ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದಾಗ ಬಹುಶಃ ಖುಷಿ ಪಟ್ಟವನು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಕಾರಣವೂ ಇತ್ತು. ರೋಹಿತ್ ಜಾಗ ಖಾಲಿ ಮಾಡಿದರೆ ಟಿ20 ತಂಡದ ನಾಯಕತ್ವಕ್ಕೆ ಅವನೇ ವಾರಸ್ದಾರನಾಗಿದ್ದ.. ಆದರೆ ಕ್ರಿಕೆಟ್ ದೇವತೆ ಬರೆದ ಶಾಸನಕ್ಕೆ ಪಾಂಡ್ಯ ದಂಗಾಗಿ ಕೂತಿದ್ದಾನೆ.
ನಾಯಕನಾಗುವ ಮಾತು ಪಕ್ಕಕ್ಕಿರಲಿ.. ಪಾಂಡ್ಯನ ಮುಕುಟದಲ್ಲಿದ್ದ ಉಪನಾಯಕನ ಕಿರೀಟವನ್ನೂ ಕಿತ್ತುಕೊಳ್ಳಲಾಗಿದೆ. ಇನ್ನು ಮುಂದೆ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಸಾಮಾನ್ಯ ಆಟಗಾರನಷ್ಟೇ..
ಹಾರ್ದಿಕ್ ಪಾಂಡ್ಯ ನಿಸ್ಸಂದೇಹವಾಗಿ ಒಬ್ಬ ಅದ್ಭುತ ಕ್ರಿಕೆಟಿಗ. ಆದರೆ ಅದನ್ನು ಪಕ್ಕಕ್ಕಿಟ್ಟು ನೋಡಿದರೆ ಆತನಲ್ಲಿ ಮಾದರಿ ಎನಿಸುವಂಥಾ ಯಾವ ಗುಣಗಳೂ ಕಾಣುವುದಿಲ್ಲ. ನನಗೆ ಗೊತ್ತಿರುವ ಪ್ರಕಾರ ಪಾಂಡ್ಯನನ್ನು ಮನಸ್ಸಿನಿಂದ ಇಷ್ಟ ಪಡುವ ಒಬ್ಬ ಆಟಗಾರನೂ ಭಾರತ ತಂಡದಲ್ಲಿಲ್ಲ.
2021..
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡ ತೊರೆದು ಗುಜರಾತ್ ಟೈಟನ್ಸ್ ನಾಯಕನಾಗಿ ಹೋದ ಸಮಯ. ಅಸಲಿಗೆ ಪಾಂಡ್ಯ ಮುಂಬೈ ತಂಡದ ನಾಯಕತ್ವ ಕೇಳಿದ್ದನಂತೆ. ‘’ರೋಹಿತ್ ಶರ್ಮಾ ಇರುವವರೆಗೆ ಅದು ಸಾಧ್ಯವಾಗದ ಮಾತು’’ ಎಂದಿದ್ದ ಆಕಾಶ್ ಅಂಬಾನಿ.
ನಾಯಕತ್ವದ ಬೆನ್ನು ಬಿದ್ದಿದ್ದ ಪಾಂಡ್ಯ ಐಪಿಎಲ್’ನ ಹೊಸ ತಂಡ ಗುಜರಾತ್ ಟೈಟನ್ಸ್ ಸೇರಿಕೊಂಡ.. ಮೊದಲ ಟೂರ್ನಿಯಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ.. ಮರು ವರ್ಷ ಮತ್ತೆ ಫೈನಲ್. ಐಪಿಎಲ್’ನಲ್ಲಿ ಯಾವ ತಂಡಕ್ಕೂ ಸಿಗದ ಅದ್ಧೂರಿ ಆರಂಭ ಪಾಂಡ್ಯ ನಾಯಕತ್ವದ ಗುಜರಾತ್ ತಂಡಕ್ಕೆ ಸಿಕ್ಕಿತ್ತು.
ಕಾಲು ನೆಲದ ಮೇಲೆ ನಿಲ್ಲಲಿಲ್ಲ ಪಾಂಡ್ಯನಿಗೆ.. ‘’ಇನ್ನು ನನ್ನದೇ ಆಟ’’ ಎಂದುಕೊಂಡ. ಬಿಸಿಸಿಐ ಬಾಸ್ ಜಯ್ ಶಾ ಬೇರೆ ಗುಜರಾತ್’ನವನು. ಭಾರತ ತಂಡದಲ್ಲೂ ಪಾಂಡ್ಯನಿಗೆ ಪ್ರಾಮುಖ್ಯತೆ ಸಿಗಲಾರಂಭಿಸಿತು. ಟಿ20 ತಂಡದ ನಾಯಕತ್ವ ಪಾಂಡ್ಯ ಹೆಗಲೇರಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20 ತಂಡಕ್ಕೆ ಬೇಡ ಎನ್ನುವಷ್ಟರ ಮಟ್ಟಿಗೆ ಬೆಳೆದು ಬಿಟ್ಟ ಹಾರ್ದಿಕ್ ಪಾಂಡ್ಯ.
