ಮಹಾಭಾರತದ ಭೀಮಸೇನನಿಗೆ ಸಹೋದರ ಅರ್ಜುನನೆಂದರೆ ಪ್ರಾಣ. ತಮ್ಮನ ಗೆಲುವಲ್ಲೇ ತನ್ನ ಗೆಲುವನ್ನು ನೋಡುತ್ತಿದ್ದ ನೂರಾನೆ ಬಲದ ಭೀಮ ಅರ್ಜುನನಿಗಾಗಿ ಸೋಲಲೂ ಸಿದ್ಧವಾಗಿ ಬಿಡುತ್ತಿದ್ದ.
ರೋಹಿತ್ ಶರ್ಮಾನಿಗೆ ವಿರಾಟ್ ಕೊಹ್ಲಿ ಮೇಲಿರುವುದು ಭೀಮನಿಗೆ ಅರ್ಜುನನ ಮೇಲಿದ್ದಂಥದ್ದೇ ಸಹೋದರತ್ವದ ಪ್ರೇಮ. ಇಬ್ಬರ ಮಧ್ಯೆ ಅಂಥಾ ಬಾಂಧವ್ಯ ಇರದೇ ಹೋಗಿದ್ದರೆ, ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆಲ್ಲುತ್ತಲೇ ಇರಲಿಲ್ಲ.
ಹಾಗೆಂದು ಇವರೇನು ಪ್ರಾಣ ಸ್ನೇಹಿತರೂ ಅಲ್ಲ, ಇವರದ್ದು ಸ್ನೇಹಕ್ಕೆ ಟ್ರೇಡ್ ಮಾರ್ಕ್ ಎನ್ನುವಂಥಾ ಗೆಳೆತನವೂ ಅಲ್ಲ. ಇಬ್ಬರೂ ಒಂದೇ ಕಾಲಘಟ್ಟದ ಆಟಗಾರರಾಗಿರುವ ಕಾರಣ ಇಬ್ಬರ ಮಧ್ಯೆ ವೃತ್ತಿ ಮಾತ್ಸರ್ಯವಿತ್ತು, ಪರಸ್ಪರ ಸ್ಪರ್ಧೆಯೂ ಇತ್ತು. ಮನಸ್ತಾಪ, ಭಿನ್ನಾಭಿಪ್ರಾಯಗಳಂತೂ ಬೆಂಕಿಯಂತೆ ಭುಗಿಲೇಳುತ್ತಲೇ ಇದ್ದವು.
2020..
ವಿರಾಟ್ ಕೊಹ್ಲಿಯ ನಂತರ ಭಾರತದ best limited over cricketer ರೋಹಿತ್ ಶರ್ಮಾ ಗಾಯಗೊಂಡಿದ್ದ ಕಾರಣ ಆಸ್ಟ್ರೇಲಿಯಾ ವಿರುದ್ಧದ ವೈಟ್ ಬಾಲ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಇನ್ನೇನು ಭಾರತ ತಂಡ ಆಸ್ಟ್ರೇಲಿಯಾಗೆ ಹೊರಡಬೇಕು.. ಸುದ್ದಿಗೋಷ್ಠಿಗೆ ಬಂದಿದ್ದ ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾನ ಫಿಟ್ನೆಸ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ವಿರಾಟ್ ಹೇಳಿದ್ದು ಒಂದೇ ಮಾತು.. ‘’I have no idea’’ ಎಂದು. ನಾಯಕನಾದವನಿಗೆ ಪ್ರತಿಯೊಬ್ಬ ಆಟಗಾರನ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದರಲ್ಲೂ ರೋಹಿತ್ ಶರ್ಮಾ ನಿನ್ನೆ ಮೊನ್ನೆ ಬಂದ ಚಿಲ್ಟಿ ಪಿಲ್ಟು ಅಲ್ಲ. ಹತ್ತಾರು ವರ್ಷಗಳ ಕಾಲ ವಿರಾಟ್ ಕೊಹ್ಲಿ ಜೊತೆಗೇ ಆಡಿದವನು.
ವಿರಾಟ್ ಕೊಹ್ಲಿ ಗೊತ್ತಿದ್ದು ಆ ರೀತಿ ಹೇಳಿದನೋ, ಗೊತ್ತಿಲ್ಲದೆ ಹೇಳಿದನೋ ತಿಳಿಯದು. ಆದರೆ ರೋಹಿತ್ ಮತ್ತು ಕೊಹ್ಲಿ ನಡುವಿನ ಮನಸ್ತಾಪ ಮೊದಲ ಬಾರಿ ಸಾರ್ವಜನಿಕವಾಗಿ ಸದ್ದು ಮಾಡಿದ್ದು ಅಲ್ಲೇ..
ಉರಿಯುವ ಬೆಂಕಿಗೆ ಕೆಲವರು ತುಪ್ಪ ಸುರಿದರು. ಆಗ ಕೋಚ್ ಆಗಿದ್ದ ರವಿಶಾಸ್ತ್ರಿ ಇಬ್ಬರ ಮಧ್ಯೆ ಸಂಧಾನ ನಡೆಸಿ ಒಂದು ಹಂತಕ್ಕೆ ಇಬ್ಬರನ್ನೂ ಒಂದುಗೂಡುವಲ್ಲಿ ಯಶಸ್ವಿಯಾಗಿದ್ದರು.
