Categories
ಕ್ರಿಕೆಟ್

2023 ಕ್ರಿಕೆಟ್ ವಿಶ್ವಕಪ್ – ಟೀಮ್ ಭಾರತವೇ ಫೇವರಿಟ್.

ಯಾವ ಕೋನದಲ್ಲಿ ನೋಡಿದರೂ ಭಾರತವೇ ಬಲಿಷ್ಠ.
——————————————–
2023ರ ಕ್ರಿಕೆಟ್ ವಿಶ್ವಕಪ್ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಬಲಿಷ್ಠ ಭಾರತ ತಂಡವು ಎಲ್ಲಾ ಪಂದ್ಯಗಳನ್ನೂ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಸರಾಸರಿ ಕೂಡ ತುಂಬಾ ಅದ್ಭುತ ಇದೆ. ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಕೂಟದಲ್ಲಿ ಭಾರತವೊಂದೇ ಅಜೇಯ ತಂಡ.
ಹಾಗೆಯೇ ಭಾರತವು ತಾನು ಗೆದ್ದಿರುವ ಎಲ್ಲ ಹತ್ತು ಪಂದ್ಯಗಳನ್ನು ಏಕಪಕ್ಷೀಯವಾಗಿಯೇ ದೊಡ್ಡ ಮಾರ್ಜಿನಿನಲ್ಲಿಯೇ ಗೆದ್ದಿದೆ. ಎಲ್ಲ ಆಟಗಾರರೂ ಅದ್ಭುತ ಫಾರ್ಮನಲ್ಲಿ ಇದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಿಯೂ ಕೊರತೆ ಇಲ್ಲ.   ಹಿಂದಿನ ಸರಣಿಗಳಲ್ಲಿ ಭಾರತಕ್ಕೆ ತೊಂದರೆ ಕೊಡುತ್ತಿದ್ದ ಮಿಡಲ್ ಆರ್ಡರ್ ಸಮಸ್ಯೆಯು ಪೂರ್ತಿ ಪರಿಹಾರ ಆಗಿದೆ. ಈ ಬಾರಿಯ ಕೂಟದ ಮೊದಲ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ  ಆರಂಭದ ಹಿನ್ನಡೆಯನ್ನು ಮೆಟ್ಟಿ ನಿಂತು ಗೆದ್ದಿದೆ.  ಟೀಮ್ ಸ್ಪಿರಿಟ್ ಅದ್ಭುತವಾಗಿದೆ. ರೋಹಿತ್ ಶರ್ಮಾ ನಾಯಕತ್ವ ಕ್ಲಿಕ್ ಆಗ್ತಾ ಇದೆ. ಗೆಲ್ಲಲು ಇನ್ನೇನು ಬೇಕು?
ರಿಪೀಟ್ ಆಗ್ತದಾ 1983, 2011?
——————————————–
1983ರಲ್ಲಿ ಭಾರತವು ಮೊದಲ ವಿಶ್ವಕಪ್ ಗೆದ್ದಾಗ ಭಾರತದ ಟೀಮ್ ‘ಅಂಡರ್ ಡಾಗ್’ ಆಗಿತ್ತು. ತಂಡದ ಮೇಲೆ ಯಾರೂ ನಿರೀಕ್ಷೆಯನ್ನು ಇಟ್ಟಿರಲಿಲ್ಲ. ಭಾರತಕ್ಕೆ ಸ್ಫೂರ್ತಿ ಆದದ್ದು ಕಪಿಲ್ ದೇವ್ ಅವರ ಸ್ಫೂರ್ತಿಯ ನಾಯಕತ್ವ. ಅವರು ತಮ್ಮ ಹುಡುಗರಿಗೆ ಹೇಳಿದ ಮುಖ್ಯವಾದ ಮಾತು – ನಮ್ಮ ಮೇಲೆ ಯಾರೂ ನಿರೀಕ್ಷೆ ಇಟ್ಟಿಲ್ಲ. ಆದ್ದರಿಂದ ಒತ್ತಡ ನಮ್ಮ ಮೇಲೆ ಇಲ್ಲ. ವಿಂಡೀಸ್ ತಂಡಕ್ಕೆ ತಮ್ಮ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಆದ್ದರಿಂದ ಗೆಲ್ಲೋದು ನಾವೇ!
ಹಾಗೆಯೇ ಆಯಿತು. 1983ರ ಜೂನ್ 25ರಂದು ಮಧ್ಯರಾತ್ರಿ ಲಾರ್ಡ್ಸ್ ಮೈದಾನದಲ್ಲಿ  ಕಪಿಲ್ ದೇವ್ ಭಾರತದ ಮೊದಲ ವಿಶ್ವಕಪ್ ಗೆದ್ದಾಗ ಕೋಟಿ ಕೋಟಿ ಭಾರತೀಯರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
2011ರಲ್ಲಿ ಡಿಫರೆಂಟ್ ಆದ ಸನ್ನಿವೇಶ ಇತ್ತು.
—————————————-ಧೋನಿಯ ನಾಯಕತ್ವ, ಸಚಿನ್ ಅವರ ಕೊನೆಯ ವಿಶ್ವಕಪ್ ಎಂಬ ಎಮೋಷನ್, ಎಲ್ಲ ಆಟಗಾರರ ಅದ್ಭುತವಾದ ಫಾರ್ಮ್, ಗೌತಮ್ ಗಂಭೀರ್ ಅವರ ಸ್ಮರಣೀಯ ಇನ್ನಿಂಗ್ಸ್ ಇವುಗಳು ಭಾರತವನ್ನು ಗೆಲ್ಲಿಸಿದ್ದವು.
ಫೈನಲ್ ಪಂದ್ಯದಲ್ಲಿ ನಾಯಕ  ಧೋನಿ ಶ್ರೀಲಂಕಾದ ನುವನ್ ಕುಲಶೇಖರ ಅವರ ವೇಗದ  ಚೆಂಡಿಗೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಎತ್ತಿದಾಗ ಭಾರತವು ಗೆದ್ದದ್ದು ಅದ್ಭುತ ಕ್ಷಣ. ಅದು ತಂಡ ಸ್ಫೂರ್ತಿಯ ಗೆಲುವು.
ಈ ಬಾರಿಯ ಟೀಮ್ ಇಂಡಿಯಾ ಧೋನಿ ನಾಯಕತ್ವದ ತಂಡಕ್ಕಿಂತ ಹೆಚ್ಚು ಸ್ಟ್ರಾಂಗ್ ಇದೆ. ಅಹಮದಾಬಾದಿನ ವಿಸ್ತಾರವಾದ  ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ರವಿವಾರ 1.32 ಲಕ್ಷ ಕ್ರಿಕೆಟ್ ಅಭಿಮಾನಿಗಳು ಅಬ್ಬರಿಸಿ,  ಬೊಬ್ಬಿರಿದು ಭಾರತವನ್ನು ಬೆಂಬಲಿಸಲಿದ್ದಾರೆ. ಒತ್ತಡವನ್ನು ಸಹಜವೇ ಅನ್ನುವ ಹಾಗೆ ಭಾರತೀಯ ಆಟಗಾರರು  ಹ್ಯಾಂಡಲ್ ಮಾಡೋದನ್ನು ಈ ಬಾರಿ ಕಲಿತಿದ್ದಾರೆ. ಆದ್ದರಿಂದ ಯಾವ ರೀತಿಯಲ್ಲಿ ನೋಡಿದರೂ ಭಾರತವೇ ಬಲಿಷ್ಠ ಎಂದು ಅನ್ನಿಸುತ್ತದೆ.
