ಅಷ್ಟಕ್ಕೇ ಉರಿದು ಬಿದ್ದವರು ನಮ್ಮ ಕನ್ನಡಿಗನ ಇತಿಹಾಸ ತಿಳಿದುಕೊಂಡರೆ ಉತ್ತಮ..!
ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುತ್ತಿದ್ದಂತೆ, ಬೌಲಿಂಗ್ ಕೋಚ್ ಆಗಿ ನಮ್ಮ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ಅವರನ್ನು ಕೇಳಿದ್ದಾರೆ ಎಂಬ ಸುದ್ದಿಯಿದೆ. ಇದು ಸುದ್ದಿಯಷ್ಟೇ.. ಇನ್ನೂ ಖಚಿತತೆ ಇಲ್ಲ.. ಅಷ್ಟರಲ್ಲೇ ವಿನಯ್ ಕುಮಾರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅತೃಪ್ತ ಆತ್ಮಗಳ ಪ್ರಲಾಪ ಶುರುವಾಗಿದೆ.
ಯಾರು ಈ ವಿನಯ್ ಕುಮಾರ್..? ಏನು ಆತನ ಸಾಧನೆ..? ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಅವನಿಗೆ ಏನು ಅರ್ಹತೆಯಿದೆ..? ಈತ ಜಸ್ಪ್ರೀತ್ ಬುಮ್ರಾನಂತಹ ದಿಗ್ಗಜನಿಗೆ ಅದ್ಯಾವ ಬೌಲಿಂಗ್ ಪಾಠ ಹೇಳಿ ಕೊಡಬಲ್ಲ..? ಹೀಗೆಂದಷ್ಟು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೇಳಿದ್ದಾರೆ. ವಿನಯ್ ಕುಮಾರ್ credibilityಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ.
ಅಂಥವರ ಗಮನಕ್ಕೆ..
ಮಹಾರಾಷ್ಟ್ರದ ಪರಾಸ್ ಮಾಂಬ್ರೆಗೆ (ಭಾರತ ತಂಡದ ನಿರ್ಗಮಿತ ಬೌಲಿಂಗ್ ಕೋಚ್) ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಯಾವ ಅರ್ಹತೆಯಿತ್ತೋ, ವಿನಯ್ ಕುಮಾರ್’ಗೆ ಇರುವುದೂ ಅದೇ ಅರ್ಹತೆ. ಜಸ್ಪ್ರೀತ್ ಬುಮ್ರಾನಿಗೆ ಪರಾಸ್ ಮಾಂಬ್ರೆ ಯಾವ ಬೌಲಿಂಗ್ ಪಾಠ ಹೇಳಿ ಕೊಟ್ಟರೋ, ವಿನಯ್ ಕೋಚ್ ಆದರೆ ಹೇಳಿಕೊಡುವುದು ಅದನ್ನೇ..!
ಇನ್ನು ವಿನಯ್ ಕುಮಾರ್ ಯಾರು? ಆತನ ಸಾಧನೆಯೇನು ಎಂದು ಪ್ರಶ್ನಿಸುತ್ತಿರುವವರಿಗೆ ನಮ್ಮ ಕನ್ನಡಿಗನನ್ನು ಪರಿಚಯ ಮಾಡಿಕೊಡಲು ಬಯಸುತ್ತೇನೆ..
ಭರತದ ದೇಶೀಯ ಕ್ರಿಕೆಟ್’ನ ದಿಗ್ಗಜ ಕ್ರಿಕೆಟಿಗ, ಮೋಸ್ಟ್ ಸಕ್ಸಸ್’ಫುಲ್ ಮೀಡಿಯಂ ಪೇಸರ್ ಈ ವಿನಯ್ ಕುಮಾರ್..
ರಣಜಿ ಟ್ರೋಫಿ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವ ವೇಗದ ಬೌಲರ್ ವಿನಯ್ ಕುಮಾರ್ (442 ವಿಕೆಟ್ಸ್)..
ಭಾರತದ ದೇಶೀಯ ಕ್ರಿಕೆಟ್’ನ ಚರಿತ್ರೆಯಲ್ಲೇ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ ಗೆದ್ದಿರುವ ದೇಶದ ಮೊದಲ ಮತ್ತು ಏಕೈಕ ನಾಯಕ ವಿನಯ್ ಕುಮಾರ್..
ಕರ್ನಾಟಕ ಕ್ರಿಕೆಟ್ ಕಂಡ ಅಪ್ರತಿಮ ನಾಯಕ ಮತ್ತು ಶ್ರೇಷ್ಠ ಮ್ಯಾಚ್ ವಿನ್ನರ್ ವಿನಯ್ ಕುಮಾರ್..
