ಕ್ರಿಕೆಟ್ ಜಗತ್ತಿನ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್, ಅರ್ಥಾತ್ ಐಪಿಎಲ್.
17 ವರ್ಷಗಳನ್ನು ಪೂರೈಸಿರುವ ಐಪಿಎಲ್ ಟೂರ್ನಿ 18ನೇ ವರ್ಷಕ್ಕೆ ಕಾಲಿಟ್ಟಿದೆ. ಮುಂದಿನ ವರ್ಷದ ಐಪಿಎಲ್ ಬಗ್ಗೆ ಈಗಿನಿಂದಲೇ ಕುತೂಹಲಗಳು ಗರಿಗೆದರಿವೆ. ಕಾರಣ, ಐಪಿಎಲ್ ಮೆಗಾ ಆಕ್ಷನ್.
ಹೌದು. ಐಪಿಎಲ್ ಮೆಗಾ ಆಕ್ಷನ್ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆಯಿದೆ. ಐಪಿಎಲ್’ನಲ್ಲಿ ಆಡುತ್ತಿರುವ 10 ತಂಡಗಳಿಗೆ ತಲಾ ನಾಲ್ವರು ಆಟಗಾರರನ್ನು ರೀಟೇನ್ ಮಾಡಿಕೊಳ್ಳುವ ಅವಕಾಶ ಸಿಗಲಿದ್ದು, ಉಳಿದ ಆಟಗಾರರನ್ನು ಹರಾಜಿಗೆ ಬಿಡಬೇಕಿದೆ. ಹಾಗಾದರೆ ಯಾವ ಯಾವ ತಂಡಗಳು ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ? ಈ ಕುತೂಹಲದ ಮಧ್ಯೆ ಕನ್ನಡಿಗ ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Yes. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಜೊತೆ ರಾಹುಲ್ ಅವರಿಗೆ ಅಸಮಾಧಾನ ಇರುವುದು ಜಗತ್ತಿಗೇ ಗೊತ್ತಿರುವ ಸಂಗತಿ. ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಾಗ, ಲಕ್ನೋ ತಂಡದ ಮಾಲೀಗ ಸಂಜೀವ್ ಗೋಯೆಂಕಾ, ನಾಯಕ ರಾಹುಲ್ ಅವರನ್ನು ಕ್ಯಾಮರಾಗಳ ಮುಂದೆಯೇ ನಿಂದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಘಟನೆಯ ನಂತರ ರಾಹುಲ್ ಲಕ್ನೋ ತಂಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದರೆ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ನಾಯಕ, ವಿಕೆಟ್ ಕೀಪರ್ ಮತ್ತು ಓಪನರ್.. ಈ ಮೂರೂ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಆಟಗಾರನೊಬ್ಬನ ಅವಶ್ಯಕತೆ RCB ತಂಡಕ್ಕಿದೆ. ರಾಯಲ್ ಚಾಲೆಂಜರ್ಸ್ ನಾಯಕರಾಗಿದ್ದ ದಕ್ಷಿಣ ಆಫ್ರಿಕಾದ ಫಾಫ್ ಡು’ಪ್ಲೆಸಿಸ್ ಅವರಿಗೀಗ 40 ವರ್ಷ ವಯಸ್ಸು. ಹೀಗಾಗಿ ಅವರನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇನ್ನು RCB ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಫಾಫ್ ಮತ್ತು ಡಿಕೆ ಅವರಿಂದ ಖಾಲಿಯಾಗುವ ಜಾಗವನ್ನು ತುಂಬಲು ಕೆ.ಎಲ್ ರಾಹುಲ್ ಅವರಿಗಿಂತ ಉತ್ತಮ ಆಯ್ಕೆ ಬೇರೆ ಯಾವುದಿದೆ ಎಂಬ ಪ್ರಶ್ನೆಯನ್ನು RCB ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಕೇಳುತ್ತಿದ್ದಾರೆ.
ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡು ತಂಡದ ನಾಯಕರಾದರೆ ಅದು ಕನ್ನಡಿಗರ ಪಾಲಿಗೆ ಶುಭ ಸುದ್ದಿ. ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆಯವರ ನಂತರ ಕರ್ನಾಟಕದ ಮತ್ತೊಬ್ಬ ಆಟಗಾರ RCB ನಾಯಕರಾಗಿಲ್ಲ.
ಅಂದ ಹಾಗೆ, ಕೆ.ಎಲ್ ರಾಹುಲ್ ಐಪಿಎಲ್’ನಲ್ಲಿ ತಮ್ಮ ಅಭಿಯಾನ ಶುರು ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕವೇ. 2013ರಲ್ಲಿ ಕೇವಲ 10 ಲಕ್ಷ ರೂಪಾಯಿಗೆ RCB ತಂಡ ಸೇರಿಕೊಂಡಿದ್ದ ರಾಹುಲ್, 2014ರಲ್ಲಿ 1 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು. ಎರಡು ವರ್ಷಗಳ ಕಾಲ, ಅಂದರೆ 2015ರವರೆಗೆ ಹೈದರಾಬಾದ್ ಪರ ಆಡಿದ್ದ ರಾಹುಲ್, 2016ರಲ್ಲಿ ಮತ್ತೆ RCBಗೆ ಮರಳಿದ್ದರು. 2016ರ ಟೂರ್ನಿಯಲ್ಲಿ 14 ಪಂದ್ಯಗಳಿಂದ 397 ರನ್ ಗಳಿಸಿದ್ದ ರಾಹುಲ್, ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ತಲುಪುವಲ್ಲಿ ಮಹತ್ವ ಪಾತ್ರ ನಿಭಾಯಿಸಿದ್ದರು.
8 ವರ್ಷಗಳ ನಂತರ ಕೆ.ಎಲ್ ರಾಹುಲ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆಯೇ? ಗೊತ್ತಿಲ್ಲ. ಆದರೆ ಇಂಥದ್ದೊಂದು ಚರ್ಚೆಯಂತೂ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಕನ್ನಡಿಗನನ್ನು ಮರಳಿ ತಂಡಕ್ಕೆ ಕರೆ ತರಲು ಉತ್ಸುಕವಾಗಿದ್ದು, ರಾಹುಲ್ ಜೊತೆ ಸಂಪರ್ಕದಲ್ಲಿದೆ ಎನ್ನಲಾಗುತ್ತಿದೆ.