Categories
ಅಥ್ಲೆಟಿಕ್ಸ್

ನಾಟ್ಯ ಶಾಸ್ತ್ರದ ಮೂಲಕ 8ನೇ ವಿಶ್ವದಾಖಲೆ ನಿರ್ಮಿಸಿದ ಯೋಗ ಸಾಧಕಿ ತನುಶ್ರೀ ಪಿತ್ರೋಡಿ

ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ನಾಟ್ಯ ಶಾಸ್ತ್ರದಲ್ಲಿ 8ನೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರದಲ್ಲಿ ವಿವರಿಸಿದ 108 ಕರಣಗಳ ಭಂಗಿಗಳನ್ನು 3 ನಿಮಿಷ 29 ಸೆಕೆಂಡ್‌ಸ್‌‌ನಲ್ಲಿ ಪ್ರಸ್ತುತಪಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾದರು.
ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ.
108 ನಾಟ್ಯಶಾಸ್ತ್ರದಲ್ಲಿ ಇದನ್ನು ಕ್ರೋಢಿಕರಿಸಲಾಗಿದೆ ಎಂದು ತನುಶ್ರೀ ಅವರ ಗುರು ಶ್ರೀರಾಮಕೃಷ್ಣ ಕೊಡಂಚ ತಿಳಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಗೌರವ್ ಮಿತ್ತಲ್ ಅವರು ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು 8ನೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು, ಒಂದು ಗಿನ್ನೆಸ್ ರೆಕಾರ್ಡ್, 7 ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.
Categories
ಭರವಸೆಯ ಬೆಳಕು

ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆ

ಚಿತ್ರದುರ್ಗದ ಮುರುಘಾ ಮಠದಿಂದ ಎಳೆಯ ವಯಸ್ಸಿನಲ್ಲಿ ಸಾಹಸ ಮಾಡಿದ ಮಕ್ಕಳಿಗೆ ನೀಡುವ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆಯಾಗಿದ್ದಾರೆ.
ಯೋಗ ಸಾಧನೆಯಲ್ಲಿ ಈಗಾಗಲೇ 7 ವಿಶ್ವದಾಖಲೆಯನ್ನು ಮಾಡಿರುವ ತನುಶ್ರೀ 2009 ಮಾರ್ಚ್ 15 ರಂದು ಜನಿಸಿದ್ದು,ಉಡುಪಿಯ ಸಂಧ್ಯಾ ಮತ್ತು ಉದಯ್ ಕುಮಾರ್ ಪುತ್ರಿ.ಮೂರನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಮಾಡಿ,ಜೊತೆಗೆ ಭರತನಾಟ್ಯ,ಯಕ್ಷಗಾನ ಮತ್ತು ಹುಲಿವೇಷ ಕುಣಿತದಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ.
Categories
ಭರವಸೆಯ ಬೆಳಕು

