ಕರ್ನಾಟಕದಿಂದ ಸಾಕಷ್ಟು ಕ್ರಿಕೆಟಿಗರು ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಈ ವರ್ಷ ಒಟ್ಟು ಮೂವರು ಕ್ರಿಕೆಟಿಗರು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ. ಮೊದಲು ಆರ್.ಸಮರ್ಥ್, ನಂತರ ಡಿ.ನಿಶ್ಚಲ್ ಹಾಗೂ ಜೆ.ಸುಚಿತ್.
ಕರ್ನಾಟಕ ತಂಡದಲ್ಲಿ ಅವಕಾಶಗಳ ಕೊರತೆಯಿಂದಾಗಿ ಸಮರ್ಥ್ ಉತ್ತರಾಖಂಡ್ ತಂಡ ಸೇರಿದ್ದರೆ, ನಿಶ್ಚಲ್ ಮತ್ತು ಸುಚಿತ್ ನಾಗಾಲ್ಯಾಂಡ್ ತಂಡ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 13 ಮಂದಿ ಆಟಗಾರರು ಕರ್ನಾಟಕ ತಂಡವನ್ನು ತೊರೆದಿದ್ದಾರೆ. 2013-14ನೇ ಸಾಲಿನಲ್ಲಿ ಕರ್ನಾಟಕ ತಂಡದ ರಣಜಿ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮಿತ್ ವರ್ಮಾ, ಗಣೇಶ್ ಸತೀಶ್, ನಂತರದ ದಿನಗಳಲ್ಲಿ ರಾಬಿನ್ ಉತ್ತಪ್ಪ, ಆರ್.ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ, ಪವನ್ ದೇಶಪಾಂಡೆ, ಕರುಣ್ ನಾಯರ್, ಕೆ.ವಿ ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ರೋಹನ್ ಕದಂ ಕರ್ನಾಟಕವನ್ನು ತೊರೆದು ಅನ್ಯರಾಜ್ಯಗಳ ಪರ ಆಡಿದ್ದಾರೆ.
ಕರ್ನಾಟಕ ತಂಡದ ಮಾಜಿ ನಾಯಕ, ಅನುಭವಿ ಆಟಗಾರ ಮನೀಶ್ ಪಾಂಡೆ ಕೂಡ ಮುಂದಿನ ದಿನಗಳಲ್ಲಿ ಈ ಸಾಲಿಗೆ ಸೇರಿದರೆ ಅಚ್ಚರಿಯಿಲ್ಲ. ಮನೀಶ್ ಪಾಂಡೆಗೆ ಈ ವರ್ಷದ ದೇಶೀಯ ಕ್ರಿಕೆಟ್ ಋತುವೇ ಕರ್ನಾಟಕ ಪರ ಕೊನೆಯ ವರ್ಷ ಎನ್ನಲಾಗುತ್ತಿದೆ. ಈ ವರ್ಷವೇನಾದರೂ ಮನೀಶ್ ಪಾಂಡೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡದೆ, ಉತ್ತಮ ಪ್ರದರ್ಶನ ತೋರದೆ, ನಿರೀಕ್ಷೆಗಳನ್ನು ಹುಸಿಗೊಳಿಸಿದ್ದೇ ಹೌದಾದಲ್ಲಿ ಮುಂದಿನ ವರ್ಷ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
35 ವರ್ಷದ ಮನೀಶ್ ಪಾಂಡೆ 2008ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದ ಮೂಲಕ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ರಣಜಿ ಇನ್ನಿಂಗ್ಸ್’ನಲ್ಲೇ ಮಿಂಚಿದ್ದ ಮನೀಶ್ ಪಾಂಡೆ ಪ್ರಥಮ ಇನ್ನಿಂಗ್ಸ್’ನಲ್ಲಿ 64 ರನ್ ಗಳಿಸಿದ್ದರು. ವೃತ್ತಿಜೀವನದಲ್ಲಿ ಒಟ್ಟು 113 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಮನೀಶ್ ಪಾಂಡೆ 25 ಶತಕಗಳು ಹಾಗೂ 31 ಅರ್ಧಶತಗಳ ಸಹಿತ 51.21ರ ಸರಾಸರಿಯಲ್ಲಿ 7836 ರನ್ ಗಳಿಸಿದ್ದಾರೆ.
ಕರ್ನಾಟಕದ ಹಿರಿಯ ಆಫ್ ಸ್ಪಿನ್ ಆಲ್ರೌಂಡರ್ ಕೆ.ಗೌತಮ್ ಅವರನ್ನು ರಾಜ್ಯ ತಂಡದಿಂದ ಈಗಾಗಲೇ ಕೈ ಬಿಡಲಾಗಿದೆ. ಕಳೆದ ವರ್ಷ ರಣಜಿ ಟ್ರೋಫಿಗೆ ಗೌತಮ್ ಅವರನ್ನು ಪರಿಗಣಿಸಿರಲಿಲ್ಲ. ಈ ಬಾರಿ ರಾಜ್ಯ ತಂಡದ ಆಯ್ಕೆಗೆ ಮಾನದಂಡವೆಂದೇ ಬಿಂಬಿತವಾಗಿರುವ ಡಾ.ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಕರ್ನಾಟಕದ ನಾಲ್ಕೂ ತಂಡಗಳಲ್ಲಿ ಗೌತಮ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಇದನ್ನು ನೋಡಿದರೆ, ಈ ಬಾರಿ ಮೂರೂ ಫಾರ್ಮ್ಯಾಟ್’ನಲ್ಲಿ ಗೌತಮ್ ಅವರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಕರ್ನಾಟಕ ಕ್ರಿಕೆಟ್’ನಲ್ಲೀಗ ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಹರಿದು ಬರುತ್ತಿದೆ. ಸದ್ಯಕ್ಕೆ ತಂಡದಲ್ಲಿರುವ ಅನುಭವಿ ಆಟಗಾರರು ಇಬ್ಬರೇ.. ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ. ಇವರನ್ನು ಹೊರತು ಪಡಿಸಿದರೆ ಉಳಿದೆಲ್ಲರೂ ಹೊಸಬರೇ. ಕಳೆದ ವರ್ಷವಂತೂ ಸಾಲು ಸಾಲು ಹುಡುಗರಿಗೆ ರಣಜಿ ಪದಾರ್ಪಣೆಯ ಅವಕಾಶ ಸಿಕ್ಕಿತ್ತು. ಧೀರಜ್ ಜೆ.ಗೌಡ, ಹಾರ್ದಿಕ್ ರಾಜ್, ಕಿಶನ್ ಬೆದರೆ, ಕೆ.ಶಶಿಕುಮಾರ್, ಸುಜಯ್ ಸತೇರಿ, ರೋಹಿತ್ ಕುಮಾರ್ ಎ.ಸಿ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು.