‘ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲು’ ಎನ್ನುವ ರೀತಿಯಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ದೃಷ್ಟಿಯಿಂದ ಅನೇಕ ಪ್ರಯೋಗಗಳನ್ನ ಮಾಡಿ ಏಷ್ಯಾಕಪ್‌ನಲ್ಲಿ ಕೈ ಸುಟ್ಟುಕೊಂಡಿದೆ. ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯವನ್ನು ಸೋಲುವ ಮೂಲಕ ಏಷ್ಯಾಕಪ್ ಗೆಲ್ಲುವ ಕನಸು ಭಗ್ನ ಗೊಂಡಿದೆ.
ಭಾರತ ಏಷ್ಯಾಕಪ್ ಫೈನಲ್ ತಲುಪಲು ಬುಧವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವ ಸನಿಹಕ್ಕೆ ಬಂದು ಸೋಲಿನ ಕಹಿ ಉಂಡಿದೆ. ಅಫ್ಘಾನಿಸ್ತಾನ ತನ್ನ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಕಡಿಮೆ ಮೊತ್ತ ಕಲೆಹಾಕಿತು ಆದರೂ ಅಫ್ಘಾನಿಸ್ತಾನ ಕೊನೆಯ ಓವರ್‌ವರೆಗೆ ವಿರೋಚಿತ ಹೋರಾಟ ಪ್ರದರ್ಶಿಸಿತು. ಪ್ರತಿ ಹಂತದಲ್ಲು ಗೆಲುವಿಗಾಗಿ ಹೋರಾಟ ಮಾಡುತ್ತಲೇ ಸಾಗಿತ್ತು ಗೆಲುವು ಕೂಡ ಕೈಯಲ್ಲೆ ಇತ್ತು ಆದರೆ ಕೊನೆಯ ಆಟಗಾರನಾಗಿ ಮೈದಾನಕ್ಕೆ ಇಳಿದ ಪಾಕಿಸ್ತಾನ ಆಟಗಾರ ಎರಡು ಬಾಲ್ ಗಳಲ್ಲಿ ಸತತ ಎರಡು ಸಿಕ್ಸರ್ ಬಾರಿಸುವುದರ ಮೂಲಕ ಪಾಕಿಸ್ತಾನ ತಂಡವನ್ನು ಒಂದು ವಿಕೆಟ್‌ಗಳ ರೋಚಕ ಗೆಲುವು ಪಡೆಯುವಂತೆ ಮಾಡಿದರು ಈ ಮೂಲಕ ಪಾಕ್ ತಂಡ ಭಾನುವಾರ ನಡೆಯುವ ಏಷ್ಯಾಕಪ್ ಫೈನಲ್ ಗೆ ಪ್ರವೇಶಿಸಿದೆ. ಫೈನಲ್‌ನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಎದುರಿಸಲಿದೆ
ಇಲ್ಲಿ ಗಮನಿಸಬೇಕಾಗಿದ್ದು ಟೀಂ ಇಂಡಿಯಾ ಆಟಗಾರರ ನೈಜ ಸಾಮರ್ಥ್ಯವು ಈ ಸರಣಿಯಲ್ಲಿ ಬಹಿರಂಗಪಟ್ಟಿದೆ. ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಮಗಿಂತ ದುರ್ಬಲ ತಂಡಗಳ ಕೈಯಲ್ಲಿ ಸೋತ ನೋವು ಭಾರತ ತಂಡವನ್ನು ಕಾಡುತ್ತಿರುವುದಂತು ಸತ್ಯ.. ಈ ಬಾರಿ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿದು ಬರಿಗೈನಲ್ಲಿ ಮನೆಗೆ ತೆರಳಲಿರುವ ಭಾರತಕ್ಕೆ ದೊಡ್ಡ ಪಾಠ ಕಲಿತಂತಾಗಿದೆ.ಸತತ ಗೆಲುವಿನಿಂದ ತೇಲಾಡುತ್ತಿದ್ದ ಭಾರತ ತಂಡದ ಆಟಗಾರರ ಹುಂಬತನ ಈ ಸೋಲಿನಿಂದ ತಲೆ ತಗ್ಗಿಸುವಂತೆ ಮಾಡಿದೆ.
ಐಪಿಎಲ್ ಸೀಸನ್ ಬಹು ಯಶಸ್ವಿ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಹುಷಾರಾಗಿ ಇರಬೇಕು ಎಂಬುದರ ಸತ್ಯವನ್ನು ಅರಿಯುವಂತೆ ಮಾಡಿದೆ ಏಷ್ಯಾ ಕಪ್ ಟೂರ್ನಿ.
ಈ ಪಂದ್ಯಾವಳಿಯಿಂದ ತಂಡದ ಆಯ್ಕೆ ಮತ್ತು ಆಟಗಾರರ ಜತೆಗೆ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಬಿಸಿಸಿಐ ಎಷ್ಟು ಸುಧಾರಿಸಿಕೊಳ್ಳಬೇಕಿದೆ ಎನ್ನುವುದು ತಿಳಿದು ಬಂದಿದೆ. ಯಾವ ಯಾವ ವಿಭಾಗದಲ್ಲಿ ತನ್ನ ತಪ್ಪನ್ನು ತಿದ್ದಕೊಳ್ಳಬೇಕು ಎನ್ನುವುದನ್ನು ಅರಿತಿದೆ ಒಟ್ಟಿನಲ್ಲಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಸೋಲುಂಡು ಸಾಕಷ್ಟು ಪಾಠ ಕಲಿತಿದೆ,
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಅನಿರೀಕ್ಷಿತ ಸೋಲು ನನ್ನ ಮುಂದಿನ ನಾಯಕತ್ವಕ್ಕೂ ನನ್ನ ಜವಬ್ದಾರಿಯುತ ಆಟಕ್ಕೂ ಪಾಠ ಎಂದಿದ್ದಾರೆ.
