ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಜಗತ್ತಿನ ಬೆಂಕಿ ಬೌಲರ್. ಸಮಕಾಲೀನ ಕ್ರಿಕೆಟ್’ನಲ್ಲಿ ಬುಮ್ರಾ ಅವರಂಥಾ ಮತ್ತೊಬ್ಬ ಬೌಲರ್ ಈ ಜಗತ್ತಿನಲ್ಲೇ ಇಲ್ಲ.
ಅದು ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಕ್ರಿಕೆಟ್ ಇರಲಿ ಅಥವಾ ಟಿ20 ಕ್ರಿಕೆಟ್ ಇರಲಿ.. ಬುಮ್ರಾ ಈಸ್ ದಿ ಬೆಸ್ಟ್. ಭಾರತ 17 ವರ್ಷಗಳ ನಂತರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದವರು ಜಸ್ಪ್ರೀತ್ ಬುಮ್ರಾ. ಟಿ20 ವಿಶ್ವಕಪ್’ನಲ್ಲಿ ಬುಮ್ರಾ ಅವರ ಬೆಂಕಿ ಬೌಲಿಂಗ್ ಹೇಗಿತ್ತು ಎಂದರೆ, ಆಡಿದ 8 ಪಂದ್ಯಗಳಲ್ಲಿ 178 ಎಸೆತಗಳನ್ನೆಸೆದಿದ್ದ ಜಸ್ಪ್ರೀತ್ ಬುಮ್ರಾ ಬಿಟ್ಟು ಕೊಟ್ಟದ್ದು ಕೇವಲ 124 ರನ್ ಮಾತ್ರ. ಬೌಲಿಂಕ್ ಎಕಾನಮಿ 4.17. ಟೂರ್ನಿಯಲ್ಲಿ ಒಟ್ಟು 15 ವಿಕೆಟ್’ಗಳನ್ನು ಕಬಳಿಸಿದ್ದ ಬುಮ್ರಾ ಟಿ20 ವಿಶ್ವಕಪ್’ನಲ್ಲಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದರು. ಟಿ20 ವಿಶ್ವಕಪ್’ನ ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ತೆಕ್ಕೆಗೆ ಜಾರಿದ್ದಾಗ ಕೊನೇ ಕ್ಷಣಗಳಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಪಂದ್ಯವನ್ನು ಭಾರತದ ಮಡಿಲಿಗೆ ಎಳೆದು ತಂದಿದ್ದ ಬುಮ್ರಾ ಟೀಮ್ ಇಂಡಿಯಾಗೆ ಚುಟುಕು ವಿಶ್ವಕಪ್ ಗೆದ್ದುಕೊಟ್ಟಿದ್ದರು.
ಆಧುನಿಕ ಕ್ರಿಕೆಟ್’ನ ದಿಗ್ಗಜ ವೇಗದ ಬೌಲರ್ ಜಸ್ಪ್ಪೀತ್ ಬುಮ್ರಾ ಅವರ ಬೌಲಿಂಗ್ ಶೈಲಿಯೇ ವಿಭಿನ್ನ. ಅದನ್ನು ಅಷ್ಟು ಸುಲಭವಾಗಿ ಯಾರಿಗೂ copy ಮಾಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದ ಪೋರನೊಬ್ಬ ಸೇಮ್ ಟು ಸೇಮ್ ಬುಮ್ರಾನಂತೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಜಸ್ಪ್ರೀತ್ ಬುಮ್ರಾನ ಡೆಡ್ಲಿ ವೆಪನ್ ಅಂದ್ರೆ ಅದು ಇನ್ ಸ್ವಿಂಗಿಂಗ್ ಯಾರ್ಕರ್’ಗಳು. ಬುಮ್ರಾ ಕೈಯಿಂದ ಬೆಂಕಿ ಚೆಂಡಿನಂತೆ ನುಗ್ಗಿ ಬರುವ ಆ ಡೆಡ್ಲಿ ಯಾರ್ಕರ್’ಗಳು ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪ್ ಎಗರಿಸಿ ಬಿಡುತ್ತವೆ. ಪಾಕಿಸ್ತಾನದ ಈ ಹುಡುಗ ಕೂಡ ಬುಮ್ರಾನಂತೆ ಯಾರ್ಕರ್’ಗಳನ್ನು ಎಸೆಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ವಿಶೇಷ ಏನಂದ್ರೆ ಆ ಹುಡುಗ ಬುಮ್ರಾ ಸ್ಟೈಲ್’ನಲ್ಲಿ ಬೌಲಿಂಗ್ ಮಾಡುತ್ತಿರುವ ದೃಶ್ಯಗಳನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿರುವ ಪಾಕಿಸ್ತಾನದ ಲೆಜೆಂಡರಿ ಫಾಸ್ಟ್ ಬೌಲರ್ ವಸೀಂ ಅಕ್ರಂ ಹುಡುಗನ ಬೌಲಿಂಗ್ ಟ್ಯಾಲೆಂಟ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ವಾರೆ ವ್ಹಾ.. ಆ ಆ್ಯಕ್ಷನ್ ಮತ್ತು ಕಂಟ್ರೋಲ್ ನೋಡಿ.. ಗ್ರೇಟ್ ಜಸ್ಪ್ರೀತ್ ಬುಮ್ರಾನಂತೆಯೇ ಇದೆ. ಇದು ನನ್ನ ಪಾಲಿಗೆ ವೀಡಿಯೊ ಆಫ್ ದಿ ಡೇ” ಎಂದು ವಸೀಂ ಅಕ್ರಂ ತಮ್ಮ ಸಾಮಾಜಿಕ ಜಾಲತಾಣ ಖಾತೆ Xನಲ್ಲಿ ಬರೆದುಕೊಂಡಿದ್ದಾರೆ.
30 ವರ್ಷ ವಯಸ್ಸಿನ ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದು, 2016ರಲ್ಲಿ. 2016ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬುಮ್ರಾ, 2018ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದರು.
ಸಾಮಾನ್ಯವಾಗಿ ಬೌಲರ್’ಗಳು ತಮ್ಮ ನಿವೃತ್ತಿಯ ಸಮಯದಲ್ಲಿ ದಿಗ್ಗಜನೆಂದು ಕರೆಸಿಕೊಳ್ಳುತ್ತಾರೆ. ಆದರೆ ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟ ಕೇವಲ ಎಂಟೇ ವರ್ಷಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ದಿಗ್ಗಜ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಗುಜರಾತ್’ನ ಅಹ್ಮದಾಬಾದ್’ನವರಾದ ಜಸ್ಪ್ರೀತ್ ಬುಮ್ರಾ ಇಲ್ಲಿವರೆಗೆ 36 ಟೆಸ್ಟ್ ಪಂದ್ಯಗಳನ್ನಾಡಿದ್ದು 159 ವಿಕೆಟ್’ಗಳನ್ನು ಪಡೆದಿದ್ದಾರೆ. 89 ಏಕದಿನ ಪಂದ್ಯಗಳಿಂದ 149 ವಿಕೆಟ್ ಹಾಗೂ 70 ಟಿ20 ಪಂದ್ಯಗಳಿಂದ 89 ವಿಕೆಟ್’ಗಳನ್ನು ಕಬಳಿಸಿದ್ದಾರೆ.
ಆ ವೇಗ, ಆ ಸ್ವಿಂಗ್, ಆ ನಿಖರತೆ, ಆ ಬೌಲಿಂಗ್ ಆ್ಯಕ್ಷನ್.. ಆ ಖತರ್ನಾಕ್ ಯಾರ್ಕರ್’ಗಳು.. ಕೈ ಜಾರುತ್ತಿರುವ ಪಂದ್ಯಗಳ ಚಿತ್ರಣವನ್ನೇ ಕ್ಷಣ ಮಾತ್ರದಲ್ಲಿ ಬದಲಿಸಿ ಬಿಡಬಲ್ಲ ಚಾಕಚಕ್ಯತೆ..
ಜಸ್ಪ್ರೀತ್ ಬುಮ್ರಾನಂಥಾ ಬೌಲರ್ ಖಂಡಿತವಾಗಿಯೂ ಶತಮಾನಕ್ಕೊಬ್ಬ..!