ತನುಶ್ರೀ ಸಾಧನೆಯ ಹಿಂದಿರುವ ಶಕ್ತಿ ಆಕೆಯ ಮುಗ್ಧತೆ-ಉದ್ಯಾವರ ನಾಗೇಶ್ ಕುಮಾರ್

ಯಾವುದೇ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದಾಗ ಅವರಿಗೆ ಸಿಗುವ ಹೊಗಳಿಕೆ, ಪ್ರಚಾರ ಇವುಗಳನ್ನು ತಲೆಗೇರಿಸಿಕೊಂಡು ತಲೆ ಭುಜದ ಮೇಲಿರದೆ ಕಾಲು ನೆಲದ ಮೇಲಿರದೆ ಅಹಂನಿಂದ ಬೀಗುವುದನ್ನು ನೋಡಿದ್ದೇನೆ.
ಆದರೆ ಯೋಗದಲ್ಲಿ ಏಳು ವಿಶ್ವ ದಾಖಲೆಯನ್ನು ಬರೆದ ಕು| ತನುಶ್ರೀ ಪಿತ್ರೋಡಿ ಪ್ರಥಮ ದಾಖಲೆಯನ್ನು ಬರೆದ ಹೊತ್ತಿನ ಮುಗ್ಧತೆಯನ್ನೇ ಉಳಿಸಿಕೊಂಡ ಕಾರಣ ಇವತ್ತು ಆಕೆ ಒಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಮತ್ತು ಆರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಸೇರಿಸಲು ಸಾಧ್ಯವಾಯಿತು. ಹಾಗಾಗಿ  ಅವೆಲ್ಲಾ ಸಾಧನೆಗಳಿಗೆ ಆಕೆಯ ಮುಗ್ದತೆ, ಅಹಂಕಾರ ರಹಿತ ನಡೆ ಮುಖ್ಯ ಕಾರಣ. ತನುಶ್ರೀಯ ದೊಡ್ಡ ಶಕ್ತಿ ಆಕೆಯ ತಂದೆ ಉದಯ ಕುಮಾರ್ ಮತ್ತು ತಾಯಿ ಸಂಧ್ಯಾ ಉದಯ್. ಮಗಳ ಸಾಧನೆಯ ಹಿಂದೆ ಅವರ ಪ್ರೋತ್ಸಾಹ ಮಕ್ಕಳಿಗೆ ತಂದೆ ತಾಯಿ ಕೊಡುವ ಕೇವಲ ಪ್ರೋತ್ಸಾಹದ ಹಾಗೆ ಇರದೆ ಅದೊಂದು ವೃತದಂತೆ, ನೇಮದಂತೆ ಇದೆ. ಅವರ ಈ ಬದ್ದತೆಯೇ ತನುಶ್ರೀಯನ್ನು ಬೆಳೆಸಿದೆ. ಈ ಮಗು ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್‌ರವರು ಒಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಸಹಿತ ಏಳು ಗೋಲ್ಡನ್ ಬುಕ್ ರೆಕಾರ್ಡ್ನಲ್ಲಿ ಯೋಗದಲ್ಲಿ ಹೆಸರು ದಾಖಲಿಸಿದ ಚಿನ್ನದ ಹುಡುಗಿ ಕು| ತನುಶ್ರೀ ಪಿತ್ರೋಡಿಯವರನ್ನು ಅವರ ಮನೆಯಲ್ಲಿ ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಪರವಾಗಿ ಸಂಮಾನಿಸಿ ನುಡಿದರು.
ಅವರು ಮುಂದುವರಿಯುತ್ತಾ ಈ ಕಾಲಘಟ್ಟದಲ್ಲಿ ಈ ಸಂಮಾನ ತುಂಬಾ ಮಹತ್ವವನ್ನು ಪಡೆಯುತ್ತಿದೆ. ಒಂದು ಮುಸ್ಲಿಂ ಸಂಘಟನೆ ಈ ಸಂಮಾನವನ್ನು ಹಮ್ಮಿಕೊಂಡು ಧರ್ಮ ಸಾಮರಸ್ಯಕ್ಕೊಂದು ಹೊಸ ಭಾಷ್ಯವನ್ನು ಬರೆದಂತಾಗಿದೆ ಎಂದರು.
ಹತ್ತು ಸಾವಿರ ರೂಪಾಯಿ ನಗದಿನ ಸಹಿತ, ಶಾಲು, ಪುಷ್ಪಗುಚ್ಚ, ಹಣ್ಣು ಹಂಪಲು ಸಹಿತ ತನುಶ್ರೀಯನ್ನು ಸಂಮಾನಿಸಲಾಯಿತು.
ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಅಧ್ಯಕ್ಷ ಶ್ರೀ ಖಾಲಿಖ್ ಹೈದರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಿಯಾಝ್ ಪಳ್ಳಿಯವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ವೇದಿಕೆಯಲ್ಲಿ ಉದ್ಯಾವರ ಜಾಮಿಯಾ ಮಸೀದಿ ಅಧ್ಯಕ್ಷರಾದ ಶ್ರೀ ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಾವರ ಮುಸ್ಲಿಂ ಯುನಿಟಿ ಯು.ಎ.ಇ. ಸಲಹೆಗಾರರಾದ ಶ್ರೀ ಫಿರೋಝ್ ಶರೀಫ್, ಸದಸ್ಯರಾದ ಶ್ರೀ ಸಲಾಂ ಮಜೀದ್, ಶ್ರೀ ಸತ್ತಾರ್ ಗೌಸ್ , ಶ್ರೀ ನಯಾಜ್ ಪಳ್ಳಿ, ಶ್ರೀ ನಾಸಿರ್ ಇಬ್ರಾಹಿಂ, ಜಾಮಿಯಾ ಮಸೀದಿ ಸದಸ್ಯರಾದ ಶ್ರೀ ಇಮ್ತಿಯಾಝ್ ಬಾಷಾ, ಶ್ರೀ ಇಸ್ತಿಯಾಕ್ ಲತೀಫ್, ಆಯ್ಮಾನ್ ಖಾಲಿಖ್, ಶ್ರೀ ಉಮೈಝ್ ಖಾಲಿಖ್, ಮಹಮ್ಮದ್ ಆಸಿಫ್, ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ಗಂಗಾಧರ, ತನುಶ್ರೀ ಹೆತ್ತವರಾದ ಶ್ರೀ ಉದಯ ಕುಮಾರ್, ಶ್ರೀಮತಿ ಸಂಧ್ಯಾ ಉದಯ್, ದೊಡ್ಡಪ್ಪ ವಿಜಯ ಪೂಜಾರಿ ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ಯೋಗರತ್ನ ತನುಶ್ರೀ ಪಿತ್ರೋಡಿ 7 ನೇ ವಿಶ್ವದಾಖಲೆಯ ಪ್ರಯತ್ನ