ದಾವಣಗೆರೆಯ ಆಟೋ ಡ್ರೈವರ್ ಒಬ್ಬರ ಮಗನಾಗಿ ಹುಟ್ಟಿ ದೇಶದ ಪರ 41 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಾಧಕ ವಿನಯ್ ಕುಮಾರ್..
ವೃತ್ತಿಪರ ಕ್ರಿಕೆಟ್’ನಲ್ಲಿ ಒಟ್ಟು 923 ವಿಕೆಟ್’ಗಳನ್ನು ಪಡೆದಿರುವ ಅಸಾಮಾನ್ಯ ಕ್ರಿಕೆಟಿಗ ವಿನಯ್ ಕುಮಾರ್..
ಪರಾಸ್ ಮಾಂಬ್ರೆ, ಭರತ್ ಅರುಣ್ ಅಂಥವರು ಭಾರತ ತಂಡದ ಬೌಲಿಂಗ್ ಕೋಚ್’ಗಳಾಗಿ ಯಶಸ್ವಿಯಾಗಿದ್ದಾರೆ ಎಂದರೆ ವಿನಯ್ ಕುಮಾರ್ ಯಾಕಾಗಬಾರದು..?
ಅಷ್ಟಕ್ಕೂ ಬೌಲಿಂಗ್ ಕೋಚ್ ಜವಾಬ್ದಾರಿಯೇನು..? ಬೌಲರ್’ಗಳಿಗೆ ಬೌಲಿಂಗ್ ಪಾಠ ಹೇಳಿ ಕೊಡುವುದಾ..? ಹಾಗೆಂದು ತಿಳಿದಿದ್ದರೆ ಅದು ನಿಜವಲ್ಲ.. ಆ ಹಂತದಲ್ಲಿ ಆಡುತ್ತಿರುವ ಬೌಲರ್’ಗಳಿಗೆ ‘ನೀನು ಹಾಗೆ ಬೌಲಿಂಗ್ ಮಾಡು, ಹೀಗೆ ಬೌಲಿಂಗ್ ಮಾಡು’ ಎಂದು ಬೌಲಿಂಗ್’ನ ಎಬಿಸಿಡಿ ಹೇಳಿ ಕೊಡುವುದಲ್ಲ ಬೌಲಿಂಗ್ ಕೋಚ್ ಕೆಲಸ. ಯಾವ ಪಿಚ್’ನಲ್ಲಿ ಯಾವ ಲೆಂಗ್ತ್ ಹಾಕಿದರೆ ಉತ್ತಮ? ಯಾವ ಸನ್ನಿವೇಶಕ್ಕೆ ಹೇಗೆ ಬೌಲಿಂಗ್ ಮಾಡಬೇಕು..? ಬ್ಯಾಟ್ಸ್’ಮನ್’ಗಳ ದೌರ್ಬಲ್ಯವೇನು..? ಯಾವ ರೀತಿಯ ಎಸೆತಗಳಿಂದ ಅವರನ್ನು ಔಟ್ ಮಾಡಬಹುದು..? ಇಂಥದ್ದನ್ನು study ಮಾಡಿ, ಬೌಲರ್’ಗಳಿಗೆ ನೆರವಾಗುವುದಷ್ಟೇ ಬೌಲಿಂಗ್ ಕೋಚ್’ಗಳ ಕೆಲಸ. Of course, skill improve ಮಾಡಿಕೊಳ್ಳುವ ಪ್ರಯತ್ನ ನಿರಂತರವಾಗಿ ಇದ್ದೇ ಇರುತ್ತದೆ.
ಇಂಥದ್ದನ್ನೆಲ್ಲಾ ಕರ್ನಾಟಕ ತಂಡದ ನಾಯಕರಾಗಿದ್ದಾಗ ಅತ್ಯಂತ ಯಶಸ್ವಿಯಾಗಿ, ಸಮರ್ಥವಾಗಿ ನಿಭಾಯಿಸಿದವರು ವಿನಯ್ ಕುಮಾರ್. ಅವರಲ್ಲಿ ಅನುಭವವಿದೆ, ಅವರ ಹಿಂದೆ ಒಂದು ಚರಿತ್ರೆಯಿದೆ. ನಿವೃತ್ತಿಯ ನಂತರ ಕೋಚ್ ಆಗಿಯೂ ಪಳಗಿರುವ ವಿನಯ್ ಕುಮಾರ್ ಭಾರತದ ಬೌಲಿಂಗ್ ಕೋಚ್ ಆದರೆ ಖಂಡಿತಾ ಯಶಸ್ವಿಯಾಗಬಲ್ಲರು. ಅವಕಾಶ ಕೊಟ್ಟರೆ ತಾನೇ ಸಾಮರ್ಥ್ಯ ಹೊರಬರಲು ಸಾಧ್ಯ..?