Categories
ಕ್ರಿಕೆಟ್

2023 ಕ್ರಿಕೆಟ್ ವಿಶ್ವಕಪ್ – ಟೀಮ್ ಭಾರತವೇ ಫೇವರಿಟ್.

ಯಾವ ಕೋನದಲ್ಲಿ ನೋಡಿದರೂ ಭಾರತವೇ ಬಲಿಷ್ಠ.
——————————————–
2023ರ ಕ್ರಿಕೆಟ್ ವಿಶ್ವಕಪ್ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಬಲಿಷ್ಠ ಭಾರತ ತಂಡವು ಎಲ್ಲಾ ಪಂದ್ಯಗಳನ್ನೂ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಸರಾಸರಿ ಕೂಡ ತುಂಬಾ ಅದ್ಭುತ ಇದೆ. ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಕೂಟದಲ್ಲಿ ಭಾರತವೊಂದೇ ಅಜೇಯ ತಂಡ.
ಹಾಗೆಯೇ ಭಾರತವು ತಾನು ಗೆದ್ದಿರುವ ಎಲ್ಲ ಹತ್ತು ಪಂದ್ಯಗಳನ್ನು ಏಕಪಕ್ಷೀಯವಾಗಿಯೇ ದೊಡ್ಡ ಮಾರ್ಜಿನಿನಲ್ಲಿಯೇ ಗೆದ್ದಿದೆ. ಎಲ್ಲ ಆಟಗಾರರೂ ಅದ್ಭುತ ಫಾರ್ಮನಲ್ಲಿ ಇದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಿಯೂ ಕೊರತೆ ಇಲ್ಲ.   ಹಿಂದಿನ ಸರಣಿಗಳಲ್ಲಿ ಭಾರತಕ್ಕೆ ತೊಂದರೆ ಕೊಡುತ್ತಿದ್ದ ಮಿಡಲ್ ಆರ್ಡರ್ ಸಮಸ್ಯೆಯು ಪೂರ್ತಿ ಪರಿಹಾರ ಆಗಿದೆ. ಈ ಬಾರಿಯ ಕೂಟದ ಮೊದಲ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ  ಆರಂಭದ ಹಿನ್ನಡೆಯನ್ನು ಮೆಟ್ಟಿ ನಿಂತು ಗೆದ್ದಿದೆ.  ಟೀಮ್ ಸ್ಪಿರಿಟ್ ಅದ್ಭುತವಾಗಿದೆ. ರೋಹಿತ್ ಶರ್ಮಾ ನಾಯಕತ್ವ ಕ್ಲಿಕ್ ಆಗ್ತಾ ಇದೆ. ಗೆಲ್ಲಲು ಇನ್ನೇನು ಬೇಕು?
ರಿಪೀಟ್ ಆಗ್ತದಾ 1983, 2011?
——————————————–
1983ರಲ್ಲಿ ಭಾರತವು ಮೊದಲ ವಿಶ್ವಕಪ್ ಗೆದ್ದಾಗ ಭಾರತದ ಟೀಮ್ ‘ಅಂಡರ್ ಡಾಗ್’ ಆಗಿತ್ತು. ತಂಡದ ಮೇಲೆ ಯಾರೂ ನಿರೀಕ್ಷೆಯನ್ನು ಇಟ್ಟಿರಲಿಲ್ಲ. ಭಾರತಕ್ಕೆ ಸ್ಫೂರ್ತಿ ಆದದ್ದು ಕಪಿಲ್ ದೇವ್ ಅವರ ಸ್ಫೂರ್ತಿಯ ನಾಯಕತ್ವ. ಅವರು ತಮ್ಮ ಹುಡುಗರಿಗೆ ಹೇಳಿದ ಮುಖ್ಯವಾದ ಮಾತು – ನಮ್ಮ ಮೇಲೆ ಯಾರೂ ನಿರೀಕ್ಷೆ ಇಟ್ಟಿಲ್ಲ. ಆದ್ದರಿಂದ ಒತ್ತಡ ನಮ್ಮ ಮೇಲೆ ಇಲ್ಲ. ವಿಂಡೀಸ್ ತಂಡಕ್ಕೆ ತಮ್ಮ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಆದ್ದರಿಂದ ಗೆಲ್ಲೋದು ನಾವೇ!
