ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಯಾಂಕ್ ಅಗರ್ವಾಲ್ ಅವರ ಸಂದರ್ಶನದ ವೀಡಿಯೋ ಅದು.
ಸಂದರ್ಶಕ ಕೇಳುತ್ತಾನೆ, ‘’bro, ನಿಮ್ಮ ಫೇವರಿಟ್ ಆ್ಯಕ್ಟರ್ ಯಾರು’’ ಎಂದು. ‘’All time favourite ಡಾ.ರಾಜ್’ಕುಮಾರ್’’ ಎಂದು ಒಂದು ಕ್ಷಣ ಯೋಚಸದೆ ಹೇಳಿ ಬಿಟ್ಟರು ಮಯಾಂಕ್.
ಮಯಾಂಕ್ ಅಗರ್ವಾಲ್
ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ ಬೆಳೆದವರಲ್ಲ. ಡಾ.ರಾಜ್ ಅವರ ಅದೆಷ್ಟು ಸಿನಿಮಾಗಳನ್ನು ನೋಡಿದ್ದಾರೋ ಗೊತ್ತಿಲ್ಲ.
ಆದರೆ ನೆಚ್ಚಿನ ಸಿನಿಮಾ ತಾರೆ ಯಾರು ಎಂದಾಕ್ಷಣ ‘ಡಾ.ರಾಜ್’ಕುಮಾರ್’ ಎಂದು ಬಿಡುತ್ತಾರೆ ಮಯಾಂಕ್ ಅಗರ್ವಾಲ್.
ಸರಳತೆ, ಸಭ್ಯತೆಗೆ ಈ ಜಗತ್ತಿನಲ್ಲಿ ಮತ್ತೊಂದು ಹೆಸರೇನಾದರೂ ಇದ್ದರೆ ಅದು ವರನಟ ಡಾ.ರಾಜ್’ಕುಮಾರ್.
ಉತ್ಪ್ರೇಕ್ಷೆಯಲ್ಲ, ಮಯಾಂಕ್ ಅಗರ್ವಾಲ್ ಕೂಡ ಹಾಗೆಯೇ..
ಅತ್ಯಂತ ಸರಳ ಮತ್ತು ಸಭ್ಯ ಕ್ರಿಕೆಟಿಗ. ಮಯಾಂಕ್ ಅಗರ್ವಾಲ್ ಇರುವುದು ಹಾಗೆಯೇ.. ತುಂಬಾ down to earth ಮನುಷ್ಯ. ಅವರ ಕನ್ನಡ ಪ್ರೀತಿಯ ಬಗ್ಗೆ ಹೇಳಲೇಬೇಕು.
ಸಾಮಾನ್ಯವಾಗಿ ಅಗರ್ವಾಲ್ ಎಂಬ ಸರ್’ನೇಮ್ ಕೇಳಿದಾಕ್ಷಣ ಇವರು ಕನ್ನಡಿಗರಲ್ಲ, ಯಾರೋ ಉತ್ತರ ಭಾರತೀಯರಿರಬೇಕೆಂಬ ಅಭಿಪ್ರಾಯ ತನ್ನಿಂದ ತಾನಾಗಿಯೇ ಮೂಡಿ ಬಿಡುತ್ತದೆ. ಹೌದು, ಮಯಾಂಕ್ ಅಗರ್ವಾಲ್ ಅವರ ತಂದೆಯ ಮೂಲ ಉತ್ತರ ಭಾರತ, ಬಹುಶಃ ದೆಹಲಿ ಇರಬೇಕು. ಆದರೆ ಮಯಾಂಕ್ ಹುಟ್ಟಿದ್ದು ಇಲ್ಲೇ, ಬೆಳೆದದ್ದು ಇಲ್ಲೇ, ಆಡಿದ್ದೂ ಇಲ್ಲೇ, ಹೆಸರು ಮಾಡಿದ್ದೂ ಇಲ್ಲೇ.. ಅವರು ಕರ್ನಾಟಕಕ್ಕೆ ಗೌರವ ತಂದುಕೊಟ್ಟ ಹೆಮ್ಮೆಯ ಕನ್ನಡಿಗ.
ಮಾತನಾಡುವಾಗ ಅಚ್ಚಕನ್ನಡದಲ್ಲಿ, ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ. ಮಧ್ಯೆ ಇಂಗ್ಲೀಷ್ ಪದಗಳು ಬಾರದಂತೆ ಎಚ್ಚರ ವಹಿಸುತ್ತಾ ಮಾತನಾಡುವುದನ್ನು ಕೇಳುವುದೇ ಚಂದ.
ಮಾತೃಭಾಷೆ ಹಿಂದಿ, ಓದಿದ್ದು ಇಂಗ್ಲೀಷ್ ಮೀಡಿಯಂ. ಆದರೆ ಮಯಾಂಕ್ ಅಗರ್ವಾಲ್ ಅವರಿಗೆ ಕನ್ನಡ ‘ಜೀವನದ ಭಾಷೆ’.
ಅವಕಾಶ ಸಿಕ್ಕರೆ ಮಯಾಂಕ್ ಅವರೊಂದಿಗೆ ಒಮ್ಮೆ ಮಾತನಾಡಿ ಅಥವಾ ಅವರ ಯಾವುದಾದರೂ ಕನ್ನಡ ಸಂದರ್ಶನಗಳನ್ನೊಮ್ಮೆ ನೋಡಿ. ಕನ್ನಡಕ್ಕೆ ಅವರು ಕೊಡುವ ಬೆಲೆ, ಕನ್ನಡದ ಬಗ್ಗೆ ಆತನಿಗಿರುವ ಪ್ರೀತಿ, ಅಭಿಮಾನ ಅವರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿ ಬಿಡುತ್ತದೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವ ವಹಿಸಿರುವ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ನಾಯಕನೂ ಹೌದು. ಕಳೆದ 10 ವರ್ಷಗಳಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲಿ.