ಕಳೆದ ಐದು ವರ್ಷಗಳಲ್ಲಿ ಕನಿಷ್ಠ25 ಏಕದಿನ ಅಂತರಾಷ್ಟ್ರೀಯ ಇನ್ನಿಂಗ್ಸ್’ಗಳನ್ನು ಆಡಿದವರ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್’ಗಿಂತ ಬೆಸ್ಟ್ ಬ್ಯಾಟ್ಸ್’ಮನ್ ಇದ್ದರೆ ತೋರಿಸಿ..
ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು. ಆ ಬೆನ್ನೆಲುಬನ್ನೇ ಮುರಿಯುವ ಪ್ರಯತ್ನ ನಡೆಯತ್ತಿದೆಯೇ..? ಈ ಪ್ರಶ್ನೆ ಹುಟ್ಟಲು ಕಾರಣವಿದೆ.
ಶ್ರೀಲಂಕಾ ವಿರುದ್ಧ 3 ಏಕದಿನ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ 27 ವರ್ಷಗಳ ನಂತರ ದ್ವೀಪರಾಷ್ಟ್ರದಲ್ಲಿ ಏಕದಿನ ಸರಣಿ ಸೋತಿದೆ. ಕಾಕತಾಳೀಯ ಏನೆಂದರೆ, 1997ರಲ್ಲಿ ಭಾರತ ವಿರುದ್ಧ ಶ್ರೀಲಂಕಾ ತನ್ನದೇ ನೆಲದಲ್ಲಿ ಏಕದಿನ ಸರಣಿ ಗೆದ್ದಾಗ ತಂಡದ ನಾಯಕರಾಗಿದ್ದವರು ಸಿಡಿಲ ಹೊಡೆತಗಳ ದಾಂಡಿಗ ಸನತ್ ಜಯಸೂರ್ಯ. ಆ ಸರಣಿಯಲ್ಲೇ ಅವರೇ ಮ್ಯಾನ್ ಆಫ್ ದಿ ಸೀರೀಸ್.
ಈಗ 27 ವರ್ಷಗಳ ನಂತರ ಭಾರತ ವಿರುದ್ಧ ಏಕದಿನ ಸರಣಿ ಗೆದ್ದಿರುವ ಶ್ರೀಲಂಕಾ ತಂಡದ ಕೋಚ್ ಆಗಿರುವವರು ಅದೇ ಸನತ್ ಜಯಸೂರ್ಯ.
ಬಲಾಬದಲ್ಲಿ ಭಾರತಕ್ಕೆ ಯಾವ ರೀತಿಯಲ್ಲೂ ಸಾಟಿಯೇ ಇಲ್ಲದ ಶ್ರೀಲಂಕಾ ವಿರುದ್ಧ ಭಾರತ ಏಕದಿನ ಸರಣಿ ಸೋತಿದೆ. ಅದೂ ಕೋಚ್ ಆಗಿ ಗೌತಮ್ ಗಂಭೀರ್ ಎದುರಿಸಿದ ಮೊದಲ ಏಕದಿನ ಸರಣಿಯಲ್ಲಿ..!
3ನೇ ಪಂದ್ಯದಲ್ಲಿ ಕೆ.ಎಲ್ ರಾಹುಲ್’ನನ್ನು ಹೊರಗಿಟ್ಟು ರಿಷಭ್ ಪಂತ್’ನನ್ನ ಆಡಿಸಿದ ಮರ್ಮವೇ ಅರ್ಥವಾಗುತ್ತಿಲ್ಲ. ಈ ಪಂತ್ ನಮ್ಮ ರಾಹುಲ್’ಗಿಂತಾ ದೊಡ್ಡ ಬ್ಯಾಟ್ಸ್’ಮನಾ..? ಹೋಗಲಿ, ವಿಕೆಟ್ ಕೀಪಿಂಗ್’ನಲ್ಲಿ ಧೋನಿಯಂತೆ ಕೌಶಲ್ಯ ಹೊಂದಿದ್ದಾನಾ..? ಅದೂ ಇಲ್ಲ. ರಿಷಭ್ ಪಂತ್’ಗಿಂತ any day, any time, in any condition ರಾಹುಲ್ ಬೆಸ್ಟ್.. ರಾಹುಲ್’ನನ್ನ ರಿಷಭ್ ಪಂತ್’ಗೆ ಹೋಲಿಕೆ ಮಾಡಿದರೆ ಅದು ನಮ್ಮ ಹುಡುಗನಿಗೆ ನಾವೇ ಮಾಡುವ ಅವಮಾನ.
ಹಾಗಂತ ರಿಷಭ್ ಪಂತ್ ಕಳಪೆ ಆಟಗಾರನೆಂದು ಹೇಳುತ್ತಿಲ್ಲ. ಆತನೂ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲಿಸಿರುವ ಆಟಗಾರ. ಆದರೆ ರಾಹುಲ್ Vs ರಿಷಭ್ ಪಂತ್ ಎಂದು ಬಂದರೆ, ಕ್ವಾಲಿಟಿಯಲ್ಲಿ ನಿಸ್ಸಂದೇಹವಾಗಿ ರಾಹುಲ್ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಇಂಥಾ ರಾಹುಲ್’ನನ್ನು ಹೊರಗಿಟ್ಟು ತಂಡದ ತರಬೇತುದಾರ ಮತ್ತು ನಾಯಕ ಅದ್ಯಾವ ಸಾಧನೆ ಮಾಡಲು ಹೊರಟರೋ ಗೊತ್ತಿಲ್ಲ..!
ಕಳೆದ ಐದು ವರ್ಷಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ 25 ಇನ್ನಿಂಗ್ಸ್ ಆಡಿರುವ ಆಟಗಾರರ ಸಾಧನೆಗಳನ್ನೊಮ್ಮೆ ನೋಡಿ.
ಕೆ.ಎಲ್ ರಾಹುಲ್ | ಭಾರತ: 1791 ರನ್, 68 ಸರಾಸರಿ
ಗ್ಲೆನ್ ಮ್ಯಾಕ್ಸ್’ವೆಲ್ | ಆಸ್ಟ್ರೇಲಿಯಾ: 1016 ರನ್, 53.50 ಸರಾಸರಿ
ಡೇವಿಡ್ ಮಿಲ್ಲರ್ | ದಕ್ಷಿಣ ಆಫ್ಕಿಕಾ: 1400 ರನ್, 51.90 ಸರಾಸರಿ
ಹ್ಯಾರಿ ಟೆಕ್ಟರ್ | ಐರ್ಲೆಂಡ್: 1747 ರನ್, 49.90 ಸರಾಸರಿ
ಡ್ಯಾರಿಲ್ ಮಿಚೆಲ್ | ನ್ಯೂಜಿಲೆಂಡ್: 1280 ರನ್, 49.20 ಸರಾಸರಿ
ಈ ಅಂಕಿ ಅಂಶಗಳನ್ನು ನೋಡಿದ ಮೇಲೂ ರಾಹುಲ್’ನನ್ನು ಆಡುವ ಬಳಗದಿಂದ ಹೊರಗಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದರೆ, ಅದರ ಹಿಂದಿನ ಮರ್ಮವೇನು ಎಂಬುದನ್ನು ಅವರೇ ಹೇಳಬೇಕು.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಜೊತೆ ರಾಹುಲ್ ನೆಲಕಚ್ಚಿ ನಿಲ್ಲದೇ ಹೋಗಿದ್ದರೆ, ಅಲ್ಲೇ ಭಾರತ ಸೋತಿರುತ್ತಿತ್ತು. 2ನೇ ಪಂದ್ಯದಲ್ಲಿ ಸೊನ್ನೆ ಸುತ್ತಿದ ಎಂಬ ಒಂದೇ ಕಾರಣಕ್ಕೆ 3ನೇ ಪಂದ್ಯದಲ್ಲಿ ಅವಕಾಶ ನಿರಾಕರಣೆ..?
ಸನ್ಮಾನ್ಯ ಶ್ರೀ ಗೌತಮ್ ಗಂಭೀರ್ ಅವರೇ..
ನಿಮ್ಮ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಏನು ಟನ್’ಗಟ್ಟಲೆ ರನ್ ಹೊಡೆದು ಬಿಟ್ಟಿದ್ದಾನಾ..? ರಿಷಭ್ ಪಂತ್’ನನ್ನು ಆಡಿಸಲೇಬೇಕೆಂದಿದ್ದರೆ ಶ್ರೇಯಸ್’ನನ್ನು ಹೊರಗಿಡುವ ಅವಕಾಶವೂ ಇತ್ತಲ್ಲಾ..? ಓಹ್, ಶ್ರೇಯಸ್ ಅಯ್ಯರ್ ನಿಮ್ಮ ಹುಡುಗನೆಂಬ ಮಮಕಾರವಿರಬೇಕು. ಹಾಗೆಯೇ ಕೆ.ಎಲ್ ರಾಹುಲ್ ನಮ್ಮ ಹುಡುಗನೆಂಬ ಪ್ರೀತಿ, ಅಭಿಮಾನ ನಮಗೂ ಇದೆ.