ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮನೀಶ್ ಪಾಂಡೆ ಇವತ್ತು ವಿರಾಟ್ ಕೊಹ್ಲಿಯಂತೆ ಕ್ರಿಕೆಟ್ ಜಗತ್ತಿನ ದಿಗ್ಗಜನಾಗಿರಬೇಕಿತ್ತು.
ಆದರೆ..
ಅದು ಅವನ ಹಣೆಯಲ್ಲಿ ಬರೆದಿರಲಿಲ್ಲ..
ಆಗಿನ್ನೂ ಮನೀಶ್ ಪಾಂಡೆ 13-14ರ ಹುಡುಗ. ಬೆಂಗಳೂರಿನ ಹಲಸೂರಿನಲ್ಲಿದ್ದ ಮನೆಯಿಂದ ಸೈಕಲ್ ಏರಿ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ KSCA ಬಿ ಗ್ರೌಂಡ್’ಗೆ ಅಭ್ಯಾಸಕ್ಕೆ ಬರುತ್ತಿದ್ದ. ಹಾಗೆ ಬಂದವನಿಗೆ ಸಾವಿರ ಸಾವಿರಗಟ್ಟಲೆ ಚೆಂಡುಗಳನ್ನೆಸೆದು ಅಭ್ಯಾಸ ಮಾಡಿಸುತ್ತಿದ್ದವರು ರಾಘವೇಂದ್ರ ದಿವಗಿ. ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದಾರಲ್ಲಾ.. ಅದೇ ರಾಘವೇಂದ್ರ ದಿವಗಿ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಬಿಡುವಿನ ಸಮಯದಲ್ಲಿ ಮನೀಶ್ ಪಾಂಡೆಗೆ ಅಭ್ಯಾಸ ಮಾಡಿಸುತ್ತಿದ್ದರು. ಹೀಗೆ ಶುರುವಾಗಿತ್ತು ಪಾಂಡೆಯ ಕ್ರಿಕೆಟ್ ಪ್ರಯಾಣ.
ಅಲ್ಲಿಂದ ಕೆಲ ವರ್ಷಗಳಲ್ಲಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆ.. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2008ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿದ್ದವನು ಮನೀಶ್ ಪಾಂಡೆ. ಅದನ್ನೇ ಮೆಟ್ಟಿಲಾಗಿಸಿಕೊಂಡ ಕೊಹ್ಲಿ ಕ್ರಿಕೆಟ್ ದಿಗ್ಗಜನಾಗಿ ಬೆಳೆದು ನಿಂತರೆ, ಪಾಂಡೆ ಆರಕ್ಕೇರದ ಮೂರಕ್ಕಿಳಿಯದ ಆಟಗಾರನಾಗಿಯೇ ಉಳಿದು ಬಿಟ್ಟ.
ಮನೀಶ್ ಪಾಂಡೆ ಯಾರು, ಆತನ ತಾಕತ್ತು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಆಡಿದ ಆ ಒಂದು ಇನ್ನಿಂಗ್ಸ್ ಸಾಕು.. 2010ರ ರಣಜಿ ಫೈನಲ್ ಪಂದ್ಯ. ಕರ್ನಾಟಕ ತಂಡ 338 ರನ್’ಗಳ ಪ್ರಚಂಡ ಗುರಿಯನ್ನು ಬೆನ್ನಟ್ಟಿದ್ದ ಸಮಯ.
ಎದುರಿಗಿದ್ದ ಬೌಲಿಂಗ್ ಪಡೆಯಾದರೂ ಎಂಥದ್ದು..? ಅಜಿತ್ ಅಗರ್ಕರ್, ಆವಿಷ್ಕಾರ್ ಸಾಳ್ವಿ, ಧವಳ್ ಕುಲಕರ್ಣಿ, ಅಭಿಷೇಕ್ ನಾಯರ್, ರಮೇಶ್ ಪವಾರ್.. ಯಾವುದೇ ತಂಡಕ್ಕಾದರೂ ಚಾಂಪಿಯನ್’ಷಿಪ್
ಗೆದ್ದುಕೊಡಬಲ್ಲ ಬೌಲಿಂಗ್ ಪಡೆ..
ಅವತ್ತು ಮನೀಶ್ ಪಾಂಡೆ ಆರ್ಭಟಿಸಿದ ಪರಿಗೆ ಮುಂಬೈನ ಆ ಬಲಾಢ್ಯ ಬೌಲಿಂಗ್ ಪಡೆ ಧೂಳೀಪಟಗೊಂಡಿತ್ತು. ಆ ದಿನ ಗಂಗೋತ್ರಿ ಗ್ಲೇಡ್ಸ್’ನಲ್ಲಿ ಎದ್ದು ಬಂದಿದ್ದವನು ಕರ್ನಾಟಕದ ಗೋಲ್ಡನ್ ಬಾಯ್ ಮನೀಶ್ ಪಾಂಡೆ.
46 ರನ್’ಗಳ ಒಳಗೆ ನಾಯಕ ರಾಬಿನ್ ಉತ್ತಪ್ಪ ಸಹಿತ ಮೂರು ವಿಕೆಟ್ ಬಿದ್ದಾಗಿತ್ತು. ಪ್ರೆಸ್ ಬಾಕ್ಸ್’ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ನಮಗೆ ಕರ್ನಾಟಕದ ಗೆಲುವಿನ ಬಗ್ಗೆ ಯಾವ ನಂಬಿಕೆಯೂ ಇರಲಿಲ್ಲ. ಆದರೆ ಅದನ್ನು ಸುಳ್ಳಾಗಿಸಲು ನಿಂತು ಬಿಟ್ಟಿದ್ದ 20 ವರ್ಷದ ಹುಡುಗ ಮನೀಶ್ ಪಾಂಡೆ.