ಪಾಂಡ್ಯನಿಗೆ ಭಾರತ ತಂಡದಲ್ಲಿ ಸಿಕ್ಕ ಪ್ರಾಮುಖ್ಯತೆ, ಗುಜರಾತ್ ತಂಡಕ್ಕೆ ಚಾಂಪಿಯನ್’ಷಿಪ್ ಗೆಲ್ಲಿಸಿಕೊಟ್ಟದ್ದನ್ನು ನೋಡಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿಗೂ ತಲೆ ತಿರುಗಿತು. ತಂಡಕ್ಕೆ 5 ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟವನೆಂಬುದನ್ನೂ ನೋಡದೆ ರೋಹಿತ್ ಶರ್ಮಾನನ್ನು ಪಕ್ಕಕ್ಕೆ ತಳ್ಳಿ ಹಾರ್ದಿಕ್ ಪಾಂಡ್ಯನಿಗೆ ಪಟ್ಟಾಭಿಷೇಕ ಮಾಡಿಯೇ ಬಿಟ್ಟ. ನೆನಪಿರಲಿ.. ರೋಹಿತ್ ಶರ್ಮಾನನ್ನು ಸೌಜನ್ಯಕ್ಕೂ ಒಂದು ಮಾತೂ ಕೇಳದೆ ಪಾಂಡ್ಯನಿಗೆ ಪಟ್ಟ ಕಟ್ಟಲಾಗಿತ್ತು.
ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯನನ್ನು ನಾಯಕನನ್ನಾಗಿ ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡವರು ಬಹುಶಃ ಇಬ್ಬರೇ.. ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ.. ಕಾರಣ, ಪಾಂಡ್ಯ ಪಟ್ಟಾಭಿಷೇಕ ಅವರದ್ದೇ ನಿರ್ಧಾರವಾಗಿತ್ತು. ನಾಯಕತ್ವಕ್ಕಾಗಿ ತಂಡವನ್ನು ತೊರೆದವನನ್ನು ವಾಪಸ್ ಕರೆದು ಪಟ್ಟ ಕಟ್ಟಿದ್ದನ್ನು ಯಾರು ತಾನೇ ಒಪ್ಪಲು ಸಾಧ್ಯ..? ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ವಾಪಸ್ ಬಂದಾಗ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅಸಹನೆ ಹೊರ ಹಾಕಿದ್ದು ಇದೇ ಕಾರಣಕ್ಕೆ..!
ಕಾಲಚಕ್ರ ಹೇಗೆ ತಿರುಗಿತು ನೋಡಿ..
ಮುಂಬೈ ತಂಡದಲ್ಲಿ ನಾಯಕತ್ವ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಭಾರತ ಟಿ20 ತಂಡದ ನಾಯಕನಾಗಿ ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ಟ. ಮುಂಬೈ ತಂಡದ ನಾಯಕತ್ವದ ನಿರೀಕ್ಷೆಯಲ್ಲಿದ್ದ ಸೂರ್ಯಕುಮಾರ್ ಯಾದವ್ ಈಗ ಹಾರ್ದಿಕ್ ಪಾಂಡ್ಯನನ್ನು overtake ಮಾಡಿ ಭಾರತ ಟಿ20 ತಂಡದ full time skipper ಆಗಿ ಆಯ್ಕೆಯಾಗಿದ್ದಾನೆ. ಇದರ ಹಿಂದಿನ ಸೂತ್ರಧಾರ ತಂಡದ ಹೊಸ ಕೋಚ್ ಗೌತಮ್ ಗಂಭೀರ್. ಗಾಡ್ ಫಾದರ್ ಜಯ್ ಶಾ ಕೂಡ ಈ ಬಾರಿ ಪಾಂಡ್ಯನ ನೆರವಿಗೆ ಬಂದಿಲ್ಲ..!
‘’ಮಾಡಿದ್ದುಣ್ಣೋ ಮಹಾರಾಯ’’ ಎಂಬ ಮಾತು ಅದೆಷ್ಟು ನಿಜ..! ಜಯ್ ಶಾ ಬಿಸಿಸಿಐ secretary ಆದ ಕೂಡಲೇ ಭಾರತ ಏಕದಿನ ಹಾಗೂ ಟಿ20 ತಂಡದ ನಾಯಕತ್ವ ಪಡೆಯಲು ಇಲ್ಲದ ರಾಜಕೀಯ ಮಾಡಿದ್ದ ಪಾಂಡ್ಯನಿಗೆ ಕಾಲವೇ ಉತ್ತರ ಕೊಟ್ಟಿದೆ. ಮುಂಬೈ ಆಟಗಾರರಿಗೆ ಚಳ್ಳೆಹಳ್ಳು ತಿನ್ನಿಸಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ದಕ್ಕಿಸಿಕೊಂಡಿದ್ದ ಪಾಂಡ್ಯ ಈಗ ನಾಯಕತ್ವದ ಪೈಪೋಟಿಯಲ್ಲಿ ಅದೇ ಮುಂಬೈನ ಇಬ್ಬರು ಆಟಗಾರರ ಮುಂದೆ ಸೋತು ಬಿಟ್ಟಿದ್ದಾನೆ.