ಮಂಡ್ಯದ ಕೂಲಿ ಕೆಲಸಗಾರನೊಬ್ಬನ ಮಗ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ.. ಮಗನಿಗೆ ಕ್ರಿಕೆಟ್ ಹುಚ್ಚು.. ದಿನದ ದುಡಿಮೆಯಿಂದಲೇ ಜೀವನ ನಡೆಯುವ ಪರಿಸ್ಥಿತಿಯಲ್ಲಿ ಮಗ ಕ್ರಿಕೆಟ್ ಆಡುತ್ತೇನೆ ಎಂದಾಗ ಯಾವ ತಂದೆ-ತಾಯಿ ತಾನೇ ಮಗನ ನಿರ್ಧಾರವನ್ನು ಬೆಂಬಲಿಸಲು ಸಾಧ್ಯ..?
ಮಗನ ಸ್ಕೂಲ್ ಫೀಸ್ ಕಟ್ಟಲೂ ದುಡ್ಡಿರಲಿಲ್ಲ.. ಇನ್ನು ಕ್ರಿಕೆಟ್’ಗೆ ಸಪೋರ್ಟ್ ಮಾಡಲು ಸಾಧ್ಯವೇ..? “ಇದೆಲ್ಲಾ ಆಗದ ಮಾತು, ಸುಮ್ಮನಿದ್ದು ಬಿಡು” ಎಂದಿದ್ದರು ಆ ಬಡ ತಾಯಿ..
ಈಗ ಅದೇ ಹುಡುಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಧೂಳೆಬ್ಬಿಸುತ್ತಿದ್ದಾನೆ. ಈ ವರ್ಷದ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಈ ಕ್ಷಣದವರೆಗೆ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಅಗ್ರಗಣ್ಯನಾಗಿ ನಿಂತಿದ್ದಾರೆ. ದುರದೃಷ್ಟವೆಂದರೆ, ಮಗನ ಯಶಸ್ಸನ್ನು ನೋಡಲು ತಂದೆಯೂ ಇಲ್ಲ, ತಾಯಿಯೂ ಇಲ್ಲ..
ಇದು ಎಲ್.ಆರ್ ಕುಮಾರ್ ಎಂಬ ಬೆಂಕಿಯಲ್ಲಿ ಅರಳಿದ ಹುಡುಗನ ಕಥೆ.. ಮಂಡ್ಯದ ಲೋಕಸಾರ ಎಂಬ ಹಳ್ಳಿಯ ಪ್ರತಿಭೆ. Raw talent. ಚೆಂಡು ಕೈಯಲ್ಲಿದ್ದರೆ ಜಗತ್ತನ್ನೇ ಗೆದ್ದು ಬಿಡುವೆ ಎಂಬ ಉತ್ಸಾಹ. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಪರ ಆಡುತ್ತಿರುವ ಕುಮಾರ್, ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಬೌಲಿಂಗ್ ಮಾಡಿದ ರೀತಿ ಈತನೊಳಗೆ ಅಡಗಿರುವ ಕಿಚ್ಚಿಗೆ ಸಾಕ್ಷಿ ನುಡಿಯುತ್ತಿದೆ. ಕೊನೆಯ ಓವರ್’ನಲ್ಲಿ ಬೆಂಗಳೂರು ಗೆಲುವಿಗೆ ಕೇವಲ 6 ರನ್’ಗಳು ಬೇಕಿದ್ದಾಗ ಮೊದಲ ಎಸೆತದಲ್ಲೇ ಬೌಂಡರಿ ಹೊಡೆಸಿಕೊಂಡರೂ, ಮುಂದಿನ ಐದು ಎಸೆತಗಳಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಕಂಬ್ಯಾಕ್ ಮಾಡಿದ ಪರಿ ಅದ್ಭುತ. ರಾಜ್ಯ ಕ್ರಿಕೆಟ್ ಸಂಸ್ಥೆ ಬೆಳೆಸಬೇಕಿರುವುದು ಇಂತಹ ಪ್ರತಿಭೆಗಳನ್ನ.
ಊರಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗರನ್ನು ನೋಡಿ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟವನು ಎಲ್.ಆರ್ ಕುಮಾರ್.
“ಏನೋ ಖುಷಿಗಾಗಿ ಆಡುತ್ತಾನೆ, ಆಡಲಿ ಬಿಡು” ಅಂದುಕೊಂಡಿದ್ದ ತಾಯಿಯ ಮುಂದೆ ನಿಂತ ಮಗ ಒಂದು ದಿನ ಹೇಳುತ್ತಾನೆ, “ನಾನು ಕ್ರಿಕೆಟರ್ ಆಗುತ್ತೇನೆ” ಎಂದು.