6 ವಿಶ್ವದಾಖಲೆಯ ಸರದಾರಿಣಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಯೋಗರತ್ನ ತನುಶ್ರೀ ಪಿತ್ರೋಡಿ 7 ನೇ ವಿಶ್ವದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ(200)ಯೋಗ ಭಂಗಿಗಳ ಪ್ರದರ್ಶನವನ್ನು ನೀಡಲಿದ್ದಾರೆ.
ಗುರುಗಳಾದ ರಾಮಕೃಷ್ಣ ಕೊಡಂಚ,ಯೋಗ ಗುರು ನರೇಂದ್ರ ಕಾಮತ್ ಕಾರ್ಕಳ ಹಾಗೂ ಪರೀಕ ಎಸ್.ಡಿ.ಎಂ ನ ಡಾ.ಶೋಭಿತ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ  75 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಆಗಸ್ಟ್ 15 ರಂದು ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಈ ದಾಖಲೆಯನ್ನು ಮಾಡಲಾಗುವುದು ಎಂದು ತನುಶ್ರೀ ಪಿತ್ರೋಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಸಂದರ್ಭ ಮಾತನಾಡಿದ ತನುಶ್ರೀ ತಂದೆ ಉದಯ್ ಕುಮಾರ್ ,ಅಭ್ಯಾಸದ ಸಮಯದಲ್ಲಿ ತನುಶ್ರೀ 45 ನಿಮಿಷದಲ್ಲಿ 200 ಭಂಗಿಗಳನ್ನು ಪ್ರದರ್ಶನ ಮಾಡುತ್ತಿದ್ದು,ಇನ್ನಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡುವ ಪ್ರಯತ್ನ ಮಾಡಲಿದ್ದಾಳೆ.ಈ ದಾಖಲೆಯ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ‌ ಅಧಿಕಾರಿ ಮನೀಷ್ ಬಿಷ್ಣೋಯಿ ಭಾಗವಹಿಸಲಿದ್ದು,ಕಾರ್ಯಕ್ರಮದಲ್ಲಿ ಐವರು ಭಾರತೀಯ ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ  ವಿಜಯ್ ಕೋಟ್ಯಾನ್ ಪಿತ್ರೋಡಿ ಹಾಗೂ‌ ಸುರಭಿ ರತನ್ ಉಪಸ್ಥಿತರಿದ್ದರು.
Categories
ಅಥ್ಲೆಟಿಕ್ಸ್