ಹಾಗೆಯೇ ಆಯಿತು. 1983ರ ಜೂನ್ 25ರಂದು ಮಧ್ಯರಾತ್ರಿ ಲಾರ್ಡ್ಸ್ ಮೈದಾನದಲ್ಲಿ  ಕಪಿಲ್ ದೇವ್ ಭಾರತದ ಮೊದಲ ವಿಶ್ವಕಪ್ ಗೆದ್ದಾಗ ಕೋಟಿ ಕೋಟಿ ಭಾರತೀಯರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
2011ರಲ್ಲಿ ಡಿಫರೆಂಟ್ ಆದ ಸನ್ನಿವೇಶ ಇತ್ತು.
—————————————-ಧೋನಿಯ ನಾಯಕತ್ವ, ಸಚಿನ್ ಅವರ ಕೊನೆಯ ವಿಶ್ವಕಪ್ ಎಂಬ ಎಮೋಷನ್, ಎಲ್ಲ ಆಟಗಾರರ ಅದ್ಭುತವಾದ ಫಾರ್ಮ್, ಗೌತಮ್ ಗಂಭೀರ್ ಅವರ ಸ್ಮರಣೀಯ ಇನ್ನಿಂಗ್ಸ್ ಇವುಗಳು ಭಾರತವನ್ನು ಗೆಲ್ಲಿಸಿದ್ದವು.
ಫೈನಲ್ ಪಂದ್ಯದಲ್ಲಿ ನಾಯಕ  ಧೋನಿ ಶ್ರೀಲಂಕಾದ ನುವನ್ ಕುಲಶೇಖರ ಅವರ ವೇಗದ  ಚೆಂಡಿಗೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಎತ್ತಿದಾಗ ಭಾರತವು ಗೆದ್ದದ್ದು ಅದ್ಭುತ ಕ್ಷಣ. ಅದು ತಂಡ ಸ್ಫೂರ್ತಿಯ ಗೆಲುವು.
ಈ ಬಾರಿಯ ಟೀಮ್ ಇಂಡಿಯಾ ಧೋನಿ ನಾಯಕತ್ವದ ತಂಡಕ್ಕಿಂತ ಹೆಚ್ಚು ಸ್ಟ್ರಾಂಗ್ ಇದೆ. ಅಹಮದಾಬಾದಿನ ವಿಸ್ತಾರವಾದ  ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ರವಿವಾರ 1.32 ಲಕ್ಷ ಕ್ರಿಕೆಟ್ ಅಭಿಮಾನಿಗಳು ಅಬ್ಬರಿಸಿ,  ಬೊಬ್ಬಿರಿದು ಭಾರತವನ್ನು ಬೆಂಬಲಿಸಲಿದ್ದಾರೆ. ಒತ್ತಡವನ್ನು ಸಹಜವೇ ಅನ್ನುವ ಹಾಗೆ ಭಾರತೀಯ ಆಟಗಾರರು  ಹ್ಯಾಂಡಲ್ ಮಾಡೋದನ್ನು ಈ ಬಾರಿ ಕಲಿತಿದ್ದಾರೆ. ಆದ್ದರಿಂದ ಯಾವ ರೀತಿಯಲ್ಲಿ ನೋಡಿದರೂ ಭಾರತವೇ ಬಲಿಷ್ಠ ಎಂದು ಅನ್ನಿಸುತ್ತದೆ.
ಟೀಮ್ ಆಸ್ಟ್ರೇಲಿಯಾ ಬಗ್ಗೆ…
———————————–
ಐದು ಬಾರಿಯ ಚಾಂಪಿಯನ್ ತಂಡ ಆಗಿದ್ದರೂ ಇತಿಹಾಸದ ಸಾಧನೆಗಳು ಯಾವ ತಂಡವನ್ನು  ಬೆಂಬಲಿಸುವುದಿಲ್ಲ ಅನ್ನೋದೇ ಇತಿಹಾಸದ ಪಾಠ! ಟ್ರಾವಿಸ್ ಹೆಡ್ ಬಂದ ನಂತರ ಅವರ ಬ್ಯಾಟಿಂಗ್ ಸ್ವಲ್ಪ ಸ್ಟ್ರಾಂಗ್ ಆದ ಹಾಗೆ ಅನ್ನಿಸುತ್ತದೆ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಲಬುಶಾನೆ ಬ್ಯಾಟಿಂಗ್ ವಿಭಾಗದ ಭರವಸೆಗಳು. ಸ್ಪಿನ್ ಬೌಲಿಂಗ್ ಎದುರಿಸುವ ಸಾಮರ್ಥ್ಯ ಅವರ  ತಂಡದಲ್ಲಿ ಕೊರತೆ ಇದೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಮ್ಯಾಕ್ಸವೆಲ್ ಅಬ್ಬರಿಸಿದ್ದು ಒಂದೇ ಪಂದ್ಯದಲ್ಲಿ! ಅದೂ ಕೂಡ ದುರ್ಬಲವಾದ ಅಫ್ಘಾನ್ ತಂಡದ ವಿರುದ್ಧ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಆಸ್ಟ್ರೇಲಿಯಾ ತಂಡದ ಮಿಡಲ್ ಆರ್ಡರ್ ಹೆಚ್ಚಿನ ಪಂದ್ಯಗಳಲ್ಲಿ ಕುಸಿತ ಕಂಡಿದೆ. ಪರಿಣತ ಸ್ಪಿನ್ನರ್ ಆಗಿ ಆಡಮ್ ಜಂಪಾ ಮಾತ್ರ ಇದ್ದಾರೆ. ಮಾರ್ಷ್ ಮತ್ತು ಹ್ಯಾಝಲವುಡ್ ಒಳ್ಳೆಯ ಲಯ ಹೊಂದಿದ್ದಾರೆ. ಪ್ಯಾಟ್ ಕಮಿನ್ಸ್ ಮಿದುವೇಗದ ಬೌಲಿಂಗ್ ಭಾರತೀಯರಿಗೆ ದೊಡ್ಡ ಸಮಸ್ಯೆ ಆಗದು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಯಾವಾಗಲೂ ಮಿಂಚುವ ವಾರ್ನರ್ ಮತ್ತು ಕ್ಲಾಸಿಕ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ನಿಯಂತ್ರಣ ಮಾಡಿದರೆ ಭಾರತಕ್ಕೆ ಬೇರೆ ಯಾರೂ ಸಮಸ್ಯೆ ಆಗಲಾರರು. ಈ ವಿಶ್ವಕಪ್ ಕೂಟದ  ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಸೋತಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಲೀಗ್ ಹಂತದಲ್ಲಿ ಸೋತಿದೆ. ಹಾಗೆಯೇ ಗೆದ್ದಿರುವ ಪಂದ್ಯಗಳನ್ನು ಕೂಡ ಆಸ್ಟ್ರೇಲಿಯಾ ಭಾರತ ಗೆದ್ದಿರುವ ಹಾಗೆ ಅಧಿಕಾರಯುತವಾಗಿ ಗೆದ್ದಿಲ್ಲ ಅನ್ನೋದು ಭಾರತಕ್ಕೆ ಪ್ಲಸ್. ಸೆಮಿ ಫೈನಲ್ ಪಂದ್ಯದಲ್ಲಿ ಕೂಡ ಅದು ಗೆದ್ದದ್ದು ಭಾರೀ ಕಷ್ಟದಲ್ಲಿ.
ಟೀಮ್ ಭಾರತವು  ಗಮನಿಸಬೇಕಾದದ್ದು…
——————————————–
೧) ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರಗಳು ತುಂಬಾ ಅತಿರಿಕ್ತ ರನ್ ನೀಡಿದ್ದಾರೆ. ಅದನ್ನು ತಡೆಯಬೇಕು.
೨) ಅತಿಯಾದ ಆತ್ಮವಿಶ್ವಾಸದ ಫಲವಾಗಿ ಎರಡು ಸುಲಭದ ಕ್ಯಾಚ್ ಡ್ರಾಪ್ ಆಗಿದೆ. ಅದು ಬೇಡ.
೩) ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲಿ ಆರನೇ ಬೌಲರ್ ಕೊರತೆಯು ಕಾಡಿದೆ. ಏನಾದರೂ ಬದಲಾವಣೆ ಮಾಡಬೇಕು ಅಂತಾದರೆ ಸೂರ್ಯ ಕುಮಾರ್ ಯಾದವ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರಿಗೆ ಒಂದು ಅವಕಾಶ ಕೊಡಬಹುದು ( ನನ್ನ ಪ್ರಕಾರ ಅದು ಅಗತ್ಯ ಇಲ್ಲ)
೪) ಸಿರಾಜ್ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿ ಲೆಂಥ್ ಮತ್ತು ಸ್ವಿಂಗ್ ಎಸೆತಗಳಿಗೆ ಪ್ರಯತ್ನ ಮಾಡುವುದು ಒಳ್ಳೆಯದು. ಆದರೆ ಈ ಹಿಂದಿನ  ಕೂಟಗಳ ಫೈನಲ್  ಪಂದ್ಯಗಳಲ್ಲಿ ಸಿರಾಜ್ ಹೆಚ್ಚು ಬಾರಿ ಕ್ಲಿಕ್ ಆಗಿದ್ದಾರೆ.
೫) ಮೊದಲ ಹತ್ತು ಓವರ್ ಪವರ್ ಪ್ಲೆ ಆಟದಲ್ಲಿ ರೋಹಿತ್ ಶರ್ಮ ನಿಲ್ಲಬೇಕು. ಆಕ್ರಮಣಕಾರಿ ಆಗಿಯೇ ಆಡಬೇಕು. ಐವತ್ತರ ಗಡಿಯಲ್ಲಿ ರೋಹಿತ್ ಶರ್ಮ ತುಸು
ಎಚ್ಚರವಹಿಸಬೇಕು. ರೋಹಿತ್ ಹೆಚ್ಚು ಹೊತ್ತು ನಿಂತಷ್ಟೂ ಭಾರತಕ್ಕೆ ಭಾರೀ ಲಾಭ ಆಗುತ್ತದೆ.
೬) ಶುಭಮನ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ತಮ್ಮ ನ್ಯಾಚುರಲ್ ಆಟ ಆಡ್ತಾ ಇದ್ದಾರೆ. ಉತ್ತಮ ಫಾರ್ಮ್ ಎಂಜಾಯ್ ಮಾಡ್ತಾ ಇದ್ದಾರೆ. ಹಾಗೆಯೇ ಆಡಿದರೆ ಸಾಕು.
೭) ಆಡಮ್ ಜಂಪಾ ಮತ್ತು ಹ್ಯಾಜಲ್ವುಡ್ ಅವರು ಬಾಲ್ ಟರ್ನ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬಗ್ಗೆ ಸ್ವಲ್ಪ ಎಚ್ಚರ ಅಗತ್ಯ.
 ಭರತವಾಕ್ಯ
——————
ಯಾವ ಮಗ್ಗುಲಲ್ಲಿ ಅವಲೋಕನ ಮಾಡಿದರೂ ಭಾರತವೇ ಈ ಬಾರಿಯ ಫೇವರಿಟ್ ಆಗಿ ಗೋಚರ ಆಗ್ತಾ ಇದೆ. ಒತ್ತಡವೂ ಆಸ್ಟ್ರೇಲಿಯಾ ಮೇಲೆ ಇದೆ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಭಾರತಕ್ಕೆ ಒಳ್ಳೇಯದು. ಚೇಸ್ ಮಾಡುವ ಅವಕಾಶ ದೊರೆತರೆ ಭಾರತಕ್ಕೆ ಯಾವ ಟಾರ್ಗೆಟ್ ಕೂಡ ಸವಾಲಾಗದು.
ಅತಿಯಾದ ಆತ್ಮವಿಶ್ವಾಸ ಮತ್ತು ದುಡುಕುತನ ಇವೆರಡನ್ನು ಭಾರತ ಮೀರಿ ನಿಂತರೆ, ಮಳೆ ಬಂದು  ದರಿದ್ರ ನಿಯಮಗಳು ಅಡ್ಡಬಾರದೆ ಹೋದರೆ, ಪಿಚ್ ದೊಡ್ಡ ಮಟ್ಟದಲ್ಲಿ ಕೈಕೊಡದೆ ಹೋದರೆ…..ನವೆಂಬರ್ 19ರಂದು ರಾತ್ರಿ ರೋಹಿತ್ ಶರ್ಮ ಸಲೀಸಾಗಿ ವಿಶ್ವಕಪ್ ಎತ್ತುವ ಸಂಭ್ರಮದ ದೃಶ್ಯವನ್ನು ನಾವು ಖಂಡಿತವಾಗಿ ಕಣ್ಣು ತುಂಬಿಸಿಕೊಳ್ಳಬಹುದು.
