀಡಲಾಯಿತು. ಆತಿಥೇಯ ಫ್ರೆಂಡ್ಸ್, ಅರಸೀಕೆರೆ ತಂಡವು ಫೈನಲ್‌ನಲ್ಲಿ ಪೈಪೋಟಿ ನೀಡಿದರೂ ರನ್ನರ್ಸ್‌ಅಪ್ ಆಗಿ ರೂ.50 ಸಾವಿರ ನಗದು ಬಹುಮಾನ ಪಡೆದುಕೊಂಡಿತು.

ಮೂರನೇ ಸ್ಥಾನವನ್ನು ಫಿಶರ್‌ಮೆನ್, ಮಲ್ಪೆ ತಂಡ ಪಡೆದುಕೊಂಡು ರೂ.10,000 ನಗದು ಬಹುಮಾನ ಪಡೆದರೆ, ನಾಲ್ಕನೇ ಸ್ಥಾನವನ್ನು ಅಟ್ಯಾಕರ್ಸ್, ಅರಸೀಕೆರೆ ತಂಡ ಪಡೆದುಕೊಂಡು ರೂ.10,000 ನಗದು ಬಹುಮಾನ ಗಳಿಸಿತು.
ವೈಯಕ್ತಿಕ ಪ್ರಶಸ್ತಿಗಳಲ್ಲಿ, ಅತ್ಯುತ್ತಮ ಪ್ರದರ್ಶನ ನೀಡಿದ ಮಹೇಂದ್ರ ಸಿಂಗ್ ಮ್ಯಾಗಿ ಅವರಿಗೆ ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಗಳು ಲಭಿಸಿದವು.
ಶಬರಿ ಅವರು ತಮ್ಮ ಚುರುಕಾದ ಫೀಲ್ಡಿಂಗ್ ಮೂಲಕ ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಪಡೆದುಕೊಂಡರು. ಫ್ರೆಂಡ್ಸ್ ಅರಸೀಕೆರೆ ತಂಡದ ಇಮ್ರಾನ್ ಅಲಿ ಅವರು ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿ ಬೆಸ್ಟ್ ಬೌಲರ್ ಪ್ರಶಸ್ತಿಗೆ ಭಾಜನರಾದರೆ, ಸಂಪೂರ್ಣ ಟೂರ್ನಿಯಲ್ಲಿನ ಸತತ ಸಾಧನೆಗಾಗಿ ಅವರಿಗೆ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯೂ ಲಭಿಸಿತು.

ಸಮಾರೋಪ ಸಮಾರಂಭದಲ್ಲಿ ಗಣ್ಯ ಅತಿಥಿಗಳು, ಆಯೋಜಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು, ಆಟಗಾರರನ್ನು ಅಭಿನಂದಿಸಿದರು. ಆಯೋಜಕರು ಟೂರ್ನಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅರಸೀಕೆರೆ ಶಾಸಕರಾದ ಶ್ರೀಯುತ ಶಿವಲಿಂಗೇ ಗೌಡರು ಹಾಗೂ ಗಣ್ಯ ಅತಿಥಿಗಳು ಬಹುಮಾನ ವಿತರಿಸಿದರು.

ಸ್ಪೋರ್ಟ್ಸ್ ಕನ್ನಡ ಮತ್ತು M-ಸ್ಪೋರ್ಟ್ಸ್ ಚಾನೆಲ್ ಗಳಲ್ಲಿ ಈ ಪಂದ್ಯಾಟದ ನೇರ ಪ್ರಸಾರ ಬಿತ್ತರವಾಯಿತು.