ಸೋಲಿಲ್ಲದ ಸರದಾರಿಣಿಯ ಕಿರೀಟಕ್ಕೆ ಮತ್ತೊಂದು ಗರಿಯ ಸೇರ್ಪಡೆಗೆ ಕ್ಷಣಗಣನೆ

ಸಾಧನೆ ಮಾಡಲು ಛಲ ಬೇಕು, ಮಾಡಿಯೇ ತೀರುತ್ತೇನೆ ಅನ್ನುವ ಹಠ ಇರಬೇಕು. ಸಾಧಕರಿಗೆ ಇದು ಅಸಾಧ್ಯವೇನು ಅಲ್ಲ.
ಛಲ ಮತ್ತು ಹಠ ಇವೆರಡು ಸೇರಿದರೆ ಸಾಧನೆ ಅಸಾಧ್ಯ ಅಲ್ಲ, ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಕಿರೀಟಕ್ಕೆ ಆರನೆಯ ವಿಶ್ವ ದಾಖಲೆಯ ಗರಿಯನ್ನು ಏರಿಸಿಕೊಳ್ಳಲು ಅಣಿಯಾಗಿರುವ ಬಾಲೆ, ಐದು ವಿಶ್ವದಾಖಲೆಗಳ ಸರದಾರಿಣಿ, ನಾಟ್ಯ ಮಯೂರಿ ಬಿರುದಾಂಖಿತೆ, ಯೋಗರತ್ನ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತನುಶ್ರೀ ಪಿತ್ರೋಡಿ ಸಾಕ್ಷಿ.
ಇದೇ ಫೆಬ್ರುವರಿ ತಿಂಗಳ ಆರನೆಯ ತಾರೀಕು ಉಡುಪಿಯ ಸಂತ ಸಿಸಿಲೀಸ್ ಸಮೂಹ ಸಂಸ್ಥೆಯ ಸಭಾಭವನದಲ್ಲಿ  “Most Backwards Body Skip in One Minute” ಮಾಡುವುದರ ಮೂಲಕ Golden Book Of World Record ಮಾಡಲು ಸಜ್ಜಾಗಿದ್ದಾಳೆ.
ಅತೀ ಸಣ್ಣ ವಯಸ್ಸಿನಲ್ಲೇ ಯೋಗಾಭ್ಯಾಸ ನಿರತಳಾಗಿರುವ ಈಕೆಗೆ ಹೆತ್ತವರ ಮತ್ತು ಯೋಗ ಗುರುಗಳ ಪ್ರೋತ್ಸಾಹ ನಿರಂತರವಾಗಿ ಇರುವುದರಿಂದ ಸಾಧನೆ ಮಾಡಲು ಸಾಧ್ಯ ಎಂದು ಆಕೆ ಹೇಳುತ್ತಾಳೆ.
ತನುಶ್ರೀಯ ಕಿರೀಟಕ್ಕೆ ಆ ಗರಿಯು ಸಂದಲಿ ಇದು ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಪ್ರೀತಿಯ ಶುಭ ಹಾರೈಕೆ.
ಕೋಟ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ
Categories
ಅಥ್ಲೆಟಿಕ್ಸ್

