ಮೊದಲ ಸುತ್ತಿನಲ್ಲೇ ಭಾರೀ ಹಣಾಹಣಿ. ಕುತೂಹಲ ಮೂಡಿಸುತ್ತಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್ ಪಂದ್ಯಆರಂಭ.
ಅರಬ್ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ಉಡುಪಿ ಸೂರಾಲು ಮೂಲದ ರಾಹುಲ್ ದ್ರಾವಿಡ್ ಅಭಿಮಾನಿ ವಿಠಲ್ ರಿಶಾನ್ ನಾಯಕ್ ಆಯೋಜಿಸುತ್ತಿರುವ ಮಿಸ್ಟರ್ ಕ್ರಿಕೆಟ್ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾಟವು ಬಹಳ ಬಿರುಸಿನಿಂದ ಜರಗುತ್ತಾ ಇದೆ.
ಮೊದಲ ಸುತ್ತಿನ ಪಂದ್ಯಾಟದಲ್ಲಿ ಟೆಕ್ನೋ ಟೈಟಾನ್ಸ್ ತಂಡವು ಬ್ಲೂಮಾಸ್ಟರ್ಸ್ ತಂಡದ ವಿರುದ್ಧ ನಾಲ್ಕು ವಿಕೆಟುಗಳ ಭರ್ಜರಿ ಜಯ ಗಳಿಸಿತು.ಮೊದಲು ಬ್ಯಾಟ್ ಮಾಡಿದ ಬ್ಲೂ ಮಾಸ್ಟರ್ಸ್ ತಂಡವು ಹದಿನೈದು ಓವರ್ ಗಳಲ್ಲಿ 107 ರನ್ ಗಳಿಸಿದರೆ ಇದನ್ನು ಬೆಂಬತ್ತಿದ ಟೆಕ್ನೋ ಟೈಟಾನ್ಸ್ ತಂಡವು 10.3 ಓವರಗಳಲ್ಲಿ ನಾಲಕ್ಕು ವಿಕೆಟ್ ನಷ್ಟದೊಂದಿಗೆ ಸಲೀಸಾಗಿ 112 ರನ್ ಗಳಿಸಿ ಮೊದಲ ವಿಜಯ ದಾಖಲಿಸಿತು. ಟೆಕ್ನೋಟೈಟಾನ್ಸ್ ತಂಡದ ನದೀರ್ ಎರಡು ಓವರ್ ಗಳಲ್ಲಿ ಎರಡು ರನ್ ನೀಡಿ ಎರಡು ವಿಕೆಟ್ ಪಡೆಯುವುದರ ಮೂಲಕ ಪಂದ್ಯಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಕರಾವಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡವು ಗಲ್ಫ್ ಗೆಳೆಯರ ಕ್ರಿಕೆಟ್ ಕ್ಲಬ್ ವಿರುದ್ಧ 52 ರನ್ನುಗಳ ವಿಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕರಾವಳಿ ಫ್ರೆಂಡ್ಸ್ ತಂಡವು 167 ರನ್ ಗಳಿಸಿದರೆ ಅದಕ್ಕುತ್ತರವಾಗಿ ಗಲ್ಫ್ ಗೆಳೆಯರ ಕ್ಲಬ್ ಕೇವಲ 115 ರನಗಳಿಸಿ ಆಲೌಟ್ ಆಯಿತು.ಕರಾವಳಿ ತಂಡದ ಅತೀಕ್ 14 ಚೆಂಡುಗಳಲ್ಲಿ ಏಳು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದಂತೆ 54 ರನ್ ಚಚ್ಚುವ ಮೂಲಕ ಪಂದ್ಯದ ವ್ಯಕ್ತಿಯಾಗಿ ಆಯ್ಕೆಯಾದರು.

ಮೂರನೇ ಪಂದ್ಯದಲ್ಲಿ ಯು.ಎ.ಇ ಲೆಜೆಂಡ್ಸ್ ಕಪ್ಪಡ್ ತಂಡವು ಎಂಟು ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದರೆ ಓ.ಜಿ.ಎಸ್ ಮೆಡಿಕಲ್ಸ್ ತಂಡವು ಕೇವಲ 5.1 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಬಿರುಸಿನ 98 ರನ್ ಗಳಿಸಿ ವಿಜಯದ ರೇಖೆ ತಲುಪಿತು. ಓ.ಜಿ.ಎಸ್ ತಂಡದ ಸಾದಿಕ್ ಮೂರು ಓವರಗಳಲ್ಲಿ ಮೂರು ವಿಕೆಟ್ ಗಳಿಸಿದ್ದರ ಜೊತೆಗೆ ಬ್ಯಾಟಿಂಗ್ನಲ್ಲಿ ಅಮೂಲ್ಯ19 ರನ್ ಗಳಿಸಿದ್ದರಿಂದ ಪಂದ್ಯದ ವ್ಯಕ್ತಿಯಾಗಿ ಅಭಿನಂದನೆ ಸ್ವೀಕರಿಸಿದರು.

ನಾಲ್ಕನೇ ಪಂದ್ಯದಲ್ಲಿ ಟೀಂ ಲಿವಿಂಗಸ್ಟನ್ ತಂಡವು ಹದಿನೈದು ಓವರಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 280 ರ ದಾಖಲೆ ರನ್ ಸಂಗ್ರಹಿಸಿತು. ಇದಕ್ಕುತ್ತರವಾಗಿ ತೀವ್ರ ಹೋರಾಟ ನೀಡಿದ ಆಲ್ಫಾ Xl ಕ್ರಿಕೆಟ್ ಕ್ಲಬ್ 170 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು.36 ಚೆಂಡುಗಳಲ್ಲಿ ಹತ್ತು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ 96 ರನ್ ಗಳಿಸಿದ ಲಿವಿಂಗಸ್ಟನ್ ತಂಡದ ರಮೇಶ್ ರಸೀನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಮೊದಲ ಸುತ್ತಿನ ಐದನೆಯ ಪಂದ್ಯದಲ್ಲಿ ಬ್ಲೂ ಸ್ಕೈ ತಂಡವು ಭಾರೀ ಹೊಡಬಡಿಯ ಆಟದೊಂದಿಗೆ ಆರು ವಿಕೆಟ್ ಕಳೆದುಕೊಂಡು 215 ರ ಭರ್ಜರಿ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಅತ್ಯುತ್ತಮವಾಗಿ ಬೆನ್ನತ್ತಿದ್ದ ಝನ್ನು ಅಲ್ಲೈನ್ ತಂಡವು ಕೊನೆಯ ಕ್ಷಣದ ಎಡವಟ್ಟಿನಿಂದಾಗಿ 197 ರನ್ ಗಳಿಸಲಷ್ಟೇ ಶಕ್ತವಾಗಿ 17 ರನ್ನುಗಳಿಂದ ಸೋಲೊಪ್ಪಿಕೊಂಡಿತು. ಒಂಬತ್ತು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ 27 ಚೆಂಡುಗಳಲ್ಲಿ 73 ರನ್ ಭಾರಿಸಿದ ಬ್ಲೂ ಸ್ಕೈ ತಂಡದ ಆನಂದು ನನ್ಪಾನ್ಜ್ ಪಂದ್ಯದ ವ್ಯಕ್ತಿಯಾಗಿ ಸಂಮಾನಿತರಾದರು.

ಉಡುಪಿ ಮಂಗಳೂರು ಕುಂದಾಪುರ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಸಿದ್ಧ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ.ಮೊದಲ ಸುತ್ತಿನ ಪಂದ್ಯಾಟದ ವೀಕ್ಷಣೆಗೆ ಕ್ರಿಕೆಟ್ ಪ್ರಿಯರ ಬೃಹತ್ ಸಮೂಹ ಆಗಮಿಸಿತ್ತು.