ಟೀಮ್ ಆಸ್ಟ್ರೇಲಿಯಾ ಬಗ್ಗೆ…
———————————–
ಐದು ಬಾರಿಯ ಚಾಂಪಿಯನ್ ತಂಡ ಆಗಿದ್ದರೂ ಇತಿಹಾಸದ ಸಾಧನೆಗಳು ಯಾವ ತಂಡವನ್ನು  ಬೆಂಬಲಿಸುವುದಿಲ್ಲ ಅನ್ನೋದೇ ಇತಿಹಾಸದ ಪಾಠ! ಟ್ರಾವಿಸ್ ಹೆಡ್ ಬಂದ ನಂತರ ಅವರ ಬ್ಯಾಟಿಂಗ್ ಸ್ವಲ್ಪ ಸ್ಟ್ರಾಂಗ್ ಆದ ಹಾಗೆ ಅನ್ನಿಸುತ್ತದೆ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಲಬುಶಾನೆ ಬ್ಯಾಟಿಂಗ್ ವಿಭಾಗದ ಭರವಸೆಗಳು. ಸ್ಪಿನ್ ಬೌಲಿಂಗ್ ಎದುರಿಸುವ ಸಾಮರ್ಥ್ಯ ಅವರ  ತಂಡದಲ್ಲಿ ಕೊರತೆ ಇದೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಮ್ಯಾಕ್ಸವೆಲ್ ಅಬ್ಬರಿಸಿದ್ದು ಒಂದೇ ಪಂದ್ಯದಲ್ಲಿ! ಅದೂ ಕೂಡ ದುರ್ಬಲವಾದ ಅಫ್ಘಾನ್ ತಂಡದ ವಿರುದ್ಧ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಆಸ್ಟ್ರೇಲಿಯಾ ತಂಡದ ಮಿಡಲ್ ಆರ್ಡರ್ ಹೆಚ್ಚಿನ ಪಂದ್ಯಗಳಲ್ಲಿ ಕುಸಿತ ಕಂಡಿದೆ. ಪರಿಣತ ಸ್ಪಿನ್ನರ್ ಆಗಿ ಆಡಮ್ ಜಂಪಾ ಮಾತ್ರ ಇದ್ದಾರೆ. ಮಾರ್ಷ್ ಮತ್ತು ಹ್ಯಾಝಲವುಡ್ ಒಳ್ಳೆಯ ಲಯ ಹೊಂದಿದ್ದಾರೆ. ಪ್ಯಾಟ್ ಕಮಿನ್ಸ್ ಮಿದುವೇಗದ ಬೌಲಿಂಗ್ ಭಾರತೀಯರಿಗೆ ದೊಡ್ಡ ಸಮಸ್ಯೆ ಆಗದು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಯಾವಾಗಲೂ ಮಿಂಚುವ ವಾರ್ನರ್ ಮತ್ತು ಕ್ಲಾಸಿಕ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ನಿಯಂತ್ರಣ ಮಾಡಿದರೆ ಭಾರತಕ್ಕೆ ಬೇರೆ ಯಾರೂ ಸಮಸ್ಯೆ ಆಗಲಾರರು. ಈ ವಿಶ್ವಕಪ್ ಕೂಟದ  ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಸೋತಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಲೀಗ್ ಹಂತದಲ್ಲಿ ಸೋತಿದೆ. ಹಾಗೆಯೇ ಗೆದ್ದಿರುವ ಪಂದ್ಯಗಳನ್ನು ಕೂಡ ಆಸ್ಟ್ರೇಲಿಯಾ ಭಾರತ ಗೆದ್ದಿರುವ ಹಾಗೆ ಅಧಿಕಾರಯುತವಾಗಿ ಗೆದ್ದಿಲ್ಲ ಅನ್ನೋದು ಭಾರತಕ್ಕೆ ಪ್ಲಸ್. ಸೆಮಿ ಫೈನಲ್ ಪಂದ್ಯದಲ್ಲಿ ಕೂಡ ಅದು ಗೆದ್ದದ್ದು ಭಾರೀ ಕಷ್ಟದಲ್ಲಿ.
ಟೀಮ್ ಭಾರತವು  ಗಮನಿಸಬೇಕಾದದ್ದು…
——————————————–
೧) ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರಗಳು ತುಂಬಾ ಅತಿರಿಕ್ತ ರನ್ ನೀಡಿದ್ದಾರೆ. ಅದನ್ನು ತಡೆಯಬೇಕು.
೨) ಅತಿಯಾದ ಆತ್ಮವಿಶ್ವಾಸದ ಫಲವಾಗಿ ಎರಡು ಸುಲಭದ ಕ್ಯಾಚ್ ಡ್ರಾಪ್ ಆಗಿದೆ. ಅದು ಬೇಡ.
೩) ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲಿ ಆರನೇ ಬೌಲರ್ ಕೊರತೆಯು ಕಾಡಿದೆ. ಏನಾದರೂ ಬದಲಾವಣೆ ಮಾಡಬೇಕು ಅಂತಾದರೆ ಸೂರ್ಯ ಕುಮಾರ್ ಯಾದವ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರಿಗೆ ಒಂದು ಅವಕಾಶ ಕೊಡಬಹುದು ( ನನ್ನ ಪ್ರಕಾರ ಅದು ಅಗತ್ಯ ಇಲ್ಲ)
೪) ಸಿರಾಜ್ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿ ಲೆಂಥ್ ಮತ್ತು ಸ್ವಿಂಗ್ ಎಸೆತಗಳಿಗೆ ಪ್ರಯತ್ನ ಮಾಡುವುದು ಒಳ್ಳೆಯದು. ಆದರೆ ಈ ಹಿಂದಿನ  ಕೂಟಗಳ ಫೈನಲ್  ಪಂದ್ಯಗಳಲ್ಲಿ ಸಿರಾಜ್ ಹೆಚ್ಚು ಬಾರಿ ಕ್ಲಿಕ್ ಆಗಿದ್ದಾರೆ.