ತನುಶ್ರೀ ಪಿತ್ರೋಡಿ-ವಿಶ್ವದಾಖಲೆಯ ಸರದಾರಿಣಿಯ ಸಾಧನೆಯ ಸರಪಣಿಯಲ್ಲಿ ಮಿನುಗುತಿದೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ತುಂಬು ಸಾಂಸ್ಕೃತಿಕ ಕಲಾ ತವರೆಂಬ ಹಿರಿಮೆಯಲ್ಲಿ ಕಂಗೊಳಿಸುವ ಕರಾವಳಿಯು ತನ್ನೊಡಲಿನಲ್ಲಿ  ಅಗಾಧವಾದ ವಿಶೇಷ ಪ್ರತಿಭೆಗಳ ಅನರ್ಘ್ಯ ರತ್ನಗಳನ್ನೇ ಬಚ್ಚಿಟ್ಟುಕೊಂಡಿದೆ. ಇಂತಹ ಅಪರೂಪದ ಮಣಿಮಾಲೆಗಳಲ್ಲಿ ತನುಶ್ರೀ ಪಿತ್ರೋಡಿ ಎಂಬ ಕಿರಿಯ ವಯಸ್ಸಿನ ಹಿರಿಮೆಯ ಸಾಧಕಿ ತನ್ನಲ್ಲಿನ ವಿಶೇಷ ಹೊಳಪಿನಿಂದ ಜಗವನ್ನೇ ತನ್ನತ್ತ ಸೆಳೆಯುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಉದ್ಯಾವರ ಬಳಿಯ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾಗಿ 2009 ರಲ್ಲಿ ಜನಿಸಿದ  ತನುಶ್ರೀ  ಇಂದು ವಿಶ್ವಮಟ್ಟದ ದಾಖಲೆಗಳ ಸರದಾರಿಣಿ. ಹೆಚ್ಚಿನ ಮಕ್ಕಳು ನಡೆಯಲು ಹಾಗೂ ಮಾತನಾಡಲು ಕಲಿಯುವಂತಹ ಮೂರುವರೆ ವರ್ಷದ ವಯಸ್ಸಿನಲ್ಲಿ ತನುಶ್ರೀಯು ನೃತ್ಯ ಮಾಡುವಷ್ಟರ ಮಟ್ಟಿಗೆ ಚುರುಕಾಗಿದ್ದಳು. ಇವಳಿಗೆ  ನೃತ್ಯದಲ್ಲಿದ್ದ ಬಹಳಷ್ಟು ಆಸಕ್ತಿ ಹಾಗೂ ಪ್ರತಿಭೆಯನ್ನು ಗಮನಿಸಿದ್ದ ಹೆತ್ತವರು ಉಡುಪಿಯ ನೃತ್ಯ  ಶಾಲೆಗೆ ಸೇರಿಸಿ  ಅಗತ್ಯವಾದ ಮಾರ್ಗದರ್ಶನವನ್ನು ಕೊಡಿಸಿದರು. ತನಗೆ ಸಿಕ್ಕ ತರಬೇತಿಯಿಂದಲೇ ತನುಶ್ರೀ ಭರತನಾಟ್ಯ, ಯಕ್ಷಗಾನ, ಹಿಪ್-ಹಾಪ್, ಅರೆ ಶಾಸ್ತ್ರೀಯ ನೃತ್ಯದಲ್ಲಿ ಬಹಳಷ್ಟು ಪರಿಣಿತಿಯನ್ನು ಪಡೆದವಳು ತನ್ನಲ್ಲಿದ್ದ ಸುಂದರ ಪ್ರತಿಭೆಯನ್ನು ಹಲವು ವೇದಿಕೆಗಳಲ್ಲಿ ಅನಾವರಣಗೊಳಿಸಿದಳು. ತನ್ನ ಚಿಕ್ಕ ವಯಸ್ಸಿನಲ್ಲೇ  ಮುನ್ನೂರಕ್ಕೂ ಅಧಿಕ ವೇದಿಕೆಗಳು ಅವಳಲ್ಲಿನ ಪ್ರತಿಭೆಗೆ ಸಾಕ್ಷಿಯಾದವು.
ನೃತ್ಯದಲ್ಲಿ ವಿಶೇಷ ತರಬೇತಿ ಹಾಗೂ ಪರಿಣಿತಿ ಪಡೆದಿದ್ದ ತನುಶ್ರೀಯು ಯೋಗದಲ್ಲಿ ವಿಶ್ವವಿಖ್ಯಾತ ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಕಾರಣವಾದ ಸನ್ನಿವೇಶವೇ ಬಲು ಸೋಜಿಗ. ಚಿಕ್ಕಂದಿನಿಂದಲೇ ಯಾವುದೇ ತರಗತಿಗಳಿಗೆ ಹೋಗದೇ ಆನ್ ಲೈನ್ ವಿಡಿಯೋಗಳ ಮೂಲಕ ಯೋಗದ ಹವ್ಯಾಸವನ್ನು ರೂಢಿಸಿಕೊಂಡಿದ್ದ ತನುಶ್ರೀ ಒಂದು ದಿನ ಖುಷಿ ಎಂಬ ಮೈಸೂರಿನ ಬಾಲಕಿ ನೀರಾಲಂಬ ಪೂರ್ಣ ಚಕ್ರಾಸನ ಎಂಬ ಆಸನವನ್ನು ಒಂದು ನಿಮಿಷಕ್ಕೆ 15 ಬಾರಿ ಮಾಡಿ ದಾಖಲೆ ಬರೆದ ವೀಡಿಯೋವನ್ನು ನೋಡಿ ಆ ಕ್ಷಣಕ್ಕೆ ತಾನು ನಿಮಿಷಕ್ಕೆ ಅದೇ ಆಸನವನ್ನು 9 ಬಾರಿ ಮಾಡಿದಾಗ ಪ್ರತ್ಯಕ್ಷದರ್ಶಿಯಾದ  ತಂದೆ ಉದಯಕುಮಾರ್ ಅವರಿಗೆ ತನ್ನ ಮಗಳ ದೇಹಶಕ್ತಿಯ ಕುರಿತು ಕುತೂಹಲವೇ ಹೆಚ್ಚಾಗಿ ಖುಷಿಯ ದಾಖಲೆಯನ್ನು ಮುರಿಯುವೆಯಾ ಎಂಬ ಆ ಕ್ಷಣದ ಸಂತಸಕ್ಕೆ ಹೊರಬಂದ ಮಾತು ಮುಂದೆ ತನುಶ್ರೀಯ ಸಾಧನೆಯ ಹಾದಿಗೆ ಮುನ್ನುಡಿಯನ್ನು ಬರೆದುಬಿಟ್ಟಿತು.
ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಯೋಗ್ಯ ಮಾರ್ಗದರ್ಶನದ ಫಲವಾಗಿ ಒಂದು ನಿಮಿಷದಲ್ಲಿ ನಿರಾಲಂಬ ಚಕ್ರಾಸನವನ್ನು  19 ಬಾರಿ ಮಾಡಿದ ನೂತನ ದಾಖಲೆಯ ಮೂಲಕ 2017ರಲ್ಲಿ Golden book of world record  ಗೆ ತನ್ನ ಹೆಸರನ್ನು ನೊಂದಾಯಿಸಿಕೊಂಡು ಬಯಕೆಯ ಸಿರಿಯಲ್ಲಿ ಚಿಗುರೊಡೆದ ಕನಸೊಂದು ಹೆಮ್ಮರವಾಗಿ ಬೆಳೆದು ಮೊದಲ ಮೈಲಿಗಲ್ಲು ಸ್ಥಾಪನೆಯಾಯಿತು.
  2018 ರಲ್ಲಿ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ರಿ. ಪಿತ್ರೋಡಿ ಇವರ ನೇತೃತ್ವದಲ್ಲಿ most full body revolution maintaining a chest stand posture ಯೋಗಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮುಖೇನ ದ್ವಿತೀಯ ವಿಶ್ವದಾಖಲೆಯನ್ನು ಮಾಡುತ್ತಾಳೆ.
2019 ರಲ್ಲಿ ಧನುರಾಸನದ ಭಂಗಿಯನ್ನು 1 ನಿಮಿಷದಲ್ಲಿ 62 ಬಾರಿ  ಸುರುಳಿಯನ್ನು ಮಾಡಿ ಹಾಗೂ ಕೇವಲ 1.40 ನಿಮಿಷದಲ್ಲಿ 100 ಬಾರಿ ಸುರುಳಿಗಳನ್ನು ಮಾಡಿ ಏಕಕಾಲದಲ್ಲಿ ಎರಡು ವಿಶ್ವದಾಖಲೆಯನ್ನು ಮಾಡುತ್ತಾಳೆ.
2020 ರಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಚಕ್ರಾಸನ ರೇಸ್ ನಲ್ಲಿ 100 ಮೀಟರ್ ನ್ನು ಕೇವಲ 1 ನಿಮಿಷ  14 ಸೆಕೆಂಡ್ ಗಳಲ್ಲಿ ಕ್ರಮಿಸಿ ನೂತನ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಯೋಗಾಸನದ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿದ ಇವಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಕಂಡು ಮೆಚ್ಚಿದ  ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಯೋಗರತ್ನ ಎಂಬ ಬಿರುದನ್ನು ನೀಡಿ ಆಕೆಯನ್ನು ಹರಸಿ ಹಾರೈಸಿ ಆಕೆಯ ಸಾಧನೆಯ ಪಯಣಕ್ಕೆ ಶುಭಹಾರೈಸಿದ ಸವಿಗಳಿಗೆಯಂತೂ ಹೃದಯಕ್ಕೆ ಆಪ್ತವೆನಿಸುತ್ತದೆ.
ಪ್ರಸ್ತುತ ಈ ಬಾರಿಯ ಉಡುಪಿ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಯ ಗರಿಯೊಂದು ಇವಳ ಪ್ರಶಸ್ತಿಯ ಭತ್ತಳಿಕೆಯನ್ನು ಸೇರಿಕೊಂಡ ಗಳಿಗೆ ಉಡುಪಿ ಜಿಲ್ಲೆಯ ಪಾಲಿಗೆ ಬಲು ಹೆಮ್ಮೆಯ ಸಂಗತಿ.
 ನೂರಾರು ಸಂಘ ಸಂಸ್ಥೆಗಳು ಪ್ರೀತಿ ತುಂಬಿದ ಹೃದಯದಿಂದ  ಇವಳ ಸಾಧನೆಯನ್ನು ಗುರುತಿಸಿ ಗೌರವಿಸಿ ನೀಡಿದ ಪ್ರಶಸ್ತಿಯ  ಪಾರಿತೋಷಕಗಳು ಹಲವು ಮನಗಳ ಸಾಧನೀಯ ಪಯಣಕೆ ಸ್ಪೂರ್ತಿ ತುಂಬುತ್ತವೆ.
ತನುಶ್ರೀ ಎನ್ನುವ ಪಿತ್ರೋಡಿಯ ಬಾಲಕಿ ತನ್ನ 10 ನೇ ವಯಸ್ಸಿನಲ್ಲಿ  ಯೋಗಾಸನದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯ ಸಾಧನೆಯ ಮೂಲಕ ಮತ್ತೆ 5 ಬಾರಿ ವಿಶ್ವ ದಾಖಲೆಯ ನಿರ್ಮಿಸಿ golden book of world record ನ ದಾಖಲೆಯ ಪುಟದಲ್ಲಿ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುತ್ತಾಳೆ ಎಂದರೇ ಇದು ಅಸಾಮಾನ್ಯ ಸಾಧನೆ. ವಿಶ್ವದ ಅಪರೂಪದ ಸಾಧಕರ ಸಾಲಿನಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗದೆತ್ತರದಲ್ಲಿ ಹಾರಿಸಿದ ಹೆಮ್ಮೆಯ ಕುವರಿಯನ್ನು ಅದೆಷ್ಟೇ ಅಭಿನಂದನೀಯ ಪದಗಳಲ್ಲಿ ಬಣ್ಣಿಸಿದರೂ ಅವಳ ಸಾಧನೆಗೆ ಸರಿಸಾಟಿಯಾಗಿ ನಿಲ್ಲದು ಎಂದರೆ ಅತಿಶಯೋಕ್ತಿಯಲ್ಲ. ಸಾಧನೆಯ ಪಯಣದಲ್ಲಿ ಮತ್ತಷ್ಟು ಕನಸುಗಳು ಇವಳ ಮನದಲ್ಲಿ ಚಿಗುರೊಡೆಯಲಿ, ಚಿಗುರಿದ ಕನಸುಗಳು ಯಶಸ್ಸಿನ ಗುರಿಯನ್ನು ತಲುಪಿ ಮತ್ತಷ್ಟು ಸಾಧನೆಯ ಹೊನ್ನ ಗರಿಗಳು ಇವಳ ಭತ್ತಳಿಕೆಯನ್ನು ಸೇರಲಿ ಎಂಬ ಶುಭ ಹಾರೈಕೆ ನಮ್ಮದು…
Categories
ಅಥ್ಲೆಟಿಕ್ಸ್ ಗ್ರಾಮೀಣ

