ಬಹುಶಃ ಕೆ.ಎಲ್ ರಾಹುಲ್ ಅವರಷ್ಟು ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ಗುರಿಯಾದ ಕ್ರಿಕೆಟಿಗ ಮತ್ತೊಬ್ಬನಿಲ್ಲ. ರಾಹುಲ್ ನಿಂತರೂ ಟೀಕೆ, ಕೂತರೂ ಟೀಕೆ. ಉತ್ತಮವಾಗಿ ಆಡಿದರೂ ಟೀಕೆಗಳ ಸುರಿಮಳೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಅವರನ್ನು ಆಯ್ಕೆ ಮಾಡಬಾರದೆಂಬ ತರ್ಕವಿಲ್ಲದ ವಿಶ್ಲೇಷಣೆಗಳು. ಅಂಥವರಿಗೆ ರಾಹುಲ್ ಆಟದಿಂದಲೇ ಉತ್ತರ ಕೊಟ್ಟಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತ್ಯಗೊಂಡ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಎ ಪರ ಗರಿಷ್ಠ ರನ್ ಸ್ಕೋರರ್ ಆಗಿ ರಾಹುಲ್ ಮೂಡಿ ಬಂದಿದ್ದಾರೆ. ಭಾರತ ಬಿ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್’ನಲ್ಲಿ 37 ರನ್ ಗಳಿಸಿದ್ದ ರಾಹುಲ್ 275 ರನ್ ಚೇಸಿಂಗ್ ವೇಳೆ 2ನೇ ಇನ್ನಿಂಗ್ಸ್’ನಲ್ಲಿ 57 ರನ್ ಗಳಿಸಿ ಪಂದ್ಯದಲ್ಲಿ ಒಟ್ಟು 94 ರನ್ ಕಲೆ ಹಾಕಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾದರು. ಶುಭಮನ್ ಗಿಲ್ ನಾಯಕತ್ವದ ಭಾರತ ಎ ತಂಡ ಭಾರತ ಬಿ ವಿರುದ್ಧ 76 ರನ್’ಗಳ ಸೋಲು ಅನುಭವಿಸಿತು. ದುಲೀಪ್ ಟ್ರೋಫಿ ಪಂದ್ಯದ ನಾಲ್ಕು ದಿನವೂ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ಕೆ.ಎಲ್ ರಾಹುಲ್ ಅವರಿಗೆ ಭರ್ಜರಿ ಬೆಂಬಲ ನೀಡಿದರು.