೫) ಮೊದಲ ಹತ್ತು ಓವರ್ ಪವರ್ ಪ್ಲೆ ಆಟದಲ್ಲಿ ರೋಹಿತ್ ಶರ್ಮ ನಿಲ್ಲಬೇಕು. ಆಕ್ರಮಣಕಾರಿ ಆಗಿಯೇ ಆಡಬೇಕು. ಐವತ್ತರ ಗಡಿಯಲ್ಲಿ ರೋಹಿತ್ ಶರ್ಮ ತುಸು
ಎಚ್ಚರವಹಿಸಬೇಕು. ರೋಹಿತ್ ಹೆಚ್ಚು ಹೊತ್ತು ನಿಂತಷ್ಟೂ ಭಾರತಕ್ಕೆ ಭಾರೀ ಲಾಭ ಆಗುತ್ತದೆ.
೬) ಶುಭಮನ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ತಮ್ಮ ನ್ಯಾಚುರಲ್ ಆಟ ಆಡ್ತಾ ಇದ್ದಾರೆ. ಉತ್ತಮ ಫಾರ್ಮ್ ಎಂಜಾಯ್ ಮಾಡ್ತಾ ಇದ್ದಾರೆ. ಹಾಗೆಯೇ ಆಡಿದರೆ ಸಾಕು.
೭) ಆಡಮ್ ಜಂಪಾ ಮತ್ತು ಹ್ಯಾಜಲ್ವುಡ್ ಅವರು ಬಾಲ್ ಟರ್ನ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬಗ್ಗೆ ಸ್ವಲ್ಪ ಎಚ್ಚರ ಅಗತ್ಯ.
 ಭರತವಾಕ್ಯ
——————
ಯಾವ ಮಗ್ಗುಲಲ್ಲಿ ಅವಲೋಕನ ಮಾಡಿದರೂ ಭಾರತವೇ ಈ ಬಾರಿಯ ಫೇವರಿಟ್ ಆಗಿ ಗೋಚರ ಆಗ್ತಾ ಇದೆ. ಒತ್ತಡವೂ ಆಸ್ಟ್ರೇಲಿಯಾ ಮೇಲೆ ಇದೆ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಭಾರತಕ್ಕೆ ಒಳ್ಳೇಯದು. ಚೇಸ್ ಮಾಡುವ ಅವಕಾಶ ದೊರೆತರೆ ಭಾರತಕ್ಕೆ ಯಾವ ಟಾರ್ಗೆಟ್ ಕೂಡ ಸವಾಲಾಗದು.
ಅತಿಯಾದ ಆತ್ಮವಿಶ್ವಾಸ ಮತ್ತು ದುಡುಕುತನ ಇವೆರಡನ್ನು ಭಾರತ ಮೀರಿ ನಿಂತರೆ, ಮಳೆ ಬಂದು  ದರಿದ್ರ ನಿಯಮಗಳು ಅಡ್ಡಬಾರದೆ ಹೋದರೆ, ಪಿಚ್ ದೊಡ್ಡ ಮಟ್ಟದಲ್ಲಿ ಕೈಕೊಡದೆ ಹೋದರೆ…..ನವೆಂಬರ್ 19ರಂದು ರಾತ್ರಿ ರೋಹಿತ್ ಶರ್ಮ ಸಲೀಸಾಗಿ ವಿಶ್ವಕಪ್ ಎತ್ತುವ ಸಂಭ್ರಮದ ದೃಶ್ಯವನ್ನು ನಾವು ಖಂಡಿತವಾಗಿ ಕಣ್ಣು ತುಂಬಿಸಿಕೊಳ್ಳಬಹುದು.
ಗೆದ್ದು ಬಾ ಭಾರತ.

Leave a Reply

Your email address will not be published.

3 × 4 =