ಮೈಸೂರು ಯೋಗಾಸನ ಸ್ಪರ್ಧೆ- 4 ವಿಭಾಗದಲ್ಲೂ ಪ್ರಶಸ್ತಿ ಬಾಚಿದ ವಿಶ್ವದಾಖಲೆಯ ತನುಶ್ರೀ ಪಿತ್ರೋಡಿ

ಮೈಸೂರು ಯೋಗಾಸನ ಸ್ಪರ್ಧೆ-
4 ವಿಭಾಗದಲ್ಲೂ ಪ್ರಶಸ್ತಿ ಬಾಚಿದ ವಿಶ್ವದಾಖಲೆಯ ತನುಶ್ರೀ ಪಿತ್ರೋಡಿ.

ತನ್ನ 10 ನೇ ವಯಸ್ಸಿನಲ್ಲೇ 4 ವಿಶ್ವದಾಖಲೆ ಸ್ಥಾಪಿಸಿ ಜಗತ್ತನ್ನೇ ನಿಬ್ಬೆರಗಾಗಿಸಿದ್ದ ತನುಶ್ರೀ ಪಿತ್ರೋಡಿ ಮೈಸೂರಿನಲ್ಲಿ ನಡೆದಿದ್ದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2020 ರಲ್ಲಿ own ಚಾಯ್ಸ್ ವಿಭಾಗದಲ್ಲಿ ಪ್ರಥಮ, ಅತ್ಲೆಟಿಕ್ಸ್ ದ್ವಿತೀಯ, ಆರ್ಟಿಸ್ಟಿಕ್ ಸೋಲೋ ತೃತೀಯ, ಆರ್ಟಿಸ್ಟಿಕ್ ಪೇರ್ ಚತುರ್ಥ, ನಾಲ್ಕು ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದು ವಿದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖ ಪ್ರತಿಭೆಯ,
ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ ರಾಜ್ಯದ ಅತ್ಯಂತ ಶಿಸ್ತುಬದ್ಧ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್” ನ‌ ಸದಸ್ಯರಾದ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ .ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ 3 ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್ ಉಡುಪಿ ಇವರಲ್ಲಿ ನೃತ್ಯ ತರಬೇತಿಯನ್ನು ಆರಂಭಿಸಿ,ಸತತವಾಗಿ ಮುದ್ದು ಕೃಷ್ಣ ಸ್ಪರ್ಧೆ,ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಕಾರ್ಯಕ್ರಮ ನೀಡುವುದರ ಮೂಲಕ ಇದುವರೆಗೆ 350 ಕ್ಕೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುತ್ತಾರೆ.

ಫೆಬ್ರವರಿ ತಿಂಗಳಲ್ಲಿ 5 ನೇ ವಿಶ್ವ ದಾಖಲೆಗೆ ತನುಶ್ರೀ ಭರ್ಜರಿ ತಯಾರಿ ನಡೆಸುತ್ತಿದ್ದು,ಸದ್ಯ ಕಠಿಣ ಅಭ್ಯಾಸದಲ್ಲಿ ನಿರತಳಾಗಿದ್ದಾಳೆ.

ಆರ್‌‌.ಕೆ.ಆಚಾರ್ಯ ಕೋಟ.