ತಂಡದ ಸಂಯೋಜನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ಇದೆ ಎಂದು ಹೇಳಿದರು. ಯೋಜನೆಗಳ ಬದಲಾವಣೆಗಳು ಮತ್ತು ಆಟಗಾರರ ಸಾಮರ್ಥ್ಯದ ಬಗ್ಗೆ ಅವರಿಗೆ ಈಗ ಒಂದು ಅರ್ಥಪೂರ್ಣ ಚೌಕಟ್ಟು ತಿಳಿದಿದೆ.
ಈಗಾಗಲೇ ಭಾರತದ ಮೂವರು ಸ್ಪಿನ್ನರ್‌ಗಳು ಮತ್ತು ಮೂವರು ವೇಗಿಗಳ ಪ್ರಯೋಗ ವಿಫಲವಾಯಿತು. ಸಂಪ್ರದಾಯಕ್ಕಿಂತ ಭಿನ್ನವಾಗಿ, ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳು, ವೇಗಿಗಳು, ಒಬ್ಬ ಪೇಸ್ ಆಲ್‌ರೌಂಡರ್ ಮತ್ತು ಸ್ಪಿನ್ ಆಲ್‌ರೌಂಡರ್ ಉತ್ತಮ ಆಲೋಚನೆಯಲ್ಲ. ಅದಕ್ಕೂ ಮಿಗಿಲಾಗಿ ನಂಬಿಕಸ್ಥ ವೇಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಯಾವಾಗ ಬೇಕಾದರು ಕೈ ಕೊಡಬಹುದು ಎಂದು ತಿಳಿದು ಬಂದಿದೆ. ಆಲ್ ರೌಂಡ್ ಪ್ರದರ್ಶನದೊಂದಿಗೆ ಪಾಕಿಸ್ತಾನದ ವಿರುದ್ಧ ಗೆದ್ದ ಹಾರ್ದಿಕ್ ನಂತರದ ಎರಡು ಪಂದ್ಯಗಳಲ್ಲಿ ದಯನೀಯವಾಗಿ ವಿಫಲರಾದರು. ಅವರನ್ನು ಮೂರನೇ ವೇಗಿ ಎಂದು ಪರಿಗಣಿಸುವುದು ಸರಿಯಲ್ಲ ಎಂಬುದು ಸತ್ಯ.ರೋಹಿತ್ ತಂಡದಲ್ಲಿ ಫಿನಿಶರ್ ಪಾತ್ರ ಯಾರದ್ದು ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿದೆ. ಲೆಫ್ಟ್ ರೈಟ್ ಕಾಂಬಿನೇಷನ್ ಗೆ ದಿನೇಶ್ ಕಾರ್ತಿಕ್ ಅಲ್ಲ ರಿಷಬ್ ಪಂತ್ ತೆಗೆದುಕೊಂಡಿದ್ದು ಎಷ್ಟುತಪ್ಪು ಎಂದು ತಿಳಿಯಿತು. ನಮ್ಮ ತಂಡದ ಬೌಲಿಂಗ್ ಸಾಮರ್ಥ್ಯವು ಎಷ್ಟು ವೀಕ್ ಎನ್ನುವುದು ಕೂಡ ಗೊತ್ತಾಗಿದೆ. ಅದರಲ್ಲೂ ಕೊನೆಯ ಓವರ್‌ಗಳಲ್ಲಿ ಯಾರ ಸಾಮರ್ಥ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಇತ್ತು.ನಾಲ್ವರು ವೇಗಿಗಳನ್ನು ತಂಡದಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ವೇಗಿಗಳ ಮೌಲ್ಯವನ್ನು ನಮಗೆ ಕಲಿಸಿದೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಬೌಲರ್‌ಗಳ ಅನುಪಸ್ಥಿತಿಯು ದೊಡ್ಡದಾಗಿ ಹೊಡೆತ ನೀಡಬಲ್ಲದು ಎಂದು ತಿಳಿದುಬಂದಿದೆ. ಹಾಗಾಗಿ ಈ ಸೋಲು ಭಾರತದ ಆಟಗಾರರಿಗೆ ಪಾಠವಾಗಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸೋಲಿನ ಕಹಿ ಉಂಡು ಸಾಕಷ್ಟು ಪಾಠ ಕಲಿತಿರುವುದಂತು ಸತ್ಯ. ಇನ್ನಾದರು ಭಾರತೀಯ ಆಟಗಾರರು ತಮ್ಮ ಆಹಃ ಅನ್ನು ಬದಿಗಿಟ್ಟು ತಂಡಕ್ಕಾಗಿ ನಮ್ಮ ದೇಶಕ್ಕಾಗಿ ಆಡಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಒಕ್ಕೊರಲಿನ ಧ್ವನಿಯಾಗಿದೆ..ಭಾರತ ತಂಡ ತಮ್ಮ ಮುಂದಿನ ಪಂದ್ಯಗಳಲ್ಲಿ ತಮ್ಮ ಶಕ್ತಿ ಏನೆಂಬುದನ್ನು ತೋರಿಸಲಿ ಎನ್ನುವುದು ನಮ್ಮ ಆಶಯವಾಗಿದೆ.