ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ

ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA) ಸಹಯೋಗದಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಲೆದರ್ ಬಾಲ್ ಟಿ-20 ನಾಕೌಟ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ.

ಈ  ಟೂರ್ನಿಯು ಮೇ 16 ಮತ್ತು 17ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಉಡುಪಿ ಜಿಲ್ಲೆಯ ಇಂಟರ್ ಕ್ಯಾಂಪಸ್ ಅಕಾಡೆಮಿ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ವಿವಿಧ ಕ್ರಿಕೆಟ್ ಅಕಾಡೆಮಿಗಳ ಪ್ರತಿಭಾವಂತ ಯುವ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿಸಿದೆ.

ಟೂರ್ನಿಯ ಪ್ರಮುಖ ಉದ್ದೇಶ ಯುವ ಆಟಗಾರರಿಗೆ ಸ್ಪರ್ಧಾತ್ಮಕ ವೇದಿಕೆ ಒದಗಿಸುವುದು ಹಾಗೂ ಅವರ ಪ್ರತಿಭೆಯನ್ನು ಹೊರತರುವುದಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಟಿ-20 ನಾಕೌಟ್ ಪಂದ್ಯಾವಳಿಯಲ್ಲಿ ವೇಗದ ಆಟ, ರೋಚಕ ಪೈಪೋಟಿ ಮತ್ತು ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು, ಈ ಬಾರಿ ಜಿಲ್ಲಾ ಮಟ್ಟದ ಅಂಡರ್-23 ಟೂರ್ನಿಯನ್ನು ಆಯೋಜಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

ಸಂಘದ ಅಧ್ಯಕ್ಷ ದಿನೇಶ್ ಗಾಣಿಗ ಹಾಗೂ ಕಾರ್ಯದರ್ಶಿ ರಾಜೇಶ್ ಆಚಾರ್ ಅವರ ನೇತೃತ್ವದಲ್ಲಿ ಟೂರ್ನಿಯ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯುವ ಆಟಗಾರರನ್ನು ಪ್ರೋತ್ಸಾಹಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

“ಸ್ಪೋರ್ಟ್ಸ್ ಕನ್ನಡ ಲೈವ್ ಮೀಡಿಯಾ” ಈ ಪ್ರತಿಷ್ಠಿತ ಟೂರ್ನಿಯನ್ನು ನೇರ ಪ್ರಸಾರ ಮಾಡಲಿದ್ದು, ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳ ರೋಚಕ ಕ್ಷಣಗಳನ್ನು ಲೈವ್ ಮೂಲಕ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.

 

Leave a Reply

Your email address will not be published. Required fields are marked *