ಇದಾದ ನಂತರ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲು ಬಿಸಿಸಿಐ ಮುಂದಾಯಿತು. ವೈಟ್ ಬಾಲ್ ಕ್ರಿಕೆಟ್’ನ ಸಂಪೂರ್ಣ ಜವಾಬ್ದಾರಿ ನೀಡುವುದಾದರೆ ನಾನು ಜವಾಬ್ದಾರಿ ಹೊರತು ಸಿದ್ಧ ಎಂದು ಬಿಟ್ಟ ರೋಹಿತ್ ಶರ್ಮಾ. ಅಂದರೆ ರೋಹಿತ್ ಟಿ20 ಜೊತೆಗೆ ಏಕದಿನ ತಂಡದ ನಾಯಕತ್ವದ ಮೇಲೂ ಕಣ್ಣಿಟ್ಟಿದ್ದ. ಅನಿವಾರ್ಯವಾಗಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ತೀರಾ ನೊಂದುಕೊಂಡ ವಿರಾಟ್, ಟೆಸ್ಟ್ ತಂಡದ ಸಾರಥ್ಯವನ್ನೂ ತ್ಯಜಿಸಿ ಬಿಟ್ಟ.
ಅಲ್ಲಿಂದ ಇಬ್ಬರ ಮಧ್ಯೆ ಮತ್ತೊಂದು ಸುತ್ತಿನ ಶೀತಲ ಸಮರ ಶುರುವಾಯಿತು. ಆ ಗಾಯಕ್ಕೆ ಮದ್ದು ಅರೆದು ಇಬ್ಬರನ್ನೂ ಒಂದುಗೂಡಿಸಿದವರು 2021ರಲ್ಲಿ ಭಾರತ ತಂಡದ ಕೋಚ್ ಆಗಿ ಬಂದ ರಾಹುಲ್ ದ್ರಾವಿಡ್.
ಈ ಮಧ್ಯೆ ವಿರಾಟ್ ಜೊತೆ ಸ್ಪರ್ಧೆ ನಡೆಸುತ್ತಿದ್ದ ರೋಹಿತ್ ಶರ್ಮಾ, ನಾಯಕನಾಗುತ್ತಿದ್ದಂತೆ ಸಂಪೂರ್ಣ ಬದಲಾಗಿ ಬಿಟ್ಟ. ರೋಹಿತ್’ನ ನಡವಳಿಕೆಯಲ್ಲಾದ ಬದಲಾವಣೆ, ಆತನ ಬಗ್ಗೆ ಕೊಹ್ಲಿಗಿದ್ದ ತಪ್ಪು ಅಭಿಪ್ರಾಯವನ್ನೂ ಬದಲಿಸಿ ಬಿಟ್ಟಿತು. ನಾಯಕನ ಹೆಗಲಿಗೆ ಹೆಗಲು ಕೊಟ್ಟು ನಿಂತ ಬಿಟ್ಟ ವಿರಾಟ್. ಅಲ್ಲಿಂದ ಮುಂದೆ ನಡೆದದ್ದು ಇತಿಹಾಸ..
2022ರ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ವಿರಾಟ್ ಗೆಲ್ಲಿಸಿದಾಗ, ಆತನನ್ನು ರೋಹಿತ್ ಶರ್ಮಾ ತನ್ನ ಹೆಗಲ ಮೇಲೆ ಹೊತ್ತು ಮೆರೆಸಿದ ದೃಶ್ಯ, ಮೊನ್ನೆ ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಪದೇ ಪದೇ ಎಡವುತ್ತಿದ್ದಾಗ ರೋಹಿತ್ ನೀಡಿದ ನೈತಿಕ ಬೆಂಬಲ… ಫೈನಲ್ ಗೆದ್ದಾಗ ಇಬ್ಬರೂ ಕಣ್ಣೀರು ಹಾಕಿ ಅಪ್ಪಿಕೊಂಡು ಸಂಭ್ರಮಿಸಿದ್ದು.. ಒಬ್ಬರನ್ನೊಬ್ಬರು ಸಂತೈಸಿದ ರೀತಿ.. ಆ ಕ್ಷಣ ನನ್ನ ಕ್ರಿಕೆಟ್ ಜೀವನದ ಮರೆಯಲಾಗದ ಕ್ಷಣ ಎಂದು ವಿರಾಟ್ ಕೊಹ್ಲಿ ಹೇಳಿದ್ದು.. ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತು.. ಹೀಗೆ ಒಂದಕ್ಕಿಂತ ಒಂದು ಅದ್ಭುತ ದೃಶ್ಯಗಳನ್ನು ಕಟ್ಟಿ ಕೊಟ್ಟ ಈ ಭಲೇ ಜೋಡಿ T20I ಕ್ರಿಕೆಟ್’ನಿಂದ ನಿರ್ಗಮಿಸಿದೆ.
15 ವರ್ಷಗಳಿಂದ ಜೊತೆ ಜೊತೆಗೇ ಆಡುತ್ತಿರುವ ಈ ಭೀಮಾರ್ಜುನರು ಇನ್ನೆಂದೂ ಭಾರತ ಪರ ಟಿ20 ಕ್ರಿಕೆಟ್’ನಲ್ಲಿ ಆಡಲಾರರು. ಐಪಿಎಲ್ ಕಥೆ ಗೊತ್ತಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜೊತೆ ರೋಹಿತ್ ಶರ್ಮಾ ಮುನಿಸಿಕೊಂಡಿರುವ ವರ್ತಮಾನವಿದೆ..!