ಆ ಹುಡುಗ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದ ಪ್ರತಿಭಾವಂತ.
ಅವಕಾಶಗಳು ಸರಿಯಾಗಿ ಸಿಕ್ಕಿದ್ದರೆ, ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿಸಿದ್ದಿದ್ದರೆ, ‘ಕರ್ನಾಟಕದ ಚೇತೇಶ್ವರ್ ಪೂಜಾರ’ ಆಗುವ ಸಾಮರ್ಥ್ಯ ಆ ಹುಡುಗನಿಗಿತ್ತು.
ಆದರೆ ಹಾಗಾಗಲಿಲ್ಲ..
ಅದು ಹುಡುಗನ ದುರದೃಷ್ಟವೋ.. ಕರ್ನಾಟಕ ಕ್ರಿಕೆಟ್’ಗೆ ಆದ ನಷ್ಟವೋ ಗೊತ್ತಿಲ್ಲ..
ಡಿ.ನಿಶ್ಚಲ್. ಈ ಹೆಸರು ಕೇಳಿದರೆ ಜ್ಯೂನಿಯರ್ ಕ್ರಿಕೆಟ್’ನಲ್ಲಿ ಆತ ಹರಿಸುತ್ತಿದ್ದ ರನ್ ಹೊಳೆ ಕಣ್ಣ ಮುಂದೆ ಬರುತ್ತದೆ. 9ನೇ ವರ್ಷದಿಂದ ಆರಂಭವಾಗಿ ಸ್ಕೂಲ್ ಕ್ರಿಕೆಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಂಘಟಿಸಿದ ಟೂರ್ನಿಗಳಲ್ಲಿ ಒಟ್ಟು 100 ಶತಕಗಳನ್ನು ಗಳಿಸಿದ ಪ್ರತಿಭಾ ಸಂಪನ್ನ ಈ ದೆಗಾ ನಿಶ್ಚಲ್.
ಮಯಾಂಕ್ ಅಗರ್ವಾಲ್ ರಣಜಿ ತ್ರಿಶತಕ ಬಾರಿಸಿದ ಪಂದ್ಯದಲ್ಲಿ ನಿಶ್ಚಲ್ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಮಹಾರಾಷ್ಟ್ರ ವಿರುದ್ಧ 2017ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಣಜಿ ಪದಾರ್ಪಣೆ ಮಾಡಿದ್ದ ನಿಶ್ಚಲ್’ಗೆ ಅಲ್ಲಿಂದ ಆರು ವರ್ಷಗಳಲ್ಲಿ ಕರ್ನಾಟಕ ಪರ ಆಡುವ ಅವಕಾಶ ಸಿಕ್ಕಿದ್ದು ಕೇವಲ 18 ಪಂದ್ಯಗಳಲ್ಲಿ ಅಷ್ಟೇ..
ಆಡಿದ 2ನೇ ರಣಜಿ ಇನ್ನಿಂಗ್ಸ್’ನಲ್ಲೇ ಉತ್ತರ ಪ್ರದೇಶ ವಿರುದ್ಧ 195 ರನ್ ಗಳಿಸಿದ್ದ ನಿಶ್ಚಲ್, ಮನೀಶ್ ಪಾಂಡೆ ಜೊತೆ 354 ರನ್’ಗಳ ಮ್ಯಾರಾಥಾನ್ ಜೊತೆಯಾಟವಾಡಿದ್ದರು. ಅದಾದ ನಂತರ ಮುಂದಿನ 9 ರಣಜಿ ಪಂದ್ಯಗಳಲ್ಲಿ 3 ಶತಕ. 2018ರಲ್ಲಿ ವಿದರ್ಭ ವಿರುದ್ಧ 113 ರನ್, ಅದೇ ವರ್ಷ ರೈಲ್ವೇಸ್ ವಿರುದ್ಧ 101 ರನ್, 2019ರಲ್ಲಿ ಛತ್ತೀಸ್’ಗಢ ವಿರುದ್ಧ 107 ರನ್ ಗಳಿಸಿ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದ್ದ ಟ್ಯಾಲೆಂಟೆಡ್ ಕ್ರಿಕೆಟರ್.
ನಿಶ್ಚಲ್ ಬಾರಿಸಿದ ರಣಜಿ ಶತಕಗಳು:
195 (425) Vs ಉತ್ತರ ಪ್ರದೇಶ (2017)
113 (338) Vs ವಿದರ್ಭ (2018)
101 (232) Vs ರೈಲ್ವೇಸ್ (2018)
107 (242) Vs ಛತ್ತೀಸ್’ಗಢ (2019)
ಒಳ್ಳೆಯ ಕ್ರಿಕೆಟಿಗ.. ಸುದೀರ್ಘ ಇನ್ನಿಂಗ್ಸ್’ಗಳಿಗೆ ಹೆಸರಾಗಿದ್ದ ಆಟಗಾರ. ಪ್ರಥಮದರ್ಜೆ ಪಂದ್ಯಗಳಿಗೆ ಹೇಳಿ ಮಾಡಿಸಿದ್ದ ಆಟಗಾರ. ನಿಶ್ಚಲ್ ಅವರಲ್ಲಿದ್ದ ತಾಳ್ಮೆ ಚೇತೇಶ್ವರ್ ಪೂಜಾರನನ್ನು ನೆನಪಿಸುತ್ತಿತ್ತು.
ರಣಜಿ ಪದಾರ್ಪಣೆಯ ನಂತರ ಅಗ್ರಕ್ರಮಾಂಕದಲ್ಲಿ ಭರವಸೆ ಮೂಡಿಸಿದರೂ, ಅಷ್ಟು ಸಾಕಾಗಲಿಲ್ಲವೇನೋ..?
ಕರ್ನಾಟಕ ರಣಜಿ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರನೊಬ್ಬ ಇಲ್ಲಿ ಅವಕಾಶಗಳಿಗೆ ಕಾಯುವಂತಾಯಿತು. ಕೊನೆಗೂ ಕಾಯುವಿಕೆಯಲ್ಲಿ ಅರ್ಥವಿಲ್ಲ ಎಂಬ ಕಟುಸತ್ಯವನ್ನು ಅರಿತು ನಾಗಾಲ್ಯಾಂಡ್’ಗೆ ಹೊರಟು ನಿಂತಿದ್ದಾರೆ. ನಿನ್ನೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ NOC ಪಡೆದಿರುವ ನಿಶ್ಚಲ್, ಈ ಬಾರಿಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ನಾಗಾಲ್ಯಾಂಡ್ ಪರ ಆಡಲಿದ್ದಾರೆ.