“ಅಯ್ಯೋ, ಅದೆಲ್ಲಾ ನಮ್ಮಂಥವರಿಗಲ್ಲ ಮಗಾ.. ಅಂಥಾ ಹುಚ್ಚು ಆಸೆಗಳನ್ನೆಲ್ಲಾ ಇಟ್ಟುಕೊಳ್ಳಬೇಡ. ಏನೋ ಕಷ್ಟ ಪಟ್ಟು ಓದಿಸುತ್ತಿದ್ದೇನೆ, ಚೆನ್ನಾಗಿ ಓದು.. ಅಷ್ಟೇ ಸಾಕು” ಎಂದಿದ್ದರು ತಾಯಿ.
ಮಗ ಕೇಳಲಿಲ್ಲ. ಕ್ರಿಕೆಟ್ ಆಡಿಯೇ ಆಡುತ್ತೇನೆ ಎಂದು ಹೊರಟು ನಿಂತ. “ಆಯಿತು ಆಡು” ಎನ್ನುವುದು ಬಿಟ್ಟು ಬೇರೆ ಸಹಾಯ ಮಾಡುವ ಶಕ್ತಿ ತಾಯಿಗೆ ಇರಲಿಲ್ಲ.
ಮಗ ಹೈಸ್ಕೂಲ್’ಗೆ ಕಾಲಿಟ್ಟಾಗ ಅದು ಹೇಗೋ ಒಂದಷ್ಟು ಹಣ ಹೊಂದಿಸಿ ಮಗನಿಗೆ ಕ್ರಿಕೆಟ್ ಜರ್ಸಿ ಮತ್ತು ಕಿಟ್ ಕೊಡಿಸುತ್ತಾರೆ ತಾಯಿ.
“ತಂದೆಯಿಂದ ಅಷ್ಟೊಂದು ಬೆಂಬಲ ಸಿಗಲಿಲ್ಲ. ತಾಯಿ ನನಗಾಗಿ ತುಂಬಾ ಕಷ್ಟ ಪಟ್ಟಿದ್ದಾರೆ ಸಾರ್. ನನ್ನ ಸ್ಕೂಲ್ ಫೀಸ್ ಕಟ್ಟಲೂ ಅವರಿಗೆ ಕಷ್ಟವಾಗುತ್ತಿತ್ತು. ಅಂಥಾ ಸಮಯದಲ್ಲಿ ನನಗೆ ಕ್ರಿಕೆಟ್ ಕಿಟ್ ಕೊಡಿಸಿದರು. ಈಗ ನನ್ನ ಕ್ರಿಕೆಟ್ ಬೆಳವಣಿಗೆಯನ್ನು ನೋಡಲು ತಂದೆ-ತಾಯಿ ಇಬ್ಬರೂ ಇಲ್ಲ” ಎಂದು ಬಿಟ್ಟ ಎಲ್.ಆರ್ ಕುಮಾರ್.
ತಾಯಿ ಕ್ರಿಕೆಟ್ ಕಿಟ್ ಕೊಡಿಸಿದ ನಂತರ ಮಂಡ್ಯದ PES ಕಾಲೇಜಿನಲ್ಲಿ ಕ್ರಿಕೆಟ್ ಅಭ್ಯಾಸ ಶುರು. ಅಂಡರ್-14 ಮೈಸೂರು ವಲಯ ತಂಡಕ್ಕೆ ಆಯ್ಕೆಯಾದವನಿಗೆ ಪ್ರತೀ ವಾರ ಪಂದ್ಯಗಳನ್ನಾಡಲು ಮೈಸೂರಿಗೆ ಹೋಗಬೇಕಿತ್ತು. ಮಂಡ್ಯದಿಂದ ಮೈಸೂರಿಗೆ ಹೋಗಲು ಟೆಂಪೋ ಟ್ರಾವೆಲರ್’ಗೆ ಪ್ರತಿಯೊಬ್ಬ ಆಟಗಾರ 200 ರೂಪಾಯಿ ಕೊಡಬೇಕಿತ್ತು. ಅಷ್ಟು ದುಡ್ಡು ಹುಡುಗನ ಬಳಿ ಇರುತ್ತಿರಲಿಲ್ಲ.
ಅಲ್ಲೋ ಇಲ್ಲೋ ಟೆನಿಸ್ ಬಾಲ್ ಕ್ರಿಕೆಟ್ ಆಡಿದರೆ ಒಂದಷ್ಟು ದುಡ್ಡು ಬರುತ್ತಿತ್ತು. ಅದೇ ದುಡ್ಡಿನಲ್ಲಿ ಮಂಡ್ಯದಿಂದ ರೈಲು ಹಿಡಿದು ಮೈಸೂರಿಗೆ ಹೋಗಿ ಕ್ರಿಕೆಟ್ ಆಡುತ್ತಿದ್ದ ಎಲ್.ಆರ್ ಕುಮಾರ್. ಹುಡುಗನ ಕಷ್ಟವನ್ನು ಅರಿತ ಕೋಚ್ ಮಹಾದೇವ್ ಕ್ರಿಕೆಟ್ ಫೀಸ್’ನಿಂದ ರಿಯಾಯಿತಿ ಕೊಡಿಸಿದರು. PES ಕಾಲೇಜಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.
ಹೀಗೆ ಕಷ್ಟ ಪಟ್ಟು ಬಂದವನು ಎಲ್.ಆರ್ ಕುಮಾರ್. ಕಳೆದ ವರ್ಷ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾಗ ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್ ಅವರ ಕಣ್ಣಿಗೆ ಬೀಳುತ್ತಾನೆ. ಹುಡುಗನ ಕ್ರಿಕೆಟ್ ಕಿಚ್ಚನ್ನು ನೋಡಿ ಕರೆದು ಮಾತನಾಡಿಸುತ್ತಾರೆ ಮಿಥುನ್.
“ಅಣ್ಣಾ, ನಿಮ್ಮ ಜೊತೆ ಅಭ್ಯಾಸ ಮಾಡ್ಬೇಕು ಅಂದಾಗ, ಬಾರೋ ಮಾಡೋಣ” ಎಂದ ಮಿಥುನ್, ಕಳೆದರಡು ವರ್ಷಗಳಿಂದ ಮಂಡ್ಯದ ಹುಡುಗನ ಪಾಲಿಗೆ ಅಣ್ಣನಾಗಿ ನಿಂತಿದ್ದಾರೆ.
ಮಂಡ್ಯದ ಹೈದನ ಬೌಲಿಂಗ್ ರನ್ ಅಪ್, ಆ್ಯಕ್ಷನ್’ನಲ್ಲಿದ್ದ ದೋಷಗಳನ್ನು ಸರಿಪಡಿಸಿ, ಇಲ್ಲಿವರೆಗೆ ಕರೆ ತಂದು ನಿಲ್ಲಿಸಿದ್ದಾರೆ ಅಭಿಮನ್ಯು ಮಿಥುನ್.
ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಪರ ಆಡುತ್ತಿರುವ 23 ವರ್ಷದ ಬಲಗೈ ಮಧ್ಯಮ ವೇಗದ ಬೌಲರ್ ಎಲ್.ಆರ್ ಕುಮಾರ್, ಆಡಿರುವ 5 ಪಂದ್ಯಗಳಿಂದ 11 ವಿಕೆಟ್’ಗಳನ್ನು ಪಡೆದಿದ್ದಾನೆ.
“ನಾನು ಇಲ್ಲಿವರೆಗೆ ಬಂದು ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ತಾಯಿ ಮತ್ತು ಮಿಥುನ್ ಅಣ್ಣ. Run up Cricket Academyಯಲ್ಲಿ ಅಭ್ಯಾಸಕ್ಕೆ ಮೆಟ್ರೋದಲ್ಲಿ ಹೋಗುತ್ತಿದ್ದೆ. ಕೆಲವೊಮ್ಮೆ ಮಿಥುನ್ ಅಣ್ಣ ಮೆಟ್ರೋ ಸ್ಟೇಷನ್ ಬಳಿ ನನಗಾಗಿ ಕಾದು ನಿಂತಿರುತ್ತಿದ್ದರು. ಅಲ್ಲಿಂದ ನನ್ನನ್ನು ಕರೆದೊಯ್ದು ಬೌಲಿಂಗ್ ಪಾಠಗಳನ್ನು ಹೇಳಿ ಕೊಟ್ಟಿದ್ದಾರೆ. ದೊಡ್ಡ ಕ್ರಿಕೆಟಿಗನಾಗಿ ನನ್ನಂಥ ಒಬ್ಬ ಹುಡುಗನಿಗೆ ಇಷ್ಟೆಲ್ಲಾ ಸಹಾಯ ಮಾಡಿದ ಮಿಥುನ್ ಅಣ್ಣನನ್ನು ಈ ಜೀವನದಲ್ಲಿ ಯಾವತ್ತೂ ಮರೆಯಲಾರೆ” ಎನ್ನುತ್ತಾನೆ ಎಲ್.ಆರ್ ಕುಮಾರ್.