ಗೆದ್ದು ಬಾ ಭಾರತ.
Categories
ಕ್ರಿಕೆಟ್

ಏಷ್ಯಾ ಕಪ್‌ನಲ್ಲಿ ಭಾರತದ ಸೋಲಿಗೆ ನಾಯಕ ರೋಹಿತ್ ಶರ್ಮಾ ತಲೆಕೆಡಿಸಿಕೊಂಡಿಲ್ಲ ಬದಲಾಗಿ ಸೋತರೂ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ ಎಂದು ಹೇಳಿದ್ದಾರೆ

‘ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲು’ ಎನ್ನುವ ರೀತಿಯಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ದೃಷ್ಟಿಯಿಂದ ಅನೇಕ ಪ್ರಯೋಗಗಳನ್ನ ಮಾಡಿ ಏಷ್ಯಾಕಪ್‌ನಲ್ಲಿ ಕೈ ಸುಟ್ಟುಕೊಂಡಿದೆ. ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯವನ್ನು ಸೋಲುವ ಮೂಲಕ ಏಷ್ಯಾಕಪ್ ಗೆಲ್ಲುವ ಕನಸು ಭಗ್ನ ಗೊಂಡಿದೆ.
ಭಾರತ ಏಷ್ಯಾಕಪ್ ಫೈನಲ್ ತಲುಪಲು ಬುಧವಾರ ನಡೆದ  ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವ ಸನಿಹಕ್ಕೆ ಬಂದು ಸೋಲಿನ ಕಹಿ ಉಂಡಿದೆ. ಅಫ್ಘಾನಿಸ್ತಾನ ತನ್ನ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಕಡಿಮೆ ಮೊತ್ತ ಕಲೆಹಾಕಿತು ಆದರೂ ಅಫ್ಘಾನಿಸ್ತಾನ ಕೊನೆಯ ಓವರ್‌ವರೆಗೆ ವಿರೋಚಿತ ಹೋರಾಟ ಪ್ರದರ್ಶಿಸಿತು. ಪ್ರತಿ ಹಂತದಲ್ಲು ಗೆಲುವಿಗಾಗಿ ಹೋರಾಟ ಮಾಡುತ್ತಲೇ ಸಾಗಿತ್ತು ಗೆಲುವು ಕೂಡ ಕೈಯಲ್ಲೆ ಇತ್ತು ಆದರೆ ಕೊನೆಯ ಆಟಗಾರನಾಗಿ ಮೈದಾನಕ್ಕೆ ಇಳಿದ ಪಾಕಿಸ್ತಾನ ಆಟಗಾರ ಎರಡು ಬಾಲ್ ಗಳಲ್ಲಿ ಸತತ ಎರಡು ಸಿಕ್ಸರ್ ಬಾರಿಸುವುದರ ಮೂಲಕ ಪಾಕಿಸ್ತಾನ ತಂಡವನ್ನು ಒಂದು ವಿಕೆಟ್‌ಗಳ ರೋಚಕ ಗೆಲುವು ಪಡೆಯುವಂತೆ ಮಾಡಿದರು ಈ ಮೂಲಕ ಪಾಕ್ ತಂಡ ಭಾನುವಾರ ನಡೆಯುವ ಏಷ್ಯಾಕಪ್‌ ಫೈನಲ್ ಗೆ ಪ್ರವೇಶಿಸಿದೆ. ಫೈನಲ್‌ನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಎದುರಿಸಲಿದೆ
ಇಲ್ಲಿ ಗಮನಿಸಬೇಕಾಗಿದ್ದು ಟೀಂ ಇಂಡಿಯಾ ಆಟಗಾರರ ನೈಜ ಸಾಮರ್ಥ್ಯವು ಈ ಸರಣಿಯಲ್ಲಿ ಬಹಿರಂಗಪಟ್ಟಿದೆ. ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಮಗಿಂತ ದುರ್ಬಲ ತಂಡಗಳ ಕೈಯಲ್ಲಿ ಸೋತ ನೋವು ಭಾರತ ತಂಡವನ್ನು ಕಾಡುತ್ತಿರುವುದಂತು ಸತ್ಯ.. ಈ ಬಾರಿ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ  ಕಣಕ್ಕಿಳಿದು ಬರಿಗೈನಲ್ಲಿ ಮನೆಗೆ ತೆರಳಲಿರುವ ಭಾರತಕ್ಕೆ ದೊಡ್ಡ ಪಾಠ ಕಲಿತಂತಾಗಿದೆ.ಸತತ ಗೆಲುವಿನಿಂದ ತೇಲಾಡುತ್ತಿದ್ದ ಭಾರತ ತಂಡದ ಆಟಗಾರರ ಹುಂಬತನ ಈ ಸೋಲಿನಿಂದ ತಲೆ ತಗ್ಗಿಸುವಂತೆ ಮಾಡಿದೆ.
