ಅವಕಾಶಗಳು ಸಿಗುವ ಹೊತ್ತಿಗೆ ನಮ್ಮವರು ನತದೃಷ್ಟರಾಗಿ ಬಿಡುತ್ತಾರೆ.. ಮಾಡದ ತಪ್ಪಿಗೆ ಹರಕೆಯ ಕುರಿಗಳಾಗುತ್ತಾರೆ.
ರೋಹಿತ್ ಶರ್ಮಾ ಇರದಿದ್ದರೆ ಶ್ರೀಲಂಕಾ ವಿರುದ್ಧ ಭಾರತ ಏಕದಿನ ತಂಡವನ್ನು ಮುನ್ನಡೆಸುವವನು ನಮ್ಮ ರಾಹುಲ್ ಆಗಿರಬೇಕಿತ್ತು. ಆದರೆ ರೋಹಿತ್ ಬಂದ.. ಸಹಜವಾಗಿಯೇ ನಾಯಕತ್ವ ಅವನದ್ದಾಯಿತು.
ಹೋಗಲಿ.., ಉಪನಾಯಕನ ಸ್ಥಾನವಾದರೂ ರಾಹುಲ್’ಗೆ ಸಿಕ್ಕಿತಾ..? ಇಲ್ಲ.. ರಾಹುಲ್ ಬದಲು ಪಂಜಾಬ್’ನ ಶುಭಮನ್ ಗಿಲ್’ಗೆ ಭಾರತ ಏಕದಿನ ತಂಡದ ಉಪನಾಯಕನ ಪಟ್ಟ ಕಟ್ಟಲಾಗಿದೆ. ಬಹುಶಃ long term plan ಇರಬಹುದು. ಆದರೆ ರಾಹುಲ್ ಮಾಡಿದ ತಪ್ಪೇನು..?
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜರಂಥಾ ಅನುಭವಿಗಳು ಇಲ್ಲದಿದ್ದಾಗಲೂ ಏಕದಿನ ಸರಣಿಯನ್ನು ಗೆಲ್ಲಿಸಿದವನು ರಾಹುಲ್.
ದಕ್ಷಿಣ ಆಫ್ರಿಕಾ ತಂಡವನ್ನು ಅವರನ್ನೇ ನೆಲದಲ್ಲಿ ಹೊಡೆದು ಹಾಕುವುದು ಅಷ್ಟು ಸುಲಭವಲ್ಲ.. ಹೊಸ ಹುಡುಗರನ್ನು ಆ ಕೆಲಸವನ್ನು ಕಟ್ಟಿಕೊಂಡು ಸುಲಭವಾಗಿ ಮಾಡಿ ಮುಗಿಸಿದ್ದ ರಾಹುಲ್.
ಕೆ.ಎಲ್ ರಾಹುಲ್ ಒಳ್ಳೆಯ ಆಟಗಾರನಷ್ಟೇ ಅಲ್ಲ, ಚಾಣಾಕ್ಷ ನಾಯಕ ಕೂಡ ಹೌದು. ಅದನ್ನ ಈಗಾಗಲೇ ಆತ ಸಾಬೀತು ಮಾಡಿದ್ದಾನೆ. ರೋಹಿತ್ ಶರ್ಮಾ ನಂತರ ಭಾರತ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುಂದಿನ 3-4 ವರ್ಷಗಳ ಕಾಲ ಮುನ್ನಡೆಸಲು ರಾಹುಲ್’ಗಿಂತ ಒಳ್ಳೆಯ ಆಯ್ಕೆ ಯಾರಿದ್ದಾರೆ..?
ನಾಯಕನಿಗೆ ಇರಬೇಕಾದ ತಾಳ್ಮೆಯಿದೆ, ಸಂಯಮವಿದೆ.. ಕ್ರಿಕೆಟಿಂಗ್ brain ಇದೆ. ಆತನ ವ್ಯಕ್ತಿತ್ವಕ್ಕೆ ಜೊತೆಗಿರುವವರು ಗೌರವ ಕೊಡುತ್ತಾರೆ. ಎಲ್ಲಾ ಸನ್ನಿವೇಶಗಳಲ್ಲಿ ಆಡಬಲ್ಲ versatile cricketer. ನಾಯಕನಾಗಲು ಇದಕ್ಕಿಂತ ಅರ್ಹತೆ ಇನ್ನೇನು ಬೇಕು.? ಆದರೆ ಕನಿಷ್ಠ ಉಪನಾಯಕನ ಪಟ್ಟವೂ ಸಿಕ್ಕಿಲ್ಲವೆಂದರೆ, ವಯಸ್ಸಿನ ಕಾರಣವೇ..?
ಮುಂಬೈನ ಸೂರ್ಯಕುಮಾರ್ ಯಾದವ್ 34ನೇ ವರ್ಷದಲ್ಲಿ ಭಾರತ ಟಿ20 ತಂಡದ ನಾಯಕನಾಗುತ್ತಾನೆ ಎಂದರೆ, 32 ವರ್ಷದ ರಾಹುಲ್ ಉಪನಾಯಕ ಯಾಕಾಗಬಾರದು..?
