ಸಾಧನೆ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ ಸಾಧಿಸುವ ಛಲ ಒಂದು ಇದ್ದರೆ ಸಾಕು. ಈ ದಾಖಲೆಯ ಸಾಧನೆಗೆ ಸಾಕ್ಷಿಯಾಗಿ ನಿಂತಿರುವ 11 ವರ್ಷದ ಬಾಲೆ ತನುಶ್ರೀ. ಚಕ್ರಾಸನ ರೇಸ್ ನ 100 ಮೀಟರ್ ನ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಹೆಸರಿನಲ್ಲಿದ್ದ 6 ನಿಮಿಷದ ದಾಖಲೆಯನ್ನು ಮುರಿದು ಇದೀಗ ಕೇವಲ 1.14 ನಿಮಿಷದಲ್ಲಿ ಕ್ರಮಿಸಿ ಐದನೆಯ ವಿಶ್ವ ದಾಖಲೆಯನ್ನು ಬರೆದ ದಾಖಲೆಯ ಹುಡುಗಿ ತನುಶ್ರೀ.ಇದು ಒಂದು ವರ್ಷದ ಅವಧಿಯಲ್ಲಿ ಈಕೆ ಬರೆದ ಮೂರನೆಯ ವಿಶ್ವ ದಾಖಲೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯೋಗದ ಮೂಲಕ ವಿಶ್ವ ದಾಖಲೆಯನ್ನು ಬರೆದ ಈ ಪುಟ್ಟ ಬಾಲೆಯ ಸಾಧನೆಗೆ ಸಾಕ್ಷಿಯಾಗಿದ್ದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ದಕ್ಷಿಣ ಏಷ್ಯಾದ ನಿರ್ದೇಶಕ ಮನೀಷ್ ಬಿಶ್ನೋಯ್ ವಿಶ್ವದಾಖಲೆಯನ್ನು ಅಧಿಕೃತವಾಗಿ ಘೋಷಿಸಿ,ತನುಶ್ರೀ ಹ್ಯಾಟ್ರಿಕ್ ದಾಖಲೆಗೈದಿದ್ದು ಈಕೆ ಉಡುಪಿಯ ಹೆಮ್ಮೆ, ಗೋಲ್ಡನ್ ಗರ್ಲ್ ಎಂಬ ಬಿರುದನ್ನೂ ನೀಡಿದರು.
ಯೋಗ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಮಾತನಾಡಿ ತನುಶ್ರೀ ಸಾಧನೆಗಾಗಿಯೇ ಜನಿಸಿದವಳು,ಪ್ರತಿಭೆಯ ಜೊತೆಗೆ ವಿನಯ,ವಿನಮ್ರತೆ ದಾಖಲೆಗೆ ಕಾರಣವಾಗಿದೆ,ಇದು ಇತರರಿಗೆ ಪ್ರೇರಣೆಯಾಗುವಂತೆ ಆಶಯವನ್ನು ವ್ಯಕ್ತಪಡಿಸಿದರು.ದಾಖಲೆ ಸೃಷ್ಟಿಸಿದ ಈ ಬಾಲೆ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಹಾಗೂ ರಾಜ್ಯದ ಶಿಸ್ತು,ಮಾದರಿಯ ಸಂಸ್ಥೆ ವೆಂಕಟರಮಣ ಸಂಸ್ಥೆಯ ಸಕ್ರಿಯ ಸದಸ್ಯ ಉದಯ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ.
ಉದ್ಯಾವರದ ಗ್ರಾಮ ಪಂಚಾಯತಿ ಮೈದಾನದಲ್ಲಿ ಇದೇ ಮೊದಲ ಬಾರಿ ವಿಶ್ವದಾಖಲೆ ಸ್ಥಾಪನೆಯಾಗಿದ್ದು,ಈ ಐತಿಹಾಸಿಕ ಕ್ಷಣಕ್ಕೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್,ಜಯಕರ ಶೆಟ್ಟಿ ಇಂದ್ರಾಳಿ,ಜಿತೇಂದ್ರ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು,ವಿಜಯ್ ಕುಮಾರ್ ಮುದ್ರಾಡಿ,ಪ್ರವೀಣ್.ಎಮ್.ಪೂಜಾರಿ,ದಿವಾಕರ್ ಸನಿಲ್,
ಸುಗಂಧಿ ಶೇಖರ್,ನಾಗೇಶ್ ಉದ್ಯಾವರ,ನಯನಾ ಗಣೇಶ್,ಗೀತಾಂಜಲಿ ಸುವರ್ಣಾ,ವಿಜಯ್ ಕೋಟ್ಯಾನ್,ಮಲ್ಲೇಶ್ ಕುಮಾರ್,ಪ್ರವೀಣ್ ಪಿತ್ರೋಡಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ತನುಶ್ರೀ ಹೆಸರಿನಲ್ಲಿ ಇನ್ನಷ್ಟು ವಿಶ್ವದಾಖಲೆಗಳು ಮೂಡಿ ಬರಲಿ.
ಇದು ಸ್ಪೋರ್ಟ್ಸ್ ಕನ್ನಡದ ಹಾರೈಕೆ.