ಐಪಿಎಲ್ ಸೀಸನ್  ಬಹು ಯಶಸ್ವಿ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಹುಷಾರಾಗಿ ಇರಬೇಕು ಎಂಬುದರ ಸತ್ಯವನ್ನು ಅರಿಯುವಂತೆ ಮಾಡಿದೆ ಏಷ್ಯಾ ಕಪ್ ಟೂರ್ನಿ.
ಈ ಪಂದ್ಯಾವಳಿಯಿಂದ ತಂಡದ ಆಯ್ಕೆ ಮತ್ತು ಆಟಗಾರರ ಜತೆಗೆ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಬಿಸಿಸಿಐ ಎಷ್ಟು ಸುಧಾರಿಸಿಕೊಳ್ಳಬೇಕಿದೆ ಎನ್ನುವುದು ತಿಳಿದು ಬಂದಿದೆ. ಯಾವ ಯಾವ ವಿಭಾಗದಲ್ಲಿ ತನ್ನ ತಪ್ಪನ್ನು ತಿದ್ದಕೊಳ್ಳಬೇಕು ಎನ್ನುವುದನ್ನು  ಅರಿತಿದೆ ಒಟ್ಟಿನಲ್ಲಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಸೋಲುಂಡು ಸಾಕಷ್ಟು ಪಾಠ ಕಲಿತಿದೆ,
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಅನಿರೀಕ್ಷಿತ ಸೋಲು  ನನ್ನ ಮುಂದಿನ ನಾಯಕತ್ವಕ್ಕೂ ನನ್ನ ಜವಬ್ದಾರಿಯುತ ಆಟಕ್ಕೂ  ಪಾಠ ಎಂದಿದ್ದಾರೆ.
ತಂಡದ ಸಂಯೋಜನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ಇದೆ ಎಂದು ಹೇಳಿದರು. ಯೋಜನೆಗಳ ಬದಲಾವಣೆಗಳು ಮತ್ತು ಆಟಗಾರರ ಸಾಮರ್ಥ್ಯದ ಬಗ್ಗೆ ಅವರಿಗೆ ಈಗ ಒಂದು ಅರ್ಥಪೂರ್ಣ ಚೌಕಟ್ಟು ತಿಳಿದಿದೆ.
ಈಗಾಗಲೇ ಭಾರತದ ಮೂವರು ಸ್ಪಿನ್ನರ್‌ಗಳು ಮತ್ತು ಮೂವರು ವೇಗಿಗಳ ಪ್ರಯೋಗ ವಿಫಲವಾಯಿತು. ಸಂಪ್ರದಾಯಕ್ಕಿಂತ ಭಿನ್ನವಾಗಿ, ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳು, ವೇಗಿಗಳು, ಒಬ್ಬ ಪೇಸ್ ಆಲ್‌ರೌಂಡರ್ ಮತ್ತು ಸ್ಪಿನ್ ಆಲ್‌ರೌಂಡರ್ ಉತ್ತಮ ಆಲೋಚನೆಯಲ್ಲ. ಅದಕ್ಕೂ ಮಿಗಿಲಾಗಿ ನಂಬಿಕಸ್ಥ ವೇಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಯಾವಾಗ ಬೇಕಾದರು ಕೈ ಕೊಡಬಹುದು ಎಂದು ತಿಳಿದು ಬಂದಿದೆ. ಆಲ್ ರೌಂಡ್ ಪ್ರದರ್ಶನದೊಂದಿಗೆ ಪಾಕಿಸ್ತಾನದ ವಿರುದ್ಧ ಗೆದ್ದ ಹಾರ್ದಿಕ್ ನಂತರದ ಎರಡು ಪಂದ್ಯಗಳಲ್ಲಿ ದಯನೀಯವಾಗಿ ವಿಫಲರಾದರು. ಅವರನ್ನು ಮೂರನೇ ವೇಗಿ ಎಂದು ಪರಿಗಣಿಸುವುದು ಸರಿಯಲ್ಲ ಎಂಬುದು ಸತ್ಯ.