ಆ ಒಂದು ಘಟನೆಯಿಂದ ನಷ್ಟವಾಗಿದ್ದು ಅವನಿಗೂ, ಕರ್ನಾಟಕ ಕ್ರಿಕೆಟ್’ಗೂ..
ಒಬ್ಬ ಒಳ್ಳೆಯ ಕ್ರಿಕೆಟಿಗ, ಒಳ್ಳೆಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್.. ಕರ್ನಾಟಕ ತಂಡದ ರಣಜಿ ವಿಕ್ರಮಗಳಿಗೆ ಕಾರಣರಾದವರಲ್ಲೊಬ್ಬ ತೆರೆಮರೆಗೆ ಸರಿದು ಹೋದ ಕಥೆಯಿದು.
ಸಿ.ಎಂ ಗೌತಮ್..
ತಿಲಕ್ ನಾಯ್ಡು ಅವರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವಾದನು. ಸಿ.ಎಂ ಗೌತಮ್ ಎಂಥಾ ಸಾಲಿಡ್ ವಿಕೆಟ್ ಕೀಪರ್ ಎಂದರೆ, ಆತ ತೆರೆಮರೆಗೆ ಸರಿದ ನಂತರ ಇವತ್ತಿಗೂ ಕರ್ನಾಟಕ ತಂಡಕ್ಕೊಬ್ಬ ಒಳ್ಳೆಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಿಕ್ಕಿಯೇ ಇಲ್ಲ.
ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಕೇಳಿ ಬಂದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಿ.ಎಂ ಗೌತಮನ ಕ್ರಿಕೆಟ್ ಬದುಕಿಗೇ ಕೊಳ್ಳಿ ಇಟ್ಟು ಬಿಟ್ಟಿತು. ಆತ ಮ್ಯಾಚ್ ಫಿಕ್ಸಿಂಗ್’ನಲ್ಲಿ ಭಾಗಿಯಾಗಿದ್ದನೋ? ಇಲ್ಲವೋ.. ಅಥವಾ ಪರಿಸ್ಥಿತಿಯ ಕೈಗೊಂಬೆಯಾದನೋ? ಅವನನ್ನು ಬಲಿಪಶು ಮಾಡಲಾಯಿತೋ..? ಎಲ್ಲವೂ ಇವತ್ತಿಗೆ ಯಕ್ಷಪ್ರಶ್ನೆಗಳೇ.. ಆತ ತಪ್ಪು ಮಾಡಿದ್ದಾನೆ ಎಂದು ತೀರ್ಪು ಕೊಡುವ ಅಧಿಕಾರವೂ ನಮಗಿಲ್ಲ. ಉತ್ತರ ಕೊಡಬೇಕಿದ್ದ ಪೊಲೀಸ್ ತನಿಖೆ ಹಳ್ಳ ಹಿಡಿದು ವರ್ಷಗಳೇ ಕಳೆದಿವೆ.
ಆದರೆ ಇದನ್ನು ಬದಿಗಿಟ್ಟು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುವುದಾದರೆ ಸಿ.ಎಂ ಗೌತಮ್ ಒಬ್ಬ ಒಳ್ಳೆಯ ಕ್ರಿಕೆಟಿಗ. ಎಷ್ಟೋ ಬಾರಿ ಕರ್ನಾಟಕದ ತಂಡದ ಅಗ್ರಕ್ರಮಾಂಕ ಕುಸಿದು ಬಿದ್ದಾಗ ಆಪದ್ಬಾಂಧವನಂತೆ ನಿಂತು ಬಿಡುತ್ತಿದ್ದ ನಂಬಿಕಸ್ಥ ಬ್ಯಾಟ್ಸ್’ಮನ್ ಸಿ.ಎಂ ಗೌತಮ್.
2009ರ ರಣಜಿ ಟ್ರೋಫಿ ಟೂರ್ನಿ..
ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ಬಿಡುವು ಸಿಕ್ಕಿದ್ದ ಕಾರಣ ಕರ್ನಾಟಕ ಪರ ಅಖಾಡಕ್ಕಿಳಿದಿದ್ದ ರಾಹುಲ್ ದ್ರಾವಿಡ್ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ತಿಲಕ್ ನಾಯ್ಡು ವಿಕೆಟ್ ಕೀಪರ್ ಆಗಿ ತಂಡದಲ್ಲಿರುತ್ತಾರೆ. 4ನೇ ಪಂದ್ಯಕ್ಕೆ ತಿಲಕ್ ನಾಯ್ಡು ಬದಲು ಯುವ ಪ್ರತಿಭೆ ಸಿ.ಎಂ ಗೌತಮ್’ರನ್ನು ಆಯ್ಕೆ ಮಾಡುತ್ತಾರೆ ದ್ರಾವಿಡ್. ಕರ್ನಾಟಕ ತಂಡದಲ್ಲಿ ಹೀಗೆ ಶುರುವಾಗಿತ್ತು ಗೌತಮನ ಪಯಣ.
ಅಲ್ಲಿಂದ ಮೂರು ವರ್ಷ…
2012-13ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಿ.ಎಂ ಗೌತಮ್ ಎರಡು ದ್ವಿಶತಕಗಳನ್ನು ಬಾರಿಸಿ ಬಿಟ್ಟ.. ವಿದರ್ಭ ವಿರುದ್ಧ ಮೈಸೂರಲ್ಲಿ 257 ರನ್, ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ 264 ನಾಟೌಟ್. ಆ ವರ್ಷ 9 ಪಂದ್ಯಗಳಲ್ಲಿ 943 ರನ್ ಗಳಿಸಿದ ಗೌತಮ್ ದೇಶೀಯ ಕ್ರಿಕೆಟ್’ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿ ಬಿಟ್ಟಿದ್ದ.
2013ರಲ್ಲಿ ಕರ್ನಾಟಕ ತಂಡದ ಗೆಲುವಿನ ಅಭಿಯಾನ ಆರಂಭವಾಗಿದ್ದೇ ಸಿ.ಎಂ ಗೌತಮನ ನಾಯಕತ್ವದಲ್ಲಿ. ಮೊದಲ ಮೂರು ಪಂದ್ಯಗಳು ಡ್ರಾಗೊಂಡಿದ್ದವು. ಮದುವೆಯ ಕಾರಣ ಒಡಿಶಾ ಮತ್ತು ಹರ್ಯಾಣ ವಿರುದ್ಧದ ಪಂದ್ಯಗಳಿಂದ ನಾಯಕ ವಿನಯ್ ಕುಮಾರ್ ಹೊರಗುಳಿದಾಗ ತಂಡದ ನಾಯಕತ್ವ ಗೌತಮ್ ಹೆಗಲೇರಿತ್ತು. ಆ ಎರಡೂ ಪಂದ್ಯಗಳನ್ನು ಗೆದ್ದ ಕರ್ನಾಟಕ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.
2014ರಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದ ವರ್ಷ 436 ರನ್ ಗಳಿಸಿದ್ದ ಗೌತಮ್. ವಿಕೆಟ್ ಕೀಪಿಂಗ್ ವಿಚಾರಕ್ಕೆ ಬಂದರೆ ಆತ ವಿಕೆಟ್ ಹಿಂದಿನ ಗೋಡೆ.. ಆ ವರ್ಷ ವಿಕೆಟ್ ಹಿಂದೆ 11 ಪಂದ್ಯಗಳಲ್ಲಿ 43 ಬಲಿ ಪಡೆದಿದ್ದ ಸಿ.ಎಂ ಗೌತಮ್ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ.
ಸ್ವಭಾವತಃ ಒಳ್ಳೆಯ ಮನುಷ್ಯ. #KPL ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆತನನ್ನು ಪೊಲೀಸರು ಅರೆಸ್ಟ್ ಮಾಡಿ ಜೀಪಿನಲ್ಲಿ ಕೂರಿಸಿಕೊಂಡು ಹೋಗಿದ್ದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಎಂಥಾ ಕ್ರಿಕೆಟಿಗನಿಗೆ ಅದೆಂಥಾ ಸ್ಥಿತಿ ಬಂತು ಎಂಬ ಬೇಸರ…
ಸಿ.ಎಂ ಗೌತಮ್’ಗೆ ಕರ್ನಾಟಕದ ರಣಜಿ ದಿಗ್ಗಜನಾಗುವ ಎಲ್ಲಾ ಅರ್ಹತೆಗಳಿದ್ದವು. ಆದರೆ ಆತನ ಮೇಲೆ ಬಂದ ಮ್ಯಾಚ್ ಫಿಕ್ಸಿಂಗ್ ಆರೋಪ ಎಲ್ಲವನ್ನೂ ತಿಂದು ಹಾಕಿ ಬಿಟ್ಟಿತು.