ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಕ್ರಿಕೆಟ್ ಜಿದ್ದಾಜಿದ್ದಿಯ ಕಥೆ ಇಡೀ ಜಗತ್ತಿಗೇ ಗೊತ್ತು.
ಈ ಇಬ್ಬರೂ ಆಟಗಾರರು ಒಂದು ಕಾಲದಲ್ಲಿ ಪರಸ್ಪರ ಕತ್ತಿನ ಪಟ್ಟಿ ಹಿಡಿದು ಹೊಡೆದಾಡುವಷ್ಟರ ಮಟ್ಟಿಗೆ ಹೋಗಿದ್ದವರು. 2013ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರ ಮಧ್ಯೆ ದೆಹಲಿಯ ರಜತ್ ಭಾಟಿಯಾ ಬಾರದೇ ಇದ್ದಿದ್ದರೆ ಕೈ ಕೈ ಮಿಲಾಯಿಸುತ್ತಿದ್ದರೋ ಏನೋ..!
ಆಗ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ (ಈಗಲೂ ಕೂಡ). ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ. ಕೆಕೆಆರ್ ಬೌಲರ್ ಲಕ್ಷ್ಮೀಪತಿ ಬಾಲಾಜಿ ಬೌಲಿಂಗ್’ನಲ್ಲಿ ಔಟಾಗಿ ಪೆವಿಲಿಯನ್’ನತ್ತ ಸಾಗುತ್ತಿದ್ದ ವಿರಾಟ್ ಕೊಹ್ಲಿ ಅವರನ್ನು ಗೌತಮ್ ಗಂಭೀರ್ ಕೆಣಕಿದ್ದು ಇಬ್ಬರ ಮಧ್ಯೆ ದೊಡ್ಡ ಘರ್ಷಣೆಗೆ ಕಾರಣವಾಗಿತ್ತು. ಗಂಭೀರ್ ವಿರುದ್ಧ ಆಕ್ರೋಶಗೊಂಡ ಕೊಹ್ಲಿ ಹತ್ತಿರ ಬರುತ್ತಿದ್ದಂತೆ ಗಂಭೀರ್ ಕೂಡ ಕೊಹ್ಲಿಯತ್ತ ಮುನ್ನುಗ್ಗಿ ಬಂದಿದ್ದರು. ಆಗ ಕೆಕೆಆರ್ ತಂಡದಲ್ಲಿದ್ದ ದೆಹಲಿಯವರೇ ಆದ ರಜತ್ ಭಾಟಿಯಾ ಇಬ್ಬರ ಮಧ್ಯೆ ನಿಂತು ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ದುಷ್ಮನಿ ಶುರುವಾಗಿತ್ತು.
ಇನ್ನು ಕಳೆದ ವರ್ಷದ ಐಪಿಎಲ್ ಟೂರ್ನಿಯ ವೇಳೆಯೂ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಜಟಾಪಟಿ ನಡೆದಿದ್ದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಮಧ್ಯೆ ಲಕ್ನೋದಲ್ಲಿ ನಡೆದ ಪಂದ್ಯದ ವೇಳೆ ಲಕ್ನೋ ಆಟಗಾರ ನವೀನ್ ಉಲ್ ಹಕ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಆಗ ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತನ್ನ ತಂಡದ ಆಟಗಾರನ ಪರವಾಗಿವಿರಾಟ್ ಕೊಹ್ಲಿ ಜೊತೆ ಜಗಳಕ್ಕೆ ನಿಂತಿದ್ದರು.
ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಿದ್ದಾಜಿದ್ದಿ ನೋಡಿದವರಿಗೆ ಈಗ ಇರುವ ಕುತೂಹಲ ಭಾರತ ತಂಡದಲ್ಲಿ ಇಬ್ಬರೂ ಒಟ್ಟಿಗೆ ಹೇಗೆ ಕೆಲಸ ಮಾಡುತ್ತಾರೆ ಎಂಬುದು. ಈ ಪ್ರಶ್ನೆಗೆ ಮೊದಲ ಉತ್ತರ ಸಿಕ್ಕಿದೆ.
ಭಾರತ ತಂಡ ಮುಂದಿನ ವಾರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಸಿಂಹಳೀಯರ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡದೆ ಇರಲು ನಿರ್ಧರಿಸಿದ್ದರು.
ಆದರೆ ಇದು ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಏಕದಿನ ಸರಣಿಯಾಗಿರುವ ಕಾರಣ, ಲಂಕಾ ವಿರುದ್ಧ ಆಡುವಂತೆ ವಿರಾಟ್ ಕೊಹ್ಲಿ ಅವರಲ್ಲಿ ಗಂಭೀರ್ ಮನವಿ ಮಾಡಿದ್ದರು. ಗಂಭೀರ್ ಮನವಿಗೆ ಸ್ಪಂದಿಸಿರುವ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಟಿ20 ವಿಶ್ವ ಚಾಂಪಿಯನ್ ನಾಯಕ ರೋಹಿತ್ ಶರ್ಮಾಗೂ ಗಂಭೀರ್ ಇದೇ ಮನವಿ ಮಾಡಿದ್ದು, ರೋಹಿತ್ ಕೂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.
ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ದೆಹಲಿಯವರು. ಭಾರತ ತಂಡಕ್ಕೆ ಆಯ್ಕೆಯಾಗುವ ಮುನ್ನ ದೇಶೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಮತ್ತು ಗಂಭೀರ್ ದೆಹಲಿ ಪರ ಜೊತೆಯಾಗಿ ಆಡಿದ್ದಾರೆ. ಆದರೆ ಒಂದೇ ನಾಡಿನಿಂದ ಬಂದಿರುವ ಕ್ರಿಕೆಟಿಗರ ಮಧ್ಯೆ ದುಷ್ಮನಿ ಬೆಳೆದದ್ದು ಕ್ರಿಕೆಟ್ ಪ್ರಿಯರ ಅಚ್ಚರಿಗೆ ಕಾರಣವಾಗಿತ್ತು. ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ನಂತರ ಇವರಿಬ್ಬರು ಹೇಗೆ ಒಂದೇ ತಂಡದಲ್ಲಿ ಹೊಂದಾಣಿಕೆಯಿಂದ ಹೋಗಲು ಸಾಧ್ಯ ಎಂಬ ಪ್ರಶ್ನೆ ಕ್ರಿಕೆಟ್ ಪ್ರಿಯರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಗಂಭೀರ್ ಉತ್ತರ ಕೊಟ್ಟಿದ್ದು, ವಿರಾಟ್ ಕೊಹ್ಲಿ ಅವರನ್ನು ಒಪ್ಪಿಸಿ ತಮ್ಮ ಮೊದಲ ಏಕದಿನ ಸರಣಿಯಲ್ಲಿ ಆಡುವಂತೆ ಮನವಿ ಮಾಡಿದ್ದಾರೆ. ಆ ಮನವಿಗೆ ಕೊಹ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಇಬ್ಬರೂ ಹೊಂದಾಣಿಕೆಯಿಂದ ಸಾಗುವ ಸುಳಿವು ಸಿಕ್ಕಿದೆ.