ರೋಹಿತ್ ತಂಡದಲ್ಲಿ ಫಿನಿಶರ್ ಪಾತ್ರ ಯಾರದ್ದು ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿದೆ. ಲೆಫ್ಟ್ ರೈಟ್ ಕಾಂಬಿನೇಷನ್ ಗೆ ದಿನೇಶ್ ಕಾರ್ತಿಕ್ ಅಲ್ಲ ರಿಷಬ್ ಪಂತ್ ತೆಗೆದುಕೊಂಡಿದ್ದು ಎಷ್ಟುತಪ್ಪು ಎಂದು ತಿಳಿಯಿತು. ನಮ್ಮ ತಂಡದ ಬೌಲಿಂಗ್ ಸಾಮರ್ಥ್ಯವು ಎಷ್ಟು ವೀಕ್ ಎನ್ನುವುದು ಕೂಡ ಗೊತ್ತಾಗಿದೆ. ಅದರಲ್ಲೂ ಕೊನೆಯ ಓವರ್‌ಗಳಲ್ಲಿ ಯಾರ ಸಾಮರ್ಥ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಇತ್ತು.ನಾಲ್ವರು ವೇಗಿಗಳನ್ನು ತಂಡದಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ವೇಗಿಗಳ ಮೌಲ್ಯವನ್ನು ನಮಗೆ ಕಲಿಸಿದೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಬೌಲರ್‌ಗಳ ಅನುಪಸ್ಥಿತಿಯು ದೊಡ್ಡದಾಗಿ ಹೊಡೆತ ನೀಡಬಲ್ಲದು ಎಂದು ತಿಳಿದುಬಂದಿದೆ. ಹಾಗಾಗಿ ಈ ಸೋಲು ಭಾರತದ ಆಟಗಾರರಿಗೆ ಪಾಠವಾಗಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸೋಲಿನ ಕಹಿ ಉಂಡು ಸಾಕಷ್ಟು ಪಾಠ ಕಲಿತಿರುವುದಂತು ಸತ್ಯ. ಇನ್ನಾದರು ಭಾರತೀಯ ಆಟಗಾರರು ತಮ್ಮ ಆಹಃ ಅನ್ನು ಬದಿಗಿಟ್ಟು ತಂಡಕ್ಕಾಗಿ ನಮ್ಮ ದೇಶಕ್ಕಾಗಿ ಆಡಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಒಕ್ಕೊರಲಿನ ಧ್ವನಿಯಾಗಿದೆ..ಭಾರತ ತಂಡ ತಮ್ಮ ಮುಂದಿನ ಪಂದ್ಯಗಳಲ್ಲಿ ತಮ್ಮ ಶಕ್ತಿ ಏನೆಂಬುದನ್ನು ತೋರಿಸಲಿ ಎನ್ನುವುದು ನಮ್ಮ ಆಶಯವಾಗಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕುಂದಾಪುರ-ಟಿ.ಸಿ.ಎ-ಇಲೆವೆನ್ ಅಪ್ ಕೋಟ ಮತ್ತು ಪಾರಂಪಳ್ಳಿ ಕ್ರಿಕೆಟರ್ಸ್ ಫೈನಲ್ ಪ್ರವೇಶ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಟಿ‌‌.ಸಿ.ಎ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಪಾರಂಪಳ್ಳಿ ಕ್ರಿಕೆಟರ್ಸ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ಬ್ರಹ್ಮಾವರ ತಾಲೂಕಿನ 6 ತಂಡಗಳು ಸ್ಪರ್ಧಿಸಿದ್ದವು‌.ಉಪಾಂತ್ಯ ಪಂದ್ಯದಲ್ಲಿ ಇಲೆವೆನ್ ಅಪ್ ಕೋಟ ವರ್ಲ್ಡ್ ಇಲೆವೆನ್ ಹಂದಾಡಿ ತಂಡವನ್ನು ಹಾಗೂ ಪಾರಂಪಳ್ಳಿ ಕ್ರಿಕೆಟರ್ಸ್ ಎಮ್.ಸಿ.ಸಿ ಮಣೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದು,3 ರವಿವಾರ ಸಂಜೆ ಫೈನಲ್ ಸಮರ ನಡೆಯಲಿದೆ.
ಗುರುವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕು ಮಟ್ಟದ ಪಂದ್ಯಾಟವನ್ನು ಸಹಾಯಕ ಕಮೀಷನರ್ ರಾಜು.ಕೆ.ಎಸ್ ಉದ್ಘಾಟಿಸಿ ಮಾತನಾಡಿ”ಕಳೆದೆರಡು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದು,ಟಿ.ಸಿ.ಎ ಪಂದ್ಯಾಟದ ಮೂಲಕ ಎಲ್ಲರೂ ಒಟ್ಟಾಗುತ್ತಿರುವುದು ಆರೋಗ್ಯ,ಆಟ,ಸಾಮಾಜಿಕ ಹಾಗೂ ಸಾಮರಸ್ಯದ ದೃಷ್ಟಿಯಿಂದ ಶ್ಲಾಘನೀಯ ಎಂದರು.”
ಟಿ.ಸಿ.ಅಧ್ಯಕ್ಷರಾದ ಗೌತಮ್ ಶೆಟ್ಟಿಯರು ಮಾತ‌ನಾಡಿ “ತಾಲೂಕು ಮಟ್ಟದ ಪಂದ್ಯಗಳ ನಂತರ ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಗಳು ನಡೆಯಲಿದ್ದು,ಪ್ರತಿಭಾನ್ವಿತ ಆಟಗಾರರಿಗೆ ಟಿ.ಸಿ.ಎ ಕೋಚಿಂಗ್ ಇನ್ನಿತರ ಸೌಲಭ್ಯವನ್ನು ಕಲ್ಪಿಸುತ್ತದೆ” ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕುಂದಾಪುರ
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್,ಮಾಜಿ ಜಿಲ್ಲಾ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ,ಟಿ‌.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ, ಟಿ.ಸಿ.ಎ ನಿರ್ದೇಶಕರಾದ ಸುಧೀರ್ ಶೆಟ್ಟಿ  ಮಾರ್ಕೋಡು,ಟಿ.ಸಿ.ಎ ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು,ಶ್ರೀಧರ್ ಶೆಟ್ಟಿ ಬನ್ನಂಜೆ,ಟಿ.ಸಿ.ಎ ಕಾರ್ಯದರ್ಶಿ ಡಾ.ವಿನೋದ್ ನಾಯಕ್,ಯಾದವ್ ನಾಯಕ್ ಕೆಮ್ಮಣ್ಣು,
ಟಿ‌.ಸಿ‌.ಎ ನಿರ್ದೇಶಕರಾದ ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.ಶಿವನಾರಾಯಣ್ ಐತಾಳ್ ಕೋಟ ಕಾರ್ಯಕ್ರಮ ನಿರೂಪಣೆಗೈದರು.
ಶುಕ್ರವಾರ ಬೆಳಿಗ್ಗೆ ಕುಂದಾಪುರ ತಾಲ್ಲೂಕು ಮಟ್ಟದ ಪಂದ್ಯಾಟ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ
 ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್,ಬಿ.ಸಿ.ಸಿ‌ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ್ ಶೆಟ್ಟಿ,ಯುವಜನ ಕ್ರೀಡಾ ಇಲಾಖೆ ಕುಂದಾಪುರದ ಕುಸುಮಾಕರ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಪೂಜಾರಿ,ಕುಂದಾಪುರ ನಾರಾಯಣಗುರು ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ,ಟಿ‌.ಸಿ‌.ಎ ಉಪಾಧ್ಯಕ್ಷರಾದ ನಾರಾಯಣ್ ಶೆಟ್ಟಿ, ಅಮರ್ ನಾಥ್ ಭಟ್,ಟಿ‌.ಸಿ.ಎ ಕ್ರೀಡಾಸಂಯೋಜಕರಾದ
 ರಮೇಶ್ ಕುಂದರ್ ಕೋಟ,ಗಿರೀಶ್ ಬೈಂದೂರು ಮತ್ತು ಮನೋಜ್ ನಾಯರ್ ಭಾಗವಹಿಸಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿದೆ…