ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅವರ ನೇಮಕ ಬಿಸಿಸಿಐನ ಆಯ್ಕೆ. ಐಪಿಎಲ್’ನಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಿದ್ದಂತೆ ಟೀಮ್ ಇಂಡಿಯಾದ ಮುಂದಿನ ದ್ರೋಣ ಇವರೇ ಎಂದು ಅವತ್ತೇ ಬಿಸಿಸಿಐ ನಿರ್ಧರಿಸಿ ಬಿಟ್ಟಿತ್ತು.
ಅಂದ ಹಾಗೆ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸುವ ಮುಂಚೆಯೇ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವ ಬಗ್ಗೆ ಬಿಸಿಸಿಐ ನಿರ್ಧರಿಸಿಯಾಗಿತ್ತು. ಬಿಸಿಸಿಐನಿಂದ ಸ್ಪಷ್ಟ ಭರವಸೆ ಸಿಕ್ಕಿದ ಮೇಲೆಯೇ ಗಂಭೀರ್ ಕೂಡ ಟೀಮ್ ಇಂಡಿಯಾ ಕೋಚ್ ಆಗಲು ಒಪ್ಪಿಕೊಂಡದ್ದು, ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು.
ಟೀಮ್ ಇಂಡಿಯಾ ಕೋಚ್ ಆಗುವ ಮುನ್ನ ಬಿಸಿಸಿಐ ಮುಂದೆ ಗೌತಮ್ ಗಂಭೀರ್ ಒಂದಷ್ಟು ಷರತ್ತುಗಳನ್ನಿಟ್ಟಿದ್ದರು.
ಷರತ್ತು ನಂ.1
ಭಾರತ ತಂಡದ ಸಂಪೂರ್ಣ ನಿಯಂತ್ರಣ ಕೋಚ್ ಕೈಯಲ್ಲೇ ಇರಬೇಕು.
ಷರತ್ತು ನಂ.1
ತಂಡದ ಕೋಚಿಂಗ್ ಸ್ಟಾಫ್ ಆಯ್ಕೆ ಮಾಡುವ ಜವಾಬ್ದಾರಿಯನ್ನು ನನಗೇ ಬಿಡಬೇಕು.
ಈ ಎರಡು ಪ್ರಮುಖ ಷರತ್ತುಗಳನ್ನು ಹಾಕಿಯೇ ಗಂಭೀರ್ ಭಾರತ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದರು. ಮೊದಲು ಗಂಭೀರ್ ಷರತ್ತಿಗೆ ಓಕೆ ಅಂದಿದ್ದ ಬಿಸಿಸಿಐ ಈಗ ಉಲ್ಟಾ ಹೊಡೆಯುತ್ತಿದೆ.
ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಂತೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಮೊದಲು ಸೂಚಿಸಿದ ಹೆಸರು ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್. ದೇಶೀಯ ಕ್ರಿಕೆಟ್’ನಲ್ಲಿ ಅಪಾರ ಅನುಭವವುಳ್ಳ ವಿನಯ್ ಕುಮಾರ್ 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ವಿನಯ್ ಜೊತೆ ಆಡಿರುವ ಗಂಭೀರ್’ಗೆ ಕನ್ನಡಿಗನ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಅರಿವಿದೆ. ಹೀಗಾಗಿ ತಮ್ಮ ಜೊತೆ ಭಾರತ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಲು ವಿನಯ್ ಕುಮಾರ್ ಅವರೇ ಸೂಕ್ತ ಎಂದು ವಿನಯ್ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದ್ದರು. ಆದರೆ ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿರಲಿಲ್ಲ.
ವಿನಯ್ ಕುಮಾರ್ ಹೆಸರನ್ನು ಬಿಸಿಸಿಐ ತಿರಸ್ಕರಿಸುತ್ತಿದ್ದಂತೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಸೂಚಿಸಿದ 2ನೇ ಹೆಸರು ತಮಿಳುನಾಡಿನ ಮಾಜಿ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ. ಆದರೆ ಬಾಲಾಜಿ ಹೆಸರಿಗೂ ಬಿಸಿಸಿಐ ಒಪ್ಪಿಗೆ ಕೊಟ್ಟಿಲ್ಲ.
ತಾವು ಸೂಚಿಸಿದ ಹೆಸರುಗಳನ್ನು ಬಿಸಿಸಿಐ ರಿಜೆಕ್ಟ್ ಮಾಡಿದ ನಂತರ ಗೌತಮ್ ಗಂಭೀರ್ ಅವರ ಮೂರನೇ ಆಯ್ಕೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮಾರ್ಕೆಲ್. ಆದರೆ ವಿದೇಶೀ ಕೋಚ್ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ ಈ ಶಿಫಾರಸನ್ನೂ ತಳ್ಳಿ ಹಾಕಿದೆ.
ಈ ಮಧ್ಯೆ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಕ್ಷೇತ್ರರಕ್ಷಕ ಜಾಂಟಿ ರೋಡ್ಸ್ ಹೆಸರನ್ನು ಗಂಭೀರ್ ಸೂಚಿಸಿದ್ದರು. ಆದರೆ ಇದಕ್ಕೂ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಇನ್ನು ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಸ್ಟಾಫ್’ನಲ್ಲಿದ್ದ ನೆದರ್ಲೆಂಡ್ಸ್’ನ ಮಾಜಿ ಕ್ರಿಕೆಟಿಗ ರಯಾನ್ ಟೆನ್ ಡೊಸ್ಟೇಟ್ ಹೆಸರನ್ನು ಬಿಸಿಸಿಐ ಮುಂದಿಟ್ಟಿದ್ದರು ಗೌತಮ್ ಗಂಭೀರ್. ಆದರೆ ಇದಕ್ಕೂ ಬಿಸಿಸಿಐ No ಎಂದು ಬಿಟ್ಟಿದೆ.
ಹೀಗೆ ಕೋಚಿಂಗ್ ಸ್ಟಾಫ್ ಆಯ್ಕೆಯಲ್ಲಿ ಗೌತಮ್ ಗಂಭೀರ್ ಅವರಿಗೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಗಂಭೀರ್ ಸೂಚಿಸಿದ ಐದು ಹೆಸರುಗಳನ್ನು ಸೈಡಿಗೆ ತಳ್ಳಿರುವ ಬಿಸಿಸಿಐ, ಗಂಭೀರ್’ಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ.
ಶ್ರೀಲಂಕಾ ಪ್ರವಾಸದೊಂದಿಗೆ ಟೀಮ್ ಇಂಡಿಯಾದಲ್ಲಿ ಗಂಭೀರ್ ಪಯಣ ಶುರುವಾಗಲಿದ್ದು, ಇನ್ನೂ ಕೋಚಿಂಗ್ ಸ್ಟಾಫ್ ನೇಮಕವಾಗಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ 8 ದಿನ ಮಾತ್ರ. ಟೀಮ್ ಇಂಡಿಯಾ ಇನ್ನು ನಾಲ್ಕು ದಿನಗಳಲ್ಲಿ ಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ನೇಮಕವಾಗಬೇಕಿದೆ. ಆದರೆ ಗೌತಮ್ ಗಂಭೀರ್ ಮುಂದಿಟ್ಟ ಹೆಸರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಬಿಸಿಸಿಐ ಈ ಹಿಂದೆ ಗಂಭೀರ್’ಗೆ ಕೊಟ್ಟ ಮಾತನ್ನು ಮುರಿಯುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.