ರಾಹುಲ್ ದ್ರಾವಿಡ್ ಅವರಿಗೂ ಭಾರತ ತಂಡದಲ್ಲಿ ಇಂಥದ್ದೇ ಅನ್ಯಾಯಗಳು ಸಾಕಷ್ಟು ಬಾರಿ ಆಗಿದ್ದಿದೆ. ತಮ್ಮದಲ್ಲದ ತಪ್ಪಿಗೆ ದ್ರಾವಿಡ್ ಹರಕೆಯ ಕುರಿಯಾಗಿದ್ದೂ ಇದೆ. 2007ರ ವಿಶ್ವಕಪ್ ಸೋಲಿನಲ್ಲಿ ಸಚಿನ್, ಗಂಗೂಲಿ ಸೇರಿದಂತೆ ಎಲ್ಲರದ್ದೂ ಸಮಾನ ಪಾತ್ರವಿತ್ತು.. ಆದರೆ ಸೋಲಿಗೆ ಹೊಣೆ ಮಾಡಿದ್ದು ದ್ರಾವಿಡ್ ಅವರನ್ನು.. ನಿಜ, ನಾಯಕನಾದವನು ಹೊಣೆ ಹೊರಲೇಬೇಕು.. ಹಾಗಂತ ಇದ್ದ ಬದ್ದ ತಪ್ಪನ್ನೆಲ್ಲಾ ನಾಯಕನ ಮೇಲೆಯೇ ಹೊರಿಸಿದರೆ..? ರಾಹುಲ್ ದ್ರಾವಿಡ್ ಅವರಿಗೆ ಅವತ್ತು ಆಗಿದ್ದು ಅದೇ..
ಇನ್ನು ಕೆ.ಎಲ್ ರಾಹುಲ್.. 2023ರ ವಿಶ್ವಕಪ್ ಫೈನಲ್’ನಲ್ಲಿ ಭಾರತದ ಸೋಲಿಗೆ ರಾಹುಲ್’ನನ್ನ ಹೊಣೆ ಮಾಡಲಾಗಿತ್ತು. ಕಾರಣ, 107 ಎಸೆತಗಳಲ್ಲಿ 66 ರನ್ ಗಳಿಸಿದನೆಂದು. ಆದರೆ ಅದೇ ಇನ್ನಿಂಗ್ಸ್’ನಲ್ಲಿ ಸೂರ್ಯಕುಮಾರ್ ಯಾದವ್ ಹೇಗೆ ಆಡಿದ್ದ, ರವೀಂದ್ರ ಜಡೇಜ ಆಟ ರಾಹುಲ್’ಗಿಂತ ಅದ್ಯಾವ ದೃಷ್ಠಿಕೋನದಲ್ಲಿ ಉತ್ತಮವಾಗಿತ್ತೋ ತಿಳಿಯದು.. ಆದರೆ ಹರಕೆಯ ಕುರಿಯಾಗಿದ್ದು ಮಾತ್ರ ನಮ್ಮ ಕನ್ನಡಿಗ.
ರಾಹುಲ್’ನನ್ನು leadership schemeನಿಂದ ಸದ್ಯಕ್ಕೆ ಕೈಬಿಡಲು ಇದೂ ಕಾರಣವಿರಬಹುದು. ಇತ್ತೀಚಿನ ವರ್ಷಗಳಲ್ಲಿ ರಾಹುಲ್ ಪದೇ ಪದೇ ಗಾಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ. ಕಳೆದ 8 ವರ್ಷಗಳಲ್ಲಿ ರಾಹುಲ್ 10ಕ್ಕೂ ಹೆಚ್ಚು ಬಾರಿ ಗಾಯಗಳಿಂದ ಬಳಲಿದ್ದಾನೆ.
ಇಲ್ಲವಾದರೆ, 2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಿದ್ದವನು ಇಷ್ಟು ಹೊತ್ತಿಗೆ 70ರಿಂದ 80 ಟೆಸ್ಟ್, 150 ಏಕದಿನ ಪಂದ್ಯಗಳನ್ನಾಡಿರಬೇಕಿತ್ತು. ಆದರೆ ರಾಹುಲ್ 10 ವರ್ಷಗಳಲ್ಲಿ ಆಡಿರುವುದು 50 ಟೆಸ್ಟ್, 75 ಏಕದಿನ, 72 ಟಿ20 ಪಂದ್ಯಗಳನ್ನಷ್ಟೇ..
ಪದೇ ಪದೇ ಗಾಯಕ್ಕೊಳಗಾಗುತ್ತಾನೆ ಎಂಬುದೇ ರಾಹುಲ್’ಗೆ ಹಿನ್ನಡೆಯಾದಂತೆ ಕಾಣುತ್ತಿದೆ.