ಇವತ್ತು ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸುವ ದಿನ, ಶಿಕ್ಷಕರ ದಿನಾಚರಣೆ. ಪ್ರತಿಯೊಬ್ಬರ ಬದುಕಲ್ಲೂ ಒಬ್ಬೊಬ್ಬ ಗುರು ಇದ್ದೇ ಇರುತ್ತಾನೆ.
ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಕ್ರಿಕೆಟ್ ಪಾಠಗಳನ್ನು ಹೇಳಿ ಕೊಟ್ಟ ಗುರು ಮಂಗಳೂರಿನ ಖ್ಯಾತ ಕ್ರಿಕೆಟ್ ಕೋಚ್ ಸ್ಯಾಮುಯೆಲ್ ಜಯರಾಜ್.
ಮಂಗಳೂರಿನಲ್ಲಿ ಹುಟ್ಟಿದ ಕೆ.ಎಲ್ ರಾಹುಲ್ ಭಾರತದ ಸ್ಟಾರ್ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಕಾರಣ ಗುರು ಸ್ಯಾಮುಯೆಲ್ ಜಯರಾಜ್ ಅವರು ಹೇಳಿಕೊಟ್ಟ ಪಾಠ.
ಕೆ.ಎಲ್ ರಾಹುಲ್ ಒಳ್ಳೆಯ ಕ್ರಿಕೆಟಿನಷ್ಟೇ ಅಲ್ಲ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಒಬ್ಬ ಒಳ್ಳೆಯ ವ್ಯಕ್ತಿ ಕೂಡ ಹೌದು. ರಾಹುಲ್ ಸಭ್ಯ ಹಾಗೂ ಸಂಭಾವಿತ ಕ್ರಿಕೆಟಿಗ.
ಜಯರಾಜ್ ಅವರು ರಾಹುಲ್’ಗೆ ಕ್ರಿಕೆಟ್ ಪಾಠಗಳನ್ನಷ್ಟೇ ಹೇಳಿ ಕೊಟ್ಟಿಲ್ಲ. ಕ್ರಿಕೆಟ್ ಜೊತೆಗೆ ಜೀವನದ ಪಾಠ, ಜೀವನದ ಮೌಲ್ಯಗಳನ್ನೂ ಹೇಳಿ ಕೊಟ್ಟಿದ್ದಾರೆ.
ಮಂಗಳೂರಿನಲ್ಲಿ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದ ಸ್ಯಾಮುಯೆಲ್ ಜಯರಾಜ್ ಅವರ ಬಳಿ ಕೆ.ಎಲ್ ರಾಹುಲ್ ಮೊದಲ ಬಾರಿ ಬಂದಾಗ ರಾಹುಲ್ ವಯಸ್ಸು ಕೇವಲ 10. ಅಲ್ಲಿಂದ ರಾಹುಲ್’ಗೆ ಕ್ರಿಕೆಟ್ ಪಾಠಗಳನ್ನು ಜಯರಾಜ್ ಹೇಳಿ ಕೊಟ್ಟರು.
ಮಂಗಳೂರಿನ ಹೊರವಲಯದ ಸುರತ್ಕಲ್’ನಿಂದ ನೆಹರೂ ಮೈದಾನಕ್ಕೆ ಪ್ರತೀ ದಿನ ಬಸ್’ನಲ್ಲಿ ಬರುತ್ತಿದ್ದ ರಾಹುಲ್, ಜಯರಾಜ್ ಅವರ ಬಳಿ ಕ್ರಿಕೆಟ್ ಪಟ್ಟುಗಳನ್ನು ಕಲಿತರು. ಕೇವಲ 12ನೇ ವಯಸ್ಸಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ್ದ ರಾಹುಲ್, ಒಂದೊಂದೇ ಹೆಜ್ಜೆಗಳನ್ನಿಡುತ್ತಾ ಬಂದರು. ಕರ್ನಾಟಕ ಅಂಡರ್-13 ತಂಡಕ್ಕೆ ಆಯ್ಕೆಯಾದ ರಾಹುಲ್ ನಂತರ ಅಂಡರ್-16, ಅಂಡರ್-19 ತಂಡಗಳಿಗೆ ಆಯ್ಕೆಯಾಗಿದ್ದಷ್ಟೇ ಅಲ್ಲ, ರಾಜ್ಯ ಕಿರಿಯರ ತಂಡಗಳ ನಾಯಕತ್ವವನ್ನೂ ವಹಿಸಿಕೊಂಡಿದ್ದರು.
2010ರಲ್ಲಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಭಾರತ ತಂಡದ ಪರ ಮಯಾಂಕ್ ಅಗರ್ವಾಲ್ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಅದೇ ವರ್ಷ ರಣಜಿ ಟ್ರೋಫಿಗೂ ಪದಾರ್ಪಣೆ ಮಾಡಿದ ರಾಹುಲ್, 2013-14ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾವಿರ ರನ್’ಗಳ ಸರದಾರನಾಗಿ ಕರ್ನಾಟಕ ತಂಡ 14 ವರ್ಷಗಳ ನಂತರ ರಣಜಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2014ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ಪರ ಒಂದೇ ಪಂದ್ಯದಲ್ಲಿ ಎರಡು ಶತಕಗಳನ್ನು ಸಿಡಿಸಿದ ರಾಹುಲ್, ಅದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದರು. 2014ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಶತಕ ಬಾರಿಸಿದರು.
ಅಲ್ಲಿಂದ ಇಲ್ಲಿಯವರೆಗೆ ಕೆ.ಎಲ್ ರಾಹುಲ್ 50 ಟೆಸ್ಟ್, 77 ಏಕದಿನ ಹಾಗೂ 72 ಟಿ20 ಪಂದ್ಯಗಳು ಸೇರಿದಂತೆ ಭಾರತ ಪರ ಒಟ್ಟು 199 ಪಂದ್ಯಗಳನ್ನಾಡಿದ್ದಾರೆ. ಆ 199 ಪಂದ್ಯಗಳಿಂದ ರಾಹುಲ್ ಗಳಿಸಿರುವ ಒಟ್ಟು ರನ್ 8,565. ಈ ವೇಳೆ ರಾಹುಲ್ 17 ಶತಕಗಳು ಹಾಗೂ 54 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್’ನಲ್ಲಿ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ರಾಹುಲ್ ಇವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ಅವರ ಪಾಲಿನ ದ್ರೋಣಾಚಾರ್ಯ ಸ್ಯಾಮುಯೆಲ್ ಜಯರಾಜ್.