14 ವರ್ಷಗಳ ಹಿಂದೆ ಮನೀಶ್ ಪಾಂಡೆ ಆಡಿದ್ದು ದೇಶೀಯ ಕ್ರಿಕೆಟ್’ನ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್’ಗಳಲ್ಲಿ ಒಂದು. 151 ಎಸೆತಗಳಲ್ಲಿ 144 ರನ್. ಪಾಂಡೆ ಔಟಾಗುವ ಹೊತ್ತಿಗೆ ಕರ್ನಾಟಕದ ಸ್ಕೋರ್ 255 ರನ್. ಮುಂದೆ ಗೆಲ್ಲಲು ಬೇಕಿದ್ದದ್ದು ಕೇವಲ 76 ರನ್.. ಆದರೆ ಅಂಪೈರ್ ಕೊಟ್ಟ ಎರಡು ವಿವಾದಾತ್ಮಕ ತೀರ್ಪುಗಳು.. ಕೆಳ ಕ್ರಮಾಂಕದವರ ಹೊಣೆಗೇಡಿತನ ಕರ್ನಾಟಕವನ್ನು ಸೋಲಿಸಿ ಬಿಟ್ಟಿತು. 6 ರನ್’ಗಳ ಸೋಲಿನೊಂದಿಗೆ ಮನೀಶ್ ಪಾಂಡೆಯ ವೀರಾವೇಶದ ಆಟ ವ್ಯರ್ಥವಾದರೂ, ಕರ್ನಾಟಕ ಕ್ರಿಕೆಟ್’ನಲ್ಲೊಬ್ಬ ಅಪ್ರತಿಮ ಮ್ಯಾಚ್ ವಿನ್ನರ್ ಹುಟ್ಟಿಕೊಂಡಿದ್ದ.
ಅವತ್ತಿಂದ ಇವತ್ತಿನವರೆಗೆ ಮನೀಶ್ ಪಾಂಡೆ ಕರ್ನಾಟಕ ತಂಡದಲ್ಲಿ ಹತ್ತಾರು ವೀರಾವೇಶದ ಇನ್ನಿಂಗ್ಸ್’ಗಳನ್ನು ಕಟ್ಟಿದ್ದಾನೆ. ಅದರಲ್ಲೂ ಮುಂಬೈ ವಿರುದ್ಧದ ಪಂದ್ಯಗಳೆಂದರೆ ಬಿರುಗಾಳಿಯಾಗಿ ಬಿಡುತ್ತಿದ್ದ ಪಾಂಡೆ, ದೇಶೀಯ ಕ್ರಿಕೆಟ್’ನ ದೈತ್ಯ ತಂಡವನ್ನು ಅಟ್ಟಾಡಿಸಿಕೊಂಡು ಹೊಡೆದು ಹಾಕಿದ್ದ ವೀರ.
ಸ್ಪೆಷಲ್ ಕ್ರಿಕೆಟರ್, ಸ್ಪೆಷಲ್ ಟ್ಯಾಲೆಂಟ್..
ಅದ್ಭುತ ಬ್ಯಾಟ್ಸ್’ಮನ್, ಅತ್ಯದ್ಭುತ ಫೀಲ್ಡರ್..
ಬೆನ್ನ ಹಿಂದೆ ಟನ್ ಗಟ್ಟಲೆ ರನ್’ಗಳ ಬಲ..
ಆದರೆ ಅದೃಷ್ಟ ಕೈ ಹಿಡಿಯಲಿಲ್ಲ..
ಸಿಗಬೇಕಾದ ಸಮಯದಲ್ಲಿ ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ..
ಸಿಕ್ಕಾಗ ಸರಿಯಾಗಿ ಬಳಸಿಕೊಳ್ಳಲಿಲ್ಲ…
ಅಲ್ಲೊಂದು ಇಲ್ಲೊಂದು ಇನ್ನಿಂಗ್ಸ್’ಗಳು ಹಳೆಯ ಮನೀಶ್ ಪಾಂಡೆಯನ್ನು ನೆನಪು ಮಾಡಿದರೂ, ಭಾರತ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅಷ್ಟು ಸಾಕಾಗಲಿಲ್ಲ. ತಾನೇನು ಎಂಬುದನ್ನು ತೋರಿಸಲು ನಿಂತಾಗ ಅವಕಾಶ ನೀಡಬೇಕಿದ್ದವರು ಅನ್ಯಾಯ ಮಾಡಿದರು.
ಕರ್ನಾಟಕದ ಐತಿಹಾಸಿಕ ಗೆಲುವುಗಳ ರೂವಾರಿ.. ರಾಜ್ಯ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬ..
ಆದರೆ ಕಳೆದ 2-3 ವರ್ಷಗಳಲ್ಲಿ ಮನೀಶ್ ಪಾಂಡೆ ಕಳೆದೇ ಹೋಗಿದ್ದಾನೆ..
ಈ ಮಧ್ಯೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಳಬರನ್ನು ಬಿಟ್ಟು ಹೊಸಬರತ್ತ ನೋಡಲು ಶುರು ಮಾಡಿದೆ.
ಈ ವರ್ಷವೇನಾದರೂ ಮನೀಶ್ ಪಾಂಡೆ ತನ್ನ ಗತವೈಭವವನ್ನು ನೆನಪಿಸದೇ ಹೋದರೆ, ಬಹುಶಃ ಅವನಿಗೆ ಕರ್ನಾಟಕ ತಂಡದೊಂದಿಗೆ ಇದೇ ಕೊನೆಯ ವರ್ಷವಾದರೂ ಆಗಬಹುದು.